ನಡುನೆತ್ತಿಯಲ್ಲಿ ನಗುವ ಸೂರ್ಯ
ನಕ್ಕಷ್ಟೂ ಸುಡುತ್ತಿದೆ ಬಿಸಿಲಧಗೆ
ಬೇಸಿಗೆಯ ಮೊದಲ ಹೆಜ್ಜೆಗೆ
ಬತ್ತಿವೆ ಕೆರೆ ಹಳ್ಳ ತೊರೆ
ಭಾನು ಭುವಿಗೆ ಬೇಕೀಗ
ತಂಪನೆರೆಯುವ ಮಳೆ
ಅಳಿದುಳಿದ ತಳಕಂಡ ನೀರಲ್ಲಿ
ಸಾವಿನಂಚಿಗೆ ಸರಿದ ಮೀನರಾಶಿ
ಬೆರಣಿಯಾದ ನದಿ ಹೂಳಲ್ಲಿ
ಹುಳಗಳ ಹುಡುಕುತಿದೆ ಬಾನಾಡಿ
ಕಣ್ಣಬಿಂಬದಲಿ ಮಿಂಚುವ ಬದುಕುವಾಸೆಗೆ
ಹನಿಯಬೇಕು ಮಳೆಹನಿ
ಬಾಯಾರಿದೆ ಸುತ್ತಲಿನ ಹಸಿರು
ಬೆಟ್ಟಗುಡ್ಡಗಳು ಬಸವಳಿದಿವೆ ಬಾಯ್ತೆರೆದು
ಆಳೆತ್ತರದ ಅಲೆಗಳಲ್ಲಿ ಮೊದಲ ಕಸುವಿಲ್ಲ
ಮರಳ ರಾಶಿಯ ತುಂಬ ಕಾದ ಕೆಂಡದುಂಡೆಗಳು
ಬರಗಾಲ ಸರಿಸಿ ನಗುವ ಬಿತ್ತಲು
ಬರಬೇಕು ಒಮ್ಮೆ ವರ್ಷಧಾರೆ
ಸುಡುನೆಲದಲ್ಲಿ ಸಾಗುವ ಮಂದಿಯ
ಮೈತುಂಬ ಖಾಲಿ ಕೊಡಗಳ ಭಾರ
ನಡೆದಷ್ಟು ದೂರ ದಾರಿ ಸಾಗುವುದೇ ಇಲ್ಲ
ಅಲ್ಲೆಲ್ಲೋ ಆಳಕ್ಕಿಳಿದ ನೀರಲ್ಲಿ ಆಸರೆಯ ಕೆಸರಬಿಂಬ
ಮೊಗೆಮೊಗೆದು ತುಂಬಿದರೂ ತುಂಬುತ್ತಲಿಲ್ಲ ಕೊಡ
ಹೊತ್ತು ಏರುವ ದಣಿವಲ್ಲಿ ಬೆರೆಯುತಿದೆ ಕಣ್ಣೀರು ಬೆವರಲ್ಲಿ
ಕಡಿದ ಮರ ಬೋಳಾಗಿಸಿದ ಭುವಿಗೆ ಲೆಕ್ಕವಿಲ್ಲ
ಮಳೆ ಸುರಿದು ಹರಿದ ನೀರಿಗೆ
ಮರುಕ ಪಟ್ಟವರಿಲ್ಲ
ಮಳೆ ಸಾಕೆಂದು ಬೊಬ್ಬಿಟ್ಟವರೇ ಆಗ ಎಲ್ಲ
ಪರಿಣಾಮ ನಳದ ಬಾಯಿಂದ
ತೊಟ್ಟಿಕ್ಕುವ ನೀರಹನಿ ಇಂದು ಜಲಾಮೃತ
ನಾವು ಅರಿತಷ್ಟೂ ದಡ್ಡರಾದದ್ದೇ ಹೆಚ್ಚು
ನಮ್ಮ ಮೈಮನ ತುಂಬಿಕೊಂಡಿದೆ ಲೋಭ ಸ್ವಾರ್ಥದ ಕಿಚ್ಚು
ನೀನೆಷ್ಟು ತಿಳಿಹೇಳಿದರೂ ಅಷ್ಟೆ
ನಮ್ಮ ಮನ ಕೊಳೆತು ನಾರುವ ತಿಪ್ಪೆ
ಸಾಕಿನ್ನು ಶಿಕ್ಷೆ ಓ ಮಳೆರಾಯ
ಭೋರೆಂದು ಸುರಿದು ಬಿಡು ಒಮ್ಮೆ ಮನದಣಿಯೆ
* ಧರ್ಮಾನಂದ ಶಿರ್ವ
12 thoughts on “ಭೋರೆಂದು ಸುರಿದು ಬಿಡು ಒಮ್ಮೆ……”
‘ ಭೋರೆಂದು ಸುರಿದುಬಿಡು ಒಮ್ಮೆ ‘ ಅದ್ಭುತವಾದ ಕವನ. ಮಳೆಗಾಗಿ ಪ್ರಕೃತಿ ಮತ್ತು ಜನರು ಕಾಯುತ್ತಿರುವ ಈ ಸಮಯದಲ್ಲಿ ಸಮಯೋಚಿತ. ‘ ಸಾಕಿನ್ನು ಶಿಕ್ಷೆ ಓ ಮಳೆರಾಯ ‘ ನಿಜವಾದ ಮಾತು. ಸೊಗಸಾದ ಕವನಕ್ಕೆ ಅಭಿನಂದನೆಗಳು ಧರ್ಮಾನಂದ ನಾಯಕ್.
ಪರಿಸರಪ್ರಿಯ ಕವಿ ಧರ್ಮಾನಂದ ಶಿರ್ವ ರು ನಡುಬಿಸಿಗೆಯ ಸುಡುಬಿಸಿಲ ಪರಿಚಯಿಸುತ್ತಾ, ನಿಸರ್ಗ ಕೊಟ್ಟಾಗ ಹಿಡಿದಿಟ್ಟುಕೊಳ್ಳದೆ ಪಡುವ ಬವಣೆಯನ್ನು, ಮಾರ್ಮಿಕವಾಗಿ ಮೊಟಕಿದ್ದಾರೆ. “ನಾವು ಅರಿತಷ್ಟೂ ದಡ್ಡ ರಾದದ್ದೇ ಹೆಚ್ಚು” ಎಂದು ಸರಿಯಾಗೇ ತಿಳಿಸಿದ್ದಾರೆ. ಸುಂದರ ಕವನ. ಅಭಿನಂದನೆಗಳು. ಈಸಾರಿಯಾದರೂ ಮಳೆನಿರ ಸಂಗ್ರಹಕ್ಕೆ ವ್ಯಯಕ್ತಿಕ ಮಹತ್ವ ಹೆಚ್ಚಲಿ.
” ಮರಳ ರಾಶಿಯ ತುಂಬ ಕಾದ ಕೆಂಡದುಂಡೆಗಳು
ಬರಗಾಲ ಸರಿಸಿ ನಗುವ ಬಿತ್ತಲು
ಬರಬೇಕು ಒಮ್ಮೆ ವರ್ಷಧಾರೆ “. ಈ ವಾಕ್ಯ ಮನಸೆಳೆಯಿತು. ಅದ್ಭುತ ಪದಪ್ರಯೋಗ. ಕವಿತೆ ತುಂಬಾ ಆಪ್ತವಾಯಿತು ಮತ್ತು ಈ ಕಡು ಬೇಸಿಗೆಯಲ್ಲಿ ವರುಣನನ್ನು ಪ್ರಾರ್ಥಿಸಿದ ರೀತಿ ಚೆನ್ನ. ಅಭಿನಂದನೆಗಳು ಪರಿಸರ ಪ್ರಿಯ ಕವಿಗಳಿಗೆ.
ನಿಮ್ಮ ಕವನ ನನಗೆ 1972 ರ ಕಲಬುರ್ಗಿಯ ಬವಣೆಯನ್ನು ನೆನೆಯಿತು. ತುಂಬ ಉತ್ಕ್ರಷ್ಟವಾಗಿದೆ. ತುಂಬ ಧನ್ಯವಾದಗಳು.
ವರುಣನ ಕೃಪೆ ವೈಜ್ಞಾನಿಕವೆನಿಸಿದರೂ ಮಾನವ ಸಹಿತ ಭೂಮಿಯ ಮೇಲಿನ ಏಲ್ಲಾ ಜಲ ಚರ ಜೀವಿಗಳಿಗೆ ಅದೊಂದು ದೈವ ದತ್ತ ಏಂಬುದು ಬಲವಾದ ನಂಬಿಕೆ.
ಆತನನ್ನು ಆಹ್ವಾನ ಮಾಡಲು ಏಲ್ಲಾ ಸಮುದಾಯದವರು ತಮ್ಮ ತಮ್ಮ ಸಂಪ್ರದಾಯದಂತೆ ಆತನನ್ನು ಪ್ರಾರ್ಥಿಸಿ ಮೊರೆ ಹೋಗುತ್ತಾರೆ. ಆಮೇಲೆ ವರುಣನು ಸಮೃದ್ಧಿಯಾಗಿ ಕರುಣಿಸುತ್ತಾನೆ. ಇಲ್ಲಿ ಕವಿಯವರು ವಿಸ್ತಾರವಾಗಿ ಮೂಲ ಮತ್ತು ಕೊನೆಯನ್ನು ವಿವರಿಸಿದ್ದಾರೆ. ಅಲ್ಲದೇ ಅವರ ಜನಪರ ಕಾಳಜಿ ಕೂಡಾ ಕಳಕಳಿಯಿಂದ ಕೂಡಿದೆ. ಹಾಗಾಗಿ ಕವಿತೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ ಅವರಿಗೆ ಅಭಿನಂದನೆಗಳನ್ನು ತಿಳಿಯಪಡಿಸುತ್ತಿದ್ದೇನೆ.
ಧರ್ಮಾನಂದ್ ಸರ್, ತುಂಬಾ ಸುಂದರವಾಗಿ ಮೂಡಿಬಂದಿದೆ ಕವಿತೆ.ಅಭಿನಂದನೆಗಳು. ನಿಮ್ಮ ಕವಿತೆ ನಮ್ಮ ಸಿಟಿ ಕಲ್ಬುರ್ಗಿಯ ಬೇಸಿಗೆಯ ಬಗ್ಗೆ ವಿವರಿಸಿ. ಧನ್ಯವಾದ.🙏🙏💐🌹💐
ಮನುಷ್ಯ ತನ್ನ ಸ್ವಯಂ ಕೃತ ಅಪರಾಧದಿಂದ ಮಾಡಿದ ತಪ್ಪಿನ ಸುಳಿಯಲ್ಲಿ ಸಿಲುಕಿ ವಿಲವಿಲ ಅಂತ ಒದ್ದಾಡುವುದನ್ನು ತುಂಬಾ ಪರಿಣಾಮಕಾರಿಯಾಗಿ ತೋರಿಸಿದ್ದೀರಿ.
ಅಭಿನಂದನೆಗಳು.
ಬಿಸಿಲು ಬೇಗೆಗೆ ಬತ್ತಿದ ಕೆರೆ, ಹಳ್ಳ, ತೊರೆಗೆ
ಸಾವಿನಂಚಿಗೆ ಸರಿದ ಜೀವರಾಶಿಗಳಿಗೆ,
ಮೈತುಂಬ ಖಾಲಿ ಕೊಡಗಳ ಸರಮಾಲೆಗೆ,
ಕಾಲ್ಗಳು ಸವೆದರೂ ದಾರಿ ಸವೆಯದಷ್ಟು ದೂರ, ಮೊಗೆಮೊಗೆದು ತುಂಬಿದರೂ ತುಳುಕದ ಕೊಡ.
ಒಮ್ಮೆ ಭೋರ್ಗರೆದು ಸುರಿದು ಬಿಡು ಓ ಮಳೆಯೆ.
ಕವನ ತುಂಬಾ ಚೆನ್ನಾಗಿದೆ ಸಾರ್, ಅಭಿನಂದನೆಗಳು.
ನಿಮ್ಮ ಗದ್ಯ ಲೇಖನಗಳಂತೆ ಕವಿತೆಗಳ ರಚನೆಯೂ
ಚೆನ್ನಾಗಿ ಮೂಡಿ ಬಂದಿದೆ. ಪ್ರಸಕ್ತ ಸಮಯದಲ್ಲಿ
ಬಿಸಿಲ ಬೇಗೆಗೆ ವರ್ಷಧಾರೆ ಅನಿವಾರ್ಯ ಎಂಬುದು
ನಿಮ್ಮ ಲೇಖನಿಯಿಂದ. ಸೊಗಸಾಗಿ ಚಿತ್ರಿಸಿದ್ದೀರಿ.
ಅಭಿನಂದನೆಗಳು.
ಮಳೆಯ ಬಗ್ಗೆ ವಾಸ್ತವವನ್ನು ಮನಮುಟ್ಟುವಂತೆ ಕಾವ್ಯಮಯವಾಗಿ ಅರುಹಿದ ತಮಗೆ ಹ್ರತ್ಪೂರ್ವಕ ಶುಭ ಹಾರೈಕೆಗಳು
ಆಹಾ… ತುಂಬಾ ಚೆನ್ನಾಗಿದೆ. ಅಭಿನಂದನೆಗಳು 🌹🌹
ವರುಣ ದೇವರು ಇನ್ನಾದರೂ ಕರುಣಿಸು .
ಬೇಸಿಗಿಯೇ ಬವಣೆಯ ಕಷ್ಟವನ್ನು ಸಹಿಸಲು ಮತ್ತು ಹೇಳಿಕೊಳ್ಳಲು ಆಗುವದಿಲ್ಲ . ಚಿಕ್ಕ ಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಸಹಿಸುವ ಶಕ್ತಿಯು ಇರುವದಿಲ್ಲ .
ಅಭಿನಂದನೆಗಳು ಧರ್ಮಾನಂದ ನಾಯಕರಿಗೇ 🙏🏻