ಕವಲು

ಹಸಿರಿನೊಡಲಲಿ ಬೆಸೆದ ಉಸಿರ ಗೀತೆಗಳು
ಇರುಳ ಹೊಸ್ತಿಲಲಿ ನಿಂತು ನಿಶ್ಚಲವಾದ ಮೇಲೆ
ಕಾಡಿಗೆ ಕಾಡೇ ಮುನಿಸಿಕೊಂಡಿದೆ

ಅದ್ಯಾವ ದೂರು ದಾಖಲಾಗಿದೆಯೋ…!
ಹೂಬಳ್ಳಿ ಬಳಸಿ ಮರವ ಸುತ್ತುವುದಿಲ್ಲ
ಚಿಗುರು ಗರಿಕೆಯ ಅಂತಃಕರಣದಲಿ ಮೆದುತನವಿಲ್ಲ
ರೆಂಜ ಸುರಗಿ ಕಾಡಮಲ್ಲಿಗೆಯ ಕಂಪು ಕಾಡುವುದಿಲ್ಲ

ಎಲ್ಲೆಡೆ ಖಾಲಿ ಖಾಲಿಯಾದಂತೆ …!
ನೇಸರನ ಪಾರುಪತ್ಯ ಮುಗಿಯುವ ಮೊದಲೇ
ಹಕ್ಕಿಗಳು ರೆಕ್ಕೆಯ ಬೀಸು ನಿಲ್ಲಿಸಿದಂತೆ
ದುಂಬಿಗಳ ಮಾತು ಹೂತು ಹೋದಂತೆ
ಒಲ್ಲದ ಸಲ್ಲದ ಸೋಲಿಗಿರಬಹುದೇ ಈ ಮೌನ…!

ಇತ್ತ ಬಂದೆನೆಂದರೆ ಸಾಕು
ಬಾನ ಬಯಲಿನಲಿ ತಿಳಿ ನೀಲಿಯಲಿ ಹಾಯ್ದು
ಅಣು ಅಣುವಿನಲಿ ಬೆರೆತು ಅನುಸರಿಸಿ ಬರುವ ತಂಗಾಳಿ
ಅದೇಕೋ ದಿಕ್ಕು ಬದಲಿಸಿದೆ
ಮಳೆ ಮೋಡಗಳೂ ಚದುರಿವೆ ಮನಸ್ಸುಗಳಂತೆ

ಹಾಸಿ ಹೊದ್ದು ಕೂತ
ಕಾಡ ಮೈಯ ಬಣ್ಣ ಮಾಗುತ್ತಿರುವಂತೆ
ಭಾವದ ಹೂವುಗಳೂ ಪರಿಪಕ್ವವಾಗಿ
ಮೋಹದ ಪೊರೆ ಕಳಚಿ ನಿಂತಿವೆ

ಒಂದೇ ಮಗ್ಗುಲಲಿ ನಡೆದು
ಸವೆದ ದಾರಿಯಲಿ ಮೂಡಿದೆ ಕವಲು
ಎಂದೂ ಹಳಿಯಲಾಗದ ಹಳೆಯ ಕುರುಹುಗಳಲಿ
ಬಚ್ಚಿಟ್ಟಷ್ಟು ಬಿಚ್ಚಿಕೊಳ್ಳುವುದು
ಎದೆಯ ದನಿಗೊಪ್ಪುವ ಪದಗಳದೇ ಸಾಲು

ಅನಿತಾ ಪಿ. ತಾಕೊಡೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಕವಲು”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter