ಮುಂಬಯಿ:- 23 ಶನಿವಾರ ಮತ್ತು 24 ಆದಿತ್ಯವಾರ, ಮಾರ್ಚ್ 2024 , ಮೈಸೂರು ಅಸೋಸಿಯೇಷನ್ನಿನ ಸಭಾಂಗಣದಲ್ಲಿ ನಡೆದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಮೈಸೂರು ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ, ವಿದ್ವಾಂಸ ಡಾ.ಬಿ.ವಿ.ರಾಜರಾಮ ಅವರು ಭರತನ ನಾಟ್ಯಶಾಸ್ತ್ರದ ಕುರಿತು ಮಾತನಾಡುತ್ತಾ ತಮ್ಮ ವಿಚಾರಗಳನ್ನು ಹಂಚಿಕೊಂಡರು.
(ಉಪನ್ಯಾಸದ ಅಕ್ಷರ ರೂಪ -ವಿದ್ಯಾ ರಾಮಕೃಷ್ಣ)
ಕ್ರಿ. ಶ. ಸುಮಾರು ಒಂದನೆಯ ಶತಮಾನದಲ್ಲಿ ಭರತ ಮುನಿಯು ರಚಿಸಿದನೆಂದು ಅಂದಾಜು ಮಾಡಲಾಗಿರುವ ‘ನಾಟ್ಯಶಾಸ್ತ್ರ’ ಕೃತಿಯು ನಾಟ್ಯ ಮತ್ತು ರಂಗಭೂಮಿಗೆ ಭಾರತದ ಶ್ರೇಷ್ಠ ಕೊಡುಗೆಯಾಗಿದೆ. ಇದು ನಾಟ್ಯ ಶಾಸ್ತ್ರ, ಕಾವ್ಯ ತತ್ತ್ವದ ವಿವೇಚನೆ, ಸೌಂದರ್ಯ ಮೀಮಾಂಸೆಗಳನ್ನೂ ಒಳಗೊಂಡಂತೆ ಅನೇಕ ವಿಷಯಗಳ ಕುರಿತಾಗಿ ಇರುವ ಒಂದು ವಿಶ್ವಕೋಶವೆ ಆಗಿದೆ. ಈ ಶಾಸ್ತ್ರ ಗ್ರಂಥದ ರಚನೆಯಾಗಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳು ಸಂದಿದ್ದರೂ ಇಂದಿಗೂ ಅದರ ಕುರಿತು ಚರ್ಚೆ, ಜಿಜ್ಞಾಸೆ, ವಿಮರ್ಶೆಗಳು ನಡೆಯುತ್ತಲೇ ಇರುವುದು ಅದರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಇದಕ್ಕೆ ನಿದರ್ಶನವೆಂಬಂತೆ, ಮಾರ್ಚ್ 24, 2024ರಂದು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಮೈಸೂರು ಅಸೋಸಿಯೇಷನ್, ಮುಂಬೈ ಇವರು ಜಂಟಿಯಾಗಿ ಆಯೋಜಿಸಿದ್ದ ‘ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ’ ಸರಣಿಯಲ್ಲಿ ಒಳನಾಡಿನ ಖ್ಯಾತ ರಂಗತಜ್ಞ, ರಂಗ ಕಲಾವಿದ, ಶಿಕ್ಷಣ ತಜ್ಞರಾದ ಡಾ. ಬಿ.ವಿ.ರಾಜಾರಾಮ್ ಅವರಿಂದ ಭರತನ ನಾಟ್ಯಶಾಸ್ತ್ರದ ಕುರಿತಾಗಿ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಉಪನ್ಯಾಸದ ಮುಖ್ಯ ಸಾರವನ್ನು ಪ್ರಸ್ತುತ ಲೇಖನದಲ್ಲಿ ದಾಖಲಿಸಲಾಗಿದೆ.
ಒಂದನೆಯ ಶತಮಾನದಲ್ಲಿ ಭರತನು ರಚಿಸಿದನೆಂದು ಹೇಳಲಾದ ನಾಟ್ಯಶಾಸ್ತ್ರವು ಲಭ್ಯವಾಗಿಲ್ಲ. ಹತ್ತನೆಯ ಶತಮಾನದಲ್ಲಿ ಅಭಿನವಗುಪ್ತಪಾದಾಚಾರ್ಯರು ತಮಗೆ ಅಲ್ಲಲ್ಲಿ ದೊರಕಿದ ನಾಟ್ಯಶಾಸ್ತ್ರದ ತುಣುಕುಗಳನ್ನು, ವಿಷಯಗಳನ್ನು ಸಂಗ್ರಹಿಸಿ ‘ಅಭಿನವ ಭಾರತಿ’ ಎಂಬ ಕೃತಿಯನ್ನು ರಚಿಸಿದರು. ಇದು ಭರತನ ನಾಟ್ಯಶಾಸ್ತ್ರಕ್ಕೆ ಅವರು ಬರೆದ ವ್ಯಾಖ್ಯಾನ. 36 ಅಧ್ಯಾಯ, 6000 ಶ್ಲೋಕಗಳಿರುವ ಈ ಕೃತಿಯನ್ನೆ ಭರತನ ನಾಟ್ಯಶಾಸ್ತ್ರ ಎಂದು ಗುರುತಿಸಲಾಗಿದೆ. ಪಾಶ್ಚಾತ್ಯ ಸೌಂದರ್ಯ ಶಾಸ್ತ್ರಕ್ಕೆ ಅರಿಸ್ಟಾಟಲನ ಪೊಯೆಟಿಕ್ಸ್ ಇರುವಂತೆ, ಪೌರಾತ್ಯ ಸೌಂದರ್ಯ ಶಾಸ್ತ್ರಕ್ಕೆ ಮೂಲಾಧಾರ ಗ್ರಂಥವಾಗಿ ಈ ಅಭಿನವಗುಪ್ತರ ಕೃತಿ ವಿಶ್ವಮಾನ್ಯತೆಯನ್ನು ಪಡೆದಿದೆ. ಕನ್ನಡದ ಖ್ಯಾತ ವಿದ್ವಾಂಸ, ಸಾಹಿತಿ, ನಾಟಕಕಾರರಾದ ಆದ್ಯ ರಂಗಾಚಾರ್ಯರು (ಶ್ರೀರಂಗ) ಸಂಸ್ಕೃತದ ನಾಟ್ಯಶಾಸ್ತ್ರವನ್ನು ಕನ್ನಡ ಮತ್ತು ಇಂಗ್ಲಿಷಿನಲ್ಲಿ ವಿಮರ್ಶಾತ್ಮಕವಾಗಿ ಅನುವಾದಿಸಿದ್ದಾರೆ. ಅವರ ಈ ಶ್ರೇಷ್ಠ ಕೊಡುಗೆಗಾಗಿ ಕನ್ನಡ ರಂಗಭೂಮಿ ಮತ್ತು ಸಾಹಿತ್ಯರಂಗ ಅವರಿಗೆ ಚಿರಋಣಿಯಾಗಿವೆ.
ನಾಟ್ಯಶಾಸ್ತ್ರವು ಪ್ರಶ್ನೋತ್ತರದ ರೀತಿಯಲ್ಲಿ ರಚಿಸಲ್ಪಟ್ಟಿದೆ. ಮನೋರಂಜನೆ ಮತ್ತು ಮನೋವಿಕಾಸಕ್ಕಾಗಿ ಕ್ರೀಡನೀಯವಾದ ರೀತಿಯಲ್ಲಿ ಗ್ರಂಥ ರಚಿಸಿಕೊಡು ಎಂದು ಇಂದ್ರನು ಬ್ರಹ್ಮನನ್ನು ಕೇಳಿದಾಗ ಬ್ರಹ್ಮನು, ಋಗ್ವೇದದಿಂದ ಪಠ್ಯ, ಯಜುರ್ವೇದದಿಂದ ಅಭಿನಯ, ಸಾಮವೇದದಿಂದ ಸಂಗೀತ ಮತ್ತು ಅಥರ್ವಣವೇದದಿಂದ ರಸಗಳನ್ನು ತೆಗೆದು ಪಂಚಮವೇದ ಎಂದು ಕರೆದು ಅದನ್ನು ಭರತ ಮುನಿಗೆ ಬೋಧಿಸಿದನು. ಹೀಗೆ ಬ್ರಹ್ಮನು ನೀಡಿದ ನಾಟ್ಯಶಾಸ್ತ್ರವನ್ನು ಭರತ ಮುನಿಯು ತನ್ನ ನೂರು ಜನ ಶಿಷ್ಯರಿಗೆ ಹಂಚಿದನು ಎಂಬ ಕಥೆಯಿದೆ. ಭರತನು ಮೊತ್ತ ಮೊದಲು ‘ಸಮುದ್ರ ಮಥನ’ ಎಂಬ ನಾಟಕವನ್ನು ರಚಿಸಿ ಆಡಿಸಿದನು. ಅದನ್ನು ನೋಡಿ ಕುಪಿತರಾದ ರಾಕ್ಷಸರು ಅವನ ಮೇಲೆ ಯುದ್ಧ ಸಾರಿದರು. ಆಗ ಬ್ರಹ್ಮನು ನಾಟಕಕ್ಕೆ ರಂಗವೇದಿಕೆ ರಚಿಸಿ ಅದರ ಮೇಲೆ ಅಭಿನಯ ಮಾಡಬೇಕು, ಅದು ಲೋಕವೃತ್ತದ ಅನುಕರಣೆ ಮಾತ್ರ, ನಿಜ ಜೀವನವಲ್ಲ ಎಂದು ಸಮಾಧಾನ ಹೇಳಿದನು. ಹೀಗೆ ರಂಗಭೂಮಿಯ ಮೇಲೆ ನಾಟಕವಾಡುವ ಪದ್ಧತಿ, ಪರಿಕಲ್ಪನೆ ಭಾರತೀಯ ಪರಂಪರೆಯಲ್ಲಿ ಬೆಳೆಯಿತು ಎಂಬ ಪ್ರತೀತಿ ಇದೆ. ‘ನಾಟ್ಯಶಾಸ್ತ್ರ’ ಕೃತಿಯಲ್ಲಿ ಸಂಗೀತ, ನೃತ್ಯ, ಸಾಹಿತ್ಯ, ಅಭಿನಯ, ರಂಗ ವೇದಿಕೆಯ ನಿರ್ಮಾಣ ಪ್ರಕ್ರಿಯೆ ಮುಂತಾದ ವಿಷಯಗಳಿವೆ.
ನಾಟ್ಯಶಾಸ್ತ್ರದ ಆರನೆಯ ಅಧ್ಯಾಯ ರಸಾಧ್ಯಾಯ. ಅದು ಬಹು ಮುಖ್ಯವಾದ ಅಧ್ಯಾಯ. ಇಲ್ಲಿ ಭರತನು ರಂಗಭೂಮಿ, ನಾಟ್ಯಕ್ಕೆ ಸಂಬಂಧಿಸಿದ ಹನ್ನೊಂದು ಸಂಗ್ರಹಗಳನ್ನು ವಿಸ್ತೃತವಾಗಿ ವಿವರಿಸಿದ್ದಾನೆ.
“ರಸಭಾವಾಭಿನಯಃ ಧರ್ಮಿ ವೃತ್ತಿ ಪ್ರವೃತ್ತಯಃ
ಸಿದ್ಧಿಸ್ವರ ಆತೋಧ್ಯ ಗಾನಂ ರಂಗಶ್ಚ ಸಂಗ್ರಹಃ”
ಎಂಬ ಶ್ಲೋಕವು ಹನ್ನೊಂದು ಸಂಗ್ರಹಗಳ ಹೆಸರನ್ನು ಸೂಚಿಸುತ್ತದೆ. ಈ ಸಂಗ್ರಹಗಳ ವಿವರಣೆ ಇಂತಿದೆ:
ರಸ:
ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ ಮತ್ತು ಅದ್ಭುತ ಎಂಬ ಎಂಟು ರಸಗಳನ್ನು ಭರತ ಗುರುತಿಸಿದ್ದಾನೆ. ರಸ ಎಂಬುದು ಒಂದು ಅನುಭವ ವಿಶೇಷ. ಅದನ್ನು ನೇರವಾಗಿ ಅಭಿನಯಿಸಿ ತೋರಿಸಲು ಬರುವುದಿಲ್ಲ. ಭಾವಗಳ ಮೂಲಕ ಅವುಗಳನ್ನು ವ್ಯಕ್ತಪಡಿಸಬಹುದು. ಹೀಗೆ ನಟನು ವ್ಯಕ್ತಪಡಿಸುವ ಭಾವಗಳು ಪ್ರೇಕ್ಷಕನ ಮನದಲ್ಲಿ ಮೂಡಿ ಅವನೊಳಗೆ ರಸದ ನಿಷ್ಪತ್ತಿಯಾಗುತ್ತದೆ.
ಅಭಿನವಗುಪ್ತರು ಬುದ್ಧನ ಕಾಲದ ನೆನಪಿನಿಂದ ಎಲ್ಲ ರಸಗಳ ಉಗಮ ಮತ್ತು ಸಮಾಗಮವಾಗಿರುವ ‘ಶಾಂತ’ ರಸವನ್ನು ಸೇರಿಸಿ ಒಟ್ಟು ಒಂಬತ್ತು ರಸಗಳೆಂದು (ನವರಸ) ನಿರ್ಣಯಿಸಿದ್ದಾರೆ.
ಭಾವ:
ಮೂರು ವಿಧವಾದ ಭಾವಗಳನ್ನು ಭರತನು ಗುರುತಿಸಿದ್ದಾನೆ.
ಸ್ಥಾಯಿಭಾವ – ಇವು ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲುವ ಪ್ರಮುಖ ಭಾವಗಳು. ಎಂಟು ರಸಗಳನ್ನು ಸೃಷ್ಟಿಸುವ ಎಂಟು ಸ್ಥಾಯೀಭಾವಗಳು ಕ್ರಮವಾಗಿ ರತಿ, ಹಾಸ, ಶೋಕ, ಕ್ರೋಧ, ಉತ್ಸಾಹ, ಭಯ, ಜುಗುಪ್ಸೆ ಮತ್ತು ವಿಸ್ಮಯ.
ಸಾತ್ವಿಕ ಭಾವ – ಮೈಮರೆಯುವಿಕೆ, ಬೆವರುವುದು, ರೋಮಾಂಚನ, ಸ್ವರಭೇದ, ನಡುಕ, ಮುಖದ ಬಣ್ಣ ಬದಲಾಗುವುದು, ಕಂಬನಿ ಮತ್ತು ಮೂರ್ಛೆ ಎಂಬವು ಎಂಟು ಸಾತ್ವಿಕ ಭಾವಗಳು.
ಸಂಚಾರಿ ಅಥವಾ ವ್ಯಭಿಚಾರಿ ಭಾವ – ಉನ್ಮಾದ, ಆಲಸ್ಯ, ನಿದ್ರೆ, ಮರಣ ಮೊದಲಾದ ಮೂವತ್ಮೂರು ಆಗಾಗ ಬಂದು ಹೋಗುವ ಸಂಚಾರಿ ಭಾವಗಳನ್ನು ಭರತ ಹೇಳಿದ್ದಾನೆ.
ಹೀಗೆ ಒಟ್ಟು ನಲವತ್ತೊಂಬತ್ತು ಪ್ರಕಾರದ ಭಾವಗಳನ್ನು (8 ಸ್ಥಾಯಿ, 8 ಸಾತ್ವಿಕ, 33 ಸಂಚಾರಿ) ಗುರುತಿಸಿ, ಇದನ್ನುಳಿದಂತೆ ಇನ್ನೂ ಅನೇಕ ಭಾವಗಳು ಇರುವ ಸಾಧ್ಯತೆಯಿದೆ ಎಂದು ಭರತ ಅಭಿಪ್ರಾಯಪಟ್ಟಿದ್ದಾನೆ.
ಅಭಿನಯ:
ಉತ್ತಮವಾದ ಅಭಿನಯ ಅಥವಾ ನಟನೆ ಮಾಡಲು ಒಬ್ಬ ನಟನಿಗೆ ಬೇಕಾದ ಮುಖ್ಯವಾದ ಪರಿಕರಗಳು ಶರೀರ, ಮನಸ್ಸು, ಧ್ವನಿ ಮತ್ತು ಭಾವನೆ (Body, mind, voice and emotions). ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ನಟನು ಅದ್ಭುತವಾಗಿ ಅಭಿನಯಿಸಬಲ್ಲ.
ಭರತನು ಅಭಿನಯದಲ್ಲಿ ನಾಲ್ಕು ವಿಧ ಎಂದು ಹೇಳಿದ್ದಾನೆ: ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ.
“ಆಂಗಿಕಂ ಭುವನಮ್ ಯಸ್ಯ ವಾಚಿಕಂ ಸರ್ವ ವಾಙ್ಮಯಂ ಆಹಾರ್ಯಂ ಚಂದ್ರತಾರಾದಿ ತಮ್ ನಮಃ ಸಾತ್ವಿಕಂ ಶಿವಂ”
ಎಂಬ ಶ್ಲೋಕದ ಮೂಲಕ ಅವನು ವಿವರಿಸಿದ್ದಾನೆ. ಪ್ರಪಂಚದಲ್ಲಿರುವ ಎಲ್ಲಾ ಆಕಾರಗಳನ್ನು ಆಂಗಿಕವಾಗಿ ಬಳಸಬಹುದು. ಜಗತ್ತಿನಲ್ಲಿರುವ ಎಲ್ಲಾ ಧ್ವನಿಗಳನ್ನು ವಾಚಿಕವಾಗಿ ವೇದಿಕೆಯ ಮೇಲೆ ಬಳಸಬಹುದು.
ವ್ಯಕ್ತಿಯನ್ನು ಪಾತ್ರವನ್ನಾಗಿ ಮಾಡುವ ವೇಷ ಭೂಷಣಗಳೆ ಆಹಾರ್ಯ. ಚಂದ್ರತಾರೆಗಳಿಂದ ಹಿಡಿದು ಎಲ್ಲವನ್ನೂ ವೇಷ ಭೂಷಣಕ್ಕಾಗಿ ಬಳಸಬಹುದು. ಸಾತ್ವಿಕ ಎಂದರೆ ಶಕ್ತಿ, ಸತ್ವ. ಹೀಗೆ ನಾಲ್ಕೂ ವಿಧಗಳಿಂದ ಮಾಡುವ ಅಭಿನಯವು ಶ್ರೇಷ್ಠ ಗುಣಮಟ್ಟದಲ್ಲಿ ಮೂಡಿಬರುತ್ತದೆ.
ಧರ್ಮಿ:
ಲೋಕಧರ್ಮಿ (ಲೋಕದಲ್ಲಿ ನಡೆಯುವಂತೆ ಸಹಜವಾಗಿ ಮಾಡುವ ನಟನೆ, ಜೀವನಾಧಾರಿತ) ಮತ್ತು ನಾಟ್ಯ ಧರ್ಮಿ ಎಂಬ ಎರಡು ನಾಟ್ಯ ಸಂಪ್ರದಾಯಗಳನ್ನು ಭರತ ವಿವರಿಸಿದ್ದಾನೆ.
ವೃತ್ತಿ:
ವೃತ್ತಿ ಎಂದರೆ ನಾಟಕದ ಶೈಲಿ (Style of Production). ಭರತನು ಭಾರತಿ, ಸಾತ್ವತಿ, ಕೈಶಿಕಿ ಮತ್ತು ಆರಭಟಿ ಎಂಬ ನಾಲ್ಕು ವೃತ್ತಿಗಳು ಎಂದು ವಿಭಜಿಸಿದ್ದಾನೆ. ಭಾರತಿ ಎಂಬುದು ಪಠ್ಯ ಪ್ರಧಾನವಾದ ಶೈಲಿಯಾದರೆ ಸಾತ್ವತಿ ಎಂಬುದು ಭಾವ ಪ್ರಧಾನವಾದ ಶೈಲಿ. ಕೈಶಿಕಿ ಶೈಲಿಯಲ್ಲಿ ನಾಟ್ಯವೇ ಪ್ರಧಾನವಾದರೆ ಆರಭಟಿ ಎಂಬುದು ಯುದ್ಧ, ಸಾಮರ್ಥ್ಯ ಪ್ರದರ್ಶನ ಪ್ರಧಾನವಾದ ಶೈಲಿಯಾಗಿದೆ.
ಪ್ರವೃತ್ತಿ:
ದೇಶದ ಬೇರೆ ಬೇರೆ ಭಾಗದ ಜನರಲ್ಲಿ ಬೇರೆ ರೀತಿಯ ಅಭಿರುಚಿಗಳು ಇರುವುದೆಂದು ಭರತ ಹೇಳಿದ್ದಾನೆ. ಭಾರತವನ್ನು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಮಧ್ಯ ಭಾಗವೆಂದು ವಿಭಜಿಸಿ, ಈ ಐದು ಭಾಗಗಳಲ್ಲಿ ಐದು ರೀತಿಯ ಜನರ ಅಭಿರುಚಿಗಳನ್ನು ಅವನು ವಿವರಿಸಿದ್ದಾನೆ. ಆಯಾ ಭಾಗಗಳಲ್ಲಿ ಅಲ್ಲಿಯ
ಅಭಿರುಚಿಗೆ ತಕ್ಕ ನಾಟ್ಯ ಪ್ರದರ್ಶನವನ್ನು ನೀಡುವುದು ಉಚಿತ ಎಂಬುದು ಅವನ ಅಭಿಪ್ರಾಯ.
ಸಿದ್ಧಿ:
ಮಾನುಷ ಸಿದ್ಧಿ ಮತ್ತು ದೈವೀ ಸಿದ್ಧಿ ಎಂಬ ಎರಡು ವಿಧವಾದ ಸಿದ್ಧಿಗಳನ್ನು ಭರತ ಗುರುತಿಸಿದ್ದಾನೆ. ಉತ್ತಮ ನಟರು, ರಂಗ, ವೇದಿಕೆಗಳ ಸಜ್ಜು ಮುಂತಾದವು ಮಾನುಷ ಸಿದ್ಧಿಗಳಾದರೆ ಯಾವುದೇ ಪ್ರಕೋಪಗಳಿಲ್ಲದ ಹಿತಕರವಾದ ಅನುಕೂಲಕರವಾದ ವಾತಾವರಣವು ದೈವೀ ಸಿದ್ಧಿ ಎನಿಸುತ್ತದೆ.
ಸ್ವರ:
ನಾಟ್ಯಕ್ಕೆ ಸಪ್ತ ಸ್ವರಗಳ ಮೇಳದಿಂದ ಕೂಡಿದ ಸಂಗೀತವು ಮುಖ್ಯವೆಂದು ಭರತನ ಅಭಿಪ್ರಾಯ. ಭಾರತೀಯ ಸಂಗೀತವು ಸ ರಿ ಗ ಮ ಪ ದ ಮತ್ತು ನಿ ಎಂಬ ಈ ಏಳು ಮೂಲ ಸ್ವರಗಳ ಬುನಾದಿಯ ಮೇಲೆಯೇ ರಚಿತವಾಗಿದೆ.
ಆತೋದ್ಯ:
ಆತೋದ್ಯ ಎಂದರೆ ವಾದ್ಯಗಳು. ನಾಟ್ಯ ಅಥವಾ ನಾಟಕಗಳಲ್ಲಿ ಹಿನ್ನೆಲೆವಾದ್ಯಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಭರತನು ನಾಲ್ಕು ವಿಧವಾದ ವಾದ್ಯಗಳನ್ನು ಗುರುತಿಸಿದ್ದಾನೆ. ಅವು – ತಥಾ (ತಂತಿ), ಅವನದ್ದ (ಚರ್ಮ), ಘನ (ಲೋಹ) ಮತ್ತು ಪವನ (ಗಾಳಿ) ವಾದ್ಯಗಳು.
ಗಾನ:
ನಾಟ್ಯಕ್ಕೆ ಐದು ರೀತಿಯ ಧ್ರುವ ಗಾನಗಳು – ಪ್ರಾವೇಶಿಕಿ, ನಿಷ್ಕ್ರಾಮಕಿ, ಅಕ್ಷೇಪಿಕಿ, ಪ್ರಾಸಾದಿಕಿ ಮತ್ತು ಅಂತರ ಧ್ರುವ. ನಾಟಕದ ಆದಿಯಲ್ಲಿ ಪಾತ್ರದ ಪ್ರವೇಶ ಕಾಲಕ್ಕೆ ಹೇಳುವ ಗಾನ, ಪಾತ್ರದ ನಿರ್ಗಮನದ ವೇಳೆಯಲ್ಲಿ ಹಾಡುವ ಗಾನ ಹೀಗೆ ಐದು ರೀತಿಯ ಗಾನಗಳ ಮಹತ್ವವನ್ನು ಭರತ ವಿವರಿಸಿದ್ದಾನೆ.
ರಂಗ:
ನಾಟ್ಯ ಪ್ರದರ್ಶನಕ್ಕೆ ಬೇಕಾದ ರಂಗ ಮಂದಿರದ ನಿರ್ಮಾಣದ ಕುರಿತು ವಿಸ್ತೃತವಾದ ವಿವರವನ್ನು ನಾಟ್ಯಶಾಸ್ತ್ರದಲ್ಲಿ ಹೇಳಲಾಗಿದೆ. ರಂಗ ಮಂದಿರದ ಆಕಾರ, ಅಳತೆಯ ವಿವರಗಳು ಹೀಗಿವೆ: ಅವಶ್ಯಕತೆಗೆ ತಕ್ಕಂತೆ ವಿಕೃಷ್ಟ, ಚತುರಶ್ರ ಮತ್ತು ತೃಷ್ರ್ಯ (ಆಯತ, ಚೌಕ, ತ್ರಿಕೋನ) ಎಂಬ ಮೂರು ಆಕಾರಗಳ ರಂಗಮಂದಿರಗಳು; ಜೇಷ್ಠ, ಮಧ್ಯಮ ಮತ್ತು ಅವರ ಎಂಬ ಮೂರು ಅಳತೆಯ ರಂಗ ಮಂದಿರಗಳನ್ನು ನಿರ್ಮಿಸುವುದು ಸೂಕ್ತ ಎಂದು ಭರತ ಹೇಳಿದ್ದಾನೆ.
ರಂಗ ಮಂದಿರದ ನಿರ್ಮಾಣ ಹೇಗೆ, ಕಂಬಗಳು ಎಲ್ಲೆಲ್ಲಿ, ಕಂಬದ ಕೆಳಗೆ ಹಾಕುವ ಲೋಹಗಳು, ಬೆಳಕಿಗಾಗಿ ಪಂಜುಗಳು ಎಲ್ಲೆಲ್ಲಿ ಇರಬೇಕು ಮುಂತಾದ ವಿವರಗಳನ್ನೂ ಇಲ್ಲಿ ಹೇಳಲಾಗಿದೆ.
ಹೀಗೆ ಭರತ ಹೇಳಿರುವ ಮೇಲಿನ ಹನ್ನೊಂದು ಸಂಗ್ರಹಗಳು ನಾಟ್ಯ, ನಾಟಕ ಅಥವಾ ಯಾವುದೇ ಲಲಿತ ಕಲಾ ಪ್ರದರ್ಶನಕ್ಕೆ ಮುಖ್ಯವಾಗಿರುವ ಅಂಶಗಳು. ಅದರ ನಂತರ ಇತರ ಅಂಶಗಳಾದ ನಾಟಕದ ರಚನೆ, ಮುದ್ರೆ, ಪರಿಕ್ರಮ, ಕಕ್ಷೆ, ಮಂಡಲಗಳು, ಚಾರಿ ಮುಂತಾದ ನಾಟ್ಯದ ಅಂಗಗಳು, ಪಾತ್ರ, ಪಾತ್ರಧಾರಿ, ಪ್ರೇಕ್ಷಕ ಹೇಗಿರಬೇಕು ಎಂಬ ಅಂಶವನ್ನೂ ಅವನು ವಿವರಿಸಿದ್ದಾನೆ.
ದಶರೂಪಕ – ‘ದಶರೂಪಕ’ ಎಂಬ ಹತ್ತು ಬಗೆಯ ಪ್ರದರ್ಶನಗಳನ್ನು ಭರತ ಹೇಳಿದ್ದಾನೆ. ರೂಪದಿಂದ ಅಭಿನಯಿಸುವುದು ರೂಪಕ. ಹತ್ತು ಬಗೆಯ ರೂಪಕಗಳು – ನಾಟಕ, ಪ್ರಕರಣ, ಭಾಣ, ಪ್ರಹಸನ, ಡಿಮ, ವ್ಯಾಯೋಗ, ಸಮವಾಕಾರ, ವೀಥಿ, ಅಂಕ ಮತ್ತು ಈಹಾಮೃಗ. ಶಾಕುಂತಲ, ಉತ್ತರರಾಮಚರಿತ ಮುಂತಾದವು ನಾಟಕ ರೂಪಕ್ಕೆ ಉದಾಹರಣೆಗಳು. ವಸ್ತು, ನೇತ, ರಸ, ಅಂಕ, ಶೈಲಿಗಳ ಮೇಲೆ ಈ ರೂಪಕಗಳು ಬದಲಾಗುತ್ತವೆ.
ಈ ದಶರೂಪಕಗಳನ್ನು ಧನಂಜಯ ತನ್ನ ‘ದಶರೂಪಕ’ ಕೃತಿಯಲ್ಲಿ ಇನ್ನೂ ವಿಸ್ತೃತವಾಗಿ ವಿವರಿಸಿದ್ದಾನೆ.
ಮುದ್ರೆಗಳು – ನೃತ್ಯದ ಶಾಸ್ತ್ರೀಯ ಭಾಷೆ. ಅಸಂಯುತ, ಸಂಯುತ ಹಸ್ತಗಳು ಎಂದು ಒಂದು ಅಥವಾ ಎರಡೂ ಹಸ್ತಗಳ ಬಳಕೆಯಿಂದ ವಿವಿಧ ಕರವಿನ್ಯಾಸಗಳನ್ನು ಮಾಡುವ ವಿಧಾನಕ್ಕೆ ಮುದ್ರೆ ಎಂದು ಹೆಸರು.
ಇತರ ಪರಿಕಲ್ಪನೆಗಳು – ಪರಿಕ್ರಮ ಎಂದರೆ ಸುತ್ತ ತಿರುಗಿ ಬರುವುದು. ಕಕ್ಷೆ ಎಂದರೆ ಒಂದು ನಿರ್ದಿಷ್ಟ ಸ್ಥಳ. ವಿವಿಧ ಸ್ಥಳಗಳಲ್ಲಿ ನಡೆಯುವ ಕಥಾನಕವನ್ನು ಅಭಿನಯಿಸುವಾಗ ರಂಗ ವೇದಿಕೆಯ ಮೇಲೆ ಆ ಎಲ್ಲಾ ಸ್ಥಳಗಳ ಕಲ್ಪನೆಯನ್ನು ತೋರಿಸಬೇಕಾಗುತ್ತದೆ. ಒಂದು ಪರಿಕ್ರಮ ಮಾಡಿದರೆ ಒಂದು ಕಕ್ಷೆ ಬದಲಾಗಿ ಇನ್ನೊಂದು ಸ್ಥಳಕ್ಕೆ ಬರುವಂತಹ ಪರಿಕಲ್ಪನೆ ಇಲ್ಲಿ ಸಹಾಯಕವಾಗುತ್ತದೆ. ಇದೇ ರೀತಿ ಮಂಡಲ, ಚಾರಿ ಮೊದಲಾದ ಪರಿಕಲ್ಪನೆಗಳು ರಂಗಕಲೆಗಳಲ್ಲಿ ಉಪಯುಕ್ತವಾಗುತ್ತವೆ. ಯಕ್ಷಗಾನವು ನಾಟ್ಯಶಾಸ್ತ್ರದ ವಿಧಾನಗಳನ್ನು, ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಒಂದು ಶಾಸ್ತ್ರೀಯ ಕಲೆಯಾಗಿದೆ.
ಪಾತ್ರ – ಉತ್ತಮ, ಮಧ್ಯಮ ಮತ್ತು ಅಧಮ ಎಂಬ ಮೂರು ಬಗೆಯ ಪಾತ್ರಗಳು.
ಪಾತ್ರಧಾರಿಗಳು – ಅನುರೂಪ, ವಿರೂಪ ಮತ್ತು ರೂಪಾನುಸಾರಿ ಎಂಬ ವಿಧಗಳು.
ಪ್ರೇಕ್ಷಕರು – ಕಲಾ ಪ್ರದರ್ಶನವನ್ನು ವೀಕ್ಷಿಸುವ ಜನರಿಗೆ ಬೇಕಾದ ಗುಣಗಳನ್ನೂ (ಸಹೃದಯತೆ, ಆನಂದಿಸುವ ಕಲೆ, catharsis) ಭರತ ಹೇಳಿದ್ದಾನೆ. ಪಾತ್ರಗಳು ಸತ್ವಯುತವಾದ ಅಭಿನಯ ನೀಡಿದಾಗ ಪ್ರೇಕ್ಷಕ ತನ್ನೊಳಗಿನ ಭಾವಗಳನ್ನು ಕಣ್ಣೀರು, ಖುಷಿಗಳ ಮೂಲಕ ಹೊರಹಾಕಿ ಶಾಂತಿ, ನೆಮ್ಮದಿಯನ್ನು ಪಡೆಯುತ್ತಾನೆ. ರಸಾನುಭವದ ಅನುಭೂತಿ ಮಾನಸಿಕ ಚಿಕಿತ್ಸೆಯೂ ಹೌದು.
ಪರಿಸರ, ಪಶು, ಪಕ್ಷಿಗಳು ಇವೆಲ್ಲವುಗಳಿಗೂ ಒಂದು ಗೌರವಯುತ ಸ್ಥಾನ ಕೊಡುವುದು, ಎಲ್ಲವನ್ನೂ ಗೌರವಿಸುವುದು ಭಾರತೀಯ ಪರಂಪರೆ. ಎಲ್ಲವೂ ದಿವ್ಯ, ಭವ್ಯವಾದವು ಎಂಬ ಧನಾತ್ಮಕ ಮನಸ್ಥಿತಿ ಭಾರತೀಯರದ್ದು. ನಾಟಕದ ಆರಂಭದ ‘ನಾಂದಿ’ ಮತ್ತು ಅಂತ್ಯದ ‘ಭರತವಾಕ್ಯ’ ಎಂಬ ಭಾಗಗಳಲ್ಲಿ ಸಕಲವೂ ಮಂಗಳವಾಗಲಿ, ಸರ್ವರಿಗೂ ಒಳಿತಾಗಲಿ ಎಂಬ ಆಶಯ ಪ್ರಧಾನವಾಗಿ ಕಾಣುತ್ತದೆ. ಉತ್ತಮವಾದ ನಾಟಕವು ಮನುಷ್ಯನನ್ನು ಸುಸಂಸ್ಕೃತನಾಗಿ ಮಾಡುತ್ತದೆ.
ಕಾಳಿದಾಸ, ಭಾಸ, ಭವಭೂತಿ ಮೊದಲಾದವರಿಂದ ರಚಿತವಾದ ಸಂಸ್ಕೃತ ನಾಟಕಗಳು ನಾಟ್ಯಶಾಸ್ತ್ರದ ಆಧಾರದ ಮೇಲೆ ರಚಿತವಾಗಿರುವ ಶ್ರೇಷ್ಠ ಕಾವ್ಯಗಳಾಗಿವೆ. ಯುರೋಪಿನ ಸಾಹಿತ್ಯ ಇನ್ನೂ ಕಣ್ಣು ಬಿಡದ ಕಾಲದಲ್ಲಿ ಇಂತಹ ಪ್ರಬುದ್ಧ ಶಾಸ್ತ್ರ ಗ್ರಂಥಗಳು, ಅದನ್ನಾಧರಿಸಿದ ನಾಟಕಗಳು, ಕಾವ್ಯಗಳೂ ರಚನೆಯಾಗಿದ್ದವು. ಗ್ರೀಕ್ ಸಾಹಿತ್ಯದಲ್ಲಿಯೂ 2500 ವರ್ಷಗಳ ಹಿಂದೆ ಶ್ರೇಷ್ಠವಾದ ನಾಟಕ ಸಾಹಿತ್ಯದ ರಚನೆಯಾಗಿತ್ತು. ಎಸ್ಕ್ಲಿಲಸ್, ಸೋಫೈಕ್ಲಿಸ್, ಯೂರಿಪಿಡಿಸ್ ಮುಂತಾದ ನಾಟಕಕಾರರ ದುರಂತ ನಾಟಕಗಳು ಇದಕ್ಕೆ ನಿದರ್ಶನದಂತಿವೆ.
ಒಟ್ಟಿನಲ್ಲಿ ಭರತನ ನಾಟ್ಯಶಾಸ್ತ್ರವು ರಂಗಭೂಮಿಗೆ, ಸಾಹಿತ್ಯಕ್ಕೆ, ನೃತ್ಯಕ್ಕೆ, ಸಂಗೀತಕ್ಕೆ, ಶಿಲ್ಪಕಲೆಗೆ ಹೀಗೆ ಎಲ್ಲ ಬಗೆಯ ಲಲಿತಕಲೆಗಳಿಗೂ ಆಧಾರವಾಗಿದೆ. ಕಲೆಗೆ ಇದೊಂದು ವಿಶ್ವಕೋಶವಾಗಿದೆ. ಐದಾರು ಸಾವಿರಕ್ಕೂ ಮೀರಿದ ತಾಂತ್ರಿಕ ಶಬ್ದಗಳಿರುವ ನಾಟ್ಯಶಾಸ್ತ್ರದಲ್ಲಿ ದಾಖಲಾಗಿರುವ ಅಗಾಧವಾದ ಮಾಹಿತಿಯ ಪೂರದಲ್ಲಿ, ಇಲ್ಲಿ ಚರ್ಚಿಸಲಾಗಿರುವುದು ಒಂದು ಸಣ್ಣ ಹನಿಯಷ್ಟು ಮಾತ್ರ.
*****
1 thought on “‘ಭರತನ ನಾಟ್ಯಶಾಸ್ತ್ರದ ಅನನ್ಯತೆ’ : ಡಾ.ಬಿ.ವಿ. ರಾಜಾರಾಮ್ ಅವರ ಉಪನ್ಯಾಸ”
ಸಂಗ್ರಹ ಯೋಗ್ಯ ವಿಷಯ. ಅಭಿನಂದನೆಗಳು.