ಸಂಶೋಧನ ಸರದಾರ ರಾಷ್ಟ್ರ್ರಕವಿ ಗೋವಿಂದ ಪೈ

(ವಿ ಸೂ.; 23 ಮಾರ್ಚ್ (ಜನ್ಮದಿನ 23.03.1883) ಗೋವಿಂದ ಪೈ ಅವರ ಜನ್ಮ ದಿನದಂದು ಪ್ರಕಟಣೆಗೆ ಆಯ್ಕೆಗೊಂಡಿದ್ದ ಲೇಖನ.)

ಕೃತಿ : ‘ಸಂಶೋಧನ ಸರದಾರ ರಾಷ್ಟ್ರಕವಿ ಗೋವಿಂದ ಪೈ’
ಲೇ: ಡಾ.ಪ್ರಮೀಳಾ ಮಾಧವ್
ಪ್ರಕಾಶಕರು: ಸಪ್ನ ಬುಕ್ ಹೌಸ್
ಮೊದಲ ಮುದ್ರಣ :2021

ಡಾ. ಪ್ರಮೀಳಾ ಮಾಧವ್ ಅವರದು ಕ್ರಿಯಾಶೀಲ ಚೇತನ. ಅಧ್ಯಾಪನ ವೃತ್ತಿಯೊಂದಿಗೆ ಕಲಿತದ್ದನ್ನು , ಸತ್ವಯುತವಾದ್ದನ್ನು ಹಂಚಿಕೊಳ್ಳಬೇಕೆಂಬ ಉತ್ಸಾಹ ಸತತ ಬರವಣಿಗೆಯ ರೂಪದಲ್ಲೂ ಕಾಣಿಸಿಕೊಂಡು ಕನ್ನಡಕ್ಕೆ ಅವರಿಂದ ಅನೇಕ ಕೃತಿಗಳು ಕೊಡುಗೆಯಾಗಿ ಸಂದಿವೆ. ನಿವೃತ್ತಿಯ ಬಳಿಕವೂ ಹೀಗೆ ತಮ್ಮನ್ನು ತೊಡಗಿಸಿಕೊಂಡ ಕಾಸರಗೋಡು ಮೂಲದ ಈ ಹಿರಿಯಕ್ಕ ನಾಡುಕಂಡ ಶ್ರೇಷ್ಠ ವಿದ್ವಾಂಸ, ಸಂಶೋಧಕ ಗೋವಿಂದ ಪೈಯವರ ಸಂಶೋಧನ ಬರಹಗಳನ್ನೇ ಮುಖ್ಯವಾಗಿ ಕೇಂದ್ರೀಕರಿಸಿ ಕೃತಿಯನ್ನು ರಚಿಸುವ ಸಾಹಸಕ್ಕೆ ಇಳಿಯುತ್ತಾರೆ.ಅದೇನೂ ಸಣ್ಣ ಸಾಹಸವಲ್ಲ.

ಗೋವಿಂದಪೈಯವರು ಒಂದು ಕಡಲಿದ್ದಂತೆ . ಅವರನ್ನು ಪರಿಚಯಿಸುವುದೇ ಒಂದು ಸವಾಲು. ಅದರಲ್ಲೂ ಅವರ ಸಂಶೋಧನ ಬರಹಗಳೆಂದರೆ ಅಷ್ಟು ವಿಸ್ತಾರವಾದದ್ದು ಮತ್ತು ಪಾಂಡಿತ್ಯ ಪ್ರಖರವಾದದ್ದು. ಗೋವಿಂದ ಪೈಯವರ ಬದುಕುಬರಹವನ್ನು ಪರಿಚಯಿಸುವ ಹೊತ್ತಗೆಗಳ ಸಂಖ್ಯೆಯನ್ನು ಅವರ ಸಾಧನೆಯ ಆಳ ಅಗಲಗಳಿಗೆ ತುಲನೆ ಮಾಡಿದರೆ ಕಡಿಮೆಯೆಂದೇ ಹೇಳಬೇಕು. ಕಯ್ಯಾರ ಕಿಞ್ಷಣ್ಣ ರೈಯವರು ಅವರ ಬಗ್ಗೆ ಬರೆದ ಮೂರು ಪುಸ್ತಕಗಳು,(.ಗೋವಿಂದಪೈ ಸ್ಮೃತಿ ಕೃತಿ, ಮಹಾಕವಿ ಗೋವಿಂದ ಪೈ, ರಾಷ್ಟ್ರಕವಿ ಗೋವಿಂದ ಪೈ, ) ಶ್ರೀನಿವಾಸ ಹಾವನೂರರು ಶ್ರಮವಹಿಸಿ ಸಿದ್ಧಪಡಿಸಿದ ‘’ಗೋವಿಂದ ಪೈ ವಾಙ್ಮಯದರ್ಶನ’ ಉಲ್ಲೇಖನೀಯ. ಮುಂದೆ ಪೈಯವರ ಶತಮಾನೋತ್ಸವ ಸಂದರ್ಭದಲ್ಲಿ ಸಾಹಿತ್ಯ ಪರಿಷತ್, ಸಾಹಿತ್ಯ ಅಕಾಡಮಿಯೂ ಸೇರಿದಂತೆ ವಿವಿಧ ಸಂಸ್ಥೆಗಳು ವಿಚಾರಗೋಷ್ಠಿಗಳಲ್ಲಿ ಬೇರೆಬೇರೆ ವಿದ್ವಾಂಸರಿಂದ ಮಂಡಿತವಾದ ಪೈಯವರ ಕೃತಿಗಳ ಕುರಿತಾದ ನೋಟಗಳನ್ನು ಪುಸ್ತಕ ರೂಪದಲ್ಲಿ ತಂದದ್ದನ್ನು ಕೂಡ ಇಲ್ಲಿ ನೆನೆಯಬೇಕು. ಆದರೆ ಪ್ರಮೀಳಾ ಅವರ ಈ ಕೃತಿ ವಿಶಿಷ್ಟವಾಗಿ ನಿಲ್ಲುತ್ತದೆ

ಏಕೆಂದರೆ ಇದು ಅವರ ಸಂಶೋಧನ ಬರಹಗಳನ್ನು ಪರಿಚಯಿಸುವ ಸಲುವಾಗಿಯೇ ಮೂಡಿದ ಕೃತಿ. ಹಿಂದೊಮ್ಮೆ ವಿದ್ವಾಂಸರಾದ ಡಾ.ಎಲ್ ಬಸವರಾಜು ಅವರು ಗೋವಿಂದ ಪೈ ಪ್ರಶಸ್ತಿಯನ್ನು ಸ್ವೀಕರಿಸುವುದಕ್ಕಾಗಿ ಮಂಜೇಶ್ವರಕ್ಕೆ ಬಂದಿದ್ದಾಗ ಪೈಯವರ ಸಂಶೋಧನ ಬರಹಗಳನ್ನು ಸರಳವಾಗಿ ಪರಿಚಯಿಸುವ ಕೆಲಸ ಆಗಬೇಕಾಗಿದೆ ಎಂದಿದ್ದರು. ಅವರು ಸ್ವತ: ಹಳಗನ್ನಡದ ಕೃತಿಗಳನ್ನು ಸರಳಗೊಳಿಸಿ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಒದಗಿಸಿದವರು. ಹಳೆಯ ಸಾಹಿತ್ಯದ ಸತ್ವದಿಂದ ಹೊಸಪೀಳಿಗೆಯವರು ವಂಚಿತರಾಗ ಬಾರದೆಂದು. ಅವರ ಕಾಳಜಿ.ಹಾಗೆಯೇ ಪೈಯವರ ಸಂಶೋಧನೆಯ ಮಹತ್ವ ಕೂಡ ಮುಂದಿನ ಪೀಳಿಗೆಯವರಿಗೆ ಕನಿಷ್ಠ ಪರಿಚಯವಾದರೂ ಆಗಬೇಕು ಎನ್ನುವುದು ಅವರ ಹಂಬಲವಾಗಿತ್ತು. ಪ್ರಮೀಳಾ ಮಾಧವ್ ಅವರ ಪ್ರಸ್ತುತ ಕೃತಿಯನ್ನು ನೋಡಿದಾಗ ಬಸವರಾಜು ಅವರ ಮಾತು ನೆನಪಾಯಿತು.ಅನ್ಯಾನ್ಯ ವಿಷಯಗಳ ಬಗ್ಗೆ ಹತ್ತು ಖಂಡಗಳಲ್ಲಿ ಹರಡಿ ಕೊಂಡಿರುವ ಪೈಯವರ ಚಿಂತನೆಯ,ಶೋಧನೆಯ, ಜಿಜ್ಞಾಸೆಯ. ವಿವರಗಳನ್ನು ಚೆನ್ನಾಗಿ ಓದಿ, ಅವುಗಳ ಮುಖ್ಯಾಂಶಗಳನ್ನು ಸಂಗ್ರಹಿಸಿ ಬರೆದ ಪ್ರಮೀಳಾ ಅವರು ಕನ್ನಡ ವಾಙ್ಮಯದ ಆ ಒಂದು ಕೊರತೆಯನ್ನು ತಕ್ಕಮಟ್ಟಿಗೆ ತುಂಬಿದ್ದಾರೆ.

ಹೆರಂಜೆ ಕೃಷ್ಣಭಟ್ ಮತ್ತು ಮುರಳೀಧರ ಉಪಾಧ್ಯ ಹಿರಿಯಡಕ ಇವರು ವಿವಿಧ ಮೂಲಗಳಿಂದ ಪೈಯವರ ಬರಹಗಳನ್ನು ಸಂಗ್ರಹಿಸಿ ತಮ್ಮ ಸಂಪಾದಕತ್ವದಲ್ಲಿ ಸುಮಾರು 1400 ಪುಟಗಳ ಬೃಹತ್ ಸಂಶೋಧನ ಸಂಪುಟವನ್ನು ಸಿದ್ಧಪಡಿಸಿದಾಗ ಸಂಶೋಧನಾಸಕ್ತರಿಗೆ ಅದೊಂದು ಅಮೂಲ್ಯ ಆಕರವಾಗಿ ಒದಗಿತು. ಸಂಶೋಧನಾಸಕ್ತ ವಿದ್ಯಾರ್ಥಿಗಳಿಗೆ ಹಾಗೂ ಇತರ ಆಸಕ್ತರಿಗೆ ಪೈಯವರ ಈ ಸಂಶೋಧನ ಸಂಪುಟವನ್ನು ಪ್ರವೇಶಿಸಲು ಒಂದು ಮಾರ್ಗದರ್ಶಿಯಾಗಿ ಪ್ರಮೀಳಾ ಅವರ ಈ ಕೃತಿ ನಿಲ್ಲುತ್ತದೆ. ಪೈಯವರ ಬದುಕು ಮತ್ತು ಇತರ ಕೃತಿಗಳ ಸಂಕ್ಷಿಪ್ತ ಅವಲೋಕನವೂ ಇದರಲ್ಲಿದೆ.ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನವು ಪ್ರಕಟಿಸಿದ ‘ಸಾಹಿತ್ಯೋಪಾಸಕರು ‘ಮಾಲಿಕೆಯಲ್ಲಿ ಪ್ರಕಟವಾದ ಗೋವಿಂದ ಪೈಯವರ ಕುರಿತಾದ ಬರಹದ ವಿಸ್ತೃತ ರೂಪವಾಗಿ ಈ ಕೃತಿ ಮೂಡಿಬಂದದ್ದು ಪ್ರಮೀಳಾ ಅವರ ಸಾಹಿತ್ಯ ಪರಿಚರ್ಯೆಯ ನಿಷ್ಠೆಗೆ ನಿದರ್ಶನವಾಗಿದೆ.

ಕೃತಿಗೆ ಪ್ರವೇಶಿಕೆಯಾಗಿ ಪೈಯವರ ಬದುಕಿನ ಪ್ರಮುಖ ಮಜಲುಗಳನ್ನು ಲೇಖಕಿ ಸಂಗ್ರಹವಾಗಿ ನಿರೂಪಿಸಿದ್ದಾರೆ. ಅದರಲ್ಲಿ ಅವರ ವೈಯಕ್ತಿಕ ಬದುಕಿಗಿಂತಲೂ ಸಾಹಿತ್ಯ ಬದುಕಿನ ವಿಕಾಸಕ್ಕೆ ಪ್ರಮುಖ ಲಕ್ಷ್ಯವನ್ನು ಕೊಡಲಾಗಿದೆ. ಮುಂದೆ ಪ್ರಮೀಳಾ ಅವರು ಎರಡು ಪ್ರತ್ಯೇಕ ವಿಭಾಗಗಳಲ್ಲಿ ಪೈಯವರ ಸೃಜನಶೀಲ ಮತ್ತು ಸಂಶೋಧನ ಸಾಹಿತ್ಯವನ್ನು ಪರಿಚಯಿಸಿದ್ದಾರೆ. ಇಪ್ಪತ್ತು ಪುಟಗಳಲ್ಲಿ ಪೈಯವರ ಕವನ ಸಂಕಲನಗಳನ್ನು, ಅವರ ಕಾವ್ಯ ವೈಶಿಷ್ಟ್ಯವನ್ನು , ನಾಟಕಗಳು ಮತ್ತು ಖಂಡ ಕಾವ್ಯಗಳಲ್ಲಿ ಅವರು ಮೆರೆದ ಅನನ್ಯತೆಯನ್ನು ಸಂಕ್ಷಿಪ್ತವಾಗಿ ದಾಖಲಿಸಿದ್ದಾರೆ. ತಮ್ಮ ವಿಚಾರಕ್ಕೆ ಪೂರಕವಾಗಿ ಕೀರ್ತಿನಾಥ ಕುರ್ತಕೋಟಿ, ಪ್ರಧಾನ ಗುರುದತ್ತ ಮೊದಲಾದ ವಿದ್ವಾಂಸರ ಅಭಿಪ್ರಾಯಗಳನ್ನು ಉಲ್ಲೇಖಿಸಿದ್ದಾರೆ.

ಎರಡನೇ ಭಾಗದಲ್ಲಿ ಒಟ್ಟು 94 ಪುಟಗಳಲ್ಲಿ ಗೋವಿಂದ ಪೈಯವರ ಸಂಶೋಧನ ಸಂಪುಟವನ್ನು ಆಕರವಾಗಿರಿಸಿಕೊಂಡು ಅವರ ಸಂಶೋಧನ ಸಾಹಿತ್ಯವನ್ನು ಪರಿಚಯಿಸುವ ಪ್ರಯತ್ನವನ್ನು ಮಾಡಿದ್ದಾರೆ. ಮುಂದೆ ಸಮಾರೋಪದ ಮಾತುಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಗೋವಿಂದ ಪೈಯವರ ವಿಶಿಷ್ಟ ಕೊಡುಗೆಯನ್ನು ಗುರುತಿಸಿದ್ದಾರೆ. ಬಹುಭಾಷಾವಿದರಾದ ಪೈಯವರ ಪಾಂಡಿತ್ಯ, ಪ್ರತಿಭೆ, ಪ್ರಯೋಗಶೀಲತೆಗಳ ಫಲಶ್ರುತಿಯಾಗಿ ಅವರ ಸಾಹಿತ್ಯದ ಅಭಿವ್ಯಕ್ತಿ ಕನ್ನಡಕ್ಕೆ ಸಂದ ಶ್ರೇಷ್ಠ ಸಂಪತ್ತಾಗಿರುವುದನ್ನು ಅವರು ಗಮನಿಸಿದ್ದಾರೆ. ಪೈಯವರು ತೀರಿಕೊಂಡ ಬಳಿಕ ಆ ಮೇರುವ್ಯಕ್ತಿತ್ವದ ಕುರಿತಾಗಿ ನಾಡಿನ ಹಿರಿಯರು ಹರಳುಗಟ್ಟಿದ ಮಾತುಗಳಲ್ಲಿ ನುಡಿನಮನವನ್ನು ಸಲ್ಲಿಸಿದ್ದು ಅದು ‘ದೀವಿಗೆ’ ( ಪೈಯವರ ಸಂಸ್ಮರಣ ಗ್ರಂಥ)ಯಲ್ಲಿ ದಾಖಲಾಗಿದೆ. ಲೇಖಕಿ ಅದರಿಂದ ಕೆಲವನ್ನು ಆಯ್ದು ನೀಡಿರುವುದು ಪೈಯವರ ವ್ಯಕ್ತಿತ್ವದ ಹಿರಿತನವನ್ನು ಮತ್ತಷ್ಟು ಅರಿಯಲು ಸಹಾಯಕವಾಗಿದೆ.

1355 ಪುಟಗಳಲ್ಲಿ ಹರಡಿಕೊಂಡಿರುವ ಪೈಯವರ ಸಂಶೋಧನ ಬರಹಗಳ ವಿಷಯವ್ಯಾಪ್ತಿ , ಮೂಲವನ್ನು ಶೋಧಿಸಿ ಹುಡುಕಿ ತೆಗೆವ ಶ್ರದ್ಧೆ,ನಿರೂಪಣೆಯಲ್ಲಿ ತೋರುವ ಮಾತಿನ ಖಚಿತತೆ –ಈ ಮೊದಲಾದ ಅಂಶಗಳು ಲೇಖಕಿಗೆ ಅಚ್ಚರಿಯನ್ನು ಮೂಡಿಸಿವೆ. ಈ ಬೆರಗಿನ ಭಾವದಲ್ಲಿಯೇ ಅವರು ವಿನಮ್ರರಾಗಿ ಪೈಯವರ ಸಂಶೋಧನ ಬರಹಗಳ ಸಮೀಕ್ಷೆಗೆ ತೊಡಗುತ್ತಾರೆ. ಸಂಶೋಧನ ಸಂಪುಟದ ಸಂಪಾದಕರು ಪೈಯವರ ಸಮಗ್ರ ಸಂಶೋಧನ ಬರಹಗಳನ್ನು ಹತ್ತುಖಂಡಗಳಲ್ಲಿ ವಿಭಾಗಿಸಿದ್ದಾರೆ. ಲೇಖಕಿ ಕೂಡ ಅದೇ ಅನುಕ್ರಮದಲ್ಲಿ ಪರಿಚಯಿಸುತ್ತ ಸಾಗಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅವರ ಸಂಶೋಧನೆ ಪಂಪಪೂರ್ವಯುಗದ ಹಳಗನ್ನಡದಿಂದ ಹಿಡಿದು ಯಕ್ಷಗಾನದ ಪಾರ್ತಿಸುಬ್ಬನವರೆಗೂ, ಆಧುನಿಕ ಸಾಹಿತ್ಯ ಪ್ರಕಾರಗಳವರೆಗೂ ವಿಸ್ತರಿಸಿರುವುದನ್ನು ಲೇಖಕಿ ಗಮನಿಸುತ್ತಾರೆ. ಹಾಗೆಯೇ ಚರಿತ್ರೆಗೆ ಸಂಬಂಧಿಸಿದಂತೆ ತುಳುನಾಡಿನಿಂದ ಆರಂಭಿಸಿ ಇಡೀ ಭಾರತದ ಚರಿತ್ರೆಯನ್ನು ಜಾಲಾಡಿದ ಬಗ್ಗೆ , ಧರ್ಮಕ್ಕೆ ಸಂಬಂಧಿಸಿದಂತೆಯೂ ಬಹುತೇಕ ಪ್ರಚಲಿತವಾಗಿರುವ ಎಲ್ಲ ಧರ್ಮಗಳ ಬಗ್ಗೆ, ಭಾಷೆಗೆ ಸಂಬಂಧಿಸಿದಂತೆ ಶಬ್ದಗಳ ರೂಪನಿಷ್ಪತ್ತಿ, ಸ್ಥಳನಾಮಗಳ ವಿವೇಚನೆ, ಛಂದೋಪ್ರಕಾರಗಳ ಜಿಜ್ಞಾಸೆ- -ಹೀಗೆ ಬಹುಮುಖವಾದ ತಲಸ್ಪರ್ಶಿಯಾದ ಪೈಯವರ ಸಂಶೋಧನೆಯ ಜಾಡನ್ನು ಲೇಖಕಿ ಗುರುತಿಸಿದ್ದಾರೆ. ವಿದ್ವತ್ತು, ತರ್ಕಸರಣಿ, ಗ್ರಹಣಶಕ್ತಿ, ವಿವೇಚನಾ ಸಾಮಥ್ರ್ಯ ಸ್ಮರಣಶಕ್ತಿ, ವಸ್ತುನಿಷ್ಠತೆ, ಪ್ರಾಮಾಣಿಕತೆ, ತಮ್ಮ ನಿರ್ಧಾರ ಸರಿಯಲ್ಲವೆಂದು ಆಧಾರ ಸಹಿತವಾಗಿ ಇತರರು ಮಂಡಿಸಿದಾಗ ಅದನ್ನು ಒಪ್ಪಿಕೊಳ್ಳುವ ಪ್ರಾಂಜಲ ಮನಸ್ಸು,- ಇತ್ಯಾದಿ ಸಂಶೋಧಕನಲ್ಲಿರಬೇಕಾದ ಆದರ್ಶಗುಣಗಳು ಪೈಯವರಲ್ಲಿದ್ದುದನ್ನು ಅವರು ಎತ್ತಿ ಹೇಳುತ್ತಾರೆ.

ಸಂಶೋಧನ ಸಂಪುಟದ ಮೊದಲ ಖಂಡವನ್ನು ಪರಿಚಯಿಸುತ್ತಾ ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರಾಚೀನ ಹೆಜ್ಜೆಗುರುತುಗಳ ಬಗ್ಗೆ ಪೈಯವರ ಸಂಶೋಧನೆ ಹೇಗೆ ಅನನ್ಯವಾದುದು ಎನ್ನುವುದನ್ನು ಸಾಧಾರ ನಿರೂಪಿಸುತ್ತಾರೆ. ಪೈಯವರ ಈ ಸಂಶೋಧನ ಬರಹಗಳನ್ನು ಅಧ್ಯಯನ ಮಾಡಿ ಅದರ ಹಿರಿಮೆಯನ್ನೂ, ಇತಿಮಿತಿಗಳನ್ನೂ ಗುರುತಿಸಿದ ಡಾ. ವೃಷಭೇಂದ್ರಸ್ವಾಮಿ, ಡಾ. ಎಂ.ಎಂ ಕಲಬುರ್ಗಿ ಮೊದಲಾದ ವಿದ್ವಾಂಸರ ಹೇಳಿಕೆಗಳನ್ನು ಲೇಖಕಿ ಪೂರಕವಾಗಿ ಬಳಸಿಕೊಂಡಿದ್ದಾರೆ.

ದ್ವಿತೀಯ ಖಂಡದ ಅವಲೋಕನದಲ್ಲಿ ಹೊಸಗನ್ನಡ ಸಾಹಿತ್ಯಕ್ಕೆ ಸಂಬಂಧಿಸಿ ಪೈಯವರು ವಿವಿಧ ಸಂದರ್ಭಗಳಲ್ಲಿ ಬರೆದ ಸಮಕಾಲೀನ ವ್ಯಕ್ತಿವಿಷಯಕವಾದ, ಆತ್ಮಕಥನಾತ್ಮಕವಾದ, ಪ್ರಚಲಿತ ವಿಷಯಗಳಿಗೆ ಸಂಬಂಧಿಸಿದ ಹಾಗೂ ಹೊಸಗನ್ನಡ ಸಾಹಿತ್ಯದ ಆರಂಭಕಾಲದ ಚರಿತ್ರೆಯ ಕುರಿತಾದ 14 ಲೇಖನಗಳನ್ನು ಉಲ್ಲೇಖಿಸಿ ಸಂಕ್ಷಿಪ್ತ ಸಮೀಕ್ಷೆಯನ್ನು ಮಾಡಿದ್ದಾರೆ. ಲೇಖಕಿಯ ನಿರೂಪಣೆಯಿಂದ ಪೈಯವರ ಈ ಗದ್ಯ ಬರಹಗಳು ಹೊಸಗನ್ನಡ ಸಾಹಿತ್ಯ ಸಂದರ್ಭವನ್ನು,ಆ ಕಾಲದ ಕೆಲವು ಪ್ರಜ್ಞಾವಂತರ ವ್ಯಕ್ತಿಚಿತ್ರಗಳನ್ನು ಕಟ್ಟಿಕೊಟ್ಟರೀತಿ ಆಪ್ತವಾಗಿ ಮನಸ್ಸಿಗೆ ಮುಟ್ಟುತ್ತವೆ.
ತುಳುನಾಡಿನ ಇತಿಹಾಸವನ್ನು ಕುರಿತಾದ ಪೈಯವರ 21 ಸಂಶೋಧನ ಬರಹಗಳು ತೃತೀಯ ಖಂಡದಲ್ಲಿ ಒಳಗೊಂಡಿದ್ದು ಲೇಖಕಿ ಒಂದೊಂದನ್ನೂ ಪ್ರತ್ಯೇಕವಾಗಿ ಗಮನಿಸಿದ್ದಾರೆ. ತುಳುನಾಡಿನ ಪೂರ್ವಸ್ಮೃತಿ, ತುಳು ಶಬ್ದದ ವ್ಯುತ್ಪತ್ತಿ, ಅಳಿಯಕಟ್ಟಿನ ಪ್ರಾಚೀನತೆ, ಸ್ಥಳನಾಮಗಳು, _ ಈ ಮುಂತಾದ ಬರಹಗಳು ಅತ್ಯಮೂಲ್ಯವಾದ ಮಾಹಿತಿಗಳಿಂದ ಕೂಡಿದ್ದು ಮುಂದಿನ ಸಂಶೋಧಕರಿಗೆ ಆಕರವಾಗಿ ಒದಗಿರುವುದನ್ನು ಲೇಖಕಿ ಗುರುತಿಸಿದ್ದಾರೆ.

ನಾಲ್ಕನೆಯ ಖಂಡದಲ್ಲಿ ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿದ ಒಟ್ಟು 22 ಲೇಖನಗಳನ್ನು ಲೇಖಕಿ ಪರಿಚಯಿಸುತ್ತಾ ತುಳುನಾಡಿನ ಇತಿಹಾಸಕ್ಕೆ ಸಂಬಂಧಿಸಿ ಬರೆದ ಬರಹಗಳಿಗೂ ಈ ಬರಹಗಳಿಗೂ ಸಾವಯವ ಸಂಬಂಧ ಇರುವುದಾಗಿ ಹೇಳಿರುವುದು ಲೇಖಕಿಯ ಸೂಕ್ಷ್ಮಾವಲೋಕನಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದ ಇತಿಹಾಸವನ್ನು ರಚಿಸಲು ಶಾಸನ ಮತ್ತು ಸಾಹಿತ್ಯ ಕೃತಿಗಳನ್ನು ಪೈಯವರು ಮೂಲ ಆಕರಗಳಾಗಿ ಬಳಸಿಕೊಂಡದ್ದ ಬಗ್ಗೆ ಹೇಳಿದ್ದಾರೆ.ಇದರಲ್ಲಿ ಟೊಲೆಮಿಯ ಗ್ರಂಥದಲ್ಲಿ ಬರುವ ಹಿಪ್ಪೊಕೂರ ಎಂಬ ಸ್ಥಳದ ಕುರಿತಾದ ಶೋಧನೆಯನ್ನು ನಡೆಸಿದ ಮತ್ತು ತಾಳಗುಂದ ಸ್ತಂಭ ಶಾಸನದ ವಿಶ್ಲೇಷಣೆಯ ಮೂಲಕ ಕದಂಬರ ಇತಿಹಾಸದ ಬೇರುಗಳನ್ನು ಬಗೆದ, ಅಲ್ಲದೆ ಕರ್ಣಾಟಕಕ್ಕೆ ಜೈನಧರ್ಮದ ಆಗಮನದ ಕಾಲವನ್ನು ಕುರಿತಾದ ಶೋಧವನ್ನು ನಡೆಸಿದ ಮೂರು ಲೇಖನಗಳನ್ನು ಮುಖ್ಯವಾಗಿ ಗುರುತಿಸಿ ಉಳಿದ ಬರಹಗಳನ್ನು ಉಲ್ಲೇಖಿಸಿ ಪೈಯವರ ವಿದ್ವತ್ತು, ಪಾಂಡಿತ್ಯ, ವಿಶ್ಲೇಷಣೆಯ ವಿಧಾನ, ವಿವೇಚನೆಯ ಮೊನಚು, ಸಂಶೋಧನೆಯ ಹರಹು ಅದ್ಭುತವಾಗಿವೆ- ಎಂದು ಉದ್ಗರಿಸುತ್ತಾರೆ..

ಜೈನ ಮತ್ತು ಬೌದ್ಧಧರ್ಮದ ಬಗ್ಗೆ ಆದ್ಯತೆಯನ್ನು ನೀಡಿ ಭಾರತದ ಇತಿಹಾಸದ ಚಲನೆಯನ್ನು ಕಟ್ಟಿಕೊಟ್ಟ ಪೈಯವರ 15 ಲೇಖನಗಳನ್ನೊಳಗೊಂಡ ಐದನೆಯ ಖಂಡದ ಬಗೆಗಿನ ನಿರೂಪಣೆಯಲ್ಲಿ ಲೇಖಕಿ ಹೆಲಿಯೋದೋರನ ಗರುಡಧ್ವಜದ ಬಗೆಗಿನ ಜಿಜ್ಞಾಸೆಯನ್ನೊಳಗೊಂಡ ಲೇಖನ, ಬುದ್ಧನ ಮತ್ತು ಮಹಾವೀರನ ಪರಿನಿರ್ವಾಣದ ಕಾಲವನ್ನು ಕುರಿತಾದ ಶೋಧನೆಯನ್ನೊಳಗೊಂಡ ಬರಹ ಹಾಗೂ ಇದರ ಮುಂದುವರಿಕೆಯಾಗಿ ಮತ್ತೆ ಮಹಾವೀರಸ್ವಾಮಿಯ ಕುರಿತಾದ ಲೇಖನಗಳನ್ನು ಬರೆದದ್ದನ್ನೂ ಉಲ್ಲೇಖಿಸುತ್ತಾರೆ .ಹಾಗೆಯೇ ಬುದ್ಧಚರಿತ, ಬಾಹುಬಲಿ ಚರಿತ್ರ, ಅಲ್ಲದೆ ಸಾತವಾಹನರ, ಗುಪ್ತರ ಕಾಲನಿರ್ಣಯದ ಬಗ್ಗೆ ಬರೆದ ಪ್ರತ್ಯೇಕ ಲೇಖನಗಳನ್ನು ಪ್ರಸ್ತಾಪಿಸುತ್ತಾರೆ.

‘ವಾಗರ್ಥ’ವೆಂಬ ಶೀರ್ಷಿಕೆಯ ಆರನೇ ಖಂಡದ ಒಟ್ಟು ಆರು ಲೇಖನಗಳ ಸಮೀಕ್ಷೆಯಲ್ಲಿ ಲೇಖಕಿ ಕೆಲವು ಉದಾಹರಣೆ ಗಳನ್ನೆತ್ತಿಕೊಂಡು ಪೈಯವರು ಕೆಲವು ವಿಶಿಷ್ಟ ಪದಗಳ ಭಾಷೆ, ವ್ಯಾಕರಣ, ಛಂದಸ್ಸು ಇತ್ಯಾದಿಗಳ ಆಧಾರದಿಂದ ಅವುಗಳ ರೂಪನಿಷ್ಪ್ಪತ್ತಿಯನ್ನು ಕುರಿತು ನಡೆಸಿದ ಜಿಜ್ಞಾಸೆಯನ್ನು ಉಲ್ಲೇಖಿಸುತ್ತಾರೆ.ಹಾಗೆಯೇ ಆ ಬರಹಗಳ ಸಾರರೂಪವನ್ನೂ ಒದಗಿಸುತ್ತಾರೆ. ಗೋವಿಂದಪೈಯವರ ಸಂಶೋಧನೆಯ ಕಾರ್ಯಾಗಾರದಲ್ಲಿ ಮುಖ್ಯವಿಷಯಗಳು ಮಾತ್ರವಲ್ಲದೆ ಅದರೊಂದಿಗೆ ಇತರ ಸಾವಿರಾರು ಉಪ ವಿಚಾರ,ವಿವರಗಳನ್ನೂ ಕಲೆಹಾಕುವ ಅವರ ವೈಶಿಷ್ಟ್ಯವನ್ನು ಲೇಖಕಿ ಪ್ರಸ್ತಾಪಿಸುತ್ತಾರೆ.

ಧರ್ಮ, ತತ್ವಜ್ಞಾನ, ಭಾಷಾಂತರದ ವಿಭಾಗಕ್ಕೆ ಸೇರಿದ ಏಳನೇಖಂಡದ 15 ಬರಹಗಳಮುಖ್ಯಾಂಶಗಳನ್ನು ಸಂಗ್ರಹಿಸಿ ಕೊಟ್ಟಲೇಖಕಿಗೋವಿಂದ ಪೈಯವರು ಭಾರತದಲ್ಲಿಹುಟ್ಟಿದ ಎಲ್ಲ ಮತಸಂಬಂಧವಾದ ವಿಚಾರಗಳನ್ನೂ ತಮ್ಮನಿಶಿತಮತಿಯಿಂದ ಒರೆಗೆಹಚ್ಚಿದ್ದರ ಕುರಿತು ಅಚ್ಚರಿಯನ್ನು ಪ್ರಕಟಿಸಿದ್ದಾರೆ.
ಸಂಪುಟದ ಎಂಟನೆಯ ಖಂಡದಲ್ಲಿ ಒಳಗೊಂಡ ಪೈಯವರು ತಮ್ಮದೇ ಕೃತಿಗಳಿಗೆ ಬರೆದ ಮುನ್ನುಡಿಗಳು ಹಾಗೂ ಇತರರ ಕೃತಿಗಳಿಗೆ ಬರೆದ ಮುನ್ನುಡಿಗಳನ್ನು ಉಲ್ಲೇಖಿಸುತ್ತಾ ಓರ್ವ ಮುನ್ನುಡಿಕಾರನ ಜವಾಬ್ದಾರಿಯನ್ನು ಪೈಯವರು ಸಮರ್ಥವಾಗಿ ಹಾಗೂ ವಿಶಿಷ್ಟವಾಗಿ ಹೇಗೆ ನಿಭಾಯಿಸಿದರು ಎಂದು ಲೇಖಕಿ ಸೋದಾಹರಣ ಹೇಳುತ್ತಾರೆ..ಈ ಮುನ್ನುಡಿಗಳಿಗೆ ಐತಿಹಾಸಿಕ ಮಹತ್ವವಿರುವುದನ್ನು ಅವರು ಗುರುತಿಸಿದ್ದಾರೆ.ಪುಸ್ತಕವಿಮರ್ಶೆಯನ್ನೊಳಗೊಂಡ 9ನೆಯ ಖಂಡ ಹಾಗೂ ಇತರ ಸಂಕೀರ್ಣಬರಹಗಳನ್ನು ಒಳಗೊಂಡ ಹತ್ತನೆಯ ಖಂಡವನ್ನು ಲೇಖಕಿ ಅತ್ಯಂತ ಸಂಕ್ಷಿಪ್ತವಾಗಿ ಪರಿಚಯಿಸುವುದರ ಮೂಲಕ ಪೈಯವರ ಸಂಶೋಧನ ಸಂಪುಟಕ್ಕೆ ಉತ್ತಮ ಕೈಪಿಡಿಯನ್ನು ಒದಗಿಸಿದ್ದಾರೆ.

ಪೈಯವರು ಇಂಗ್ಲಿಷ್ ಭಾಷೆಯಲ್ಲಿ ಬರೆದ ಲೇಖನಗಳು ‘ಇಂಡಿಯಾನ’ ಎಂಬ ಹೆಸರಲ್ಲಿ ಸಂಪಾದಿತವಾಗಿದ್ದು ಆ ಬರಹಗಳ ಬಗ್ಗೆ ಈ ಕೃತಿಯಲ್ಲಿ ಉಲ್ಲೇಖವಿಲ್ಲದಿರ ಬಹುದು. ಆದರೆ . ಸಂಶೋಧನ ಕ್ಷೇತ್ರದ ದೈತ್ಯ ಪ್ರತಿಭೆ ಗೋವಿಂದ ಪೈ ಎನ್ನುವುದನ್ನು ಎತ್ತಿ ಹೇಳುವಲ್ಲಿ ಈ ಪರಿಚಯಾತ್ಮಕ ಕೃತಿ ಕಂಡಿತವಾಗಿ ಗೆದ್ದಿದೆ. ಕಾಸರಗೋಡಿನ ಮಣ್ಣಿನ ಮಗಳು ನೆಲದ ಋಣ ಎಂಬಂತೆ ಮಂಜೇಶ್ವರದ ಈ ವಾಙ್ಮಯ ತಪಸ್ವಿಯ ಬದುಕು ಬರಹಗಳನ್ನು ಕಟ್ಟಿಕೊಟ್ಟ ಬಗೆ ಕಿರಿಯರಿಗೆ ಮಾದರಿಯಾಗಿದೆ. ಗೋವಿಂದ ಪೈ ಸಂಶೋಧನ ಸಂಪುಟ ಮತ್ತೆ ಮರು ಮುದ್ರಣಕ್ಕೆ ಸಜ್ಜಾಗುತ್ತಿರುವ ವೇಳೆಯಲ್ಲಿ ಈ ಪುಸ್ತಕವನ್ನು ಪರಿಚಯಿಸುವುದಕ್ಕೆ ಸಂತೋಷವೆನಿಸುತ್ತದೆ.
*ಡಾ. ಮಹೇಶ್ವರಿ ಯು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಸಂಶೋಧನ ಸರದಾರ ರಾಷ್ಟ್ರ್ರಕವಿ ಗೋವಿಂದ ಪೈ”

  1. na damodara shetty

    ಶ್ರಮ ವಹಿಸಿ ಗೋವಿಂದ ಪೈ ಅವರ ಪರಿಚಯ ಮಾಡಿಕೊಟ್ಟಿದ್ದಾರೆ

  2. Chintamani Sabhahit

    ಅಧ್ಯಾಪನ ವೃತ್ತಿಗೆ ಒಂದು ಅಭಿಜಾತ ವರವಿದೆ. ಅದು ಅಧ್ಯಯನದಿಂದಲೇ ಬೆಳೆದು ಪ್ರಷ್ಠವಾಗುವ ಮುಖ. ಹೀಗಾಗಿ, ಸ್ಪಷ್ಟವಾಗಿ ಗುರುತಿಸಿಕೊಂಡಾಗ, ಸಾಹಿತ್ಯಿಕವಾಗಿ ಸ್ವಂತ ಬೆಳವಣಿಗೆಗೆ ಸಾಕಷ್ಟು ಹರವು ಇದೆ : ಸಹಜವಾಗಿ ಅನೇಕ ಅಭಿರುಚಿಯ ವಿದ್ಯಾರ್ಥಿಗಳ ಗುಣ, ಛಲಗಳನ್ನು ನೋಡುವ, ತೀಡಿ ತಿದ್ದುವ, ಕಲಿಕೆಯನ್ನು ಸಂಸ್ಕರಿಸಿ ಕೊಡುವ, ಸನ್ಮಾರ್ಗದಲ್ಲಿ ನಡೆಸುವ / ದೂಡುವ, ಅವಕಾಶ / ಜವಾಬ್ದಾರಿ ಅದರಲ್ಲಿ ಇದೆ. ಈ ಪ್ರಕ್ರಿಯೆಯಲ್ಲಿ ಅಚಲ ನಿಷ್ಠೆಯಿಂದ ಮನವನ್ನು ತೊಡಗಿಸಿಕೊಂಡಾಗ, ಮಜ್ಜಿಗೆಯನ್ನು ಕಡೆದಾಗ ಬರುವ ಬೆಣ್ಣೆಯಂತೆ, ಸಫಲತೆ, ಸ್ವಯಮ್ ಪ್ರಕಾಶಮಾನವಾಗುತ್ತದೆ.

    ನನ್ನ ಒಬ್ಬ ಗುರುಗಳು ಹೇಳಿದ್ದು : ನಿಜವಾದ ಗುರುವಾದವನು ಯಾವಾಗಲೂ ಕಲಿಯುತ್ತಲೇ ಇರಬೇಕು, ಹೇಗೆ ಉರಿಯುತ್ತಿರುವ ಮೋಮ್ಬತ್ತಿ ಮಾತ್ರವೇ, ಇನ್ನೊಂದು ಮೋಮ್ಬತ್ತಿಯನ್ನು ಉರಿಸಬಹುದೋ ಹಾಗೆ. ಇಂತಹ ಗುಣವನ್ನು ಹೊಂದಿದ, ಕ್ರಿಯಾಶೀಲ ಚೇತನದ ಡಾ. ಪ್ರಮೀಳಾ ಮಾಧವ್ ಅವರು, ತಮ್ಮ ಅಧ್ಯಾಪನ ವೃತ್ತಿಯೊಂದಿಗೆ, ಕಲಿತದ್ದನ್ನು , ಸತ್ವಯುತವಾದ್ದನ್ನು ಹಂಚಿಕೊಳ್ಳಬೇಕೆಂಬ ಸದಭಿರುಚಿಯ ಉತ್ಸಾಹದಿಂದ, ಹಳೆಯ ಸಾಹಿತ್ಯದ ಸತ್ವದಿಂದ ಹೊಸಪೀಳಿಗೆಯವರು ವಂಚಿತರಾಗಬಾರದೆಂಬ ಸದುದ್ದೇಶದ ಹಂಬಲದಿಂದ, ಸಂಶೋಧನಾಸಕ್ತ ವಿದ್ಯಾರ್ಥಿಗಳಿಗೆ ಹಾಗೂ ಇತರ ಆಸಕ್ತರಿಗೆ ರಾಷ್ಟ್ರಕವಿ ಗೋವಿಂದ ಪೈಯವರ ಸಂಶೋಧನ ಸಂಪುಟವನ್ನು ಪ್ರವೇಶಿಸಲು ಒಂದು ಮಾರ್ಗದರ್ಶಿಯಾಗಲೀ ಎಂಬ ಸದಾಶಯದಿಂದ, ನೆಲದ ಋಣ ಎಂಬಂತೆ ಬರೆದು, ಪೈಯವರ ಕನ್ನಡ ಸಾಹಿತ್ಯ, ಚರಿತ್ರೆ, ಧರ್ಮ, ಭಾಷೆಗಳಿಗೆ ಸಂಬಂಧಿಸಿದಂತೆ, ಸಂಶೋಧಕನಲ್ಲಿರಬೇಕಾದ ಗುಣಮತ್ತೆಯ ಸಂಶೋಧನಾ ಪ್ರವೃತ್ತಿಯ ಸಂಪತ್ತಿನ ಗಣಿಯನ್ನು, ಅಗೆದಗೆದು ಇಟ್ಟಿದ್ದಾರೆ – ವಿಶಾಲವಾದ ಹತ್ತು ಸಂಪುಟಗಳಲ್ಲಿ!

    ತುಳುನಾಡಿನ ಮಂಜೇಶ್ವರದ ವಾಙ್ಮಯ ತಪಸ್ವಿ ಗೋವಿಂದ ಪೈ ವ್ಯಕ್ತಿಮತ್ವ ಪರ್ವತಾಕಾರದಲ್ಲಿ ಬೆಳೆದು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ಒಂದು ಮೈಲುಗಲ್ಲಾಗಿ ನಿಲ್ಲುವ ಈ ಕಲೆಯನ್ನು, ಡಾ. ಮಹೇಶ್ವರಿಯವರು, ಆ ಪುಸ್ತಕದಿಂದ, ಅಷ್ಟೇ ಶ್ರದ್ದೆಯಿಂದ ಭಟ್ಟಿ ಇಳಿಸಿದ, ಸೋದಾಹರಣ ದರ್ಪಣವೇ ಈ ಕಿರು ಪರಿಚಯ.

    ಕನ್ನಡ ಸಾಹಿತ್ಯ ಕ್ಷೇತ್ರದ ಉಪಯುಕ್ತತೆಯನ್ನು ಕಾದಿಡುವ ಇಂತಹ ಸುಪುಷ್ಟ ಪ್ರಯತ್ನಕ್ಕೆ, ಇಕ್ಕರ್ತರಿಗೂ ಧನ್ಯವಾದಗಳು!

  3. ಮಹೇಶ್ವರಿ ಯು

    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏🙏🙏

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter