ಅಮರಾವತಿ ರಾಜ್ಯದಲ್ಲಿ ಉದಾತ್ತನೂ, ಸಾಧು ಸ್ವಭಾವದವನು ಆದ ರಾಜನು ಆಳುತ್ತಿದ್ದನು. ಪ್ರತಿನಿತ್ಯವೂ ಜನರಿಂದ ಬಂದ ಅಹವಾಲುಗಳನ್ನು ಸ್ವೀಕರಿಸಿ ಅವುಗಳಿಗೆ ತಕ್ಕ ಪರಿಹಾರವನ್ನು ನೀಡುತ್ತಿದ್ದನು. ಒಂದು ದಿನ ಮುದುಕನೊಬ್ಬನು ತನ್ನ ಇಬ್ಬರು ಕುರುಡು ಮಕ್ಕಳೊಂದಿಗೆ ರಾಜನ ಅರಮನೆಗೆ ಬಂದನು. ಮುದುಕನಿಗೆ ಹಣದ ಅವಶ್ಯಕತೆ ಇತ್ತು. ಹಣವನ್ನು ಸಾಲವಾಗಿ ಕೊಡಬೇಕೆಂದೂ, ಆರು ತಿಂಗಳಲ್ಲಿ ತಾನು ಹಿಂದಿರುಗಿ ಬರುವೆನೆಂದೂ ರಾಜನಲ್ಲಿ ಕೇಳಿಕೊಂಡನು. ಜೊತೆಗೆ ಬುದ್ದಿವಂತರೂ ಹಾಗೂ ಪ್ರತಿಭಾವಂತರೂ ಆದ ತನ್ನ ಇಬ್ಬರೂ ಕುರುಡು ಮಕ್ಕಳನ್ನು ಅರಮನೆಯಲ್ಲಿ ಬಿಟ್ಟು ಹೋಗುವುದಾಗಿ, ಅವರಿಂದ ಬಹಳಷ್ಟು ಸೇವೆ ಪಡೆಯಬಹುದು ಎಂದು ತಿಳಿಸುತ್ತಾನೆ.
ರಾಜನಿಗೆ ಅನುಮಾನ ಕಾಡುತ್ತದೆ. ರಾಜನ ಸಂದೇಹವನ್ನು ದೂರ ಮಾಡಲು ಮುದುಕ ತನ್ನ ಹಿರಿಯ ಮಗನಿಗೆ ಕುದುರೆಗಳ ಬಗ್ಗೆ ಒಳ್ಳೆಯ ತಿಳುವಳಿಕೆ ಇದೆ. ಕಿರಿಯ ಮಗ ಆಭರಣಗಳನ್ನು ಪರೀಕ್ಷಿಸುವುದರಲ್ಲಿ ಪರಿಣಿತನೆಂದು ಹೇಳಿದನು. ಕುರುಡರಿಂದ ಅದು ಹೇಗೆ ಸಾಧ್ಯ ಎಂದು ರಾಜನು ಮತ್ತೆ ಮುದುಕನಿಗೆ ಪ್ರಶ್ನಿಸುತ್ತಾನೆ. ಆಗ ಮುದುಕ ” ಪ್ರಭು, ಇವರು ಸ್ಪರ್ಶ ಮತ್ತು ವಾಸನೆಗಳಿಂದ ತೀರ್ಮಾನಿಸುತ್ತಾರೆ, ಅವರಿಂದ ಏನಾದರೂ ತಪ್ಪು ತೀರ್ಮಾನಗಳಾದರೆ , ಅವರ ತಲೆಯನ್ನೇ ಕತ್ತರಿಸಿ, ನಾನು ಊರಿಂದ ಬಂದ ಮೇಲೆ ನನಗೂ ಶಿಕ್ಷೆ ಕೊಡಿ”ಎಂದನು. ಅದರಂತೆ ರಾಜನು ಒಪ್ಪಿಕೊಂಡನು ಅವನಿಗೆ ಬೇಕಾದ ಹಣ ಸಹಾಯವನ್ನು ಮಾಡಿ ಕಳುಹಿಸಿದನು.
ದೇವರು ಒಂದನ್ನು ಕಿತ್ತುಕೊಂಡರೆ ಇನ್ನೊಂದನ್ನು ಕೊಟ್ಟೇ ಕೊಡುತ್ತಾನೆ. ಅದಕ್ಕೆ ಪೂರಕವಾಗಿ ಘನವಾದದನ್ನೇ ಕೊಡುತ್ತಾನೆನ್ನುವ ಹಿರಿಯರ ಮಾತು ದಿಟವೆಸುತ್ತದೆ. ಆ ದೇವರು ಎಂಥ ಕೃಪಾಶಾಲಿ! ಪ್ರತಿಯೊಬ್ಬರನು ಸಲುಹುವ ಜಗತ್ಪಿತ ಅವನು. ರಾಜನ ಸೇವೆಗೆಂದು ಕುರುಡ ಸಹೋದರರು ಅರಮನೆಯಲ್ಲಿ ನಿಯುಕ್ತರಾಗುತ್ತಾರೆ . ಒಂದು ದಿನ ಒಬ್ಬ ಕುದುರೆ ವ್ಯಾಪಾರಿ ರಾಜರ ಬಳಿಗೆ ಬಂದು ದಷ್ಟಪುಷ್ಟವಾದ ಕುದುರೆಯನ್ನು ತಂದು ಅದು ಒಳ್ಳೆಯ ತಳಿಯ ಕುದುರೆ ಅತ್ಯಂತ ವೇಗವಾಗಿ ಓಡುವುದು ಎಂದು ಹೇಳುತ್ತಾನೆ . ರಾಜನಿಗೆ ಆ ಕುದುರೆಯವನ್ನು ಕೊಳ್ಳಲು ಮನಸ್ಸು ಆಗುತ್ತದೆ. ಕುರುಡನನ್ನು ಪರೀಕ್ಷಿಸಲು ಕೇಳುತ್ತಾನೆ .ಕುದುರೆಯ ತಜ್ಞನಾಗಿದ್ದ ಹಿರಿಯ ಸಹೋದರನು ವ್ಯಾಪಾರಿಯೂ ತಂದಿದ್ದ ಕುದುರೆಯನ್ನು ತರಿಸಿ ,ನಿಲ್ಲಿಸಿ ಪರೀಕ್ಷಿಸುತ್ತಾನೆ. ವ್ಯಾಪಾರಿಯು ” ಕುರುಡನೊಬ್ಬನು ಕುದುರೆಯ ಬಗ್ಗೆ ಹೇಳುವುದುಂಟೆ! “ಎಂದು ಅಪಹಾಸ್ಯ ಮಾಡುತ್ತಾನೆ .
ಕುರುಡನು ಒಮ್ಮೆ ಕುದುರೆಯನ್ನು ಮುಟ್ಟಿ ಅದರ ಕಾಲುಗಳನ್ನು ತಡವಿ ವಾಸನೆಯನ್ನು ನೋಡುತ್ತಾನೆ .ಕುರುಡನು “ಪ್ರಭು, ಈ ಕುದುರೆಯನ್ನು ಕೊಳ್ಳಬೇಡಿ . ನೀವು ಇದರ ಸವಾರಿ ಮಾಡಲಾರಿರಿ” ಎಂದು ತೀರ್ಪು ಹೇಳುತ್ತಾನೆ. ರಾಜನು ಒಬ್ಬ ಸವಾರನನ್ನು ಕರೆಸಿ ವ್ಯಾಪಾರಿ ತಂದಿದ್ದ ಕುದುರೆಯನ್ನು ಏರುವಂತೆ ಆದೇಶಿಸುತ್ತಾನೆ. ಕುದುರೆ ಅವನನ್ನು ದೂರಕ್ಕೆ ಎಸೆದು ಬಿಡುತ್ತದೆ. ಹೀಗೆ ಇನ್ನೊಬ್ಬ ಕುರುಡನ ಸಾಮರ್ಥ್ಯವು ಆಭರಣಗಳ ಸರಿಯಾದ ಪರೀಕ್ಷೆಯಿಂದ ಸಾಬೀತಾಗುತ್ತದೆ. ಇಬ್ಬರೂ ಕುರುಡ ಸಹೋದರರು ರಾಜನನ್ನು ಆಪತ್ತಿನಿಂದ ಪಾರು ಮಾಡುತ್ತಾರೆ. ರಾಜನ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುತ್ತಾರೆ.
ಹುಟ್ಟಿನಿಂದಲೋ ಅಥವಾ ಜೀವನದಲ್ಲಿ ಸಂಭವಿಸಿದ ಅವಘಡಗಳಿಂದಲೋ ಮನುಷ್ಯನ ಸಾಮಾನ್ಯ ದೈಹಿಕ ಅಥವಾ ಮಾನಸಿಕ ಕಾರ್ಯಗಳು ದುರ್ಬಲಗೊಂಡಿರುವವರನ್ನು ನಮ್ಮ ಸುತ್ತಮುತ್ತ ಕಾಣುತ್ತೇವೆ . ಒಬ್ಬ ವ್ಯಕ್ತಿಯ ಶಾರೀರಿಕ ನಿರ್ವಹಣೆಯ ಮೇಲಿರುವ ಮಿತಿಯೂ ಇದಾಗಿದೆ. ಇಂಥವರನ್ನು ವಿಶೇಷ ಚೇತನರು ಎನ್ನುತ್ತಾರೆ .ಈ ವಿಶೇಷ ಚೇತನರಿಗೆ ವಿಶೇಷವಾದ ಸಾಮರ್ಥ್ಯಗಳು ಇದ್ದುದ್ದನ್ನು ನಾವು ಕಂಡಿದ್ದೇವೆ.ಇದು ವಿಸ್ಮಯವಾದರೂ ಸತ್ಯವೆನಿಸುವಂಥದ್ದು. ವಿಶೇಷ ಚೇತನರು ಭಗವಂತನಿಗೆ ಆಪ್ತರಾಗಿಬಿಡುತ್ತಾರೆ. ಧಾರ್ಮಿಕ, ನೈತಿಕ, ಚಾರಿತ್ರಿಕ ಬಲಗಳಿಂದ ಕೂಡಿದಾಗ ಅವರ ಮನೋಬಲವೂ ಹೆಚ್ಚಾಗುತ್ತದೆ. ಆಗ ಸಾಧನೆಯ ಶಿಖರವನ್ನು ಮುಟ್ಟಬಹುದು. ಇವರಲ್ಲಿ ನಿಯಂತ್ರಿಸಿಕೊಳ್ಳುವ ಶಕ್ತಿ ಸಾಧ್ಯವಾಗುತ್ತದೆ. ಆಗ ಪ್ರಪಂಚದಲ್ಲಿ ಬದುಕನ್ನು ಸಾಗಿಸಲು ಸಮರ್ಥರಾಗಿ ಬೆಳೆಯುತ್ತಾರೆ. ಪಂಡಿತ್ ಪುಟ್ಟರಾಜ ಗವಾಯಿ, ಅರುಣಿಮ ಸಿನ್ಹಾ , ಮಾಲತಿ ಹೊಳ್ಳ, ,ಸಾಯಿ ಕೌಸ್ತವ್ ಇನ್ನೂ ಮುಂತಾದವರು ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದ್ದಾರೆ.