ಹಿಂದಿನ ಕಾಲದಲ್ಲಿ ಶಕ್ತಿವಂತರು ದುರ್ಬಲರಿಗೆ ತೊಂದರೆ ಕೊಡುವುದನ್ನು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಅಧಿಕಾರಲ್ಲಿರುವ ಕೆಲವರು ಮತ್ತು ರಾಜರು ಸುಂದರ ಸ್ತ್ರೀಯರನ್ನು , ಬಡವರನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ರಾಕ್ಷಸರು ಸಾಮಾನ್ಯ ಜನರಿಗೆ, ಋಷಿ ಮುನಿಗಳಿಗೆ, ಹೆಣ್ಣುಮಕ್ಕಳಿಗೆ ಪೀಡಿಸಿರುವುದು ಪುರಾಣಗಳಿಂದ, ಐತಿಹಾಸಿಕ ಕಥೆಗಳಿಂದ ಗೊತ್ತಾಗುತ್ತದೆ.
ಈಗ ಪರಪೀಡನೆ ಎನ್ನುವುದು ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಪೀಡನೆ ತಾಂಡವ ಮಾಡುತ್ತಿದೆ. ಫೇಸ್ಬುಕ್, ಮೆಸೆಂಜರ್ ಮುಂತಾದವುಗಳಲ್ಲಿ ಸುಮ್ಮನೆ ಹಾಯ್ ಬೇಬಿ, ಹೌ ಆರ್ ಯು ಸ್ವೀಟಿ , ಅಂತೆಲ್ಲ ಮೆಸೆಜ್ ಗಳನ್ನು ಹಾಕುವುದು. ಮಧ್ಯರಾತ್ರಿ ಅರ್ಥವಿಲ್ಲದ ಚಾಟ್ ಮಾಡುವುದು. ತುಂಡು ಬಟ್ಟೆಯುಟ್ಟ ಯುವತಿಯರ ಪಟಗಳನ್ನು ಕಳಿಸುವುದು. ಇವೆಲ್ಲ ಕಳವಳ ಪಡುವಂಥ ಸಂಗತಿಗಳು.
ಕೆಲವರು ಇಂತಹ ಪ್ರಕರಣಗಳಿಂದ ಆತಂಕಗೊಂಡು ತಮ್ಮ ಫೇಸ್ಬುಕ್ ಖಾತೆಯಿಂದ ಹೊರಬಂದಿರುವ ಸಂದರ್ಭಗಳಿವೆ.
ಮೊದಮೊದಲು ಸೌಮ್ಯ ಮಾತುಗಳನ್ನಾಡಿ ( ಚಾಟ್) ನಿಧಾನವಾಗಿ ಸ್ನೇಹ ಬೆಳಸಿ ಮೋಸಮಾಡುತ್ತಾರೆ. ನಮ್ಮ ಯುವಕರು , ಮಧ್ಯವಯಸ್ಕರು ಇದಕ್ಕೆ ಬಲಿಯಾಗುತ್ತಾರೆ. ಮುಂದೆ ಅನಾಹುತಗಳಿಗೆ ಕಾರಣವಾಗುವುದು. ಇನ್ನೊಬ್ಬರಿಗೆ ಭಯ ಪಡಿಸಿದರೆ, ನೋಯಿಸಿದರೆ ,ಪೀಡಿಸಿದರೆ ಸಂತೋಷ ಪಡುವ ಜನರಿದ್ದಾರೆ! ಯಾಕೆ ಇಂತಹ ಮನಸ್ಥಿತಿ ಬೆಳೆಯುತ್ತಿದೆ ? ಇದರ ಕಾರಣಗಳೇನು? ಎನ್ನುವುದರ ಮೂಲ ಹುಡುಕಬೇಕಾದ ಅಗತ್ಯವಿದೆ.
ಪುರುಷನಾಗಲಿ ಅಥವಾ ಸ್ತ್ರೀಯಾಗಲಿ ಅವರಲ್ಲಿ ಸತ್ವ ಗುಣ ಅಂದರೆ ಸಾತ್ವಿಕತೆ ಹೆಚ್ಚಾದಾಗ ಅವರು ಧಾರ್ಮಿಕರು, ಕುಟುಂಬವತ್ಸಲರು, ಹೆಂಡತಿ ಮಕ್ಕಳಿಗೆ ಬೇಕಾದವರು ಆಗುತ್ತಾರೆ . ತಮೋಗುಣ ಹೆಚ್ಚಾದಾಗ ಅವರು ಅಧಾರ್ಮಿಕರು ಹಾಗೂ ಕುಟುಂಬ ದ್ವೇಷಿಗಳು ಆಗುತ್ತಾರೆ. ಇಂತಹ ವರ್ಗದ ಕೆಲಜನ ಪರರನ್ನು ಪೀಡಿಸುವ ಕೆಲಸದಲ್ಲಿ ತೊಡಗುತ್ತಾರೆ. ಕಿಶೋರಾವಸ್ಥೆಯಲ್ಲಿರುವ ಮಕ್ಕಳು , ಯುವಕರು ಸಹ ಬೇರೆಯವರಿಗೆ ತೊಂದರೆಯಾಗುತ್ತದೆಂಬುದನ್ನು ಮರೆಯುತ್ತಾರೆ.
ಇಂಥವರಿಗೆ ಸರಿಯಾದ ಮಾರ್ಗದರ್ಶನ ಬೇಕಾಗುತ್ತದೆ. ಬಹುಶಃ ಇದಕ್ಕೆ ನಮ್ಮ ಭಾರತೀಯ ಸಂಸ್ಕಾರಗಳು ಸರಿಯಾದ ಉತ್ತರವಾಗಬಹುದು. ಉದಾಹರಣೆಗಾಗಿ ಗುರುಕುಲದ ವಿದ್ಯಾಭ್ಯಾಸ, ಉಪನಯನ ಹಾಗೂ ವಿವಾಹ ಸಂಸ್ಕಾರಗಳು. ಪೋಷಕರ ಆಚರಣೆಗಳು,ಭಾವನೆಗಳು ಸಾಕಷ್ಟು ಪರಿಣಾಮ ಬೀರುತ್ತವೆ. ಕೌಟುಂಬಿಕ ಕಲಹಗಳು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಇತ್ತೀಚಿಗೆ ನಾವು ಆಧುನಿಕತೆಯ ಆಕರ್ಷಣೆಗೆ ಬಲಿಯಾಗಿ ನಮ್ಮ ಸಂಸ್ಕಾರಗಳನ್ನು ಯಥಾವತ್ತಾಗಿ , ಅರ್ಥಪೂರ್ಣವಾಗಿ ಪಾಲಿಸುತ್ತಿಲ್ಲ. ಕೇವಲ ಆಡಂಬರವಷ್ಟೇ ನಮ್ಮ ಧ್ಯೇಯವಾಗುತ್ತಿದೆ. ಆದ್ದರಿಂದಲೇ ಯುವಕರು ಇಂಥ ಕೆಲಸಗಳಲ್ಲಿ ತೊಡಗುತ್ತಿರಬಹುದು. ಮನುಷ್ಯನಿಂದ ಕೆಲವೊಮ್ಮೆ ಸ್ವಾರ್ಥ ಅಥವಾ ಅಲ್ಪಸುಖಕ್ಕಾಗಿ ಮತ್ತೊಬ್ಬರ ಜೀವನದಲ್ಲಿ ಹುಳಿ ಹಿಂಡುವ ಕೆಲಸವಾಗುತ್ತಿದೆ. ವಿಕೃತ ಮನಸ್ಸು ಸೃಷ್ಟಿಯಾಗುವುದನ್ನು ತಡೆಯುವ ಪ್ರಯತ್ನ ಮಾಡೋಣವೆ!