(ಅನುಪಮಾ ರಾಘವೇಂದ್ರ ಅವರ ‘ಹತ್ತಗುಳು’ )
ಕನ್ನಡದಲ್ಲಿ ಸಣ್ಣಕತೆಯು ಅತ್ಯಂತ ಹುಲುಸಾಗಿ ಬೆಳೆದ ಸಾಹಿತ್ಯ ಪ್ರಕಾರವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಅದರ ಬೆಳವಣಿಗೆಯನ್ನು ಸ್ಥೂಲವಾಗಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಯುಗಗಳೆಂದು ಗುರುತಿಸಲಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಈ ಹಂತಗಳನ್ನು ಕಾಲಕ್ರಮದಲ್ಲಿ ಒಂದು ಮುಗಿದ ನಂತರ ಇನ್ನೊಂದು ಆರಂಭವಾಯಿತು ಎನ್ನುತ್ತಿದ್ದರೂ ಅವುಗಳೆಲ್ಲ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವುದನ್ನು ಅಲ್ಲಗೆಳೆಯುವಂತಿಲ್ಲ. ಈಗ ಬಂಡಾಯ ಯುಗ ಮುಗಿದರೂ ಅದರ ಸೂಕ್ಷ್ಮ ದನಿಯನ್ನು ಹೊಂದಿದ ಅನೇಕ ಕತೆಗಳು ಬರುತ್ತಿವೆ. ನವೋದಯ ಮಾರ್ಗದ ಕತೆಗಳೂ ಬೆಳಕು ಕಾಣುತ್ತಿವೆ.
ಶ್ರೀಮತಿ ಅನುಪಮಾ ರಾಘವೇಂದ್ರ
ಶ್ರೀಮತಿ ಅನುಪಮಾ ರಾಘವೇಂದ್ರ ಅವರ ‘ಹತ್ತಗುಳು’ ಎಂಬ ಹವಿಗನ್ನಡ ಕಥಾ ಸಂಕಲನವು ನವೋದಯ ಮತ್ತು ಬಂಡಾಯದ ಸತ್ವವನ್ನು ಹೀರಿಕೊಂಡು ರೂಪು ತಾಳಿದೆ. ಕಷ್ಟ ಕಾರ್ಪಣ್ಯಗಳಲ್ಲಿ ಮಿಂದು, ಕ್ರೌರ್ಯ ತಿರಸ್ಕಾರಗಳಲ್ಲಿ ನೊಂದು, ಬದುಕಿನ ಬೇಗೆಯಲ್ಲಿ ಅನ್ನದ ಅಗುಳುಗಳಂತೆ ಬೆಂದು ಬಾಳಿದವರ ಬದುಕಿನ ಚಿತ್ರಣವು ಹತ್ತು ಕತೆಗಳ ರೂಪದಲ್ಲಿ ಮೂಡಿ ಬಂದಿದೆ. ಬೆಂದ ಅಗುಳುಗಳಂತೆ ಪಕ್ವವಾದ ರಚನೆಗಳು ಎಂಬ ಅರ್ಥದಲ್ಲೂ ಇಲ್ಲಿನ ಕತೆಗಳನ್ನು ನೋಡಬಹುದು.
ಸಿದ್ಧ ಮಾನದಂಡವಿಲ್ಲದೆ ಆರಂಭಗೊಳ್ಳುವ ಇಲ್ಲಿನ ಕತೆಗಳಲ್ಲಿ ಆತ್ಮಶೋಧನೆ, ದ್ವಂದ್ವ, ಮತ್ತು ಪ್ರತಿಮೆ ಸಂಕೇತಗಳಿಲ್ಲ. ಹವಿಗನ್ನಡದ ಆಡುಮಾತಿನ ಲಯವಿದೆ. ಆಕರ್ಷಕ ಆರಂಭ ಮತ್ತು ಅನಿರೀಕ್ಷಿತ ಮುಕ್ತಾಯಗಳಿಲ್ಲ. ಆಪ್ತವೆನಿಸುವ ನಿರೂಪಣೆಯಿದೆ. ಸಾಂಪ್ರದಾಯಿಕ ಹವ್ಯಕ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬದುಕುತ್ತಿರುವ ಹಳ್ಳಿಯ ಜನರ ಸ್ಥಿತಿಗತಿಗಳನ್ನು ಚಿತ್ರಿಸುವ ಕತೆಗಳಲ್ಲಿ ಸುಧಾರಣೆಯ ಆವೇಶವಾಗಲೀ ಸಮಾಜದ ಅಂಧಶ್ರದ್ಧೆಗಳ ಬಗ್ಗೆ ಆಕ್ರೋಶವಾಗಲೀ ಇಲ್ಲ. ಮಧ್ಯಂತರದಲ್ಲೇ ಆರಂಭಗೊಂಡು ಹಿನ್ನೋಟ ತಂತ್ರದ ಮೂಲಕ ವಿಷಯಗಳನ್ನು ನಿರೂಪಿಸುತ್ತಾ ಒಂದು ಕಾಲದ ಜೀವನ ಕ್ರಮವನ್ನು ಹಿಡಿದಿಡುವ ಕತೆಗಳು ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ವಿಶ್ಲೇಷಿಸುತ್ತವೆ. ಗಂಡು ಹೆಣ್ಣೆಂಬ ಭೇದವಿಲ್ಲದೆ ತಮಗೆ ಒದಗಿದ ಕಷ್ಟಕರ ಪರಿಸ್ಥಿತಿಯ ನಡುವೆ ಸಿಕ್ಕು ಅಸಹಾಯಕರಾದವರು ಸ್ವೀಕರಿಸುವ ದಿಟ್ಟ ನಿಲುವು, ಸಮಸ್ಯೆಗಳನ್ನು ಎದುರಿಸುವ ರೀತಿ ಮುಖ್ಯವಾಗುತ್ತದೆ.
‘ಶರಣರ ಬದುಕು ಮರಣಲ್ಲಿ ನೋಡು’ (ಶರಣರ ಬದುಕನ್ನು ಮರಣದಲ್ಲಿ ನೋಡು) ಎಂಬ ಕತೆಯು ಸ್ತ್ರೀ ಕೇಂದ್ರಿತವಾಗಿದ್ದರೂ ಕೌಟುಂಬಿಕ ಚೌಕಟ್ಟಿಗೆ ಸೀಮಿತವಾಗಿಲ್ಲ. ಹೆಣ್ಣಿನ ಯಾತನೆಯೇ ಇಲ್ಲಿನ ವಸ್ತುವಾದರೂ ಅದನ್ನು ವಿವರಿಸುವ ಕ್ರಮದಲ್ಲಿ ಹೊಸತನವಿದೆ. ಕತೆಯ ನಾಯಕಿ ಪಾತಜ್ಜಿಯು ತನ್ನವರಿಂದಲೇ ಶೋಷಣೆಗೊಳಗಾಗುತ್ತಾಳೆ. ಗಂಡನ ಮನೆಯವರು ಆಸ್ತಿಯನ್ನು ಪಾಲು ಮಾಡುವಾಗ ಮೋಸವನ್ನು ಮಾಡಿದರೆ, ಗಂಡನಿಗೆ ಆಶ್ರಯವನ್ನು ಕೊಟ್ಟ ಸೋದರ ಮಾವನು ಯಾವುದೋ ವಿಷಗಳಿಗೆಯಲ್ಲಿ ಅವನ ಮೇಲೆ ಕೋಪಿಸಿಕೊಂಡು ಪರಸ್ಪರ ದೂರವಾಗಲು ಕಾರಣರಾಗುತ್ತಾನೆ. ಇದರಿಂದ ಪಾತಜ್ಜಿ ಬೀದಿಪಾಲಾದರೂ ಬದುಕುವ ಛಲವನ್ನು ಬಿಡುವುದಿಲ್ಲ. ನೋವಿಗೆ ಕಾರಣರಾದವರನ್ನು ದೂರುವುದಿಲ್ಲ. ಆಕೆಯು ಬಲಿಪಶು ಎನ್ನುವುದು ನಿಜವಾದರೂ ಕ್ರಿಯಾಹೀನಳಲ್ಲ. ಬದುಕಿನ ಬಗ್ಗೆ ಅಪಸ್ವರವನ್ನು ಎತ್ತದೆ, ತನ್ನ ಅನುಭವದ ಆಧಾರದಿಂದ ಕಂಡುಕೊಂಡ ಮೌಲ್ಯಗಳನ್ನು ಅಡಿಗಲ್ಲಾಗಿಟ್ಟುಕೊಂಡು ಗೌರವಯುತವಾಗಿ ಬಾಳುತ್ತಾಳೆ. ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಗೆ ಬಂದಾಗ ಯಾರನ್ನೂ ಒಕ್ಕಲೆಬ್ಬಿಸದೆ ಮಿಕ್ಕುಳಿದ ಜಾಗದಲ್ಲಿ ತೆಂಗು, ಅಡಿಕೆ, ಗೇರುಬೀಜದ ಕೃಷಿಯನ್ನು ಮಾಡಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾಳೆ. ತಾನು ಕಷ್ಟದಲ್ಲಿದ್ದರೂ ಜಾತಿಬೇಧವೆಣಿಸದೆ ಅಕ್ಕಪಕ್ಕದವರಿಗೆ ಸಹಾಯವನ್ನು ಮಾಡಿ ಬದುಕಿದವಳ ಹಿರಿಮೆಯು ಆಕೆಯ ವೈಕುಂಠ ಸಮಾರಾಧನೆಗೆ ಉದಾರವಾಗಿ ಸಹಾಯ ಮಾಡಲು ಬರುವವರ ಸಹಕಾರಿ ಮನೋಭಾವದ ಮೂಲಕ ವ್ಯಕ್ತವಾಗುತ್ತದೆ.
‘ಎಲ್ಲೋರಿಂಗೂ ಒಂದು ಕಾಲ ಬಕ್ಕು’ (ಎಲ್ಲರಿಗೂ ಒಂದು ಕಾಲ ಬರುತ್ತದೆ) ಎಂಬ ಕತೆಯ ವಾಣಿಯು ಪಾತಜ್ಜಿಯ ಬವಣೆಯ ವಿಸ್ತೃತ ರೂಪವಾಗಿ ಕಾಣಿಸಿಕೊಳ್ಳುತ್ತಾಳೆ. ಅನಾಥಳಾಗಿದ್ದ ಆಕೆಯನ್ನು ವಿಷ್ಣು ಮದುವೆಯಾದ ಮೇಲೆ ಅವಳ ಬದುಕಿನ ಗತಿಯು ಬದಲಾಗುತ್ತದೆ. ಬಾವನವರಾದ ಗೋವಿಂದನಿಂದ ತಿರಸ್ಕಾರಕ್ಕೊಳಗಾಗಿ ಪಡಬಾರದ ಪಾಡು ಪಡುತ್ತಾಳೆ. ಮೈಮುರಿಯುವಂಥ ದುಡಿತ. ಹೊಟ್ಟೆ ತುಂಬ ಅನ್ನವಿಲ್ಲ. ಹಸುಳೆಗಳು ಹಾಲಿಗಾಗಿ ಅತ್ತರೂ ತಪ್ಪು. ಇಲ್ಲಿದ್ದರೆ ಉಳಿಗಾವಿಲ್ಲ ಎಂದು ಪುಟ್ಟ ಮಕ್ಕಳನ್ನು ಎತ್ತಿಕೊಂಡು ರಾತ್ರಿ ಊರು ಬಿಟ್ಟು ಹೋದವಳು ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಸಾಕುತ್ತಾಳೆ. ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವಷ್ಟು ಸಮರ್ಥರನ್ನಾಗಿಸುತ್ತಾಳೆ. ಆ ಪೈಕಿ ವೆಂಕಟರಮಣನ ಮಗ ಸತ್ಯಶಂಕರನು ಕಷ್ಟಪಟ್ಟು ಕಲಿತು ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ತನ್ನ ಅಜ್ಜಿಯಾದ ವಾಣಿಯನ್ನು ಓಡಿಸಿದ ಗೋವಿಂದನ ಊರಿಗೆ ಜಿಲ್ಲಾಧಿಕಾರಿಯಾಗಿ ಬರುವ ಕ್ರಿಯೆಯು ಕೇವಲ ಸುಖಾಂತಕ್ಕಾಗಿ ಮಾಡಿಕೊಂಡಿರುವ ತಂತ್ರವಾಗಿರದೆ ಮಾನವ ಸಮುದಾಯದ ಅಸ್ತಿತ್ವದ ಆಧಾರವಾದ ಪ್ರೀತಿ ನಂಬಗೆಗಳ ಕುರುಹುಗಳ ಪ್ರತೀಕವಾಗಿದೆ. ಹಿಂದೆ ವಾಣಿ ಮರಣಶಯ್ಯೆಯಲ್ಲಿದ್ದಾಗ ಅನಾಥರಾಗಲಿರುವ ತನ್ನ ಮಕ್ಕಳನ್ನು ಕರೆದು “ಒಂದಾರಿ ತರವಾಡಿಂಗೆ ಹೋಗಿ ದೇವಿಯ ಸೇವೆ ಮಾಡ್ಸಿ ಅಜ್ಜನ ಆಶೀರ್ವಾದ ಬೇಡ್ಯೊಂಡು ಬನ್ನಿ” (ಒಂದು ಸಾರಿ ತರವಾಡಿಗೆ ಹೋಗಿ ದೇವಿಯ ಸೇವೆ ಮಾಡಿಸಿ ಅಜ್ಜನ ಆಶೀರ್ವಾದ ಬೇಡಿಕೊಂಡು ಬನ್ನಿ) ಎನ್ನುವ ಹೊತ್ತಿಗೆ ಮಕ್ಕಳ ಅಜ್ಜನಾದ ಶಂಕರಣ್ಣನು ತೀರಿಕೊಂಡು ಅಧಿಕಾರವೆಲ್ಲವೂ ಗೋವಿಂದನ ಕೈಯಲ್ಲಿರುತ್ತದೆ. ಮನೆಗೆ ಬಂದ ಮಕ್ಕಳನ್ನು ಆತನು ಅವಾಚ್ಯವಾಗಿ ಬೈದು ಕಳುಹಿಸುತ್ತಾನೆ. ಅಧಿಕಾರದ ಅಮಲು ತಲೆಗೇರಿದಾಗ ಮಾನವೀಯತೆಯು ಸ್ವಾರ್ಥ ದುರಾಸೆಗಳ ಹರಿವಿನಲ್ಲಿ ಕೊಚ್ಚಿ ಹೋಗುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯೆನಿಸಿದ ಗೋವಿಂದನು ಸತ್ಯಶಂಕರನ ಕಛೇರಿಗೆ ಬಂದು ಅಳುತ್ತಾ ತನ್ನ ಅಪರಾಧಕ್ಕೆ ಕ್ಷಮೆಯನ್ನು ಯಾಚಿಸಿ, ಚೋಮನ ಮಗಳಿಗೆ ಬಸಿರು ಮಾಡಿದ ಮೊಕದ್ದಮೆಯಲ್ಲಿ ಸಿಕ್ಕಿ ಹಾಕಿಕೊಂಡ ತನ್ನ ಮೊಮ್ಮಗ ಶ್ರೀಶನನ್ನು ಪಾರು ಮಾಡಬೇಕೆಂದು ಬೇಡಿಕೊಳ್ಳುತ್ತಾನೆ. ‘ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಒಂದೇ. ಹಳೆಯ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ತನಿಖೆ ನಡೆಸುವುದಿಲ್ಲ. ಏನಿದ್ದರೂ ಸತ್ಯಕ್ಕೆ ಜಯ’ ಎಂದುಕೊಂಡು ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಿದಾಗ ನಿಜವು ಬಯಲಾಗುತ್ತದೆ. ಶ್ರೀಶನ ಮೇಲೆ ಶೀಲಹರಣದ ಆರೋಪ ಹೊರಿಸಿದ ಹೆಂಗಸಿಗೆ ಅನೇಕ ಮಂದಿಗಳೊಡನೆ ಸಂಬಂಧವಿತ್ತು. ಅವರೊಂದಿಗೆ ಕಳೆದ ಕ್ಷಣಗಳನ್ನು ಮೊಬೈಲಿನಲ್ಲಿ ದಾಖಲಿಸಿ ಅವರಿಂದ ಹಣ ಕೀಳುವುದೇ ಅವಳ ಉದ್ಯೋಗವಾಗಿತ್ತು. ಅವಳ ಬಲೆಗೆ ಬಿದ್ದ ಶ್ರೀಶನು ದೊಡ್ಡ ಮನೆತನದವನಾಗಿರುವುದರಿಂದ ಆಕೆಯು ತಾನು ಬಸಿರಾಗಿರುವೆನೆಂದೂ ತನ್ನನ್ನು ಮದುವೆಯಾಗದಿದ್ದರೆ ಮರ್ಯಾದೆ ತೆಗೆಯುತ್ತೇನೆಂದು ಬೆದರಿಕೆ ಒಡ್ಡಿದ ವಿಚಾರವು ಸಾಬೀತಾಗಿ ಶ್ರೀಶನಿಗೆ ಬಿಡುಗಡೆಯಾಗುತ್ತದೆ. ಸಂಬಂಧಿಕರು ಎರಡು ಬಗೆದರೂ ಸಹಜ ಭಾವನೆಗಳಾದ ಸಿಟ್ಟು ದ್ವೇಷಗಳನ್ನು ಮೀರಿ ಅವರನ್ನು ಕಾಪಾಡುವ ಸತ್ಯಶಂಕರನ ಹೃದಯವಂತಿಕೆಯೇ ಕತೆಯ ತಿರುಳು. ನಿಷ್ಪಾಪಿ ಕುಟುಂಬವೊಂದರ ದುರಂತಕ್ಕೆ ಕಾರಣನಾಗುವ ಗೋವಿಂದನ ಕ್ರೌರ್ಯವು ವೈಯಕ್ತಿಕವಾಗಿದೆಯೇ ಹೊರತು ಸಾಮಾಜಿಕ ವ್ಯವಸ್ಥೆಗೆ ಸಂಬಂಧಪಟ್ಟಿಲ್ಲ. ಚೋಮನ ಮಗಳ ವಿರುದ್ದ ನಡೆಯುವ ಕಾನೂನು ಹೋರಾಟದಲ್ಲಿ ಶ್ರೀಶನು ಪಡೆಯುವ ಗೆಲುವಿಗೆ ಸಾಮಾಜಿಕ ದೃಷ್ಟಿಯಿಂದ ಮಹತ್ವವಿದೆ. ಅವರಿಬ್ಬರ ಸಂಬಂಧದಲ್ಲಿ ಕಾಣಿಸಿಕೊಳ್ಳುವ ವ್ಯಂಗ್ಯವೂ ಪರಿಣಾಮಕಾರಿಯಾಗಿದೆ. ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ ಕಲ್ಪಿಸಿ ಅಭ್ಯಾಸವಾದ ಹೊತ್ತಿನಲ್ಲಿ ಹೆಣ್ಣು ತನ್ನ ಪರವಾಗಿರುವ ಕಾನೂನನ್ನು ತನ್ನ ಹೆಣ್ತನ ಮತ್ತು ಜಾತಿಯ ಬಲವನ್ನು ಅಸ್ತ್ರವನ್ನಾಗಿ ಉಪಯೋಗಿಸಿಕೊಂಡು ದುರ್ಬಳಕೆ ಮಾಡಬಲ್ಲಳು ಎಂಬುದನ್ನು ಧ್ವನಿಸುವ ಮೂಲಕ ಲೇಖಕಿಯು ವಸ್ತುಸ್ಥಿತಿಯ ಎರಡೂ ಮಗ್ಗುಲಿಗೆ ಕಣ್ಣು ಹಾಯಿಸಿದ್ದಾರೆ. ಬದುಕು ಅನುಭವವೇ ಹೊರತು ಸಿದ್ಧಾಂತವಲ್ಲ ಎಂದು ಸಾರುವ ಕತೆಗಳು ಔಪಚಾರಿಕ ಧೋರಣೆ, ವ್ಯವಸ್ಥೆಗಳನ್ನು ಬದಿಗೆ ಸರಿಸಿ ಬದುಕಿಗೆ ಕಣ್ಣಾಗುವ ಮೌಲ್ಯಗಳತ್ತ ತುಡಿಯುತ್ತವೆ. ಹಿಂದಿನ ತಲೆಮಾರಿನ ಬದುಕಿನ ಅಧ್ಯಯನದ ಮೂಲಕ ಶಾಶ್ವತವಾದ ಜೀವನ ಸೂತ್ರಗಳನ್ನು ಕಂಡುಕೊಂಡಿರುವ ಕತೆಗಳು ಸಂಪ್ರದಾಯ ನಿಷ್ಠ ಹವ್ಯಕ ಸಮಾಜವನ್ನು ಅತ್ಯಂತ ಕಾಳಜಿಯಿಂದ, ನಿಷ್ಠೆಯಿಂದ ಚಿತ್ರಿಸುತ್ತಾ ಅದರಲ್ಲಿನ ಒಳಿತನ್ನು ಸ್ವೀಕರಿಸುವುದರೊಂದಿಗೆ ಜಡತ್ವವನ್ನು ಪ್ರಶ್ನಿಸುತ್ತದೆ.
‘ವಜ್ರದ ತುಂಡಿನ ಚಿನ್ನದ ಚೌಕಟ್ಟಿನಲ್ಲಿ ಕೂರ್ಸಿದ ಹಾಂಗೆ’ (ವಜ್ರದ ತುಂಡನ್ನು ಚಿನ್ನದ ಚೌಕಟ್ಟಿನಲ್ಲಿ ಕೂರಿಸಿದಂತೆ) ಎಂಬ ಕತೆಯು ಗಂಡುಹೆಣ್ಣಿನ ಸಂಬಂಧಗಳಲ್ಲಿ ಉಂಟಾದ ಬದಲಾವಣೆಯನ್ನು ಚಿತ್ರಿಸುತ್ತದೆ. ವಿವೇಕನನ್ನು ಸ್ವಂತ ಅಣ್ಣನಂತೆ ಕಂಡರೂ ಊರವರಿಂದ ಕೆಟ್ಟ ಮಾತು ಕೇಳಿಕೊಂಡು ಹಗಲಿರುಳು ಯಾತನೆ ಪಡುವ ಮಯೂರಿಯಂಥ ಹುಡುಗಿಯನ್ನು ಅರ್ಥಮಾಡಿಕೊಳ್ಳುವವರೂ ಇದ್ದಾರೆ ಎಂಬಂತೆ ವೃಷಾಂಕನ ಪಾತ್ರವು ಮೂಡಿ ಬಂದಿರುವುದು ಕತೆಯ ದೃಷ್ಟಿಯಿಂದ ಆಶಾವಾದಿ ಬೆಳವಣಿಗೆಯಾಗಿದೆ. ಹೆಣ್ಣು ಗಂಡಿನ ಸಂಬಂಧಗಳು ಕಾಮದ ಆಧಾರದ ಮೇಲೆ ಮಾತ್ರ ನಿಂತಿವೆಯೇ? ಸಹೋದರತೆಯ ಭಾವನೆಯಿಂದ ಕಾಣಲು ಸಾಧ್ಯವಿಲ್ಲವೇ? ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತುವ ಕತೆಯು ತಿಳುವಳಿಕೆಯ ಆಧಾರದಲ್ಲಿ ಸಂಬಂಧವಿರಿಸುವ ಆಶಯವನ್ನು ಹೊಂದಿದೆ. ಗಂಡು ಹೆಣ್ಣಿನ ಸಂಬಂಧಗಳ ಬಗ್ಗೆ ಸಮಾಜ ಸಿನಿಕತನದ ಧೋರಣೆಯನ್ನು ಇಟ್ಟುಕೊಂಡಿರುವುದರಿಂದ ಸಂಬಂಧಗಳು ಬದಲಾದ ಸಾಮಾಜಿಕ ಸಂದರ್ಭದಲ್ಲೂ ಹೆಣ್ಣು ತನ್ನ ಸಂಬಂಧಗಳ ನೈಜತೆ, ಭದ್ರತೆಗಳ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕಾದ ಅಗತ್ಯವನ್ನು ಪ್ರತಿಪಾದಿಸುತ್ತದೆ.
‘ತಾಳ್ಮೆ’ಯು ಮನ ಪರಿವರ್ತನೆಯನ್ನು ಆಧರಿಸಿದ ಕತೆಯಾಗಿದೆ. ಮುಖ್ಯ ಪಾತ್ರವಾದ ಶಂಕರ ಮಾವನಲ್ಲಿ ದಕ್ಷತೆ, ಸಭ್ಯತೆ, ಸಾಮಥ್ರ್ಯ ಮುಂತಾದ ಒಳ್ಳೆಯ ಗುಣಗಳಿದ್ದರೂ ಸಾಂಪ್ರದಾಯಿಕರಾಗಿರುವುದರಿಂದ ಆಧುನಿಕ ದೃಷ್ಟಿಕೋನದಿಂದ ಯೋಚನೆಯನ್ನು ಮಾಡುವ ಶಕ್ತಿಯು ಕಡಿಮೆ. ಸೊಸೆಯ ನೃತ್ಯ ಕಲೆಯ ಮೇಲೆ ಅವನಿಗಿದ್ದ ಅನಾದರ, ಅನಾಸ್ಥೆ, ಆತಂಕಗಳು ಮಾಯವಾಗಿ ಕಲೆಗೆ ಗೌರವವನ್ನು ನೀಡುವ ಮೂಲಕ ತನ್ನ ಸಂಕುಚಿತ ಮನೋಭಾವವನ್ನು ಕಳೆದುಕೊಂಡು ಪ್ರೀತಿಪಾತ್ರ ಸೌಜನ್ಯಯುಕ್ತ ವ್ಯಕ್ತಿಯಾಗಿ ಮಾರ್ಪಟ್ಟರೂ ಪರಿವರ್ತನೆಯನ್ನು ತನಗೆ ತಾನೇ ಸಾಧಿಸುವ ಶಕ್ತಿಯಿಲ್ಲದಿರುವುದರಿಂದ ಬದಲಾವಣೆಯ ಅರಿವು ಆತನ ಸಂವೇದನೆಗೆ ಹೊರತಾಗಿದೆ. “ಇದು ಶುದ್ಧ ಅನ್ಯಾಯ. ನಿನ್ನ ಹಾಂಗಿಪ್ಪ ಕಲಾವಿದೆ ಮನೆಲೇ ಕೂದರೆ ಆ ಅಬ್ಬೆಗೆ ಅನ್ಯಾಯ ಮಾಡಿದ ಹಾಗೆ ಆವುತ್ತು. ಶಂಕರಾ ನೀನಾದರೂ ಹೇಳಲಾಗದಾ. ಈಗಲೂ ತಡ ಆಯಿದಿಲ್ಲೆ. ಇನ್ನಾದರೂ ಆಲೋಚನೆ ಮಾಡು” (ಇದು ಶುದ್ಧ ಅನ್ಯಾಯ. ನಿನ್ನ ಹಾಗಿರುವ ಕಲಾವಿದೆ ಮನೆಯಲ್ಲೇ ಕೂತರೆ ಆ ಅಮ್ಮನಿಗೆ ಅನ್ಯಾಯ ಮಾಡಿದ ಹಾಗೆ ಆಗುತ್ತದೆ. ಶಂಕರಾ ನೀನಾದರೂ ಹೇಳಬಾರದಾ. ಈಗಲೂ ತಡ ಆಗಿಲ್ಲ. ಇನ್ನಾದರೂ ಆಲೋಚನೆ ಮಾಡು) ಎಂದ ಅನಂತಣ್ಣನ ಮಾತುಗಳನ್ನು ಕೇಳಿದ ಮೇಲೆ ಶಂಕರನ ಹೃದಯದಲ್ಲಿ ಸಂಕುಚಿತ ಮನಸ್ಸಿನ ಶೂನ್ಯವನ್ನು ಮೀರಿದ ಬದಲಾವಣೆಯು ಕಾಣಿಸಿಕೊಳ್ಳುತ್ತದೆ. ಈ ಕತೆಯಲ್ಲಿ ಹೆಣ್ಣು ತನ್ನ ಅಸ್ಮಿತೆಯ ಅರಿವು, ಸಾಧನೆಗಳಲ್ಲಿ ಸಾಧಿಸಿದ ಪ್ರಗತಿ ಮತ್ತು ಕ್ರಿಯಾಶಕ್ತಿಯನ್ನು ರೂಢಿಸಿಕೊಂಡ ನಿದರ್ಶನಗಳಿವೆ. ಅವಳ ಸಾಮಾಜಿಕ ಪರಿಸರಗಳಲ್ಲಿ ನಡೆದ ಶಿಕ್ಷಣದ ಪ್ರಸಾರ, ಸಾಮಾಜಿಕ ಸಮಾನತೆಯ ಸ್ವೀಕಾರ ಮತ್ತು ಗಂಡಸಿನ ಪ್ರೋತ್ಸಾಹ ಈ ಬದಲಾವಣೆಯ ಹಿಂದಿನ ಪ್ರೇರಣೆಯಾಗಿದೆ. ತನ್ನ ಅಂತರಂಗದಲ್ಲಿ ನಡೆದ ಮಹತ್ವದ ಬದಲಾವಣೆಯಿಂದಾಗಿ ಅವಳು ತನ್ನ ವ್ಯಕ್ತಿತ್ವದ ವಿಕಾಸದೆಡೆಗೆ ಗಮನ ಕೊಡುವಂತಾಗಿದೆ. ಮೊದಲು ಮೂಕ ಸ್ವರೂಪವನ್ನು ಹೊಂದಿದ್ದ ಪ್ರತಿಕ್ರಿಯೆಯು ಕ್ರಮೇಣ ಕೃತಿಗಳ ಮೂಲಕ ಆಕಾರವನ್ನು ಪಡೆದಿರುವ ಸೂಚನೆ ಇದೆ. ಇದರಿಂದ ಅವಳ ಬದುಕು ದುರಂತವಾಗುವುದು ಕಡಿಮೆಯಾದರೂ ಅಸಹನೀಯವಾಗುವುದು ತಪ್ಪಿಲ್ಲ ಎಂಬುದಕ್ಕೆ ‘ಕಥೆಯಾಗದ್ದ ಕಥೆ’ (ಕಥೆಯಾಗದ ಕಥೆ) ಯಲ್ಲಿ ಉದಾಹರಣೆಗಳಿವೆ. ಹತ್ತನೇ ತರಗತಿಯಲ್ಲಿದ್ದಾಗ ಬಸುರಾದ ರೇಖಾ, ಐ. ಎ. ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರೂ ಶುಲ್ಕ ಪಾವತಿಸಲು ಹಣವಿಲ್ಲದೆ ಕಾರ್ಖಾನೆಯಲ್ಲಿ ದುಡಿಯುವ ಲಚ್ಚುಮಿಯ ಅಕ್ಕನ ಮಗಳು, ರಬ್ಬರ್ ಟ್ಯಾಪಿಂಗಿಗೆ ಬಂದವನ ಜೊತೆ ಓಡಿಹೋದ ಬಾಲಣ್ಣನ ಹೆಂಡತಿ, ವೃದ್ಧಾಶ್ರಮದಲ್ಲಿ ಕಾಲಕಳೆಯುವ ರಾಧಿಕಾಳ ಅತ್ತೆ, ಪ್ರೇಮ ಬಲಿತು ಮತ್ತೇರಿದ ಗೆಳೆಯನ ಇರಿತಕ್ಕೊಳಗಾಗಿ ತೀರಿಕೊಂಡ ಅಕ್ಷತಾ ಇವರೆಲ್ಲರೂ ಆಧುನಿಕ ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿರುವ ದುರಂತದ ರೂಪಗಳಾಗಿವೆ.
ಈ ಸಂಕಲನದಲ್ಲಿ ಲೇಖಕಿಯು ದೈನಂದಿನ ಬದುಕಿನಲ್ಲಿ ಘಟಿಸುವ ಅದೆಷ್ಟೋ ಸಂಗತಿಗಳನ್ನು ಕೇಳಿ ತಿಳಿದೋ, ಅವಲೋಕಿಸಿಯೋ ಕತೆಗಳ ಮೂಲಕ ಸಹಜವಾಗಿ ನಿರೂಪಿಸಿದ್ದಾರೆ. ಕಂಡು ಅನುಭವಿಸಿದ ಸಂಗತಿಗಳನ್ನು ಪ್ರಾಮಾಣಿಕವಾಗಿ ವಿವರಿಸಿದ್ದಾರೆ. ವಿವಿಧ ಜಾತಿ, ವಯಸ್ಸು, ಅಂತಸ್ತು, ಆಕೃತಿ, ಭಾವಸ್ಥಿತಿ ಮತ್ತು ಸಂವೇದನೆಗಳಲ್ಲಿ ಕಾಣಿಸಿಕೊಳ್ಳುವ ಹೆಣ್ಣು ಇವರ ಕತೆಗಳ ಕೇಂದ್ರ. ಸಂಪ್ರದಾಯಸ್ಥರಿಂದ ಆಧುನಿಕರವರೆಗೆ, ಅವಿವಾಹಿತೆಯರಿಂದ ವಿಧವೆಯರವರೆಗೆ ಈ ಜಗತ್ತು ಹರಡಿಕೊಂಡಿದೆ. ವ್ಯವಸ್ಥೆಯ ಹುಯಿಲಿನಲ್ಲಿ ಸಿಲುಕಿ ಪಡಿಪಾಟಲು ಪಡುತ್ತಿರುವ ಹೆಣ್ಣುಜೀವಗಳ ನಾಡಿಮಿಡಿತವನ್ನು ಬಹಳ ಸೂಕ್ಷ್ಮವಾಗಿ ಹಿಡಿದಿಡುತ್ತಾ ಯಾವುದೇ ಅಬ್ಬರವಿಲ್ಲದ ತಣ್ಣಗಿನ ಆದರೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ವ್ಯವಸ್ಥೆಯ ಒಳಗಿದ್ದುಕೊಂಡೇ ಯಾರ ಅರಿವಿಗೂ ಬಾರದೆ ಚೌಕಟ್ಟನ್ನು ಮೀರುತ್ತಾ ಪ್ರತಿರೋಧಗಳ ನಡುವೆಯೂ ತಮ್ಮತನವನ್ನು ಕಾಯ್ದುಕೊಳ್ಳುವ ಪಾತ್ರಗಳು ಇಲ್ಲಿವೆ. ಜೀವನವೆಂಬುದು ಅಸಂಖ್ಯ ಬಣ್ಣ, ವಾಸನೆಗಳಿಂದ ಕೂಡಿರುವುದೆಂಬ ಗ್ರಹಿಕೆ, ಮಾನವೀಯ ಸಂಬಂಧಗಳ ಹಿಂದೆ ಹಲವು ಬಗೆಯ ಒತ್ತಡಗಳಿರುತ್ತವೆ ಎಂಬ ತಿಳುವಳಿಕೆ, ಯಾವುದೇ ವ್ಯಕ್ತಿಯ ಬದುಕಿನ ಸಾಫಲ್ಯದ ಪ್ರಶ್ನೆಯು ಎಲ್ಲಾ ಜೀವಿಗಳ ಮತ್ತು ವರ್ಗಗಳ ಸಂಬಂಧಗಳ ಪ್ರಶ್ನೆಗಳೇ ಆಗಿರುತ್ತವೆ ಎಂಬ ಅರಿವು ಇಲ್ಲಿ ಕೆಲಸ ಮಾಡಿದೆ. ಕೆಲವು ಕತೆಗಳಲ್ಲಿ ಕಾದಂಬರಿಯ ವ್ಯಾಪ್ತಿಯು ಇದ್ದರೂ ಕಥನಕ್ಕೆ ತಕ್ಕಂತೆ ಅದರ ಸ್ತರ ಮತ್ತು ಕೇಂದ್ರವನ್ನು ಆಯ್ದುಕೊಳ್ಳುವ ಜಾಣ್ಮೆ ಇರುವುದರಿಂದ ಕತೆಯ ಓಟಕ್ಕೆ ತಡೆ ಉಂಟಾಗುವುದಿಲ್ಲ. ವಿಪುಲ ವಿವರಣೆಗಳಿಂದ ಕೂಡಿದ ಬರಹಗಳಲ್ಲಿ ಲೇಖಕಿಯ ಒಲವು ನಿಲುವುಗಳು ಪ್ರತಿಫಲಿಸುತ್ತವೆ. ಜ್ವಲಂತ ವಿದ್ಯಮಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಬದುಕಿನ ದುರಂತದತ್ತ ಬೊಟ್ಟು ಮಾಡುವ ಕತೆಗಳು ಕುರೂಪಗೊಂಡ ಬದುಕಿನ ರೀತಿ ನೀತಿ, ಜೀವನದೃಷ್ಟಿ, ಮೌಲ್ಯ, ಭಾವನೆ, ಇಳಿಮುಖವಾಗುತ್ತಿರುವ ಮನುಷ್ಯನ ಮನಸ್ಸು, ಆಧುನಿಕ ಜನಾಂಗದ ವಿರೋಧಾಭಾಸಗಳನ್ನು ಅನಾವರಣಗೊಳಿಸುತ್ತವೆ. ಚಿಕ್ಕಪುಟ್ಟ ಪದಗಳಲ್ಲೇ ಸನ್ನಿವೇಶವನ್ನು ಸೃಷ್ಟಿಸುವ ಕತೆಗಳು ವ್ಯಕ್ತಿಗತ-ಸಾಮಾಜಿಕ ಅನುಭವಗಳನ್ನು ಹಿಡಿದಿಡುತ್ತವೆ. ಅದರೊಳಗಿನ ಪದ ಸಂಪತ್ತು, ಧ್ವನಿ, ಸತ್ವಯುತವಾದ ಭಾಷೆ, ಖಚಿತವಾದ ನುಡಿಗಟ್ಟು, ನಿರೂಪಣೆಗಳು ಗಮನವನ್ನು ಸೆಳೆಯುತ್ತವೆ. ಸುತ್ತಲಿನ ಜಗತ್ತನ್ನು ತೀವ್ರವಾಗಿ ನೋಡಿದ್ದರ, ಹಿಂದಿನ ತಲೆಮಾರಿನವರ ಬದುಕನ್ನು ಅರಿತುಕೊಂಡದ್ದರ ಫಲವಾಗಿ ಮೂಡಿದ ಕತೆಗಳು ತನ್ನೆಲ್ಲ ಸ್ಪಷ್ಟತೆ ಮತ್ತು ಚೆಲುವಿನೊಂದಿಗೆ ಬದುಕಿನ ವಿವರಗಳನ್ನು ದಾಖಲಿಸುತ್ತವೆ. ಕೌಟುಂಬಿಕ ಸಮಸ್ಯೆ, ಗಂಡು ಹೆಣ್ಣಿನ ಸಂಬಂಧ, ಹೆಣ್ಣಿನ ದುಃಖ, ಮುಗ್ಧರ ವಂಚನೆ, ಸಮಾಜದ ದಬ್ಬಾಳಿಕೆಗೆ ಸಿಲುಕಿ ನೊಂದವರ, ತಿರಸ್ಕøತರ ಯಾತನೆಗಳನ್ನು ಚಿತ್ರಿಸುತ್ತಾ ಅವುಗಳನ್ನು ಮೀರಲು ಅಗತ್ಯವಾದ ಮಾನವೀಯ ಸಾಧ್ಯತೆಗಳನ್ನು ಶೋಧಿಸುತ್ತವೆ. ಸಾಂಸಾರಿಕ ವಿರಸದಲ್ಲಿ ಹುಟ್ಟಿಕೊಳ್ಳುವ ನರಕದ ಅನುಭವಕ್ಕಿಂತ ಬೇರೆಯಾದ ಅನುಭವಗಳೂ ಸೇರಿಕೊಳ್ಳುವುದರಿಂದ ಕತೆಗಳು ಮನಸ್ಸನ್ನು ತಟ್ಟುತ್ತವೆ. ‘ರೋಗಿ ಬಯಸಿದ್ದು ವೈದ್ಯ ಹೇಳಿದ್ದು’ ಕತೆಯ ಅನಿತಾ- ರಾಘವ, ‘ಗಾಲಿಕುರ್ಚಿಲಿ ಜೀವನಚಕ್ರ’ (ಗಾಲಿಕುರ್ಚಿಯಲ್ಲಿ ಜೀವನಚಕ್ರ) ದ ಭಾರ್ಗವ – ಶಾಂತಿಯ ಅನುಭವಗಳು ಇವುಗಳಲ್ಲಿ ಮುಖ್ಯವಾಗಿವೆ. ಹಲವರು ಕಳೆದುಕೊಂಡಿರುವ ಪ್ರೀತಿ, ಮುಗ್ಧ ಪ್ರಪಂಚ ಅವರ ಮನಸ್ಸುಗಳಲ್ಲಿ ಇನ್ನೂ ಜೀವಂತವಾಗಿದೆ. ಸೈನಿಕನಾಗಿದ್ದಾಗ ಕೈಕಾಲುಗಳನ್ನು ಕಳೆದುಕೊಂಡ ಭಾರ್ಗವನನ್ನು ಮದುವೆಯಾಗಲು ನಿರ್ಧರಿಸುವ ಶಾಂತಿಯು ನಿವ್ರ್ಯಾಜ್ಯ ಪ್ರೇಮ ಅಂತಃಕರಣಗಳ ಪ್ರತೀಕವಾಗಿದ್ದಾಳೆ. ಪ್ರಣಯಕ್ಕೆ ಸಂಬಂಧಿಸಿದ ಕತೆಗಳಲ್ಲಿ ವಿವಾಹ ಕೊನೆಯ ಘಟನೆಯಾದರೆ ವೈವಾಹಿಕ ಜೀವನವನ್ನು ಆಧರಿಸಿದ ಕತೆಗೆ ಅದು ಪ್ರಾರಂಭವನ್ನು ಒದಗಿಸುತ್ತದೆ. ಪ್ರೇಮ, ಮದುವೆ ಗೆಳೆತನಗಳ ಸುತ್ತ ಹೆಣೆದಿರುವ ಕತೆಗಳಲ್ಲಿ ವ್ಯಕ್ತವಾಗುವ ಲಿಂಗಭೇದ, ಅಸಮಾನತೆಗಳು ತೋರಿಕೆಯ ತೆಳು ಸ್ವರೂಪದಲ್ಲೇ ತೀವ್ರ ಪರಿಣಾಮವನ್ನು ಉಂಟು ಮಾಡುತ್ತವೆ. ಮಿತವಾದ ಹರಹಿನಲ್ಲೇ ಅರ್ಥಪೂರ್ಣವಾದ ವಿಚಾರಗಳನ್ನು ಹೇಳುವ ಲೇಖಕಿಯ ಧಾಟಿಯಲ್ಲಿ ಅಬ್ಬರವಿಲ್ಲದಿದ್ದರೂ ವ್ಯಂಗ್ಯದಿಂದ ಚುಚ್ಚುವ ಸಾಮಥ್ರ್ಯವಿದೆ. ನಿರ್ದಿಷ್ಟ ಘಟನೆಗಳು ಅಂತ್ಯವನ್ನು ಕಂಡುಕೊಂಡಂತೆ ಭಾಸವಾಗುವಂಥ ನಿರೂಪಣ ತಂತ್ರವನ್ನು ಬಳಸಿಕೊಂಡರೂ ಎಲ್ಲ ಕತೆಗಳನ್ನು ಒಟ್ಟಾಗಿ ನೋಡಿದಾಗ ಈ ಅಂತ್ಯಗಳು ಸಾಮಾಜಿಕ ಸಮಸ್ಯೆಗಳಿಗೆ ಅರ್ಥಪೂರ್ಣ ಪರಿಹಾರಗಳನ್ನು ಶೋಧಿಸುವಲ್ಲಿ ಲೇಖಕಿಯ ಕನಸು, ತಲ್ಲಣ ಮತ್ತು ಅಪೇಕ್ಷೆಗಳು ಸೂಚಿತವಾಗುವುದರಿಂದ ಕುತೂಹಲಕಾರಿಯಾಗಿ ಕಾಣುತ್ತವೆ. ಒಂದೇ ಆಶಯಕ್ಕೆ ಬಂಧಿತರಾಗದೆ, ಸಮಸ್ಯೆಯ ಹಲವು ಮಗ್ಗುಲುಗಳನ್ನು ಗಮನಿಸುವ ಲೇಖಕಿಯು ಹೆಣ್ಣಿನ ಬವಣೆಗೆ ಮಾತ್ರ ಮೀಸಲಾಗದೆ ಎಲ್ಲರ ಸಮಸ್ಯೆಗಳನ್ನು ವಿವಿಧ ನೆಲೆಗಳಲ್ಲಿ ಕಾಣಿಸುತ್ತಾರೆ. ಹೆಣ್ಣಿನ ಸಂಕಷ್ಟಗಳ ಬಗ್ಗೆ ಮಾತ್ರ ಬರೆಯುತ್ತಾ ಸರಳೀಕೃತ, ಏಕಮುಖಿಯಾದ ಪುರುಷ ವಿರೋಧಿ ನೆಲೆಗಳನ್ನು ಮುಟ್ಟಲು ಹಾತೊರೆಯದೆ ಬದುಕಿನ ವಿರಸದ ಕ್ಷಣಗಳನ್ನು, ಸಂಪ್ರದಾಯದ ಸಂಕೋಲೆಗಳನ್ನು ಮೀರುವ ದಿಟ್ಟ ಗಂಡು ಹೆಣ್ಣುಗಳನ್ನು ತೋರುತ್ತಾರೆ.
ಬಾಂಧವ್ಯದ ಸುಖವು ಇಲ್ಲದಾಗುತ್ತಿರುವುದರ ಕುರಿತು ಗಾಢ ವಿಷಾದವನ್ನು ಕಟ್ಟಿಕೊಡುವ ಕತೆಗಳು ಹವ್ಯಕ ಜನಾಂಗದವರ ತಾಳ್ಮೆಯ ಬದುಕನ್ನು ಇತ್ಯಾತ್ಮಕ-ಕ್ರಿಯಾತ್ಮಕ ರೂಪದಲ್ಲಿ ದಾಖಲಿಸುತ್ತವೆ. ಅನ್ಯಾಯಕ್ಕೊಳಗಾದವರು ಸಮಾಜಕ್ಕೆ ಕೊಡುವ ಪ್ರತಿಕ್ರಿಯೆ ಮತ್ತು ಸ್ವತಂತ್ರ ಅಸ್ತಿತ್ವವನ್ನು ಸ್ಥಾಪಿಸುವ ವಿಧಾನವು ಮುಖ್ಯವೆನಿಸುತ್ತದೆ. ಕೆಲವೊಂದು ಸಮಸ್ಯೆಗಳ ಪರಿಹಾರವು ಸರಳವೆನಿಸುತ್ತಿದ್ದರೂ ಅವರ ಅನುಭವ ಲೋಕವು ಆಧುನಿಕ ಸಮಾಜವು ಎದುರಿಸುತ್ತಿರುವ ದೈನಂದಿನ ಆಗುಹೋಗುಗಳು, ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುತ್ತದೆ. ನೈತಿಕ ಅಧಪತನದ ಕಡೆ ಬೊಟ್ಟು ಮಾಡುತ್ತದೆ. ಹಳ್ಳಿಯ ಬದುಕನ್ನು ವೈಭವೀಕರಿಸುವ ರಚನೆಗಳೇ ತುಂಬಿಕೊಳ್ಳುತ್ತಿರುವ ಸಂದರ್ಭದಲ್ಲಿ ಇವರ ಕತೆಗಳು ಅಲ್ಲಿನ ಶ್ರೀಮಂತರ ಅಷಾಢಭೂತಿತನ, ಮಧ್ಯಮ ವರ್ಗದವರ ತಲ್ಲಣ ಮತ್ತು ಬಡವರ ಸಂಕಷ್ಟಗಳನ್ನು ಚಿತ್ರಿಸುತ್ತಾ ಬದುಕಿನ ಮುಖಗಳನ್ನು ಪರಿಚಯಿಸುತ್ತವೆ. ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದವು ಭದ್ರವಾಗಿ ನೆಲೆಗೊಂಡ ನಂತರ ರೂಪುಗೊಂಡ ಇವರ ಕತೆಗಳು ಯಾವುದೇ ಸಿದ್ದಾಂತಕ್ಕೆ ಕಟ್ಟುಬಿದ್ದಿಲ್ಲ. ಗಂಡು ಹೆಣ್ಣಿನ ಸಂಘರ್ಷ, ಸಾಮುದಾಯಿಕ ತಿಕ್ಕಾಟಗಳು ಸೈದ್ಧಾಂತಿಕ ಸ್ವರೂಪದ್ದಾಗಿಲ್ಲ. ಕಟ್ಟುವ ಪದ್ಧತಿಯನ್ನು ಬಿಟ್ಟುಕೊಟ್ಟು ಹೇಳುವ ಕ್ರಮವನ್ನು ರೂಢಿಸಿಕೊಂಡ ಕತೆಗಳಲ್ಲ್ಲಿ ಭಾವನೆಗಳಿಗಿಂತ ಘಟನೆಗಳಿಗೆ, ವರ್ಣನೆಗಳಿಗಿಂತ ಕಥನಕ್ಕೆ ಪ್ರಾಮುಖ್ಯತೆಯಿದೆ. ಹವ್ಯಕ ಸಮಾಜದ ಕತೆಗಳಾದರೂ ಇಡೀ ಸಮಾಜದ ಸಂವೇದನೆಯಾಗಿ ರೂಪುಗೊಂಡಿದ್ದು ಬದುಕಿನ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ನೆಲೆಗಳನ್ನು ಗ್ರಹಿಸುವಲ್ಲಿ ಯಶಸ್ವಿಯಾಗಿವೆ. ಸರಳವಾದ ರಚನಾಕ್ರಮ, ನೇರವಾದ ನಿರೂಪಣೆಗಳ ಮೂಲಕ ರೂಢವಾಗಿರುವ ಭಾವನೆಗಳನ್ನು ಕಲಕಿ ಜೋಡಿಸುವ ಪ್ರಯತ್ನವಿದೆ. ಹವಿಗನ್ನಡ ನುಡಿಗಟ್ಟು, ರೀತಿ ನೀತಿ, ಸಂಸ್ಕಾರಗಳನ್ನು ಪ್ರತಿಬಿಂಬಿಸುವ ಕತೆಗಳು ಬದುಕನ್ನು ಕುರಿತ ಪ್ರೌಢ ಒಳನೋಟಗಳನ್ನು ಹೊಂದಿವೆ. ಈಗಾಗಲೇ ಓದಿರುವ ಹಲವು ಕತೆಗಳ ಸಾಲಿಗೆ ಸೇರಿ ಮರೆತು ಹೋಗಲು ಕಾದಿರುವ ರಚನೆಗಳ ನಡುವೆ ಅನುಭವ ಮತ್ತು ಸೂಕ್ಷ್ಮ ಒಳನೋಟಗಳ ಮೂಲಕ ಸ್ಮರಣೀಯವೆನಿಸಿರುವ ಕತೆಗಳೂ ಇವೆ. ಹಿತಮಿತವಾದ ಬರವಣಿಗೆ-ಆಡಂಬರವಿಲ್ಲದ ನಿರೂಪಣೆಯು ಗಮನವನ್ನು ಸೆಳೆಯುತ್ತದೆ. ಗಟ್ಟಿ ಪಾತ್ರಗಳು, ಸಾಂದ್ರ ಅನುಭವ, ಬದುಕಿನ ಸಮಸ್ಯೆಗಳು, ಹುರುಳಿಲ್ಲದ ವಿಚಾರಗಳ ವಿರುದ್ಧ ಎತ್ತುವ ಪ್ರಶ್ನೆಗಳು, ಬದುಕಿನ ತತ್ವಗಳು ಮುಖ್ಯವಾಗುತ್ತವೆ. ಪಳಗಿದ ಬರವಣಿಗೆಯಲ್ಲಿ ಪ್ರಬುದ್ಧ ಮನಸ್ಸನ್ನು ಕಾಣುತ್ತೇವೆ. ಚಮತ್ಕಾರಿಕ ತಿರುವಿಲ್ಲದ ನೇರ ಕಥನ, ಆರೋಗ್ಯಪೂರ್ಣ ಜೀವನ ದೃಷ್ಟಿ ಎಲ್ಲ ವರ್ಗದ ಓದುಗರಿಗೂ ಆಪ್ತವೆನಿಸುವಂತೆ ಮಾಡುತ್ತವೆ. ಪ್ರಚಲಿತ ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧ್ವನಿಸುವ ಕತೆಗಳು ಈ ಹೊತ್ತಿನಲ್ಲೂ ಅರ್ಥಪೂರ್ಣವೆನಿಸುತ್ತವೆ.
ಪುಸ್ತಕದ ಹೆಸರು : ಹತ್ತಗುಳು (ಹವಿಗನ್ನಡ ಕತೆಗಳ ಸಂಕಲನ)
ಲೇಖಕರು : ಶ್ರೀಮತಿ ಅನುಪಮಾ ರಾಘವೇಂದ್ರ
ಪ್ರಕಾಶಕರು : ಭೂಮಿಕಾ ಪ್ರತಿಷ್ಠಾನ (ರಿ) ಉಡುಪುಮೂಲೆ, ಎಡನೀರು
ಪ್ರಕಟವಾದ ವರ್ಷ : 2018
ಪುಟಗಳು : 80+4
ಬೆಲೆ ರೂ : 75 ರೂಪಾಯಿಗಳು
2 thoughts on ““ಹತ್ತಗುಳು”- ಹವಿಗನ್ನಡ ಕತೆಗಳು”
ಚೆನ್ನಾಗಿದೆ
ಸಾಹಿತ್ಯದ ವಿವಿಧ ಕೃತಿಗಳ, ಪ್ರಕಾರಗಳ ತಮ್ಮ ಅಧ್ಯಯನದಲ್ಲಿ, ಓದಿನಲ್ಲಿ, ಪ್ರಾಂಜಲತೆ ಮತ್ತು ಸದುದ್ದೇಶಗಳನ್ನು ಏಕರೂಪವಾಗಿ, ಅನೂಚಾನವಾಗಿ ಒತ್ತೆಯಿಟ್ಟು, ಒಳ್ಳೆಯ ಅಂಶಗಳನ್ನು ನಿರ್ವ್ಯಾಜ ಚಿಕಿತ್ಸಕ ವಿವೇಚನೆಯಿಂದ, ಶೋಧಿಸುತ್ತ ಹೆಕ್ಕಿ ತೆಗೆದು, ಸಂಗ್ರಹಿಸುವ ಅಭ್ಯಾಸವುಳ್ಳ ಪಟ್ಟಾಜೆಯವರ ವಿಸ್ತೃತೆಯಲ್ಲಿ, ನಿಸ್ಪೃಹತೆಯ ಇಂತಹ ಶಬ್ದ ಪರಿಚಲನೆ ಇದೇ ಮೊದಲನೆಯದಲ್ಲ.
ನಿಸ್ಪೃಹತೆಯೇ ಅವರ ಲೇಖ ವಾಹಿನಿಯ ಜ್ಯೇಷ್ಠ ಘಟಕವಾಗಿ ನಿರಂತರವಾಗಿ ಮುಂದರಿಯಲೀ ಎಂದು ಹಾರೈಸುವೆ.
ಅಭಿನಂದನೆಗಳು!