ಬೇಗಂ ಗಜಲ್ ಗುಚ್ಛ

ಪುಸ್ತಕ ಪರಿಚಯ
ಕೃತಿ ಶೀಷಿ೯ಕೆ: ಬೇಗಂ ಗಜಲ್ ಗುಚ್ಛ (ಒಲವಿ ಮಧುವನ)
ಲೇಖಕರ ಹೆಸರು: ಹಮೀದಾ ಬೇಗಂ ದೇಸಾಯಿ ಮೊ.ನಂ.೯೪೪೯೪೪೨೦೫೧
ಪ್ರಕಾಶನ: ಕನ್ನಡತಿ ಪ್ರಕಾಶನ ಸಂಕೇಶ್ವರ ಜಿಲ್ಲಾ ಬೆಳಗಾವ
ಪ್ರಕಟಿತ ವರ್ಷ: ೨೦೨೩. ಬೆಲೆ: ₹೧೨೫ ರೂ

ಶ್ರೀಮತಿ ಹಮೀದಾ ಬೇಗಂ ದೇಸಾಯಿ ಅವರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಕಿಯಾಗಿ ಸೇವೆಯಿಂದ ನಿವೃತ್ತರಾಗಿದ್ದಾರೆ .ಅತ್ಯುತ್ತಮ ಶಿಕ್ಷಕಿ ರಾಷ್ಟ್ರ ಪ್ರಶಸ್ತಿ ಪಡೆದವರು ನಿವೃತ್ತಿ ಯಾದ ಮೇಲೆ ಸಾಹಿತ್ಯ ಆಸಕ್ತರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಇವರು ಕಟ್ಟಾ ಕನ್ನಡ ಅಭಿಮಾನಿಯಾಗಿದ್ದು ತಮ್ಮ ಕಾವ್ಯನಾಮವನ್ನು ಕನ್ನಡತಿ ಎಂದು ಇಟ್ಟು ಕೊಂಡಿದ್ದಲ್ಲದೆ ಕನ್ನಡತಿ ಪ್ರಕಾಶನ ಎಂದು ಸ್ವಪ್ರಕಾಶನದಿಂದ ತಾವು ರಚಿಸಿದ ಕೃತಿಗಳಾದ ನುಡಿಮುತ್ತುಗಳು ಮನೋ ಗೀತೆ ವಚನಾಂಜಲಿ ಎಂಬ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ ಈಗ ನಾಲ್ಕನೇ ಕೃತಿ ಬೇಗಮ್ ಗಜಲ್ ಗುಚ್ಚ ಎಂಬ ಗಜಲ್ ಸಂಕಲವನ್ನು ಪ್ರಕಟಿಸಿದ್ದಾರೆ .ತಾಲೂಕ ಜಿಲ್ಲಾಮಟ್ಟದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಉಪನ್ಯಾಸ ನೀಡುತ್ತಾ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಡಾ . ಸ.ಜಾ. ನಾಗಲೋಟಿ ಮಠ ಪ್ರಶಸ್ತಿ ಅತ್ಯುತ್ತಮ ಶಿಕ್ಷಕಿ ರಾಷ್ಟ್ರ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಲ್ಲದೆ ಸನ್ಮಾನ ಪತ್ರಗಳು ಬಂದಿವೆ. ಸಕ್ರೀಯವಾಗಿ ಸಾಹಿತ್ಯ ರಚನೆ ಮಾಡುತ್ತಾ ಇರುತ್ತಾರೆ.

ಕಾವ್ಯ ಪ್ರಕಾರಗಳಲ್ಲಿ ಗಜಲ್ ಅತ್ಯಂತ ಮೋಹಕವಾದ ಹೃದಯ ತಟ್ಟುವ ಕಾವ್ಯ ಪ್ರಕಾರವಾಗಿದೆ ರಸಿಕ ಓದುಗರನ್ನು ತನ್ನತ ಸೆಳೆದುಕೊಳ್ಳುವ ಚುಂಬಕ ಶಕ್ತಿ ಗಜಲ್ ಗಳಿಗೆ ಇದೆ .ಉರ್ದು ಭಾಷೆಯ ಸೌಂದರ್ಯ. ಮೃದುಭಾವ .ಶಬ್ದಗಳ ಲಾಲಿತ್ಯ, ಲಯ ,ಗೇಯತೆ,ಭವ್ಯತೆಯಿಂದ ಜನಸಾಮಾನ್ಯರ ಮನದಲ್ಲಿ ಬೇರೂರಿವೆ. ಇದು ಒಂದು ಹಾಡುಗಬ್ಬವಾಗಿದ್ದು ಇಂದು ಭಾರತದ ಎಲ್ಲಾ ಭಾಷೆಗಳಲ್ಲಿ ಗಜಲ್ ಗಳ ರಚನೆ ನಡೆದಿದೆ .ಕನ್ನಡದ ಕವಿಗಳ ಮನಗೆದ್ದ ಗಜಲ್ ಕಾವ್ಯ ಈಗ ಕನ್ನಡದಲ್ಲಿ ಹೇರಳವಾಗಿ ರಚನೆಯಾಗುತ್ತಿದೆ. ಯಾವುದೇ ಪ್ರಕಾರದ ಕಾವ್ಯವಾದರೂ ಅದರಲ್ಲಿ ಆದರದೇ ರಚನಾ ನಿಯಮಗಳು ಇದ್ದು ಛಂದಸ್ಸುಗಳು ಇರುತ್ತವೆ. ಆ ಛಂದಸ್ಸುಗಳಿಂದ ಕಾವ್ಯ ರಚನೆಯಾದರೆ ಓದುಗರ ಮನ ಗೆಲ್ಲಲು ಸಾಧ್ಯವಾಗುತ್ತದೆ.

ಗಜಲ್ ಎಂದರೆ ಮಹಿಳೆಯರೊಂದಿಗೆ ಮಾತನಾಡುವುದು ಹೃದಯಗಳ ಒಲವಿನ ಪಿಸು ಮಾತುಗಳು, ಪ್ರೀತಿ ,ಪ್ರೇಮ ,ಪ್ರಣಯ ,ಕನವರಿಗೆ ,ನಿರೀಕ್ಷೆ ,ವಿರಹ ,ಇವು ಗಜದ ಸ್ಥಾಯಿಗುಣವಾಗಿವೆ .ಲೌಕಿಕ ಪ್ರೇಮದ ಸ್ಥಿತಿಯನ್ನು ಮೀರಿ ಅಲೌಕಿಕ ಪ್ರೇಮದತ್ತ ಸಂಚರಿಸಲು ಪ್ರಯತ್ನಿಸುತ್ತಾರೆ .ಇದು ಎಲ್ಲರಿಗೆ ಸಾಧ್ಯವಾಗುವುದಿಲ್ಲ ಹೃದಯವಂತರು ಜೀವನ ಪ್ರೀತಿ ದಟ್ಟವಾಗಿದ್ದಾಗ ಮಾತ್ರ ಇಂಥ ಗಜಲ್ ರಚನೆ ಮಾಡಲು ಸಾಧ್ಯವಾಗುತ್ತದೆ . ಇಂದು ಗಜಲ್ ದ ಸ್ಥಾಯಿ ಭಾವದ ಜೊತೆಗೆ ಸಾಮಾಜಿಕ ,ಮಹಿಳಾ ಸಂವೇದನೆ, ಧರ್ಮದ ಮೇಲೆ ,ಶೋಷಣೆ ,ಹತ್ತು ಹಲವು ವಿಷಯಗಳ ಮೇಲೆ ಗಜಲ್ ಗಳು ರಚನೆಯಾಗುತ್ತಿವೆ.

  ಹಮೀದಾ ಬೇಗಂ ಅವರ *ಬೇಗಂ ಗಜಲ್ ಗುಚ್ಛ* ಸಂಕಲನದಲ್ಲಿ 60 ಗಜಲ್ ಗಳಿದ್ದು ಪ್ರೀತಿ, ಪ್ರೇಮ ,ಪ್ರಣಯ ,ವಿರಹ ಗಳೊಂದಿಗೆ ಸಾಮಾಜಿಕ ಚಿಂತನೆ ಸ್ತ್ರೀ ಸಂವೇದನೆ ರೈತಪರ  ನಿಸರ್ಗದ ರಮಣೀಯತೆ, ಲಾಲ್ ಬಹದ್ದೂರ್ ಶಾಸ್ತ್ರಿ, ಬಸವೇಶ್ವರ ,ಮುಂತಾದ ವ್ಯಕ್ತಿ ಪರಿಚಯದ ಗಜಲ್ ಗಳು ಗಮನ ಸೆಳೆಯುತ್ತದೆ .ಈ ಸಂಕಲನದ ಹಲವಾರು ಗಜಲ್ ಗಳ ಮೇಲೆ ವಚನ ಸಾಹಿತ್ಯದ ಪ್ರಭಾವ ಇರುವುದು ಕಂಡು ಬರುತ್ತದೆ .ಹಮೀದಾ ಬೇಗಂ ಅವರ ಭಾಷೆಯನ್ನು ಸಶಕ್ತವಾಗಿ ಬಳಸಿಕೊಂಡಿದ್ದಾರೆ. ಈ ಸಂಕಲನದಲ್ಲಿ ಮುರದ್ದಫ್,ಗೈರ್ ಮುರದ್ದಫ್,ಸಂಪೂರ್ಣ ಮತ್ಲಾ ಗಜಲ್,ತರಹೀ ಗಜಲ್ ,ಜುಲ್ ಕಾಫಿಯಾಗಜಲ್, ಬಹುಕಾಫಿಯಾ ಗಜಲ್,ಹಾಗೂ ಸೇಹ್ ಗಜಲ್ ಪ್ರಕಾರಗಳನ್ನು ನಾವು ಕಾಣಬಹುದು.

ಈ ಸಂಕಲನಕ್ಕೆ ನುರಿತ ಗಜಲ್ ಕಾರರಾದ ಡಾ .ಮಲ್ಲಿನಾಥ್ ಎಸ್ ತಳವಾರ್ ಅವರು ಮೌಲಿಕವಾದ ವಿವರವಾದ ಮುನ್ನುಡಿಯನ್ನು ಬರೆದಿದ್ದಾರೆ. ಇನ್ನೊಬ್ಬ ಗಜಲ್ ಕಾರ್ತಿಯಾದ ಶ್ರಮಾ ಎಂ ಜಮಾದಾರ ಅವರು ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ಸಂಕಲನಕ್ಕೆ ಆಶಯ ನುಡಿಯನ್ನು ಹಿರಿಯ ಸಾಹಿತಿಗಳಾದ ಈಶ್ವರ್ ಜಿ ಸಂಪಗಾವಿ ಅವರು ಬರೆದಿದ್ದಾರೆ .ನಲ್ನುಡಿಯನ್ನು ಇನ್ನೊಬ್ಬ ಸಾಹಿತಿ ಆಶಾ ಎಸ್ ಯಮಕನಮರಡಿಯವರು ಬರೆದಿದ್ದಾರೆ. ಕೃತಿಯ ಮುಖಪುಟವನ್ನು ರಾಘವೇಂದ್ರ ಕುಪ್ಪೇಲೂರು ಅವರು ಅರ್ಥಪೂರ್ಣವಾಗಿ ಚಿತ್ರಿಸಿ ಸಂಕಲನದ ಚೆಲುವನ್ನು ಹೆಚ್ಚಿಸಿದ್ದಾರೆ.

ಹೆಣ್ಣೆಂದರೆ ನೋಡುವುದು ದುನಿಯಾ ಗುಲಾಮಳೆಂದು
ಹೆಣ್ಣೆಂದರೆ ತಿಳಿಯುವದು ದುನಿಯಾ ಆಟಿಕೆಯೆಂದು (ಗಜಲ್೨)

ಹೆಣ್ಣನ್ನು ಸಮಾಜವು ಮೊದಲಿನಿಂದಲೂ ಎರಡನೇ ಪ್ರಜೆಯೆಂದು ಕಾಣುತ್ತಾ ಬಂದಿದ್ದನ್ನು ಗಜಲ್ ಕಾರ್ತಿ ವಿವಿಧ ರೂಪಕಗಳೊಂದಿಗೆ ವಿವರಿಸಿದ್ದಾರೆ ಇಂದಿಗೂ ಹೆಣ್ಣು ಗುಲಾಮಳೆಂದು ಆಟಿಕೆಯ ಸಮಾನು ಎಂದು ಹೆರಿಗೆ ಯಂತ್ರವೆಂದು ಬಯಕೆಗಳನ್ನು ಪೂರೈಸುವ ದುಕಾನ ಎಂದು ತಿಳಿದಿರುವುದು ಕಂಡುಬರುವುದು ಹೆಣ್ಣಿನ ದೌರ್ಭಾಗ್ಯವಾಗಿದೆ ಈ ಚಿತ್ರಣವನ್ನು ಗಜಲ್ ದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.

ಅದೆಷ್ಟು ತುಳಿಯುವೆ ತುಳಿ ಮಣ್ಣಾದರೂ ಹೆಣ್ಣಾಗಿ ಹುಟ್ಟುವೆ ನಾನು
ನೀನೆಷ್ಟು ನಿಂದಿಸಿ ನೋಯಿಸಿ ಜರಿದರೂ ಶಕ್ತಿಯಾಗಿ ಹುಟ್ಟುವೆ ನಾನು (ಗಜಲ್ ೭)

ಮೇಲಿನ ಮತ್ಲಾವನ್ನು ಓದಿದಾಗ ಇಂದಿನ ಜಾಗತಿಕ ಯುಗದಲ್ಲಿ ಹುಟ್ಟಿದ ಹೆಣ್ಣು ಮಕ್ಕಳ ಮನೋಧರ್ಮವನ್ನು ಸಾರುತ್ತದೆ ,ಹಿಂದಿನಂತೆ ಹೆಣ್ಣು ದಬ್ಬಾಳಿಕೆಗೆ ಯನ್ನು ಸಹಿಸಿ ಕೊಂಡು ಮನೆಯ ಮೂಲೆ ಸೇರುವದಿಲ್ಲ ,ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಸಮನಾಗಿ ಕಾರ್ಯನಿರ್ವಹಿಸುತ ಸಮಾನತೆ ಸಾರುತ್ತಾ ತಮ್ಮ ಹಕ್ಕನ್ನು ಪಡೆಯುತ್ತಾ ಇರುವುದನ್ನು ಗಜಲ್ ದಲ್ಲಿ ಸೆರೆ ಹಿಡಿಯುತ್ತಾರೆ. ಪುರುಷ ಸಮಾಜ ಎಷ್ಟೇ ದಬ್ಬಾಳಿಕೆ ಮಾಡಿದರು ಅವುಗಳನ್ನು ಹತ್ತಿಕ್ಕಿ ಸಶಕ್ತವಾಗಿ ಎದ್ದು ನಿಲ್ಲುತ್ತೇನೆಂದು ಹೇಳುವ ಗಜಲನ್ನು ಸೊಗಸಾಗಿ ಚಿತ್ರಿಸಿದ್ದಾರೆ.

ಬೆಂಕಿಯಲಿ ಬಿದ್ದ ಪತಂಗದಂತೆ ಬಳಲುತಿರುವೆ ಇನಿಯಾ
ನಿನ್ನ ಅಗಲಿಕೆಯ ವಿರಹದಲಿ ನರಳುತಿರುವೆ ಇನಿಯಾ (ಗಜಲ್ಂ೧೧)

ಇದು ಒಂದು ವಿರಹದ ಗಜಲಾಗಿದ್ದು ತನ್ನ ಪ್ರಿಯಕರನ ಅಗಲಿಕೆಯ ವಿರಹದ ಬೆಂಕಿಯಲ್ಲಿ ಬೇಯುತ್ತಿರುವ ಪ್ರಿಯತಮೆಯ ಮನದ ನೋವು ಅಳಲು ಬೇಗುದಿಯನ್ನು ಸುಂದರವಾದ ರೂಪಗಳೊಂದಿಗೆ ಗಜಲ್ ಗಾರ್ತಿ ಹೇಳಿದ್ದಾರೆ .ಅದು ವಿರಹದ ಬೆಂಕಿಯಲ್ಲಿ ಬಿದ್ದ ಪತಂಗ ತನ್ನ ರೆಕ್ಕೆಗಳನ್ನು ಸುಟ್ಟುಕೊಂಡು ಯಾವ ರೀತಿಯಾಗಿ ನರಳುತ್ತದೆ ಹಾಗೆ ನಾನು ಪ್ರಿಯಕರನ ಅಗಲಿಕೆ ಬೆಂಕಿಯಲ್ಲಿ ಬೇಯುತ್ತಿರುವೆನೆಂದು ಗಜಲ್ ದಲ್ಲಿ ವಿವರಿಸಿದ್ದಾರೆ ,ಪ್ರಕೃತಿಯ ಚರಾ ಚರ ವಸ್ತುಗಳಲ್ಲಿ ಅಗಲಿಕೆಯನ್ನು ಅನುಭವಿಸುತ್ತಿದ್ದಾಳೆ, ಬೆಳಗಾಗುವ ಮುನ್ನವೇ ಬಂದು ನನ್ನ ಮನದ ಬೇಗುದಿಯನ್ನು ತಣಿಸೆಂದು ಗಜಲ್ ದಲ್ಲಿ ಸುಂದರವಾಗಿ ನಿವೇದಿಸಿಕೊಳ್ಳುತ್ತಾಳೆ.

ಅನ್ನದಾತನ ಪ್ರಿಯ ಸಜ್ಜನಿಕೆಯ ಪ್ರತಿ ರೂಪ ಇವರಿಹರು ನೋಡು
ದೇಶ ಕಾಯುವ ಸೈನಿಕನ ಭಕ್ತಿಯ ಸೇವಕ ಏನಿಸಿಹರು ನೋಡು (ಗಜಲ್ ೧೪)

ಈ ಗಜಲದ ಮತ್ಲಾದಲ್ಲಿ ಜಗದ ಹಸಿವು ಹಿಂಗಿಸುವ ರೈತ ಹಾಗೂ ಶತ್ರುಗಳಿಂದ ದೇಶ ರಕ್ಷಿಸುವ ಸೈನಿಕರ ದೇಶಭಕ್ತಿಯ ಬಗ್ಗೆ ಮತ್ತು ಇಬ್ಬರು ದೇಶದ ಎರಡು ಕಣ್ಣುಗಳೆಂದು ಹೇಳುತ್ತಾ ನಮ್ಮ ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಹೇಳಿದ ಜೈ ಕಿಸಾನ್ ಜೈ ಜವಾನ್ ಎಂಬ ನುಡಿ ಉಲ್ಲೇಖಿಸುತ್ತಾ ರೈತ ಮತ್ತು ಸೈನಿಕ ದೇಶದ ಆಸ್ತಿ ಅವರು ನಿಸ್ಸಾರ್ಥವಾದ ಸೇವೆ ಮಾಡುತ್ತಾರೆ ಯಾವ ಅಧಿಕಾರದ ಗದ್ದುಗೆಯ ಸುಖವನ್ನು ಬಯಸದೆ ತಮ್ಮ ಜೀವನವನ್ನು ದೇಶಕ್ಕಾಗಿ ಮೂಡುಪಾಗಿಟ್ಟಿದ್ದಾರೆ ಎಂದು ಗಜಲ್ ದಲ್ಲಿ ಸುಂದರವಾಗಿ ವಿವರಿಸಿದ್ದಾರೆ.

ಕಾರಿರುಳು ಮುಸುಕಿದರೂ ಬೆಳಗಾಗುವುದು ಮತ್ತೆ
ಮಂಜು ಹನಿ ಸುರಿದರೂ ನೀರಾಗುವುದು ಮತ್ತೆ (ಗಜಲ್೪೨)

ಈ ಗಜಲ್ ದ ಮತ್ಲಾದಲ್ಲಿ ಗಜಲ್ ಗಾರ್ತಿ ಪ್ರಕೃತಿಯ ಜೀವನ ಚಕ್ರದ ನಿಯಮವನ್ನು ಸಾರುತ್ತ ಮನುಷ್ಯ ಜೀವನದಲ್ಲಿ ಬರುವ ಸುಖ ದುಃಖಗಳನ್ನು ಹಗಲು ರಾತ್ರಿಗೆ ಹೋಲಿಸುತ್ತಾ ಕತ್ತಲೆ ಕಳೆದ ಮೇಲೆ ಬೆಳಕು ಬಂದೇ ಬರುತ್ತದೆ ಎಂದು ಮನುಷ್ಯನ ಜೀವನದಲ್ಲಿ ಕಷ್ಟಕಾಲ ಕಳೆದು ಸುಖವು ಬರುತ್ತದೆ ಜೀವನದಲ್ಲಿ ಯಾರನ್ನು ದ್ವೇಷಿಸದೆ ಪ್ರೀತಿಯಿಂದ ಇರಬೇಕು ದ್ವೇಷವನ್ನು ಪ್ರೀತಿಯಿಂದ ಗೆಲ್ಲಬೇಕೆಂದು ಶರಣ ಸೂಫಿ ಸಂತರ ಶರಣರ ತತ್ವವನ್ನು ವಿಸ್ತರಿಸಿದ್ದಾರೆ .

ಹಮೀದಾ ಬೇಗಂ ಅವರ ಈ ಸಂಕಲನದ ಗಜಲ್ ಗಳು ಓದಿಸಿಕೊಂಡು ಹೋಗುತ್ತವೆ ಕೆಲವು ಗಜಲ್ ಗಳು ಚಿಂತನೆಗೆ ಹಚ್ಚುತ್ತವೆ .ಮಹಿಳಾ ಗಜಲ್ ಕಾರ್ತಿಯಾದ ಕಾರಣ ಮಹಿಳಾ ಸಂವೇದನೆ ,ಮಹಿಳಾ ಶೋಷಣೆ ,ಅವಳ ನೋವು ನಲಿವು ,ಪುರುಷ ಸಮಾಜದ ದಬ್ಬಾಳಿಕೆಯನ್ನು ಗಜಲ್ ಗಳಲ್ಲಿ ಉತ್ತಮವಾಗಿ ರೂಪಕಗಳೊಂದಿಗೆ ರಚಿಸಿದ್ದಾರೆ . ಗ್ರಾಮೀಣ ಭಾಷೆ ಉಪಯೋಗಿಸಿ ಸಮಕಾಲೀನ ಸಮಸ್ಯೆಯ ಬಗ್ಗೆ ತಂದೆ ತಾಯಿಗಳ ಬಗ್ಗೆ ಪ್ರಕೃತಿಯ ಸೊಬಗಿನ ಬಗ್ಗೆ ವ್ಯಕ್ತಿಗಳ ಬಗ್ಗೆ ಬರೆದಿದ್ದಾರೆ. ಇವರು ತಮ್ಮ ತಖಲ್ಲುಸಾ ವನ್ನು ಬೇಗಂ ಎಂದು ಉಪಯೋಗಿಸುತ್ತಾರೆ. ಗಜಲ್ ೭ ಮತ್ತು ೪೯ಒಂದೇ ಗಜಲ್ ಆಗಿದ್ದು ಮುದ್ರಣದಲ್ಲಿ ತಪ್ಪಾಗಿದ್ದನ್ನು ಕವಿತ್ರಿ ಗಮನಿಸಿಲ್ಲ .ಕಾವ್ಯನಾಮವನ್ನು ಗಜಲ್ ದಲ್ಲಿ ಕಡ್ಡಾಯವಾಗಿ ಸೇರಿಸಬೇಕು ಎಂಬ ನಿಯಮ ಇಲ್ಲ ಕವಿ ತನ್ನ ಮನಸ್ಸಿಗೆ ಬಂದರೆ ಸೇರಿಸಬಹುದು ಬಿಡಬಹುದು .ಹಮೀದಾ ಬೇಗಂ ಅವರು ಗಜಲ್ ದ‌ ನಿಯಮಗಳನ್ನು ಅರಿತು ಲಾಲಿತ್ಯ, ಗೇಯತೆ ,ಇರುವಂತೆ ಗಜಲ್ ಗಳನ್ನು ರಚಿಸಿದ್ದಾರೆ .ಇವರಿಂದ ಇನ್ನು ಉತ್ತಮವಾದ ಗಜಲ್ ಗಳು ರಚನೆಯಾಗಿ ಪುಸ್ತಕ ರೂಪದಲ್ಲಿ ಪ್ರಕಟವಾಗಲೆಂದು ಶುಭ ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುವೆನು.

  • ಪ್ರಭಾವತಿ ಎಸ್ ದೇಸಾಯಿ
    ವಿಜಯಪುರ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter