ಅಂಗುಲಿಮಾಲನ ಕತೆ ಬಹುತೇಕ ಎಲ್ಲರಿಗೂ ಗೊತ್ತಿರುವ ಕತೆ. ಅವನು ಒಂದು ಕಾಡಿನಲ್ಲಿ ವಾಸಿಸುತ್ತಿದ್ದ. ಕಾಡಿನಲ್ಲಿ ಹಾದು ಹೋಗುವ ಜನರ ಬಳಿಯಲ್ಲಿದ್ದ ವಸ್ತುಗಳನ್ನು ದೋಚಿ, ಅವರನ್ನು ಕೊಂದು ಅವರ ಬೆರಳನ್ನು ಹಾರವಾಗಿ ಪೋಣಿಸಿ ತನ್ನ ಕೊರಳಿಗೆ ಹಾಕಿಕೊಳ್ಳುತ್ತಿದ್ದ. ಹಾಗಾಗಿ ಅವನಿಗೆ ಅಂಗುಲಿಮಾಲ ಎಂಬ ಹೆಸರು ಬಂದಿತ್ತು. ಒಂದು ದಿನ ಭಗವಾನ್ ಬುದ್ಧನು ಕ್ರೂರಿಯಾದ ಅಂಗುಲಿಮಾಲಾನ ಹತ್ತಿರ ಬಂದನು. “ನೀನು ಯಾಕೆ ನನ್ನ ಬಳಿ ಬಂದಿರುವೆ ನೀನು ಸನ್ಯಾಸಿ ನಾನು ಈಗಾಗಲೇ ತುಂಬಾ ಜನರನ್ನು ಕೊಂದಿರುವೆ ಇಂದು ನೀನಾಗಿಯೇ ನನ್ನ ಬಳಿ ಬಂದಿರುವೆ ನಿನ್ನನ್ನು ಕೊಂದುಬಿಡುತ್ತೇನೆ” ಎಂದನು ಅಂಗುಲಿಮಾಲ . ಶಾಂತ ಮನಸ್ಸಿನಿಂದ, ಸಮಚಿತ್ತದಿಂದ ಸಮಾಧಾನದಿಂದ ಭಗವಾನ್ ಬುದ್ಧ ಹೇಳಿದ ನನ್ನ ಕೊಲ್ಲುವ ಮೊದಲು ನೀನು ಆ ಮರದ ಕೊಂಬೆಯನ್ನು ಕತ್ತರಿಸಿ ತೋರಿಸು ಎಂದನು . ಅಂಗುಲಿಮಾಲ ಕ್ಷಣಮಾತ್ರದಲ್ಲಿ ದೊಡ್ಡ ಕೊಂಬೆಯನ್ನು ಕತ್ತರಿಸಿ ನೆಲಕ್ಕುರುಳಿಸಿದ .
ಆಗ ಬುದ್ದನು ಆ ಕತ್ತರಿಸಿದ ಕೊಂಬೆಯನ್ನು ಪುನಃ ಜೋಡಿಸಲು ಹೇಳಿದನು. ಅಂಗುಲಿಮಾಲನು “ಆ ಕೆಲಸ ನನ್ನಿಂದ ಆಗದು” ಎಂದು ಉತ್ತರಿಸಿದನು. ಆಗ ಭಗವಾನ್ ಬುದ್ಧ ಹೇಳಿದ ಜೀವತೆಗೆಯುವುದು ಸುಲಭದ ಕೆಲಸ, ಆದರೆ ತೆಗೆದ ಜೀವವನ್ನು ಮತ್ತೆ ಜೋಡಿಸಲಾಗದು ಅಂದರೆ ವಿಘಟನೆ ಅತ್ಯಂತ ಸರಳ, ಸಂಘಟನೆ ಅಥವಾ ಪುನರ್ ರಚನೆ ದುರ್ಲಭವಾದ ಕೆಲಸ. ನಮ್ಮ ಶಕ್ತಿಯನ್ನು ಧ್ವಂಸ ಮಾಡುವುದರಲ್ಲಿ ಅಥವಾ ಕೆಟ್ಟ ಕೆಲಸಗಳಲ್ಲಿ ವ್ಯಯ ಮಾಡುತ್ತೇವೆ . ನಿಜವಾಗಿಯೂ ಶಕ್ತಿ ತೋರಿಸಬೇಕಾಗಿರುವುದು ಸಂಘಟನೆಯಲ್ಲಿ , ಜೋಡಿಸುವುದರಲ್ಲಿ ಹಾಗೂ ಕೂಡಿ ಬಾಳುವುದರಲ್ಲಿ. ಬುದ್ಧನ ನುಡಿಗಳಲ್ಲಿರುವ ಆಪ್ತ ಭಾವ , ಜೀವನದ ಆದರ್ಶ, ಕಣ್ಣಿನಲ್ಲಿರುವ ಸತ್ಯ ಮತ್ತು ಪ್ರೇಮ ಅಂಗುಲಿಮಾಲನ ಮನಸ್ಸನ್ನೇ ಬದಲಿಸಿತು. ಅವನ ಹೃದಯ ಪರಿವರ್ತನೆಯಾಯಿತು. ಆತನು ತನ್ನ ಕ್ರೂರ ಕೆಲಸಗಳನ್ನು ಬಿಟ್ಟು ಬಾಳಲು ನಿರ್ಧರಿಸಿದನು. ತಪ್ಪನ್ನು ತಿದ್ದಿಕೊಂಡು ಸನ್ಮಾರ್ಗದಲ್ಲಿ ನಡೆದ. ಸನ್ನಡತೆಯಿಂದ ಮಾತ್ರವೇ ಉನ್ನತಿ ಎಂಬ ಸತ್ಯವನ್ನು ಕಂಡುಕೊಂಡ.
ಸ್ನೇಹಿತರೆ, ಇಂದು ವಿವಾಹ ಮತ್ತು ಕುಟುಂಬ ವ್ಯವಸ್ಥೆಗಳು ಅಪಸ್ವರಗಳಾಗಿ ಸಂಸ್ಕೃತಿಯ ಅವನತಿಯನ್ನು ಕಾಣುತ್ತಿದೆ .ಸ್ವಾರ್ಥ ಬುದ್ಧಿ , ಹಿಂಸೆ ಪೀಡೆಗಳು ಸಮಾಜದಲ್ಲಿ ತಾಂಡವವಾಡುತ್ತಿವೆ . ಹಿಂದೆ ಇದ್ದಂತಹ ಪ್ರೀತಿ -ವಿಶ್ವಾಸ, ಸೋದರ ಭಾವಗಳು ಕಾಣೆಯಾಗಿವೆ. ಸುಳ್ಳು, ಮೋಸ, ವಂಚನೆ ಅತ್ಯಾಚಾರ ,ಅನಾಚಾರಗಳು ಸಾಮಾನ್ಯದ ಸಂಗತಿಗಳಾಗಿವೆ. .ಸಜ್ಜನರಿಗೆ ತಮ್ಮ ಸತ್ಯ ,ಧರ್ಮ, ನ್ಯಾಯ,ನಿಷ್ಠೆಗಳನ್ನು ಪಾಲಿಸಿಕೊಂಡು ಬದುಕುವುದು ಬಹು ದುರ್ಬರವಾದಂತಹ ಕಾಲವಾಗಿದೆ. ಮನೆ, ಕಛೇರಿ, ಸೋಶಿಯಲ್ ಮೀಡಿಯಾಗಳಲ್ಲೂ ಮೋಸಹೋಗಿ ವೇದನೆ ಅನುಭವಿಸುವಂತಾಗಿದೆ. ವಿಕಾರಿ ಜನರು ಅವಹೇಳನ ಮಾಡುವುದು ಉಂಟು. ಹೀಗಿರುವಾಗ ಆಧ್ಯಾತ್ಮವೇ ಅಂತಿಮ ಗುರಿ ಎಂದು ಸಾಧಿಸ ಹೊರಟವರು ಇರುತ್ತಾರೆ. ಆತ್ಮಾವಲೋಕನ ಮಾಡಿಕೊಂಡು, ಸ್ವಯಂ ಮೋಕ್ಷಾರ್ಥಿಗಳಾಗಿ, ಸಿದ್ಧಿ ಪ್ರಾಪ್ತಿಗಾಗಿ ಸಾಧನೆ ಗೈಯ್ಯುತ್ತಾರೆ.
ಇಂತಹ ಸಾಧಕರು ಸಮಾಜದ ಸಮಸ್ಯೆಗಳನ್ನ ಕುರಿತಾದ ಒಳನೋಟ ಬೀರಿ, ವ್ಯಕ್ತಿಯ ಆಂತರಿಕ ವಿಕಸನ, ಹೃದಯ ಪರಿವರ್ತಿಸುವ ಕಾರ್ಯದಲ್ಲಿ ಕ್ರೀಯಾಶೀಲರಾಗಬಹುದಲ್ಲವೆ ! ವಿಕೃತಿಗಳಿಂದ ಮೆರೆಯುವ ಸಮಾಜದಲ್ಲಿ ಭ್ರಾತೃತ್ವಭಾವಗಳನ್ನು ಬಿತ್ತುವುದು ಅವಶ್ಯಕ. ಜನರ ಮನಸ್ಸಿನಿಂದ ದ್ವೇಷವನ್ನು ಕಿತ್ತೆಸೆಯಬೇಕು. ಎಲ್ಲರನ್ನೂ ಪ್ರೀತಿಯಿಂದ, ಗೌರವದಿಂದ, ಕಾಳಜಿಯಿಂದ ಕಾಣುವ ಮನೋಭಾವ ಬೆಳೆಸಬೇಕಿದೆ. ಪ್ರತಿಯೊಬ್ಬರ ಜೀವನದಲ್ಲಿ ಬದಲಾಗುವ ಕಾಲಘಟ್ಟ ಬಂದೇ ಬರುತ್ತದೆ. ಆಗ ಅದನ್ನು ಅಲಕ್ಷ್ಯ ಮಾಡದೆ ಸಕಾರಾತ್ಮಕ ಭಾವನೆಯಿಂದ ಪರಿವರ್ತನೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಸ್ವತ: ಬುದ್ಧನೇ ಬರಬೇಕಾದುದಿಲ್ಲ . ಯಾರದೋ ರೂಪದಲ್ಲಿ ಪ್ರೇರಣೆಯನ್ನು (ಹಿರಿಯರು, ತಂದೆತಾಯಿಯರು, ಮಕ್ಕಳು,ಸ್ನೇಹಿತ, ಭಿಕ್ಷುಕ ….ಹೀಗೆ) ಬುದ್ಧನ ವಿಚಾರಗಳನ್ನು,ಒಳ್ಳೆಯ ನಡತೆಗಳನ್ನು ತಿಳಿಸಿ ಹೇಳಬಹುದು. ಅದಕ್ಕೆ ತೆರೆದ ಮನಸ್ಸಿನಿಂದ ಸ್ವಾಗತಿಸಬಹುದಲ್ಲವೆ! ನಾವು ಮಾನವರು, ರಾಕ್ಷಸರಲ್ಲ. ದ್ವೇಷ, ದುಷ್ಕೃತ್ಯಗಳನ್ನು ತೊರೆದು ಸಾಮರಸ್ಯದಿಂದ ಜೀವಿಸಬಹುದಲ್ಲವೆ!
ಪ್ರತಿಯೊಬ್ಬರ ಜೀವನದಲ್ಲಿಯೂ ಅನೇಕ ಸಂದರ್ಭಗಳು ಎದುರಾಗುತ್ತವೆ . ಸಾಮಾಜಿಕವಾಗಿ ಕೌಟುಂಬಿಕವಾಗಿ ನೋಡಿದರೆ, ಬದುಕಿನ ಪ್ರಯಾರಿಟಿಸ್ ಬೇರೆಯಾಗಿವೆ. ಕಛೇರಿ ಮತ್ತು ಕುಟುಂಬ ಎರಡಕ್ಕೂ ಆದ್ಯತೆ ನೀಡಬೇಕು. ಗಂಡ,ಮಕ್ಕಳು,ಸೊಸೆ ಮೊಮ್ಮಕ್ಕಳು, ಅತ್ತೆ ,ಮಾವ, ತಂದೆ ,ತಾಯಿ ಎಲ್ಲರೂ ಹೊಂದಾಣಿಕೆಯಿಂದ ಇರಬೇಕೆಂದರೆ,ಎಲ್ಲರೂ ತುಸು ಪರಿವರ್ತನೆಗೆ ಒಡ್ಡಿಕೊಳ್ಳಲೇಬೇಕು . ಪರಿವರ್ತನೆ ಜಗದ ನಿಯಮವೂ ಹೌದು. ನಮ್ಮ ಸ್ವಭಾವಗಳಲ್ಲಿ, ದಿನಚರಿಯಲ್ಲಿ ತುಸು ಪರಿವರ್ತನೆ ಅತ್ಯಗತ್ಯ. ಮೊದಲಿದ್ದಂತೆ ಇಂದು ಇರಲು ಸಾಧ್ಯವಾಗುವುದಿಲ್ಲ . ಕಾಲದ ಬೇಡಿಕೆಯಂತೆ ಮನುಷ್ಯ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕಲೇಬೇಕು.ಹಾಗಾದಾಗ ಮಾತ್ರ ಬದುಕು ಸಹನೀಯ !
1 thought on “ನೀತಿ ಪ್ರತೀತಿ – ವಿಭಾ ಪುರೋಹಿತ ಅಂಕಣl ‘ಪರಿವರ್ತನೆ’ಯೆಂಬ ಔಷಧ”
ಅಂಕಣ ತುಂಬಾ ಉಪಯುಕ್ತವಾಗಿದೆ ಮೂಡಿಬರುತ್ತಿದೆ. ಅಭಿನಂದನೆಗಳು ಮೇಡಂ.