ನವೋದಯ ಸಾಹಿತ್ಯದ ದಿಗ್ಗಜರಲ್ಲೊಬ್ಬರಾದ ಆನಂದಕಂದರು ಕಾವ್ಯ, ನಾಟಕ, ಕಥೆ, ಕಾದಂಬರಿ, ಜಾನಪದ, ಸಂಶೋಧನೆ ಮತ್ತು ಪತ್ರಿಕೋದ್ಯಮದಲ್ಲಿ ಅಪಾರ ಕೆಲಸ ಮಾಡಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಮಕಾಲೀನರಾಗಿದ್ದ ಆನಂದಕಂದರು ಕನ್ನಡ ಕಥನ ಸಾಹಿತ್ಯಕ್ಕೆ ನೀಡಿದ ಕೊಡುಗೆ ತುಂಬ ದೊಡ್ಡದು. ಬಹುಶಃ ನವೋದಯ ಕಥನ ಸಾಹಿತ್ಯದಲ್ಲಿ ಮಾಸ್ತಿಯವರ ನಂತರದ ಸ್ಥಾನ ಆನಂದಕಂದರಿಗೆ ಸಲ್ಲತಕ್ಕದ್ದು. ವಿಮರ್ಶೆಯ ರಾಜಕೀಯದಿಂದಾಗಿ ಆನಂದಕಂದರ ಕಥೆಗಳಿಗೆ ಸೂಕ್ತ ನ್ಯಾಯ ಸಂದಿಲ್ಲ. ಹಿರಿಯ ವಿಮರ್ಶಕರಾದ ದಿ. ಜಿ. ಎಸ್. ಆಮೂರರನ್ನು ಹೊರತುಪಡಿಸಿ ಉಳಿದ ಯಾವ ವಿಮರ್ಶಕರೂ ಆನಂದಕಂದರ ಕಥೆಗಳತ್ತ ಲಕ್ಷ್ಯ ಹರಿಸದ್ದನ್ನು ನೋಡಿದರೆ ತುಂಬ ಆಶ್ಚರ್ಯವಾಗುತ್ತದೆ.
ಖ್ಯಾತ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ಧಾರವಾಡದ ಮನೋಹರ ಗ್ರಂಥ ಮಾಲಾ ಪ್ರಕಟಿಸಿದ ‘ನಡೆದು ಬಂದ ದಾರಿ’ ಸಂಪುಟಗಳಿಗೆ ಬರೆದ ಇತಿಹಾಸ ಪ್ರಬಂಧಗಳಲ್ಲಿ ಆನಂದಕಂದರ ಕಥೆಗಳ ಬಗ್ಗೆ ತುಂಬ ಕ್ಲುಪ್ತವಾಗಿ ಚರ್ಚಿಸಿದ್ದಾರೆ. ನವ್ಯ ವಿಮರ್ಶಕ ಜಿ. ಎಚ್. ನಾಯಕರು ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದ ‘ಕನ್ನಡ ಸಣ್ಣ ಕಥೆಗಳು’ ಪುಸ್ತಕದಲ್ಲಿ ಆನಂದಕಂದರ ಕಥೆ ಸೇರಿಸಿಲ್ಲ. ಎ. ಆರ್. ಕೃಷ್ಣಶಾಸ್ತ್ರಿಗಳ ‘ಗುರುಗಳ ಮಹಿಮೆ’ ಕಥೆಯನ್ನು ಸೇರಿಸಿದ ಅವರು ಆನಂದಕಂದರ ಒಂದೇ ಒಂದು ಕಥೆ ಸೇರಿಸದಿದ್ದುದು ಸೋಜಿಗದ ಸಂಗತಿ. ಅನುವಾದಕರಾದ ಎಸ್. ದಿವಾಕರ್ ಸಹ ‘ಶತಮಾನದ ಕನ್ನಡ ಸಣ್ಣ ಕಥೆಗಳು’ ಸಂಕಲನದಲ್ಲಿ ಆನಂದಕಂದರ ಕಥೆ ಸೇರಿಸಿಲ್ಲ. ಆನಂದಕಂದರಂತಹ ದಿಗ್ಗಜ ಲೇಖಕರ ಕಥೆಗಳನ್ನು ಅಲಕ್ಷಿಸಿರುವುದು ಕೇವಲ ಆಕಸ್ಮಿಕವಾಗಿರಲಾರದು. ಇದರ ಹಿಂದೆ ಖಂಡಿತ ಸಾಹಿತ್ಯೇತರ ಕಾರಣಗಳಿರಲೇಬೇಕು. ಒಟ್ಟಿನಲ್ಲಿ ಹೇಳುವುದಾದರೆ ಆನಂದಕಂದರ ಕಥೆಗಳ ಕುರಿತು ನಮ್ಮ ವಿಮರ್ಶಕರು ತಳೆದ ದಿವ್ಯ ನಿರ್ಲಕ್ಷ್ಯ ಅಕ್ಷಮ್ಯವಾದುದು.
ಇರಲಿ, ಪ್ರಸ್ತುತ ಲೇಖನದಲ್ಲಿ ಆನಂದಕಂದರ ‘ಮಾಲ್ಕೀ ಹಕ್ಕು’ ಕಥೆಯ ಕುರಿತು ಚರ್ಚಿಸಿದ್ದೇನೆ. ೧೯೩೯ರಲ್ಲಿ ಮೊದಲ ಮುದ್ರಣ ಕಂಡ ‘ನಮ್ಮ ಬದುಕು’ ಎಂಬ ಸಂಕಲನದಲ್ಲಿ ಈ ಕಥೆ ಸೇರಿದೆ. ಆ ಕಾಲಕ್ಕೇ ‘ಮಾಲ್ಕೀ ಹಕ್ಕು’ ಕಥೆ ಹಿಂದಿಗೆ ಅನುವಾದವಾಗಿ, ‘ಹಂಸ್’ ಎಂಬ ಹಿಂದಿ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಪ್ರಬುದ್ಧ ವಯಸ್ಸಿನ ನಿರೂಪಕ ತನ್ನ ಬಾಲ್ಯದಲ್ಲಿ ನಡೆದ ಘಟನೆಯನ್ನು ಕಥೆಯ ರೂಪದಲ್ಲಿ ಹೇಳುತ್ತಿದ್ದಾನೆ. ಇದು ನವೋದಯ ಸಾಹಿತ್ಯ ಸಂದರ್ಭದಲ್ಲಿ ತುಂಬ ಪ್ರಚಲಿತದಲ್ಲಿದ್ದ ಕಥನ ತಂತ್ರ. ಲಿಂಗಣ್ಣ ಮತ್ತು ಸಾತಮ್ಮ ಎಂಬ ರೈತ ದಂಪತಿಗಳು ನಿರೂಪಕನ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತುಬಿಟ್ಟಿದ್ದಾರೆ. ತುಂಬ ವರ್ಷಗಳ ಹಿಂದೆ ನಡೆದ ಘಟನೆಯಾದರೂ ಸಹ ಅದು ನಿರೂಪಕನ ಪ್ರಶಾಂತ ಮನಸ್ಸಿನಲ್ಲಿ ಆಗಾಗ ಹಲವು ಬಗೆಯ ಪ್ರಶ್ನೆಯ ಅಲೆಗಳನ್ನೆಬ್ಬಿಸುತ್ತದೆ.
ನಿರೂಪಕನ ಮನೆತನಕ್ಕೆ ವಿಜಯಪುರದ ಬಾದಶಾಹನಿಂದ ಉಂಬಳಿಯಾಗಿ ಬಂದ ತೋಟವನ್ನು ಬಡ ರೈತ ಲಿಂಗಣ್ಣ ಪಾಲಿಗೆ ಮಾಡುತ್ತಿದ್ದಾನೆ. ಈ ತೋಟ ನಿರೂಪಕನ ಪೂರ್ವಜರಿಗೆ ಉಂಬಳಿಯಾಗಿ ಬಂದ ಹಿನ್ನಲೆಯೇನೂ ಅಷ್ಟು ಹೆಮ್ಮೆ ಪಡುವಂತಹದಲ್ಲ. ವಿಜಯಪುರದ ಬಾದಶಹನ ಎದುರು ದಂಗೆಯೆದ್ದ ದಾಯಾದಿಯೊಬ್ಬನನ್ನು ಮೋಸದಿಂದ ಹಿಡಿದು ಕೊಟ್ಟದ್ದಕ್ಕಾಗಿ ದೊರೆತ ಇನಾಮು ಆ ತೋಟ. ಹಾಗೆ ದೊರೆತ ತೋಟವನ್ನು ಪಾಲಿಗೆ ಮಾಡುವ ಲಿಂಗಣ್ಣನ ದುಡಿಮೆಯಿಂದ ದೊರೆತ ಪ್ರತಿಫಲದ ಬಹುಪಾಲು ಸಲ್ಲುವುದು ನಿರೂಪಕನ ಮನೆತನಕ್ಕೆ. ತೋಟದಲ್ಲಿ ವರ್ಷವಿಡೀ ದುಡಿದರೂ ಲಿಂಗಣ್ಣನಿಗೆ ಮಾತ್ರ ಬಡತನ ತಪ್ಪಿದ್ದಲ್ಲ.
“ಲಿಂಗಣ್ಣನು ಬಡವನೇ ಸರಿ! ಅದೇತಕ್ಕೆಂದರೆ, ಹೆಂಡತಿ-ಮಕ್ಕಳೊಂದಿಗೆ – ವರುಷವೆಲ್ಲವೂ – ಮೈಮುರಿದು ದುಡಿದಾಗಲೆ ಆತನ ಕುಟುಂಬದ ಹೊಟ್ಟೆಗೆ ಹಿಟ್ಟು, ಮೈಗೆ ಬಟ್ಟೆ ದೊರೆಯುವುದು. ಲಿಂಗಣ್ಣನ ಆಸ್ತಿಯೆಂದರೆ ಇರುವ ಮುರುಕು ಮನೆಯೊಂದು, ಎರಡು ಎತ್ತುಗಳು, ಬೇಸಾಯಕ್ಕೆ ಬೇಕಾಗುವ ಕೆಲವು ಸಾಧನಗಳು, ಹಗ್ಗಕಣ್ಣಿಗಳು ಇವು ಎಲ್ಲವುಗಳನ್ನೂ ಮೆಟ್ಟಿ ಮೀರುವ ಆಸ್ತಿಯೆಂದರೆ – ಆತನ ಮತ್ತು ಹೆಂಡತಿ ಮಕ್ಕಳ – ಬೇಸರವಿಲ್ಲದೆ ದುಡಿಯುತ್ತಲಿರುವ ಕಷ್ಟಸಹಿಷ್ಣುತೆಯು.”
(ನಮ್ಮ ಬದುಕು, ಪುಟ ೮೭)
ತುಂಬ ಬಡವರು ಮತ್ತು ಶ್ರಮಜೀವಿಗಳಾದ ಲಿಂಗಣ್ಣನ ಕುಟುಂಬಕ್ಕೆ ಒಂದು ದಿನ ದುಡಿಯದಿದ್ದರೆ ಆ ದಿನ ಒಂದು ಹೊತ್ತು ಊಟ ಕಾಣುವುದು ಸಹ ಕಷ್ಟ ಎಂಬಂತಹ ಸ್ಥಿತಿಯಿದೆ. ನಿರೂಪಕನ ಸಮಪ್ರಾಯದವನಾದ ಲಿಂಗಣ್ಣನ ಮಗ ತೀವ್ರ ಜ್ವರದಲ್ಲಿಯೂ ಸಹ ಒಂದೆರಡು ದಿನ ಹಾಗೇ ಬಿಟ್ಟರೆ ತೋಟದ ತುಂಬ ಕಳೆ ಬೆಳೆಯುತ್ತದೆಂಬ ಆತಂಕದಿಂದ ಒಂದೇ ಸಮನೆ ಸುರಿವ ಮಳೆಯನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾನೆ. ಅವನು ನಿರೂಪಕನಲ್ಲಿ ತುಂಬ ವಿನಯದಿಂದ ತನ್ನ ಜ್ವರಕ್ಕೆ ತಾಯಿಯವರಲ್ಲಿ ಔಷಧಿ ಕೊಡಿಸಬೇಕೆಂದು ಕೇಳುತ್ತಾನೆ.
“ಲಿಂಗಣ್ಣನ ಮಗನು ನನ್ನ ಸರಿವರಯದವನು. ನಾನು ತೋಟಕ್ಕೆ ಹೋದಾಗ ಆತನು ಬಾಳೆಯ ತೋಟದಲ್ಲಿ ಕುಳಿತು ಕಳೆಯನ್ನು ತೆಗೆಯುತ್ತಿದ್ದನು. ಮೇಲೆ ಏಕಪ್ರಕಾರವಾಗಿ ಸುರಿಯುತ್ತಿರುವ ಜಡಿಮಳೆ, ಕೆಳಕ್ಕೆ ಕಿಚಿ ಕಿಚಿಯಾದ ಕೆಸರು. ತೊಟ್ಟಿದ್ದ ಅರೆದೋಳಿನ ಅಂಗಿಯು ತೊಯ್ದು ತಪ್ಪಡಿಯಾಗಿದ್ದಿತು. ಚಳಿಯಿಂದ ನಡುಕ ಹಿಡಿದು ಹಲ್ಲುಗಳು ಬಾರಿಸುತ್ತಿದ್ದವು. ಆದರೂ ಅವನು ತನ್ನ ಕಳೆಯನ್ನು ತೆಗೆಯುವ ಕೆಲಸ ನಡೆಯಿಸಿದ್ದ.”
(ಮಾಲ್ಕೀ ಹಕ್ಕು, ಪುಟ ೮೮)
“ರಾಯರ! ಅವ್ವನವರಿಗೆ ಹೇಳಿ, ಉರೀಗೆ ಔಸಧಾ ಕೊಡಸರೀ!”
“ಉರಿಯ ಔಷಧ ಯಾರಿಗೋ?’
“ನನಗನ್ರೀ! ನಾಕೈದು ದಿನಾ ಆತು, ಉರೀ ಚಳೀ ಬರಲಾಕ ಹತ್ತೆಯ್ತಿ. ನಿನ್ನೆ ರಾತ್ರಿ ಉರಿ ಬಂದು ಬಿದ್ದರ ಮೈಮ್ಯಾಗ ಎಚ್ಚರ ಕೂಡ ಇದ್ದಿಲ್ಲ ನೋಡ್ರಿ!”
(ಮಾಲ್ಕೀ ಹಕ್ಕು, ಪುಟ ೮೮-೮೯)
ನಿರೂಪಕ ಇಂತಹ ಜ್ವರದಲ್ಲಿ, ಮಳೆಯಲ್ಲೇಕೆ ಕೆಲಸ ಮಾಡುತ್ತಿದ್ದೀಯ ಎಂದು ಕೇಳಿದ್ದಕ್ಕೆ ಆ ಹುಡುಗ ಕೊಡುವ ಉತ್ತರ ಅವನ ವಯಸ್ಸಿಗೆ ಮೀರಿದ್ದಾದರೂ ಸಹ ಅದು ಅವನು ತನ್ನ ಜೀವನಾನುಭವದ ಮೂಲಕ ಕಲಿತ ಪಾಠದಿಂದ ಬಂದ ಸಹಜ ಉತ್ತರ. ಬಡತನ, ಅಸಹಾಯಕತೆ ಮತ್ತು ಪರಾವಲಂಬನೆ ಮಕ್ಕಳು ಬಹು ಬೇಗ ಪ್ರಬುದ್ಧರಾಗುವಂತೆ ಮಾಡುತ್ತವೆ ಎಂಬ ಮಾತು ಖಂಡಿತವಾಗಿಯೂ ಸತ್ಯ.
ಒಂದು ಬಾರಿ ತೋಟ ಸುತ್ತಲೆಂದು ಮನೆಯವರೆಲ್ಲ ಹೋದಾಗ ನಿರೂಪಕನ ಪುಟ್ಟ ತಂಗಿಯ ಬಂಗಾರದ ಬಳೆ ಕಾಣದಾಗುತ್ತದೆ. ಆ ಪುಟ್ಟ ಮಗುವನ್ನು ಎತ್ತಿಕೊಂಡು ತಿರುಗಿದ ಸಾತಮ್ಮನ ಮೇಲೇ ಎಲ್ಲರ ಸಂಶಯ. ಬಾವಿಕಟ್ಟೆಯ ಬಳಿ ಮರೆತಿದ್ದ ಬಂಗಾರದ ಬಳೆಯನ್ನು ಸಾತಮ್ಮನೇ ತಂದು ಕೊಟ್ಟಾಗ ಅವರ ಸಂಶಯ ತೀರುತ್ತದೆ. ತಮಿಳಿನ ದಾರ್ಶನಿಕ ಕವಿ ತಿರುವಳ್ಳುವರ್ ಹೇಳುವಂತೆ ಹಣವಿಲ್ಲದವನಿಗೆ ಈ ಲೋಕದಲ್ಲಿ ಬೆಲೆಯಿಲ್ಲ. ‘ಇದ್ದ ಮೂವರಲ್ಲಿ ಕದ್ದವರಾರು ಎಂದರೆ ಹರಕು ಸೀರೆಯುಟ್ಟವಳು” ಎಂಬ ಮಾತಿನಂತೆ ಎಷ್ಟೇ ಪ್ರಾಮಾಣಿಕರಾದರೂ ಬಡವರು ಅಡಿಗಡಿಗೆ ಇಂತಹ ಸಂಶಯಗಳನ್ನೆದುರಿಸಬೇಕಾಗುತ್ತದೆ.
ತೋಟದಲ್ಲಿ ಯಥೇಚ್ಛವಾಗಿ ಕಾಯಿಪಲ್ಲೆ ಬೆಳೆದರೂ ಅದನ್ನು ಬಳಸುವವರು ನಿರೂಪಕನ ಮನೆಯವರೇ ಹೊರತು ಅದನ್ನು ಕಷ್ಟಪಟ್ಟು ಬೆಳೆದ ಲಿಂಗಣ್ಣನ ಮನೆಯವರಲ್ಲ. ಅವರಿಗೆ ಜೋಳದ ರೊಟ್ಟಿ, ನುಚ್ಚೇ ಗತಿ. ಅದರ ಜೊತೆಗೆ ನಿರೂಪಕನ ಮನೆಯವರ ಮನಸ್ಸಿನಲ್ಲಿ ಅವರನ್ನು ಕಂಡರೆ ಊಳಿಗದವರೆಂಬ ತಾತ್ಸಾರ ಬೇರೆ ಇರುತ್ತದೆ.
“ತೋಟದಲ್ಲಿ ರಾಶಿರಾಶಿಯಾಗಿ ಕಾಯಿಪಲ್ಲೆ ಬೆಳೆಯುತ್ತಿದ್ದಿತು! ನಮ್ಮ ಮನೆಗೆ ಅದರ ಉಪಯೋಗ ಬೇಕಾದಷ್ಟು ಆಗುತ್ತಿದ್ದಿತು. ಲಿಂಗಣ್ಣನವರ ಮನೆಯ ಊಟವನ್ನು ನಾನು ಎಷ್ಟೋ ಸಲ ನೋಡಿದ್ದೆನಲಾ, ಜೋಳದ ರೊಟ್ಟಿ, ನುಚ್ಚು, ಕಾರ, ಈರುಳ್ಳಿ ಇವಿಷ್ಟೇ! ಕಾಯಿಪಲ್ಲೆಗಳ ಮಾರಾಟದಿಂದ ನಡುನಡುವೆ ದುಡ್ಡೇನಾದರೂ ಬಂದರೆ, ‘ಗೊಬ್ಬರಕ್ಕೆ ಬೇಕು’, ‘ಬಿತ್ತುವ ಬೀಜಕ್ಕೆ ಬೇಕು’, ‘ಎತ್ತಿನ ಹೊಟ್ಟೆಯ ಕಾಳಿಗೆ ಬೇಕು’ ‘ಮೊಟ್ಟೆಯ ಚರ್ಮಕ್ಕೆ ಬೇಕು’ ಎಂದು ಗಂಟು ಹಾಕಿ ಇಡುವುದರಲ್ಲಿಯೇ ಲಿಂಗಣ್ಣನಿಗೆ, ಸಾತಮ್ಮನಿಗೆ ಸಮಾಧಾನ. ಬಾದಶಹನಿಗೆ ಸಹಾಯ ಮಾಡಿ, ನಮ್ಮ ಪೂರ್ವಜರು ಪಡೆದ ಭೂಮಿಗೆ ನಾವಿಂದು ಒಡೆಯರಾಗಿ, ಕೈ ಕೆಸರು ಮಾಡಿಕೊಳ್ಳದೆ ಕುಳಿತಲ್ಲಿಯೇ ಮೊಸರನ್ನವನ್ನು ಉಣ್ಣುತ್ತಿದ್ದೆವು. ಅಲ್ಲದೆ ಲಿಂಗಣ್ಣನು ನಮ್ಮ ಸೇವಕನೆಂಬ ಕೀಳ್ನೋಟಕ್ಕೆ – ನಮ್ಮೆಲ್ಲರ ಹೃದಯದಲ್ಲಿಯೂ – ಇಂಬುಗೊಟ್ಟಿದ್ದೆವು.”
(ಮಾಲ್ಕೀ ಹಕ್ಕು, ಪುಟ ೯೧)
ಶ್ರಾವಣದ ಕೊನೆಯ ಸೋಮವಾರ ನಡೆಯುವ ಸಂಗನಬಸವಣ್ಣನ ಜಾತ್ರೆಯ ಪ್ರಯುಕ್ತ ಊರಿಗೆ ಊರೇ ಸಂಭ್ರಮದಲ್ಲಿ ಮುಳುಗಿದೆ. ಆದರೆ ಲಿಂಗಣ್ಣನ ಮಕ್ಕಳ ಮುಖದಲ್ಲಿ ಮಾತ್ರ ಜಾತ್ರೆಯ ಯಾವ ಸಂತೋಷವೂ ಇಲ್ಲ. ಊರಿನ ಮಕ್ಕಳೆಲ್ಲ ಜಾತ್ರೆಯಲ್ಲಿ ಹೊಸ ಬಟ್ಟೆ ತೊಟ್ಟು ಮೆರೆದರೆ ಅವರಿಗೆ ಹಳೆಯ ಹರಕು ಬಟ್ಟೆಗಳೇ ಗತಿ. ಇದನ್ನೆಲ್ಲ ನೋಡಲಾಗದೆ ಸಾತಮ್ಮ ಗಂಡನಿಗೂ ಕೂಡ ತಿಳಿಯದಂತೆ ನಾಲ್ಕು ಬಾಳೆಗೊನೆಗಳನ್ನು ಕೊಯ್ದು ಮಾರಾಟ ಮಾಡಿ, ಅದರಿಂದ ದೊರೆತ ದುಡ್ಡಿನಲ್ಲಿ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುತ್ತಾಳೆ. ಭಾಡಿಗೆ ಬಂಡಿಯ ಬಸಪ್ಪನಿಂದ ಈ ವಿಷಯ ತಿಳಿದ ನಿರೂಪಕನ ತಂದೆ ಕ್ರುದ್ಧನಾಗುತ್ತಾನೆ.
ಲಿಂಗಣ್ಣನನ್ನು ಕರೆಸಿ ವಿಚಾರ ಮಾಡಿದಾಗ ಅವನಿಗೆ ಬಾಳೆಗೊನೆ ಮಾರಾಟದ ವಿಷಯವೇ ಗೊತ್ತಿರುವುದಿಲ್ಲ. ಸಾತಮ್ಮ ತಾನು ಹೇಗೆ ಮತ್ತು ಏಕೆ ಅನಿವಾರ್ಯವಾಗಿ ಹೇಳದೆ ಕೇಳದೆ ಬಾಳೆಗೊನೆ ಮಾರಾಟ ಮಾಡಬೇಕಾಯ್ತೆಂದು ಪರಿಪರಿಯಾಗಿ ತಿಳಿ ಹೇಳಿ ಕ್ಷಮೆ ಕೇಳಿದರೂ ಸಹ ನಿರೂಪಕನ ತಂದೆಯ ಮನಸ್ಸು ಕರಗುವುದಿಲ್ಲ. ಕೇವಲ ಒಂದು ಬಾರಿ ಹೇಳದೆ ಕೇಳದೆ ಬಾಳೆಗೊನೆ ಕೊಯ್ದು ಮಾರಿದ ಅವರನ್ನು ಕಳ್ಳರೆಂದು ಜರೆದು, ಅವರಿಂದ ತೋಟವನ್ನು ಕಿತ್ತುಕೊಳ್ಳಲಾಗುತ್ತದೆ. ಲಿಂಗಣ್ಣ ಮತ್ತು ಸಾತಮ್ಮ ಕಳ್ಳತನದ ಅಪವಾದ ಹೊತ್ತು, ಕೇವಲ ಎರಡು ರೂಪಾಯಿಗೆ ಅದರ ಹತ್ತರಷ್ಟು ದಂಡ ಕಟ್ಟಿ, ತೋಟದಿಂದ ಹೊರದೂಡಲ್ಪಟ್ಟು ನಿರಾಶ್ರಿತರಾಗುತ್ತಾರೆ. ಅದು ನಿಜಕ್ಕೂ ಕಳ್ಳತನವೇ? ಅವರು ಮಾಡಿದ್ದು ಸರಿಯೇ? ಅವರು ಕಷ್ಟಪಟ್ಟು ಬೆಳೆದ ಬಾಳೆಗೊನೆ ಮಾರಲು ಅವರಿಗೆ ಹಕ್ಕಿಲ್ಲವೇ? ಎಂಬ ಹಲವು ಪ್ರಶ್ನೆಗಳು ನಿರೂಪಕನ ಮನದಲ್ಲೇಳುತ್ತವೆ.
“ಹಿಂದೆ ಎಂದೋ ಒಂದು ಕಾಲದಲ್ಲಿ ನಮ್ಮ ಪೂರ್ವಜರು, ಸ್ವಾತಂತ್ರ್ಯ ಪ್ರೀತಿಯ ದಾಯಾದಿಯೊಬ್ಬನನ್ನು ಸೆರೆ ಹಿಡಿದು ಕೊಟ್ಟರು. ಅದಕ್ಕಾಗಿ ಜಗತ್ತು ಹುಟ್ಟುವಾಗಲೇ ಹುಟ್ಟಿದ್ದ ಈ ತೋಟದ ನೆಲವನ್ನು – ಇನ್ನಾವ ದೇಶದಿಂದಲೋ ಬಂದ – ಬಾದಶಾಹನು ಅವರಿಗೆ ಇನಾಮಾಗಿ ಕೊಟ್ಟ. ಆ ಪೂರ್ವಜರ ರಕ್ತಸಂಬಂಧಿಕರೆಂದು ಆ ನೆಲದ ಪೂರ್ಣ ಮಾಲ್ಕೀ ಹಕ್ಕು ನಮಗೆ ಬಂದಿತು. ಆದರೆ ಬಿಸಿಲೆನ್ನದೆ, ಬಿರುಗಾಳಿಯನ್ನದೆ, ಮಳೆಯೆನ್ನದೆ, ಚಳಿಯನ್ನದೆ, ಹಗಲಿರುಳೂ ಕಷ್ಟ ಪಟ್ಟು ದುಡಿದು ಬೆಳೆಯಿಸಿದ ಲಿಂಗಣ್ಣನ ಕುಟುಂಬದವರು, ಒಂದೆರಡು ಬಾಳೆಯ ಗೊನೆಗಳಿಗೂ ಹಕ್ಕುದಾರರಾಗುವಂತಿಲ್ಲವೇ? ತನ್ನ ಹೊಟ್ಟೆಯ ಕರುಳುಗಳ ಮೈಯನ್ನು ಮುಚ್ಚುವುದಕ್ಕೆ, ಸಾತಮ್ಮನು ತನ್ನ ದುಡಿತದ ಫಲವನ್ನು ಉಪಯೋಗಿಸಿದ ಮಾತ್ರಕ್ಕೆ ಅದನ್ನು ಕಳವು ಎಂದು ಕರೆಯಬಹುದೆ?”
(ಮಾಲ್ಕೀ ಹಕ್ಕು, ಪುಟ ೯೭)
ನಿರೂಪಕನ ಬಾಲ್ಯದಲ್ಲಿ ನಡೆದ ಈ ಘಟನೆಗೆ ಅವನು ಸಾಕ್ಷಿಭೂತನಾಗಿದ್ದಾನೆ. ಎಷ್ಟೋ ವರ್ಷಗಳು ಕಳೆದ ನಂತರವೂ ಅಂದು ತನ್ನ ಮನೆಯವರು ಲಿಂಗಣ್ಣ ಮತ್ತು ಸಾತಮ್ಮರೊಂದಿಗೆ ನಡೆದುಕೊಂಡ ರೀತಿ ತುಂಬ ಕ್ರೂರವಾಗಿತ್ತೆಂಬ ತೀವ್ರ ಕಳವಳವೂ ಅವನ ಮನಸ್ಸಿನಲ್ಲಿದೆ. ಹಾಗೆ ನೋಡಿದರೆ ಕಷ್ಟ ಪಟ್ಟು ದುಡಿಯುವ ಲಿಂಗಣ್ಣ ಮತ್ತು ಸಾತಮ್ಮರೇ ಆ ತೋಟದ ನಿಜವಾದ ಹಕ್ಕುದಾರರು ಆದರೆ ಮಾಲ್ಕೀ ಹಕ್ಕು ನಿರೂಪಕನ ಕುಟುಂಬದ್ದು. ಜಮೀನ್ದಾರಿ ವ್ಯವಸ್ಥೆಯೇ ಅಂತಹುದು. ಏನೂ ದುಡಿಯದೆ ಆರಾಮಾಗಿ ಕುಳಿತು ಉಣ್ಣುವ ನಿರೂಪಕನ ಮನೆಯವರು ಭಾಗ್ಯಚಕ್ರದಲ್ಲಿ ಮೇಲಿದ್ದರೆ, ಕಷ್ಟಪಟ್ಟು ಬೆವರು ಸುರಿಸಿ ದುಡಿಯುವ ಲಿಂಗಣ್ಣನ ಮನೆಯವರು ಭಾಗ್ಯಚಕ್ರದಲ್ಲಿ ತೀರ ಕೆಳಗಿದ್ದಾರೆ.
ಪ್ರಬುದ್ಧನಾದ ನಿರೂಪಕನ ಮನಸ್ಸಿನಲ್ಲಿ ಸ್ವಗತದಂತೆ ನಡೆಯುವ ಈ ವಿಚಾರ ಮಂಥನ ಹಲವು ಪ್ರಶ್ನೆಗಳನ್ನೆತ್ತುತ್ತದೆ. ತೀರ ವಿಚಿತ್ರ ಸಂದರ್ಭದಲ್ಲಿ ದಾಯಾದಿಗೆ ದ್ರೋಹ ಬಗೆದು ಆಸ್ತಿ ಗಳಿಸಿದ ಅವನ ಪೂರ್ವಜರ ಮೂಲಕ ಬಂದದ್ದು ಈ ಮಾಲ್ಕೀ ಹಕ್ಕು. ಅದರ ಕುರಿತು ನಿರೂಪಕನಿಗೆ ತುಂಬ ಖೇದವಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಲಿಂಗಣ್ಣ ಮತ್ತು ಸಾತಮ್ಮರನ್ನು ಹೇಳದೆ ಕೇಳದೆ ಬಾಳೆಗೊನೆ ಮಾರಾಟ ಮಾಡಿದ್ದಕ್ಕಾಗಿ ಕಳ್ಳರೆಂದು ಕರೆದು, ತೋಟ ಕಿತ್ತುಕೊಂಡದ್ದಕ್ಕಾಗಿ ಅವನು ನೇರವಾಗಿ ಜವಾಬ್ದಾರನಲ್ಲವಾದರೂ ಸಹ ತನ್ನ ಕುಟುಂಬದಿಂದ ನಡೆದ ಕ್ರೌರ್ಯದ ಬಗೆಗೆ ಅವನಿಗೆ ತುಂಬ ನೋವಿದೆ. ನಿರೂಪಕ ಚಿಕ್ಕವನಾಗಿದ್ದಾಗ ಅವನ ಮನೆಯವರು ಲಿಂಗಣ್ಣನ ಕುಟುಂಬಕ್ಕೆ ಎಸಗಿದ ಕ್ರೌರ್ಯಕ್ಕೆ ಈಗಲೂ ಅವನಿಗೆ ಪಾಪಪ್ರಜ್ಞೆ ಕಾಡುತ್ತಿದೆ. ಅಂದು ತನ್ನ ಮನೆಯವರು ಮಾಡಿದ ಕ್ರೂರ ಕೃತ್ಯಕ್ಕಾಗಿ ಈಗ ಅವನು ಪಶ್ಚಾತ್ತಾಪ ಪಡುತ್ತಿದ್ದಾನೆ.
ಆನಂದಕಂದರು ‘ಮಾಲ್ಕೀ ಹಕ್ಕು’ ಕಥೆಯಲ್ಲಿ ಜಮೀನ್ದಾರಿ ವ್ಯವಸ್ಥೆಯಲ್ಲಿ ಶೋಷಣೆಗೊಳಗಾಗುವ ಬಡ ರೈತ ಕುಟುಂಬವೊಂದರ ದುರಂತದ ಜೀವಂತ ಚಿತ್ರಣವನ್ನು ತುಂಬ ಅದ್ಭುತವಾಗಿ ತಂದಿದ್ದಾರೆ. ಭಾವೋದ್ವೇಗಕ್ಕೊಳಗಾಗಬಹುದಾದ ಸನ್ನಿವೇಶಗಳನ್ನು ಸಹ ಅವರು ತುಂಬ ಸಂಯಮದಿಂದ ನಿರ್ವಹಿಸಿದ್ದಾರೆ. ತುಂಬ ಸರಳವಾಗಿ ಮತ್ತು ನಿರುದ್ವಿಗ್ನವಾಗಿ ಕಥೆ ಹೇಳುವ ಆನಂದಕಂದರು ತಮ್ಮ ಕಥೆಯ ಮೂಲಕ ಹೊರಡಿಸುವ ಅರ್ಥ ಮಾತ್ರ ತುಂಬ ಗಹನವಾದುದು. ಮೇಲ್ನೋಟಕ್ಕೆ ಮಾಸ್ತಿಯವರಂತೆ ನಿರೂಪಕನ ಮೂಲಕ ಸರಳವಾಗಿ ಕಥೆ ಹೇಳುವಂತೆ ಕಂಡರೂ ಸಹ ಅದು ನಿರೂಪಕನ ಮನಸ್ಸಿನಲ್ಲಿ ನಡೆಯುವ ಸ್ವಗತದಂತಿದೆ. ನಿರೂಪಕನ ಮನಸ್ಸಿನಲ್ಲಿ ನಡೆಯುವ ಸುದೀರ್ಘ ಮಂಥನದ ಮೂಲಕ ಅವನ ಸುಪ್ತ ಮನಸ್ಸಿನಲ್ಲಿ ಅಡಗಿರಬಹುದಾದ ಪಾಪಪ್ರಜ್ಞೆ ಮತ್ತು ಅದರ ಕುರಿತ ಪಶ್ಚಾತ್ತಾಪವನ್ನು ಸಹ ಸೂಕ್ಷ್ಮವಾಗಿ ದಾಖಲಿಸುವಲ್ಲಿ ಆನಂದಕಂದರು ಯಶಸ್ವಿಯಾಗಿದ್ದಾರೆ.
ಸಾರ್ವಕಾಲಿಕ ಸಮಸ್ಯೆಯಾದ ಶೋಷಣೆಯ ಕುರಿತ ‘ಮಾಲ್ಕೀ ಹಕ್ಕು’ ಒಂದು ವಿಶಿಷ್ಟ ಮತ್ತು ಯಶಸ್ವಿ ಕಥೆ. ಕನ್ನಡದಲ್ಲಿ ಬಂದ ಕೋರಡ್ಕಲ್ ಶ್ರೀನಿವಾಸರಾಯರ ‘ಧನಿಯರ ಸತ್ಯನಾರಾಯಣ’, ಕುವೆಂಪು ಅವರ ‘ಸಾಲದ ಮಗು’ ಬೆಸಗರಹಳ್ಳಿ ರಾಮಣ್ಣನವರ ‘ಚೆಲುವನ ಪರಂಗಿ ಗಿಡಗಳು’ ಮತ್ತು ಮಲಯಾಳಂ ಲೇಖಕ ವೈಕಂ ಮಹಮ್ಮದ್ ಬಷೀರರ ‘ಭೂಮಿಯುಡೆ ಅವಕಾಶಿಗಳ್’ ಕಥೆಗಳೊಂದಿಗೆ ‘ಮಾಲ್ಕೀ ಹಕ್ಕು’ ಕಥೆಗೆ ಅಂತಃಸಂಬಂಧವಿದೆ. ಈ ಎಲ್ಲ ಕಥೆಗಳ ಜೊತೆಗೆ ‘ಮಾಲ್ಕೀ ಹಕ್ಕು’ ಕಥೆಯನ್ನಿಟ್ಟುಕೊಂಡು ತೌಲನಿಕ ಅಭ್ಯಾಸ ಮಾಡಿದಾಗ ‘ಮಾಲ್ಕೀ ಹಕ್ಕು’ ಕಥೆಯ ಮಹತ್ವ ಇನ್ನೂ ಸ್ಪಷ್ಟವಾಗಿ ಮತ್ತು ಸ್ಫುಟವಾಗಿ ಗೊತ್ತಾಗುತ್ತದೆ. ಎಲ್ಲ ಕಾಲಕ್ಕೂ ಪ್ರಸ್ತುತವಾಗುವಂತಿರುವ ಆನಂದಕಂದರ ‘ಮಾಲ್ಕೀ ಹಕ್ಕು’ ಕನ್ನಡದ ಮಹತ್ವದ ಕಥೆಗಳಲ್ಲೊಂದು.
4 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಆನಂದಕಂದರ ‘ಮಾಲ್ಕೀ ಹಕ್ಕು’”
ಆನಂದಕ ಕಂದರ ಮಾಲ್ಕೀ ಹಕ್ಕು ಕತೆ ಯ ವಿ ಶ್ಲೇಷಣೆಯ ಮೂಲಕ ಆಹಿರಿಯರಸಂವೇದನಾಶೀಲ ಮನಸ್ಸನ್ನು ನೆನಪು ಮಾಡಿದ ವಿಕಾಸ ರಿಗೆ ಧನ್ಯವಾದಗಳು.
ಆನಂದಕಂದರನ್ನು ವಿಮರ್ಶಕರು ಅಷ್ಟೊಂದು ನಿರ್ಲಕ್ಷಿಸಿರುವದು ಅಕ್ಷಮ್ಯ. ಈಗಲಾದರೂ ಆನಂದಕಮದರ ಸಾಹಿತ್ಯಕ್ಕೆ ಅರ್ಹ ನ್ಯಾಯವನ್ನು ಒದಗಿಸುವ ಕಾರ್ಯ ಆಗಬೇಕಿದೆ.
ತಾವು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವದು ಶ್ಲಾಘನೀಯ.
ಅರ್ಥಪೂರ್ಣ
ಆನಂದ ಕಂದರನ್ನು ಮತ್ತೊಮ್ಮೆ ನೆನಪಿಸಿದ್ದಕ್ಕೆ ಧನ್ಯವಾದಗಳು ಸರ್