ಕೃತಿ: ‘ಬಹುಮುಖಿ ‘
ಲೇಖಕ: ಮನೋಹರ ತೋನ್ಸೆ
ಪ್ರಕಾಶಕರು: ಅಭಿಜಿತ್ ಪ್ರಕಾಶನ, ಮುಂಬೈ
ಬೆಲೆ: ರೂ . 100
ಹೊರರಾಷ್ಟ್ರದಲ್ಲಿದ್ದು ಸಾಂಸ್ಕೃತಿಕ ನಾಯಕರಾಗಿ, ಲೇಖಕರಾಗಿ ಮಿಂಚಿದ ಸಾಧಕರಲ್ಲಿ ಮನೋಹರ ತೋನ್ಸೆ ಅವರೂ ಒಬ್ಬರು.ಅವರ ಹೊಸ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ. ಅವರಿಗೆ ಅಭಿನಂದನೆಗಳು, ಶುಭಾಶಯಗಳು.
ಮನೋಹರ ತೋನ್ಸೆ ಅವರದು ನಾನಾ ಬಗೆಯ ವ್ಯಕ್ತಿತ್ವ. ಅವರು ಮುಂಬೈ ಹಾಗೂ ದುಬೈನ ತುಳು ಕನ್ನಡಿಗರಿಗೆ ಚಿರಪರಿಚಿತರು. ಹಿರಿಯ ಬ್ಯಾಂಕ್ ಅಧಿಕಾರಿಯಾಗಿ,ಹವ್ಯಾಸಿ ಪತ್ರಕರ್ತರಾಗಿ, ಸಂಘಟಕರಾಗಿ, ಲೇಖಕರಾಗಿ, ಸಮಾಜ ಸೇವಕರಾಗಿ ಭಿನ್ನ ವಿಭಿನ್ನ ಬಗೆಯ ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ನಿರತರಾಗಿರುವ ತೋನ್ಸೆ ಅವರು ಉತ್ಕಟ ಕನ್ನಡಾಭಿಮಾನಿ.ಸಾಹಿತ್ಯ, ಸಂಗೀತ ಹಾಗೂ ಆಧ್ಯಾತ್ಮ ಅವರ ಆಸಕ್ತಿಯ ಕ್ಷೇತ್ರಗಳು.ದೂರದ ದುಬೈಯಲ್ಲಿ ಕನ್ನಡ, ತುಳು ಕಟ್ಟುವ ಕೈಂಕರ್ಯದಲ್ಲಿ ಸಕ್ರಿಯರಾಗಿರುವ ಮನೋಹರ ಅವರು ಮುಂಬೈಯಲ್ಲಿ ಅರಳಿದ ಪ್ರತಿಭೆ.ಶ್ರಮ ಸಂಸ್ಕೃತಿಯ ಹಿನ್ನೆಲೆಯಿಂದ ಬಂದ ಅವರು ತಮ್ಮನ್ನು ತಾವು ರೂಪಿಸಿಕೊಂಡವರು. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರಿಗೆ ಸಾಹಿತ್ಯದಲ್ಲಿ ವಿಶೇಷವಾದ ಆಸ್ಥೆ. ಏನೇನೋ ಓದಿನ ಪರಿ ಲೇಸು ಲೇಸು ಎಂಬ ಕವಿವಾಣಿಯನ್ನು
ಮನೋಹರ ಅವರು ಮೈಗೂಡಿಸಿಕೊಂಡವರು. ದುಬೈನ ವಾಣಿಜ್ಯ ವ್ಯವಹಾರ ಪ್ರಪಂಚದಲ್ಲಿ ಅವರು ಕಳೆದುಹೋದವರಲ್ಲ. ಒಳ್ಳೆಯ ಕೃತಿಗಳನ್ನು ಓದಿ ಅವುಗಳ ಸಾರ ಸತ್ವಗಳನ್ನು ಲೋಕಮುಖಕ್ಕೆ ಪರಿಚಯಿಸುತ್ತಾ ಬಂದಿರುವುದು ಉಲ್ಲೇಖನೀಯ ಅಂಶ.ದುಬೈಯ ಕನ್ನಡ ಚಟುವಟಿಕೆಗಳನ್ನು ವಿವಿಧ ಪತ್ರಿಕೆಗಳ ಮೂಲಕ ಅವರು ಜಗದಗಲ ಪರಿಚಯಿಸುತ್ತಾ ಬಂದ ಪತ್ರಕರ್ತ.
ನೇರ ನಡೆ ನುಡಿಗೆ ಹೆಸರಾಗಿರುವ ಮನೋಹರ ತೋನ್ಸೆ ಅವರನ್ನು ನಾನು ಮೂರು ದಶಕಗಳಿಂದ ಹತ್ತಿರದಿಂದ ಬಲ್ಲೆ. ಅವರು ಮುಂಬೈ ವಿವಿ ಕನ್ನಡ ವಿಭಾಗದ ಹೆಮ್ಮೆಯ ಸಾಧಕರು. ನಮ್ಮ ವಿಭಾಗದ ಬಗೆಗೆ ಅವರಿಗೆ ವಿಶೇಷವಾದ ಅಭಿಮಾನ.ದುಬೈಯಿಂದ ಮುಂಬೈಗೆ ಬಂದಾಗಲೆಲ್ಲ ಅವರು ತಪ್ಪದೇ ವಿಭಾಗಕ್ಕೆ ಬಂದು ಇಲ್ಲಿನ ಕನ್ನಡ ಚಟುವಟಿಕೆಗಳನ್ನು ಕಂಡು ವಿದ್ಯಾರ್ಥಿಗಳನ್ನು ಮಾತಾಡಿಸಿ ಅವರನ್ನು ಹುರಿದುಂಬಿಸಿ ಹೋಗುವ ಪರಿಪಾಠ ಎಷ್ಟೋ ವರ್ಷಗಳಿಂದ ನಡೆದುಬಂದಿದೆ. ಮನೋಹರ ಅವರು ನಿಜ್ವಾಗ್ಲೂ ಕನ್ನಡ ಸೇನಾನಿ. ಮೂರು ದಶಕಗಳಿಂದ ಅವರು ಗಲ್ಫ್ ರಾಷ್ಟ್ರಗಳಲ್ಲಿ ಮಾಡಿಕೊಂಡು ಬಂದಿರುವ ಕನ್ನಡ ಸೇವೆ ಗಮನಾರ್ಹವಾದುದು.
ಮನೋಹರ ಅವರು ಒಳ್ಳೆಯ ಸಹೃದಯ ಚಿಂತಕರು, ಲೇಖಕರು.ತಾವು ಓದಿದ ಕೃತಿಗಳ ಕಿರು ಸಮೀಕ್ಷೆ ಮಾಡಿ ಪ್ರಕಟಿಸಿ ಲೇಖಕರನ್ನು ಅವರು ಸದಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.ಗಲ್ಫ್ ಪ್ರಾಂತದಲ್ಲಿನ ತುಳು ಕನ್ನಡಿಗರ ಸಾಹಸ ಸಾಧನೆಗಳನ್ನು ಅವರು ತಮ್ಮ ಬರವಣಿಗೆಯಲ್ಲಿ ದಾಖಲಿಸಿರುವುದು ಚಾರಿತ್ರಿಕವಾಗಿ ಮಹತ್ವದ ಸಂಗತಿ.
ಪ್ರಸ್ತುತ ಮನೋಹರ ತೋನ್ಸೆ ವಿರಚಿತ ಬಹುಮುಖಿ ಕೃತಿ ವೈವಿಧ್ಯಮಯವಾದ ಬರವಣಿಗೆಯಿಂದ ನಮ್ಮ ಗಮನ ಸೆಳೆಯುತ್ತದೆ.ತಾವು ಓದಿದ ಭಿನ್ನ ವಿಭಿನ್ನವಾದ ಹದಿನೇಳು ಕನ್ನಡ ಸಾಹಿತ್ಯ ಕೃತಿಗಳ ಸಾರಸತ್ವಗಳನ್ನು ಸರಳ ಸುಂದರವಾಗಿ ಇಲ್ಲಿ ವಿಶ್ಲೇಷಣೆ ಗೊಳಪಡಿಸಿದ್ದಾರೆ.ಸಾಹಿತ್ಯ, ಸಂಸ್ಕೃತಿ, ಪರಂಪರೆ, ಇತಿಹಾಸ ಮೊದಲಾದ ವಿಷಯಗಳಿಗೆ ಸಂಬಂಧಪಟ್ಟ ಒಟ್ಟು 28 ಲೇಖನಗಳು ಮನೋಹರ ಅವರ ಪ್ರತಿಭೆ, ಓದು, ಅನುಭವಗಳಿಗೆ ಕನ್ನಡಿ ಹಿಡಿಯುತ್ತವೆ.ಸಹೃದಯ ಲೇಖಕರಾದ ಮನೋಹರ ಅವರ ಸೂಕ್ಷ್ಮ ದೃಷ್ಟಿಕೋನಕ್ಕೆ ಈ ಕೃತಿ ಉತ್ತಮ ನಿದರ್ಶನ.ಕೊಲ್ಲಿ ರಾಷ್ಟ್ರ, ದುಬೈ, ಅಬುದಾಭಿ ಮೊದಲಾದ ಕಡೆಗಳಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಪರಿಚಾರಿಕೆಯನ್ನು ಲೋಕಮುಖಕ್ಕೆ ಪರಿಚಯಿಸಿರುವುದು ಇಲ್ಲಿ ಅವಲೋಕನೀಯವಾಗಿದೆ.ಈ ಕೃತಿಯನ್ನು ಅಭಿಜಿತ್ ಪ್ರಕಾಶನದ ಮೂಲಕ ಹೊರತರಲು ಅನುವು ಮಾಡಿಕೊಟ್ಟ ಅವರಿಗೆ ವಿಶೇಷ ವಂದನೆಗಳು.
*ಡಾ. ಜಿ. ಎನ್. ಉಪಾಧ್ಯ.