“ಮಾಮಾ… ಈ ಮರಕ್ಕೆ ನನ್ನಷ್ಟೇ ವಯಸ್ಸಾಗಿದೆ ಅಂತ ಅಮ್ಮ ಹೇಳ್ತಾಳೆ. ಹಾಗಿದ್ರೆ ನಾನು ಮಾತ್ರ ಯಾಕೆ ಚಿಕ್ಕವನಾಗಿ ಬಿಟ್ಟೆ?”
ಪೇರಳೆ ಹಣ್ಣನ್ನು ಕಚ್ಚಿ ತಿನ್ನುತ್ತಾ ಪುಟ್ಟ ಪ್ರಶ್ನಿಸಿದ. ಪಕ್ಕದಲ್ಲಿ ನಿಂತಿದ್ದ ಭಾಸ್ಕರನು ಅವನ ತಲೆಯನ್ನು ನೇವರಿಸುತ್ತಾ “ನೀನು ಹೊತ್ತಿಗೆ ಸರಿಯಾಗಿ ಊಟ ಮಾಡೋದಿಲ್ಲ. ಅಮ್ಮ ತಟ್ಟೆಯಲ್ಲಿ ಅನ್ನ ಬೆರೆಸಿ ತಂದಾಗ ನೀನು ಕಣ್ಣುಮುಚ್ಚಾಲೆ ಥರಾ ಆಟ ಸುರು ಮಾಡ್ತಿ. ಬಾಗಿಲಿನೆಡೆಯಲ್ಲಿ, ಗೋಡೆಯ ಮರೆಯಲ್ಲಿ ಅಡಗಿ ಕೂತುಕೊಳ್ತಿ. ಇನ್ಮುಂದೆ ಸರಿಯಾಗಿ ಊಟ ಮಾಡಿದ್ರೆ ಪೇರಳೆ ಮರದ ಹಾಗೆ ಬೇಗ ದೊಡ್ಡವನಾಗಬಹುದು” ಎಂದ.
“ಓಹ್! ಹಾಗಿದ್ರೆ ಪೇರಳೆ ಮರ ಊಟ ಮಾಡ್ತದಾ?”
“ಹೂಂ ಮತ್ತೆ? ಊಟ ಮಾಡಲು ಸುರು ಮಾಡಿದ ಮೇಲೆಯೇ ಅದು ಇಷ್ಟು ದೊಡ್ಡದಾದದ್ದು!”
“ಹಾಗಿದ್ರೆ ಇನ್ಮುಂದೆ ನಾನೂ ಊಟ ಮಾಡ್ತೇನೆ”
ಭಾಸ್ಕರನ ಕೈಯಿಂದ ಬಿಡಿಸಿಕೊಂಡ ಪುಟ್ಟ ತನ್ನ ಮನೆಯ ಕಡೆಗೆ ಒಂದೇ ಓಟ. ಅವನ ಹಿಂದೆಯೇ ಹೋದ ಭಾಸ್ಕರನು ಅಲ್ಲೇ ಒಳಗೆ ಕುಳಿತು ಶೂನ್ಯದತ್ತ ಕಣ್ಣು ನೆಟ್ಟ ತನ್ನ ತಾಯಿಯನ್ನೇ ಸೂಕ್ಷ್ಮವಾಗಿ ದಿಟ್ಟಿಸುತ್ತಿರುವ ಪುಟ್ಟನನ್ನು ಕಂಡ.
“ನೋಡು ಮಾಮಾ ನನ್ನಮ್ಮ ಕೂಡ ಹೊತ್ತಿಗೆ ಸರಿಯಾಗಿ ಊಟ ಮಾಡೋದಿಲ್ಲ. ಹಾಗಿದ್ರೂ ಅವಳು ದೊಡ್ಡವಳಾಗಿಯೇ ಇದ್ದಾಳಲ್ಲ!”
ಮಾತು ಮುಗಿಯುವ ಮುನ್ನ ಅವಳು ಗಕ್ಕನೆ ತಲೆಯೆತ್ತಿದಳು. ಭಾಸ್ಕರನನ್ನು ಕಾಣುತ್ತಲೇ ಅವಳ ಕಣ್ಣಿನೊಳಗಿನ ಗಾಬರಿ ಮಾಯವಾಗಿ ನಿರಾಳತೆ ಮೂಡಿತು. “ಓ! ನೀವಾ?” ಎನ್ನುತ್ತಾ ಬೀಡಿಯ ಗೆರಸೆಯನ್ನು ಅಲ್ಲೇ ನೆಲದ ಮೇಲಿಟ್ಟು ಏಳುತ್ತಾ ಒಳಗೆ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಭಾಸ್ಕರನಿಗೆ ಸನ್ನೆ ಮಾಡಿದಳು. ನೆಟ್ಟಗೆ ಎದ್ದು ನಿಂತರೂ ಬಸವಳಿದವಳಂತೆ ಗೋಡೆಗೊರಗಿಕೊಂಡು ಒಂದು ರೀತಿಯ ಯಾತನೆಯಿಂದ ಕಣ್ಣುಮುಚ್ಚಿಕೊಂಡಳು.
“ಒಂದೆಡೆ ದೇವರ ಏಟು. ಇನ್ನೊಂದೆಡೆ ಈ ಮಗುವಿನ ಮಾತು. ಅವ ಹೇಳಿದ್ದನ್ನು ಕೇಳಿದಿರಾ ನೀವು? ಇಂಥ ಪರಿಸ್ಥಿತಿಯಲ್ಲಿ ನಾನು ಹೇಗೆ…” ಎನ್ನುತ್ತಿದ್ದಂತೆ ಭಾಸ್ಕರನು “ನೋಡು ಜಾನೂ… ಸ್ವಲ್ಪ ಮೊದಲು ನಾನು ಮನೆಯಿಂದ ಹೊರಗೆ ಬರುವಾಗ ಈ ಪುಟ್ಟ ನನ್ನ ಮನೆಯ ಗೋಡೆ ಹಿಡಿದು ಮೇಲಕ್ಕೇರಲೂ ಕೆಳಕ್ಕಿಳಿಯಲೂ ಆಗದೆ ನೇತಾಡ್ತಾ ಇದ್ದ. ಗೋಡೆಗೆ ಹತ್ತಿದ್ರೆ ಪೇರಳೆ ಕೈಗೆ ಸಿಗಬಹುದು ಅಂತ ಭಾವಿಸಿರ್ಬೇಕು. ಕೊನೆಗೆ ನಾನು ಓಡಿಹೋಗಿ ಅವನನ್ನು ಅಲ್ಲಿಂದ ಇಳಿಸಿಬಿಟ್ಟು ಪೇರಳೆ ಕೊಯ್ದು ಕೊಟ್ಟೆ. ಅವನ ಮೈಕೈಗೇನಾದ್ರೂ ತರಚು ಗಾಯಗಳಾಗಿವೆಯೋ ಅಂತ ನೋಡು” ಎಂದ. ಮಾತು ಬದಲಿಸುವ ಹುನ್ನಾರವನ್ನು ಅರಿತವಳಂತೆ ಜಾನಕಿ ನಕ್ಕು ನುಡಿದಳು. “ಅವ ಹಾಗೆಯೇ. ತುಂಟ. ಯಾವಾಗ ನೋಡಿದ್ರೂ ಬರೇ ಆಟ ಮಾತ್ರ”
“ಮಕ್ಕಳಲ್ಲದೆ ಇನ್ಯಾರು ತುಂಟಾಟ ಮಾಡ್ಬೇಕು? ನಾವಾ?” ಎನ್ನುತ್ತಾ ಅವಳ ಪ್ರತಿಕ್ರಿಯೆಗೂ ಕಾಯದೆ ಕೇಳಿದ “ಪುಟ್ಟಾ ಅಮ್ಮನಿಗೆ ಹೇಳಿದೆಯೇನೋ ಆ ವಿಷಯ?”
“ಯಾವ ವಿಷಯ?” ತನಗೆ ತಾನೇ ಹೇಳಿಕೊಳ್ಳುತ್ತಿದ್ದ ಪುಟ್ಟನಿಗೆ ಥಟ್ಟನೆ ಏನೋ ನೆನಪಾದಂತೆ “ಅಮ್ಮಾ… ಮಾಮ ಹೇಳ್ತಾನೆ ನಾನು ದಿನಾ ಊಟ ಮಾಡಿದ್ರೆ ಪೇರಳೆ ಮರದ ಹಾಗೆ ಬೇಗ ದೊಡ್ಡವನಾಗ್ತೇನೆ ಅಂತ. ಇನ್ಮೇಲೆ ನಾನು ಸರಿಯಾಗಿ ಊಟ ಮಾಡ್ತೇನೆ”
ಜಾನಕಿಯ ತುಟಿಗಳು ಅರಳಿದವು. ಭಾಸ್ಕರನ ಉಪಕಾರವನ್ನು ಕಣ್ಣಿನಲ್ಲೇ ತುಂಬಿಕೊಳ್ಳುವಂತೆ ಅವನತ್ತ ನೋಡಿದಳು.
“ನಾನಿನ್ನು ಮಗನಿಗೆ ಊಟ ಮಾಡಿಸಲಾ?” ಮೈಯಲ್ಲಿ ಸ್ವಲ್ಪ ತ್ರಾಣ ತಂದುಕೊಂಡವಳಂತೆ ಜಾನಕಿ ಹೇಳಿದಳು.
“ಸರಿ. ನಾನು ಮತ್ತೆ ಬರ್ತೇನೆ”
ಜಾನಕಿಯು ಒಳಗೋಡೆಗೆ ತಗುಲಿಸಿದ್ದ ಪುಟ್ಟನ ತಂದೆಯ ಭಾವಚಿತ್ರವನ್ನೊಮ್ಮೆ ನೋಡಿದಳು. ಅಂತೆಯೇ ದೂರವಾಗುತ್ತಿರುವ ಭಾಸ್ಕರನನ್ನೂ.
ಆ ದಿನವೂ ಭಾಸ್ಕರನಿಗೆ ಸರಿಯಾಗಿ ನಿದ್ದೆ ಬರಲಿಲ್ಲ. ಪಾಪ! ಜಾನುವಿನ ಬದುಕು ಇನ್ನೇನಾಗುವುದೋ. ಗಂಡನಿದ್ದಾಗ ಒಂದಿಷ್ಟು ಆದಾಯವಿತ್ತು. ಈಗ ಗಂಡನಿಲ್ಲದೆ ಹೇಗಿರುತ್ತಾಳೋ. ನಾನು ಹೇಗಿದ್ದೆ ಸುಶೀಲೆ ಇಲ್ಲದಿದ್ದಾಗ? ರಾತ್ರಿಯಿಡೀ ಅತ್ತಿಂದಿತ್ತ. ಇತ್ತಿಂದತ್ತ. ಅಲ್ಲೆಲ್ಲೋ ಇಲಿ ಹೆಗ್ಗಣಗಳ ಕಿಚಕಿಚ. ಸೂರಿನಲ್ಲೇನೋ ಸರಸರ. ಬಳೆಗಳ ಟಿಂಟಿಣಿ. ಮಾತಿನ ಇನಿದನಿ. ತಿರುಪು ಬಿಗಿಯಿಲ್ಲದ ನಲ್ಲಿಯಿಂದ ನೀರು ಲೊಳಲೊಳ.
ಎಷ್ಟು ಒಳ್ಳೆಯ ಹೆಣ್ಣು ಈ ಜಾನು! ಅವಳಿಗೆ ಈ ಗತಿ ಬಂತಲ್ಲ. ನನ್ನಂತೆ ಆಸ್ತಿಪಾಸ್ತಿ ಇರುತ್ತಿದ್ದರೆ ಅವಳು ಹೀಗೆ ಕಷ್ಟಪಡಬೇಕಾಗುತ್ತಿರಲಿಲ್ಲ.
ಸುಶೀಲಾ ತೀರಿಹೋದ ಮೇಲೆ ಹಲವಾರು ಕಾರಣಗಳಿಂದ ಮರುಮದುವೆಯನ್ನು ಮುಂದೂಡಿಕೊಂಡು ಬಂದಿದ್ದ ನನಗೆ ಮದುವೆಯ ನೆನಪು ಭುಗ್ಗನೆ ಹೊತ್ತಿಕೊಂಡದ್ದೇ ಜಾನಕಿಯನ್ನು ಕಂಡಾಗ. ಅದಕ್ಕೇನು ಕಾರಣ? ಅಷ್ಟೇನೂ ಕೆಟ್ಟಿರದ ಅವಳ ಮೈಮಾಟ? ಅಗಲವಾದ ಹಣೆ? ಉಬ್ಬಿದ ಗಲ್ಲ? ಅಷ್ಟೇನೂ ನೀಳವಲ್ಲದ, ನಾಜೂಕಾದ ಮೂಗು? ಮಾರ್ದವ ಸ್ನೇಹವನ್ನು ಜಿನುಗಿಸುವ ಆರ್ದ ಕಣ್ಣುಗಳು? ವಯಸ್ಸಿಗೆ ತಕ್ಕಂತೆ ಅಚ್ಚುಕಟ್ಟಾಗಿರುವ ಅವಳ ಗಾತ್ರ ಅಥವಾ ನಿಲುವು?
“ಮಾಮಾ”
ಭಾಸ್ಕರ ಕಿಡಿ ತಗುಲಿದವನಂತೆ ಎಚ್ಚೆತ್ತ. ಕಣ್ಣು ತೆರೆದು ನೋಡಿದರೆ ಎದುರಲ್ಲಿ ಪುಟ್ಟ.
“ಮಾಮಾ ನಾಳೆ ನನ್ನನ್ನು ಶಾಲೆಗೆ ಸೇರಿಸ್ತಾರೆ. ಹೊಸ ಬ್ಯಾಗು ಸಿಗ್ತದೆ”
“ಒಳ್ಳೇದು ಪುಟ್ಟಾ. ಶಾಲೆಗೆ ಹೋಗಿ ಚೆನ್ನಾಗಿ ಕಲೀಬೇಕು. ಒಳ್ಳೆ ಮಾರ್ಕ್ ತಗೊಳ್ಬೇಕು”
“ಶಾಲೆಗೆ ಸೇರಿಸುವಾಗ ನಿಮಗೆ ಅಲ್ಲಿಗೆ ಬರ್ಲಿಕ್ಕೆ ಸಾಧ್ಯವಾ ಅಂತ ಅಮ್ಮ ಕೇಳ್ತಿದ್ದಾಳೆ. ಅಲ್ಲಿ ಹೋಗಿ ಏನು ಮಾಡ್ಬೇಕು ಅಂತ ಅಮ್ಮನಿಗೆ ಗೊತ್ತಿಲ್ಲವಂತೆ”
“ಸರಿ ಪುಟ್ಟಾ. ಸ್ವಲ್ಪ ಕಳೆದು ನಾನೇ ಬಂದು ಅಮ್ಮನ ಹತ್ರ ಮಾತಾಡ್ತೇನೆ?”
“ಅಮ್ಮ ಬಂದಿದ್ದಾಳೆ. ಹೊರಗೆ ನಿಂತಿದ್ದಾಳೆ”
“ಹೌದ?” ಭಾಸ್ಕರ ಲಗುಬಗೆಯಿಂದ ಹೊರಗೆ ಬರುತ್ತಲೇ ಬಾಗಿಲಿನ ಹತ್ತಿರ ಅನುಮಾನಿಸುತ್ತಾ ನಿಂತಿದ್ದ ಜಾನಕಿ ಕಣ್ಣಿಗೆ ಬಿದ್ದಳು.
“ಮಗನನ್ನು ಶಾಲೆಗೆ ಸೇರಿಸ್ಬೇಕಿತ್ತು. ಹೇಳಿಕೇಳಿ ನಾನೊಬ್ಳು ಹಳ್ಳಿ ಹೆಂಗಸು. ಮಗನನ್ನು ಶಾಲೆಗೆ ಸೇರಿಸುವಾಗಿನ ರೀತಿನೀತಿಗಳೊಂದೂ ಗೊತ್ತಿಲ್ಲ. ಹಾಗಾಗಿ…”
“ಸರಿ ಜಾನೂ. ನಾನು ಕೂಡ ಬರ್ತೇನೆ”
ಎಂದಾಗ ಹೇಗೆ ಅರಳಿತು ಅವಳ ಮುಖ! ಹೇಗೆ ಹೊಳೆಯಿತು ಅವಳ ಕಣ್ಣು!
ಪುಟ್ಟನನ್ನು ಶಾಲೆಗೆ ದಾಖಲು ಮಾಡಿದ ನಂತರ ಅವರು ಜೊತೆಯಲ್ಲೇ ನಡೆಯುತ್ತಾ ಹೋದರು. ಎಲ್ಲರಿಗಿಂತಲೂ ಮೊದಲೇ ನಡೆಯುತ್ತಿದ್ದ ಪುಟ್ಟನ ಕಾಲುಗಳು ಒಂದು ಕ್ಷಣವೂ ನೆಲದ ಮೇಲೆ ನಿಲ್ಲುತ್ತಿರಲಿಲ್ಲ.
“ಹಿಂದೊಮ್ಮೆ ನಾನೊಂದು ಮಾತು ಹೇಳಿದ್ದೆ. ನೆನಪಿದೆಯಾ?” ಜಾನಕಿಯ ಮಾತು ಕೇಳುತ್ತಲೇ ಭಾಸ್ಕರ ಪಕ್ಕಕ್ಕೆ ತಿರುಗಿದ.
“ಇಲ್ವಲ್ಲಾ”
“ಸಾವಿನ ದುಃಖವನ್ನು ಕೆಲವರು ಒಂದು ದಿನ ಹಂಚಿಕೊಂಡ್ರೆ ಇನ್ನು ಕೆಲವರು ಹತ್ತು ದಿನ ಹಂಚಿಕೊಂಡಾರು. ದಿನ ಕಳೆದಂತೆ ಯಾರು ಕೇಳ್ತಾರೆ ನಮ್ಮನ್ನು? ನೀವು ನಮಗೇನೂ ಆಗಬೇಕಾದ್ದಿಲ್ಲ. ತೀರಿಹೋದ ನನ್ನವರ ಗೆಳೆಯ ಅಷ್ಟೆ. ಸಾಲದ್ದಕ್ಕೆ ನೆರೆಮನೆಯವರೂ ಆಗಿರುವುದರಿಂದ ನಮ್ಮನ್ನು ವಿಚಾರಿಸಿಕೊಳ್ತಿದ್ದೀರಿ ಅಂದಿದ್ದೆ.” ಎನ್ನುವಾಗ ಅವಳ ಮುಖ ನೋವನ್ನು ಹಿಂಡುತ್ತಿತ್ತು. “ಆದರೆ ನನ್ನ ಆಲೋಚನೆಗಳೆಲ್ಲ ತಪ್ಪಾಗಿದ್ದವು ಅಂತ ನಂಗೆ ಇವತ್ತು ಗೊತ್ತಾಯ್ತು. ನೀವು ನನ್ನನ್ನು…” ಎಂದು ಎರಡೂ ಕೈಗಳನ್ನು ಜೋಡಿಸುತ್ತಿದ್ದಂತೆ ಒಮ್ಮೆಲೆ ಬೆಚ್ಚಿದ ಭಾಸ್ಕರ ಇದ್ದಕ್ಕಿದ್ದಂತೆ ಅವಳ ಕೈಗಳನ್ನು ಹಿಡಿದು “ಛೆ! ಛೆ! ಇದೇನು ಮಾಡುತ್ತಿದ್ದಿ?” ಎನ್ನುತ್ತಾ ಚೇಳು ಕುಟುಕಿದಂತೆ ತಟಕ್ಕನೆ ಕೈಬಿಟ್ಟು ಹಿಂದಕ್ಕೆ ಸರಿದು “ಇಷ್ಟಕ್ಕೂ ಅಳುವಂಥದ್ದೇನಾಯ್ತು?” ಎನ್ನುತ್ತಿದ್ದಂತೆ ಅವನ ಮೋರೆ ಕೆಂಪೇರಿತು. ಜಾನಕಿ ನಾಚಿಕೆಯಿಂದ ಕಣ್ಣು ತಗ್ಗಿಸಿ ಮುಖದಲ್ಲಿ ನಗು ತಂದುಕೊಂಡು “ಕ್ಷಮಿಸಿ” ಎಂದು ಕಣ್ಣೊರೆಸಿಕೊಂಡಳು.
“ಮಗನಿಗಾಗಿ ನೀವು ಕಟ್ಟಿದ ಫೀಸನ್ನು ಹೇಗಾದ್ರೂ ಮಾಡಿ ಹಿಂತಿರುಗಿಸ್ತೇನೆ. ನಿಮ್ಮ ಮನೆಯಲ್ಲಿ ದುಡಿದಾದ್ರೂ ಸರಿ”
“ನಮ್ಮ ನಡುವೆ ಅಂಥ ವ್ಯವಹಾರಗಳೆಲ್ಲ ಬೇಡ ಜಾನೂ. ಕೊಡ್ಬೇಕು ಅಂತ ತೋರಿದಾಗ ಕೊಟ್ರೆ ಸಾಕು. ಸಮಾಧಾನದಿಂದಿರು” ಎಂದು ಅವಳ ಭುಜವನ್ನು ಮುಟ್ಟಿ ಹೇಳಿದ “ನೀನು ಮಾಡುವಂಥ ಕೆಲಸಗಳೇನೂ ಅಲ್ಲಿಲ್ಲ. ನೀನು ಯಾವತ್ತೂ ಸಂತೋಷದಿಂದಿರ್ಬೇಕು. ಅಷ್ಟೇ ನಾನು ಬಯಸೋದು”
“ನಾನು ಹೀಗೆ ಹೇಳ್ತಿದ್ದೇನೆ ಅಂತ ಬೇಸರ ಮಾಡಿಕೊಳ್ಬೇಡಿ” ಅವಳ ಮುಂದಿನ ಮಾತಿಗೆ ಅದು ಪೀಠಿಕೆಯಾಯಿತು.
“ನನ್ನ ಮುಖದಲ್ಲಿ ಸಂತೋಷ ಕಾಣಬಯಸುವ ನಿಮ್ಮ ಮುಖದಲ್ಲಿ ಸಂತೋಷದ ಕಳೆಯೇ ಇಲ್ಲವಲ್ಲ! ಸುಶೀಲಕ್ಕ ಹೋದ ಮೇಲೆ ಹೊತ್ತುಹೊತ್ತಿಗೆ ಸರಿಯಾಗಿ ಊಟ ಮಾಡ್ತಿಲ್ಲ ಅಂತ ಕಾಣ್ತದೆ. ಏನೋ ಚಿಂತೆ ಹಚ್ಕೊಂಡು ಕೊರಗ್ತಾ ಇರ್ತೀರಿ. ನೀವು ಜಾತಿಭೇದ ಮಾಡೋರಲ್ಲ ಅಂತ ಗೊತ್ತು. ಹಾಗಾಗಿ ನಾನು ನಿಮಗೆ ದಿನಾ ಅಡುಗೆ ಮಾಡಿಟ್ಟು ಹೋಗ್ತೇನೆ”
ಭಾಸ್ಕರನ ಎದೆಯೊಳಗೆ ಹಿತವಾದ ನೋವು ಉಕ್ಕಿ ಬರತೊಡಗಿತು. ಆದರೂ ದಾಕ್ಷಿಣ್ಯದಿಂದ ಹೇಳಿದ. “ಅದೆಲ್ಲ ಬೇಡ ಜಾನೂ”
“ನನ್ನ ಮಗನನ್ನು ಹೊಟ್ಟೇಲಿ ಹುಟ್ಟಿದ ಮಗನಿಗಿಂತಲೂ ಹೆಚ್ಚಾಗಿ ಮುದ್ದು ಮಾಡ್ತೀರಿ. ಅದಕ್ಕೆ ಬದಲಾಗಿ ನನ್ನದೂ ಒಂದಿಷ್ಟು ಸೇವೆಯಿರಲಿ”
ಭಾಸ್ಕರ ಮಿಂಚಿನಂತೆ ತಲೆಯೆತ್ತಿ ನೋಡಿದ. ತನ್ನನ್ನೇ ಮೃದುವಾಗಿ ನೋಡುತ್ತಾ ನಿಂತಿರುವ ಜಾನಕಿ ಅವನಿಗೆ ಇನ್ನಷ್ಟು ಹತ್ತಿರದವಳಾಗಿ ಕಂಡಳು. ತಿಳಿನೀರಿನಂಥ ನೋಟ. ಕೆಲವು ನಿಮಿಷಗಳವರೆಗೆ ಮಾತಿಲ್ಲದೆ ನಿಂತ ಭಾಸ್ಕರನು ತಮ್ಮ ನಡುವಿನ ಅಸಹನೀಯ ಮೌನವನ್ನು ಭೇದಿಸುತ್ತಾ “ಜಾನೂ ನಂಗೆ ನೀನು ಬಡಿಸ್ಬೇಕು. ನಾನು ಅದನ್ನು ಉಣ್ಣಬೇಕು ಎಂಬ ಆಸೆಯಿಲ್ಲ ಅಂತಲ್ಲ. ಆದರೆ ನಿನ್ನನ್ನು ಒಬ್ಳು ಕೆಲಸದಾಳನ್ನಾಗಿ ಕಲ್ಪಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ” ಎಂದ. ಅವನು ಆ ಮಾತುಗಳನ್ನು ನಿಧಾನವಾಗಿ ತಡೆತಡೆದು ಹೇಳುವಾಗ ಜಾನಕಿಯ ಕಣ್ಣುಗಳು ಹೊಳೆದುದನ್ನು ಆತ ಗಮನಿಸಿದ. “ಸರಿ ಜಾನೂ ಮತ್ತೆ ಕಾಣುವ” ಎಂದು ತನ್ನ ಮನೆಯ ಹಾದಿ ಹಿಡಿದು ನಡೆಯುತ್ತಿದ್ದಂತೆ ಮೆಲ್ಲನೆ ಕತ್ತು ತಿರುವಿ ಹಿಂದಕ್ಕೆ ನೋಡಿದ. ಅವನ ಯೋಚನಾಲಹರಿಯ ತುದಿಯಲ್ಲೋ ಎಂಬಂತೆ ನಿಂತಿದ್ದ ಜಾನಕಿ ಅವನ ಕಣ್ಣನ್ನು ತುಂಬಿಕೊಂಡಳು. ಅವನಿಂದ ನೋಟವನ್ನು ಕೀಳದೆ ನಿಧಾನವಾಗಿ ಮರೆಗೆ ಸರಿದಳು.
“ಮಾಮಾ ನನ್ನ ಕಾಲು ಬಿಡು” ಪುಟ್ಟ ಜೋರಾಗಿ ಚೀರಿದ. ಡಾಕ್ಟರ್ ಮೂಳೆ ಕೂಡಿಸುತ್ತಿದ್ದಂತೆ ಭಾಸ್ಕರನು ಪುಟ್ಟನ ಕಾಲನ್ನು ಹಿಡಿದುಕೊಂಡ. “ಬಿಡ್ತೀಯೋ ಇಲ್ವೋ?” ಪುಟ್ಟ ಕೂಗಾಡಿದ. ಭಾಸ್ಕರ ಕಾಲು ಬಿಡದಿದ್ದಾಗ ಅಳುತ್ತಾ ಬೈಗುಳದ ಭಂಡಾರವನ್ನೇ ಸುರಿದ.
“ಮಗಾ, ಮೆಟ್ಟಿಲ ಮೇಲಿಂದ ಬಿದ್ದು ಕಾಲು ಮುರ್ಕೊಂಡಾಗ ನಿನ್ನನ್ನು ಎತ್ತಿ ಆಟೋದಲ್ಲಿ ಹಾಕಿ ಇಲ್ಲಿವರೆಗೆ ಕರ್ಕೊಂಡು ಬಂದ ಮಾಮನನ್ನು ಹೀಗೆಲ್ಲ ಬೈಯಲು ನಾಚಿಕೆಯಾಗೋದಿಲ್ವಾ?” ಪಕ್ಕದಲ್ಲಿದ್ದ ಜಾನಕಿ ಗದರಿದಳು. ಅಂತೂ ಮೂಳೆ ಕೂಡಿತು. ಪಟ್ಟಿ ಕಟ್ಟಲಾಯಿತು. ನಿದ್ದೆ ಮಾಡಿ ಎದ್ದ ಮೇಲೆ ಪುಟ್ಟನ ಕಾಲಲ್ಲಿ ನೋವಿರಲಿಲ್ಲ. ಮಾರನೇ ದಿನ ಮನೆಗೆ ಬಂದ ಭಾಸ್ಕರನ ಮಡಿಲಲ್ಲಿ ಕುಳಿತುಕೊಳ್ಳುತ್ತಾ ಪುಟ್ಟ ಹೇಳಿದ. “ಮಾಮಾ! ನೀನೀಗ ನನ್ನ ಅಪ್ಪ. ಅಲ್ಲವಾ?”
ಭಾಸ್ಕರನು ಜಾನಕಿಯನ್ನೇ ನೋಡುತ್ತಾ ಪುಟ್ಟನ ಹಣೆಗೆ ನಿಧಾನವಾಗಿ ಮುತ್ತಿಟ್ಟ. ಕಸಿವಿಸಿಗೊಳ್ಳುತ್ತಾ ನಿಂತಿದ್ದ ಆಕೆಯ ಕಡೆ ತುಂಬಿದ ನೋಟವನ್ನು ಬೀರಿದ.
“ಮಗಾ, ಇವರು ನಿನ್ನ ಮಾಮ. ನಿನ್ನಪ್ಪ ಅದೋ ಅವರು ಪುಟ್ಟಾ” ಗೋಡೆಯ ಮೇಲಿನ ಭಾವಚಿತ್ರದ ಕಡೆ ನೋಡಲು ಸನ್ನೆ ಮಾಡುತ್ತಾ ಅವಳು ಹೇಳಿದಳು. “ಇಲ್ಲ. ಇವರೂ ನನ್ನ ಅಪ್ಪನೇ” ಎನ್ನುತ್ತಾ ಪುಟ್ಟ ಹಟದಿಂದಲೋ ಎಂಬಂತೆ ಭಾಸ್ಕರನ ಹೆಗಲಿಗೊರಗಿದಾಗ ಅವನು ಮಾತನಾಡದೆ ಪುಟ್ಟನನ್ನು ಅಪ್ಪಿಕೊಂಡ.
“ಗಂಡನನ್ನು ಕಳೆದುಕೊಂಡವರಿಗೆ ಮನೆ ಕಟ್ಟಲು ತೋರಣಕಟ್ಟೆ ಪಂಚಾಯತು ಹಣ ಕೊಡ್ತದೆ. ಅದಕ್ಕಾಗಿ ಕೆಲವು ಫಾರ್ಮ್ ಭರ್ತಿ ಮಾಡ್ಬೇಕು. ಪೇಟೆಗೆ ಹೋದಾಗ ಅದನ್ನು ತಗೊಂಡೇ ಬಂದೆ” ಎನ್ನುತ್ತಾ ಆತ ಕೆಲವು ಅರ್ಜಿ ಪತ್ರಗಳನ್ನು ಅವಳ ಮುಂದೆ ಇರಿಸಿದ. ಜಾನಕಿ ಅದರ ಮೇಲೆ ಕಣ್ಣಾಡಿಸಿದಳು. ಅರ್ಜಿಗಳನ್ನು ಅವನೇ ತುಂಬಿ ಬಿಟ್ಟಿದ್ದ. ಅವಳ ಸಹಿ ಬೀಳುವುದೊಂದೇ ಬಾಕಿ.
ಮರುದಿನ ಭಾಸ್ಕರನು ಜಾನಕಿಯ ಮನೆಯೊಳಗೆ ಕಾಲಿಡುತ್ತಲೇ ಗಕ್ಕನೆ ನಿಂತುಬಿಟ್ಟ. ಯಾರು ಈ ಹೊಸಬ?
ಪಂಚಾಯತು ಸದಸ್ಯ ಕರುಣಾಕರ! ಇವನಿಗೇನು ಕೆಲಸ ಇಲ್ಲಿ?
“ಓ! ನೀವು ಬಂದ್ರಾ?” ಜಾನಕಿಯ ದನಿಯು ಅವನನ್ನು ಎಚ್ಚರಿಸಿತು “ಮನೆ ಕಟ್ಟುವ ಜಾಗ ನೋಡ್ಲಿಕ್ಕೆ ಬಂದಿದ್ದಾರೆ ಕರುಣಾಕರನೋರು.” ಭಾಸ್ಕರ ಒಂಥರಾ ಉದಾಸೀನದಿಂದಲೇ ಅವನಿಗೆ ನಮಸ್ಕರಿಸಿದ. ಇವನೇಕೆ ಇಲ್ಲಿಗೆ ಬಂದ ಎಂಬಂತೆ ದಿಟ್ಟಿಸಿದ ಕರುಣಾಕರನ ನೋಟ ಭಾಸ್ಕರನನ್ನು ಚುಚ್ಚಿತು. ಹೆಚ್ಚೇನೂ ಹೇಳದೆ “ಪುಟ್ಟ ಎಲ್ಲಿ?” ಎಂದಷ್ಟೇ ಕೇಳಿದ.
“ಅವನಾ? ಶಾಲೆಗೆ ಹೋದನಲ್ಲ. ಗಂಟೆ ಹತ್ತಾಗುತ್ತಾ ಬಂತು?!” ಎನ್ನುತ್ತಾ ಕರುಣಾಕರನತ್ತ ನೋಡಿ “ಮಗ ಬಿದ್ದು ಕಾಲು ಮುರಿದುಕೊಂಡಾಗ ಇವರೇ ಅವನನ್ನು ಶಾಲೆಗೆ ಕರ್ಕೊಂಡು ಹೋಗ್ತಾ ಇದ್ದದ್ದು ಬೈಕಲ್ಲಿ. ಇವರಿಗೆ ಹೇಗೂ ಪೇಟೆಗೆ ಹೋಗೋ ಸಮಯ” ಎನ್ನುತ್ತಾ ಭಾಸ್ಕರನತ್ತ ತಿರುಗಿ “ನಾನೂ ಕರುಣಾಕರನೋರೂ ಜೊತೆಯಲ್ಲೇ ಆಡಿ ಬೆಳೆದವರು. ಒಟ್ಟಿಗೇ ಓದಿದೋರು. ಮನೆ ಕಟ್ಟಿ ಮುಗಿಯುವವರೆಗೂ ಮೇಲ್ನೋಟಕ್ಕೆ ಅಂತ ಬರ್ತಿರ್ತಾರೆ ಇಲ್ಲಿಗೆ” ಎಂದಳು. ಅವಳ ದನಿಯಲ್ಲಿ ಹಿಂದೆಂದೂ ಇಲ್ಲದ ಲವಲವಿಕೆಯಿತ್ತು. “ಸರಿ ನಾನಿನ್ನು ಬರ್ತೇನೆ” ಎಂದಷ್ಟೇ ಹೇಳಿ ಮನೆಗೆ ಹೋಗುತ್ತಾ ಭಾಸ್ಕರ ಅಂದುಕೊಂಡ- ಆ ಕರುಣಾಕರ ಬರೇ ಹಲ್ಕಾ. ಎಂಥ ಹೆಂಗಸನ್ನಾದರೂ ಒಳಗೆ ಹಾಕಿಕೊಳ್ತಾನೆ. ಹೋದಲ್ಲಿಡೀ ಅವನ ಕೆಲಸ ಇದುವೇ. ನೀನು ಜಾಗ್ರತೆಯಿಂದಿರಬೇಕು ಅಂತ ಜಾನಕಿಯ ಹತ್ರ ಆದಷ್ಟು ಬೇಗನೆ ಹೇಳಿಬಿಡಬೇಕು ಎಂದುಕೊಂಡ. ಆದರೆ ಮನೆಯ ಮೆಟ್ಟಿಲಲ್ಲಿ ಪ್ರಭಾಕರನ ಚಪ್ಪಲಿಗಳನ್ನು ಕಂಡರೆ, ಒಳಗಿನಿಂದ ಅವರಿಬ್ಬರ ಮಾತುಗಳನ್ನು ಕೇಳಿದರೆ, ನಗೆಯ ಅಲೆಗಳು ಬಡಿದರೆ ಆತ ಅಲ್ಲೇ ನಿಂತುಬಿಡುತ್ತಿದ್ದ.
ಚೂರಿ ಹಾಕಲೇ ಕರುಣಾಕರನಿಗೆ? ಕೊಂದು ಬಿಡಲೇ ಎದೆಗೆ ಒದ್ದು ಚಚ್ಚಿ?
ಕೂಡಲೇ ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡು ಏನು ಬೇಕೋ ಆಗಲಿ. ನನಗೇನು? ಎಂದು ತಣ್ಣಗಾಗಲು ಯತ್ನಿಸುತ್ತಿದ್ದ ತಕ್ಷಣವೇ ಎದೆಯ ಮೇಲೆ ಬಂಡೆಕಲ್ಲು ಹೇರಿದಂತಾಗಿ ಮನಸ್ಸು ನರಳತೊಡಗುತ್ತಿತ್ತು. ದನಿಯೆತ್ತಿ ಚೀರಬೇಕೆನಿಸಿಸುತ್ತಿತ್ತು. ಇಲ್ಲ. ಸ್ವರ ಹೊರಡುವುದಿಲ್ಲ. ಹಣೆ ಹಣೆ ಚಚ್ಚಿಕೊಂಡರೂ ಕರಗದ ಭಾರ. ಬೇರೆ ದಾರಿ ಕಾಣದೆ, ಒಂದು ಗಳಿಗೆ ಕೂಡ ಅಲ್ಲಿರಲು ಮನಸ್ಸಾಗದೆ ನಿಂತಲ್ಲಿಂದಲೇ ಪುಟ್ಟನನ್ನು ಕೂಗಿ ಅವನನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ. ಹಾವೇಣಿಯಾಟದಲ್ಲಿ ಪುಟ್ಟನೇ ಗೆಲ್ಲುತ್ತಿದ್ದ. ಚಪ್ಪಾಳೆ ತಟ್ಟಿ ನಗುತ್ತಿದ್ದ. ಆದರೆ ಭಾಸ್ಕರ ನಗುತ್ತಿರಲಿಲ್ಲ. ಒಂದು ದಿನ ಪುಟ್ಟ ಇದ್ದಕ್ಕಿದ್ದಂತೆ ಆಡುವುದನ್ನು ನಿಲ್ಲಿಸಿ ಕೇಳಿದ “ಮಾಮಾ! ನೀನ್ಯಾಕೆ ನಗೋದಿಲ್ಲ? ಯಾವತ್ತೂ ಸೋತು ಹೋಗ್ತಿ ಅಂತ ಬೇಸರವಾ?” ಭಾಸ್ಕರನ ಕೊರಳು ಕಟ್ಟ್ಬಿದಂತಾಯಿತು “ಹೌದು ಪುಟ್ಟಾ. ನಾನು ಸೋತುಹೋದೆ”
ಭಾಸ್ಕರನು ಪೇಟೆಯಿಂದ ಬರುತ್ತಿದ್ದಾಗ ಜಾನಕಿಯ ಮನೆಯಲ್ಲಿ ದೀಪ ಉರಿಯುತ್ತಿತ್ತು. ಇಷ್ಟು ರಾತ್ರಿಯಾದರೂ ಅವಳು ನಿದ್ದೆ ಮಾಡಲಿಲ್ಲವೇ? ಅಲ್ಲಿಗೆ ಹೋಗಲು ಧೈರ್ಯ ಸಾಲದೆ ತನ್ನ ಮನೆಯ ಗೇಟಿನ ಹತ್ತಿರ ನಿಂತುಕೊಂಡು ನೋಡಿದ. ತೆರೆದ ಕಿಟಿಕಿಯ ಮೂಲಕ ಮನೆಯೊಳಗಿನ ಬೆಳಕು ಕಾಣಿಸುತ್ತಿತ್ತು. ಕರುಣಾಕರ ಕುರ್ಚಿಯ ಮೇಲೆ ಕುಳಿತಿದ್ದ. ತನ್ನ ಮುಂದೆ ನಿಂತಿದ್ದ ಜಾನಕಿಯನ್ನೇ ನೋಡುತ್ತಾ ಏನೋ ಹೇಳುತ್ತಿದ್ದ. ಅವಳು ತಲೆತಗ್ಗಿಸಿ ನಿಂತು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದಳು. ಒಂದು ಬಾರಿ ತಲೆಯೆತ್ತಿದಾಗ ಅವಳ ಕಣ್ಣುಗಳಲ್ಲಿ ನೀರು ತುಂಬಿದ್ದು ಕಾಣಿಸಿತು. ಅದನ್ನು ನೋಡುತ್ತಿದ್ದಂತೆ ಸಂಕಟದ ಅಲೆಗಳು ಭಾಸ್ಕರನ ಕೊರಳವರೆಗೆ ಉಕ್ಕಿ ಬಂದವು. ಹೇಗೋ ಸಂಭಾಳಿಸಿಕೊಂಡು ಗೋಡೆಗೆ ಮತ್ತಷ್ಟು ಅಂಟಿ ನಿಂತು ನೋಡಿದ. ಏನೋ ತೀರ್ಮಾನವಾಯಿತು ಎಂಬಂತೆ ಕರುಣಾಕರನು ಕುಳಿತಲ್ಲಿಂದ ಎದ್ದ.
ದೀಪ ನಂದಿತು. ಬಾಗಿಲು ಹಾಕಿದ ಸದ್ದು!
ಎದೆಯ ಮೇಲೆ ಏಟು ಬಿದ್ದಂತೆ ಭಾಸ್ಕರ ಹಿಂದೆ ಸರಿದ. ತಲೆ ಸಿಡಿಯತೊಡಗಿತು. ಹೊಟ್ಟೆ ಗರಗರ ಎನ್ನತೊಡಗಿತು.
ದೇವರೇ! ಕರುಣಾಕರ ಹೊರಗೆ ಹೋಗಿರಬಹುದೇ?
“ಸ್ವಲ್ಪ ಹಾಲು ಸಿಗಬಹುದ?”
ತೆರೆದ ಬಾಗಿಲ ಮುಂದೆ ಕುರ್ಚಿಯಲ್ಲಿ ಕುಳಿತು ಬೆಳಗಿನ ಪತ್ರಿಕೆಯನ್ನು ಓದುತ್ತಿದ್ದ ಭಾಸ್ಕರ ತಲೆಯೆತ್ತಿ ನೋಡಿದ. ಜಾನಕಿ! ನಿನ್ನೆ ರಾತ್ರಿ ಅವಳು ನಿದ್ದೆ ಮಾಡಿರಲಿಲ್ಲ ಎಂದು ಮುಖ ನೋಡಿದ ಕೂಡಲೇ ಗೊತ್ತಾಗುತ್ತಿತ್ತು. ಅವಳ ಕಣ್ಣುಗಳ ಕೆಳಗೆ ಹರಡಿಕೊಂಡ ಕತ್ತಲು. ಬಾಡಿದ ಕೆನ್ನೆ. ಮಾಸಿದ ತುಟಿಗಳು. ಭಾಸ್ಕರನೊಳಗೆ ಅಸಮಾಧಾನ, ಅತೃಪ್ತಿಗಳು ತಲೆಯೆತ್ತತೊಡಗಿದವು. ಆದರೂ ಅವಳ ಮುಖದಿಂದ ಕಣ್ಣುಗಳನ್ನು ಸರಿಸಲಾಗಲಿಲ್ಲ. ಅವನು ತನ್ನ ಮುಖವನ್ನು ಓದುತ್ತಿರುವ ರೀತಿಯನ್ನು ಕಂಡು ಜಾನಕಿ ಚಕಿತಳಾದಳು.
“ಇವತ್ತು ನಿಮಗೆ ಬೇಗನೆ ಎಚ್ಚರವಾಯ್ತು ಅಂತ ಕಾಣ್ತದೆ. ನಾನಂತೂ ತಡವಾಗಿ ಎದ್ದುಬಿಟ್ಟೆ.”
“ಮ್… ನಾನು ಅಂದುಕೊಂಡೆ” ನಿಧಾನವಾಗಿ ತಲೆ ಅಲ್ಲಾಡಿಸುತ್ತಾ ಭಾಸ್ಕರ ಹೇಳಿದ “ಮುಖ ನೋಡಿದ್ರೇ ಗೊತ್ತಾಗೋದಿಲ್ವಾ ರಾತ್ರಿಯಿಡೀ ನೀನು ನಿದ್ದೆಗೆಟ್ಟಿದ್ದಿ ಅಂತ?”
ಜಾನಕಿಯ ಮುಖ ನಾಚಿಕೆಯಿಂದ ಬಾಗಿತು. ಭಾಸ್ಕರನ ಕೈಯಿಂದ ಹಾಲಿನ ಲೋಟವನ್ನು ಪಡೆದು “ಹೋಗ್ತೇನೆ. ಮತ್ತೆ ಕಾಣುವ” ಎಂದಳು ತಲೆಯೆತ್ತದೆ. ಅವನು ಮಾತನಾಡದೆ ಭಾರವಾದ ನಿಟ್ಟುಸಿರು ಬಿಟ್ಟು ಸುಮ್ಮನೆ ಕುಳಿತುಕೊಂಡ.
“ನಾನೂ ನಿನ್ನೆ ನಿದ್ದೆ ಮಾಡಲಿಲ್ಲ.”
“ಅಯ್ಯೋ! ಯಾಕೆ? ಆರಾಮವಿಲ್ಲವೇ?”
“ಅದು… ಅದು… ನಿನ್ನೆ…”
“ಏನಾಯ್ತು?”
“ನಿನ್ನ ಮತ್ತು ಕರುಣಾಕರನ ಬಗ್ಗೆ ಊರವರು ಏನೇನೋ ಹೇಳ್ತಿದ್ದಾರೆ.”
ಜಾನಕಿಯ ಮೈಯಲ್ಲಿ ಆಘಾತದ ಅಲೆಗಳು ಸಂಚರಿಸಿ ಲೋಟದಲ್ಲಿದ್ದ ಹಾಲು ತುಳುಕಿ ಹೊರಚೆಲ್ಲಿತು.
“ಇದೇನು ನೀವು ಹೇಳುತ್ತಿರೋದು?”
“ಸತ್ಯವನ್ನೇ ಹೇಳುತ್ತಿದ್ದೇನೆ”
“ನಿಮ್ಮಲ್ಲಿ ಹಾಗೆಂದವರು ಯಾರು ಅಂತ ಕೇಳಬಹುದ?”
ಭಾಸ್ಕರ ಗಲಿಬಿಲಿಗೊಂಡರೂ ತೋರಿಸಿಕೊಳ್ಳದೆ ನುಡಿದ. “ಹೇಳಿದವರು ಒಳ್ಳೆಯ ಜನರೇ. ಆದರೆ ಸುದ್ದಿ ನನ್ನ ಕಿವಿವರೆಗೂ ಮುಟ್ಟಿತು ಎನ್ನೋದು ನಿಜ.”
“ನನ್ನ ಮೇಲೆ ಸಂಶಯವಿದೆಯಲ್ಲವೇ ನಿಮಗೆ?”
“ಇಲ್ಲ. ಖಂಡಿತಾ ಇಲ್ಲ. ಹೆಣ್ಣಾದವಳ ಹೆಸರು ಕೆಟ್ಟರೆ ಹೋಯಿತು. ಆದ್ದರಿಂದ ಜಾಗ್ರತೆಗೆ ಅಂತ ಹೇಳಿದೆ. ಪುಟ್ಟನ ಪಾಲಿಗೆ ತಂದೆಯಾಗಿಯೂ ತಾಯಿಯಾಗಿ ಇರುವವಳು ನೀನೊಬ್ಬಳೇ. ಆದ್ದರಿಂದ…”
“ನಮ್ಮ ಬಗ್ಗೆ ಹೇಳಿದ ವ್ಯಕ್ತಿಯ ಹೆಸರನ್ನೇಕೆ ಹೇಳುವುದಿಲ್ಲ?”
“ವ್ಯಕ್ತಿ ಯಾರಾಗಿದ್ದರೇನು? ಅವರ ಉದ್ದೇಶ ಏನಾಗಿದ್ದರೇನು? ನಾವು ಎಚ್ಚರಿಕೆಯಿಂದಿರೋದು ಮುಖ್ಯ.”
ಜಾನಕಿಯ ದೃಷ್ಟಿ ಹರಿತವಾಯಿತು. ಕಣ್ಣುಗಳ ಸುತ್ತಲಿನ ಭಾಗ ಥರಥರ ಕಂಪಿಸತೊಡಗಿತು. “ನಿಮಗೆ ನನ್ನ ಮೇಲೆ ನಂಬಿಕೆಯಿಲ್ಲ ಅಲ್ಲವೇ?”
“ಜಾನೂ!”
“ನಿಮಗೆ ಹೊರಗಿನ ಜನರ ಸಂಪರ್ಕ ಕಡಿಮೆ. ಪರಿಚಿತರೊಡನೆ ಮಾತೂ ಅಷ್ಟಕ್ಕಷ್ಟೆ. ಹಾಗಿದ್ದ ಮೇಲೆ ನಿಮಗೆ ಇಂಥದ್ದನ್ನು ಹೇಳೋರು ಯಾರು? ನಿಮಗೆ ಕಾಡಿದ ಸಂಶಯವನ್ನು ಜನರ ಮೇಲೆ ಆರೋಪಿಸಿ ಹೇಳುವುದೇಕೆ?”
“ಅಲ್ಲ ಜಾನೂ ಹಾಗಲ್ಲ.”
“ನಾನು ಎಂಥವಳೆಂದು ನನಗೆ ಗೊತ್ತು. ಬಾಕಿದ್ದವರಿಗೆ ಸಾಬೀತುಪಡಿಸಬೇಕಿಲ್ಲ. ನಾನು ಕರುಣಾಕರನ ಜೊತೆಗಿದ್ದರೆ ಯಾರಿಗೇನು? ಮತ್ತೊಂದು ವಿಷಯ. ನನ್ನ ಬಗ್ಗೆ ನೀವು ಚಿಂತೆ ಕಾಳಜಿ ಮಾಡಬೇಕಾದ ಅಗತ್ಯವಿಲ್ಲ. ಈ ಕಟ್ಟುಕತೆಯ ಹಿಂದೆ ಇರುವವರು ಯಾರು ಅಂತ ನನಗೆ ಗೊತ್ತಿದೆ. ಪದೇ ಪದೇ ಈ ವಿಚಾರದ ಬಗ್ಗೆ ಮಾತಾಡುತ್ತಾ ನನ್ನ ಹತ್ತಿರ ಬಂದರೆ ನಿಮಗೇ ತೊಂದರೆ” ಎನ್ನುತ್ತಾ ಹಾಲಿನ ಲೋಟವನ್ನು ಅಲ್ಲೇ ಇಟ್ಟು ತಿರುಗಿಯೂ ನೋಡದೆ ನಡೆದುಬಿಟ್ಟಳು.
ನಾಚಿಕೆ, ಅವಮಾನ ಮತ್ತು ಯಾತನೆಗಳಿಂದ ಭಾಸ್ಕರನ ಕೊರಳು ಕಟ್ಟಿತು. ಶಕ್ತಿ ಉಡುಗಿ ಹೋದಂತಾಯಿತು. ಅಲ್ಲೇ ಇದ್ದ ಕಂಬಕ್ಕೆ ಹಣೆ ಹಚ್ಚಿಕೊಂಡು ಮನದಲ್ಲೇ ರೋದಿಸಿದ. ‘ದೇವರೇ! ಇದನ್ನೆಲ್ಲ ಕೇಳೋದಕ್ಕಾಗಿ ನನ್ನನ್ನು ಜೀವಂತವಾಗಿಟ್ಟಿದ್ದೀಯಾ? ಯಾವ ಜೀವಕ್ಕೋಸ್ಕರ ನಾನು ಸದಾ ಒಳಿತು ಬಯಸುತ್ತಿರುವೆನೋ ಆ ಜೀವ ಯಾವುದೇ ಕಾರಣವಿಲ್ಲದೆ ಅವಮಾನಕ್ಕೊಳಗಾಗುತ್ತಿದೆಯಲ್ಲ. ಅವಳ ಜೊತೆಯಲ್ಲಿ ಬೇರೊಬ್ಬರನ್ನು ಸೇರಿಸಿಕೊಂಡು ನಾನು ಕಳಂಕ ಹಚ್ಚುವೆನೇ? ಅವಳು ಇದನ್ನೇಕೆ ಅರ್ಥ ಮಾಡಿಕೊಳ್ಳುವುದಿಲ್ಲ? ಯಾವ ತಪ್ಪೂ ಮಾಡದ ನಾನು ಈಗ ತಪ್ಪಿತಸ್ಥನೆನಿಸಿಕೊಳ್ಳಬೇಕಾಯಿತಲ್ಲಾ. ನನ್ನ ಮೇಲೆ ಅಷ್ಟೊಂದು ಪ್ರೀತಿ ವಿಶ್ವಾಸಗಳನ್ನು ಹರಿಸುವ, ತಾನು ನೊಂದರೆ ಅಷ್ಟೂ ನೋಯುವ ಈತ ನನಗೇನಾಗಬೇಕು ಎಂದು ಅವಳೊಮ್ಮೆ ಚಿಂತಿಸಿದ್ದರೆ ಅವಳ ಬಾಯಿಯಿಂದ ಇಂಥ ಮಾತು ಬರುತ್ತಿತ್ತಾ? ಛೆ! ಕರುಣಾಕರನ ಪ್ರವೇಶವಾಗುವ ಮೊದಲೇ ನಾನು ಆಕೆಗೆ ತಾಳಿ ಕಟ್ಟಿರುತ್ತಿದ್ದರೆ ಹೀಗೇನೂ ಆಗುತ್ತಿರಲಿಲ್ಲ್ಲ. ಅವಮಾನ ಮತ್ತು ಕಳಂಕಗಳ ಭಾರ ಹೊತ್ತು ಬೀಳಬೇಕಾಗುತ್ತಿರಲಿಲ್ಲ. ಇನ್ನು ಅದು ಸಾಧ್ಯವಿಲ್ಲ. ನನ್ನ ಕಣ್ಣೆದುರು ಆಕೆ ಅವಮಾನಿತಳಾಗುವುದನ್ನು ನೋಡಲಾರೆ. ಆಕೆ ನನ್ನನ್ನು ದ್ವೇಷಿಸಿದರೂ ಸರಿಯೇ. ನನ್ನ ಮನಸ್ಸಿನಲ್ಲಿರುವುದನ್ನು ಹೇಳಿಯೇ ಬಿಡುತ್ತೇನೆ’ ಎಂದುಕೊಂಡು ಅಲ್ಲಿಂದ ಎದ್ದು ಹೊರಟ.
ಒಳಗೊಳಗೆ ಅಂಜುತ್ತಾ ಜಾನಕಿಯ ಕೋಣೆಯ ಕಡೆಗೆ ಅದುರುವ ಹೆಜ್ಜೆಗಳನ್ನಿಡತೊಡಗಿದ ಭಾಸ್ಕರ. ಬಾಗಿಲ ಹಿಡಿಯನ್ನು ಮುಟ್ಟುತ್ತಲೇ ಎದೆ ದಡಬಡಿಸತೊಡಗಿತು. ಏನಾದರಾಗಲಿ ಎಂದುಕೊಂಡು ಬಾಗಿಲನ್ನು ಚೂರೇ ತೆರೆದು ಅದಕ್ಕೆ ಅಡ್ಡವಾಗಿ ನಿಂತು ನೋಡಿದ. ಪೂರ್ತಿ ಕತ್ತಲಿದ್ದರೂ ಕಿಟಿಕಿಯು ಮುಚ್ಚದಿದ್ದುದರಿಂದ ಮೊಣಕಾಲ ಸಂದಿಗೆ ಗಲ್ಲವನ್ನು ಕೊಟ್ಟು ಮುದ್ದೆಯಂತೆ ಕುಳಿತಿದ್ದ ಜಾನಕಿ ಕಾಣಿಸಿದಳು. ಭಾಸ್ಕರ ನೀರೊಳಗೆ ಮುಗ್ಗರಿಸುವಂತೆ ನಡೆಯುತ್ತಾ ಹತ್ತಿರ ಹೋಗಿ ಸಣ್ಣಕ್ಕೆ ಕೆಮ್ಮಿದ. ತಲೆಯ ಸುತ್ತ ಹರಡಿಕೊಂಡಿದ್ದ ಕೆದರು ಕೂದಲನ್ನು ನೇವರಿಸುತ್ತಾ ಕರೆದ. “ಜಾನೂ”
ಅವಳು ಹೆಡೆಯಂತೆ ತಲೆಯೆತ್ತಿದಳು.
“ನನ್ನನ್ನು ತಪ್ಪು ತಿಳಿಯಬೇಡ ಜಾನೂ. ನನಗೆ ನಿನ್ನ ಬಗ್ಗೆ ತಿಳಿದಿಲ್ಲವೇ? ನಿನ್ನ ಬಗ್ಗೆ ಅಂಥ ಕೀಳು ಚಿಂತನೆ ಬೆಳೆಸಿಕೊಳ್ಳುವೆನೆಂದು ಯಾಕೆ ಭಾವಿಸುತ್ತೀ?” ಎನ್ನುತ್ತಿದ್ದಂತೆ ಅವಳು ಕುಳಿತಲ್ಲಿಂದಲೇ ತನ್ನ ಮಂಡಿಗಳ ಮೇಲೆ ತಲೆಯಿಟ್ಟು “ನೀವು ಕೂಡ ನನ್ನನ್ನು ತಪ್ಪು ತಿಳಿದುಕೊಂಡಿರಲ್ಲಾ” ಎಂದು ಅಳತೊಡಗಿದಳು.
“ತಪ್ಪು ತಿಳಿದುಕೊಂಡಿದ್ದರೆ ಈಗ ನಿನ್ನ ಹತ್ತಿರ ಬರುತ್ತಿದ್ದೆನೇ? ದೂರ ಮಾಡುತ್ತಿರಲಿಲ್ಲವೇ? ಇಂಥ ಮಾತುಗಳನ್ನು ಕೇಳಿಯೂ ಇಷ್ಟು ಆತ್ಮೀಯತೆಯಿಂದ ವರ್ತಿಸುವ ನಾನು ನಿನ್ನನ್ನು ಶಂಕಿಸುತ್ತಿದ್ದೇನೆಂದು ತಿಳಿದುಕೊಳ್ಳೋದು ಸರಿಯೇ? ಈ ವಿಷಯದಲ್ಲಿ ನಿನ್ನಷ್ಟೇ ನೋಯುತ್ತಿದ್ದೇನೆ. ನಿದ್ದೆಗೆಟ್ಟು ಒದ್ದಾಡುತ್ತಿದ್ದೇನೆ. ನಿನಗೆ ಒಳ್ಳೆಯದನ್ನಷ್ಟೇ ಬಯಸುವ ನನ್ನ ಮೇಲೆ ಇಷ್ಟು ಕಠೋರವಾದ ಮಾತುಗಳನ್ನಾಡಲು ಹೇಗೆ ಮನಸ್ಸು ಬಂತು?”
“ಆವೇಶದಿಂದ ಏನೋ ಹೇಳಿಬಿಟ್ಟೆ. ನನ್ನನ್ನು ಕ್ಷಮಿಸಿ.”
“ನನ್ನ ಮಾತುಗಳಿಂದ ನೀನೂ ನೋವನುಭವಿಸಬೇಕಾಯಿತು.”
“ಅಯ್ಯೋ! ಹಾಗೆನ್ನಬೇಡಿ!”
“ಆದುದೆಲ್ಲವನ್ನೂ ಮರೆತು ಬಿಡು. ನೋವು ನಲಿವುಗಳನ್ನು ಹಂಚಿಕೊಳ್ಳುತ್ತಾ, ತಪ್ಪುಗಳನ್ನು ಪರಸ್ಪರ ಕ್ಷಮಿಸುತ್ತಾ ಒಟ್ಟಿಗೇ ಬಾಳೋಣ. ಸಾಯುವವರೆಗೂ ಜತೆಗಿರೋಣ. ಪುಟ್ಟನ ಬಗ್ಗೆ ಚಿಂತೆ ಬೇಡ. ಅವ ನನ್ನ ಮಗನೇ. ಅವನನ್ನು ಚಿನ್ನದಂತೆ ಜೋಪಾನ ಮಾಡಿ ಬೆಳೆಸೋಣ. ಅವನೊಬ್ಬನೇ ಮಗ ಸಾಕು ನಮಗೆ.”
ಅವಳಿಗೆ ವೇದನೆ ಉಕ್ಕಿ ಬಂತು. ಮೈಮನಗಳನ್ನು ಒಟ್ಟಾಗಿ ವ್ಯಾಪಿಸಿ ಉಬ್ಬೆ ಹತ್ತಿಸುವ ಸಂಕಟ. ಪ್ರಾಣ ಹೋದರೆ ಮಾತ್ರ ಬಿಡುಗಡೆ ಎನಿಸಿ ನರಳುವಂತೆ ಮಾಡುವ ಯಾತನೆಯಿಂದ ಹೊಟ್ಟೆ ಕದಡಿ ವಾಂತಿ ಬರುವಂತಾಯಿತು. ಹೊರ ಬರಲು ದಾರಿ ಕಾಣದೆ ಕುರುಡು ಕುದಿಯಾಗಿದ್ದ ನೋವು ಕಣ್ಣುಗಳ ಮೂಲಕ ಉಕ್ಕಿ ಹರಿಯಿತು.
“ಆವೇಶದ ಭರದಲ್ಲಿ ಹೀಗೆಲ್ಲ ಹೇಳಬೇಡಿ. ನಿಮಗೆ ನನ್ನ ಬಗ್ಗೆ ಹೆಚ್ಚು ಗೊತ್ತಿಲ್ಲ.” ಗಂಟಲಲ್ಲಿ ಏನೋ ಸಿಕ್ಕಿಕೊಂಡಂತೆ ಆಕೆ ತಡೆ ತಡೆದು ಹೇಳಿದಳು. “ನನಗೆ ವೈಧವ್ಯ ಯೋಗವಿದೆ ಅಂತ ಜಾತಕದಲ್ಲಿತ್ತು. ಹಾಗಿದ್ದೂ ನನಗೆ ಮದುವೆಯಾಯಿತು. ಮಗನೂ ಹುಟ್ಟಿದ. ಕೆಲವೇ ವರ್ಷಗಳಲ್ಲಿ ಅವರು ಹೋಗಿ ಬಿಟ್ಟರು. ನನ್ನ ಕೈಹಿಡಿಯುತ್ತೇನೆ ಅಂತ ನೀವೀಗ ಹೇಳುತ್ತಿದ್ದೀರಿ. ನಾಳೆ ನೀವೂ…”
ಭಾಸ್ಕರನ ಎದೆಗೆ ಗುದ್ದಿದಂತಾಯಿತು. ಹೃದಯದೊಳಗೆ ಕೈ ಹಾಕಿ ಬಿಗಿದಂತಾಯಿತು. ಕುದಿಯುವ ನೀರೆರೆದು ಕುಲುಕಿದಂತಾಯಿತು.
“ಇದೆಲ್ಲ ತಿಳಿದೂ ನಾನು ನಿಮಗೆ ಬೇಕೇ? ಹೇಳಿ, ನಿಮಗೆ ಬದುಕಿನ ಮೇಲೆ ಆಸೆಯಿಲ್ಲವೇ?”
“ಬದುಕು?” ಅವನ ತುಟಿಯಂಚಿನಲ್ಲಿ ನೋವಿನಿಂದ ನಕ್ಕು ಹೇಳಿದ. “ಇದುವರೆಗೆ ನಾನು ಬದುಕಿದ್ದೆನಾ?”
ಹಳ್ಳದ ಮೇಲೆ ಹರಳೊಂದು ಬಿದ್ದಾಗ ಅಲೆಗಳು ಹುಟ್ಟಿ ಚಲಿಸುವಂತೆ ಅವಳ ಮೈ ನಡುಗಿತು. ತನ್ನ ಕೈಯೊಳಗೆ ಭದ್ರವಾಗಿದ್ದ ಆಕೆಯ ಮುಂಗೈ ಬೆರಳುಗಳು ನುಗ್ಗುನುರಿಯಾಗುವಂತೆ ಹುರಿಗೊಳ್ಳುತ್ತಿರುವುದು ಅನುಭವಕ್ಕೆ ಬರುತ್ತಿದ್ದಂತೆ ಅವನು ಎಚ್ಚರಗೊಂಡ. ತಲೆಯೆತ್ತುತ್ತಿದ್ದಂತೆ ಕಣ್ಣಿಗೆ ಕಣ್ಣು ಕೂಡಿತು.
“ಇನ್ನು ಯೋಚಿಸಬೇಕಾದವನು ನಾನಲ್ಲ ಜಾನೂ. ಇನ್ನೊಂದು ಮನೆಗೆ ಕಾಲಿಡಬೇಕಾಗಿರೋ ನೀನು. ಸಮಾಧಾನದಿಂದ ಆಲೋಚಿಸಿ ಕೆಲವು ದಿನಗಳ ನಂತರ ತಿಳಿಸಿದರೆ ಸಾಕು. ಒಪ್ಪಿಗೆಯಿದ್ರೂ ಇಲ್ಲದಿದ್ರೂ ನಿನ್ನ ಉತ್ತರ ಮುಖ್ಯ.”
ಎನ್ನುತ್ತಿದ್ದಂತೆ ಯಾವುದೋ ಒಂದು ವಿಷಯವನ್ನು ಹೇಳಲು ಅವರಿಬ್ಬರೂ ಒಟ್ಟಿಗೇ ಬಾಯಿ ತೆರೆದರು. ಅಜ್ಞಾತ ಪ್ರೇರಣೆಯಿಂದಲೋ ಎಂಬಂತೆ ಬಾಯಿ ತೆರೆದುಕೊಂಡೇ ಪರಸ್ಪರ ನೋಡುತ್ತಾ ಕುಳಿತರು.