ನನ್ನ ಅಕ್ಕ ಒಂದೇ ಸಮನೆ ವಟಗುಟ್ಟುತ್ತಿದ್ದಳು “ಒಂದು ಕೆಲಸ ಹೇಳಿದರು ಮಾಡಲಾರರು ಈಗಿನ ಮಕ್ಕಳು, ನಾವು ನಿಮ್ಮ ವಯಸ್ಸಿನಲ್ಲಿ ದಿನಸಿ, ತರಕಾರಿ ಮನೆಗೆ ತರುತ್ತಿದ್ದೆವು. ಅಮ್ಮನಿಗೆ ಸಹಾಯ ಮಾಡುತ್ತಿದ್ದೆವು.ಈಗ ಸದಾ ಮೊಬೈಲ್ ನಲ್ಲಿ ಅಥವಾ ಟಿವಿ ಮುಂದೆ ಕೂತಿರ್ತಾರೆ, ಇಲ್ಲವೆ ಲ್ಯಾಪ್ಟಾಪ್ ಮುಂದೆ! ಏನಾದರೂ ಸಣ್ಣ ಕೆಲಸ ಹೇಳಿದರೆ ಹೊರಗಡೆ ಹೋಗಿ ಆ ವಸ್ತುವನ್ನು ತಂದುಕೊಡುವುದಿಲ್ಲ. ಅದರ ಬದಲಾಗಿ ಯ್ಯಾಪ್ ಮೂಲಕ ಆರ್ಡರ್ ಮಾಡಿ ಐದು ನಿಮಿಷದಲ್ಲಿ ಕಣ್ಣು ಮಿಟುಕಿಸುವಷ್ಟರಲ್ಲಿ, ಮನೆಗೆ ತರಿಸಿಬಿಡುತ್ತಾರೆ. ಇಂತಹ ಹಲವಾರು ಯ್ಯಾಪ್ ಗಳು ಬಂದು ಎಲ್ಲವೂ ಬೆರಳ ತುದಿಯಲ್ಲಿ ಸಿಕ್ಕು ಬಿಡುತ್ತವೆ.ಇವೆಲ್ಲಾ ಮಂಗ್ಯಾಗ ಇನ್ನಷ್ಟು ಹೆಂಡ ಕುಡಿಸಿದಂಗಾಯ್ತು. ಸೋಮಾರಿಗಳನ್ನ ಇನ್ನಷ್ಟು ಸೋಮಾರಿಗಳನ್ನಾಗಿ ಮಾಡಲಿಕ್ಕೆ ಕುಮ್ಮಕ್ಕು ಕೊಟ್ಟಂತೆ. ಈ ಆನ್ ಲೈನ್ ಬಂದ ಮ್ಯಾಲ ಮನ್ಯಾಗಿನ ಮಂದಿಗೆ ಮೈಗಳ್ಳತನ ಬಂದಬಿಟ್ಟದ “. ಎಂದು ತನ್ನ ಗೋಳನ್ನು ತೋಡಿಕೊಂಡಳು.
ಇಂದಿನ ಪರಿಸ್ಥಿತಿಯಲ್ಲಿ ನಿಂತು ನೋಡುವುದಾದರೆ ಈ ಸೋಮಾರಿತನ ಎನ್ನುವುದು ಮನೆಯಲ್ಲಿ, ಕಛೇರಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಇತ್ಯಾದಿ ಕಡೆಗಳಲ್ಲಿ ಕಾಣಬಹುದು. ಹತ್ತು ಜನ ಇದ್ದರೆ ಅದರಲ್ಲಿ ಕನಿಷ್ಠ ಇಬ್ಬರಾದರೂ ಸೋಮಾರಿಗಳು ಇದ್ದೇ ಇರುತ್ತಾರೆ. ಸೋಮಾರಿತನ ಅಥವಾ ಮೈಗಳ್ಳತನ ಎಂದರೆ ಸಾಮರ್ಥ್ಯವಿದ್ದರೂ ನಿರಾಸಕ್ತಿಯನ್ನು ಹೊಂದಿ ಚಟುವಟಿಕೆ ಅಥವಾ ಶ್ರಮಪಡದೇ ಇರುವುದು ಎಂದರ್ಥ. ಎಲ್ಲವೂ ಅನಾಮತ್ತಾಗಿ ಯಾವುದೇ ಪ್ರಯಾಸವಿಲ್ಲದೆ ತಮಗೆ ಸಿಗಬೇಕು ಎನ್ನುವ ಪ್ರವೃತ್ತಿ ಉಳ್ಳವರು ಹಾಗೂ ತಮ್ಮ ಚಟುವಟಿಕೆಯಿಲ್ಲದೆ ಚಟಗಳಲ್ಲಿಯೇ ಮುಳುಗಿ ಹೋಗಿ ಯಾವುದರ ಬಗ್ಗೆಯೂ ಕಾಳಜಿ ಮಾಡದೇ ಇರುವುದು. ಭವಿಷ್ಯದ ಕುರಿತಾಗಿ ನಿರ್ಲಕ್ಷ ತಳೆಯುವುದು. ಹೀಗಾದರೆ ಇವರನ್ನು ನಂಬಿದವರಿಗೆ ಬದುಕಿನಲ್ಲಿ ಸಂಕಷ್ಟಗಳ ಸರಮಾಲೆಯೇ ನಿಶ್ಚಿತ. ಹೀಗೀರುವ ಬಹಳಷ್ಟು ಮಧ್ಯ ವಯಸ್ಕರನ್ನು ಮತ್ತು ಯುವಕರನ್ನು ನಮ್ಮ ಸುತ್ತಮುತ್ತ ಕಾಣುತ್ತೇವೆ. ಗಂಡು-ಹೆಣ್ಣಿನ ಭೇದವಿಲ್ಲ. ಎಷ್ಟೋ ಸಲ ಸೋಮಾರಿ ಹೆಣ್ಣುಮಕ್ಕಳನ್ನೂ ಕಾಣ್ತೇವೆ. ಇವರ ಸಮಸ್ಯೆಗಳಿಗೆ ಅವರ ಜೀವನ ಶೈಲಿಯೇ ಬಹುಮಟ್ಟಿಗೆ ಕಾರಣವಾಗಿದೆ. ಜೀವನ ಶೈಲಿಯಲ್ಲಿನ ಪರಿವರ್ತನೆ ಪರಿಹಾರವಾಗಿದೆ, ಎಂಬ ಸಲಹೆ ತಿಳಿದವರಿಂದ ಬರುತ್ತದೆ. ಜೀವನ ಪದ್ಧತಿ ಬದಲಾಗಬೇಕಿದೆ ಎನ್ನುವ ಸೂಚನೆಗಳೂ ಕೇಳಿಬರುತ್ತವೆ. ಹಾಗಾದರೆ ಜೀವನ ಶೈಲಿ ಅಂದರೆ ಏನು?
ಜೀವನಶೈಲಿ ಎಂದರೆ ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಂಡಿರುವ ಆಚಾರ – ವಿಚಾರ , ಉಡುಗೆ – ತೊಡುಗೆ, ಆಹಾರ ಪದ್ಧತಿ ,ಆಚರಣೆಗಳು ಇವೇ ಮುಂತಾದವು. ಇವೆಲ್ಲವೂ ನಮ್ಮ ಸಂಸ್ಕೃತಿಯನ್ನು ಆಧರಿಸಿವೆ. ಸಂಸ್ಕೃತಿಯಿಂದಲೇ ಜೀವನಕ್ಕೆ ಒಂದು ಚೆಲುವು ಅಥವಾ ಮೆರಗು ಬರುತ್ತದೆ. ನಮ್ಮ ಬದುಕು ಸಂತೋಷಮಯವಾಗಿ ಇರಬೇಕೆಂದರೆ ಈ ‘ಸಂಸ್ಕೃತಿ ‘ಯ ಜೊತೆಗೆ ನಾವಿರಬೇಕಾಗುತ್ತದೆ. ಇದೇ ಜೀವನಶೈಲಿಯ ಭಾಗವಾದಾಗ ಮಾನವನ ಬದುಕು ಹಸನಾಗುತ್ತದೆ.
ಸ್ನೇಹಿತರೆ, ಇನ್ನು ಸಂಸ್ಕೃತಿ ಎಂದರೇನು? ಎಂಬ ಪ್ರಶ್ನೆ ಕಾಡುತ್ತದೆ. ‘ಸಂಸ್ಕೃತಿ’ ಪದವು ತುಂಬ ವ್ಯಾಪಕವಾದ ಅರ್ಥವನ್ನು ಹೊಂದಿದೆ. ಲ್ಯಾಟಿನ್ ಭಾಷೆಯಲ್ಲಿ ಇದನ್ನು Culture ಎನ್ನುತ್ತಾರೆ. cultus- ಗೌರವಿಸು, ಆರಾಧಿಸು; ture- ಕೃಷಿ, ಸೇವೆ ಎಂಬ ಅರ್ಥಗಳಿವೆ. ಹೃದಯವನ್ನು ಉತ್ತಿ , ಬಿತ್ತಿ ಹಸನುಗಳಿಸುವುದೇ ಸಂಸ್ಕೃತಿ. ಆತ್ಮ ಶಿಕ್ಷಣ, ಸೌಜನ್ಯ , ಸಹಬಾಳ್ವೆ ,ಪ್ರೀತಿ, ಕರುಣೆ , ತಾಳ್ಮೆ , ಹಬ್ಬ ಹರಿದಿನ, ಹಿರಿಯರನ್ನು ಗೌರವಿಸುವುದು ಹೀಗೆ ಇವೆಲ್ಲವನ್ನೂ ಸಂಸ್ಕೃತಿ ಒಳಗೊಂಡಿರುತ್ತದೆ .
ಮ್ಯಾಥ್ಯೂ ಅರ್ನಾಲ್ಡ್ (ಚಿಂತಕ)
ಸಂಸ್ಕೃತಿಯ ವ್ಯಾಖ್ಯಾನವನ್ನು ಮ್ಯಾಥ್ಯೂ ಅರ್ನಾಲ್ಡ್ ಎಂಬ ತಜ್ಞ ಸಂಸ್ಕೃತಿ ಎಂದರೆ “ಸುಗುಣ ಸಾಮರಸ್ಯ, ಪರಿಪೂರ್ಣತೆಯ ಗುರಿ” ಎನ್ನುತ್ತಾರೆ. ಖ್ಯಾತ ಕನ್ನಡ ಸಂಶೋಧಕ ಶಂ.ಬಾ ಜೋಶಿ ಅವರು ಸಂಸ್ಕೃತಿ ಎಂದರೆ “ಮನುಷ್ಯನ ಸರ್ವತೋಮುಖ ಚೈತನ್ಯ” ಎಂದು ಬಣ್ಣಿಸುತ್ತಾರೆ . ಹೀಗೆ ಹಲವಾರು ತಜ್ಞರು ಬೇರೆ ಬೇರೆ ರೀತಿಯ ವ್ಯಾಖ್ಯಾನಗಳನ್ನು ಕೊಡುತ್ತಾರೆ, ಆದರೆ ಸಾರ ಒಂದೇ ಆಗಿದೆ. ಹಾಗಾದರೆ ಮನುಷ್ಯ ಚೈತನ್ಯವನ್ನು ಕಳೆದುಕೊಂಡು ಸೋಮಾರಿಯಾಗುತ್ತಿದ್ದಾನೆ; ಎಂದರೆ ನಮ್ಮ ಸಂಸ್ಕೃತಿಯಿಂದ ದೂರವಾಗುತ್ತಿದ್ದೇವೆ ಎಂದರ್ಥವಲ್ಲವೇ!
ಹಾಗಾದರೆ ಈ ಚೈತನ್ಯವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ? ಚೈತನ್ಯವನ್ನು ಹೆಚ್ಚಿಸಿಕೊಳ್ಳಲು ನಮ್ಮ ಸಂಸ್ಕೃತಿಯಲ್ಲಿಯೇ ದಾರಿ ಇದೆ. ಅದೇ ಸಂಗೀತ , ಸಾಹಿತ್ಯ , ಕಲೆ, ಕ್ರೀಡೆ ಅಥವಾ ಹಬ್ಬಹರಿದಿನಗಳ ಆಚರಣೆ, ಆರಾಧನೆ ,ಧ್ಯಾನ , ಯೋಗ ಇಷ್ಟೆಲ್ಲ ಪರಿಕರಗಳಿವೆ. ಇವುಗಳಲ್ಲಿ ನಿಮಗೆ ಇಷ್ಟವಾಗುವ ಯಾವುದಾದರೂ ಒಂದನ್ನ ಮೈಗೂಡಿಸಿಕೊಂಡರೆ ಸಾಕು , ಜೀವನ ಸದಾ ಗೆಲುವಾಗಿರುತ್ತದೆ.
ಮಾನವ ಜನ್ಮವೆಂಬುದು ಅತ್ಯಮೂಲ್ಯವಾದದು. ಎಷ್ಟೋ ಜನ್ಮಗಳ ಪುಣ್ಯದಿಂದ ಅದು ಪ್ರಾಪ್ತವಾಗುತ್ತದೆ. ಅದರಲ್ಲೂ ಭಾರತದಂತಹ ಪುಣ್ಯಭೂಮಿಯಲ್ಲಿ ನಾವು ಜನಿಸಿರುವುದು ನಮ್ಮ ಸೌಭಾಗ್ಯವೇ ಸರಿ. ಇಂತಹ ಸೌಭಾಗ್ಯಕ್ಕೆ ದೇವಾಧಿದೇವತೆಗಳು ಸದಾ ಹಂಬಲಿಸುತ್ತಾರೆ ಎನ್ನಲಾಗಿದೆ . ಆದರೆ ಅಯಾಚಿತವಾಗಿ ದೊರೆತ ಈ ಸದಾವಕಾಶದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಯಾಕೆ ನಾವೆಲ್ಲ ಅಸಮರ್ಥರಾಗುತ್ತಿದ್ದೇವೆ ? ಪ್ರತಿಯೊಬ್ಬನ ವ್ಯಕ್ತಿತ್ವದಲ್ಲಿ ಕಸುವು ಇದೆ . ಅಪಾರವಾದ ಬುದ್ಧಿಶಕ್ತಿ ಇದೆ, ಸಾಮರ್ಥ್ಯಗಳೂ ಇವೆ. ಅವುಗಳ ಪ್ರಾಮುಖ್ಯತೆಯ ಅರಿವಿಲ್ಲದೆ ಮನುಷ್ಯ ಹುಡುಕಾಟ ನಡೆಸುತ್ತಿರುತ್ತಾನೆ. ಆಂತರಿಕ ಚೈತನ್ಯದ ಸದ್ಬಳಕೆಯನ್ನು ಕಲಿತುಕೊಳ್ಳುವುದೇ ಮಾನವ ಜೀವಿತದ ಪರಮೋದ್ದೇಶವಾಗಿದೆ .ಅವಾಗಲೇ ಜೀವನದ ಸಾರ್ಥಕತೆಗೋಸ್ಕರ ಶ್ರಮಿಸುವ ಬಯಕೆಯೂ ಚಿಗುರೊಡೆಯಬಹುದು. ಹಾಗಾದಾಗಲೇ ಮನುಷ್ಯ ಧನ್ಯತೆಯ ಸಹಜಾನಂದವನ್ನು ಅನುಭವಿಸುತ್ತಾನೆ.
ಮತ್ತೇನೂ ಮಾಡುವುದು ಬೇಡ ನಮ್ಮ ನಮ್ಮ ಮನೆಯ ಸಂಪ್ರದಾಯಗಳನ್ನು ಆಚರಣೆಗಳನ್ನು ನಾವು ಎಷ್ಟೋ ಮರೆಯುತ್ತ ಬಂದಿದ್ದೇವೆ .ಅದನ್ನು ಸ್ವಲ್ಪ ಮಟ್ಟಿಗೆ ಆದರೂ ಆಚರಿಸಲು ಮುಂದಾಗಬಹುದಲ್ಲವೇ!
ಇವೆಲ್ಲವೂ ಒಂದು ರೀತಿ ನಮಗೆ ಗೊತ್ತಿದ್ದೋ ಗೊತ್ತಿಲ್ಲದೇಯೋ ನಮ್ಮೊಳಗಿನ ಆಂತರಿಕ ಚೈತನ್ಯವನ್ನು ವೃದ್ಧಿಗೊಳಿಸುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಮೈಗಳ್ಳತನ ಮೈಲು ದೂರ ಹಾರಿ ಹೋಗುತ್ತದೆ. ಬಾಲ್ಯದಿಂದಲೇ ಈ ಅಭ್ಯಾಸ ಇರುವವರು ಎಂದೂ ಸೋಮಾರಿಗಳಾಗಲಾರರು. ಈಗಲೂ ನೀವು ನೋಡಿರ ಬಹುದು ಮನೆಯಲ್ಲಿರುವ ಹಿರಿಯರು, 70 ವರ್ಷ ಮೇಲ್ಪಟ್ಟವರು, ಹಬ್ಬದ ದಿನಗಳಲ್ಲಿ ಮುಂಜಾನೆ ಬೇಗ ಎದ್ದು ಮನೆಯನ್ನು ಚೊಕ್ಕಗೊಳಿಸಿ ಅಂದಿನ ಪೂಜೆ , ಅಡುಗೆಗೆ ಅಣಿ ಮಾಡಿಕೊಳ್ಳುತ್ತಾರೆ. ನಾವು ನಂತರ ಎದ್ದು ನೋಡುವುದರಲ್ಲಿ ಹಬ್ಬದ ಅರ್ಧ ಕೆಲಸ ಆಗಿಯೇ ಹೋಗಿರುತ್ತದೆ. ಅಂದರೆ ಅವರಲ್ಲಿರುವ ಜೀವನ ಉತ್ಸಾಹ, ಜೀವನ ಪ್ರೀತಿ ಇವೆಲ್ಲದಕ್ಕೂ ಮೂಲ ಕಾರಣ. ಅವರು ಜೀವನವಿಡೀ ಮಾಡಿಕೊಂಡು ಬಂದ ಆಚರಣೆಗಳು ಮತ್ತು ಆರಾಧನೆಗಳು ಇವೆಲ್ಲ ಅವರಿಗೆ ಚೇತನವನ್ನು ತುಂಬುವ ಆಕರಗಳಾಗಿ ನಿಲ್ಲುತ್ತವೆ.
ಒಟ್ಟಿನಲ್ಲಿ ಆರೋಗ್ಯ ಮತ್ತು ಆರೋಗ್ಯ ಕರ ಅಭ್ಯಾಸಗಳಿಗಾಗಿ ಯುವಕರನ್ನು ಪ್ರೇರೆಪಿಸಬೇಕಿದೆ. ಪಾಲಕರು, ಗುರುಗಳು ಮತ್ತು ಹಿರಿಯರು ಮುತುವರ್ಜಿಯಿಂದ ನಮ್ಮ ನಮ್ಮ ಆಚರಣೆಗಳನ್ನ ಮತ್ತೆ ರೂಢಿಸಿಕೊಳ್ಳಬೇಕಿದೆ. ಈ ವಿಷಯವಾಗಿ ಕೊರೊನಾ ನಮಗೆ ಎಷ್ಟೊಂದು ಪಾಠ ಕಲಿಸಿದೆ. ಅದನ್ನೂ ನಾವು ಮರೆಯುವಂತಿಲ್ಲ. ನಮ್ಮ ಜೀವನ ಶೈಲಿಗೂ ನಮ್ಮ ಸಂಸ್ಕೃತಿಗೂ ಅವಿನಾಭಾವ ಸಂಬಂಧ ಇದೆಲ್ಲವೆ ?
2 thoughts on “ನೀತಿ ಪ್ರತೀತಿ – ವಿಭಾ ಪುರೋಹಿತ ಅಂಕಣl ‘ಸಂಸ್ಕೃತಿಯಿಂದಲೇ ಜೀವನಕ್ಕೆ ಚೆಲುವು’”
ಜೀವನ ಪ್ರೀತಿ ಇದ್ದರೆ ಎಲ್ಲವೂ ಸಾಧ್ಯ. ಮುಖ್ಯವಾಗಿ ಯುವ ಜನಾಂಗ ಇದನ್ನು ಅರಿತು ನಡೆಯಬೇಕು. ಲೇಖನ ತುಂಬಾ ಚೆನ್ನಾಗಿದೆ.
ಧನ್ಯವಾದಗಳು