ಮಲಯಾಳಿ ಸಾಹಿತಿಗಳಿಂದ ಕಲಿಯುವುದು ತುಂಬ ಇದೆ. ಅಲ್ಲಿನ ಸಾಹಿತಿಗಳಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಎಂಬ ಬೇಧಭಾವವಿಲ್ಲ. ಅವರು ಯಾವುದೇ ಜಾತಿಗೆ ಸೇರಿದ್ದರೂ ತಮ್ಮನ್ನು ತಾವು ಮಲಯಾಳಿ ಲೇಖಕ-ಲೇಖಕಿ ಎಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆಯೇ ಹೊರತು ಹಿಂದೂ, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಲೇಖಕರೆಂದಲ್ಲ. ಆದರೆ ಕನ್ನಡದಲ್ಲಿ ಮಾತ್ರ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ನಾಯಕ, ಕುರುಬ, ಬಂಟ, ದಲಿತ (ಎಡಗೈ-ಬಲಗೈ), ಮುಸ್ಲಿಂ ಮತ್ತು ಕ್ರಿಶ್ಚಿಯನ್ ಲೇಖಕ-ಲೇಖಕಿಯರಿದ್ದಾರೆ ಆದರೆ ಕನ್ನಡ ಸಾಹಿತಿಗಳಿಲ್ಲ! ಕನ್ನಡ ಸಾಹಿತಿಗಳಲ್ಲಿರುವ ಜಾತೀಯತೆ ಯಾರಿಗಾದರೂ ಅಸಹ್ಯ ಹುಟ್ಟಿಸುತ್ತದೆ.
ಸಾಹಿತ್ಯದಲ್ಲಿ ಜಾತಿಪ್ರಜ್ಞೆಯ ಕುರಿತ ಚರ್ಚೆ ಇಂದು ನಿನ್ನೆಯದಲ್ಲ, ಅದು ಹಲವು ದಶಕಗಳಿಂದ ನಡೆಯುತ್ತಲೇ ಬಂದಿದೆ. ಕಳೆದ ಶತಮಾನದ ನಲವತ್ತರ ದಶಕದಲ್ಲಿ ನಮ್ಮ ದೇಶಕ್ಕಿನ್ನೂ ಸ್ವಾತಂತ್ರ್ಯ ದೊರೆತಿರಲಿಲ್ಲ. ಭಾಷಾವಾರು ಪ್ರಾಂತ್ಯಗಳ ರಚನೆಯಾಗಿರಲಿಲ್ಲ. ಆ ಕಾಲಘಟ್ಟದಲ್ಲಿ ಸಾಹಿತಿಗಳು, ಕಲಾವಿದರು, ರಾಜಕಾರಣಿಗಳು ಸೇರಿದಂತೆ ಎಲ್ಲರಿಗೂ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಬೇಕೆಂಬ ಬಹು ದೊಡ್ಡ ಲಕ್ಷ್ಯವಿತ್ತು. ಅವರೆಲ್ಲ ತಮ್ಮ ಸಂಪೂರ್ಣ ಪ್ರತಿಭೆ, ಸಾಮರ್ಥ್ಯ ಮತ್ತು ಸಮಯವನ್ನು ಇಂತಹ ದೊಡ್ಡ ಗುರಿಯ ಪೂರೈಕೆಗಾಗಿ ವಿನಿಯೋಗಿಸಿದರು. ಬಹುಶಃ ಅದೇ ಸಮಯದಲ್ಲಿ ಭಾರತದಾದ್ಯಂತ ಹೊಸ ಸಂಚಲನ ಉಂಟುಮಾಡಿದ ಪ್ರಗತಿಶೀಲ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ತುಂಬ ಕ್ಷೀಣವಾಗಿ ಆರಂಭವಾದ ಜಾತಿಪ್ರಜ್ಞೆ ಮುಂದೆ ಪ್ರಬಲವಾಗುತ್ತ ಸಾಗಿತು.
ಪ್ರಗತಿಶೀಲ ಸಾಹಿತ್ಯದ ಮುಖ್ಯ ಸಾಧನೆಯೆಂದರೆ ಜಾತಿಪ್ರಜ್ಞೆಗಿಂತ ವರ್ಗಪ್ರಜ್ಞೆಗೆ ಆದ್ಯತೆ ನೀಡಿದುದು. ಕಮ್ಯೂನಿಸಂ ಚಿಂತನೆಯ ಪ್ರಭಾವದ ಹಿನ್ನಲೆಯಲ್ಲಿ ಸಾಹಿತ್ಯ ರಚನೆ ಮಾಡಿದ ಬಹುತೇಕ ಸಾಹಿತಿಗಳಲ್ಲಿ ಜಾತಿಪ್ರಜ್ಞೆಗಿಂತ ವರ್ಗಪ್ರಜ್ಞೆ ಹೆಚ್ಚು ಪ್ರಖರವಾಗಿ ಕಂಡುಬರುತ್ತದೆ. ಕನ್ನಡದ ಮಹತ್ವದ ಲೇಖಕರಾದ ನಿರಂಜನ ಮತ್ತು ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು ಇದಕ್ಕೆ ಒಳ್ಳೆಯ ಉದಾಹರಣೆ. ಶೋಷಕರು ವರ್ಸಸ್ ಶೋಷಿತರು ಎಂಬ ನೆಲೆಯಲ್ಲಿ ಸಾಹಿತ್ಯ ರಚನೆ ಮಾಡಿದ ಪ್ರಗತಿಶೀಲರು ತುಂಬ ಒಳ್ಳೆಯ ಕೃತಿಗಳನ್ನು ಕೊಟ್ಟರು ಎಂಬುದು ಗಮನಾರ್ಹ.
ಕನ್ನಡದ ನಿರಂಜನ, ಬಸವರಾಜ ಕಟ್ಟೀಮನಿ, ಮಲಯಾಳದ ತಕಳಿ ಶಿವಶಂಕರ ಪಿಳ್ಳೈ, ಕೇಶವ ದೇವ್, ಶಂಕರನ ಕುಟ್ಟಿ ಪೊಟ್ಟೆಕ್ಕಾಟ್ಟ್, ವೈಕಂ ಮಹಮ್ಮದ್ ಬಷೀರ್, ತಮಿಳಿನ ಅಖಿಲನ್, ಜಯಕಾಂತನ್, ತೆಲುಗಿನ ಪಾಲಗುಮ್ಮಿ ಪದ್ಮರಾಜು, ರಾಚಕೊಂಡ ವಿಶ್ವನಾಥ ಶಾಸ್ತ್ರೀ, ಒರಿಯಾದ ಗೋಪಿನಾಥ್ ಮೊಹಂತಿ, ಸುರೇಂದ್ರ ಮೊಹಂತಿ, ಬಂಗಾಳಿಯ ಮಹಾಶ್ವೇತಾದೇವಿ, ಅಸ್ಸಾಮಿಯ ಸಯ್ಯದ್ ಅಬ್ದುಲ್ ಮಲಿಕ್, ಗುಜರಾತಿಯ ಪನ್ನಾಲಾಲ್ ಪಟೇಲ್, ಮರಾಠಿಯ ವೆಂಕಟೇಶ ಮಾಡಗೂಳಕರ್, ಉರ್ದುವಿನ ಕೃಷನ್ ಚಂದರ್, ರಾಜೇಂದ್ರ ಸಿಂಗ್ ಬೇಡಿ, ಹಿಂದಿಯ ಪ್ರೇಮಚಂದ್, ಯಶಪಾಲ್, ಫಣೀಶ್ವರನಾಥ್ ರೇಣು, ಅಮೃತಲಾಲ್ ನಾಗರ್ ಸೇರಿದಂತೆ ತುಂಬ ಜನ ದಿಗ್ಗಜ ಲೇಖಕರೆಲ್ಲ ಬರೆದ ಕೃತಿಗಳು ವರ್ಗಪ್ರಜ್ಞೆಯ ಹಿನ್ನಲೆಯಲ್ಲಿ ರೂಪುಗೊಂಡಿವೆಯೇ ಹೊರತು ಜಾತಿಪ್ರಜ್ಞೆಯ ಹಿನ್ನಲೆಯಲ್ಲಿ ಅಲ್ಲ ಎಂಬುದು ಉಲ್ಲೇಖನೀಯ.
ಕನ್ನಡಿಗರಲ್ಲಿ ಓದಿನ ಅಭಿರುಚಿ ಬೆಳೆಯುವಂತೆ ಮಾಡಿದ ಪ್ರಗತಿಶೀಲ ಲೇಖಕರು ತಮ್ಮ ಕೃತಿಗಳಲ್ಲಿ ಸಮಕಾಲೀನ ಸಾಮಾಜಿಕ ಸಮಸ್ಯೆಗಳನ್ನು ತುಂಬ ದಿಟ್ಟವಾಗಿ ಮತ್ತು ನೇರವಾಗಿ ತಂದರು. ಸ್ವಾತಂತ್ರ್ಯೋತ್ತರ ಭಾರತದ ಭ್ರಷ್ಟ ರಾಜಕೀಯ ವ್ಯವಸ್ಥೆ, ಸಮಾಜದ ಶ್ರೇಣಿಕೃತ ಅಸಮಾನತೆ, ಧಾರ್ಮಿಕ ಸಂಸ್ಥೆಗಳ ಅಧಃಪತನ, ವೇಶ್ಯಾ ಸಮಸ್ಯೆ ಸೇರಿದಂತೆ ಹತ್ತು ಹಲವು ಜ್ವಲಂತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಪ್ರಾಮಾಣಿಕ ಪ್ರಯತ್ನವನ್ನು ಪ್ರಗತಿಶೀಲರು ಮಾಡಿದರು. ಜೀವನಕ್ಕಾಗಿ ಕಲೆ ಎಂಬ ಧ್ಯೇಯ ವಾಕ್ಯದೊಡನೆ ಸಾಹಿತ್ಯ ರಚನೆ ಮಾಡಿದ ಪ್ರಗತಿಶೀಲರು ಜನಪ್ರಿಯ ಕಥೆ-ಕಾದಂಬರಿಗಳ ಮೂಲಕ ಜನರನ್ನು ತಲುಪುವಲ್ಲಿ ಯಶಸ್ವಿಯಾದರು.
ಕಳೆದ ಶತಮಾನದ ಐವತ್ತರ ದಶಕದ ಮಧ್ಯಭಾಗದಲ್ಲಿ ಹುಟ್ಟಿಕೊಂಡ ನವ್ಯ ಸಾಹಿತ್ಯ ಚಳುವಳಿ ಕನ್ನಡ ಸಾಹಿತ್ಯ ಲೋಕಕ್ಕೆ ಕಾವ್ಯ, ನಾಟಕ, ಕಥೆ, ಕಾದಂಬರಿ ಮತ್ತು ವಿಮರ್ಶೆಯ ಪ್ರಕಾರಗಳಲ್ಲಿ ಹತ್ತು ಹಲವು ಅಮೂಲ್ಯ ಕೃತಿಗಳನ್ನು ಕೊಟ್ಟಿದೆ. ಬಹುಶಃ ಕನ್ನಡದಲ್ಲಿ ವಿಮರ್ಶಾ ಸಾಹಿತ್ಯ ವ್ಯವಸ್ಥಿತವಾಗಿ ಬೆಳೆಯಲು ಆರಂಭಿಸಿದ್ದೇ ನವ್ಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ಎಂಬುದು ಗಮನಾರ್ಹ. ಪಾಶ್ಚಾತ್ಯ ಸಾಹಿತ್ಯದ ತೀವ್ರ ಪ್ರಭಾವ, ಪರಕೀಯ ಪ್ರಜ್ಞೆ, ಅಸ್ತಿತ್ವವಾದ, ಪಿತೃಹತ್ಯೆ, ಅತಿಯಾದ ಲಂಪಟತನ, ವಿಮರ್ಶೆಯ ರಾಜಕೀಯ ಮತ್ತು ಶ್ರೇಷ್ಠತೆಯ ವ್ಯಸನದಿಂದ ಬಳಲಿದ ನವ್ಯ ಸಾಹಿತ್ಯ ಎಪ್ಪತ್ತರ ದಶಕದ ಆರಂಭದ ಹೊತ್ತಿಗೆ ದುರ್ಬಲವಾಗುತ್ತ ಸಾಗಿ, ಆ ದಶಕದ ಕೊನೆಯ ಹೊತ್ತಿಗೆ ಅವಸಾನ ಕಂಡಿತು.
ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಕನ್ನಡದ ಮಹತ್ವದ ಲೇಖಕರಾದ ಪೂರ್ಣಚಂದ್ರ ತೇಜಸ್ವಿ ಮತ್ತು ಬೆಸಗರಹಳ್ಳಿ ರಾಮಣ್ಣನವರ ಕಥೆಗಳ ಮೂಲಕ ಅದಾಗಲೇ ಅನಧಿಕೃತವಾಗಿ ಉದ್ಘಾಟನೆಗೊಂಡ ದಲಿತ-ಬಂಡಾಯ ಚಳುವಳಿ ಎಂಬತ್ತರ ದಶಕದಲ್ಲಿ ತುಂಬ ಪ್ರಬಲವಾಗಿ ಬೆಳೆಯಿತು. ಸಮಾಜದ ತುಂಬ ಕೆಳ ಮತ್ತು ಅಲಕ್ಷಿತ ವರ್ಗದಿಂದ ಬಂದ ಲೇಖಕ-ಲೇಖಕಿಯರು ಸ್ಪಷ್ಟವಾಗಿ ಜಾತಿಪ್ರಜ್ಞೆಯಿಂದ ಕೃತಿ ರಚನೆ ಮಾಡಿದರು. ಕಥನದಲ್ಲಿ ದೇವನೂರ ಮಹಾದೇವ ಮತ್ತು ಕಾವ್ಯದಲ್ಲಿ ಸಿದ್ಧಲಿಂಗಯ್ಯ ನವತಾರೆಗಳಾಗಿ ಹೊಮ್ಮಿದರು. ಈ ಚಳುವಳಿಯಿಂದ ಕನ್ನಡ ಸಾಹಿತ್ಯ ಲೋಕ ಅದುವರೆಗೆ ಕಂಡಿರದ ಹೊಸ ಜಗತ್ತೊಂದರ ಅನಾವರಣವಾದಂತಾಯಿತು. ಅಲಕ್ಷಿತ ಮತ್ತು ಹಿಂದುಳಿದ ವರ್ಗಗಳ ಜನರ ಬದುಕು-ಬವಣೆಯನ್ನು ಸಮರ್ಥವಾಗಿ ಕಟ್ಟಿಕೊಟ್ಟ ಹಲವು ಕೃತಿಗಳು ಬಂದವು.
ಆರಂಭದಲ್ಲಿ ನವೋತ್ಸಾಹದಿಂದ ಜೀವನ್ಮುಖಿ ಸಾಹಿತ್ಯ ರಚನೆ ಮಾಡಿದ ದಲಿತ-ಬಂಡಾಯ ಸಾಹಿತಿಗಳು ಬರುಬರುತ್ತ ಘೋಷಣೆಗಳಿಗೆ ಸೀಮಿತರಾದರು ಎಂಬುದು ಕಟುಸತ್ಯ. ಜಾತಿಪ್ರಜ್ಞೆಯಿಂದ ಬರೆಯಲಾರಂಬಿಸಿದ ದಲಿತ-ಬಂಡಾಯ ಸಾಹಿತಿಗಳು ಸಾಹಿತ್ಯದಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು. ಸರ್ಕಾರಿ ನೌಕರಿಗಳು, ಯೋಜನೆಗಳು ಮತ್ತು ಸವಲತ್ತುಗಳಿಗೆ ಮಾತ್ರ ಸೀಮಿತವಾಗಿದ್ದ ಮೀಸಲಾತಿ ವ್ಯವಸ್ಥೆ ಸಾಹಿತ್ಯದಲ್ಲಿ ಕೂಡ ಬರುವಂತೆ ಮಾಡಿದ ಖ್ಯಾತಿ ದಲಿತ-ಬಂಡಾಯ ಚಳುವಳಿಗೆ ಸಲ್ಲಬೇಕು!
ಸಾಹಿತ್ಯ ರಾಜಕಾರಣ ದೊಡ್ಡ ಮಟ್ಟದಲ್ಲಿ ಆರಂಭವಾದದ್ದೇ ದಲಿತ-ಬಂಡಾಯ ಸಾಹಿತಿಗಳಿಂದ. ಈ ಚಳುವಳಿಯ ಆರಂಭದಲ್ಲಿ ಇವರಿಗೆ ಇದ್ದ ತುಡಿತ-ಮಿಡಿತಗಳು ಬರುಬರುತ್ತ ಕ್ಷೀಣವಾಗಿ ಹೊಂದಾಣಿಕೆ ಮಾಡಿಕೊಂಡು ಬರೆಯುವ ಮತ್ತು ಆ ಮೂಲಕ ಬೆಳೆಯುವ ಪ್ರವೃತ್ತಿ ಆರಂಭವಾಯಿತು. ಇವರ ಸಾಹಿತ್ಯಕ ಬದ್ಧತೆ ಮತ್ತು ಶುದ್ಧತೆಯ ಕುರಿತು ಪ್ರಶ್ನಿಸಲೇ ಬೇಕಾದಂತಹ ಕಾರ್ಯಗಳನ್ನು ಈ ಪಂಥದ ಕೆಲವು ಸಾಹಿತಿಗಳು ಮಾಡಿದರು. ಆರಂಭದಲ್ಲಿ ತುಂಬ ಚೆನ್ನಾಗಿ ಬರೆದ ಕೆಲವು ಸಾಹಿತಿಗಳು ನಂತರದಲ್ಲಿ ತುಂಬ ಪೇಲವವಾಗಿ ಬರೆಯುತ್ತ ಕಳಪೆ ಕೃತಿಗಳನ್ನು ಕೊಟ್ಟರು ಎಂಬುದು ಕಹಿಸತ್ಯ. ದೇವನೂರ ಮಹಾದೇವ ಮತ್ತು ಸಿದ್ಧಲಿಂಗಯ್ಯ ಅವರನ್ನು ಮೀರಿಸುವ ಇನ್ನೊಬ್ಬ ದಲಿತ ಲೇಖಕ ಕನ್ನಡದಲ್ಲಿ ಇದುವರೆಗೆ ಬರಲಿಲ್ಲ ಎಂಬುದು ಗಮನಿಸತಕ್ಕ ಅಂಶ.
ಸದ್ಯದ ಪರಿಸ್ಥಿತಿಯಂತೂ ಇನ್ನೂ ಶೋಚನೀಯವಾಗಿದೆ. ನವ್ಯೋತ್ತರ ಸಾಹಿತಿಗಳು ರಾಜಕಾರಣ ಮಾಡುವುದರಲ್ಲಿ ದಲಿತ-ಬಂಡಾಯದವರನ್ನೂ ಮೀರಿಸುತ್ತಾರೆ! ಪ್ರಸ್ತುತ ಕನ್ನಡದ ಅನೇಕ ಲೇಖಕ-ಲೇಖಕಿಯರು ಅರೆಕಾಲಿಕ ಸಾಹಿತಿಗಳು ಮತ್ತು ಪೂರ್ಣಕಾಲಿಕ ರಾಜಕಾರಣಿಗಳು ಎಂಬ ಮಾತಿನಲ್ಲಿ ತಥ್ಯವಿದೆ. ಇವರಲ್ಲಿ ತುಂಬ ಜನ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸರ್ಕಾರಿ ಕೃಪಾಪೋಷಿತ ಟ್ರಸ್ಟುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ಬಲದ ಮೇಲೆಯೇ ಸ್ಥಾನ ಮಾನ ಪಡೆದಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಸಾಹಿತ್ಯಕ ಪ್ರಶಸ್ತಿಗಳ ಆಯ್ಕೆಯಲ್ಲಿ ಸಹ ಈ ಜಾತಿಪ್ರಜ್ಞೆ ಪ್ರಮುಖ ಪಾತ್ರ ವಹಿಸುತ್ತದೆ.
ಸಾಹಿತಿಗಳು, ಕಲಾವಿದರು ಮತ್ತು ಸಂಗೀತಗಾರರಿಗೆ ಜಾತೀಯತೆ ಸೋಂಕಬಾರದು ಆದರೆ ದುರ್ದೈವವಶಾತ್ ಕನ್ನಡ ಸಾಹಿತ್ಯ ಲೋಕದಲ್ಲಿ ತುಂಬ ಜನ ಸಾಹಿತಿಗಳು ಜಾತಿಯ ಮೂಲಕ ಗುರುತಿಸಿಕೊಳ್ಳಲು ಇಷ್ಟ ಪಡುತ್ತಾರೆ. ಎಷ್ಟೋ ಜನ ಲೇಖಕ- ಲೇಖಕಿಯರು ಯೋಗ್ಯತೆಯಿರದಿದ್ದರೂ ಸಹ ಜಾತಿ ಬಲದ ಮೇಲೆ ಸಾಹಿತ್ಯ ಲೋಕದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಶ್ರೇಷ್ಠತೆಯೊಂದನ್ನೇ ಮಾನದಂಡವಾಗಿಟ್ಟುಕೊಂಡು ಮೌಲ್ಯಮಾಪನ ಮಾಡಲು ಹೊರಟರೆ ತುಂಬ ದೊಡ್ಡ ದೊಡ್ಡ ಸಾಹಿತಿಗಳೆಂದು ಬೀಗುವ ಮಹನೀಯರು ಸ್ಥಾನಭ್ರಷ್ಟರಾಗಬೇಕಾಗುತ್ತದೆ. ಇವರಿಗೆ ಕೊಟ್ಟ ಪ್ರಶಸ್ತಿ, ಪುರಸ್ಕಾರ ಮತ್ತು ಗೌರವಗಳನ್ನು ಹಿಂಪಡೆಯಬೇಕಾಗುತ್ತದೆ!
ಈ ವಿಷಯದಲ್ಲಿ ನಮ್ಮ ಪಕ್ಕದ ಕೇರಳ ರಾಜ್ಯದ ಮಲಯಾಳಿ ಸಾಹಿತಿಗಳಿಂದ ಕಲಿಯುವುದು ತುಂಬ ಇದೆ. ಅಲ್ಲಿನ ಸಾಹಿತಿಗಳಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಎಂಬ ಬೇಧಭಾವವಿಲ್ಲ. ಅವರು ಯಾವುದೇ ಜಾತಿಗೆ ಸೇರಿದ್ದರೂ ತಮ್ಮನ್ನು ತಾವು ಮಲಯಾಳಿ ಲೇಖಕ-ಲೇಖಕಿ ಎಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆಯೇ ಹೊರತು ಹಿಂದೂ, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಲೇಖಕರೆಂದಲ್ಲ. ಆದರೆ ಕನ್ನಡದಲ್ಲಿ ಮಾತ್ರ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ನಾಯಕ, ಕುರುಬ, ಬಂಟ, ದಲಿತ (ಎಡಗೈ-ಬಲಗೈ), ಮುಸ್ಲಿಂ ಮತ್ತು ಕ್ರಿಶ್ಚಿಯನ್ ಲೇಖಕ-ಲೇಖಕಿಯರಿದ್ದಾರೆ ಆದರೆ ಕನ್ನಡ ಸಾಹಿತಿಗಳಿಲ್ಲ! ಕನ್ನಡ ಸಾಹಿತಿಗಳಲ್ಲಿರುವ ಜಾತೀಯತೆ ಯಾರಿಗಾದರೂ ಅಸಹ್ಯ ಹುಟ್ಟಿಸುತ್ತದೆ.
- ಕನ್ನಡದ ಸಾಹಿತಿಯೊಬ್ಬ ಕೇರಳ ಪ್ರವಾಸಕ್ಕೆ ಹೋದಾಗ ಅಲ್ಲಿನ ಸಾಹಿತಿಗಳೆದುರು ಖ್ಯಾತ ಲೇಖಕರಾದ ವೈಕಂ ಮಹಮ್ಮದ್ ಬಷೀರರನ್ನು ಪದೇ ಪದೇ ಮುಸ್ಲಿಂ ಲೇಖಕ ಎಂದು ಸಂಭೋದಿಸಿದ್ದು ಅವರಿಗೆ ಇಷ್ಟವಾಗಲಿಲ್ಲ.
- ಕನ್ನಡದ ಲೇಖಕನೊಬ್ಬ ಕೇರಳ ರಾಜ್ಯಕ್ಕೆ ಹೋದಾಗ ಅಲ್ಲಿನ ಜಾತಿವಾರು ಮತ್ತು ಪ್ರದೇಶವಾರು ಸಾಹಿತಿಗಳ ಪಟ್ಟಿಯನ್ನು ಕೇಳಿ ಕನ್ನಡ ಲೇಖಕರ ಮರ್ಯಾದೆ ತೆಗೆದ.
- ಕನ್ನಡದ ಲೇಖಕನೊಬ್ಬ ಮರಾಠಿ ಸಾಹಿತಿಗಳೆದುರು ಭೈರಪ್ಪನವರನ್ನು ಜಾತಿ ಆಧಾರದ ಮೇಲೆ ತುಂಬ ಕೆಟ್ಟದಾಗಿ ಟೀಕಿಸಿ, ಭೈರಪ್ಪನವರ ಕಾದಂಬರಿಗಳ ಕುರಿತು ಅವರು ಚರ್ಚೆಗೆ ಆಹ್ವಾನಿಸಿದಾಗ ಯಾವುದೋ ನೆಪ ಹೇಳಿ ತಪ್ಪಿಸಿಕೊಂಡು ಅವನೆಷ್ಟು ಸಣ್ಣ ಮನುಷ್ಯ ಎಂದು ಸಾಬೀತು ಮಾಡಿದ.
- ಖ್ಯಾತ ಕವಿ ದಿ. ಕೆ. ವಿ. ತಿರುಮಲೇಶರಿಗೆ ಸಿಗಬೇಕಿದ್ದ ಪ್ರತಿಷ್ಠಿತ ಪ್ರಶಸ್ತಿಯೊಂದು ಜಾತಿ ಆಧಾರದ ಮೇಲೆ ತಪ್ಪಿ ಮತ್ತೊಬ್ಬ ಪ್ರಬಲ ಸಮುದಾಯದ ಸಾಧಾರಣ ಕವಿಗೆ ಸಿಕ್ಕಿತು.
- ಒಬ್ಬ ತಲೆಹರಟೆ ವಿಮರ್ಶಕ ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ಮುಸ್ಲಿಂ ಪಾತ್ರವಿಲ್ಲ ಎಂದು ಕ್ಯಾತೆ ತೆಗೆದು ಉಗಿಸಿಕೊಂಡ.
- ಒಬ್ಬ ವಿಶ್ವವಿದ್ಯಾಲಯದ ಸಂಶೋಧಕ ಕುವೆಂಪು ಅವರು ತಮ್ಮ ‘ಮಲೆಗಳಲ್ಲಿ ಮದುಮಗಳು’ ಮಹಾಕಾದಂಬರಿಯಲ್ಲಿ ಮುಸ್ಲಿಂರನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ ಎಂದು ಸಾಧಿಸಲು ಇನ್ನಿಲ್ಲದಂತೆ ಯತ್ನಿಸಿ, ಅದರಲ್ಲಿ ಸೋತು ನಗೆಪಾಟಲಿಗೀಡಾದ.
- ಒಬ್ಬ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ತನ್ನ ಜಾತಿಯವರು ಬರೆದ ಕೃತಿಗಳನ್ನು ಮಾತ್ರ ಓದಬೇಕೆಂದು ತನ್ನ ವಿದ್ಯಾರ್ಥಿಗಳಿಗೆ ಅಪ್ಪಣೆ ಕೊಡಿಸಿದ.
- ಕನ್ನಡ ಸಾಹಿತ್ಯ ಪರಿಷತ್ತಿಗೆ ನಡೆಯುವ ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಚುನಾವಣೆಗಳಲ್ಲಿ ಈ ಜಾತಿಪ್ರಜ್ಞೆ ತುಂಬ ಪ್ರಬಲವಾಗಿ ಕೆಲಸ ಮಾಡುತ್ತದೆ.
- ಸರ್ಕಾರಿ ಸಂಸ್ಥೆಗಳು, ಸರ್ಕಾರಿ ಕೃಪಾಪೋಷಿತ ಟ್ರಸ್ಟುಗಳು ಮತ್ತು ಖಾಸಗಿ ಪ್ರಶಸ್ತಿಗಳ ಆಯ್ಕೆಯ ಮಾನದಂಡಗಳಲ್ಲಿ ಜಾತಿ ತುಂಬ ಮುಖ್ಯವಾದುದು.
- ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಿಗೆ ಭಾಷಾ ಪಠ್ಯ ಪುಸ್ತಕ ಮಾಡುವಲ್ಲಿ ಸಹ ಲೇಖಕ-ಲೇಖಕಿಯರ ಜಾತಿಯನ್ನು ಒಂದು ಮುಖ್ಯ ಮಾನದಂಡವನ್ನಾಗಿ ಪರಿಗಣಿಸಲಾಗುತ್ತದೆ.
- ಯುವ ಪ್ರೇಮಿಗಳು ಅಂತರ್ಜಾತಿ ವಿವಾಹವಾಗುವ ವಿಷಯದಲ್ಲಿ ಮಾತ್ರ ಇತ್ತೀಚೆಗೆ ಸ್ವಲ್ಪ ಜಾತ್ಯಾತೀತತೆ ಕಂಡುಬರುತ್ತಿದೆಯೇ ಪರಂತು ರಾಜಕಾರಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಈಗಲೂ ಜಾತಿಪ್ರಜ್ಞೆ ತುಂಬ ದಟ್ಟವಾಗಿದೆ.
ಬಲಪಂಥ, ಎಡಪಂಥ ಮತ್ತು ಮಧ್ಯಮ ಮಾರ್ಗವೆಂದು ದೊಡ್ಡ ದೊಡ್ಡ ಭಾಷಣ ಬಿಗಿಯುವ ಆರಾಮ ಕುರ್ಚಿಯ ಚಿಂತಕರು ಮತ್ತು ಸಾಹಿತಿಗಳೆಲ್ಲ ಆಂತರ್ಯದಲ್ಲಿ ಜಾತಿವಾದಿಗಳೇ ಆಗಿದ್ದಾರೆ. ಮನುಷ್ಯ ಪ್ರಜ್ಞೆಯಿಂದ ಸಾಹಿತ್ಯ ರಚನೆ ಮಾಡಬೇಕಾದ ಸಾಹಿತಿಗಳು ಜಾತಿಪ್ರಜ್ಞೆಯಿಂದ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಜಾತ್ಯಾತೀತತೆಯೆಂಬ ಮೌಲ್ಯ ನಿಜಕ್ಕೂ ಅಸ್ತಿತ್ವದಲ್ಲಿದೆಯೇ ಎಂದು ಪ್ರಶ್ನಿಸಿದಾಗ ಅದಕ್ಕೆ ಸಿಗುವ ಉತ್ತರ ಇಲ್ಲ ಎಂದು. ಇದು ಕಹಿಯಾದರೂ ಸತ್ಯ. ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಕವಿಗಳಲ್ಲೊಬ್ಬನಾದ ಮಹಾಕವಿ ಪಂಪ “ಮನುಷ್ಯ ಜಾತಿ ತಾನೊಂದೆ ವಲಂ” ಎಂದು ಕರೆದಿದ್ದಾನೆ. ಕವಿರತ್ನ ಪಂಪನ ಮಾತು ನಮ್ಮ ಕನ್ನಡ ಸಾಹಿತಿಗಳಿಗೆ ಆದಷ್ಟು ಅರ್ಥವಾಗಲಿ ಮತ್ತು ಆಚರಣೆಗೆ ಬರಲಿ ಎಂಬುದು ನನ್ನ ಆಶಯ. ಇದು ಕಷ್ಟಸಾಧ್ಯವೆಂದು ಗೊತ್ತಿದ್ದೂ ನಾನು ಆಶಾವಾದಿಯಾಗಿದ್ದೇನೆ.
2 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಸಾಹಿತಿಗಳು ಮತ್ತು ಜಾತಿಪ್ರಜ್ಞೆ”
ನಿಮ್ಮ ಮಾತುಗಳಲ್ಲಿ ಹುರುಳಿದೆ
ತುಂಬಾ ನೇರವಾಗಿ ಸತ್ಯವನ್ನು ಅನಾವರಣ ಮಾಡಿದ್ದೀರಿ. ಈ ಲೇಖನವನ್ನು ಸಾಹಿತ್ಯದ ವಿದ್ಯಾರ್ಥಿಗಳು ಖಂಡಿತ ಓದಬೇಕು.