ನೀತಿ ಪ್ರತೀತಿ – ವಿಭಾ ಪುರೋಹಿತ ಅಂಕಣl ಆಸಕ್ತಿ ಮತ್ತು ಕ್ರಿಯಾಶೀಲತೆ

ಒಂದು ದೇಶದಲ್ಲಿ ಒಬ್ಬ ಪ್ರಸಿದ್ಧ ನಟನಿದ್ದನು. ಅವನ ಅಭಿನಯ ಇಡೀ ದೇಶದ ಕಲಾರಸಿಕರನ್ನು ಮನಸೂರೆಗೊಂಡಿತ್ತು. ಇವನು ಬಲು ಶ್ರಮಜೀವಿ. ರಾತ್ರಿ ,ಹಗಲು ನಿದ್ದೆಗೆಟ್ಟು ನಿರಂತರ ಅಭಿನಯಕಲೆಯ ಕೆಲಸದಲ್ಲಿ ತೊಡಗುತ್ತಿದ್ದನು. ಒಂದು ಸಲ ಕಲಾವಿದನ ದೈಹಿಕ ಆರೋಗ್ಯ ಹದಗೆಟ್ಟಿತು. ವೈದ್ಯರು ಪರೀಕ್ಷಿಸಿ ನೋಡಲಾಗಿ “ನೀವಿನ್ನು ನಿಮ್ಮ ಕಲಾ ಸೇವೆಯನ್ನು ನಿಲ್ಲಿಸಬೇಕು, ಇಲ್ಲವೆಂದರೆ ನಿಮ್ಮ ಜೀವಕ್ಕೆ ಅಪಾಯವಿದೆ ” ಎಂದು ಎಚ್ಚರಿಕೆಯ ಸಲಹೆಯನ್ನು ನೀಡಿದರು. ಕಲಾವಿದ ವೈದ್ಯರ ಮಾತಿಗೆ ಮನಸ್ಸಿಲ್ಲದೆ ಒಪ್ಪಿಕೊಳ್ಳಬೇಕಾಯಿತು. ದಿನಗಳು ಉರುಳಿದವು. ಮುಂದೆ ಕೆಲವು ದಿನಗಳಲ್ಲಿ ಸುಪ್ರಸಿದ್ಧ ನಿರ್ದೇಶಕರೊಬ್ಬರು ” ದೊಡ್ಡ ಬ್ಯಾನರ್ ನ ಅಡಿಯಲ್ಲಿ ಅದ್ಭುತವಾದ ಚಿತ್ರವೊಂದನ್ನು ತಯಾರಿಸುತ್ತಿದ್ದೇನೆ ನಿಮ್ಮ ಕಲಾ ಸೇವೆ ಅತ್ಯವಶ್ಯಕ ” ಎಂದು ಈ ಕಲಾವಿದನಿಗೆ ಆಹ್ವಾನವನ್ನು ನೀಡಿದರು. ಕಲಾವಿದನು ತಕ್ಷಣ ಒಪ್ಪಿಕೊಂಡು ಬಿಟ್ಟ . ವೈದ್ಯರು ಬೇಡವೆಂದು ಸೂಚಿಸಿದ್ದರೂ ಅವನು ತನ್ನ ಆಸೆಯನ್ನು ತಡಿಯಲಾಗಲಿಲ್ಲ. ಮನಸ್ಸಿನ ಮಾತಿಗೆ ಓಗೊಟ್ಟ. ಕೆಲವು ತಿಂಗಳುಗಳ ನಂತರ ಚಿತ್ರೀಕರಣ ಮುಗಿದು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತು. ಜನರ ಮೆಚ್ಚುಗೆ ಗಳಿಸಿತು. ಎರಡು ರೀತಿಯ ಅದ್ಭುತಗಳು ಸಂಭವಿಸಿದ್ದವು. ಒಂದು ಚಲನಚಿತ್ರ ಅಪಾರ ಜನಮನ್ನಣೆಯನ್ನು ಗಳಿಸಿತ್ತು. ಇನ್ನೊಂದು ಕಲಾವಿದನ ಆರೋಗ್ಯ ಸಂಪೂರ್ಣವಾಗಿ ಸುಧಾರಣೆಯಾಗಿತ್ತು.

ಕಾರಣ ಇಷ್ಟೇ ಸ್ನೇಹಿತರೆ, ಕಲಾವಿದನು ತಾನು ಆಸೆಪಟ್ಟು, ಶ್ರಮವಹಿಸಿ ಅಭಿನಯವನ್ನು ಮಾಡಿದ್ದನು. ಮನಸೋಇಚ್ಛೆಯಿಂದ ತನ್ನನ್ನು ತಾನು ಒಪ್ಪಿಸಿಕೊಂಡಿದ್ದನು. ಹಾಗೂ ಅವನ ಮನಸ್ಸಿನಲ್ಲಿ ಅದ್ಭುತವಾದ ಚಿತ್ರ ಒಂದರಲ್ಲಿ ತನಗೆ ಕಲಾ ಅಭಿನಯ ಮಾಡಲು ಅವಕಾಶ ದೊರೆತಿದೆ, ಇದನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು ಎನ್ನುವ ಹಂಬಲವೂ ಇತ್ತು. ಹಾಗಾಗಿ ಅವನಲ್ಲಿ ಹುಟ್ಟಿರುವ ಈ ಮನೋಬಲದಿಂದ ಅವನ ದೇಹಾರೋಗ್ಯ ಗುಣವಾಗಿತ್ತು. ವೈದ್ಯರಿಗೆ ಇದೊಂದು (miracle) ಅದ್ಭುತ ಪ್ರಕ್ರಿಯೆಯಾಗಿ ಪರಿಣಮಿಸಿತು. ತಮ್ಮ ಎಚ್ಚರಿಕೆಯನ್ನು ಮೀರಿ ಸಹ ರೋಗಿ ಗುಣವಾಗಿದ್ದ ಅಂದರೆ ಸ್ಪಷ್ಟವಾಗಿ ತಿಳಿದುಬರುವ ಅಂಶ, ‘ ಆಸಕ್ತಿ ಮತ್ತು ಕ್ರಿಯಾಶೀಲತೆಯ ಬಲ’ ವು ಆರೋಗ್ಯವನ್ನು ಕಾಪಾಡುತ್ತದೆ. ಸದಾ ಕೆಲಸದಲ್ಲಿ ನಿರತರಾಗಿರುವುದರಿಂದ ಬೇರೆ ಯಾವುದೇ ನಕಾರಾತ್ಮಕ ಯೋಚನೆಗಳಿಗೆ ಮನಸ್ಸನ್ನು ಹರಿಬಿಡದೆ ಕೆಲಸದ ಕಡೆ ಗಮನಹರಿಸುವುದರಿಂದ ನಮ್ಮ ಆರೋಗ್ಯದ ರಕ್ಷಣೆಯಾಗುತ್ತದೆ.

ನನ್ನ ಸ್ವಂತ ಅನುಭವವನ್ನು ಹಂಚಿಕೊಳ್ಳಬೇಕೆಂದರೆ ನನ್ನ ವಿದ್ಯಾರ್ಥಿ ಒಬ್ಬನು ತನ್ನ ಮನಸ್ಸಿಲ್ಲದೆ ತಂದೆ ತಾಯಿಯರ ಒತ್ತಾಯಕ್ಕಾಗಿ ಇಂಜಿನಿಯರಿಂಗ್ ಪದವಿಯನ್ನು ಪಡೆದ. ಮೊದಲಿನಿಂದಲೂ ಅವನಿಗೆ ಹಾಡುಗಾರಿಕೆ, ಹಾಡುವುದು ಎಂದರೆ ಬಲು ಇಷ್ಟ. ತಂದೆ ತಾಯಿಯರು ಮಗನ ಒತ್ತಾಸೆಯಂತೆ ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸವನ್ನು ಕೊಡಿಸಿದರು. ತಂದೆ ತಾಯಿಯರಿಗೆ ಮಗ ದೊಡ್ಡ ಇಂಜಿನಿಯರ್ ಆಗಿ ವಿದೇಶದಲ್ಲಿ ಕೆಲಸ ಮಾಡಬೇಕೆಂಬ ಆಸೆ ಇತ್ತು ,ಆದರೆ ಮಗನು ವಿದೇಶಕ್ಕೆ ಹೋಗಲು ಇಷ್ಟ ಪಡಲಿಲ್ಲ . ಸಂಗೀತವನ್ನೇ ಮುಂದುವರಿಸಿಕೊಂಡು ಬಂದನು. ಈಗ ಅವನೇ ಎಷ್ಟೋ ಜನ ವಿದೇಶಿಗರಿಗೆ ಆನ್ಲೈನ್ ಮೂಲಕವಾಗಿ ಸಂಗೀತ ಅಭ್ಯಾಸವನ್ನು ಹೇಳಿ ಕೊಡುತ್ತಿದ್ದಾನೆ. ಇದಲ್ಲದೆ ಎಷ್ಟೊಂದು ಸಂಗೀತ ಕಚೇರಿಗಳನ್ನು ನಡೆಸುತ್ತಾನೆ. ವ್ಯಕ್ತಿಯಲ್ಲಿ ಇರುವ ಆಸಕ್ತಿಯನ್ನು ಗುರುತಿಸಬೇಕು. ಇದೇ ಮುಖ್ಯವಾದದ್ದು ಹಾಗೂ ಹಿತಕರವಾದದ್ದು.ಹಾಗಾಗಿ ಆಸಕ್ತಿ , ಕ್ರಿಯಾಶೀಲತೆ , ಆರೋಗ್ಯ ಮತ್ತು ಯಶಸ್ಸು ಈ ನಾಲ್ಕೂ ಸಂಗತಿಗಳು ಒಂದಕ್ಕೊಂದು ಸಾಪೇಕ್ಷವಾಗಿಯಲ್ಲವೆ ? ಅಂದರೆ ಆಸಕ್ತಿ ಇದ್ದಲ್ಲಿ ಮಾತ್ರ ಮನುಷ್ಯ ಕ್ರೀಯಾಶೀಲನಾಗಿರುತ್ತಾನೆ. ಎಲ್ಲಿ ಕ್ರಿಯಾಶೀಲತೆ ಇದೆಯೋ ಅಲ್ಲಿ ಆರೋಗ್ಯವಿರುತ್ತದೆ. ಈ ಮೂರೂ ಸೇರಿದ ಕೆಲಸಕ್ಕೆ ಯಶಸ್ಸು ತಾನಾಗಿಯೇ ಕೈಹಿಡಿಯುತ್ತದೆ.

ಮನಶಾಸ್ತ್ರದ ಪ್ರಕಾರವು ಮನುಷ್ಯ ತನ್ನ ಮನಸ್ಸಿಗೆ ಹಿಡಿಸಿದ ಕೆಲಸದಲ್ಲಿ ತೊಡಗಿಕೊಂಡರೆ ಅವನು ಸಂಪೂರ್ಣ ಯಶಸ್ಸನ್ನು ಕಾಣುತ್ತಾನೆ. ಒಲ್ಲದ ಮನಸ್ಸಿನಿಂದ ಕೆಲಸದಲ್ಲಿ ತೊಡಗಿಕೊಂಡರೆ ಅವನ ಮನಸ್ಸಿಗೂ ಕಿರಿಕಿರಿ ಹಾಗೂ ಕೆಲಸವೂ ಸರಿಯಾಗಿ ಆಗುವುದಿಲ್ಲ . ವ್ಯಕ್ತಿ ತನ್ನ ಮನಸ್ಸಿಗೆ ಹಿಡಿಸಿದ ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಆರೋಗ್ಯವಂತನಾಗಿರುತ್ತಾನೆ. ಆಸಕ್ತಕರವಾದ ಕ್ರಿಯಾಶೀಲತೆಯೂ ಒಂದು ‘ಆರೋಗ್ಯದ ಗುಟ್ಟು ‘ ಅಂತ ಭಾವಿಸಬಹುದು ಅಲ್ಲವೆ !

ನಿಮಗೆ ಓದುವುದು ಇಷ್ಟವಾದರೆ ಸದಾ ಓದಿಕೊಳ್ಳಿ, ಬರೆಯುವುದು ಇಷ್ಟವಾದರೆ ಬರೆಯಿರಿ,ಅದರಂತೆ ಚಿತ್ರಕಲೆ, ರಂಗೋಲಿ ,ಕ್ರಾಫ್ಟ್ ,ಪೇಪರ್ ಕೊಲಾಜ್, ಬಟ್ಟೆ ಹೊಲಿಯುವುದು , ಕಸೂತಿ ಡಿಸೈನ್ ಗಳನ್ನು ಮಾಡುವುದು ,ಅಡಿಗೆ ಮಾಡುವುದು , ಸಂಗೀತ ಇತ್ಯಾದಿ. ಕೆಲವರಿಗೆ ಕೇಕ್ ಮಾಡುವುದು ಇಷ್ಟವಾಗಿರಬಹುದು. ಯಾವ ಕೆಲಸದಲ್ಲಿ ಇಷ್ಟವಿದೆ ಅದನ್ನು ನಿಷ್ಠೆಯಿಂದ ಮನ:ಪೂರ್ವಕ ಮಾಡಿದರೆ ಸದಾ ಕ್ರಿಯಾಶೀಲರಾಗಿರುತ್ತೀರಿ. ವೃತ್ತಿಯ ಜೊತೆಗೆ ಪ್ರವೃತ್ತಿಯೊಂದು ಇದ್ದರೆ ,’ಊಟದಲ್ಲಿ ಉಪ್ಪಿನಕಾಯಿ’ ಇದ್ದ ಹಾಗೆ. ಬದುಕು ಬೇಸರಿಸುವುದಿಲ್ಲ, ಸದಾ ಗೆಲುವಾಗಿರುತ್ತದೆ. ಕೆಲವರಿಗೆ ವೃತ್ತಿ ಮತ್ತು ಪ್ರವೃತ್ತಿ ಒಂದೇ ಆಗಿರುತ್ತವೆ. ಉದಾಹರಣೆಗೆ ಅಭಿನಯ, ಹಾಡುಗಾರಿಕೆ, ಕಸೂತಿ ( Boutique design ) ಮುಂತಾದವುಗಳು ಅವರ ಜೀವನೋಪಾಯದ ಕ್ರಮವೂ ಆಗಿರಬಹುದು. ಮತ್ತೆ ಕೆಲವರಿಗೆ ಒಂದೇ ಅಲ್ಲ ಎರಡು-ಮೂರು ಹವ್ಯಾಸಗಳೂ ಇರಬಹುದು. ಈ ಕ್ರಿಯಾಶೀಲತೆಯಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ.

ಎಚ್ಚರವಿರಲಿ ಸ್ನೇಹಿತರೆ, ಕ್ರಿಯಾಶೀಲತೆ ಎಂದೂ ಮಿತಿಮೀರ ಬಾರದು ಅಥವಾ ಮನಸ್ಸಿಗೆ ವಿರುದ್ಧವಾಗಿರಬಾರದು ಹಾಗೂ ಬೇರಾವ ಹೇರಿಕೆ ಇರಬಾರದು. ಒಂದು ವೇಳೆ ಹೇರಿಕೆ ಆದ ಪಕ್ಷದದಲ್ಲಿ ಅದು ‘ಒತ್ತಡ’ ವಾಗಿ ಪರಿಣಮಿಸುತ್ತದೆ . ಹಾಗಂತ ಕೇವಲ ಇಡೀ ದಿನ ಟಿವಿ ವೀಕ್ಷಣೆ ಮಾಡುವುದು, ಮೊಬೈಲ್ ನೋಡುವುದು, ಫೇಸ್ಬುಕ್ ಹಾಗೂ ಇನ್ಸ್ಟಾ ಗ್ರಾಮ್ ಅತಿಯಾದರೆ ಒಳ್ಳೆಯದಲ್ಲ .ಈ ತರಹದ ಕ್ರಿಯಶೀಲತೆ ಒಳ್ಳೆಯದಲ್ಲ. ಯಾವುದರಿಂದ ನಮಗೆ ದೈಹಿಕವಾಗಿ ತುಸು ವ್ಯಾಯಾಮ ದೊರೆಯುತ್ತದೆಯೋ ಮಾನಸಿಕವಾಗಿ ಖುಷಿಕೊಡುತ್ತದೆಯೋ, ಹೊಸದನ್ನು ಕಲಿಯಲು ಆಸಕ್ತಿ ಹುಟ್ಟುತ್ತದೆಯೋ,ಮಾಡಬೇಕೆಂಬ ಹಂಬಲ ಹುಟ್ಟುತ್ತದೆಯೋ ಅಲ್ಲಿ ನಾವು ಕ್ರೀಯಾಶೀಲರಾಗುತ್ತೇವೆ. ಅದು ನಿಜವಾದ ಕ್ರಿಯಾಶೀಲತೆ ಬಲ. ಈ ಬಲದಲ್ಲಿದೆ ಆರೋಗ್ಯದ ಗುಟ್ಟು! ಯಶಸ್ಸಿನ ಗುಟ್ಟು!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter