ಕನ್ನಡದ ಮಹತ್ವದ ಕಾದಂಬರಿಕಾರರಲ್ಲೊಬ್ಬರಾದ ಬಸವರಾಜ ಕಟ್ಟೀಮನಿಯವರು ಅ.ನ.ಕೃ., ತ.ರಾ.ಸು. ಮತ್ತು ನಿರಂಜನರೊಂದಿಗೆ ಪ್ರಗತಿಶೀಲ ಸಾಹಿತ್ಯದ ನಾಲ್ಕು ಆಧಾರ ಸ್ತಂಭಗಳೆಂದು ಖ್ಯಾತಿ ಪಡೆದಿದ್ದಾರೆ. ಕಳೆದ ಶತಮಾನದ ನಲವತ್ತರ ದಶಕದ ಆರಂಭದಲ್ಲಿ ಭಾರತದಾದ್ಯಂತ ತುಂಬ ಜೋರಾಗಿದ್ದ ಪ್ರಗತಿಶೀಲ ಚಳುವಳಿ ಕನ್ನಡದಲ್ಲೂ ಕೂಡ ಸಾಕಷ್ಟು ಸಂಚಲವನ್ನುಂಟು ಮಾಡಿತು. ಅ.ನ.ಕೃ. ಅವರ ನೇತೃತ್ವದಲ್ಲಿ ಪ್ರಗತಿಶೀಲ ಚಳುವಳಿ ಕನ್ನಡ ಸಾಹಿತ್ಯಕ್ಕೊಂದು ಹೊಸ ಸ್ಪರ್ಶ ತಂದುಕೊಟ್ಟಿತು. ಅ.ನ.ಕೃ., ತ.ರಾ.ಸು., ಕಟ್ಟೀಮನಿ ಮತ್ತು ನಿರಂಜನರಿಂದ ಕಥೆ ಮತ್ತು ಕಾದಂಬರಿ ಕ್ಷೇತ್ರದಲ್ಲಿ ವಿನೂತನ ಮತ್ತು ವೈವಿಧ್ಯಮಯ ಪ್ರಯೋಗಗಳು ನಡೆದವು. ಕಾದಂಬರಿ ಕ್ಷೇತ್ರದಲ್ಲಂತೂ ಈ ನಾಲ್ವರು ಸಮೃದ್ಧ ಬೆಳೆ ತೆಗೆದರು. ಕನ್ನಡದಲ್ಲಿ ಒಂದು ಹೊಸ ಓದುಗ ವರ್ಗವನ್ನೇ ಹುಟ್ಟು ಹಾಕಿದ ಮತ್ತು ಅಕ್ಷರ ಕ್ರಾಂತಿ ಉಂಟು ಮಾಡಿದ ಖ್ಯಾತಿ ಈ ನಾಲ್ವರು ಮಹಾನ್ ಲೇಖಕರಿಗೆ ಸಲ್ಲುತ್ತದೆ.
ಪ್ರಗತಿಶೀಲ ಸಾಹಿತ್ಯದಲ್ಲಿ ಅ.ನ.ಕೃ. ಮತ್ತು ತ.ರಾ.ಸು. ಅವರದು ಒಂದು ಮಾದರಿಯಾದರೆ, ಕಟ್ಟೀಮನಿ ಮತ್ತು ನಿರಂಜನರದು ಮತ್ತೊಂದು ಮಾದರಿ. ವಿಫುಲವಾಗಿ ಬರೆದ ಅ.ನ.ಕೃ. ಮತ್ತು ತ.ರಾ.ಸು. ಅವರು ಒಂದು ಹಂತದಲ್ಲಿ ಪ್ರಗತಿಶೀಲ ಸಾಹಿತ್ಯದ ಪರಿಧಿಯನ್ನು ಮೀರಿದರು. ಅಪಾರ ಜನಪ್ರಿಯತೆ ಪಡೆದಿದ್ದ ಅ.ನ.ಕೃ. ಅವರು ಏಕಕಾಲಕ್ಕೆ ಮೂರ್ನಾಲ್ಕು ಕಾದಂಬರಿಗಳನ್ನು ಬರೆಯಬಲ್ಲ ಪ್ರಚಂಡರಾಗಿದ್ದರು. ತ.ರಾ.ಸು. ಅವರಂತೂ ಸದಾ ಹೊಸತನಕ್ಕಾಗಿ ಹಂಬಲಿಸುವವರು. ಅವರಲ್ಲಿ ನವೋದಯ, ಪ್ರಗತಿಶೀಲ ಮತ್ತು ನವ್ಯ ಹೀಗೆ ಮೂರೂ ಬಗೆಯ ಸಾಹಿತ್ಯದ ಪ್ರಭಾವವಾಗಿರುವುದನ್ನು ಕಾಣಬಹುದು. ಇನ್ನು ಕೊನೆಯವರೆಗೂ ಪ್ರಗತಿಶೀಲರಾಗಿ ಉಳಿದವರೆಂದರೆ ಕಟ್ಟೀಮನಿ ಮತ್ತು ನಿರಂಜನರು ಮಾತ್ರ. ಇವರಿಬ್ಬರೂ ಅ.ನ.ಕೃ. ಮತ್ತು ತ.ರಾ.ಸು. ಅವರಿಗಿಂತ ತುಂಬ ಭಿನ್ನವಾಗಿ, ತಾತ್ವಿಕ ತಳಹದಿಯ ಮೇಲೆ ಕಾದಂಬರಿಗಳನ್ನು ಬರೆದರು.
ಬಸವರಾಜ ಕಟ್ಟೀಮನಿ (೧೯೧೯-೧೯೮೯) ಕಾದಂಬರಿಕಾರ, ಕಥೆಗಾರ, ಪತ್ರಿಕೋದ್ಯಮಿ ಮತ್ತು ರಾಜಕಾರಣಿಯಾಗಿ ಪ್ರಸಿದ್ಧರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕಟ್ಟೀಮನಿಯವರು ‘ಭಾರತ ಬಿಟ್ಟು ತೊಲಗಿ’ ಚಳುವಳಿಯ ಸಂದರ್ಭದಲ್ಲಿ ಬಂಧಿತರಾಗಿದ್ದರು. ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಕಟ್ಟೀಮನಿಯವರು ‘ಸಂಯುಕ್ತ ಕರ್ನಾಟಕ’, ‘ತರುಣ ಕರ್ನಾಟಕ’, ‘ಕರ್ನಾಟಕ ಬಂಧು’ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಕಥನ ಸಾಹಿತ್ಯಕ್ಕೆ ಮೀಸಲಾದ ‘ಉಷಾ’ ಪತ್ರಿಕೆಯ ಸಂಪಾದಕರಾಗಿ ಸಾರ್ಥಕ ಕೆಲಸ ಮಾಡಿದ ಅವರು ಮುಂದೆ ಬರವಣಿಗೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ಮುಂದೆ ಜನಪ್ರಿಯ ಕಾದಂಬರಿಕಾರರಾದ ನಂತರ ಅದೃಷ್ಟದ ಬಲದಿಂದ ವಿಧಾನ ಪರಿಷತ್ತಿನ ಸದಸ್ಯರಾದ ಕಟ್ಟೀಮನಿಯವರು ರಾಜಕೀಯಕ್ಕೆ ಹೋದರೂ ಹೆಸರು ಕೆಡಿಸಿಕೊಳ್ಳಲಿಲ್ಲ.
ಬಸವರಾಜ ಕಟ್ಟೀಮನಿಯವರು ಒಟ್ಟು ನಲವತ್ತು ಕಾದಂಬರಿಗಳು, ಹತ್ತು ಕಥಾಸಂಕಲನಗಳು, ಒಂದು ಅನುವಾದಿತ ಕಥಾಸಂಕಲನ, ಎರಡು ಕವನ ಸಂಕಲನಗಳು, ಒಂದು ನಾಟಕ, ಒಂದು ಪ್ರವಾಸ ಕಥನ, ಎರಡು ಜೀವನ ಚರಿತ್ರೆ, ಎರಡು ಮಕ್ಕಳ ಪುಸ್ತಕಗಳು ಮತ್ತು ನಾಲ್ಕು ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಕಾದಂಬರಿಕಾರನ ಕಥೆ’ ಅವರ ಆತ್ಮಕಥನ.
೧೯೪೫ರಲ್ಲಿ ಪ್ರಕಟವಾದ ‘ಕಾರವಾನ್’ ಎಂಬ ಕಥಾಸಂಕಲನ ಕಟ್ಟೀಮನಿಯವರ ಮೊದಲ ಪ್ರಕಟಿತ ಕೃತಿ. ೧೯೪೬ರಲ್ಲಿ ಪ್ರಕಟವಾದ ‘ಸ್ವಾತಂತ್ರ್ಯದೆಡೆಗೆ’ ಅವರ ಮೊದಲ ಕಾದಂಬರಿ. ಅವರ ಪ್ರಖ್ಯಾತ ಕಾದಂಬರಿ ‘ಮಾಡಿ ಮಡಿದವರು’ ಕಾದಂಬರಿಯ ಮೊದಲ ಭಾಗದಂತಿರುವ ಈ ಕೃತಿ ಕಟ್ಟೀಮನಿಯವರು ‘ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ಪಾಲ್ಗೊಂಡ ಅನುಭವಗಳನ್ನು ಆಧರಿಸಿ ಬರೆದದ್ದು. ತುಂಬ ವರ್ಷಗಳ ನಂತರ ನೀಡಿದ ಸಂದರ್ಶನವೊಂದರಲ್ಲಿ ‘ಸ್ವಾತಂತ್ರ್ಯದೆಡೆಗೆ’ ಕಾದಂಬರಿಯ ಕುರಿತಾಗಿರುವ ಅತೃಪ್ತಿ ಮತ್ತು ಅದು ತಮ್ಮ ಮೊದಲ ಕೃತಿಯಾದ್ದರಿಂದ ಅದರ ಕುರಿತಾಗಿರುವ ಮಮತೆಯ ಕುರಿತು ಕಟ್ಟೀಮನಿಯವರು ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಕಟ್ಟೀಮನಿಯವರಿಗೆ ಒಂದು ಸ್ಥಾನ ಸಿಗುವಂತೆ ಮಾಡಿದ ಕಾದಂಬರಿ ‘ಮಾಡಿ ಮಡಿದವರು’. ಬಹುಶಃ ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತು ಕನ್ನಡದಲ್ಲಿ ಬಂದ ಕೆಲವೇ ಕೆಲವು ಖಚಿತ ಮತ್ತು ನಂಬಲರ್ಹ ಎನ್ನುವಂತಹ ಕಾದಂಬರಿಗಳಲ್ಲಿ ಇದೂ ಒಂದು. ಓದುಗರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದ ಈ ಕಾದಂಬರಿ ಅನೇಕ ಮರುಮುದ್ರಣಗಳನ್ನು ಕಂಡಿದೆ. ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಪಠ್ಯವಾಗಿದ್ದ ಈ ಕಾದಂಬರಿ ಭಾರತದ ಇತರೆ ಕೆಲವು ಭಾಷೆಗಳಿಗೂ ಸಹ ಅನುವಾದವಾಗಿದೆ.
ಕನ್ನಡದ ಮಹತ್ವದ ಕಾದಂಬರಿಗಳಲ್ಲೊಂದೆಂದು ಖ್ಯಾತಿ ಪಡೆದ ‘ಜ್ವಾಲಾಮುಖಿಯ ಮೇಲೆ’ ಕನ್ನಡದ ಮಟ್ಟಿಗೆ ಹೇಳುವುದಾದರೆ ಒಂದು ಅಪರೂಪದ ಕಾದಂಬರಿ. ಕನ್ನಡದಲ್ಲಿ ಕಮ್ಯೂನಿಸಂ ಹಿನ್ನಲೆಯಲ್ಲಿ ಬಂಡವಾಳಶಾಹಿಗಳು ಮತ್ತು ಕಾರ್ಮಿಕ ವರ್ಗದವರ ನಡುವೆ ನಡೆದ ಸಂಘರ್ಷದ ಕುರಿತು ಬಂದ ಕಾದಂಬರಿಗಳು ತೀರ ಕಡಿಮೆ. ಕಟ್ಟೀಮನಿ, ನಿರಂಜನ ಮತ್ತು ಬಲ್ಲಾಳರು ಮಾತ್ರ ತುಂಬ ಸಮರ್ಥ ಮತ್ತು ಬಹುಕಾಲ ನಿಲ್ಲಬಲ್ಲಂತಹ ಕೆಲವು ಕೃತಿಗಳನ್ನು ಕೊಟ್ಟಿದ್ದಾರೆ. ಕಾರ್ಮಿಕ ವರ್ಗ ಮತ್ತು ಶೋಷಕ ವರ್ಗದವರ ನಡುವಿನ ಸಂಘರ್ಷವನ್ನು ವಾಸ್ತವವಾದಿ ನೆಲೆಯಲ್ಲಿ ಕಟ್ಟಿಕೊಟ್ಟ ‘ಜ್ವಾಲಾಮುಖಿಯ ಮೇಲೆ’ ಕೃತಿಗೆ ‘ಸೋವಿಯತ್ ಲ್ಯಾಂಡ್ ನೆಹರೂ’ ಪ್ರಶಸ್ತಿ ದೊರೆತಿದೆ.
ಧಾರ್ಮಿಕ ಕ್ಷೇತ್ರದಲ್ಲಿ ನಡೆಯುವ ಲಂಪಟತನ ಮತ್ತು ಭ್ರಷ್ಟಾಚಾರದ ಕುರಿತು ಬರೆದ ‘ಮೋಹದ ಬಲೆಯಲ್ಲಿ’ ಮತ್ತು ‘ಜರತಾರಿ ಜಗದ್ಗುರು’ ಕಾದಂಬರಿಗಳು ಅವರಿಗೆ ಅಪಾರ ಜನಪ್ರಿಯತೆಯ ತಂದುಕೊಡುವುದರ ಜೊತೆಗೆ ಸಾಕಷ್ಟು ಶತ್ರುಗಳನ್ನು ಸಹ ಹುಟ್ಟು ಹಾಕಿದವು. ಐವತ್ತರ ದಶಕದಲ್ಲಿ ಪ್ರಕಟವಾದ ಈ ಎರಡೂ ಕಾದಂಬರಿಗಳು ಖಾವಿ ತೊಟ್ಟು ಸದಾಚಾರ ಮಾಡಬೇಕಾದ ಸ್ವಾಮಿಗಳು ದುರಾಚಾರ ಮಾಡುವುದನ್ನು ತುಂಬ ನೇರವಾಗಿ ಮತ್ತು ದಿಟ್ಟವಾಗಿ ಖಂಡಿಸಿವೆ. ಆ ಕಾಲದಲ್ಲಿ ಮಠಾಧೀಶರನ್ನು ಎದುರು ಹಾಕಿಕೊಂಡು ಬರೆದ ಕಟ್ಟೀಮನಿಯವರ ಧೈರ್ಯವನ್ನು ಮೆಚ್ಚಲೇಬೇಕು.
‘ಬೀದಿಯಲ್ಲಿ ಬಿದ್ದವಳು’ ಮತ್ತು ‘ಖಾನಾವಳಿಯ ನೀಲಾ’ ವೇಶ್ಯಾ ಸಮಸ್ಯೆಯನ್ನು ತುಂಬ ವಸ್ತುನಿಷ್ಠವಾಗಿ ಮತ್ತು ಸಹನಾಭೂತಿಯಿಂದ ಚಿತ್ರಿಸಿದ ಕಾದಂಬರಿಗಳು. ಅ.ನ.ಕೃ. ಅವರು ಇದೇ ವಿಷಯದ ಕುರಿತು ಬರೆದ ‘ನಗ್ನಸತ್ಯ’, ‘ಸಂಜೆಗತ್ತಲು’ ಮತ್ತು ‘ಶನಿ ಸಂತಾನ’ ಕಾದಂಬರಿಗಳ ಜೊತೆ ಈ ಕಾದಂಬರಿಗಳನ್ನು ಹೋಲಿಸಿದರೆ ಇವುಗಳ ಪ್ರಾಮುಖ್ಯತೆ ಎಂತಹುದೆಂಬುದು ಮನದಟ್ಟಾಗುತ್ತದೆ.
‘ಹರಿಜನಾಯಣ’, ‘ನೀ ನನ್ನ ಮುಟ್ಟಬೇಡ’, ‘ಜನಿವಾರ ಮತ್ತು ಶಿವದಾರ’ ಕಾದಂಬರಿಗಳು ಭಾರತದಲ್ಲಿ ಬಲವಾಗಿ ಬೇರೂರಿರುವ ಜಾತಿ ಸಮಸ್ಯೆಯನ್ನಿಟ್ಟುಕೊಂಡು ಚರ್ಚಿಸುತ್ತವೆ. ‘ಹರಿಜನಾಯಣ’ ಮತ್ತು ‘ನೀ ನನ್ನ ಮುಟ್ಟಬೇಡ’ ವಾಸ್ತವಕ್ಕೆ ಹೆಚ್ಚು ಹತ್ತಿರವಾದ ಕಾದಂಬರಿಗಳು. ‘ಜಲತರಂಗ’ ಮತ್ತು ‘ಬೆಳಗಿನ ಗಾಳಿ’ ಕಟ್ಟೀಮನಿಯವರ ಬಾಲ್ಯ, ಯವೌನಾವಸ್ಥೆಯ ನೆನಪುಗಳ ಆಧಾರದ ಮೇಲೆ ರಚಿತವಾದ ಕಾದಂಬರಿಗಳು. ಐವತ್ತರ ದಶಕದಲ್ಲಿ ಬಂದ ಈ ಕಾದಂಬರಿಗಳು ಆಗಿನ ಕಾಲಕ್ಕೆ ಹೊಸತನದಿಂದ ಕೂಡಿದಂತಹವು. ‘ನಾನು ಪೊಲೀಸನಾಗಿದ್ದೆ’ ಮತ್ತು ‘ಬಂಗಾರದ ಜಿಂಕೆಯ ಹಿಂದೆ’ ಸ್ವಾತಂತ್ರ್ಯ ಪೂರ್ವ ಘಟ್ಟದಲ್ಲಿದ್ದ ಪೊಲೀಸ್ ವ್ಯವಸ್ಥೆಯ ಕುರಿತು ತುಂಬ ಅಪರೂಪದ ಮಾಹಿತಿ ನೀಡುವ ಜನಪ್ರಿಯ ಕಾದಂಬರಿಗಳು.
‘ಮಣ್ಣು ಮತ್ತು ಹೆಣ್ಣು’ ಕಾದಂಬರಿ ಆಸ್ತಿಯ ಆಸೆ ಮತ್ತು ಹೆಣ್ಣಿನ ಮೋಹ ಹೇಗೆ ಹಳ್ಳಿಗರ ಬದುಕನ್ನು ಹಾಳು ಮಾಡಿದೆ ಎಂಬುದನ್ನು ಸೊಗಸಾಗಿ ಚಿತ್ರಿಸಿದೆ. ‘ಬಲೆಯ ಬೀಸಿದರು’, ‘ಗೋವಾದೇವಿ’, ‘ಬೆಂಗಳೂರಿಗೊಂದು ಟಿಕೇಟು’, ‘ಚಕ್ರವ್ಯೂಹ’, ‘ಮಾಜಿ ಮಂತ್ರಿ’ ಮುಂತಾದ ಕಾದಂಬರಿಗಳು ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ವ್ಯವಸ್ಥೆ ಹೇಗೆ ಹದಗೆಟ್ಟು ಹೋಗಿದೆ ಎಂಬುದನ್ನು ವಸ್ತುನಿಷ್ಠವಾಗಿ ಚಿತ್ರಿಸಿವೆ.
‘ಜೊತೆಗಾತಿ’, ‘ಪ್ರಪಾತ’, ‘ಗ್ರಾಮ ಸೇವಿಕಾ’, ‘ಸೈತಾನ್’, ‘ದ್ರೋಹಿ’, ‘ಗೆಳೆಯನ ಮಡದಿ’, ‘ಕತ್ತರಿ ಪ್ರಯೋಗ’, ‘ಪಾತರಗಿತ್ತಿ’ ಮುಂತಾದುವು ಕಾಮ ಯಾವ ರೀತಿ ಬದುಕನ್ನು ಹದಗೆಡಿಸಿದೆ ಎಂಬುದರ ಕುರಿತು ಹಲವು ಬಗೆಯಲ್ಲಿ ಚಿಂತನೆ ನಡೆಸಿರುವ ಕಾದಂಬರಿಗಳು. ಕಟ್ಟೀಮನಿಯವರು ‘ಗಿರಿಯ ನವಿಲು’, ‘ಪೌರುಷ ಪರೀಕ್ಷೆ’, ‘ಸಮರ ಭೂಮಿ’ ಮುಂತಾದ ಐತಿಹಾಸಿಕ ಕಾದಂಬರಿಗಳನ್ನು ಬರೆದಿದ್ದರೂ ಸಹ ಅವರ ಸಾಮಾಜಿಕ ಕಾದಂಬರಿಗಳಿಗೆ ದೊರೆತಷ್ಟು ಜನಪ್ರಿಯತೆ ಐತಿಹಾಸಿಕ ಕಾದಂಬರಿಗಳಿಗೆ ಸಿಗಲಿಲ್ಲ.
‘ಕಾರವಾನ್’, ‘ಆಗಷ್ಟ್ ಒಂಬತ್ತು’, ‘ಸೆರೆಯಿಂದ ಹೊರಗೆ’, ‘ಗುಲಾಬಿ ಹೂ’, ‘ಜೋಳದ ಬೆಳೆಯ ನಡುವೆ’, ‘ಜೀವನ ಕಲೆ’, ‘ಸುಂಟರಗಾಳಿ’ ‘ಸೈನಿಕನ ಹೆಂಡತಿ’, ‘ಹುಲಿಯಣ್ಣನ ಮಗಳು’ ಮತ್ತು ‘ಗರಡಿಯಾಳು’ ಎಂಬ ಕಥಾಸಂಕಲನದಲ್ಲಿರುವ ಕಥೆಗಳು ಶೋಷಣೆಯ ವಿರುದ್ಧದ ಹೋರಾಟ, ಬಂಡಾಯ ಮನೋಧರ್ಮ ಮತ್ತು ರಾಷ್ಟ್ರೀಯತೆಯಿಂದ ಗಮನ ಸೆಳೆಯುತ್ತವೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾಮಾನ್ಯ ಜನತೆ ವಹಿಸಿದ ಪಾತ್ರದ ನೈಜ ಚಿತ್ರಣವನ್ನು ಅವರ ಕಥೆಗಳಲ್ಲಿ ಕಾಣಬಹುದು.
‘ಕಾದಂಬರಿಕಾರನ ಬದುಕು’ ಕಟ್ಟೀಮನಿಯವರ ಆತ್ಮಕಥನ. ಆತ್ಮರತಿ ಮತ್ತು ಆತ್ಮಪ್ರಶಂಸೆಯ ಭಾರದಿಂದ ಬಳಲುವ ಇತ್ತೀಚಿನ ಆತ್ಮಕಥನಗಳಿಗಿಂತ ಇದು ತುಂಬ ಭಿನ್ನವಾದುದು. ನೇರ, ನಿಷ್ಠುರ ಮತ್ತು ಪ್ರಾಮಾಣಿಕವಾಗಿ ತಮ್ಮ ಜೀವನವನ್ನು ನಿರೂಪಿಸಿರುವ ಕಟ್ಟೀಮನಿಯವರು ಹೊಗಳಿಕೆ, ತೆಗಳಿಕೆ ಏನೇ ಇರಲಿ, ಮುಲಾಜಿಲ್ಲದೆ ಹೇಳಿದ್ದಾರೆ. ಕುವೆಂಪು ಅವರ ಕುರಿತು ಅವರಿಗಿದ್ದ ಗೌರವ, ಸಹ ಲೇಖಕರಾದ ತ.ರಾ.ಸು. ಅವರ ಕುರಿತಾಗಿ ಇದ್ದ ಪ್ರೀತಿ, ಮೊದಲು ಆತ್ಮೀಯ ಮಿತ್ರರಾಗಿದ್ದು ನಂತರ ದೂರ ಸರಿದ ಗೋಪಾಲಕೃಷ್ಣ ಅಡಿಗರ ಕುರಿತ ನಿಷ್ಠುರ ಮಾತುಗಳು, ಸಾಹಿತ್ಯ ಲೋಕದ ರಾಜಕಾರಣ, ವಿಮರ್ಶಕರ ಸಣ್ಣತನ, ಓದುಗರ ದೊಡ್ಡತನ ಸೇರಿದಂತೆ ನೂರಾರು ವಿಷಯಗಳ ಕುರಿತು ವಸ್ತುನಿಷ್ಠವಾಗಿ ಬರೆದುಕೊಂಡಿದ್ದಾರೆ. ಕನ್ನಡದ ಕೆಲವೇ ಕೆಲವು ಅತ್ಯುತ್ತಮ ಆತ್ಮಕಥನ ಕೃತಿಗಳಲ್ಲಿ ಕಟ್ಟೀಮನಿಯವರ ‘ಕಾದಂಬರಿಕಾರನ ಬದುಕು’ ಅಗ್ರ ಹತ್ತರ ಪಟ್ಟಿಯಲ್ಲಿರುವಂತಹದು.
ಸುಮಾರು ಐದು ದಶಕಗಳ ಕಾಲ ಬರಹಗಾರರಾಗಿ ಸಕ್ರಿಯರಾಗಿದ್ದ ಕಟ್ಟೀಮನಿಯವರ ಕಥನ ಸಾಹಿತ್ಯ ವಿಫುಲ ಮತ್ತು ವೈವಿಧ್ಯಮಯವಾದುದು. ಹಸಿವು, ಬಡತನ, ನಿರುದ್ಯೋಗ, ರಾಜಕೀಯ ಭ್ರಷ್ಟಾಚಾರ, ಧಾರ್ಮಿಕ ಭ್ರಷ್ಟಾಚಾರ, ವೇಶ್ಯಾ ಸಮಸ್ಯೆ, ಬದುಕಿನಲ್ಲಿ ಪ್ರೇಮ-ಕಾಮ ವಹಿಸಿದ ಪಾತ್ರ ಸೇರಿದಂತೆ ಹತ್ತು ಹಲವು ಜ್ವಲಂತ ಸಮಸ್ಯೆಗಳನ್ನು ಜೀವಂತವಾಗಿ ಚಿತ್ರಿಸಿರುವ ಕಟ್ಟೀಮನಿಯವರ ಅನೇಕ ಕಾದಂಬರಿಗಳು ಇಂದಿಗೂ ಪ್ರಸ್ತುತವಾಗುವಂತಿವೆ. ಕಾದಂಬರಿ ಬರವಣಿಗೆಯನ್ನು ವೃತ್ತಿಯಾಗಿಸಿಕೊಂಡಿದ್ದ ಅವರು ಬರೆದೇ ಬದುಕಬೇಕಾಗಿದ್ದರಿಂದ ಹಲವು ಜನಪ್ರಿಯ ಶೈಲಿಯ ಸಾಧಾರಣ ಕಾದಂಬರಿಗಳನ್ನು ಬರೆಯಬೇಕಾಯಿತು. ಇದರಿಂದ ಕಾದಂಬರಿಗಳ ಗುಣಮಟ್ಟ ಕುಸಿದದ್ದು ಸಹಜ. ಕಟ್ಟೀಮನಿಯವರ ಕಥೆ-ಕಾದಂಬರಿಗಳಲ್ಲಿ ಅತ್ಯುತ್ತಮ, ಉತ್ತಮ ಮತ್ತು ಸಾಧಾರಣ ಕೃತಿಗಳಿವೆ ಆದರೆ ಕಳಪೆ ಕೃತಿಗಳಿಲ್ಲ. ಆದ್ದರಿಂದ ಅವರು ಕನ್ನಡದ ಅತ್ಯಂತ ಯಶಸ್ವಿ ಕಾದಂಬರಿಕಾರರಲ್ಲೊಬ್ಬರು.
ಕನ್ನಡಕ್ಕೆ ಇಷ್ಟೆಲ್ಲ ಕೊಡುಗೆ ನೀಡಿರುವ ಕಟ್ಟೀಮನಿಯವರ ಕಥನ ಸಾಹಿತ್ಯಕ್ಕೆ ವಿಮರ್ಶೆಯ ಪರಿಗಣನೆ ಸಿಗಲಿಲ್ಲ. ನವ್ಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ಬಲಿಷ್ಠರಾಗಿ ಬೆಳೆದು ಬಂದ ವಿಮರ್ಶಕರು ಅ.ನ.ಕೃ., ತ.ರಾ.ಸು., ಕಟ್ಟೀಮನಿ ಮತ್ತು ನಿರಂಜನರನ್ನು ಜನಪ್ರಿಯ ಕಾದಂಬರಿಕಾರರೆಂದು ಕರೆದು ಬದಿಗೆ ಸರಿಸಿದರು. ದಿ. ಜಿ. ಎಸ್. ಅಮೂರ ಮತ್ತು ದಿ. ಎಲ್. ಎಸ್. ಶೇಷಗಿರಿರಾವ್ ಅವರಂತಹ ಖ್ಯಾತ ವಿಮರ್ಶಕರನ್ನು ಬಿಟ್ಟರೆ ಉಳಿದವರು ಕಟ್ಟೀಮನಿಯವರ ಸಾಹಿತ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಇನ್ನಾದರೂ ಮರು ಓದಿನ ಮೂಲಕ ಕಟ್ಟೀಮನಿಯವರ ಕೃತಿಗಳ ನಿಜವಾದ ಮೌಲ್ಯಮಾಪನ ನಡೆಯಬೇಕಿದೆ.
‘ಜ್ವಾಲಾಮುಖಿಯ ಮೇಲೆ’ ಕಾದಂಬರಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಪಡೆದ ಕಟ್ಟೀಮನಿಯವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಲಭಿಸಿದೆ. ಅವರು ಒಂದು ಅವಧಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಕಟ್ಟೀಮನಿಯವರು ೧೯೮೨ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇತ್ತೀಚೆಗೆ ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಮಾಡಿದ್ದು ಎಲ್ಲ ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳಂತೆಯೇ ಅದೂ ಕೂಡ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಪ್ರಕಟಣೆ ಮಾಡುತ್ತ ಕಾಲ ಕಳೆಯುತ್ತಿದೆ. ‘ಬಸವರಾಜ ಕಟ್ಟೀಮನಿ ಸಮಗ್ರ ಸಾಹಿತ್ಯ ಸಂಪುಟ’ಗಳು ಮಾತ್ರ ಚೆನ್ನಾಗಿವೆ. ಉಳಿದಂತೆ ಕಟ್ಟೀಮನಿಯವರ ಕುರಿತು ಬಂದ ಪುಸ್ತಕಗಳು ಕಳಪೆ ಗುಣಮಟ್ಟದಿಂದ ಓದುಗರಲ್ಲಿ ಅತೃಪ್ತಿ ಹುಟ್ಟಿಸುತ್ತವೆ. ಇನ್ನಾದರೂ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಅವರ ಹೆಸರು ಉಳಿಸುವಂತಹ ಒಳ್ಳೆಯ ಕೆಲಸಗಳು ನಡೆಯಲಿ.
5 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಪ್ರಗತಿಶೀಲ ಕಾದಂಬರಿಕಾರ ಬಸವರಾಜ ಕಟ್ಟೀಮನಿ”
ಪ್ರಗತಿಶೀಲ ಪಂಥದ ಮುಖ್ಯ ರಲ್ಲಿ ಒಬ್ಬರಾದ ಕಟ್ಟೀಮನಿಯವರ ಕೊಡುಗೆ ಯನ್ನು ನೆನಪಿಸಿಕೊಳ್ಳುವ ಒಳ್ಳೆಯ ಪ್ರಯತ್ನ. ಅಭಿನಂದನೆ ಗಳು
ಸಮಯೋಚಿತ ಅರ್ಥಪೂರ್ಣ ಲೇಖನ ಶ್ರೀ ಬಸವರಾಜ್ ಕಟ್ಟಿಮನಿಯವರ ಬದುಕು ಮತ್ತು ಸಾಹಿತ್ಯದ ಚಿತ್ರಣ ನೀಡುತ್ತದೆ. ಅವರ ಮಾಡಿ ಮಡಿದವರು ಕಾದಂಬರಿ ಚಲನಚಿತ್ರವೂ ಆಗಿದೆ.
ಅಭಿನಂದನೆಗಳು.
‘ಬದುಕು ಹಾಗೂ ಸಾಹಿತ್ಯ’ದ ಸಂಬಂಧ ಸುಪುಷ್ಟವಾಗಿ, ಸಚೇತವಾಗಿ ದೀರ್ಘ ಕಾಲ ಉಳಿಯುವ ಸನ್ನಿವೇಶದ ಸವಾಲಿನಲ್ಲಿ, ಸಾಹಿತ್ಯದ ವಿವಿಧ ಪ್ರಕಾರಗಳಾದ ಕಾವ್ಯ, ಕತೆ, ನಾಟಕ, ಕಾದಂಬರಿ, ಲಲಿತ ಪ್ರಬಂಧ, ಜೀವನ ಚರಿತ್ರೆ, ವಿಮರ್ಶೆ, ಭಾಷಣ ಸಂಗ್ರಹ, ಟೀಕೆ ಟಿಪ್ಪಣಿಗಳಲ್ಲಿ, ‘ಕಾದಂಬರಿ’ ತನ್ನ ಹರವಿನಿಂದ, ಆಳದಿಂದ, ವೈಶಾಲ್ಯತೆಯಿಂದ ಮೂಲಭೂತವಾಗಿ, ಒಂದು ಬಲಾಢ್ಯ ಮಾಧ್ಯಮವಾಗಿದೆ. ಸಾಹಿತ್ಯ ಕೃಷಿಕಾರರು, ಸಾಹಿತ್ಯದ ಆರಾಧಕರು, ಸಾಹಿತ್ಯಕ್ಕಾಗಿಯೇ ಹುಟ್ಟಿದವರು, ಸಾಹಿತ್ಯವನ್ನೇ ನಂಬಿದವರು, ಸಾಹಿತ್ಯದ ಕಾರ್ಯಕರ್ತರು, ಸಾಹಿತ್ಯಾಸಕ್ತರು, ಸಾಹಿತ್ಯವನ್ನು ಉಂಡು ಬಡಿಸಿದವರು, ದೈವೀದತ್ತವಾಗಿ ತಮ್ಮ ರಕ್ತದಲ್ಲೇ ಸಮಗ್ರ ಸಾಹಿತ್ಯದ / ಸಾಹಿತ್ಯದ ಸಮಗ್ರತೆಯ ಸಮಸ್ತತೆಯನ್ನು ಪಡೆದು ಬಂದು ಅದನ್ನು ಸಮಾಜದ ಉಪಯುಕ್ತತೆಗೆ ಪ್ರಾಮಾಣಿಕವಾಗಿ ದುಡಿಸಿಕೊಂಡವರೆಲ್ಲ, ಗಾಳಿಯಲ್ಲಿ ತೂರಿಹೋಗದ ಗಟ್ಟಿ ಧಾನ್ಯದಂತೆ ಶಕ್ತಿಯುತವಾಗಿ, ಸ್ವಂತ ಕಾಲಘಟ್ಟವನ್ನು ಮೀರಿದ ಶ್ರೇಣಿಯಲ್ಲಿ ಒಂದಾಗಿ, ಸಾಹಿತ್ಯದ ಕೊಡುಗೆಯ ಮೈಲುಗಲ್ಲುಗಳಾಗಿ ಮೆರೆಯುತ್ತಾರೆ.
ಸಮಕಾಲೀನತೆಯಲ್ಲಿ ಸಾಹಿತ್ಯವೆನ್ನುವದು ಒಂದು ಬಳ್ಳಿಯ ಹಾಗೆ. ಯಾವ ಬೀಜದ ಬಳ್ಳಿಗೆ, ಬೆಳವಣಿಗೆಯ ಹೊತ್ತಿನಲ್ಲಿ, ಪತ್ರಿಕಾ ವರ್ಗದ, ವಿಮರ್ಶಕರ, ಪ್ರಚಾರಕರ, ರಾಜಕಾರಣದ, ಪ್ರಶಸ್ತಿವರ್ಗದ ಕೃಪಾಕಟಾಕ್ಷದ ಅಸ್ತುವಿನ ಆಶ್ರಯ ಸಿಗುತ್ತದೆಯೋ, ಮತ್ತೂ ಯಾವಾಗ ಪ್ರತಿಭೆಗಿಂತ ಪ್ರಭಾವವೇ ಮಾನದಂಡವಾಗುವದೋ, ಆ ವೇಳೆಯಲ್ಲಿ ಅಂತಹ ಕೃತಿಗಳು ಪ್ರಕಾಶಮಾನವಾಗುವದು ಅಸಹಜವೇನಲ್ಲ.
ಆದರೆ, ಭವಿಷ್ಯದಲ್ಲಿ, ಯಾವುದೇ ನಿರ್ದಿಷ್ಟ ಕಾಲಘಟ್ಟದ ಸಾಹಿತ್ಯದ ಅಭ್ಯಸನದಲ್ಲಿ, ಸಂಶೋಧಕರ, ಸಂಗ್ರಾಹೋತ್ಸುಕರ, ಸಮರ್ಥ ಹಾಗೂ ಸಕ್ಷಮ ಓದುಗರ, ಜಿಜ್ಞಾಸುಗಳ ನಿಜ ಅರಿವಿನ ಜಾಣ್ಮೆಯಲ್ಲಿ, ಸಾಹಿತ್ಯದ ಕೃತಿಗಳಲ್ಲಿರುವ ಅಸಲು ‘ಗಟ್ಟಿತನ’ ಮಾತ್ರ, ಸ್ವಯಂ ಪ್ರಕಾಶಮಾನವಾಗುತ್ತದೆ – ಸಾವಿರಾರು ವರ್ಷಗಳ ನಂತರವೂ ರಾಮಾಯಣ, ಮಹಾಭಾರತಗಳು ಗಟ್ಟಿಯಾಗಿ ಉಳಿದಂತೆ.
ಲೇಖನದಲ್ಲಿ ನಮೂದಿಸಿದ ‘ಹಸಿವು, ಬಡತನ, ನಿರುದ್ಯೋಗ, ರಾಜಕೀಯ ಭ್ರಷ್ಟಾಚಾರ, ಧಾರ್ಮಿಕ ಭ್ರಷ್ಟಾಚಾರ, ವೇಶ್ಯಾ ಸಮಸ್ಯೆ, ಬದುಕಿನಲ್ಲಿ ಪ್ರೇಮ-ಕಾಮ ವಹಿಸಿದ ಪಾತ್ರ ಸೇರಿದಂತೆ ಹತ್ತು ಹಲವು ಜ್ವಲಂತ ಸಮಸ್ಯೆಗಳು’ ಕಟ್ಟೀಮನಿಯವರು ತಮ್ಮ ಸಾಹಿತ್ಯದ ಕೃತಿಗಳಲ್ಲಿ ತಟ್ಟಿದ ಪ್ರಮುಖ ಅಂಶಗಳು.
ಲೇಖನದಲ್ಲಿ ಪ್ರಸ್ತಾಪಿಸಿದಂತೆ, ‘ಬಸವರಾಜ ಕಟ್ಟೀಮನಿಯವರು (ಬರೆದ) ಒಟ್ಟು ನಲವತ್ತು ಕಾದಂಬರಿಗಳು, ಹತ್ತು ಕಥಾಸಂಕಲನಗಳು, ಒಂದು ಅನುವಾದಿತ ಕಥಾಸಂಕಲನ, ಎರಡು ಕವನ ಸಂಕಲನಗಳು, ಒಂದು ನಾಟಕ, ಒಂದು ಪ್ರವಾಸ ಕಥನ, ಎರಡು ಜೀವನ ಚರಿತ್ರೆ, ಎರಡು ಮಕ್ಕಳ ಪುಸ್ತಕಗಳು, ನಾಲ್ಕು ಸಂಪಾದಿತ ಕೃತಿಗಳು ಮತ್ತು ‘ಕಾದಂಬರಿಕಾರನ ಕಥೆ’ ಅವರ ಆತ್ಮಕಥನ’ – ಅವರು ತಮ್ಮ ಜೀವಮಾನದಲ್ಲಿ ಸಾಹಿತ್ಯಿಕವಾಗಿ ಸಂಚರಿಸಿದ ಕ್ಷೇತ್ರಗಳು.
ಕಟ್ಟೀಮನಿಯವರ ಕೃತಿಗಳ ಆಳ, ವೈವಿಧ್ಯ, ಅಭಿರುಚಿಯ ಪ್ರಸ್ತುತಿ, ಇವೆಲ್ಲವುಗಳ ಸಾಧ್ಯತೆಯ ಪರಿಮಿತಿಯಲ್ಲಿ, ಅವರ ಕಥನ ಬಧ್ಧತೆ, ಬರೆಹವನ್ನು ವ್ಯಕ್ತ ಪಡಿಸುವ ಸ್ವಾತಂತ್ರ್ಯದ ಅವಕಾಶದಲ್ಲಿ ಅರಳುವ ಕ್ಷಮತೆ, ಪ್ರತೀ ಕೃತಿಯಲ್ಲೂ ಬೆಳೆಯಬೇಕೆಂಬ ಹುಮ್ಮಸ್ಸು, ತುಡಿತ, ಲಕ್ಷ್ಯ – ಮತ್ತೆ ಈ ಲಕ್ಷಣಗಳಲ್ಲಿ ಅನೂಚಾನವಾಗಿ ಮಿಡಿಯುವ ಅದಮ್ಯ ನಿಷ್ಠತೆ ಮತ್ತು ಎಲ್ಲಕ್ಕೂ ಮಿಗಿಲಾಗಿ ಬರೆಯುವ ಶ್ರದ್ಧೆಯಲ್ಲಿದ್ದ ಅಪ್ಪಟ ಪ್ರಾಮಾಣಿಕತೆ, ನಿಚ್ಚಳವಾಗಿ ಪ್ರತಿಫಲಿತವಾಗಿವೆ : ಕಟ್ಟೀಮನಿಯವರ ಕೃತಿಗಳ ಪ್ರಸ್ತಾವದ, ಸಾಕಷ್ಟು ವಿಸ್ತೃತ ಓದಿನ, ಈ ವಿವೇಚನಾ ಲೇಖನದಲ್ಲಿ.
ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿನ ಆಶ್ರಯದಲ್ಲಿ, ಜನೆವರಿ ೧೨ ರಿಂದ ೧೪, ೧೯೮೦ರಲ್ಲಿ, ಶಿಕ್ಷಕ, ಸಾಹಿತಿ ವಿಷ್ಣು ನಾಯಕರು ಏರ್ಪಡಿಸಿದ ‘ಸಾಹಿತ್ಯದ ಕಮ್ಮಟ’ದಲ್ಲಿ, ಬಸವರಾಜ ಕಟ್ಟೀಮನಿಯವರ ‘ನಾನೇಕೆ ಬರೆಯುತ್ತೇನೆ?’ ಎಂಬ ವಿಷಯದ ಮೇಲೆ ಮಾತನಾಡುವ ಹಿನ್ನೆಲೆಯಲ್ಲೂ , ‘ನರಗುಂದ ಬಂಡಾಯ’’ದ ಕುರಿತಾದ ಅವರ ಸಾಹಿತ್ಯಾಭಿರುಚಿಯ ಸ್ಪಂದನೆಯ ಒಂದು ಸವಿ ನೆನಪು!
ಈಗ ಈ ಲೇಖನದ ಶಬ್ದಗಳ ನಡುವೆ, ‘ಶ್ರಧ್ದಾಂಜಲಿ’ಯಂತೆ ಗೋಚರಿಸಿತು : ಬಸವರಾಜ ಕಟ್ಟೀಮನಿಯವರು, ‘ಮಾಡಿ ಮಾಡಿದವರು!’
ಸಮಗ್ರ ಪರಿಚಯ ಲೇಖನ.