ಬೆಳಗಿನ ಹನ್ನೊಂದುವರೆಗೆ ತೋಟಗಾರಿಕಾ ಸಹಾಯಕ ನಿರ್ದೇಶಕ ಮಧುಕರ ಕುಲಕರ್ಣಿಯವರು ಫೋನ್ ಮಾಡಿದಾಗ ಭೂಮಿಕಾ ತೋಟದಲ್ಲಿಯೇ ಇದ್ದಳು. `ಭೂಮಿಕಾ, ಎಮ್ಮೆಲ್ಲೆ ಸಾಹೇಬರು ನಿಮ್ಮ ತೋಟಕ್ಕೆ ವಿಜಿಟ್ ಕೊಡುವವರು ಇದ್ದಾರೆ. ನಿಮ್ಮೂರಿಗೆ ಬರುವಷ್ಟರಲ್ಲಿ ಮಧ್ಯಾಹ್ನ ಎರಡು ಗಂಟೆಯಾಗಬಹುದು. ಎಮ್ಮೆಲ್ಲೆಯವರ ಜೊತೆಗೆ ನಾನು ಮತ್ತು ಕೃಷಿ ಸಹಾಯಕ ನಿರ್ದೇಶಕ ಪುರುಷೋತ್ತಮ್ ಇರುತ್ತೇವೆ. ನೀವು ಊರಲ್ಲೇ ಇರುವಿರಿ ತಾನೇ...?' ಎಂದಿದ್ದರು. `ಹೌದು ಸರ್ ನಾನು ಊರಲ್ಲೇ ಇದ್ದೇನೆ. ಪಪ್ಪಾಯಿ ಹಣ್ಣಿನ ಕೊಯಿಲು ನಡೆದಿದೆ. ಸರ್, ಅದೇನು ಎಮ್ಮೆಲ್ಲೆ ಸಾಹೇಬರು ನಮ್ಮ ತೋಟಕ್ಕೆ...?' ಮಧುಕರರ ಮಾತಿಗೆ ಮಾಹಿತಿ ನೀಡುತ್ತಾ ಭೂಮಿಕಾ ಅನುಮಾನ ವ್ಯಕ್ತಪಡಿಸಿದಳು. `ಎಮ್ಮೆಲ್ಲೆ ಸಾಹೇಬರು ಏನು, ಏಕೆ ವಿಜಿಟ್ ಮಾಡುತ್ತಿದ್ದಾರೆಂಬುದು ಒಂದೂ ಗೊತ್ತಿಲ್ಲ. ನಿಮ್ಮೂರು ಒಂದೇ ಅಲ್ಲ, ಇನ್ನೂ ಕೆಲವು ಹಳ್ಳಿಗಳಿಗೆ ಹೋಗಬೇಕು ಎಂದು ಹೇಳಿದ್ದಾರೆ. ಇದು ದಿಢೀರ್ ಪ್ರೋಗ್ರ್ಯಾಂ. ಬಹುಶಃ ನಮ್ಮ ವಿಜಿಟ್‍ನ ಕೊನೇ ಊರು ನಿಮ್ಮದೇ ಆಗಬಹುದು.' `ಸರ್, ನಿಮ್ಮೆಲ್ಲರಿಗೆ ಊಟದ ವ್ಯವಸ್ಥೆ...?' `ಅದೊಂದೂ ಗೊತ್ತಿಲ್ಲ. ಅವರ ಜೊತೆಗೆ ಬರುತ್ತೇವೆ ಅಷ್ಟೇ.' `ಸರಿ ಸರ್' ಎಂದಳು ಭೂಮಿಕಾ. ಪಪ್ಪಾಯಿ ಹಣ್ಣಿನ ಕೊಯಿಲಿನಲ್ಲಿ ಮುಳುಗಿದ್ದ ಅವಳ ಮನಸ್ಸು ಒಂದಿಷ್ಟು ಗೊಂದಲದಲ್ಲಿ ಬಿದ್ದಿತು. ಅವರಿಗೆ ಊಟದ ವ್ಯವಸ್ಥೆ ಮಾಡಬೇಕೆಂದು ತಾಯಿಯ ಜೊತೆಗೆ ಮಾತಾಡಿ ನಿರ್ಧರಿಸಿಕೊಂಡಳು ಭೂಮಿಕಾ. ಮಗಳ ವಯಸ್ಸಿನ ಭೂಮಿಕಾಳ ಕಠಿಣ ಪರಿಶ್ರಮ, ಶ್ರದ್ಧೆ, ಕರ್ತವ್ಯ ನಿಷ್ಠೆಯ ಮೇಲೆ ಮಧುಕರ ಅವರಿಗೆ ತುಂಬಾ ಅಭಿಮಾನ.
ಹೊನ್ನಳ್ಳಿಯಲ್ಲಿ ಭೂಮಿಕಾಳ ತಂದೆ ಬಸವರಾಜಪ್ಪನ ಹೆಸರಿನಲ್ಲಿ ನಾಲ್ಕೆಕರೆ, ತಾಯಿ ಚೆನ್ನಮ್ಮನ ಹೆಸರಿನಲ್ಲಿ ಎರಡೆಕರೆ ಒಟ್ಟು ಆರೆಕರೆ ಭೂಮಿ. ಪಕ್ಕದ ರಾಜೂರಿನ ಬ್ಯಾಂಕೊಂದರಲ್ಲಿ ಕೃಷಿ ಸಾಲ ಪಡೆದು ಸಂಪೂರ್ಣ ಆರೆಕರೆ ಭೂಮಿಯನ್ನು ಕೊಳವೆಭಾವಿ, ಹನಿ ನೀರಾವರಿ ಪದ್ಧತಿಗೆ ಒಳಪಡಿಸಿದ್ದರು. ತೋಟಗಾರಿಕೆ ಇಲಾಖೆಯಿಂದ ಸಹಾಯ ಧನ ಪಡೆದು ಮೊದಲಿದ್ದ ಚಿಕ್ಕ ಹಳೇಭಾವಿಯನ್ನು ಅರ್ಧ ಎಕರೆಗೆ ವಿಸ್ತರಿಸಿ ಕೃಷಿ ಹೊಂಡವನ್ನಾಗಿ ಪರಿವರ್ತಿಸಿಕೊಂಡಿದ್ದರು. ಹೊಂಡದ ಮೇಲ್ಭಾಗದಲ್ಲಿ ಚಿಕ್ಕ ನಾಲೊಂದು ಹರಿಯುತ್ತಿದ್ದುದರಿಂದ ನಡುಬೇಸಿಗೆ ಕಾಲದವರೆಗೂ ಕೃಷಿ ಹೊಂಡ ನೀರಿನಿಂದ ತುಂಬಿತುಳುಕಾಡುತ್ತಿರುತ್ತದೆ. ಕೃಷಿ ಹೊಂಡದ ಕೆಳಗಿನ ಭಾಗದಲ್ಲಿದ್ದ ಎರಡು ಕೊಳವೆಭಾವಿಗಳಿಗೆ ಅಂತರ್ಜಲದ ಮರುಪೂರಣವಾಗುತ್ತಿದ್ದುದರಿಂದ ಬೇಸಿಗೆ ಕಾಲದಲ್ಲೂ ನೀರಿನ ತಾಪತ್ರಯವಾಗುತ್ತಿರಲಿಲ್ಲ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಈ ಸಾರೆ ಮೂರೆಕರೆಯಲ್ಲಿ ಪಪ್ಪಾಯಿ ಬೆಳೆದಿದ್ದರು. ಉಳಿದ ಒಂದೂವರೆ ಎಕರೆಯಲ್ಲಿ ಈರುಳ್ಳಿ, ಅರ್ಧ ಎಕರೆಯಲ್ಲಿ ಒಂದಿಷ್ಟು ಸಾವಯವ ತರಕಾರಿ ಬೆಳೆಸಿದ್ದರು. ತರಕಾರಿ ಎಂದರೆ ಬದನೆ, ಹೀರೆ, ಟೊಮ್ಯಾಟೋ ಅಷ್ಟೇ. ಪಪ್ಪಾಯಿ ಬೆಳೆ ತುಂಬಾ ಚೆನ್ನಾಗಿ ಬಂದಿದ್ದು ಇಂದಷ್ಟೇ ಕೊಯಿಲು ಪ್ರಾರಂಭವಾಗಿದೆ. ಎಕರೆಗೆ ಐವತ್ತು ಟನ್ನಿನ ಮೇಲೆ ಇಳುವರಿ ಬರಬಹುದೆಂದು ಪರಿಣಿತರು ಅಂದಾಜು ಮಾಡುತ್ತಿದ್ದಾರೆ. ಕೆಜಿಗೆ ಹದಿನಾಲ್ಕು ರೂಪಾಯಿಯಂತೆ ಪಪ್ಪಾಯಿ ಹಣ್ಣಿಗೆ ದರ ನಿಗದಿಯಾಗಿದ್ದರಿಂದ ಒಳ್ಳೇ ಆದಾಯ ಬರಬಹುದೆಂಬ ಅಂದಾಜಿತ್ತು. ಕೃಷಿ ಇಲಾಖೆಯ ಸಹಾಯ ಧನದಿಂದ ಎರೆಹುಳ ಗೊಬ್ಬರದ ತಯಾರಿಕೆಯ ಚಿಕ್ಕ ಘಟಕವೊಂದನ್ನು ಮಾಡಿಕೊಂಡಿದ್ದರು.
ಬೆಳಿಗ್ಗೆ ಎಂಟು ಗಂಟೆಯಿಂದಲೇ ಪಪ್ಪಾಯಿ ಹಣ್ಣಿನ ಕೊಯಿಲು ಶುರುವಾಗಿದ್ದರಿಂದ ಭೂಮಿಕಾ, ಬಸವರಾಜಪ್ಪ ತಂದೆ-ಮಗಳಿಬ್ಬರೂ ತೋಟದಲ್ಲೇ ಇದ್ದಾರೆ. ತೋಟ ಊರಿಗೆ ಸಮೀಪವೇ. ಊರಿಂದ ಒಂದು ಹೊಲ ದಾಟಿದರೆ ಎರಡನೇ ಹೊಲವೇ ಇವರದು. ಮನೆಯಿಂದ ಕೂಗಳತೆಯಲ್ಲಿದೆ. ಐದಾರು ನಿಮಿಷಗಳ ದಾರಿ ಅಷ್ಟೇ. ಬಸವರಾಜಪ್ಪ-ಚೆನ್ನಮ್ಮ ದಂಪತಿಗಳಿಗೆ ಭೂಮಿಕಾ ಒಬ್ಬಳೇ ಮಗಳು. ಮನೆಗೆಲಸ, ಅಡುಗೆ ಮುಗಿಸಿಕೊಂಡು ಚೆನ್ನಮ್ಮನೂ ತೋಟಕ್ಕೆ ಹೋಗುವವಳೇ.
****
ಶಾಸಕ ಬಸವಪ್ರಭು ಅವರು ಬಸವರಾಜಪ್ಪನ ತೋಟಕ್ಕೆ ತಲುಪುವುದಕ್ಕಿಂತ ಮುಂಚೆ ಮೂರ್ನಾಲ್ಕು ಊರುಗಳಲ್ಲಿ ರೈತರ ಹೊಲದಲ್ಲಿನ ಕೃಷಿ ಹೊಂಡ, ದ್ರಾಕ್ಷಿ, ಪಪ್ಪಾಯಿ, ದಾಳಿಂಬೆ, ಇತರ ಹಣ್ಣಿನ ತೋಟಗಳನ್ನು ನೋಡಿಕೊಂಡು ಬಂದಿದ್ದರು. ಹನುಮಾಪುರದಲ್ಲಿ ಸಮಗ್ರ ತೋಟಗಾರಿಕೆ ಬೆಳೆಯ ಯೋಜನೆ ಅಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ದ್ರಾಕ್ಷಿ ಬೆಳೆಗಾಗಿ ಹಣಕಾಸಿನ ಸೌಲಭ್ಯ ಪಡೆದಿದ್ದ ಕೇಶವ ಎನ್ನುವ ರೈತನ ತೋಟಕ್ಕೆ ಎಂಟ್ರಿ ಹೊಡೆದಾಗ ರೈತ ಹೊಲದಲ್ಲಿ ದ್ರಾಕ್ಷಿ ಬಳ್ಳಿಗಳನ್ನು ಹಬ್ಬಿಸಲು ನೆಟ್ಟಿದ್ದ ಕಲ್ಲಿನ ಕಂಬಗಳನ್ನು ಕೀಳಿಸತೊಡಗಿದ್ದ. ಅವನು ದ್ರಾಕ್ಷಿ ಬೆಳೆಯನ್ನು ಬೆಳೆಸಿರಲೇ ಇಲ್ಲ. ಮುಂದೆ ರತ್ನಾಪುರ ಗ್ರಾಮದಲ್ಲಿ ರಂಗಪ್ಪ ಎನ್ನುವ ರೈತ ಪಕ್ಕದ ಹೊಲದವನ ಕೃಷಿ ಹೊಂಡ ತೋರಿಸಿ ಕೃಷಿ ಇಲಾಖೆಯ ಸಹಾಯಧನ ಗುಳುಂ ಮಾಡಿದ್ದ. ಸಂಗಾಪುರ ಗ್ರಾಮದಲ್ಲಿ ದೇವಪ್ಪ ಎಂಬ ರೈತ ಎರೆಹುಳ ತೊಟ್ಟಿಗಾಗಿ ಸಹಾಯಧನ ಪಡೆದು ಎರೆಹುಳ ತೊಟ್ಟಿಯನ್ನು ನಿರ್ಮಿಸಿರಲೇ ಇಲ್ಲ. ಹೀಗೆ ಸರಕಾರದ ಸಹಾಯಧನವನ್ನು ದುರುಪಯೋಗ ಮಾಡಿಕೊಂಡ ಇನ್ನೂ ಮೂರ್ನಾಲ್ಕು ರೈತರ ಜಮೀನುಗಳನ್ನು ನೋಡಿದರು ಶಾಸಕರು. `ಇವರಿಗೆಲ್ಲ ಯಾವ ರೀತಿ ಕಾನೂನಿನ ಕ್ರಮ ತೆಗೆದುಕೊಳ್ಳಬಹುದು...?' ಎಂದು ಇಬ್ಬರೂ ಸಹಾಯಕ ನಿರ್ದೇಶಕರನ್ನು ಕೇಳಿದ್ದರು. `ಸರಕಾರ ಮನಸ್ಸು ಮಾಡಿದರೆ ಕ್ರಿಮಿನಲ್ ಕೇಸನ್ನು ದಾಖಲಿಸಬಹುದು' ಎಂದರು. `ಸದ್ಯ ಅದು ಬೇಡ. ಅವರಿಗೆ ಒಂದಿಷ್ಟು ಕಾಲಾವಕಾಶ ಕೊಡಿರಿ. ಯಾವ ಉದ್ದೇಶಕ್ಕಾಗಿ ಸರಕಾರದ ಹಣವನ್ನು ಪಡೆದಿರುವರೋ ಆ ಯೋಜನೆಯನ್ನು ಪೂರ್ಣಗೊಳಿಸಲಿ. ಅದಾಗ್ಯೂ ಅವರು ಕ್ರಮ ಕೈಗೊಳ್ಳದಿದ್ದರೆ ನೀವು ಹೇಳಿದಂತೆ ಕಾನೂನಾತ್ಮಕ ಕ್ರಮವನ್ನು ಕೈಗೊಳ್ಳಿರಿ. ಆರು ತಿಂಗಳ ನಂತರ ನಾನು ಮತ್ತೊಮ್ಮೆ ಇವರ ಜಮೀನುಗಳನ್ನು ಸಂದರ್ಶಿಸುವೆ' ಎಂದು ಆದೇಶ ನೀಡಿದ್ದರು ಶಾಸಕರು.
****
ಕೂಲಿಯಾಳುಗಳು ಮಧ್ಯಾಹ್ನ ಎರಡು ಗಂಟೆಗೆ ಊಟಕ್ಕೆ ವಿರಾಮ ತೆಗೆದುಕೊಳ್ಳುತ್ತಿದ್ದುದರಿಂದ ಭೂಮಿಕಾ ತಂದೆಗೂ ಊಟಮಾಡಲು ತಿಳಿಸಿದಳು. `ನೀನೂ ನಂಜೊತಿಗೆ ಊಟಮಾಡಿಬಿಡು. ಆಗಲೇ ತುಂಬಾ ಹೊತ್ತಾಗಿದೆ ಮಗಳೇ' ಎಂದು ತಂದೆ ಒತ್ತಾಯಿಸಿದಾಗ ಆಕೆ, `ಅಪ್ಪಾಜೀ, ನಾವೆಲ್ಲರೂ ಊಟಕ್ಕೆ ಕುಳಿತಾಗ ಬಾಯ್ ಚಾನ್ಸ್ ಎಂಎಲ್‍ಎ ಸಾಹೇಬರು ಬಂದರೆ ಸರಿ ಕಾಣುವುದಿಲ್ಲ. ಅವರೆಲ್ಲರೂ ಅನ್ಯಥಾ ಭಾವಿಸಬಾರದೆಂಬುದು ನನ್ನ ಅಭಿಮತ. ನೀವು ಊಟಮಾಡಿಬಿಡಿ' ಎಂದು ಪಟ್ಟು ಬಿಡದೇ ತಂದೆಗೆ ಊಟಮಾಡಲು ತಿಳಿಸಿ ತಾನು ಮಧುಕರ ಕುಲಕರ್ಣಿಯವರ ಫೋನ್‍ಗೆ ಡಯಲ್ ಮಾಡಿದಳು. ಮೂರ್ನಾಲ್ಕು ಸಾರೆ ಪ್ರಯತ್ನಿಸಿದರೂ ಅವರ ನಂಬರ್ ಕಾಂಟ್ಯಾಕ್ಟಿಗೆ ಸಿಗಲಿಲ್ಲ. ಪುರುಷೋತ್ತಮ ಅವರ ಮೊಬೈಲಿಗೂ ಪ್ರಯತ್ನಿಸಿದಳು. ಅದೂ ನಾಟ್ ರೀಚೆಬಲ್ ಇತ್ತು. ತಾನು ಊಟಮಾಡದೇ ಅವರ ಬರುವಿಕೆಯ ದಾರಿಯನ್ನೇ ಕಾಯತೊಡಗಿದಳು.
ಎಂಎಲ್‍ಎ ಸಾಹೇಬರು ಬಸವರಾಜಪ್ಪನ ತೋಟಕ್ಕೆ ಬಂದಾಗ ಆಗಲೇ ಮಧ್ಯಾಹ್ನ ಮೂರು ಗಂಟೆ ದಾಟಿತ್ತು. ಕೂಲಿಯಾಳುಗಳು ಊಟ ಮುಗಿಸಿ ಮತ್ತೆ ಕೆಲಸಕ್ಕೆ ಕೈಹಚ್ಚಿದ್ದರು. ಕೂಲಿಯಾಳುಗಳ ಜೊತೆಗೆ ಹೊರಟಿದ್ದ ಬಸವರಾಜಪ್ಪ ಮರಳಿ ಬಂದು, `ನಮಸ್ಕಾರ್ರೀ ಸಾಹೇಬ್ರಾ...' ಎಂದೆನ್ನುತ್ತಾ ಕಾರಿನಿಂದ ಇಳಿಯುತ್ತಿದ್ದ ಎಲ್ಲರಿಗೂ ಕೈಮುಗಿದ. ನಮಸ್ಕರಿಸಿದ ಮಧ್ಯವಯಸ್ಕ ವ್ಯಕ್ತಿಯ ಕಡೆಗೆ ದೃಷ್ಟಿ ಹರಿಸಿದರು ಎಂಎಲ್‍ಎ ಸಾಹೇಬರು.
"ಸರ್, ಇವರು ಬಸವರಾಜಪ್ಪ ಅಂತ. ಇದು ಇವರದೇ ತೋಟ." ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೆಶಕ ಮಧುಕರ ಕುಲಕರ್ಣಿಯವರು ಎಂಎಲ್‍ಎಯವರಿಗೆ ಪರಿಚಯಿಸಿದರು. ಪರಸ್ಪರ ನಮಸ್ಕಾರಗಳ ವಿನಿಮಯವಾಯಿತು. ಅಷ್ಟರಲ್ಲಿ ಭೂಮಿಕಾ ಕೂಡಾ ಓಡೋಡಿ ಅಲ್ಲಿಗೆ ಬಂದು ಮೂವರಿಗೂ ನಮಸ್ಕರಿಸಿದಳು.
"ಸರ್, ಇವರು ಭೂಮಿಕಾ ಅಂತ. ಬಸವರಾಜಪ್ಪನವರ ಮಗಳು. ಈಗಷ್ಟೇ ಎಂಎಸ್ಸಿ ಕೃಷಿಯ ಅಂತಿಮ ಪರೀಕ್ಷೆಗಳನ್ನು ಬರೆದು ಬಂದಿದ್ದಾರೆ. ಅಪ್ರತಿಮ ಪ್ರತಿಭಾವಂತಳು. ಅಷ್ಟೇ ವಿನಯವಂತಳು. ಈ ತೋಟದ ರೂವಾರಿ ಇವರೇ" ಎಂದು ಮಧುಕರ್ ಕುಲಕರ್ಣಿಯವರು ಭೂಮಿಕಾಳ ಪರಿಚಯ ಎಂಎಲ್‍ಎ ಸಾಹೇಬರಿಗೆ ಪರಿಚಯ ಮಾಡಿಕೊಟ್ಟಾಗ ಬಸವಪ್ರಭು ಅವಳ ಕಡೆಗೆ ತೀಕ್ಷಣವಾಗಿ ದೃಷ್ಟಿ ಹರಿಸಿದರು. `ಯಂಗ್ ಅಂಡ್ ಬ್ಯೂಟಿಫುಲ್ ಗರ್ಲ್. ಒಳ್ಳೇ ಒನ್ ಮ್ಯಾನ್ ಆರ್ಮಿ ತರಹ ಇದ್ದಾಳೆ ಜೀನ್ಸ್ ಪ್ಯಾಂಟ್, ಶರ್ಟಿನಲ್ಲಿ...' ಎಂದು ಮನದೊಳಗೇ ಅಂದುಕೊಂಡರು.
"ಹೌದೇನ್ರೀ...? ಎಂಎಸ್ಸಿ ಅಗ್ರಿ ಮಾಡಿಕೊಂಡಿರುವಿರಾ...? ಭಲೇ ಭಲೇ! ತುಂಬಾ ಖುಷಿಯಾಗುತ್ತಿದೆ ನಿಮ್ಮಂಥಹವರ ಪರಿಚಯದಿಂದ." ಶಾಸಕರು ಉದ್ಘರಿಸಿದರು.
ಅವರೆಲ್ಲರದೂ ಊಟ ಆಗಿಲ್ಲ ಎಂಬ ಮಾಹಿತಿ ಪಡೆದುಕೊಂಡು ಭೂಮಿಕಾ ತಾಯಿಗೆ ಫೋನಾಯಿಸಿ ನಾಲ್ಕೈದು ಜನರಿಗೆ ಊಟ ತಯಾರು ಮಾಡಲು ತಿಳಿಸಿದಳು.
ಬಸವಪ್ರಭು ಕುಲಕರ್ಣಿ ಮತ್ತು ಪುರುಷೋತ್ತಮ ಅವರಿಗೆ ಮಾಹಿತಿ ಕೇಳುತ್ತಾ ಕೇಳುತ್ತಾ ಇಡೀ ತೋಟ ಸುತ್ತಿದರು. `ಪಪ್ಪಾಯಿ ಬಂಪರ್ ಬೆಳೆ ಬರುವ ಹಾಗಿದೆ. ಈರುಳ್ಳಿಯೂ ಸೂಪರ್. ತರಕಾರಿಗಳೂ ಒಂದಕ್ಕಿಂತ ಒಂದು ಚೆಂದ. ಇದರಲ್ಲಿ ನಿಮ್ಮ ಕುಟುಂಬದವರೆಲ್ಲರ ಪರಿಶ್ರಮ, ಪ್ರಯತ್ನ ಬಹಳ ಇದೆ' ಎಂದು ಸಂತಸ ವ್ಯಕ್ತಪಡಿಸಿದರು. ಕೃಷಿ ಹೊಂಡದತ್ತ ಬಂದಾಗ ತಮ್ಮ ಕೈಯಲ್ಲಿದ್ದ ಕವರ್ ಒಂದರಿಂದ ಕಾಗದವೊಂದನ್ನು ಕುಲಕರ್ಣಿಯವರಿಗೆ ಕೊಡುತ್ತಾ, `ಇದೇನು ಅಂತ ನೋಡ್ರಿ. ಈ ಪವಾಡೆಪ್ಪ ಅನ್ನೋರು ಯಾರು...? ಇಲ್ಲಿ ಮೊದಲೇ ಕೃಷಿ ಹೊಂಡವಿತ್ತೇ...? ಮೊದಲಿದ್ದ ಕೃಷಿ ಹೊಂಡಕ್ಕೇ ನೀವು ಮತ್ತೊಮ್ಮೆ ಸಹಾಯ ಧನ ಕೊಟ್ಟಿರುವಿರಾ...?' ಎಂದರು. ಕಾಗದವನ್ನು ಕೈಗೆ ತೆಗೆದುಕೊಂಡ ಕುಲಕರ್ಣಿವರು ಅದರಲ್ಲಿದ್ದ ವಿಷಯಗಳನ್ನು ಓದಿಕೊಂಡರು. `ಸರ್, ಇಲ್ಲಿ ಮೊದಲು ಕೃಷಿ ಹೊಂಡ ಇರಲಿಲ್ಲ. ಹಳೇ ಕಾಲದ ಒಂದು ಸಣ್ಣ ಭಾವಿ ಇತ್ತು. ಅದೂ ಆಗಲೇ ಹೆಚ್ಚುಕಡಿಮೆ ಮುಚ್ಚಿ ಹೋಗಿತ್ತು. ಇಲ್ಲಿನ ನಾಲಿನಲ್ಲಿ ನೀರು ಹರಿಯುತ್ತಿರುವುದರಿಂದ ಅದನ್ನೇ ದೊಡ್ಡ ಕೃಷಿ ಹೊಂಡವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಈ ಪವಾಡೆಪ್ಪ ಅನ್ನೋನು ಒಬ್ಬ ದಳ್ಳಾಳಿ. ರೈತರಿಗೆ ಸರಕಾರದ ಯೋಜನೆಗಳ ಸವಲತ್ತುಗಳನ್ನು ಕೊಡಿಸುವ ನೆಪದಲ್ಲಿ ಅವರಿಂದ ದುಡ್ಡು ಕೀಳುತ್ತಾನೆ. ಭೂಮಿಕಾ ನೇರವಾಗಿ ನಮ್ಮ ಇಲಾಖೆಗೆ ಬಂದು ನಮ್ಮನ್ನು ಭೆಟ್ಟಿಯಾಗಿ ತಮ್ಮ ಯೋಜನೆ ವಿವರಿಸಿ ಅದರಂತೆ ಕಾರ್ಯಗತಗೊಳಿಸಿದ್ದಾರೆ. ಇದರಲ್ಲಿ ಸರಕಾರದ ಹಣ ಒಂದು ಪೈಸೇನೂ ದುರ್ಬಳಕೆ ಆಗಿಲ್ಲ. ಹಳೇ ಭಾವಿಯ ಫೋಟೋಗಳು ನಮ್ಮ ಕಚೇರಿಯ ಕಡತದಲ್ಲಿ ಇವೆ. ತಮಗೆ ತಂದು ತೋರಿಸುವೆ ಸರ್.' ಕುಲಕರ್ಣಿಯವರು ವಿವರವಾದ ಮಾಹಿತಿ ಒದಗಿಸಿದರು. ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಭೂಮಿಕಾ ತನ್ನ ಮೊಬೈಲಿನಲ್ಲಿದ್ದ ಹಳೇ ಭಾವಿಯ ಫೋಟೋವನ್ನು ಎಂಎಲ್‍ಎಯವರಿಗೆ ತೋರಿಸಿದಳು ತಕ್ಷಣ. ಅಷ್ಟರಲ್ಲಿ ಅವರಿಗೆ ವಿಷಯವೆಲ್ಲವೂ ಮನದಟ್ಟಾಗಿತ್ತು. `ಈ ಮನುಷ್ಯ ಊರಲ್ಲಿ ಇದ್ದರೆ ಒಂದಿಷ್ಟು ಕರೆಸಿರಿ. ಅವರ ಜೊತೆಗೆ ಮಾತಾಡುವೆ' ಎಂದು ಕುಲಕರ್ಣಿಯವರಿಗೆ ಹೇಳಿದರು. ಇಡೀ ತೋಟ ಸುತ್ತುವಷ್ಟರಲ್ಲಿ ನಾಲ್ಕು ಗಂಟೆಯಾಗಿಬಿಟ್ಟಿತು. "ಸರ್, ಇವತ್ತು ನಮ್ಮ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿರುವೆ. ಈಗ ಮನೆಗೆ ಹೋಗೋಣ. ದಯವಿಟ್ಟು ಬಡವರ ಮನೆಯ ಆತಿಥ್ಯ ಸ್ವೀಕರಿಸಬೇಕಾಗಿ ವಿನಂತಿ." ಭೂಮಿಕಾ ವಿನಮ್ರಳಾಗಿ ವಿನಂತಿಸಿಕೊಂಡಳು.
"ಈ ಹೊತ್ತಿನಲ್ಲಿ ನಿಮಗ್ಯಾಕ್ರೀ ತೊಂದರೆ...? ಹೊರಟುಬಿಟ್ಟರೆ ಇಪ್ಪತ್ತು ನಿಮಿಷಗಳಲ್ಲಿ ಮನೆ ತಲುಪುತ್ತೇವೆ." ಬಸವಪ್ರಭು ನಿರಾಕರಿಸಲು ಮುಂದಾದಾಗ ಭೂಮಿಕಾ ತನ್ನ ಪಟ್ಟು ಬಿಡದೇ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗೇಬಿಟ್ಟಳು. ಬರುವಾಗ ಕೆಲಸದ ಹುಡುಗ ವೀರೇಶನನ್ನು ಕರೆದು ಪಪ್ಪಾಯಿ, ತರಕಾರಿಗಳ ನಾಲ್ಕು ಬಾಕ್ಸ್‍ಗಳನ್ನು ತರಲು ಹೇಳಿದಳು.
****
ಎಂಎಲ್‍ಎಯವರನ್ನು ಮನೆಗೆ ಕರೆದುಕೊಂಡು ಹೋಗುತ್ತಲೇ ಅಡುಗೆ ಮನೆಯಲ್ಲಿದ್ದ ತಾಯಿಯನ್ನು ಕರೆದು ಪರಿಚಯ ಮಾಡಿದಳು ಭೂಮಿಕಾ. `ನಮಸ್ಕಾರ್ರೀ ಸಾಹೇಬ್ರಾ... ಬಡವರ ಮನೆಗೆ ದೇವ್ರು ಬಂದಂಗೆ ನೀವು ನಮ್ ಮನೀಗೆ ಬಂದೀರಿ...' ಎಂದು ನಗುಮೊಗದಿಂದ ಸ್ವಾಗತಿಸಿದಳು ಚೆನ್ನಮ್ಮ. `ನಾನೂ ನಿಮ್ಮಂತೆ ಸಾಮಾನ್ಯ ಮನುಷ್ಯನೇ. ನಿಮ್ಮ ಮನೆಗೆ ಬರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ' ಎಂದು ಬಸವಪ್ರಭು ತುಂಬಾ ವಿನೀತರಾಗಿ ಹೇಳಿದರು. ಭೂಮಿಕಾ ಮೂವರನ್ನೂ ಪ್ಲಾಸ್ಟಿಕ್ ಕುರ್ಚಿಗಳ ಮೇಲೆ ಕೂಡ್ರಿಸಿದಳು.
"ಸಾಹೇಬ್ರಾ, ನಿಮ್ಗೆ ಜೋಳದ ರೊಟ್ಟಿ ಇಷ್ಟಾನಾ? ಅಥವಾ ಚಪಾತಿ ಇಷ್ಟಾನಾ...? ಖರೇ ಹೇಳ್ಬೇಕಂದ್ರೆ ನಾ ರೊಟ್ಟಿ ಮಾಡ್ಬೇಕಂತ ಹಿಟ್ಟು ನಾದಿ ಇಟ್ಕೊಂಡೀನಿ. ನಿಮ್ಗೆ ಚಪಾತೀನೇ ಬೇಕಂದ್ರ ಜಲ್ದಿ ಜಲ್ದಿ ಚಪಾತೀನೂ ಮಾಡಿಕೊಡ್ತೀನಿ..." ಚೆನ್ನಮ್ಮ ತುಸು ತಡೆದು ತಡೆದು ಕೇಳಿದಳು ಎಂಎಲ್‍ಎ ಸಾಹೇಬರಿಗೆ.
"ಅಮ್ಮಾರೇ, ನನ್ಗೆ ಜೋಳದ ರೊಟ್ಟೀನೇ ಇಷ್ಟ. ನಾ ಚಪಾತಿ ಉಣ್ಣೋದು ಬಾಳ ಕಡಿಮೆ. ನೀವು ರೊಟ್ಟೀನೇ ಮಾಡ್ರಿ..."
"ಸರಿ ಸಾಹೇಬ್ರೇ" ಅಂತ ಹೇಳುತ್ತಾ ಚೆನ್ನಮ್ಮ ರೊಟ್ಟಿ ತಟ್ಟಲು ಅಡುಗೆಮನೆ ಸೇರಿಕೊಂಡಳು. ಬಸವಪ್ರಭು ಮನೆಯನ್ನೊಮ್ಮೆ ಸೂಕ್ಷ್ಮವಾಗಿ ದಿಟ್ಟಿಸಿದರು. ಅದೊಂದು ಚಿಕ್ಕ ಮನೆ. ಹತ್ತು, ಹತ್ತು ಅಡಿ ಉದ್ದಗಲದ ಚಿಕ್ಕ ಹಾಲ್, ಚಿಕ್ಕ ಅಡುಗೆ ಮನೆ, ಒಂದು ಸಣ್ಣ ಬೆಡ್ ರೂಮ್ ಅಷ್ಟೇ ಆ ಮನೆಯ ವೈಭವ.
"ಸರ್, ನಮ್ಮ ಮನ್ಯಾಗ ಡೈನಿಂಗ್ ಟೇಬಲ್ ಇಲ್ಲ. ಅಲ್ಲೇ ಕುರ್ಚಿ ಮೇಲೆ ಕುಳ್ತ್ಕೊಂಡು ಊಟಮಾಡಿಬಿಡ್ರಿ... ಬಡವರ ಮನೆ. ತಪ್ ತಿಳ್ಕೋಬ್ಯಾಡ್ರಿ ಸರ್." ಅನುಮಾನಿಸುತ್ತಾ ಹೇಳಿದಳು ಭೂಮಿಕಾ. ಮೈಯನ್ನು ಹಿಡಿಯಾಗಿ ಮಾಡಿಕೊಂಡಿದ್ದಳು ಕೀಳರಿಮೆಯಿಂದ. ತೋಟಗಾರಿಕೆ ಸಹಾಯಕ ನಿರ್ದೇಶಕರು ಬಸವಪ್ರಭು ಅವರ ಕಡೆಗೆ ದಿಟ್ಟಿಸತೊಡಗಿದರು.
"ಅದೇನೂ ಬ್ಯಾಡ್ರಿ. ಕೆಳಗೆ ಕುಳ್ತ್ಕೊಂಡು ಊಟಮಾಡ್ತೀವಿ. ನೀವೇನೂ ಮುಜುಗರ ಮಾಡ್ಕೋಬ್ಯಾಡ್ರಿ. ಪಂಕ್ತಿ ಚಾಪಿ ಇದ್ರೆ ಹಾಕಿಬಿಡ್ರಿ. ಅದ್ರ ಮ್ಯಾಲೆ ಕುಂತ್ಕೊಂಡು ಉಣ್ತೀವಿ. ನೀವು ಬಡವರಾದ್ರೂ ನಿಮ್ ಮನ್ಸು ದೊಡ್ದೈತೆಲ್ಲ, ಅದೇ ಮುಖ್ಯ ಜೀವನದಾಗ." ಬಸವಪ್ರಭು ಭೂಮಿಕಾಗೆ ಹೇಳಿದರು. ಭೂಮಿಕಾ ತಡಬಡಾಯಿಸಿ ಪಂಕ್ತಿ ಚಾಪಿ ತಂದು ಹಾಸಿದ್ಳು. ಪಾದರಸದಂತೆ ಚುರುಕಾಗಿ ಓಡಾಡುತ್ತಿದ್ದ ಭೂಮಿಕಾಳನ್ನೇ ಕಣ್ಮನಗಳಲ್ಲಿ ತುಂಬಿಕೊಳ್ಳತೊಡಗಿದ್ದರು ಬಸವಪ್ರಭು. ಆಗಲೇ ತೋಟದಲ್ಲಿದ್ದಾಗ ಅವಳು ಜೀನ್ಸ್ ಪ್ಯಾಂಟ್, ಫುಲ್ ಬುಶರ್ಟಿನಲ್ಲಿ ಮಿಂಚುತ್ತಿದ್ದಳು. ಇಪ್ಪತ್ನಾಲ್ಕರ ಬಿಸಿ ರಕ್ತದ ಉತ್ಸಾಹಿ ತರುಣಿ. ಅವಳ ಮೈಮನಗಳಲ್ಲಿ ಯೌವನ ತುಂಬಿ ತುಳುಕಾಡುತ್ತಿದ್ದುದನ್ನು ತದೇಕ ಚಿತ್ತದಿಂದ ನೋಡಿ ಒಳಗೊಳಗೇ ಖುಷಿ ಅನುಭವಿಸಿದ್ದರು. ಸಡಿಲಾದ ಶರ್ಟಿನಲ್ಲೂ ಕೃಶೋದರಿ, ಚೆಲುವೆ ಭೂಮಿಕಾಳ ದೇಹದ ಓರೆಕೋರೆಗಳು ಸ್ಫುಟವಾಗಿ ಕಾಣುತ್ತಿದ್ದುದನ್ನು ಬಸವಪ್ರಭು ಓರೆನೋಟದಲ್ಲಿ ನೋಡುತ್ತಾ ಕಣ್ಮನಗಳಲ್ಲಿ ತುಂಬಿಕೊಂಡಿದ್ದಂತೂ ಸತ್ಯ. ಏಕೆಂದರೆ ಅವರೂ ಈಗಷ್ಟೇ ಇಪ್ಪತ್ತೆಂಟರ ಬಿಸಿರಕ್ತದ ತರುಣ ಶಾಸಕ. ಕರ್ನಾಟಕ ರಾಜ್ಯದ ಅತ್ಯಂತ ಕಿರಿ ವಯಸ್ಸಿನ ಶಾಸಕರು ಅವರು. ಈಗ ನೋಡಿದರೆ ಮನೆಗೆ ಬರುತ್ತಲೇ ಭೂಮಿಕಾ ಬಟ್ಟೆ ಬದಲಿಸಿಕೊಂಡು ತೆಳು ಗುಲಾಬಿ ಬಣ್ಣದ ಸೀರೆಯಲ್ಲಿ ಇನ್ನೂ ಹೆಚ್ಚು ಆಕರ್ಷಕವಾಗಿ ಮಿಂಚತೊಡಗಿದ್ದಳು. ಚೆಲುವೆ ಚೆಲುವೇನೇ ಅಲ್ಲವೇ? ಯಾವ ಉಡುಗೆ ಉಟ್ಟರೂ ಆ ಉಡುಗೆಗೇ ಮೆರುಗು ಎಂಬಂತೆ.
ಭೂಮಿಕಾ ಊಟಕ್ಕೆ ಬಡಿಸಲು ನಿಂತಳು. ರೊಟ್ಟಿಯ ಜೊತೆಗೆ ಚೆನ್ನಮ್ಮ ಮೊಳಕೆಯೊಡೆದ ಮಡಿಕೆ ಕಾಳಿನ ಪಲ್ಯ, ತುಂಬುಗಾಯಿ ಹೀರೇಕಾಯಿ ಪಲ್ಯ, ಶೇಂಗಾ ಚಟ್ಣಿ, ಹಸಿಮೆಣಸಿನಕಾಯಿ ಚಟ್ನಿ ಮಾಡಿದ್ದಳು. ಅವರ ಜೊತೆಗೆ ಕಾರಿನ ಡ್ರೈವರ್ ರಿಜ್ವಾನನಿಗೂ ಊಟಕ್ಕೆ ಬಡಿಸಿದಳು ಭೂಮಿಕಾ. ಬಸವಪ್ರಭು ಬಾಯಿ ಚಪ್ಪರಿಸುತ್ತಾ ಊಟ ಮಾಡಿದರು. ಊಟದ ನಡುನಡುವೆ, `ಊಟ ತುಂಬಾ ರುಚಿಯಾಗಿದೆ' ಎಂದು ಮೂರ್ನಾಲ್ಕು ಸಾರೆ ಹೇಳಿದರು. ಮಡಿಕೆ ಕಾಳಿನ ಪಲ್ಯ, ಹಸಿಮೆಣಸಿನಕಾಯಿ ಚಟ್ನಿಯನ್ನು ಕೇಳಿಕೇಳಿ ಬಡಿಸಿಕೊಂಡು ಊಟಮಾಡಿದರು. ಚೆನ್ನಮ್ಮನನ್ನು ಹಾಡಿ ಹೊಗಳಿದ್ದೇ ಹೊಗಳಿದ್ದು.
ಊಟ ಮುಗಿಯುವಷ್ಟರಲ್ಲಿ ಐದು ಗಂಟೆಯಾಗಿತ್ತು. ಅಷ್ಟರಲ್ಲಿ ಬಸವರಾಜಪ್ಪನ ಜೊತೆಗೆ ತೋಟದಲ್ಲಿ ಕೆಲಸ ಮಾಡುವ ಹುಡುಗ ವೀರೇಶ್ ಬಂದ. `ಅಕ್ಕಾ, ಪಪ್ಪಾಯಿ ಲೋಡಿಂಗ್ ಮುಗಿಯಿತು. ಲಾರಿಯ ಜೊತೆಗೆ ಹೋಗಿ ವೇಬ್ರಿಜ್‍ನಲ್ಲಿ ತೂಕ ಮಾಡಿಸಬೇಕು. ನೀವು ಬೆಳಿಗ್ಗೆಯಿಂದ ತುಂಬಾ ದಣಿದಿದ್ದೀರಿ. ನೀವು ಹೂಂ ಅಂದರೆ ನಾನು ಲಾರಿಯ ಜೊತೆಗೆ ಹೋಗುತ್ತೇನೆ...' ಎಂದು ರಾಗವೆಳೆದ. `ನೀನು ಹೋಗುತ್ತೀನಿ ಎನ್ನುವುದೇನೋ ಸರಿ ವೀರೇಶ್. ಆದರೆ ತೂಕದ ನಂತರ ಆನ್‍ಲೈನ್ ಮುಖಾಂತರ ಪೇಮೆಂಟ್ ಮಾಡಿಸಿಕೊಳ್ಳಬೇಕಲ್ಲ? ನಾನೇ ಸ್ಕೂಟಿ ತೆಗೆದುಕೊಂಡು ಹೋಗುವೆ' ಎಂದಳು ಭೂಮಿಕಾ. ಹೊನ್ನಳ್ಳಿಯಿಂದ ಹತ್ತು ಕಿಮೀ ದೂರದ ಚಂದ್ರಾಪುರದಲ್ಲಿ ವೇಬ್ರಿಜ್ ಇತ್ತು. `ಭೂಮಿಕಾ, ನೀವು ಒಂದ್ ಕೆಲ್ಸ ಮಾಡಿ. ನಮ್ಜೊತಿಗೆ ಕಾರಲ್ಲೇ ಬಂದ್ಬಿಡಿ. ನಿಮ್ಮನ್ನು ವೇಬ್ರಿಜ್‍ನಲ್ಲಿ ಇಳಿಸುತ್ತೇವೆ' ಎಂದರು ಬಸವಪ್ರಭು. `ನನಗೆ ವಾಪಾಸು ಬರ್ಲಿಕ್ಕೆ ಬಸ್ಸು ಸಿಗ್ಬೇಕಲ್ಲ ಸರ್...? ಅದ್ಕೇ ನಾ ಸ್ಕೂಟಿ ತೊಗೊಂಡು ಹೋಗ್ತೀನಿ ಅಂತ ಹೇಳ್ದೆ.' `ಡೋಂಟ್ ವರಿ. ಅಲ್ಲಿಂದ ನಮ್ಮ ಮನೆ ಆರೇಳು ಕಿಮೀ ಅಷ್ಟೇ. ನೀವು ತೂಕ ಮಾಡ್ಸಿ ಪೇಮೆಂಟ್ ಮಾಡ್ಸ್ಕೊಳ್ಳೋವಷ್ಟ್ರಾಗ ನಾ ನಿಮ್ಗೆ ವಾಪಾಸು ಕಾರು ಕಳುಹಿಸ್ತೀನಿ. ಡ್ರೈವರ್ ನಿಮ್ಮನ್ನು ಇಲ್ಲಿಗೆ ಡ್ರಾಪ್ ಮಾಡಿ ವಾಪಾಸು ಬರ್ತಾನೆ.' `ಸರ್, ನಿಮಗ್ಯಾಕೆ ತೊಂದ್ರೆ...?' `ನೀವು ನಮಗಾಗಿ ಈಗ ತೊಂದ್ರೆ ತೊಗೋಳ್ಲಿಲ್ವಾ...? ಇದ್ಯಾವ ತೊಂದ್ರೆ ನಮ್ಗೆ...? ನೀವು ಬೇಗ ರೆಡಿಯಾಗ್ರಿ ಅಷ್ಟೇ.' `ಭೂಮಿ, ನೀ ಊಟ ಮಾಡ್ದ್ಯಾ...?' ಬಸವರಾಜಪ್ಪ ಮಗಳನ್ನು ಪ್ರಶ್ನಿಸಿದಾಗ, `ಅರೇ ಭೂಮಿಕಾ, ನೀವು ಇದುವರೆಗೂ ಊಟ ಮಾಡಿಲ್ವಾ...?' ಎಂಎಲ್‍ಎ ಸಾಹೇಬರು ಉದ್ಘಾರ ತೆಗೆದರು. `ಸಾಹೇಬ್ರೇ, ನೀವು ಈಗ ಬರ್ಬೋದು, ಆಗ ಬರ್ಬೋದು, ನೀವು ಬಂದಾಗ ಊಟ ಮಾಡ್ತಿದ್ರೆ ಚೊಲೋ ಕಾಣಂಗಿಲ್ಲ ಅಂತ ಅವ್ಳು ಊಟಾನೇ ಮಾಡಿಲ್ಲ.' ಬಸವರಾಜಪ್ಪ ಮಗಳು ಊಟ ಮಾಡದೇ ಇರೋದಿಕ್ಕೆ ಕಾರಣ ಕೊಟ್ಟ. `ಹೌದಾ...? ನಮ್ ಸಲುವಾಗಿ ಊಟ ಮಾಡಿಲ್ವಾ...? ಅರೇ, ಭಾಪ್ರೇ...? ತುಂಬಾ ಲೇಟಾಗಿ ಹೋಯ್ತು. ಭೂಮಿಕಾ, ಈಗೇನಾತು, ಬೇಗ ಊಟ ಮಾಡಿಬಿಡಿ. ನಿಮ್ಮ ಊಟದ ನಂತರವೇ ಹೊರಡೋಣ.' ಎಂಎಲ್‍ಎಯವರ ಆಣತಿಯಂತೆ ಭೂಮಿಕಾ ಗಬಗಬನೇ ಒಂದಿಷ್ಟು ಉಣ್ಣುವ ಶಾಸ್ತ್ರಮಾಡಿ ಅವರ ಕಾರನ್ನೇರಿದಳು. ಹೊರಡುವುದಕ್ಕೆ ಮುಂಚೆ ಎಂಎಲ್‍ಎ, ಎಡಿಎ, ಎಡಿಎಎಚ್, ಡ್ರೈವರ್ ಸಲುವಾಗಿ ತರಿಸಿದ್ದ ಹಣ್ಣು, ತರಕಾರಿಯ ಬಾಕ್ಸ್‍ಗಳನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಸುವುದನ್ನು ಮರೆಯಲಿಲ್ಲ.
ಭೂಮಿಕಾ ಊಟ ಮಾಡುವ ಸಮಯದಲ್ಲಿ ಶಾಸಕರು ಪವಾಡೆಪ್ಪನನ್ನು ಕರೆಸಿ ಒಂದಿಷ್ಟು ವಿಚಾರಣೆಮಾಡಿ ಛೀಮಾರಿ ಹಾಕಿದರು. `ಇನ್ನೊಂದು ಸಾರೆ ಹೀಗೇನಾದರೂ ಸುಳ್ಳು ದೂರನ್ನು ನೀಡಿದ್ದೇ ಆದರೆ ನಿಮ್ಮನ್ನು ಬೆಂಡೆತ್ತಲು ಪೋಲೀಸ್ ಅಧಿಕಾರಿಗಳಿಗೆ ಹೇಳಬೇಕಾಗುತ್ತದೆ...' ಎಂದು ಎಚ್ಚರಿಕೆ ನೀಡುತ್ತಾ ಬುದ್ಧಿವಾದ ಹೇಳಿ ಕಳುಹಿಸಿದರು.
ಭೂಮಿಕಾಳನ್ನು ವೇಬ್ರಿಜ್ ಹತ್ತಿರ ಇಳಿಸಿ ಕಾರು ಮುಂದಕ್ಕೆ ಹೊರಟ ನಂತರ ಮಧುಕರ್ ಕುಲಕರ್ಣಿಯವರು ಪವಾಡೆಪ್ಪನ ದೂರಿನ ಹಕೀಕತ್ ತಿಳಿಸಿದರು ಎಂಎಲ್‍ಎಯವರಿಗೆ. `ಸರ್, ಈ ಪವಾಡೆಪ್ಪ ಬಸವರಾಜಪ್ಪನವರಿಗೆ ಸಂಬಂಧಿಕನೇ. ಬಸವರಾಜಪ್ಪನವರಿಗೆ ಭೂಮಿಕಾ ಒಬ್ಬಳೇ ಇರುವುದರಿಂದ ಅವಳನ್ನು ತನ್ನ ಮಗನಿಗೆ ತೆಗೆದುಕೊಳ್ಳಬೇಕೆಂಬ ಹೆಬ್ಬಯಕೆ ಪವಾಡೆಪ್ಪನಿಗೆ. ಅವರ ಆಸ್ತಿಯೂ ತಮ್ಮದೇ ಆಗುತ್ತದೆ ಎಂಬ ಹುನ್ನಾರವೂ ಇತ್ತು. ಆದರೆ ಅವರ ಮಗ ಬರೀ ಎಸ್ಸೆಸ್ಸೆಲ್ಸಿ ಓದಿಕೊಂಡು ಉಂಡಾಡಿ ಗುಂಡನಂತೆ ತಿರುಗಾಡುವವ. ಅಂಥಹವನನ್ನು ಭೂಮಿಕಾ ಒಪ್ಪಿಕೊಳ್ಳಲು ಸಾಧ್ಯವೇ...? ಆ ಸೇಡಿಗಾಗಿ ಪವಾಡೆಪ್ಪ ಅವರಿಗೆ ತೊಂದರೆ ಕೊಡಬೇಕೆಂದು ಈ ರೀತಿ ನಾಟಕ ಮಾಡುತ್ತಿದ್ದಾನೆ' ಎಂದು ಹೇಳಿದರು ಮಧುಕರ್. `ಹೌದಾ...? ಹಾಗಾದರೆ ಸಂದಂರ್ಭ ನೋಡಿಕೊಂಡು ಅವನಿಗೆ ಒಂಚೂರು ಬಿಸಿ ಮುಟ್ಟಿಸಿದರೆ ಒಳ್ಳೆಯದೇನೋ...?' ಎಂದರು ಎಂಎಲ್‍ಎಯವರು.
ಆ ರಾತ್ರಿ ಭೂಮಿಕಾ ಬಸವಪ್ರಭು ಅವರನ್ನು ಕಾಡಿಸಿದರೆ, ಬಸವಪ್ರಭು ಭೂಮಿಕಾಳನ್ನೂ ಕಾಡಿಸಿದರು. `ಅರೇ, ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಈ ಹುಡುಗಿ ಅದೆಷ್ಟು ಸರಳ, ವಿನಯವಂತೆ...? ವಯಸ್ಸಿಗೆ ಮೀರಿದ ಜವಾಬ್ದಾರಿಯಿಂದ ಕೆಲಸವನ್ನು ನಿಭಾಯಿಸುತ್ತಿದ್ದಾಳಲ್ಲ...? ನಿಜ್ವಾಗ್ಲೂ ಗ್ರೇಟ್. ನಾನು ನೋಡಿದ ಚೆಂದದ ಹುಡುಗಿಯರಲ್ಲಿ ಇವಳು ಚೆಂದಕ್ಕಿಂತ ಚೆಂದ. ತೋಟದಲ್ಲಿ ಪ್ಯಾಂಟ್, ಶರ್ಟಿನಲ್ಲಿ ಅರಳಿದ್ದ ಅವಳ ಚೆಲುವು ನನ್ನ ಕಣ್ಣ ಗೊಂಬೆಗಳಲ್ಲಿ ಹಾಗೇ ಪಟ್ಟಾಗಿ ಕುಳಿತುಬಿಟ್ಟಿದೆ. ಮತ್ತೆ ಸೀರೆಯಲ್ಲಿನ ರೂಪರಾಶಿ ವರ್ಣಿಸಲಸದಳ. ಅವಳ ಮಂದಸ್ಮಿತ, ಚಿಗರೆಯಂಥ ಕಣ್ಣುಗಳು ನನ್ನ ಮನದಲ್ಲಿ ಪಟ್ಟಾಗಿ ಕುಳಿತುಬಿಟ್ಟಿವೆ.' ಹೀಗೆ ಏನೇನೋ ಅನಿಸಿಕೆಗಳು ಬಸವಪ್ರಭುವಿನ ಮನದಲ್ಲಿ.
`ಎಂಎಲ್‍ಎ ಎಂದರೆ ಮಧ್ಯ ವಯಸ್ಸಿನವರಿರಬೇಕು ಎಂದು ನಾನಂದುಕೊಂಡಿದ್ದೆ. ನಮ್ಮ ಕ್ಷೇತ್ರದ ಶಾಸಕ ಇನ್ನೂ ಹುಡುಗ ಎಂದು ಜನರಾಡುವ ಮಾತು ಕೇಳಿದ್ದೆ. ಆದರೆ ಅವರು ಇಷ್ಟು ಚಿಕ್ಕ ವಯಸ್ಸಿನವರಿರಬಹುದೆಂದು ನಾನು ಊಹಿಸಿಯೇ ಇರಲಿಲ್ಲ. ವಯಸ್ಸಿಗೆ ಮೀರಿದ ಆತ್ಮೀಯತೆ, ಸರಳತೆ, ವಿನಯವಂತಿಕೆ ಇವರಲ್ಲಿ. ಸಾಮಾನ್ಯ ಜನರಲ್ಲಿ ಸಾಮಾನ್ಯ ಜನರಂತೆ ವರ್ತಿಸಿದರಲ್ಲವೇ? ತುಂಬಾ ಇಷ್ಟವಾದವು ಅವರ ನಡೆ-ನುಡಿಗಳು. ವ್ಹೈಟ್ ಅಂಡ್ ವ್ಹೈಟ್ ಡ್ರೆಸ್ಸಿನಲ್ಲಿ ತುಂಬಾ ಸ್ಮಾರ್ಟಾಗಿ ಕಾಣುತ್ತಿದ್ದರಲ್ಲವೇ? ಇನ್ನೂ ಕಾಲೇಜ್ ಸ್ಟೂಡೆಂಟ್ ತರಹ ಲುಕ್ ಇತ್ತಲ್ಲವಾ ಅವರ ಪ್ರತಿ ಹೆಜ್ಜೆಯಲ್ಲಿ? ಅದೇನು ಓದಿಕೊಂಡಿದ್ದಾರೋ ಏನೋ? ಬಹುತೇಕ ರಾಜಕಾರಿಣಿಗಳಂತೆ `ಲಾ' ಓದಿಕೊಂಡಿರಬಹುದೇನೋ? ಇರಲಿ ಬಿಡು, ಅದನ್ನು ತೆಗೆದುಕೊಂಡು ನನಗೇನಾಗಬೇಕಿದೆ...? ಏನೋ ಒಂದಿಷ್ಟು ಕುತೂಹಲ ಅಷ್ಟೇ. ಜನಾನುರಾಗಿ, ಪ್ರಜೆಗಳ ಆಶೋತ್ತರಗಳಿಗೆ ಸ್ಪಂದಿಸುವ ಶಾಸಕರು ಎಂದು ಬೇರೆ ಜನರು ಹೇಳುತ್ತಿದ್ದಾರೆ. ಇರಬಹುದೇನೋ? ಆಕರ್ಷಕ ವ್ಯಕ್ತಿತ್ವದ ವ್ಯಕ್ತಿ ಎಂದು ಹೇಳಿದರೆ ಅತಿಶಯೋಕ್ತಿಯೇನಲ್ಲ ಅಲ್ಲವೇ? ರಿಯಲೀ ಸ್ಮಾರ್ಟ ಗೈ. ಯಾವ ಶಾಸಕ ತನ್ನ ವೆಹಿಕಲ್‍ನಲ್ಲಿ ಅಧಿಕಾರಿಗಳನ್ನು, ನನ್ನಂಥಹ ಸಾಮಾನ್ಯ ರೈತನ ಮಗಳನ್ನು ಕರೆದುಕೊಂಡು ಹೋದಾರು? ಅವರ ಆತ್ಮೀಯತೆ, ಮಾನವೀಯ ಕಳಕಳಿ, ತಕ್ಷಣದ ಸ್ಪಂದನೆಗೆ ಬಿಗ್ ಸಲಾಂ. `ಬಸವಪ್ರಭು' ಅದೆಷ್ಟು ಚೆಂದದ ಹೆಸರು...? ನನ್ನ ಆರಾಧ್ಯ ದೈವ ಬಸವೇಶ್ವರರ ಹೆಸರು. ಹೆಸರಿಗೇ ನಾನು ಪ್ರಭಾವಿತಳಾಗಿದ್ದೇನೆ. ಶಾಸಕರು ಎಂದ ಮೇಲೆ ದೊಡ್ಡ ಮನೆತನದ ಹುಡಗನೇ ಇರಬೇಕು. ಇರದೇ ಏನು? ಅಂತೂ ಒಳ್ಳೇ ವ್ಯಕ್ತಿಗೆ ಒಳ್ಳೇ ಹೆಸರಿದೆ. ವಿಶ್ವ ಮಾನವ ಜಗಜ್ಯೋತಿ ಬಸವೇಶ್ವರರಂತೆ ಅವರ ಹೆಸರೂ ಬೆಳಗಲಿ ಎಂದು ನಾನೂ ಶುಭ ಹಾರೈಸುವೆ.' ಹೀಗೇ ಏನೇನೋ ಅನಿಸಿಕೆಗಳು ಭೂಮಿಕಾಳ ಮನಸ್ಸನ್ನು ಮುತ್ತಿಕ್ಕಿ ಕಾಡಿಸಿದವು ನಿದ್ದೆಗೆ ಜಾರುವುದಕ್ಕಿಂತ ಮುಂಚೆ. ಒಂಥರ ಆತ್ಮೀಯ ಭಾವನೆಗಳು ಅವಳೆದೆಯನ್ನು ತುಸು ಹೊತ್ತು ಅಲುಗಾಡಿಸಿದ್ದೂ ಸತ್ಯ.
****
ಭೂಮಿಕಾ ಪಪ್ಪಾಯಿಯ ಕೊಯಿಲಿನಲ್ಲಿ ತುಂಬಾ ಬಿಜಿಯಾಗಿಬಿಟ್ಟಳು. ಕೆಲಸಗಳ ಒತ್ತಡದಲ್ಲಿ ಬೇರೆ ಯಾವ ಯೋಚನೆಗಳೂ ಅವಳ ಮನದಲ್ಲಿ ಸುಳಿಯಲು ಅವಕಾಶವಿರಲಿಲ್ಲ. ಹಗಲಿಡೀ ದಣಿದ ದೇಹ ರಾತ್ರಿ ಹಾಸಿಗೆಗೆ ಮೈಯೊಡ್ಡುತ್ತಿದ್ದಂತೆ ನಿದ್ರಾದೇವಿ ಜೋಗುಳ ಹಾಡಿ ಮಲಗಿಸಿ ಬಿಡುತ್ತಿದ್ದಳು. ಶಾಸಕರು ಬಂದು ಹೋಗಿ ಎರಡು ವಾರಗಳಾಗಿದ್ದವೇನೋ? ಅದೊಂದು ರವಿವಾರದ ದಿನ. ಭೂಮಿಕಾ ತಂದೆ-ತಾಯಿಯ ಜೊತೆಗೆ ತೋಟದಲ್ಲೇ ಇದ್ದಳು. ಆಗಲೇ ಸಮಯ ಮಧ್ಯಾಹ್ನ ಒಂದೂವರೆ. ಬುತ್ತಿ ಕಟ್ಟಿಕೊಂಡೇ ಹೋಗಿದ್ದರು. ತೋಟದಲ್ಲಿದ್ದ ಹಳೆಯ ದೊಡ್ಡ ಮಾವಿನಮರದ ಕೆಳಗೆ ಮೂವರೂ ಊಟಕ್ಕೆ ಕುಳಿತುಕೊಳ್ಳಬೇಕೆಂಬ ಹವಣಿಕೆಯಲ್ಲಿದ್ದರು. ಅಷ್ಟರಲ್ಲಿ ಕಾರೊಂದು ತೋಟದಲ್ಲಿ ಎಂಟ್ರಿ ಹೊಡೆದ ಶಬ್ದ ಕೇಳಿಸಿದ್ದರಿಂದ ಭೂಮಿಕಾ ರಸ್ತೆಯ ಕಡೆಗೆ ಗಮನ ಹರಿಸಿದಳು. ಇವರ ಸಮೀಪಕ್ಕೆ ಬರಲು ರಸ್ತೆ ಅಷ್ಟಾಗಿ ಸರಿ ಇಲ್ಲದ ಕಾರಣ ಕಾರು ಇವರಿಗೆ ತುಸು ದೂರದಲ್ಲಿ ನಿಂತಿತು. `ನಮ್ಮ ತೋಟಕ್ಕೆ ಕಾರಿನಲ್ಲಿ ಬರುವವರಾದರೂ ಯಾರು...?' ಎಂಬ ಕುತೂಹಲ ಎಲ್ಲರೆದೆಯೊಳಗೆ. ಮೊದಲು ಮೈತುಂಬಾ ಸೆರಗನ್ನು ಹೊದ್ದುಕೊಂಡಿದ್ದ ಮಧ್ಯ ವಯಸ್ಕ ಹೆಣ್ಣು ಮಗಳೊಬ್ಬಳು ಮೆಲ್ಲಗೇ ಕಾರಿನಿಂದ ಇಳಿದಳು. ಜೊತೆಗೆ ವಾಹನ ಚಾಲಕನ ಸ್ಥಾನದಲ್ಲಿದ್ದ ಜೀನ್ಸ್ ಪ್ಯಾಂಟ್, ಟೀಶರ್ಟಧಾರಿ ಯುವಕನೊಬ್ಬ ಕೆಳಗಿಳಿದ. ಅವರು ನಾಲ್ಕು ಹೆಜ್ಜೆ ಮುಂದೆ ಬರುತ್ತಿದ್ದಂತೆ, `ಅರೇ, ಇವರು ನಮ್ಮ ಶಾಸಕರು, ಬಸವಪ್ರಭು' ಎಂದು ಮನದೊಳಗೇ ಉದ್ಘರಿಸಿಕೊಂಡ ಭೂಮಿಕಾ ತಡಬಡಾಯಿಸಿ, `ಸರ್, ನೀವಾ...? ಬನ್ನಿ ಬನ್ನಿ' ಎಂದೆನ್ನುತ್ತಾ ಕೈಜೋಡಿಸಿ ನಮಸ್ಕರಿಸುತ್ತಾ ಸ್ವಾಗತ ಕೋರಿದಳು. ಇವತ್ತು ಅವರು ತಮ್ಮ ಮಾಮೂಲಿ ಎಂಎಲ್‍ಎ ಕಾರು ತಂದಿರಲಿಲ್ಲ. ಅಷ್ಟರಲ್ಲಿ ಅವಳ ತಂದೆ-ತಾಯಿಯವರೂ ಸಮೀಪ ಬಂದು ನಮಸ್ಕರಿಸಿದರು. ಮೂವರ ದೃಷ್ಟಿ ಶಾಸಕರ ಜೊತೆಗಿದ್ದ ಹೆಣ್ಣುಮಗಳತ್ತ ನೆಟ್ಟಿತ್ತು. `ಸಾಧಾರಣ ಮೈಕಟ್ಟು, ಕೆಂಪನೆಯ ಮೈಬಣ್ಣ, ಹಣೆಯ ಮೇಲೆ ಢಾಳಾಗಿ ರಾರಾಜಿಸುತ್ತಿದ್ದ ವಿಭೂತಿ, ಕುಂಕುಮದ ಬೊಟ್ಟು, ತಿಳಿ ನೀಲಿ ಬಣ್ಣದ ಡಿಸೈಜಿನ ಸೀರೆ ಉಟ್ಟಿದ್ದ ಅವರು ನೋಡುಗರಲ್ಲಿ ಗೌರವದ ಭಾವನೆಗಳನ್ನು ಮೂಡಿಸುವಂತಿದ್ದರು. ಎಲ್ಲರಿಗೂ ಪ್ರತಿ ನಮಸ್ಕಾರ ಸಲ್ಲಿಸುತ್ತಾ ಬಸವಪ್ರಭು, `ಇವರು ನಮ್ಮ ಮಾತೋಶ್ರೀ ಸರ್ವಮಂಗಳಾದೇವಿಯವರು' ಎಂದು ಪರಿಚಯಿಸಿದರು. ಮತ್ತೊಮ್ಮೊ ಎಲ್ಲರ ನಮಸ್ಕಾರಗಳ ವಿನಿಮಯವಾಯಿತು. ಭೂಮಿಕಾ ಸರ್ವಮಂಗಳಾದೇವಿಯವರ ಪಾದಸ್ಪರ್ಸಿಸಿ ನಮಸ್ಕರಿಸಿದಾಗ ಅವಳನ್ನೇ ಕಣ್ಮನಗಳಲ್ಲಿ ತುಂಬಿಕೊಂಡು ಸಂಭ್ರಮಿಸಿದರು ತಾಯಿ-ಮಗ ಇಬ್ಬರೂ. ಗಾಢ ಹಳದಿ ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣುತ್ತಿದ್ದ ಭೂಮಿಕಾ ತುಂಬಾ ಮನಮೋಹಕವಾಗಿ ಕಂಡಳು. `ಅಂದ ಹಾಗೆ ನಮ್ಮ ತಾಯಿಯವರಿಗೆ ನಿಮ್ಮ ತೋಟದ ಬಗ್ಗೆ ಹೇಳಿದ್ದೆ. ಹಾಗಾದರೆ ಇವತ್ತು ಆ ತೋಟಕ್ಕೇ ಪಿಕಿನಿಕ್‍ಗೆ ಹೋಗೋಣ. ತೋಟದಲ್ಲೇ ಮಧ್ಯಾಹ್ನದ ಊಟ ಮಾಡಿಕೊಂಡು ಬರೋಣ. ಹೇಗೂ ನಿಮ್ಮ ಅಪ್ಪಾಜಿ ಊರಲ್ಲಿ ಇಲ್ಲ. ನಾವಿಬ್ಬರೇ ಹೋಗಿ ಬರೋಣ. ಕಾರನ್ನು ನೀನೇ ಚಾಲನೆ ಮಾಡು ಎಂದು ನನ್ನನ್ನು ಕರೆದುಕೊಂಡು ಬಂದಿದ್ದಾರೆ.' ಬಸವಪ್ರಭು ಮಾತಿಗೆ ಪೀಠಿಕೆ ಹಾಕಿದರು.
"ನೀವು ಬಂದಿದ್ದಕ್ಕೆ ನಮಗೆ ಬಾಳ ಸಂತೋಷ ಆಗ್ಲಿಕತ್ತೇದ. ನಾವು ನಮಗಷ್ಟೇ ಬುತ್ತಿ ಕಟ್ಟಿಕೊಂಡು ಬಂದಿದ್ದೇವೆ. ನೀವು ಭೂಮಿಕಾಳ ಜೊತೆಗೆ ತೋಟ ಸುತ್ತಾಡಿಕೊಂಡು ಬನ್ನಿರಿ. ಅಷ್ಟರಲ್ಲಿ ನಾನು ಮನೆಗೆ ಹೋಗಿ ನಿಮಗಾಗಿ ಒಂದಿಷ್ಟು ಬಿಸಿಬಿಸಿ ಅಡುಗೆ ಮಾಡಿಕೊಂಡು ಬರುವೆ" ಎಂದು ಹೇಳುತ್ತಾ ಚೆನ್ನಮ್ಮ ಮನೆಗೆ ಹೊರಡಲು ಮುಂದಾದಳು.
"ನೀವು ಮನೆಗೆ ಹೋಗುವ ಅವಶ್ಯಕತೆ ಇಲ್ಲ. ನಾವೂ ಊಟ ಕಟ್ಟಿಕೊಂಡು ಬಂದಿದ್ದೇವೆ. ನಿಮ್ಮ ಮೂವರ ಲೆಕ್ಕ ಹಿಡಿದುಕೊಂಡೇ ನಾವು ಊಟ ತಂದಿದ್ದೇವೆ." ಸರ್ವಮಂಗಳಾದೇವಿಯವರು ಚೆನ್ನಮ್ಮ ಮನೆಗೆ ಹೋಗುವುದನ್ನು ತಡೆದರು. ಬಸವಪ್ರಭು ಕಾರಿನತ್ತ ದೌಡಾಯಿಸಿದಾಗ ಭೂಮಿಕಾನೂ ಅವರ ಜೊತೆಗೆ ಹೆಜ್ಜೆ ಹಾಕಿದಳು. ಅವರು ತೆಗೆದುಕೊಟ್ಟ ಕ್ಯಾರಿಯರ್ ಮತ್ತು ಜಮಖಾನವನ್ನು ಕೈಗೆತ್ತಿಕೊಂಡಳು.
ಎಲ್ಲರೂ ಜೊತೆಯಾಗಿ ಕುಳಿತು ಸಹಭೋಜನ ಮಾಡಿದರು. ಅಂದು ಅವರ ಮನೆಯಲ್ಲಿ ಊಟಮಾಡಿದ್ದನ್ನು ತಾಯಿಗೆ ಮತ್ತೆ ಮತ್ತೆ ಹೇಳಿ ಚೆನ್ನಮ್ಮನನ್ನು ಮೇಲಿಂದ ಮೇಲೆ ಹೊಗಳಿದರು ಬಸವಪ್ರಭು. ಊಟದ ನಂತರ ಒಂದಿಷ್ಟು ವಿಶ್ರಾಂತಿ ಪಡೆದ ಎಲ್ಲರೂ ತೋಟವನ್ನು ಒಂದು ಸುತ್ತು ಹೊಡೆದರು. ಭೂಮಿಕಾ ತಾಯಿ-ಮಗ ಇಬ್ಬರಿಗೂ ತನ್ನ ರನ್ನಿಂಗ್ ಕಾಮೆಂಟ್ರಿಯಿಂದ ಒಂದಿಷ್ಟು ಮಾಹಿತಿ ನೀಡಿದಳು. ಸರ್ವಮಂಗಳಾದೇವಿಯವರು ತುಂಬಾ ಖುಷಿಯ ಮೂಡಿನಲ್ಲಿದ್ದರು. ಅವರ ದೃಷ್ಟಿ, ಗಮನ ಭೂಮಿಕಾಳ ಪ್ರತಿ ನಡೆ-ನುಡಿಯನ್ನು ಅಳೆಯುತ್ತಿದ್ದವು. ಅಷ್ಟರಲ್ಲಿ ಸಂಜೆ ಐದು ಗಂಟೆಯ ಸಮಯವಾಗಿತ್ತು. ಬಸವಪ್ರಭು ಹೊರಡುವುದಕ್ಕೆ ಅವಸರ ಪಡಿಸಿದರು. ಒತ್ತಾಯಮಾಡಿ ಮನೆಗೆ ಕರೆದುಕೊಂಡು ಹೋದಳು ಚೆನ್ನಮ್ಮ. ಎಲ್ಲರಿಗೂ ಚಹ ಮಾಡಿಕೊಟ್ಟಳು. `ಬಡವರ ಮನೆಗೆ ಭಾಗ್ಯದೇವತೆ ಬಂದಂಗಾಯಿತು' ಎಂದೆನ್ನುತ್ತಾ ಹೊರಡುವಾಗ ಸರ್ವಮಂಗಳಾದೇವಿಯವರಿಗೆ ಅರಿಶಿಣ-ಕುಂಕುಮದ ಜೊತೆಗೆ ಮನೆಯಲ್ಲಿದ್ದ ಒಂದು ಒಳ್ಳೆಯ ಸೀರೆಯನ್ನು ಒತ್ತಾಯಪೂರ್ವಕವಾಗಿ ಕೊಟ್ಟಳು. `ಬಡತನ-ಸಿರಿತನ ಮುಖ್ಯ ಅಲ್ಲ. ಪ್ರೀತಿ-ವಿಶ್ವಾಸ ಮುಖ್ಯ' ಎಂದರು ಸರ್ವಮಂಗಳಾದೇವಿಯವರು. ಹೊರಡುವುದಕ್ಕಿಂತ ಮುಂಚೆ ಅವರ ಪಾದಗಳಿಗೆ ನಮಸ್ಕರಿಸುವುದನ್ನು ಭೂಮಿಕಾ ಮರೆಯಲಿಲ್ಲ. `ಆದಷ್ಟು ಜಲ್ದಿ ನಿನಗೆ ಒಳ್ಳೇ ಗಂಡ ಸಿಗಲಿ' ಎಂದು ತುಂಬು ಹೃದಯದಿಂದ ಆಶೀರ್ವದಿಸುತ್ತಾ ಒಂದು ಕ್ಷಣ ಅವಳನ್ನು ತಬ್ಬಿಕೊಂಡು ಸಂಭ್ರಮಿಸಿದರು. ಹೃದಯಸ್ಪರ್ಶಿ ಸನ್ನಿವೇಶದಲ್ಲಿ ಅಲ್ಲಿಂದ ಬೀಳ್ಕೊಂಡರು ತಾಯಿ-ಮಗ.
****
`ಎಂಎಲ್‍ಎ ಸಾಹೇಬರು ತಾಯಿಯ ಜೊತೆಗೆ ಮುದ್ದಾಂ ನಮ್ಮ ತೋಟ, ಮನೆಗೆ ಬಂದಿದ್ದೇಕೆ...? ಉದ್ದೇಶವೇನಿರಬಹುದು? ತಾಯಿ-ಮಗ ಇಬ್ಬರೇ ಬಂದಿರುವುದರೆಂದರೆ ಅದಕ್ಕೇ ಬಂದಿರಬಹುದೇ...?' ಹೀಗೆ ಹಲವಾರು ಪ್ರಶ್ನೆಗಳು ಬಸವರಾಜಪ್ಪನ ಮನದಲ್ಲಿ ಹೊಳೆದು ಹೋದವು. `ಬಂದಿದ್ದು ಬರೀ ಪಿಕನಿಕ್‍ಗಾಗಿಯೇ...? ಬಹುಶಃ ಇರಲಿಕ್ಕಿಲ್ಲ. ಬೇರೆ ಮತ್ತೇತಕ್ಕೆ ಬಂದಿದ್ದು...? ಹೀಗೂ ಇರಬಹುದಲ್ಲವೇ...?' ಚೆನ್ನಮ್ಮ ಮನದಲ್ಲಿ ಏನೋ ಕಲ್ಪಿಸಿಕೊಂಡು ಬೀಗಿದಳು.
ಆ ರಾತ್ರೀನೂ ಭೂಮಿಕಾ ಬಸವಪ್ರಭುವಿನ ಮನಸ್ಸನ್ನು ಕಾಡಿದಳು. `ಭೂಮಿಕಾ, ನಿನ್ನ ನೆನಪಾದರೆ ನನ್ನೊಳಗೆ ನಾನು ಕರಗುತಿರುವೆ, ಸಂಜೆಯ ದೀಪದಂತೆ ಮುಂಜಾವಿನವರೆಗೂ ಉರಿಯುತ ಹೋಗುತಿರುವೆ. ನಿನ್ನೊಲವ ವರ್ಷಧಾರೆ ನನ್ನೆದೆಯ ಇಳೆಯ ಒಲವಿನಾಳಕ್ಕೆ ಇಳಿದು ಬರೀ ನಿನ್ನ ನಲ್ಮೆಯ ಘಮಲೇ. ನನ್ನ ಹೃದಯದಿ ಪ್ರೀತಿಯ ಹಸಿರು ಪಸರಿಸಿದೆ. ನಿರಂತರ ಬಾಳ ಪಯಣದಲ್ಲಿ ನೀನು ನನ್ನ ಜೊತೆಯಾಗಬೇಕೆಂಬುದು ಮನದ ಹಪಹಪಿ.' ಹೀಗೆ ಏನೇನೋ ಭಾವನೆಗಳ ಭೋರ್ಗರೆತ ಅವರೆದೆಯಲ್ಲಿ.
ಬಸವಪ್ರಭು ಸಹ ಭೂಮಿಕಾಳ ಎದೆಯಲ್ಲಿ ತಲ್ಲಣಗಳನ್ನು ಸೃಷ್ಟಿಸಿದ್ದು ನಿಜ. `ಎಂಎಲ್‍ಎಯವರು ತಾಯಿಯೊಂದಿಗೆ ಬಂದಿದ್ದು ತೋಟ ನೋಡಲೋ ಅಥವಾ...? ಬರೀ ತೋಟ ನೋಡಲು, ಪಿಕನಿಕ್‍ಗಾಗಿ ಅಲ್ಲ ಎಂದು ಭಾವಿಸುತ್ತಿದೆ ನನ್ನೆದೆಯ ಬಡಿತ. ಅವರ ಸಭ್ಯತೆಯ, ಮೆಚ್ಚುಗೆಯ, ಆತ್ಮೀಯ ನೋಟ ನನ್ನ ಕಡೆಗೇ ಇತ್ತಲ್ಲವೇ? ಕಣ್ಣಂಚಿನ ಕಾವ್ಯ ಅರ್ಥವಾಗದಿರಲು ಸಾದ್ಯವೇ? ಜೀನ್ಸ್ ಪ್ಯಾಂಟ್, ಟೀಶರ್ಟಿನಲ್ಲಿ ತುಂಬಾ ಹ್ಯಾಂಡ್ಸಮ್ಮಾಗಿ ಕಾಣುತ್ತಿದ್ದ ಅವರು ಸಿನಿಮಾ ಹೀರೋನಂತೆ ಕಾಣುತ್ತಿದ್ದರಲ್ಲವೇ? ನನಗರಿವಿಲ್ಲದೇ ಮನದ ಮಾಮರದಲ್ಲಿ ಹೊಸದೊಂದು ಚಿಗುರು ಮೂಡತೊಡಗಿದೆಯಲ್ಲ? ಅವರ ನಗುವಿಗೆ ನನ್ನೆದೆಯ ತೋಟದಲ್ಲಿನ ಮೊಗ್ಗುಗಳು ಬಿರಿದು ಘಮಘಮಿಸುವ ಹೂಗಳಾಗಿ ಸುವಾಸನೆ ಬೀರತೊಡಗಿವೆ. ಹೀಗೇಕೆ ಕನಸುಗಳು ಎದೆಯೊಳಗೆ? ಮತ್ತೇಕೆ...? ಅದಕ್ಕೇ ಇರಬೇಕು ತಾನೇ...? ಯೌವನ ತುಂಬಿದ ಎದೆಯೊಳಗೆ ಇಂಥಹ ಕನಸುಗಳು ಅರಳದಿರಲು ಸಾಧ್ಯವೇ? ಏಯ್ ಹುಚ್ಚದಾ, ಹಗಲುಗನಸು ಕಾಣುತ್ತಿರುವಿಯಾ? ನೀನೆಲ್ಲೋ, ಅವರೆಲ್ಲೋ? ನೆಲುವಿಗೆ ಹಾರಲಾರದ ಬೆಕ್ಕಿದ್ದಂತೆ ನೀನು. ಬಡವಿ, ನೀ ಮಡಗಿದಲ್ಲಿರು ಎಂಬುದು ನಿನಗೆ ಗೊತ್ತಿದೆ ತಾನೇ? ಹೌದೌದು, ಇದೇ ಸರಿಯಾದ ಮಾತು.' ಹೀಗೆ ಹಲವಾರು ಯೋಚನೆಗಳು ಅವಳ ಮನವನ್ನು ಮುತ್ತಿಕ್ಕಿ ಕಾಡಿಸಿದ್ದೂ ನಿಜ.
****
ಭೂಮಿಕಾಳಿಗೆ ಭವಿಷ್ಯದ ಚಿಂತೆ ಹೊಕ್ಕಿತ್ತು ಮನದಲ್ಲಿ. ಡಾಕ್ಟರೇಟ್ ಮಾಡಿಕೊಳ್ಳಬೇಕೆಂಬ ತುಡಿತವಿತ್ತು ಎದೆಯಲ್ಲಿ. ಆಗಲೇ ಉದ್ಯೋಗಕ್ಕಾಗಿ ಒಂದೆರಡು ಕಡೆಗೆ ಅರ್ಜಿಗಳನ್ನು ಸಲ್ಲಿಸಿದ್ದಳು. ಒಬ್ಬಳೇ ಮಗಳಾದುದರಿಂದ ಆದಷ್ಟು ಬೇಗ ಅವಳಿಗೆ ಮದುವೆ ಮಾಡಬೇಕೆಂಬ ಹಂಬಲ ಹೆತ್ತವರಿಗೆ. ಅಲ್ಲಿ, ಇಲ್ಲಿ ತಮಗೆ ಗೊತ್ತಿದ್ದವರಿಗೆ ಯೊಗ್ಯ ಹುಡುಗನ ಬಗ್ಗೆ ತಿಳಿಸಲು ಅಹವಾಲು ಬೇರೆ ಸಲ್ಲಿಸಿದ್ದರು.
ಎಂಎಲ್‍ಎಯವರು ತಾಯಿಯ ಜೊತೆಗೆ ಬಸವರಾಜಪ್ಪನ ತೋಟಕ್ಕೆ ಬಂದು ಹೋಗಿ ತಿಂಗಳೇ ಸರಿದು ಹೋಗಿತ್ತು. ಈರುಳ್ಳಿ ಗಡ್ಡೆಗಳನ್ನು ಕೀಳಿಸಬೇಕಾಗಿತ್ತು. ಕೂಲಿಯಾಳುಗಳು ಬೆಳಿಗ್ಗೆ ಹತ್ತು ಗಂಟೆಗೆ ಬರುವವರಿದ್ದರು. ಬಸವರಾಜಪ್ಪ ಮತ್ತು ಭೂಮಿಕಾ ಒಂಭತ್ತೂವರೆಗೆಲ್ಲಾ ಬೆಳಗಿನ ನಾಷ್ಟಾಮಾಡಿ ತೋಟಕ್ಕೆ ಹೊರಡುವ ತರಾತುರಿಯಲ್ಲಿದ್ದರು. ಭೂಮಿಕಾಳ ಫೋನ್ ರಿಂಗಾಯಿತು. ಅನಾಮಧೇಯ ಕರೆ. ಕೃಷಿ ತಾಂತ್ರಿಕ ಸಲಹೆಗಾಗಿ ಭೂಮಿಕಾಳಿಗೆ ಆಗಾಗ ಅವರಿವರಿಂದ ಫೋನ್ ಬರುವುದು ಸಹಜ. ಕರೆಯನ್ನು ಸ್ವೀಕರಿಸಿ, `ಹಲೋ ನಮಸ್ತೆ ಹೇಳಿ...' ಎಂದಳು. `ಭೂಮಿಕಾನಾ...? ನಮಸ್ತೆ. ನಾನು ಸರ್ವಮಂಗಳಾದೇವಿ. ಎಂಎಲ್‍ಎರವರ ತಾಯಿ. ಹೇಗಿದ್ದೀಯಮ್ಮಾ...? ಅಪ್ಪ, ಅಮ್ಮ ಓಕೇನಾ...? ನಾವೆಲ್ಲರೂ ಚೆನ್ನಾಗಿರುವಿರುವೆವು. ನಿನ್ನಮ್ಮನ ಜೊತೆಗೆ ಒಂದಿಷ್ಟು ಮಾತಾಡಬೇಕಿತ್ತು...?' ಎಂಬ ರಾಗದ ಮಾತು ಬಂದಾಗ, `ಅಮ್ಮಾ, ನಿಮ್ಮ ಆಶೀವಾದದಿಂದ ನಾವೆಲ್ಲರೂ ಚೆನ್ನಾಗಿದ್ದೇವೆ. ಅಮ್ಮ ಇಲ್ಲೇ ಇದ್ದಾಳೆ. ಕೊಡುವೆ' ಎಂದೆನ್ನುತ್ತಾ ಫೋನ್ ತಾಯಿಗೆ ವರ್ಗಾಯಿಸಿದಳು ಭೂಮಿಕಾ ಮೊಬೈಲಿನ ಸ್ಪೀಕರ್ ಆನ್‍ಮಾಡುತ್ತಾ. `ಅರೇ, ಇವರಿಗೆ ಅಮ್ಮನ ಜೊತೆಗೆ ಅದೇನು ಮಾತಿರಬೇಕು...?' ಎಂಬ ವಿಚಾರ ಮಂಥನ ಭೂಮಿಕಾಳೆದೆಯೊಳಗೆ ಕುಣಿಯತೊಡಗಿತು.
ಚೆನ್ನಮ್ಮ ನಮಸ್ಕಾರ ಹೇಳುತ್ತಾ ಫೋನ್ ತೆಗೆದುಕೊಂಡಳು. ಉಭಯಕುಷಲೋಪರಿಯಾಯಿತು. `ಚೆನ್ನಮ್ಮಾ, ನಾನು ಸುತ್ತು ಬಳಸಿ ಹೇಳದೇ ನೇರವಾಗಿ ವಿಷಯಕ್ಕೆ ಬರುತ್ತೇನೆ. ಎಂಎಲ್‍ಎ ಸಾಹೇಬರಿಗೆ ಭೂಮಿಕಾ ಇಷ್ಟವಾಗಿದ್ದಾಳೆ. ನಮಗೂ ಸಹ. ಹಾಗಾಗಿ ನಾವು ನಿಮ್ಮ ಜೊತೆಗೆ ಸಂಬಂಧ ಬೆಳೆಸಬೇಕೆಂದಿದ್ದೇವೆ.' ಸರ್ವಮಂಗಳಾದೇವಿಯವರ ಮಾತು ಕೇಳಿಸಿಕೊಂಡು ಚೆನ್ನಮ್ಮ ದಂಗಾಗಿ ಹೋದಳು. ಗಂಡ, ಮಗಳ ಮುಖ ನೋಡತೊಡಗಿದಳು. ಅವಳ ಬಾಯಿಯಿಂದ ಮಾತುಗಳೇ ಹೊರಡದಾದವು. `ಅಮ್ಮಾ, ನೀವೆಲ್ಲೋ, ನಾವೆಲ್ಲೋ...? ನಮಗೂ, ನಿಮಗೂ ಅಜಗಜಾಂತರ ವ್ಯತ್ಯಾಸ ಆಸ್ತಿ, ಅಂತಸ್ತು ಎಲ್ಲದರಲ್ಲೂ.' ಹೇಗೋ ಸುಧಾರಿಸಿಕೊಂಡು ಮಾತಾಡಿದಳು ಚೆನ್ನಮ್ಮ. `ಪ್ರೀತಿ, ವಿಶ್ವಾಸಕ್ಕೆ ಆಸ್ತಿ, ಅಂತಸ್ತು ಮುಖ್ಯ ಅಲ್ಲ. ನೀವೆಲ್ಲರೂ ಮಾತಾಡಿಕೊಂಡು ಒಂದೆರಡು ದಿನಗಳಲ್ಲಿ ಅಭಿಪ್ರಾಯ ತಿಳಿಸಿರಿ. ಬಸವಪ್ರಭು ಭೂಮಿಕಾಳ ಜೊತೆಗೆ ನೇರವಾಗಿ ಮಾತಾಡಿ ಅವಳ ಅಭಿಪ್ರಾಯ ಕೇಳಬಹುದು.' ತುಸು ಹೊತ್ತಿನ ಮಾತುಕತೆಯ ನಂತರ ಅವರು ಫೋನ್ ಕಟ್‍ಮಾಡಿದ್ದರು. ಮೂವರೂ ಪರಸ್ಪರ ಮುಖ ನೋಡಿಕೊಂಡರು. ಮೂವರೆದೆಗಳಲ್ಲೂ ಹೊಸ ಒಸಗೆಯ ವರ್ಣನೆಗೆ ನಿಲುಕದ ಚಿತ್ರ-ವಿಚಿತ್ರ ಪುಳಕಗಳು. ಮೂವರೂ ಏನೇನೋ ಮಾತಾಡಿಕೊಂಡರು.
ಅಂದು ಸಂಜೆಯೇ ಭೂಮಿಕಾಳಿಗೆ ಬಸವಪ್ರಭು ಅವರಿಂದ ಕರೆ ಬಂದಿತು. ಆ ಕರೆಗಾಗಿ ಅವಳು ಹಂಬಲಿಸಿ ಕಾತರಿಸುತ್ತಿದ್ದುದೂ ನಿಜ. ಅವರ ಮಾತು, ಧ್ವನಿಯಲ್ಲಿ ಶಾಸಕನ ಗತ್ತು ಇರಲಿಲ್ಲ. ಪ್ರೀತಿಯ ತರಗತಿಯ ಹೊಸ ವಿದ್ಯಾರ್ಥಿಯಂಥ ವರ್ತನೆ ಅವರದಾಗಿತ್ತು. ಉಭಯ ಕುಷಲೋಪರಿಯ ನಂತರ ಬಸವಪ್ರಭು ಮುಖ್ಯ ವಿಷಯಕ್ಕೇ ಬಂದಿದ್ದರು. ಭೂಮಿಕಾಳ ಒಪ್ಪಿಗೆ ಪಡೆದು ಏಕವಚನದಲ್ಲೇ ಮಾತಿಗೆ ಶುರುವಿಟ್ಟುಕೊಂಡರು.
"ಭೂಮಿಕಾ, ನೋಡಿದ ಮೊದಲ ದಿನವೇ ನೀನು ನನ್ನೆದೆಯ ಹೂದೋಟದಲ್ಲಿ ನೆಟ್ಟ ಪ್ರೀತಿಯ ಬಳ್ಳಿಯಲ್ಲಿ ಹೂಗಳರಳಿ ಘಮಘಮಿಸುತ್ತಿವೆ. ದೇಹದ ನರನಾಡಿಗಳಲ್ಲಿ ಅಡರಿರುವ ಸುವಾಸನೆಯಲ್ಲಿ ನಿನ್ನದೇ ಘಮಲು. ಅಮ್ಮನ ಶಾರ್ಟ್ ಲಿಸ್ಟಿನಲ್ಲಿರುವ ಐದು ಜನ ಹುಡುಗಿಯರಲ್ಲಿ ನಿನ್ನದೇ ಮೊದಲನೆಯದು. ನೀನೇ ನಮ್ಮ ಮನೆಯ ಸೊಸೆ ಎಂದು ಅಪ್ಪ-ಅಮ್ಮ ತೀರ್ಮಾನಿಸಿದ್ದಾರೆ. ಮುಂದೆ ಘಟಿಸುವುದೆಲ್ಲವೂ ನಿನ್ನ, ನಿನ್ನಪ್ಪ-ಅಮ್ಮನ ತೀರ್ಮಾನದ ಮೇಲೆ ಅಷ್ಟೇ."
"ಸರ್, ಈ ಸಂಬಂಧ ಭೂಮಿ, ಆಕಾಶದಂತೆ. ಎಂದಾದರೂ ಭೂಮಿ, ಆಕಾಶ ಒಂದಾಗಲು ಸಾಧ್ಯವೇ...? ದಯವಿಟ್ಟು ನಿಮ್ಮ ಅಂತಸ್ತಿಗೆ ತಕ್ಕ ಹುಡುಗಿಯನ್ನು ಆಯ್ಕೆ ಮಾಡಿಕೊಂಡರೆ ಸರಿ ಎಂಬುದು ನನ್ನ ಅಭಿಪ್ರಾಯ."
"ಆಸ್ತಿ, ಅಂತಸ್ತು ನೋಡಿಕೊಂಡು ಪ್ರೀತಿ ಹುಟ್ಟುವುದಿಲ್ಲ. ಅದೂ, ಇದೂ ಎಂದು ಏನೂ ಹೇಳದೇ ನನ್ನ ಅರ್ಧಾಂಗಿಯಾದರೆ ನನ್ನ ಬಾಳು ಸಾರ್ಥಕ ಎಂದು ಭಾವಿಸಿರುವೆ. ನಿನ್ನ ಕೈಹಿಡಿಯಲು ನಾನು ಭಾಗ್ಯಶಾಲಿನೇ. ಭೂಮಿಕಾ, ನಾನು ನಿನಗೆ ಇಷ್ಟವಾಗಲಿಲ್ಲವೇ...?"
"ಅಯ್ಯೋ, ಹಾಗೇಕಂತೀರಿ ಸರ್...? ನೀವು ಯಾರಿಗೆ ಇಷ್ಟವಾಗುವುದಿಲ್ಲ...?"
"ಮತ್ತೇಕೆ ಈ ಥರದ ಹಿಂಜರಿಕೆ...? ನಿಜ ಹೇಳು, ನಿನ್ನೆದೆಯಲ್ಲಿ ನನ್ನ ಬಗ್ಗೆ ಪ್ರೀತಿಯ ಭಾವನೆಗಳು ಹುಟ್ಟಿಲ್ಲವೇ...? ಏಕಾಂತದಲ್ಲಿ ನನ್ನ ನೆನಪು ನಿನ್ನ ಕಾಡಿಸಿಲ್ಲವೇ...?"
"ಸರ್, ಅದೂ..."
"ಅದೇನನ್ನುವುದು ನಾನು ಬಲ್ಲೆ. ತಾಯಿಯ ಜೊತೆಗೆ ನಿಮ್ಮಲ್ಲಿಗೆ ಬಂದಾಗ ನಿನ್ನ ಮೆಚ್ಚುಗೆಯ ನೋಟ ನನ್ನಲ್ಲೇ ಇದ್ದುದನ್ನು ಗಮನಿಸಿರುವೆ." ತುಸು ಹೊತ್ತಿನ ಮೌನ. ಭೂಮಿಕಾಳಿಗೆ ಮಾತು ಹೊರಡಲಿಲ್ಲ.
"ಇವರು ಮೊದಲೇ ಶಾಸಕರು. ಜನರ ಪ್ರತಿನಿಧಿ. ಜನರ ಕಷ್ಟ-ಕೋಟಲೆಗಳನ್ನು ಆಲಿಸಿ ಪರಿಹರಿಸುವುದರಲ್ಲೇ ಸಮಯ ಕಳೆಯುತ್ತಾರೆ. ಹೆಂಡತಿ, ಸಂಸಾರಕ್ಕೆ ಆದ್ಯತೆ ಕೊಡುವರೋ ಇಲ್ಲವೋ ಎಂಬ ಅನುಮಾನವಿರಬಹುದು ನಿನಗೆ. ಏನೋ ಒಂದು ಅವಕಾಶವಿತ್ತು. ಶಾಸಕನಾದೆ. ಶಾಸಕ ಹುದ್ದೆ ಏನು ಶಾಸ್ವತವಲ್ಲ. ಶಾಸಕನಾಗಿದ್ದರೂ, ಶಾಸಕನಾಗಿರದಿದ್ದರೂ ಹೆಂಡತಿ, ಮಕ್ಕಳು, ಕುಟುಂಬದವರೆಲ್ಲರ ಜೊತೆಗೆ ಸಾಕಷ್ಟು ಸಮಯ ಕಳೆಯುತ್ತೇನೆಂದು ಭರವಸೆ ಕೊಡುವೆ."
"ಭರವಸೆ ಭರವಸೆಯಾಗಿಯೇ ಉಳಿದರೆ...?"
"ಒಳ್ಳೇ ವಿರೋಧ ಪಕ್ಷದವರು ಮಾತಾಡಿದಂತೆ ಮಾತಾಡುತ್ತಿರುವಿಯಲ್ಲ? ಆದರೂ ನಿನ್ನ ಮಾತು ಮೆಚ್ಚುಗೆಯಾಯಿತು. ನಿನ್ನ ಬಾಯಿಯಿಂದ, `ಹೂಂ' ಎನ್ನುವ ಒಂದೇ ಶಬ್ದ ಬಂದರೆ ನನ್ನ ಮನಸ್ಸು ಖುಷಿಯಲ್ಲಿ ತೇಲಾಡುತ್ತೆ..." ಮತ್ತೊಂದಿಷ್ಟೊತ್ತು ಮೌನ.
"ಹೂಂ ಸರ್." ಒಲವಿನ ಒಸಗೆಗೆ ಭೂಮಿಕಾಳ ಒಪ್ಪಿಗೆಯ ಮುದ್ರೆ ಬಿತ್ತು.
"ನಾನೀಗಲೇ ನಿನ್ನಲ್ಲಿಗೆ ಬಂದು ನಿನ್ನನ್ನು ಅಪ್ಪಿ ಮುದ್ದಾಡಿ ನನ್ನ ಎದೆಯೊಳಗಿನ ಸಂತಸವನ್ನು ಹಂಚಿಕೊಂಡು ಬಿಡಲೇ...?"
"ಸರಿ ಬನ್ನಿ, ಬೇಡವೆನ್ನಲಾರೆ..." ತುಂಟತನವಿತ್ತು ಭೂಮಿಕಾಳ ಜೇನಧ್ವನಿಯಲ್ಲಿ.
"ಇನ್ಮುಂದೆ ಈ ಸರ್ ಪದ ಬೇಡ. ನಾನು ನಿನಗೆ ಬರೀ ಬಸವಪ್ರಭು ಅಷ್ಟೇ. ಶಾಸಕನಲ್ಲ."
"ಓಕೆ ಪ್ರಭುಗಳೇ..." ಕಿಲಕಿಲ ನಕ್ಕಳು ಭೂಮಿಕಾ.
ಒಲಿದ ಹೃದಯಗಳೆರಡೂ ಸಂತಸದ ಪರಾಕಾಷ್ಠೆಯಲ್ಲಿ ಸಂಭ್ರಮಿಸತೊಡಗಿದವು.
* ಶೇಖರಗೌಡ ವೀ ಸರನಾಡಗೌಡರ್,
ತಾವರಗೇರಾ-583279, ತಾ:ಕುಷ್ಟಗಿ, ಜಿ:ಕೊಪ್ಪಳ.
ಒಲಿದು ಬಂದ ಒಸಗೆ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಶೇಖರಗೌಡ ವೀ. ಸರನಾಡಗೌಡರ್
ಶೇಖರಗೌಡ ವೀರನಗೌಡ ಸರನಾಡಗೌಡರ್ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದವರು.
ಕೃಷಿ ಪದವೀಧರರು. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಲ್ಲಿ ಚೀಫ್ ಮ್ಯಾನೇಜರ್ ಆಗಿದ್ದು ಈಗ ನಿವೃತ್ತಿ ಪಡೆದಿರುವರು.
ಸಾಹಿತ್ಯ ರಚನೆ : ೩೫೫ ಕಥೆಗಳು, ೧೦ ಕಾದಂಬರಿಗಳು, ೩೫ ಲೇಖನಗಳು, ೧೦ ಕವನಗಳು.
ಪ್ರಕಟವಾಗಿರುವ ಕೃತಿಗಳು: ಕಥಾ ಸಂಕಲನಗಳು -೨೨,ಕಾದಂಬರಿಗಳು - ೦೮.
ಸದ್ಯ ಕರ್ಮವೀರ ವಾರಪತ್ರಿಕೆಯಲ್ಲಿ, "ಅತಿ ಮಧುರ ಅನುರಾಗ" ಎಂಬ ಕಾದಂಬರಿ ೨೩-೦೧-೨೦೨೨ರಿಂದ ಧಾರಾವಾಹಿಯಾಗಿ ಪ್ರಕಟವಾಗತೊಡಗಿದೆ. ಎರಡು ನೂರಕ್ಕೂ ಹೆಚ್ಚು ಕಥೆಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ.
ಪ್ರಶಸ್ತಿ, ಪುರಸ್ಕಾರಗಳು :
೧) ೨೦೨೦ರ ಕಲಬುರಗಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ.
೨) ೨೦೨೧ರಲ್ಲಿ ಜರುಗಿದ ಕುಷ್ಟಗಿ ತಾಲೂಕಿನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ.ಇನ್ನೂ ಹಲವಾರು.
ಸದ್ಯ ಸಾಹಿತ್ಯ ಕೃಷಿಯ ಜೊತೆಗೆ ನಿಜ ಕೃಷಿಯಲ್ಲಿ ತೊಡಗಿರುವರು. ಪತ್ನಿ : ಅಕ್ಕಮಹಾದೇವಿ.
All Posts
9 thoughts on “ಒಲಿದು ಬಂದ ಒಸಗೆ”
ಹಳ್ಳಿಯ ಕೃಷಿಯ ವಿವರಗಳ ಜೊತೆ ಪ್ರೀತಿಯ ಕಥೆ ‘ ಒಲಿದು ಬಂದ ಒಸಗೆ ‘ ಚನ್ನಾಗಿದೆ. ಅಭಿನಂದನೆಗಳು ಶೇಖರಗೌಡರಿಗೆ.
ಶೃಂಗಾರಮಯ ಕಥೆಯನ್ನು ರಚಿಸುವದರಲ್ಲಿ ತಮ್ಮದು ಎತ್ತಿದ ಕೈ. ಕಥೆ ಚಿಕ್ಕದಾದರೂ ಚೊಕ್ಕವಾಗಿ ಮೂಡಿ ಬಂದಿದೆ.ಮಧ್ಯದಲ್ಲಿ ಆದರ್ಶ ಕೃಷಿಕರ ಛಾಯೆ ಆವರಿಸಿದೆ. ಅಭಿನಂದನೆಗಳು,ಸರ್.
ಕೃಷಿಯ ಜೊತೆಗೆ ಕಥಾ ಹಂದರ ಚಂದವಾಗಿ ಮೂಡಿ ಬಂದಿದೆ sir, ಅಭಿನಂದನೆಗಳು ನಿಮಗೆ 💐👏🏻
ಹೆಸರೇ ಸೂಚಸುವಂತೆ, ಒಂದು ರಮ್ಯ ಕತೆ. ಯಾವುದೋ ಒಂದು ತುಂಬಾ ಚೆಂದದ ಹೂವಿನ ಗಿಡದಲ್ಲಿ, ಎಲ್ಲಿ ದೃಷ್ಟಿ ಸ್ಪರ್ಶಿಸಿದರೂ, ಸೌಂದರ್ಯದ ಸೊಬಗಿನ ಮಾರ್ದವತೆ. ದೃಷ್ಟಿಯ ದಾರಿಯೂ ಅಷ್ಟು ಸುಲಭವೇ? ಅಲ್ಲಲ್ಲಿ ಮುಳ್ಳುಗಳನ್ನು ದಾಟಲೇಬೇಕು. ದಾಟಿದರೆ ಮತ್ತೆ ದಿವ್ಯ ಸಾನ್ನಿಧ್ಯ. ಪೂರಾ ಕತೆಯನ್ನು ಹೇಳುವ ತವಕ, ಓಘದ ವೇಗದಲ್ಲಿ, ಒಂದೇ ಸವನೆ ಹರಿದಾಡುತ್ತದೆ, ಕತೆಯ ಹೆಸರಿನಂತೆ. ಕತೆಗಾರನ ಕತೆಹೇಳುವ ಅನುಭವ ವೇದ್ಯವಾಗುತ್ತದೆ, ‘ ಒಲಿದು ಬಂದ ಒಸಗೆ ‘ ಯಂತೆ!
ಕೃಷಿ ಪ್ರಧಾನ ಪರಿಶ್ರಮಿ ಮತ್ತು ಯಶಸ್ವಿ ರೈತ ಕುಟುಂಬ. ಮೊದಲ ಪರಿಚಯ ಉತ್ತಮ ಪರಿಣಾಮ ಎನ್ನುವಂತೆ ಮೊದಲನೋಟದಲ್ಲೇ ಪ್ರೇಮಾಂಕುರದ ಕಥೆ ತುಂಬ ಸುಂದರವಾಗಿದೆ. ಜಾತಿ ಮತ ಪಂಥ ಅಂತಸ್ತುಗಳು ಅಡ್ಡಬರದೆ ಬಂಧುತ್ವದಲ್ಲಿ ಪರ್ಯಾವಸಾನ ಮೆಚ್ಚುವಂಥದ್ದು. ಓದುಗರಿಗೆ ಕಥೆ ಸಂತೋಷದೊಂದಿಗೆ ಮಾರ್ಗದರ್ಶಕವಾಗಿದೆ. ಅಭಿನಂದನೆಗಳು
ಹೆಚ್ಚು ಕಡಿಮೆ ಲೇಖನವು ಭೂಮಿಕಾಳನ್ನು ತನ್ನ ಬಳಿಯೇ ಇಟ್ಟುಕೊಂಡು ಕೊನೆಗೆ ಒಬ್ಬ ಆದರ್ಶ ವ್ಯಕ್ತಿತ್ವ ಹೊಂದಿದವರ ಬಳಿ ಕೊಂಡೊಯ್ದು ಅಲ್ಲಿ ಕಲ್ಯಾಣ ಕಾರ್ಯ ಮಾಡುತ್ತದೆ. ಇಲ್ಲಿ ಬರುವ ಪಾತ್ರಗಳಿಗೆ ವ್ಯಕ್ತಿತ್ವ ತುಂಬುವುದಲ್ಲದೇ,
ಬಹುಶಃ ಅವರ ಕೃಷಿ ಪ್ರಾಧಾನ್ಯತೆಯನ್ನೂ ಬಿಂಬಿಸಿದೆ. ಇನ್ನು ಊಟದ ವಿಷಯ ಬಂದಾಗ ಓದುಗರಿಗೂ ಅಲ್ಲಿ ಪಾಲ್ಗೊಳ್ಳಬೇಕೆನಿಸುತ್ತದೆ. ಒಟ್ಟಾರೆ ಲೇಖನ ಲವಲವಿಕೆಯಿಂದ ಕೂಡಿ ಸಂಭ್ರಮದಿಂದ ಮುಕ್ತಾಯವಾಗುತ್ತದೆ. ಸರ್ ಗೆ ಅಭಿನಂದನೆಗಳು. 👌👌👍👍
ಕೃಷಿಪ್ರಧಾನವಾದ ವಿಷಯವನ್ನು ವಸ್ತುವಾಗಿಸಿ ಎಂದಿನಂತೆ ಪ್ರೀತಿ, ಪ್ರೇಮ, ಸರಸ, ಶೃಂಗಾರದ ಮಾತು, ವರ್ಣನೆಗಳಲ್ಲಿ ಸಾಗಿದ ಕಥೆ ಮದುವೆ ಪ್ರಸ್ತಾಪದಲ್ಲಿ ಕೊನೆಗೊಂಡು ಓದಿಸಿಕೊಂಡು ಹೋಗುವ ಗುಣ ಹೊಂದಿದೆ.
ಅಭಿನಂದನೆಗಳು.
ಸಜ್ಜನಿಕೆಯ ಎಲ್ಲೆ ಮೀರಿದ ಸುಂದರ,ಸರಳ , ಸುಖಾಂತ್ಯದ ಪ್ರೇಮ ಕಥೆ.ಆದರ್ಶಶಾಸಕ ಹೇಗಿರಬೇಕು ಎಂಬುದನ್ನು ಈ ಕಥೆಯಲ್ಲಿ ಕಾಣುತ್ತೇವೆ.
ಸರಾಗವಾಗಿ ಓದಿಸಿಕೊಂಡು ಹೋಗುವ ಕಥೆ.ಇದೇ ಶೇಖರಗೌಡರ ಒಂದು ದೊಡ್ಡ ಪ್ಲಸ್ ಪಾಯಿಂಟ್. ಧನ್ಯವಾದಗಳು 💐
ಕೃಷಿ ಮತ್ತು ಗ್ರಾಮೀಣ ಹಿನ್ನೆಲೆಯ ಕಥೆ ತುಂಬಾ ಸೊಗಸಾಗಿದೆ. ಮತ್ತು ಇಷ್ಟವಾಯ್ತು. ಎಂದಿನಂತೆ ಶುಭ ಮುಕ್ತಾಯ. ಅಭಿನಂದನೆಗಳು ಸಾರ್