ಎರಡೂವರೆ ಅಕ್ಷರಗಳ ‘ಪ್ರೇಮ’

ಜಗತ್ತಿನೆಲ್ಲೆಡೆಯ ಯುವ ಜನರು ಅತಿ ಹೆಚ್ಚು ಇಷ್ಟ ಪಡುವ ಏಕೈಕ ಹಬ್ಬ ಎಂದರೆ 'ಪ್ರೇಮಿಗಳ ದಿನಾಚರಣೆ'. ಇದು ಪಾಶ್ಚಿಮಾತ್ಯ ದೇಶಗಳಿಂದ ಭಾರತಕ್ಕೆ ಬಂದ ಹಬ್ಬಗಳಲ್ಲಿ ಒಂದು. ಇದನ್ನು ಫೆಬ್ರುವರಿ ೧೪ ರಂದು ಆಚರಿಸಲಾಗುತ್ತದೆ. 

‘ಪ್ರೇಮಿಗಳ ದಿನಾಚರಣೆ’ ಭಾರತೀಯರಿಗೆ ಹೊಸದೇನಲ್ಲ. ಪುರಾಣಗಳಲ್ಲಿ ಬರುವ ‘ಕಾಮ-ರತಿ’ ಇವರು ಪ್ರೇಮ ದೇವತೆಗಳೇ ಆಗಿದ್ದಾರೆ. ಪುರಾಣಗಳಲ್ಲಿ ಬರುವ ಗಂಧರ್ವ ವಿವಾಹ ಎಂದರೆ ‘ಪ್ರೇಮ ವಿವಾಹ’ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಇಂದಿನ ಬಹುಸಂಖ್ಯ ಯುವ ಜನರ ದೃಷ್ಟಿಯಲ್ಲಿ ‘ಪ್ರೇಮ’ ಎಂಬ ಪದ ಕೇವಲ ಹದಿ ಹರೆಯದ ಯುವಕ ಯುವತಿಯರ ನಡುವಿನ ಪ್ರೇಮವಾಗಿದೆ. ಇದು ಪ್ರೇಮ ಪದದ ಒಂದು ಸಂಕುಚಿತ ಅರ್ಥ ಮಾತ್ರ. ವಾಸ್ತವವೆಂದರೆ ಇದು ದೈಹಿಕ ಆಕರ್ಷಣೆಯಾಗಿರುತ್ತದೆ.

‘ಪ್ರೇಮ’ ಎಂಬ ಪದಕ್ಕೆ ಬಹಳಷ್ಟು ವಿಶಾಲವಾದ ಅರ್ಥವಿದೆ. ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿ ಹುಟ್ಟಿನಿಂದ ಸಾಯುವವರೆಗೆ ಪಡೆಯುವ ಪ್ರತಿಯೊಂದು ಪ್ರಕಾರದ ಪ್ರೇಮ ಈ ಪದದ ಅರ್ಥವ್ಯಾಪ್ತಿಗೆ ಒಳಪಡುತ್ತವೆ.
ಮಗು ಹೊಟ್ಟೆಯಲ್ಲಿ ಇರುವಾಗಲೇ ತಾಯಿ ಮಗುವಿನ ನಡುವೆ ಪ್ರೀತಿಯ ಬಳ್ಳಿ ಕುಡಿಯೊಡೆಯುತ್ತದೆ. ಮಕ್ಕಳ ಮೇಲಿನ ತಂದೆ ತಾಯಿಯರ ಪ್ರೇಮವನ್ನು ‘ವಾತ್ಸಲ್ಯ’ ಎಂದು ಕರೆಯಲಾಗುತ್ತದೆ. ವಾತ್ಸಲ್ಯದ ಧಾರೆಯಲ್ಲಿ ಮಿಂದೆದ್ದು ಬೆಳೆದ ಮಗು ಬಾಲಕನಾಗಿ ಮನೆಯ ಹೊಸ್ತಿಲು ದಾಟಿ ನೆರೆಮನೆಯವರ ಸಮವಯಸ್ಸಿನವರ ಪ್ರೇಮಕ್ಕೆ ಹಾತೊರೆಯುತ್ತದೆ. ಇದಕ್ಕೆ ‘ಗೆಳೆತನ’ ಎಂದು ಕರೆಯಲಾಗುತ್ತದೆ. ಬಾಲಕ ಶಾಲೆಗೆ ಹೋಗಲು ಆರಂಭಿಸಿದ ನಂತರ ಶಿಕ್ಷಕರ ಪರಿಚಯವಾಗುತ್ತದೆ. ಗುರುಗಳ ಮೇಲಿನ ಪ್ರೇಮಕ್ಕೆ ‘ಗೌರವ’ ಎಂದು ಕರೆಯಲಾಗುತ್ತದೆ. ದೇವರ ಮೇಲಿನ ಪ್ರೇಮಕ್ಕೆ’ಭಕ್ತಿ’ ಎಂದು ಕರೆಯಲಾಗುತ್ತದೆ. ಬಾಲಕ ಯುವಕನಾದ ನಂತರ ತನ್ನ ಸಮವಯಸ್ಸಿನ ಯುವತಿಯರತ್ತ ಆಕರ್ಷಿತನಾಗುವುದು ಸಾಮಾನ್ಯ. ಕೆಲವರಿಗೆ ಈ ವಯಸ್ಸಿನಲ್ಲಿ ಬಯಸಿದ ಪ್ರೀತಿ ಸಿಗುತ್ತದೆ. ಇನ್ನು ಕೆಲವರಿಗೆ ಅದು ಶಾಶ್ವತ ಮರೀಚಿಕೆ.

‘ಲೈಲಾ ಮಜನು, ರೋಮಿಯೊ ಜೂಲಿಯೆಟ್‌’ ಮೊದಲಾದ ಹದಿಹರೆಯದ ಯುವಕ ಯುವತಿಯರ ಅನೇಕ ಪ್ರೇಮ ಕಥೆಗಳು ಪ್ರಸಿದ್ಧವಾಗಿವೆ. ದೇವದಾಸದಂತಹ ಭಗ್ನಪ್ರೇಮದ ಕಥೆಗಳಿಗೂ ಬರಗಾಲವಿಲ್ಲ. ಇಂತಹ ಹತ್ತು ಹಲವು ಸತ್ಯ ಹಾಗೂ ಕಾಲ್ಪನಿಕ ಪ್ರೇಮಕಥೆಗಳು ಬೆಳ್ಳಿ ಪರದೆಯ ಮೇಲೆ ಸದಾ ಮೆರೆಯುತ್ತಿರುತ್ತವೆ. ಪ್ರೇಮಿಗಳ ಪಾತ್ರ ವಹಿಸಿದರ ಕಲಾವಿದರೂ ಪ್ರೇಮ ಪಾಶಕ್ಕೆ ಸಿಲುಕಿದ್ದುಂಟು. ಅಂಥವರಲ್ಲಿ ಕೆಲವು ಜೋಡಿಗಳು ದಂಪತಿಗಳೂ ಆಗಿದ್ದಾರೆ. ಸಿನಿಮಾ ನೋಡಿದ ನಂತರ ಪ್ರೇಮಕ್ಕೆ ಸಿಲುಕಿ ಮದುವೆಯಾದ ಜೋಡಿಗಳು ಹಳ್ಳಿ ಮತ್ತು ಪಟ್ಟಣಗಳಲ್ಲಿ ಸಾಮಾನ್ಯ. ಕೆಲವರು ನಿರಾಶೆಯ ಪ್ರಪಾತಕ್ಕೆ ಬಿದ್ದದ್ದೂ ಉಂಟು.

‘ಪ್ರೇಮ’ದ ನಿಜವಾದ ಅಧ್ಯಾಯ ಆರಂಭವಾಗುವುದು ಮದುವೆಯ ನಂತರ. ಸತ್ತ ನಂತರ ತಾಜ್ಮಹಲ್ ಕಟ್ಟುವುದಕ್ಕಿಂತ ಬೇಂದ್ರೆಯವರು ಹೇಳುವಂತೆ ‘ಬಡ ನೂರು ವರುಷಾನ ಹರುಷದಿ ಕಳೆಯೋಣ’ ಎನ್ನುವುದು ಮುಖ್ಯ. ಬಹುಸಂಖ್ಯೆಯ ಜನರು ಕೆ. ಎಸ್. ನರಸಿಂಹ ಸ್ವಾಮಿಯವರ ‘ಮೈಸೂರು ಮಲ್ಲಿಗೆ’ ಕವನ ಸಂಕಲನದಲ್ಲಿಯ ಕವನಗಳನ್ನು ‘ಪ್ರೇಮ ಕವನಗಳು’ ಎಂದು ತಿಳಿದುಕೊಂಡಿದ್ದಾರೆ. ಆದರೆ ಅವು ದಾಂಪತ್ಯ ಕುರಿತ ಕವನಗಳು. ವಯಸ್ಸಾದ ನಂತರ ಕೆಲವು ದಂಪತಿಗಳು ಅಗಲಿ ಇರಲು ಇಷ್ಟ ಪಡುವುದಿಲ್ಲ. ಇದುವೇ ನಿಜವಾದ ಪ್ರೇಮ. ಒಂದು ಭಯಂಕರ ಕಾಯಿಲೆಯಿಂದ ನರಳುತ್ತಿದ್ದ ಪತ್ನಿಯ ಸ್ಥಿತಿಯನ್ನು ಅವಳ ಪತಿಯಿಂದ ನೋಡಲಾಗುವುದಿಲ್ಲ. ಆಗ ಅವನು ವೈದ್ಯರಿಗೆ ಅವಳಿಗೆ ಆದಷ್ಟು ಬೇಗ ಅವಳಿಗೆ ಆ ನರಳುವಿಕೆಯಿಂದ ಶಾಶ್ವತ ಮುಕ್ತಿ ನೀಡಲು ವಿನಂತಿಸಿಕೊಳ್ಳುತ್ತಾನೆ. ಕಳ್ಳನೊಬ್ಬ ಕಳ್ಳತನಕ್ಕೆಂದು ಬಂದ ಒಂದು ಮನೆಯಲ್ಲಿ ನರಳುತ್ತಿರುವ ಮಗುವನ್ನು ಆಸ್ಪತ್ರೆಗೆ ಕರದೊಯ್ಯುತ್ತಾನೆ. ಇದು ಕೂಡ ಒಂದು ರೀತಿಯ ಪ್ರೇಮ.

ಕೆಲವರ ಪ್ರೇಮ ಅವರ ಕುಟುಂಬಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಇನ್ನು ಕೆಲವು ನಿಸ್ಸೀಮರಿಗೆ ವಿಶ್ವವೇ ಕುಟುಂಬವಾಗಿರುತ್ತದೆ. ಬುದ್ಧ, ಏಸು ಮತ್ತು ಬಸವಣ್ಣ ಮಹಾವೀರ, ಗುರುನಾನಕ್ ಮೊದಲಾದವರು ‘ಇವನಾರವ ಇವನಾರವ’ ಎನ್ನದೆ, ‘ಇವ ನಮ್ಮವ ಇವ ನಮ್ಮವ’ ಎಂದು ಮನುಕುಲವನ್ನೇ ಪ್ರೀತಿಸಿದರು. ‘ಮನುಷ್ಯ ಜಾತಿ ತಾನೊಂದೆ ವಲಂ’ ಎನ್ನುವ ಪಂಪ ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಿದ್ದಾನೆ. ‘ಕುಲ ಕುಲ ಎಂದು ಹೊಡೆದಾಡದಿರಿ’ ಎನ್ನುವ ಕನಕದಾಸರ ಮಾತಿನ ಸಾರವೂ ಅದೇ ಆಗಿದೆ. ‘ಮಾನವ ಜನ್ಮ ದೊಡ್ಡದು. ಅದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ‘ ಎನ್ನುವ ಪುರಂದರದಾಸರ ಜೀವನ ಪ್ರೀತಿ ಮತ್ತು ಜೀವ ಪ್ರೀತಿ ಬಹಳ ದೊಡ್ಡದು.

ಸ್ವಾಮಿ ವಿವೇಕಾನಂದರು ವಿವೇಕದ ಜ್ಯೋತಿ ಬೆಳಗಿಸಿದರು. ಕಸಬರಿಗೆಯ ಸಂತ ಗಾಡಗೆಬಾಬಾ ಮೊದಲಾದವರು ಒಳ ಹೊರಗಿನ ಕಸವನ್ನು ಗುಡಿಸಿದರು. ಸಾವಿತ್ರಿಬಾಯಿಯವರು ಮಹಿಳೆಯರ ಬರಿದಾದ ಹಲಗೆಯ ಮೇಲೆ ಅಕ್ಷರಗಳನ್ನು ಬರೆದರು. ಡಾ.ಅಂಬೇಡ್ಕರ್ ದಲಿತರನ್ನು ಮೇಲೆತ್ತಿದರು.
ಮನುಕುಲದ ಮೇಲಿನ ಪ್ರೀತಿಯಿಂದ ರೈತ ಅನ್ನ ಬೆಳೆಯುತ್ತಾನೆ. ಸೈನಿಕರು ದೇಶ ಕಾಯುತ್ತಾರೆ. ಕೂಲಿಯವನು ದುಡಿಯುತ್ತಾನೆ. ಶಿಕ್ಷಕರು ಪಾಠ ಹೇಳುತ್ತಾರೆ. ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಇದೇ ರೀತಿ ಎಲ್ಲ ಕಾಯಕದವರು ತಮ್ಮ ತಮ್ಮ ಪಾಲಿನ ಸೇವೆ ಸಲ್ಲಿಸುತ್ತಿದ್ದಾರೆ.
ಕವಿ ಜಿ. ಎಸ್. ಶಿವರುದ್ರಪ್ಪನವರು ಹೇಳುವಂತೆ
ಪ್ರೀತಿ ಇಲ್ಲದ ಮೇಲೆ-
ಹೂವು ಅರಳೀತು ಹೇಗೆ ?
ಮೋಡ ಕಟ್ಟಿತು ಹೇಗೆ ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ ?

ಪ್ರೀತಿ ಇಲ್ಲದ ಮೇಲೆ-
ಮಾತಿಗೆ ಮಾತು ಕೂಡೀತು ಹೇಗೆ ?
ಅರ್ಥ ಹುಟ್ಟಿತು ಹೇಗೆ?
ಬರಿ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ ?

ಪ್ರೀತಿ ಇಲ್ಲದ ಮೇಲೆ-
ಸಂಶಯದ ಗಡಿಗಳುದ್ದಕ್ಕು
ಸಿಡಿಗುಂಡುಗಳ ಕದನ ನಿಂತೀತು ಹೇಗೆ ?
ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ ನರಳುವ ಪಾಡು ತಪ್ಪಿತು ಹೇಗೆ ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ ?

ಭೂಮಿಯ ಮೇಲಿನ ಸಮಸ್ತ ಜೀವ ರಾಶಿಗಳ ಮೇಲಿನ ಪ್ರೀತಿಯಿಂದಾಗಿಯೇ ಹೂವುಗಳು ಅರಳುತ್ತವೆ. ಮರಗಳು ಹಣ್ಣು ಕೊಡುತ್ತವೆ. ನದಿಗಳು ಹರಿಯುತ್ತವೆ. ಆಕಳು ಹಾಲು ಕೊಡುತ್ತದೆ. ಕುವೆಂಪು ಅವರು ಹೇಳುವಂತೆ ‘ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ’. ಭೂಮಿಯ ಮೇಲಿನ ಪ್ರೀತಿಯಿಂದಾಗಿಯೇ ಸೂರ್ಯನು ಬೆಳಕು ಕೊಡುತ್ತಾನೆ. ಮೋಡಗಳು ಮಳೆ ಸುರಿಸುತ್ತವೆ.
ಮರಾಠಿಯ ಸಂತ ಜ್ಞಾನೇಶ್ವರರು ಸಮಸ್ತ ಜಗತ್ತಿಗಾಗಿ ‘ಪಸಾಯದಾನ’ದ ಪ್ರಾರ್ಥನೆ ಮಾಡುತ್ತಾರೆ. ಪ್ರೇಮ ಯಾರ ಮೇಲೆ ಮಾಡಬೇಕು? ಎಂಬ ಪ್ರಶ್ನೆಗೆ ಮರಾಠಿ ಖ್ಯಾತ ಕವಿ ಕುಸುಮಾಗ್ರಜರ ಉತ್ತರ ಬಹಳ ಸುಂದರವಾಗಿದೆ. ‘ಪ್ರೇಮ ಯಾರ ಮೇಲೂ ಮಾಡಬೇಕು’. ಶತ್ರುವನ್ನೂ ಪ್ರೀತಿಸು ಎಂದು ಅವರು ಹೇಳುತ್ತಾರೆ. ‘ನಿಜ ಧರ್ಮವು ಒಂದೇ, ಜಗತ್ತಿಗೆ ಪ್ರೇಮ ಅರ್ಪಿಸಬೇಕು’ ಎಂದು ಮರಾಠಿಯ ಸಾಹಿತಿ ಸಾನೆ ಗುರೂಜಿ ಹೇಳುತ್ತಾರೆ.

ನಿಷ್ಕಲ್ಮಶ ಪ್ರೀತಿ ಇಂದು ಪ್ರತಿಯೊಬ್ಬರಿಗೂ ಬೇಕಿದೆ. ಆದರೆ ಅದನ್ನು ಬೇಡುವ ಪ್ರೇಮಭಿಕ್ಷುವಾಗಲು ಅಥವಾ ಅದನ್ನು ನೀಡುವ ಕರುಣಾಮಯಿಯಾಗಲು ಮಾತ್ರ ಯಾರೂ ಸಿದ್ಧರಿಲ್ಲ. ಈ ಜಗತ್ತಿನ ಪ್ರತಿಯೊಂದು ಚಿಕ್ಕ ದೊಡ್ಡ ಸಂಗತಿಗಳು ನಮಗೆ ಪ್ರೇಮದ ಪಾಠಗಳನ್ನು ಕಲಿಸುತ್ತವೆ. ಆದರೆ ಇಂದು ನಾವು ವಸ್ತುಗಳನ್ನು ಪ್ರೀತಿಸಿ ಪ್ರೀತಿಪಾತ್ರರಿಂದ ದೂರವಾಗುತ್ತಿರುವುದು ದುರದೃಷ್ಟಕರ. ಒಂದು ಮನೆಯಲ್ಲಿ ಮೊಬೈಲ್ ಇರುವ ನಾಲ್ಕು ಜನರು ಇಂದು ನಾಲ್ಕು ಸ್ವತಂತ್ರ ಮನೆಗಳಲ್ಲಿ ಇರುವ ಜನರಂತೆ ಆಗಿ ಬಿಡುತ್ತಿದ್ದಾರೆ. ಕಣ್ಣಿಗೆ ಕಾಣದವರ ಮೇಲೆ ಮೂಡುವ ಮಮಕಾರದ ಒಂದು ಪ್ರತಿಶತ ಮನೆಯವರ ಮೇಲೆ ಮೂಡುತ್ತಿಲ್ಲ. ಇದಕ್ಕಿಂತ ದುರ್ದೈವ ಬೇರೆ ಇರಲಿಕ್ಕಿಲ್ಲ. ಕಲಿಯುವವರಿಗೆ ಕಾಗೆ ಕೂಡ ಕೂಡಿ ಉಣ್ಣುವ ಪಾಠವನ್ನು ಕಲಿಸುತ್ತದೆ. ಕಲಿಯದವರು ಮಾತ್ರ ಅದೆಷ್ಟೋ ಪುಸ್ತಕಗಳನ್ನು ಓದಿದ ನಂತರವೂ ಪಂಡಿತರಾಗದೆ ಉಳಿದು ಬಿಡುತ್ತಾರೆ.

ಅದಕ್ಕಾಗಿ ಹಿಂದಿ ಭಾಷೆಯ ಸಂತ ಕಬೀರರು

ಪೋಥಿ ಪಢಿ ಪಢಿ ಜಗ ಮುಆ ಪಂಡಿತ
ಭಯಾ ನ ಕೋಯ
ಢಾಯಿ ಆಖರ ಪ್ರೇಮ ಕಾ ಪಢೇ ಸೋ ಪಂಡಿತ ಹೋಯ’

ಎಂದು ಹೇಳಿದ್ದಾರೆ.
‘ಪುಸ್ತಕಗಳನ್ನು ಓದಿ ಓದಿ ಕೊನೆಗೂ ಯಾರೂ ಪಂಡಿತರಾಗಲಿಲ್ಲ. ಎರಡೂವರೆ ಅಕ್ಷರಗಳ ಪ್ರೇಮವನ್ನು ಅರ್ಥ ಮಾಡಿಕೊಂಡವನು ಮಾತ್ರ ಪಂಡಿತನಾಗುತ್ತಾನೆ’ ಎಂದು ಸಂತ ಕಬೀರರು ಹೇಳಿದ್ದಾರೆ. ಅದಕ್ಕಾಗಿ ನಾವೆಲ್ಲರೂ ‘ಜ್ಯೋತಿಯಿಂದ ಜ್ಯೋತಿಯನ್ನು ಬೆಳಗುತ್ತ, ಪ್ರೇಮಗಂಗೆಯನ್ನು ಹರಿಸುತ್ತ’ ಬದುಕಿದರೆ ಈ ಧರೆಯೇ ಒಂದು ಸ್ವರ್ಗವಾಗುವುದರಲ್ಲಿ ಸಂಶಯವಿಲ್ಲ.

* ಡಾ. ಗುರುಸಿದ್ಧಯ್ಯಾ ಸ್ವಾಮಿ
ಸಹಾಯಕ ಪ್ರಾಧ್ಯಾಪಕರು
ಕನ್ನಡ ವಿಭಾಗ
ಸಿ.ಬಿ. ಖೇಡಗಿ ಮಹಾವಿದ್ಯಾಲಯ
ಅಕ್ಕಲಕೋಟ, ಮಹಾರಾಷ್ಟ್ರ 413216

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಎರಡೂವರೆ ಅಕ್ಷರಗಳ ‘ಪ್ರೇಮ’”

  1. Chintamani Sabhahit

    ಪ್ರೀತಿಯ ವ್ಯಾಪ್ತಿಯಲ್ಲಿ – ಪ್ರೇಮ – ಆಕರ್ಷಣೆ – ವಿವಾಹ – ವಾತ್ಸಲ್ಯ – ಗೌರವ – ಭಕ್ತಿ – ಕಾಳಜಿ – ಜವಾಬ್ದಾರಿ – ಕುಟುಂಬ – ಕಲಹ ಹೀನತೆ – ಪರೋಪಕಾರ – ಸೇವೆ – ಅರ್ಪಣೆ – ಕರುಣೆ – ದಯೆ – ಪ್ರಾರ್ಥನೆ – ಮಮಕಾರ – ಹೂವರಳುವ – ಹಣ್ಣು ಕೊಡುವ – ನದಿ ಹರಿಯುವ – ಜ್ಯೋತಿ ಬೆಳಗುವ – ಗಂಗೆ ಹರಿಸುವ – ಮನೋ ಭಾವವನ್ನು ಮಿಳಿತವಾಗಿಸಿ – ಧರೆಯಲ್ಲೇ ಸ್ವರ್ಗವನ್ನು ದರ್ಶಿಸಿದ್ದಾರೆ – ಲೇಖಕರು.
    ಅಭಿನಂದನೆಗಳು!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter