ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಮನುಷ್ಯನ ಸ್ವಭಾವದ ಒಂದು ಬಗೆಯೆ? ಗೊತ್ತಿಲ್ಲ, ಇವತ್ತಿನ ದಿನಮಾನದಲ್ಲಿ ಹತ್ತು ಜನರನ್ನು ತೆಗೆದುಕೊಂಡರೆ ಅದರಲ್ಲಿ ಕೇವಲ ಐದು ಜನ ಮಾತ್ರ ತಮ್ಮ ಕರ್ತವ್ಯದೆಡೆ, ಕುಟುಂಬದೆಡೆ ಬೇಜವಾಬ್ದಾರಿಯಿಂದ ವರ್ತಿಸುವವರನ್ನ ಕಾಣುತ್ತೇವೆ. ಯಾಕೆ? ಏನು? ಅಂತ ಸರಿಯಾದ ಕಾರಣ ಗೊತ್ತಿಲ್ಲ, ಹಾಗಾಗಿ ಸರಿಯಾದ ಪರಿಹಾರ ಕಂಡುಕೊಳ್ಳುವ ಮಾರ್ಗ ಸಿಗದೇ ಗೋಳಾಡುವ ಕುಟುಂಬವನ್ನ ಅಥವಾ ತಂದೆ ತಾಯಿಯರನ್ನ ನೋಡುತ್ತೇವೆ.
ಇಡೀ ಪ್ರಪಂಚದಲ್ಲಿ ದೇವರು ಮನುಷ್ಯನಿಗೆ ಮಾತ್ರ ವಿವೇಚನಾ ಸಾಮರ್ಥ್ಯ, ಮಾನವೀಯ ಚೈತನ್ಯ ಕೊಟ್ಟಿದ್ದಾನೆ. ಅದನ್ನು ಬಳಸಿಕೊಂಡು ದಿವ್ಯತೆಡೆಗೆ ಸಾಗಿ ಸಂಬಂಧಗಳನ್ನು ಉದ್ವಿಗ್ನತೆಯಿಂದಲ್ಲ, ಸೌಹಾರ್ದತೆಯಿಂದ ಎತ್ತರಿಸಿ ಕೊಳ್ಳಬೇಕು ಅಲ್ಲವೆ ? . ಅದನ್ನು ಬಿಟ್ಟು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಜನರು ಹೆಚ್ಚಾಗಿ ಕಾಣುತ್ತಾರೆ.
ಮಹಾಭಾರತದ ಆದಿ ಪರ್ವದಲ್ಲಿ ಯಯಾತಿ ಕಥೆ ಇದೆ. ಇದೇ ಕಥೆಯ ಆಧಾರವನ್ನಿಟ್ಟುಕೊಂಡು ಗಿರೀಶ ಕಾರ್ನಾಡರು ಸೃಷ್ಟಿಸಿದ ಯಯಾತಿ ನಾಟಕವನ್ನು ಇಲ್ಲಿ ಗಮನಿಸ ಬಹುದಾಗಿದೆ. ಯಯಾತಿಗೆ ಹೆಂಡತಿ ದೇವಯಾನಿಯಿಂದ ಇಬ್ಬರು ಹಾಗೂ ಶರ್ಮಿಷ್ಠೆಯಿಂದ ಮೂವರು ಹೀಗೆ ಐವರು ಮಕ್ಕಳು . ದೇವಯಾನಿ ಶುಕ್ರಾಚಾರ್ಯರ ಮಗಳು . ದಾಸಿ ಶರ್ಮಿಷ್ಠೆಯನ್ನು ಯಯಾತಿ ಮದುವೆಯಾದುದರಿಂದ ದೇವಯಾನಿ, ದುಃಖಿತಳಾಗಿ ತಂದೆಯ ಹತ್ತಿರ ನಿವೇದಿಸಿಕೊಳ್ಳುತ್ತಾಳೆ . ಆಗ ಶುಕ್ರಾಚಾರ್ಯರು ಯಯಾತಿಗೆ ‘ ವೃದ್ಧಾಪ್ಯ ಬರಲಿ ‘ಎಂದು ಶಪಿಸುತ್ತಾರೆ. ತಂದೆ ಯಯಾತಿಯ ವೃದ್ಧಾಪ್ಯವನ್ನು ಪಡೆಯಲು ಯಾವ ಮಕ್ಕಳು ಮುಂದೆ ಬರುವುದಿಲ್ಲ. ಆದರೆ ಶರ್ಮಿಷ್ಠೆಯ ಮಗ ‘ಪುರು’ ಸ್ವೀಕರಿಸುತ್ತಾನೆ. ಮಗನಿಂದ ಯೌವ್ವನ ಪಡೆದ ಯಯಾತಿ ಅನೇಕ ವರ್ಷಗಳ ಕಾಲ ಅದರ ಸುಖವನ್ನು ಅನುಭವಿಸುತ್ತಾನೆ. ನಂತರ ಯೌವನವನ್ನು ಮಗನಿಗೆ ಮರಳಿಸುತ್ತಾನೆ. ಕಾಮಾಪೋಭೋಗಗಳಿಗೆ ಕೊನೆ ಎಂಬುದಿಲ್ಲ ಎನ್ನುವುದು ಯಯಾತಿಗೆ ಅರಿವಾಗುತ್ತದೆ. ಆದರೆ ಪುರುವಿನ ಹೆಂಡತಿಯು ಸಾವನ್ನಪ್ಪುತ್ತಾಳೆ.
ಇನ್ನೊಂದು ವಡ್ಡಾರಾಧನೆಯಲ್ಲಿ ಬರುವ ಕಾರ್ತೀಕ ಋಷಿಯ ಕಥೆಯಲ್ಲಿ ತಂದೆ ಅಗ್ನಿರಾಜನ ಭೋಗವಿಲಾಸಿ ಪ್ರವೃತ್ತಿಯು ಮಗ ಕಾರ್ತೀಕನ ಬದುಕಿನ ದುರಂತಕ್ಕೆ ಕಾರಣವಾಯಿತು. ಇಂತಹ ಅನೇಕ ಕಥೆಗಳು ಇತಿಹಾಸದುದ್ದಕ್ಕೂ ಕಂಡುಬರುತ್ತವೆ. ಈ ಕಥೆಗಳನ್ನು ಬಹು ಆಯಾಮಗಳಿಂದ ವಿಮರ್ಶಿಸ ಬಹುದು. ಪ್ರಸ್ತುತ ಇಲ್ಲಿ
ಬೇಜವಾಬ್ದಾರಿತನದ ಒಂದು ದೃಷ್ಟಿಕೋನದಲ್ಲಿ ಗುರುತಿಸ ಬಹುದಾಗಿದೆ. ಬೇರೆ ಬೇರೆಯವರಲ್ಲಿ ಬೇರೆ ಬೇರೆ ತರಹದ ಬೇಜವಾಬ್ದಾರಿತನದ ಮುಖಗಳನ್ನ ನೋಡ ಬಹುದು. ತಂದೆಯಾಗಿ ತಮ್ಮ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸದ ಕಾರಣ ಅವರ ಮಕ್ಕಳ ಭವಿಷ್ಯ ಸಂಕಷ್ಟದಲ್ಲಿ ಸಿಲುಕಿತು. ಮನುಷ್ಯ ತನ್ನ ಕಾರ್ಯಗಳ ಜವಾಬ್ದಾರಿಯನ್ನು ಸ್ವೀಕರಿಸದಿದ್ದರೆ ಉಂಟಾಗುವ ದುರಂತವನ್ನು ಇಲ್ಲಿ ನೋಡುವ ಪ್ರಯತ್ನ ಮಾಡಬಹುದು. ತನ್ನ ಕೆಲಸದ ಪೂರ್ಣ ಪ್ರಮಾಣದ ಹೊಣೆ ಹೊರದೇ ಇದ್ದುದ್ದರಿಂದ ದುರಂತ ಸಂಭವಿಸುತ್ತದೆ.
ವಿಪರ್ಯಾಸ ಎಂಬಂತೆ ಕಾರಂತರ ‘ಅಳಿದ ಮೇಲೆ ‘ ಕಾದಂಬರಿಯ ನಾಯಕ ಯಶವಂತರಾಯರು ಇಹಲೋಕ ತ್ಯಜಿಸಿದ ನಂತರವೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಆಸೆಪಟ್ಟರು. ಕುಟುಂಬದವರಷ್ಟೇ ಅಲ್ಲದೆ ಸ್ನೇಹಿತರಿಗೂ ಸಹಾಯವಾದರು.ಇಂಥ ಜನರೂ ನಮ್ಮ ನಡುವೆ ಇದ್ದಾರೆ. ಅವರ ಮಕ್ಕಳೆಲ್ಲ ಉಜ್ವಲ ಭವಿಷ್ಯ ಕಟ್ಟಿಕೊಳ್ಳುತ್ತಾರೆ ಅಂತ ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಯಶವಂತರಾಯರ ನಿಷ್ಠೆ,ಕಾಳಜಿ ಹಾಗೂ ಕುಟುಂಬದಸ್ಥರ ಜೀವನಕ್ಕೆ ಸ್ನೇಹಿತರ ಒಳ್ಳೆಯ ಕೆಲಸಕ್ಕೆ ತುಸು ನೆರವಾಗಬೇಕೆನ್ನುವ ಹಂಬಲವೇ ಅವರ ವ್ಯಕ್ತಿತ್ವಕ್ಕೆ ಘನತೆ ತಂದುಕೊಟ್ಟ ಸಂಗತಿ.
ನಮ್ಮ ಸಾಮಾಜಿಕ ಜೀವನದಲ್ಲಿ ನಮ್ಮ ಸುತ್ತಮುತ್ತಲು ದೃಷ್ಟಿ ಹಾಯಿಸಿದರೆ ಎಂತೆಂಥ ವಿಚಿತ್ರ ಜನರನ್ನು ಕಾಣುತ್ತೇವೆ. ಕೇವಲ ಇಂದ್ರಿಯಗಳ ಗುಲಾಮರಾಗಿ , ದುಶ್ಚಟಗಳಿಗೆ ದಾಸರಾಗಿ ಬಗೆ ಬಗೆಯ ರೀತಿಯಲ್ಲಿ ವರ್ತಿಸುತ್ತಾರೆ, ಇಂಥವರ ಒಂದು ಗುಂಪಾದರೆ; ವ್ಯಸನಿಗಳಲ್ಲದಿದ್ದರೂ, ಕೆಲಸದಲ್ಲಿದೀನಿ ಅಂತ ನಾಲ್ಕು ಜನರ ಮುಂದೆ ಕೊಚ್ಚಿಕೊಳ್ಳುತ್ತ , ಮನೆಯಲ್ಲಿ ಏನೇ ಕಷ್ಟ ಬಂದರೂ ನಿರ್ಲಿಪ್ತವಾಗಿರೋದು ಇನ್ನೊಂದು ಗುಂಪಿನ ಜನರ ಸ್ವಭಾವ. ಸಣ್ಣಪುಟ್ಟ ಮನೆಕೆಲಸನೂ ಮಾಡದೆ , ತಪ್ಪಿಸಿಕೊಂಡು ಓಡಾಡುವ ಸೋ ಕಾಲ್ಡ ‘ಮನೆಯ ಯಜಮಾನ ‘ ಪಟ್ಟ ಬೇರೆ ಅವನಿಗೆ ! ಯಾಕೆ ಹೀಗೆ ಎಂಬ ಪ್ರಶ್ನೆ ಕಾಡುತ್ತದೆ. ಈ ಕುಟುಂಬದ ಹೆಣ್ಣುಮಕ್ಕಳ ಗೋಳು ನೋಡಿದರೆ ಕರುಳು ‘ಚುರ್ ‘ ಅನ್ಸುತ್ತೆ. ಮನೆಯ ಒಳಗೂ, ಹೊರಗೂ ದುಡಿಯುತ್ತ ಮಕ್ಕಳ ಶಿಕ್ಷಣ, ಮದುವೆಗೆ ಪರದಾಡುವ ಒಂಟಿಜೀವ ಬಹುತೇಕ ಹೆಣ್ಣೇ ಆಗಿರುತ್ತಾಳೆ . ಇಂತಹ ಜನರು ಹೆಚ್ಚಾದಂತೆ ಕುಟುಂಬ ವ್ಯವಸ್ಥೆಯಲ್ಲಿ ಅಹಿತಕರ ವಾತಾವರಣ ನಿರ್ಮಾಣವಾಗುತ್ತದೆ. ಸಮಾಜದ ಸ್ವಾಸ್ಥ್ಯವೂ ಹದಗೆಡುತ್ತದೆ.
ಇದಕ್ಕೆ ಪರಿಹಾರವಿದೆಯಾ? ಈ ಸಮಸ್ಯೆಯ ಮೂಲ ಕಾರಣಗಳೇನು? ಹಾಗೂ ಇದರಿಂದ ಹೊರಬರುವ ಸಾಧ್ಯತೆಗಳಿವೆಯೆ? ಈ ಕುರಿತು ಗಂಭೀರವಾಗಿ ಯೋಚಿಸಬೇಕಿದೆ. ಮನುಷ್ಯ ಹೀಗೇಕೆ ವರ್ತಿಸುತ್ತಿದ್ದಾನೆ? ವಿಶೇಷವಾಗಿ ತರುಣರು ಮದುವೆಯೆಂಬ ಬಂಧನ ಏರ್ಪಡುವಾಗ ಜಾಗರೂಕತೆಯಿಂದ ನಿರ್ಧಾರ ತೆಗೆದುಕೊಳ್ಳುವ ಕಾಲಘಟ್ಟವಿದಾಗಿದೆ. ಬೇಜವಾಬ್ದಾರಿ ಮನುಷ್ಯ ಒಬ್ಬ ಒಳ್ಳೆಯ ಜವಾಬ್ದಾರಿಯುತ ಮನುಷ್ಯನಾಗಬಲ್ಲನೆ ? ‘ಮನಸ್ಸಿದ್ದರೆ ಮಾರ್ಗ ‘ ಅಲ್ಲವೆ, ತಮ್ಮಲ್ಲಿರುವ ಸೋಮಾರಿತನ, ನಿರಾಸಕ್ತಿಯೆಂಬ ಜಡತ್ವ ಗಳನ್ನು ತೊರೆದು ,ವ್ಯಸನಮುಕ್ತರಾಗಬೇಕೆಂಬ ಸಕಾರಾತ್ಮಕ ಧೋರಣೆ ಇಟ್ಟುಕೊಂಡು ಪ್ರಯತ್ನ ಪಡುವದರಲ್ಲಿ ತಪ್ಪೇನಿಲ್ಲ ಅಲ್ವಾ !