ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರ ಈ ಬಾರಿ ಐವರು ಮಹನೀಯರಿಗೆ ರಾಷ್ಟ್ರದ ಅತ್ಯುನ್ನತ ಗೌರವವಾದ ‘ಭಾರತ ರತ್ನ’ ಪ್ರಶಸ್ತಿ ಘೋಷಿಸಿದೆ. ಸಾಮಾನ್ಯವಾಗಿ ಒಂದು ವರ್ಷ ಒಬ್ಬರು ಅಥವಾ ಇಬ್ಬರಿಗೆ ಪ್ರಶಸ್ತಿ ಘೋಷಿಸುವುದು ವಾಡಿಕೆ. ಆದರೆ ಈ ವರ್ಷ ಐವರಿಗೆ ಪ್ರಶಸ್ತಿ ಘೋಷಣೆ ಮಾಡಿದ್ದರ ಹಿಂದೆ ಸ್ಪಷ್ಟವಾಗಿ ರಾಜಕೀಯ ಉದ್ದೇಶಗಳು ಕೆಲಸ ಮಾಡಿವೆ ಎಂಬುದು ಎಂತಹವರಿಗಾದರೂ ಗೊತ್ತಾಗುವಂತಹ ಸಂಗತಿ. ಈ ಐವರು ಮಹನೀಯರೂ ‘ಭಾರತ ರತ್ನ’ ಪ್ರಶಸ್ತಿಗೆ ಖಂಡಿತವಾಗಿಯೂ ಅರ್ಹರಾದವರು ಎಂಬುದು ಸಮಾಧಾನದ ಸಂಗತಿ. ಪ್ರಶಸ್ತಿ ಪಡೆದ ಐವರಲ್ಲಿ ಒಬ್ಬರು ಮಾತ್ರ ಬದುಕಿದ್ದಾರೆ, ಉಳಿದ ನಾಲ್ವರು ನಿಧನರಾಗಿದ್ದಾರೆ. ವಿಶೇಷವೆಂದರೆ ಈ ಬಾರಿ ‘ಭಾರತ ರತ್ನ’ ಪಡೆದವರಲ್ಲಿ ನಾಲ್ವರು ರಾಜಕಾರಣಿಗಳು ಮತ್ತು ಒಬ್ಬರು ಮಾತ್ರ ಕೃಷಿ ವಿಜ್ಞಾನಿ.
೨೦೨೪ನೇ ಸಾಲಿನಲ್ಲಿ ಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಆಯ್ಕೆ ನಡೆದಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸತತ ಹತ್ತು ವರ್ಷಗಳಿಂದ ಅಧಿಕಾರ ಸಿಗದೆ ಕಂಗಾಲಾಗಿ ಹೋಗಿರುವ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳಿಗೆ ಬಿಜೆಪಿಯ ಈ ನಡೆ ನುಂಗಲಾರದ ತುತ್ತಾಗಿದೆ. ಸವಕಲು ನಾಣ್ಯಗಳಾದ ಹುಸಿ ಜಾತ್ಯಾತೀತತೆ, ತೀವ್ರ ಹಿಂದೂ ವಿರೋಧ ಮತ್ತು ಅಲ್ಪ ಸಂಖ್ಯಾತರ ತುಷ್ಟೀಕರಣ ಎಡಪಂಥೀಯ ಪಕ್ಷಗಳಿಗೆ ಓಟು ಬರುವಂತೆ ಮಾಡುವಲ್ಲಿ ಯಶಸ್ಸು ಕಾಣುತ್ತಿಲ್ಲ. ಸಂವಿಧಾನ ರಕ್ಷಣೆ ಮಾಡುತ್ತೇವೆಂದು ಬೊಬ್ಬೆ ಹೊಡೆಯುತ್ತಾ, ಹುಸಿ ಜಾತ್ಯಾತೀತೆಯನ್ನು ಪ್ರಚಾರ ಮಾಡಿದರೂ ಮೊದಲಿನಂತೆ ಜನ ಇವರನ್ನು ನಂಬುತ್ತಿಲ್ಲ. ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಮಾಧ್ಯಮ ವಲಯದಲ್ಲಿರುವ, ಇವರ ಹಿಂಬಾಲಕರಾದ ಬುದ್ಧಿಜೀವಿಗಳು ಎಂದೋ ವಿದೂಷಕರಾಗಿ ಹೋಗಿದ್ದಾರೆ. ಅಧಿಕಾರ ಸಿಗದೆ ಬರಗೆಟ್ಟು, ಅವೈಜ್ಞಾನಿಕ ಮತ್ತು ಆರ್ಥಿಕತೆಗೆ ಮಾರಕವಾದ ಉಚಿತ ಯೋಜನೆಗಳನ್ನು ಘೋಷಣೆ ಮಾಡಿ ಚುನಾವಣೆ ಎದುರಿಸಿದರೂ ಅದು ಕರ್ನಾಟಕ ಮತ್ತು ತೆಲಂಗಾಣ ಹೊರತು ಪಡಿಸಿ ಬೇರೆಡೆ ಪ್ರಯೋಜನಕ್ಕೆ ಬಂದಿಲ್ಲ. ಕರ್ನಾಟಕ ಮತ್ತು ತೆಲಂಗಾಣದಲ್ಲೂ ಸಹ ಉಚಿತ ಯೋಜನೆಗಳಿಗಿಂತ ಆಡಳಿತ ಪಕ್ಷಗಳ ವಿರುದ್ಧದ ತೀವ್ರ ಅಸಹನೆ ಮತ್ತು ಆಡಳಿತ ವಿರೋಧಿ ಅಲೆಯೇ ಕಾಂಗ್ರೆಸ್ ಗೆಲ್ಲಲು ಹೆಚ್ಚಿನ ಸಹಾಯ ಮಾಡಿದೆ. ಇರಲಿ, ಚುನಾವಣಾ ರಾಜಕಾರಣದಲ್ಲಿ ಪ್ರತಿಯೊಂದು ಪಕ್ಷಕ್ಕೂ ಅಧಿಕಾರ ಬೇಕು ಮತ್ತು ಅದನ್ನು ಪಡೆಯಲು ಏನೂ ಬೇಕಾದರೂ ಮಾಡಲು ಸಿದ್ಧ ಎಂಬಂತಹ ಮನಸ್ಥಿತಿ ಎಲ್ಲ ರಾಜಕೀಯ ಪಕ್ಷಗಳಲ್ಲೂ ಇರುವುದು ಸಹಜ.
ಭಾರತ ಸರ್ಕಾರ ಕೊಡ ಮಾಡುವ ನಾಲ್ಕು ಅತ್ಯುನ್ನತ ನಾಗರಿಕ ಪ್ರಶಸ್ತಿಗಳೆಂದರೆ ‘ಪದ್ಮಶ್ರೀ’, ‘ಪದ್ಮ ಭೂಷಣ’, ‘ಪದ್ಮವಿಭೂಷಣ’ ಮತ್ತು ‘ಭಾರತ ರತ್ನ’. ಸಾಹಿತ್ಯ, ಸಂಸ್ಕೃತಿ, ಕಲೆ, ವಿಜ್ಞಾನ, ಕ್ರೀಡೆ, ಸಮಾಜ ಸೇವೆ ಮತ್ತು ರಾಜಕಾರಣ ಸೇರಿದಂತೆ ವಿವಿಧ ರಂಗಗಳಲ್ಲಿ ಅಪ್ರತಿಮ ಸಾಧನೆ ಮಾಡಿದವರಿಗೆ ಯೋಗ್ಯತೆಗೆ ತಕ್ಕಂತೆ ಈ ನಾಲ್ಕು ಪ್ರಶಸ್ತಿಗಳನ್ನು ನೀಡಲಾಗುತ್ತದೆ.
೨೦೨೪ರ ಲೋಕಸಭಾ ಚುನಾವಣೆ ತೀರ ಹತ್ತಿರವಿರುವ ಸಂದರ್ಭದಲ್ಲಿ ಬಿಜೆಪಿ ಐವರಿಗೆ ‘ಭಾರತ ರತ್ನ’ ನೀಡಿದೆ. ಈ ಐವರಲ್ಲಿ ಒಬ್ಬರು ಮಾತ್ರ ಕಟ್ಟಾ ಬಿಜೆಪಿಯವರು, ಮತ್ತೊಬ್ಬರು ಕೃಷಿ ವಿಜ್ಞಾನಿ. ಉಳಿದ ಮೂವರು ಈ ಬಾರಿ ಬಿಜೆಪಿಯನ್ನು ಸೋಲಿಸಿ, ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟ ಐ.ಎನ್.ಡಿ.ಐ.ಎ. ಒಕ್ಕೂಟದ ಪೂರ್ವ ಸೂರಿಗಳು! ಬಿಜೆಪಿಯವರು ನಿಜಕ್ಕೂ ಈ ಐವರಿಗೆ ‘ಭಾರತ ರತ್ನ’ ಕೊಡುವ ಮೂಲಕ ಗೌರವ ತೋರಿಸಿರುವುದು ಒಳ್ಳೆಯ ಸಂಗತಿ ಆದರೆ ಇದನ್ನು ಮಾಡಲು ಆಯ್ದುಕೊಂಡ ಸಂದರ್ಭ ಮಾತ್ರ ವಿರೋಧ ಪಕ್ಷಗಳ ಒಕ್ಕೂಟಕ್ಕೆ ಖಂಡಿತವಾಗಿಯೂ ಒಂದು ಮಾಸ್ಟರ್ ಸ್ಟ್ರೋಕ್! ಐ.ಎನ್.ಡಿ ಐ.ಎ. ಒಕ್ಕೂಟಕ್ಕೆ ಈಗ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಬಿಜೆಪಿಯ ಈ ನಿರ್ಧಾರವನ್ನು ಸ್ವಾಗತಿಸುವುದೋ, ವಿರೋಧಿಸುವುದೋ ತಿಳಿಯದೆ ಕಂಗಾಲಾಗಿವೆ. ಐ.ಎನ್.ಡಿ.ಐ.ಎ. ಒಕ್ಕೂಟದ ಪಕ್ಷಗಳು ಶಿಷ್ಟಾಚಾರಕ್ಕೆ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದರೂ ಒಳಗೊಳಗೇ ತೀವ್ರ ತಳಮಳಕ್ಕೀಡಾಗಿವೆ.
ಪೂರ್ವ ಪ್ರಧಾನಮಂತ್ರಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮೊದಲಾದವರು ತಾವು ಅಧಿಕಾರದಲ್ಲಿದ್ದಾಗ, ತಮಗೆ ತಾವೇ ‘ಭಾರತ ರತ್ನ’ ಕೊಟ್ಟುಕೊಂಡ ಅದ್ಭುತ ಇತಿಹಾಸ ನಮ್ಮ ದೇಶದಲ್ಲಿದೆ! ಇಂತಹ ಪರಂಪರೆಯಿರುವ ನಮ್ಮಲ್ಲಿ ವಿರೋಧ ಪಕ್ಷಗಳ ಪೂರ್ವ ಸೂರಿಗಳಿಗೆ ‘ಭಾರತ ರತ್ನ’ ಕೊಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಉತ್ತರ ಪ್ರದೇಶದ ಜಾಟ್ ಸಮುದಾಯದ ರೈತ ನಾಯಕ ಮತ್ತು ಮಾಜಿ ಪ್ರಧಾನಮಂತ್ರಿಗಳಾದ ಚೌಧರಿ ಚರಣ್ ಸಿಂಗ್, ಬಿಹಾರದ ಕ್ಷೌರಿಕ ಸಮುದಾಯಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿಗಳಾದ ಕರ್ಪೂರಿ ಠಾಕೂರ್, ಸಂಯುಕ್ತ ಆಂಧ್ರಪ್ರದೇಶಕ್ಕೆ ಸೇರಿದ, ಬ್ರಾಹ್ಮಣ ಸಮುದಾಯದ ಮಾಜಿ ಪ್ರಧಾನಮಂತ್ರಿಗಳಾದ ಪಿ. ವಿ. ನರಸಿಂಹರಾವ್ ಮತ್ತು ತಮಿಳುನಾಡಿಗೆ ಸೇರಿದ ಕೃ಼ಷಿ ವಿಜ್ಞಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರರಾದ ಎಂ. ಎಸ್. ಸ್ವಾಮಿನಾಥನ್ ಅವರಿಗೆ ಪ್ರಶಸ್ತಿ ಘೋಷಿಸಿರುವುದರ ಹಿಂದೆ ಭಾರತದ ಉತ್ತರ, ದಕ್ಷಿಣದಲ್ಲಿರುವ ಪ್ರಾದೇಶಿಕ ಅಸಮಾನತೆ ನಿವಾರಿಸುವುದರೊಂದಿಗೆ, ಓಟ್ ಬ್ಯಾಂಕ್ ಆಗಿ ಪರಿವರ್ತನೆಯಾಗಬಲ್ಲ ಜಾತಿ ಲೆಕ್ಕಾಚಾರ ಮತ್ತು ಐ.ಎನ್.ಡಿ.ಐ.ಎ. ಒಕ್ಕೂಟದ ಮೈತ್ರಿಗೆ ಬಲವಾದ ಪೆಟ್ಟು ಕೊಡುವ ಯತ್ನವೂ ಸೇರಿದೆ. ಈಗಾಗಲೇ ಬಿಜೆಪಿಯ ಈ ಲೆಕ್ಕಾಚಾರ ಧನಾತ್ಮಕ ಪರಿಣಾಮ ಬೀರಲು ಆರಂಭಿಸಿದೆ!
ಇರಲಿ, ಬಿಜೆಪಿಯ ರಾಜಕೀಯ ಲೆಕ್ಕಾಚಾರಗಳೇನೇ ಇದ್ದರೂ, ೨೦೨೪ರಲ್ಲಿ ‘ಭಾರತ ರತ್ನ’ ಪಡೆದ ಐವರು ಮಹನೀಯರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಈ ಐವರು ಮಹನೀಯರ ಕುರಿತ ತೀರ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಚೌಧರಿ ಚರಣ್ ಸಿಂಗ್ (೧೯೦೨-೧೯೮೭)
ರೈತರ ಪ್ರಧಾನಮಂತ್ರಿಯೆಂದೇ ಖ್ಯಾತಿ ಪಡೆದ ಚೌಧರಿ ಚರಣ್ ಸಿಂಗ್ ಉತ್ತರ ಪ್ರದೇಶದ ಜಾಟ್ ಸಮುದಾಯಕ್ಕೆ ಸೇರಿದವರು. ಸಾಮಾನ್ಯ ರೈತ ಕುಟುಂಬಕ್ಕೆ ಸೇರಿದ ಚರಣ್ ಸಿಂಗ್ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಹತ್ತು ಹಲವು ಸಲ ಜೈಲುವಾಸ ಅನುಭವಿಸಿದವರು. ಗಾಂಧಿ ಅನುಯಾಯಿಯಾದ ಅವರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕೆ ೧೨ ವರ್ಷಗಳ ಕಾಲ ಜೈಲು ಶಿಕ್ಷೆಯಾಗಿತ್ತು. ೧೯೪೦ರಲ್ಲಿ ವೈಯಕ್ತಿಕ ಸತ್ಯಾಗ್ರಹದ ಕಾರಣಕ್ಕಾಗಿ ಮತ್ತೆ ಒಂದು ವರ್ಷ ಜೈಲು ಶಿಕ್ಷೆಗೆ ಒಳಗಾಗಬೇಕಾಯಿತು. ೧೯೪೨ರಲ್ಲಿ ಮತ್ತೊಮ್ಮೆ ಜೈಲಿಗೆ ಹೋದ ಅವರು ೧೯೪೩ರಲ್ಲಿ ಬಿಡುಗಡೆಯಾದರು. ಜೈಲಿನಲ್ಲಿ ಸುಖವಾಗಿ ಕಾಲ ಹಾಕುತ್ತ ಇತಿಹಾಸ ಮತ್ತು ಆತ್ಮಕಥನ ಬರೆದ ಭಾರತದ ಇತರೆ ನಾಯಕರಿಗಿಂತ ತುಂಬ ಭಿನ್ನ ವ್ಯಕ್ತಿ ಚರಣ್ ಸಿಂಗ್. ಕ್ರಾಂತಿ ದಳ, ಲೋಕ ದಳ ಮತ್ತು ಜನತಾ ದಳದ ಪ್ರಭಾವೀ ನಾಯಕರಾಗಿದ್ದ ಚರಣ್ ಸಿಂಗ್ ಉತ್ತರ ಪ್ರದೇಶದ ಐದನೆಯ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಎರಡು ಬಾರಿ ಮುಖ್ಯಮಂತ್ರಿಯಾದರೂ ಅವರಿಗೆ ಬಹು ದಿನಗಳ ಕಾಲ ಅಧಿಕಾರದಲ್ಲಿರಲು ಸಾಧ್ಯವಾಗಲಿಲ್ಲ. ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ಅಲ್ಪಾವಧಿಗೆ ಗೃಹ ಮಂತ್ರಿಯಾದ ಅವರು ಭಾರತದ ಪ್ರಧಾನಮಂತ್ರಿಯಾಗಿಯೂ ಸಹ ಅತ್ಯಲ್ಪ ಕಾಲ ಮಾತ್ರ ಅಧಿಕಾರದಲ್ಲಿದ್ದರು. ಯಾವುದೇ ದೊಡ್ಡ ಹುದ್ದೆಯಲ್ಲೂ ಪೂರ್ಣಾವಧಿ ಸೇವೆ ಸಲ್ಲಿಸಲಾಗದಿದ್ದರೂ ಸಹ ಚರಣ್ ಸಿಂಗ್ ಆದರ್ಶಗಳನ್ನಿಟ್ಟುಕೊಂಡು ರಾಜಕೀಯ ಮಾಡಿದ ಪ್ರಾಮಾಣಿಕ ವ್ಯಕ್ತಿ. ಗಾಂಧೀಜಿ ಅವರ ಅನುಯಾಯಿಯಾದ ಅವರು ಗ್ರಾಮ ಸ್ವರಾಜ್ಯ ಮತ್ತು ಕೃಷಿ ಅಭಿವೃದ್ಧಿಗೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಉತ್ತರ ಪ್ರದೇಶ ಮತ್ತು ಭಾರತದ ಕೃಷಿ ಹಾಗೂ ಆರ್ಥಿಕಾಭಿವೃದ್ಧಿಯ ಕುರಿತು ಅವರು ಇಂಗ್ಲಿಷಿನಲ್ಲಿ ಕೆಲವು ಒಳ್ಳೆಯ ಪುಸ್ತಕಗಳನ್ನು ಸಹ ಬರೆದಿದ್ದಾರೆ.
ಪಿ. ವಿ. ನರಸಿಂಹ ರಾವ್ (೧೮೨೧-೨೦೦೪)
ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ರೂವಾರಿಯಾದ ಪಾಮುಲಪರ್ತಿ ವೆಂಕಟ ನರಸಿಂಹರಾವ್ ಬಹುಭಾಷಾ ವಿಶಾರದರು. ರಾಜಕಾರಣದಂತೆಯೇ ಸಾಹಿತ್ಯ, ಸಂಸ್ಕೃತಿ, ಸಂಗೀತ ಮತ್ತು ಕಲಾಕ್ಷೇತ್ರದಲ್ಲಿ ಅಪಾರ ತಿಳುವಳಿಕೆಯುಳ್ಳ ಮುತ್ಸದ್ದಿ ನರಸಿಂಹರಾವ್. ತೊಂಬತ್ತರ ದಶಕದ ಸಂಕ್ರಮಣ ಕಾಲಘಟ್ಟದಲ್ಲಿ ಪ್ರಧಾನಮಂತ್ರಿಯಾಗಿ ಭಾರತದ ಆರ್ಥಿಕತೆಯನ್ನು ಜಾಗತೀಕರಣಕ್ಕೆ ತೆರೆದುಕೊಳ್ಳುವಂತೆ ಮಾಡುವ ದಿಟ್ಟ ನಿರ್ಧಾರ ಕೈಗೊಂಡರು. ಭಾರತದ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇಂತಹುದೊಂದು ದಿಟ್ಟ ಹೆಜ್ಜೆಯಿಡುವ ಅಗತ್ಯವಿತ್ತು.
ದಕ್ಷ ಆಡಳಿತಗಾರರಾಗಿದ್ದ ನರಸಿಂಹರಾವ್ ಸ್ವತಂತ್ರ ಭಾರತದಲ್ಲಿ ನೆಹರು ಕುಟುಂಬದ ವ್ಯಕ್ತಿ ಹೊರತು ಪಡಿಸಿ ಐದು ವರ್ಷ ಪೂರೈಸಿದ ಮೊದಲ ಪ್ರಧಾನಮಂತ್ರಿಯೂ ಹೌದು. ವಂಶಪಾರಂಪರ್ಯ ಆಡಳಿತದ ಕೆಟ್ಟ ಸಂಪ್ರದಾಯದ ವಿರುದ್ಧವಾಗಿ ಹೋರಾಡಬೇಕಾದ ಈ ಕಾಲದಲ್ಲಿ ವಂಶಪಾರಂಪರ್ಯ ಆಡಳಿತವನ್ನು ಬೆಂಬಲಿಸುವ ಬುದ್ಧಿಜೀವಿಗಳಿಗೆ ಇದು ಅರ್ಥವಾಗದು. ಇರಲಿ, ಸಂಯುಕ್ತ ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಒಳ್ಳೆಯ ಸೇವೆ ಸಲ್ಲಿಸಿದ ನರಸಿಂಹರಾವ್ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಪ್ರಧಾನಮಂತ್ರಿ ಅವಧಿ ಮುಗಿದ ನಂತರ ಕಾಂಗ್ರೆಸ್ ಪಕ್ಷ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಫೀಸು ಕಟ್ಟಲು ಸಾಲ ಮಾಡಿದ ವ್ಯಕ್ತಿ ನರಸಿಂಹರಾವ್. ಕೊನೆಗೆ ಅವರು ತಮ್ಮ ಮನೆ ಮಾರಿ ಸಾಲಬಾಧೆಯಿಂದ ಪಾರಾದರು. ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚು ಮಾಡುವ ಸಾಧಾರಣ ಶಾಸಕ, ಸಂಸದರಿರುವ ಈ ಕಾಲದಲ್ಲಿ ನರಸಿಂಹರಾವ್ ಅವರ ಪ್ರಾಮಾಣಿಕತೆ ಅನುಕರಣೀಯವಾದುದು.
ಕರ್ಪೂರಿ ಠಾಕೂರ್ (೧೯೨೪-೧೯೮೮)
ಜನನಾಯಕ ಎಂದೇ ಖ್ಯಾತಿ ಪಡೆದ ಕರ್ಪೂರಿ ಠಾಕೂರ್ ಬಿಹಾರದ ತೀರ ಹಿಂದುಳಿದ ನಾಯಿ (ಕ್ಷೌರಿಕ) ಸಮುದಾಯಕ್ಕೆ ಸೇರಿದ ವ್ಯಕ್ತಿ. ಪಕ್ಕಾ ಸಮಾಜವಾದಿಯಾದ ಅವರು ಜಯಪ್ರಕಾಶ ನಾರಾಯಣ ಮತ್ತು ಲೋಹಿಯಾ ಅವರಂತಹ ಮಹಾನಾಯಕರ ಗರಡಿಯಲ್ಲಿ ಬೆಳೆದವರು. ಚರಣ್ ಸಿಂಗ್ ಅವರ ಜೊತೆ ಸೇರಿ ಕ್ರಾಂತಿ ದಳ, ಲೋಕ ದಳ ಮತ್ತು ಜನತಾ ದಳಕ್ಕೆ ಹಿಂದಿ ಹೃದಯಭಾಗದ ಉತ್ತರ ಪ್ರದೇಶ (ಉತ್ತರಾಖಂಡ್ ಸೇರಿದಂತೆ) ಮತ್ತು ಬಿಹಾರ (ಜಾರ್ಖಂಡ್ ಸೇರಿದಂತೆ) ರಾಜ್ಯಗಳಲ್ಲಿ ಭದ್ರ ಬುನಾದಿ ಹಾಕಿದ ಶ್ರೇಯಸ್ಸು ಠಾಕೂರರಿಗೆ ಸಲ್ಲಬೇಕು.
ದೀನ ದಲಿತರು ಮತ್ತು ಬಡವರ ಏಳಿಗೆಗಾಗಿ ಶ್ರಮಿಸಿದ ಅವರು ಒಂದು ಬಾರಿ ಕಾರ್ಮಿಕರ ಸಲುವಾಗಿ ಸತತ ೨೮ ದಿನಗಳ ಕಾಲ ಉಪವಾಸ ಕುಳಿತಿದ್ದರು. ಬಿಹಾರದ ಹನ್ನೊಂದನೆಯ ಮುಖ್ಯಮಂತ್ರಿಯಾದ ಅವರು ಒಟ್ಟು ಎರಡು ಬಾರಿ ಮೂರು ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ತುಂಬ ಸರಳ ವ್ಯಕ್ತಿಯಾದ ಅವರು ಸಾಮಾನ್ಯ ಜನತೆಯ ನಡುವೆ ಅಪಾರ ಜನಪ್ರಿಯತೆ ಪಡೆದ ರಾಜಕಾರಣಿಯಾಗಿದ್ದರು. ಲಾಲೂ ಪ್ರಸಾದ್ ಯಾದವ್, ದೇವೇಂದ್ರ ಪ್ರಸಾದ್ ಯಾದವ್, ರಾಮ್ ವಿಲಾಸ್ ಪಾಸ್ವಾನ್ ಮತ್ತು ನಿತೀಶ್ ಕುಮಾರರ ಗುರು ಕರ್ಪೂರಿ ಠಾಕೂರರು. ದುರ್ದೈವವಶಾತ್ ಇವರಾರೂ ಗುರುವಿನ ಹೆಸರು ಉಳಿಸುವ ಶಿಷ್ಯರಾಗಲಿಲ್ಲ. ಎಂತಹ ಗುರುವಿಗೆ ಎಂತಹ ಶಿಷ್ಯರು!
ಲಾಲ್ ಕೃಷ್ಣ ಅಡ್ವಾಣಿ (೧೯೨೭)
ಬಿಜೆಪಿಯ ಭೀಷ್ಮರೆಂದೇ ಖ್ಯಾತರಾದ ಲಾಲ್ ಕೃಷ್ಣ ಅಡ್ವಾಣಿ ಬರೀ ಬಿಜೆಪಿ ಮಾತ್ರವಲ್ಲ ಭಾರತೀಯ ರಾಜಕಾರಣದ ಭೀಷ್ಮರೂ ಹೌದು. ರಾಜಕೀಯ ಭಿನ್ನಾಭಿಪ್ರಾಯಗಳೇನೇ ಇದ್ದರೂ ಅದನ್ನೆಲ್ಲ ಮೀರಿಯೂ ಗೌರವ ಹುಟ್ಟಿಸುವಂತಹ ವ್ಯಕ್ತಿತ್ವ ಅಡ್ವಾಣಿಯವರದು. ಸದಾ ರಾಮನಾಮ ಜಪಿಸುವ ಬಿಜೆಪಿಯವರು ಪ್ರಭು ಶ್ರೀರಾಮ ಮತ್ತು ರಾಮಾಯಣವನ್ನು ಎಷ್ಟು ಅನುಸರಿಸುತ್ತಾರೋ ಗೊತ್ತಿಲ್ಲ ಆದರೆ ಅಡ್ವಾಣಿಯವರ ಮೇಲೆ ಮಾತ್ರ ರಾಮಾಯಣದ ಪ್ರಭಾವ ಚೆನ್ನಾಗಿ ಆಗಿದೆ. ಬಿಜೆಪಿಗೆ ಭದ್ರ ಬುನಾದಿ ಹಾಕಿಕೊಟ್ಟ ಅವರು ಎಂದೂ ಅಧಿಕಾರಕ್ಕಾಗಿ ಹಾತೊರೆದವರಲ್ಲ. ದಿ. ಅಟಲ್ ಬಿಹಾರಿ ವಾಜಪೇಯಿ ಅವರನ್ನು ರಾಮನ ಸ್ಥಾನದಲ್ಲಿರಿಸಿ ತಾವು ಅವರನ್ನು ಲಕ್ಷ್ಮಣನಂತೆ ಅನುಸರಿಸಿದ ಸಾತ್ವಿಕ ಮತ್ತು ನಿಸ್ವಾರ್ಥಿ ವ್ಯಕ್ತಿ ಅಡ್ವಾಣಿ.
ರಥಯಾತ್ರೆಯ ಮೂಲಕ ದೇಶದಾದ್ಯಂತ ಬಿಜೆಪಿ ಪರ ಅಲೆ ಹುಟ್ಟುವಂತೆ ಮಾಡಿದ ಅಡ್ವಾಣಿ, ಬಿಜೆಪಿ ಅಧಿಕಾರಕ್ಕೆ ಬಂದಾಗ ದಿ. ವಾಜಪೇಯಿ ಅವರು ಪ್ರಧಾನ ಮಂತ್ರಿಯಾಗುವಂತೆ ಮಾಡಿದರು. ಗೃಹ ಮಂತ್ರಿ ಮತ್ತು ಉಪ ಪ್ರಧಾನಮಂತ್ರಿಯಾಗಿ ತುಂಬ ಒಳ್ಳೆಯ ಕೆಲಸ ಮಾಡಿದ ಅವರು ಬಿಜೆಪಿಗೆ ಮತ್ತು ನಾಡಿಗೆ ನೀಡಿದ ಕೊಡುಗೆ ಅಪಾರ. ಭಾರತೀಯರ ಶತಮಾನಗಳ ಕನಸಾದ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ, ತೊಂಬತ್ತಾರರ ಹರೆಯದಲ್ಲಿರುವ ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ಗೌರವವಾದ ‘ಭಾರತ ರತ್ನ’ ಪ್ರಾಪ್ತವಾಗಿರುವುದು ಸಮಯೋಚಿತವಾಗಿದೆ.
ಎಂ. ಎಸ್. ಸ್ವಾಮಿನಾಥನ್ (೧೯೨೫-೨೦೨೩)
ಹಸಿರು ಕ್ರಾಂತಿಯ ಹರಿಕಾರರೆಂದೇ ಖ್ಯಾತಿ ಪಡೆದವರು ಎಂ. ಎಸ್. ಸ್ವಾಮಿನಾಥನ್. ತಮಿಳುನಾಡು ಮೂಲದ ಕೃಷಿ ವಿಜ್ಞಾನಿಯಾದ ಅವರು ಭಾರತೀಯ ಮತ್ತು ಪ್ರಪಂಚದ ಕೃಷಿ ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅರವತ್ತರ ದಶಕದಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ (ಬಾಂಗ್ಲಾ ಆಗ ಪೂರ್ವ ಪಾಕಿಸ್ತಾನವಾಗಿತ್ತು) ಆಹಾರೋತ್ಪಾದನೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಖ್ಯಾತ ಕೃಷಿ ವಿಜ್ಞಾನಿ ನಾರ್ಮನ್ ಬೋರ್ಲಾಗ್ ಅವರ ಜೊತೆ ಸೇರಿ ಕೃಷಿ ಉತ್ಪಾದನೆ ಹೆಚ್ಚಿಸಲು ಮಾಡಿದ ಪ್ರಯೋಗಗಳು ಭಾರತ ಮತ್ತು ಪಾಕಿಸ್ತಾನವನ್ನು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ಮಾಡಿದವು.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಹೆಚ್ಚಿನ ಇಳುವರಿ ನೀಡುವ ವಿವಿಧ ಗೋಧಿ ತಳಿಗಳನ್ನು ಬೆಳೆಸುವ ಪ್ರಯೋಗ ಮಾಡಿದ ಸ್ವಾಮಿನಾಥನ್ ಅದರಲ್ಲಿ ಅದ್ಭುತ ಯಶಸ್ಸು ಕಂಡರು. ಅತ್ಯಧಿಕ ಇಳುವರಿ ಕೊಡುವ ತಳಿಗಳನ್ನು ಪರಿಚಯಿಸುವ ಮೂಲಕ ಆಹಾರೋತ್ಪಾದನೆ ಆಮೂಲಾಗ್ರ ಹೆಚ್ಚಾಗುವಂತೆ ಮಾಡಿದ ಸ್ವಾಮಿನಾಥನ್ ಅವರನ್ನು ಜಾಗತಿಕ ಹಸಿರು ಕ್ರಾಂತಿಯ ನಾಯಕರೆಂದೇ ಕರೆಯಲಾಗುತ್ತದೆ.
ಸ್ವಾಮಿನಾಥನ್ ಅವರಿಗೆ ೧೯೮೭ರಲ್ಲಿ ಕೃಷಿ ವಿಜ್ಞಾನ ಕ್ಷೇತ್ರದ ನೊಬೆಲ್ ಎಂದೇ ಕರೆಯಲ್ಪಡುವ ವರ್ಲ್ಡ್ ಫುಡ್ ಪ್ರೈಜ್ ದೊರೆತಿದೆ. ‘ಪದ್ಮಶ್ರೀ’, ‘ಪದ್ಮ ಭೂಷಣ’, ‘ಪದ್ಮ ವಿಭೂಷಣ’ ಮತ್ತು ‘ಭಾರತ ರತ್ನ’ ಹೀಗೆ ಎಲ್ಲ ನಾಲ್ಕು ಪ್ರಶಸ್ತಿ ಪಡೆದ ಮೂರನೆಯ ವಿಜ್ಞಾನಿ ಸ್ವಾಮಿನಾಥನ್. ಉಳಿದ ಇಬ್ಬರು ಡಾ ಎ. ಪಿ. ಜೆ. ಅಬ್ದುಲ್ ಕಲಾಂ ಮತ್ತು ಡಾ. ಸಿ. ಎನ್. ಆರ್. ರಾವ್. ಅರವತ್ತರ ದಶಕದಲ್ಲಿ ಹಸಿರು ಕ್ರಾಂತಿ ನಡೆದಾಗ ಕೃಷಿ ಮಂತ್ರಿಯಾಗಿದ್ದ ಸಿ. ಸುಬ್ರಹ್ಮಣ್ಯಂ ಅವರಿಗೆ ೧೯೯೮ರಲ್ಲೇ ‘ಭಾರತ ರತ್ನ’ ದೊರೆಯಿತು. ಇರಲಿ, ಸ್ವಾಮಿನಾಥನ್ ಅವರಿಗೆ ಎಂದೋ ಸಿಗಬೇಕಿದ್ದ ‘ಭಾರತ ರತ್ನ’ ಈಗಲಾದರೂ ದೊರೆತದ್ದು ಸಮಾಧಾನದ ಸಂಗತಿ.
1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಪ್ರಶಸ್ತಿ, ಪ್ರಭುತ್ವ ಮತ್ತು ರಾಜಕೀಯ”
ಅಭಿನಂದನೆಯ ಅಪೇಕ್ಷೆಯಿಲ್ಲದ, ಲಕ್ಷ್ಯಪೂರ್ವಕ ಕ್ಷ ಕಿರಣ ಬೀರಿದ, ಶ್ಲಾಘನೀಯ ಲೇಖನ!