ನೋಟಕೆಟುಕಿದ ಹಿಡಿ ನೀಲಿಯೇ ಸಾಕು
ಎದೆಯ ಅಂಗಳವ ತುಂಬಿಕೊಳ್ಳಲು
ಮತ್ತೆ ಹರಡಿಕೊಳ್ಳಬೇಕು
ಎದೆಯಂಗಳದ ಆ ನೀಲಿ ಬಯಲಲಿ
ಇಡೀ ವಿಶ್ವವ
ಆಗ,
ಇರಲಿಕ್ಕಿಲ್ಲ
ಸೂರ್ಯ ಮುಳುಗುವ ಆತಂಕ
ಕತ್ತಲು ಆವರಿಸುವ ಭಯ
ಆಗ,
ತುಂಬು ಚಂದ್ರನ ಶೀತಲ ಬೆಳ್ದಿಂಗಳು
ಅಸಂಖ್ಯ ಚುಕ್ಕಿಗಳ ಹೊಳಪು
ಸದಾ ಮುದ ನೀಡಬಹುದು
ಆಗ,
ಅನುಭವಿಸಬಹುದು
ಮೋಡ ಜಡವಾಗಿ ಹಗುರಾಗುವುದ
ತಂಗಾಳಿ ಬೀಸಿ ಬೇಗೆ ಕಳೆಯುವುದ
ಹಕ್ಕಿಗಳು ಗರಿಗೆದರಿ ಮುಗಿಲು ಅಳೆಯುವುದ
ಆಗ,
ಸುಖಿಸಬಹುದು
ಬಂಜರು ಹಸಿರಾಗುವ ಸೋಜಿಗಕೆ
ಚಿಗುರೊಡೆದು ಫಲ ತೊನೆವ ಕಾಡ ವೈಭವಕೆ
ಆಗ ನಾವು
ಎಲ್ಲರೆದೆಯ ಹಿಡಿ ನೀಲಿಯ ಸುರಿದು
ಇಡೀ ವಿಶ್ವವನೇ ತುಂಬಿಬಿಡಬಹುದು
ಮತ್ತೆ ಪ್ರೀತಿಗೆ ಬರವೆಲ್ಲಿ?