ಧಾರವಾಡದ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯು ನೀಡುವ ೨೦೨೩ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗೆ ಶ್ರೀಮತಿ ಕಾವ್ಯ ಕಡಮೆಯವರ ‘ತೊಟ್ಟು ಕ್ರಾಂತಿ’ ಕಥಾಸಂಕಲನದ ಹಸ್ತಪ್ರತಿಯು ಆಯ್ಕೆಯಾಗಿದೆ.
ಖ್ಯಾತ ಲೇಖಕರಾದ ಡಾ. ನಾ. ದಾಮೋದರ ಶೆಟ್ಟಿ ಮತ್ತು ಡಾ. ಶ್ರೀಧರ ಬಳಗಾರ ಅವರು ತೀರ್ಪುಗಾರರಾಗಿದ್ದ ಇಬ್ಬರು ತೀರ್ಪುಗಾರರ ಸಮಿತಿಯು ಈ ಕಥಾಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸ್ಪರ್ಧೆಗೆ ಬಂದಿದ್ದ ನಲವತ್ತಕ್ಕೂ ಹೆಚ್ಚಿನ ಹಸ್ತಪ್ರತಿಗಳ ಪೈಕಿ ಶ್ರೀ ಲಿಂಗರಾಜ ಸೊಟ್ಟಪ್ಪನವರ ಅವರ ‘ಕೆಂಪು ನದಿ’, ಶ್ರೀಮತಿ ಮಧುರಾ ಕರ್ಣಂ ಅವರ ‘ಬೌದ್ಧಾವತಾರ’ ಮತ್ತು ಶ್ರೀಮತಿ ಅಕ್ಷತಾ ರಾಜ್ ಪೆರ್ಲ ಅವರ ‘ನಿನ್ನಿಕಲ್ಲು’ ಕಥಾಸಂಕಲನದ ಹಸ್ತಪ್ರತಿಗಳು ಕೊನೆಯ ಸುತ್ತನ್ನು ಪ್ರವೇಶಿಸಿದ್ದವು.
ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಮಹಾಪೋಷಕರಾದ ಡಾ. ಪ್ರಭಾಕರ್ ಎಚ್. ಸಿ, ಸಂಚಾಲಕರಾದ ಶ್ರೀ ವಿಕಾಸ ಹೊಸಮನಿ ಮತ್ತು ವೇದಿಕೆಯ ಸದಸ್ಯರು ಕಥಾ ಪ್ರಶಸ್ತಿ ಸ್ಪರ್ಧೆಯಲ್ಲಿ ವಿಜೇತರಾದ, ಅಂತಿಮ ಸುತ್ತು ಪ್ರವೇಶಿಸಿದ ಮತ್ತು ಭಾಗವಹಿಸಿದ ಕಥೆಗಾರರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.