ನೀತಿ ಪ್ರತೀತಿ – ವಿಭಾ ಪುರೋಹಿತ ಅಂಕಣl ಕನಸು ತೋರುವ ಗಮ್ಯದೆಡೆಗೆ

ಒಂದು ರಾತ್ರಿ ಹನ್ನೆರಡು ಗಂಟೆ ಸಮಯ ನಾನು ಓದುತ್ತಾ ಕುಳಿತಿದ್ದೆ, ಮನೆಯಲ್ಲಿ ಎಲ್ಲರೂ ಮಲಗಿದ್ದರು. ಅಪ್ಪ ನಿದ್ದೆಯಲ್ಲಿ ಬಡಬಡಿಸಲು ಶುರು ಮಾಡಿದರು. ನಾನು ಅಪ್ಪನನ್ನು ಎಚ್ಚರಿಸಿದೆ. ಆಗ ಅಪ್ಪ ಹೇಳಿದರು “ರೈಲು ತಪ್ಪಿಹೋಯ್ತು, ನಾನು ಪ್ಲಾಟ್ ಫಾರ್ಮ್ ನಲ್ಲಿದ್ದೆ ಅಂತ ಕನಸು ಬಿದ್ದಿತ್ತು” ಎಂದರು. ಮರುದಿನವೂ ರಾತ್ರಿ ಹೀಗೆ ನಿದ್ದೆಯಲ್ಲಿ ಬಡಬಡಿಸಿದರು ಏನು ಎಂದು ಕೇಳಿದಾಗ ಕಳ್ಳ ಬಂದಿದ್ದ ಎಂದರು. ನಾನು ನಕ್ಕೆ , “ಬಿಡಪ್ಪ ನಾವೇನು ಅಷ್ಟೊಂದು ಶ್ರೀಮಂತರಲ್ಲ ನಮ್ಮನಿಗ್ಯಾಕ ಬರ್ತಾರ ಕಳ್ಳರು?” ಎಂದೆ. ಅಪ್ಪ “ಹಕನಾಕ ಸಣ್ಣಪುಟ್ಟ ಕಳ್ರು,ದುಡಕೊಂಡು ತಿನ್ನಲಿಕ್ಕೆ ವಲ್ಲರ್ರು, ಇದ್ದದ ಪಾತ್ರಿ-ಪಗಡಿ , ಬಟ್ಟಿ- ಬರಿ ತಗೊಂಡು ಹೋಗ್ತಾರ” ಅಂದ್ರು.

ಒಂದ ಕ್ಷಣಕ್ಕ ಅಪ್ಪನ ಮಾತು ನನಗೂ ಖರೆ ಅನ್ನುಸ್ತು . ಮನಿ ಕಳವು ಆದದ್ದ ಸುದ್ದಿ ಕೇಳಿರತಾರ ಅದನ್ನ ವಿಚಾರ ಮಾಡಿ, ಅದ ಕನಸು ಬೀಳತಾವ ಅಲ್ಲೇನು? ಆದರೆ ಈ ಕನಸಿನ ವಿಷಯ ನನ್ ತಲೆ ಒಳಗ ಹೊಕ್ಕ ಬಿಟ್ಟಿತ್ತು. ಏನಿದು ಹಕ್ಕಿಕತ್ತು ಅಂತ ? ಅನ್ನಿಸತು. ಕೆಲವರ ಕನಸು ಖರೆ ಆಗ್ತಾವಂತ ! ಮುಂದಿನ ಭವಿಷ್ಯ ಕನಿಸಿನ್ಯಾಗ ಕಾಣ್ತಾರಂತ ಕೆಲವರು. ಇಂಥದ್ದು ಕೇಳಿದ್ರ ಮೈ ಝುಂಮ್ ಅಂತ ರೋಮಾಂಚನ ಆಗ್ತದ. ಹಂಗ ಸ್ವಲ್ಪ ದಿನ ಆದ ಮ್ಯಾಲ ಒಂದ ರಾತ್ರಿ ಮಾವನವರು ಬಡಬಡಿಸುತ್ತಿದ್ದರು. ಏನೆಂದು ಕೇಳಿದಾಗ “ನಮ್ಮವ್ವ ಕನಿಸಿನ್ಯಾಗ ಬಂದಿದ್ದಳು” ಎಂದರು. ನಂಗ ಅಗದಿ ಆಶ್ಚರ್ಯ ಅನಿಸ್ತು. ಅವರ ತಾಯಿ ವೈಕುಂಠಕ್ಕ ಹೋಗಿ 30 ವರ್ಷಗಳಾದರೂ ತಾಯಿ ನೆನಪು ಅವ್ರ ಸುಪ್ತಪ್ರಜ್ಞೆಯಲ್ಲಿದೆ. ಗಂಡಸರಿಗೆ ಭಾಳ ಕನಸಿನ ಕಾಟ ಯಾಕಿರಬಹುದು ? ಹೆಂಗಸರಿಗೂ ಕನಸು ಬೀಳತಾವ ಆದ್ರ ಯಾವಾಗರ ಒಮ್ಮೆ , ಅದೂ ಹೇಳಲಿಕ್ಕೆ ಬರೂದಿಲ್ಲ. ಒನ್ನಮೂನಿ ಹಳವಂಡ ! ಯದಕೂ ಲಿಂಕ ಇರೂದಿಲ್ಲ . ಅದಕ್ಕ ನನ್ನ ಅಮ್ಮ, ಅತ್ತಿ ” ರಿಟಾಯರ್ಮೆಂಟ್ ಆದ ಮ್ಯಾಲ ಗಂಡಸರಿಗೆ ಕೆಲಸ ಇರೂದಿಲ್ಲ, ಇಲ್ಲದ್ದ ವಿಚಾರಾ ಮಾಡಿಕೋತ ಕೂಡತಾರ, ನಮ್ಮ ಹೆಣಮಕ್ಕಳ ನಸೀಬಕ್ಕ ರಿಟಾಯರ್ಮೆಂಟ್ ಅಂಬುದ ಇಲ್ಲ. ಎಂದು ಅಲವತ್ತುಕೊಂಡರು.

ಇಂಥ ಅನುಭವ ಸಾಧಾರಣ ಎಲ್ಲಾರಿಗೂ ಆಗಿರ್ತದ. ಹೌದಲ್ಲೊ? ಹಂಗಂದ್ರ ಈ ಕನಸು ಅಂದ್ರ ಏನು, ಯಾಕ ಬೀಳತಾವ ಅಂತ ಚೂರು ತಿಳಕೋಳೂಣ ಬರ್ರಿ. ಕನಸುಗಳು ನಿದ್ರೆ ಸಮಯದಲ್ಲಿ ವ್ಯಕ್ತಿಯ ಮನಸ್ಸಿನಲ್ಲಿ ಸಂಭವಿಸುವ ಆಲೋಚನೆಗಳು ಚಿತ್ರಗಳು ಮತ್ತು ಸಂವೇದನೆಗಳ ಸರಣಿಯಾಗಿದೆ. ಕನಸಿನಲ್ಲಿ ನಾನಾ ವಿಧಗಳಿವೆ. ಹಗಲುಗನಸು , ಇರುಳುಗನಸು ಸ್ಪಷ್ಟ ಕನಸು, ದುಷ್ಟಕನಸು (ದು:ಸ್ವಪ್ನಗಳು) ಇತ್ಯಾದಿ . ನಾವು ಏಕೆ ಕನಸು ಕಾಣುತ್ತೇವೆ ಎಂದು ಕನಸಿನ ನಿಖರವಾದ ಉದ್ದೇಶವನ್ನು ಇನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ. ಆದರೆ ಈ ನಿಟ್ಟಿನಲ್ಲಿ ಹಲವಾರು ಸಿದ್ಧಾಂತಗಳು ಹೊರಬಂದಿವೆ ಎಂದು ತಜ್ಞರು ಹೇಳುತ್ತಾರೆ. ಕನಸಿನಲ್ಲಿಯ ಚಿಹ್ನೆಗಳು ಮತ್ತು ವಿಷಯಗಳು ಕನಸುಗಾರನ ಸುಪ್ತಾವಸ್ಥೆಯ ಆಲೋಚನೆಗಳು ಮತ್ತು ಭಾವನೆಗಳನ್ನು ಪ್ರದರ್ಶಿಸುತ್ತವೆ.

ವ್ಯಕ್ತಿಯ ಭಾವನೆಗಳು, ಅನುಭವಗಳು ಮತ್ತು ಉಪಪ್ರಜ್ಞೆ ಆಸೆಗಳನ್ನು ಒಳಗೊಂಡಂತೆ ವಿವಿಧ ಅಂಶಗಳಿಂದ ಕನಸುಗಳು ಪ್ರಭಾವಿತವಾಗಬಹುದು. “ಯದ್ಭಾವಂ ತದ್ಭವತಿ:” ಅನ್ನುವ ಹಂಗ. ಕನಸುಗಾರನ ಸಂಸ್ಕೃತಿ ಮತ್ತು ವೈಯಕ್ತಿಕ ಅನುಭವಗಳಿಂದಲೂ ಕನಸುಗಳು ಪ್ರಭಾವಿತವಾಗುತ್ತವೆ. ಕನಸುಗಾರ ಮಲಗುವ ಮುನ್ನ ಏನು ತಿನ್ನುತ್ತಾನೆ, ಏನು ಮಾತನಾಡುತ್ತಾನೆ , ಏನು ನೋಡುತ್ತಾನೆ ಮತ್ತು ಯಾರ ಕುರಿತು ಯೋಚಿಸುತ್ತಾನೆ…..ಹೀಗೆ ಇವೆಲ್ಲ ಅಂಶಗಳು ಕನಸಿನ ಮೇಲೆ ಪ್ರಭಾವ ಬೀರುತ್ತವೆ.

ಹಾಗಾದರೆ ಮನುಷ್ಯರಷ್ಟೇ ಕನಸು ಕಾಣುತ್ತಾರಾ? ಪ್ರಾಣಿಗಳಿಗೆ ಕನಸು ಬೀಳುವುದಿಲ್ಲವೇ? ನಾಯಿ, ಬೆಕ್ಕು, ಹಸು ಮುಂತಾದವುಗಳು ಕೂಡ ಕನಸು ಕಾಣುತ್ತವೆ. ಆದರೆ ತಾವು ಕಂಡ ಕನಸನ್ನು ನಮ್ಮಂತೆ ವಿವರಿಸಲಾರವು. ಮಾತಿನಿಂದ ಅಭಿವ್ಯಕ್ತಿ ನೀಡಲಾರವು. ಮನುಷ್ಯನ ಸಂಗತಿ ಹಾಗಲ್ಲ . ಮನುಷ್ಯ ಬುದ್ಧಿಜೀವಿ , ಭಾವನಾ ಜೀವಿ ಆತ ತಾನು ಕಂಡ ಕನಸುಗಳ ಸುಖ ದುಃಖಗಳನ್ನು ಆಸ್ವಾದಿಸಬಲ್ಲ ಹಾಗೂ ನಿದ್ರಾವಸ್ಥೆಯಲ್ಲಿ ಕಂಡದ್ದನ್ನು ಜಾಗೃತಾವಸ್ಥೆಯಲ್ಲಿ ಹೇಳಬಲ್ಲ.
ಮಾನವನಲ್ಲಿ ಮೂರು ಅವಸ್ಥೆಗಳಿವೆ. ಜಾಗೃತ, ನಿದ್ರಾ ಮತ್ತು ಸುಷುಮ್ನ ಅವಸ್ಥೆ.

ಮಾನವ ಬದುಕಿನಲ್ಲಿ ಪೂರೈಸಲಾರದ ಬಯಕೆಗಳೇ ಕನಸುಗಳಾಗಿ ರೂಪುಗೊಳ್ಳುತ್ತವೆ ಎನ್ನುತ್ತಾರೆ. ನಿಜ ಜೀವನದಲ್ಲಿ ಭವಿಷ್ಯತ್ತಿನ ಬಗ್ಗೆ ಮನುಷ್ಯನು ತಳೆಯುವ ಹಂಬಲಗಳನ್ನು ಕನಸುಗಳೆಂದು ಕರೆಯಬಹುದಾಗಿದೆ. ಏನೇ ಇರಲಿ , ನಮ್ಮ ಬದುಕಿನಲ್ಲಿ ಕನಸುಗಳಿಗೆ ಎಲ್ಲಿಲ್ಲದ ಮಹತ್ವವಿದೆ. ದಿನನಿತ್ಯದ ಬದುಕಿನ ಬಯಕೆಗಳ ಭಾಗವಾಗಿ ಅವು ಕನಸುಗಳಾಗಿ ರೂಪುಗೊಳ್ಳುತ್ತವೆ .ಸಾಮಾನ್ಯವಾಗಿ ಪ್ರತಿಯೊಬ್ಬನು ತನ್ನ ಭವಿಷ್ಯದ ಕುರಿತು ಬಗೆಬಗೆ ಕನಸುಗಳನ್ನು ಕಟ್ಟಿಕೊಳ್ಳುವುದು ಸಹಜ . ಇದು ಮನುಷ್ಯನ ನೈಜ ಸ್ವಭಾವ. ಕನಸು ಯಾರಿಗೆ ಇಲ್ಲ ಹೇಳಿ? ಎಲ್ಲರಿಗೂ ಅವರದೇ ಆದ ಗಮ್ಯ- ಗುರಿ ಆಸೆ- ಆಕಾಂಕ್ಷೆಗಳ ಕುರಿತು ಕನಸುಗಳು ಇದ್ದೇ ಇರುತ್ತದೆ. ಅವುಗಳ ಬೆನ್ನಟ್ಟಿ ಹೋಗುವುದೇ ಜೀವನ. ಕನಸು ಕಾಣುವುದು ಒಳ್ಳೆಯದು, ಕನಸು ಕಂಡರೆ ತಾನೇ ನಾವು ಆ ಕನಸುಗಳ ಸಾಕಾರದೆಡೆಗೆ ಧಾವಿಸಲು ಅಥವಾ ಪ್ರಯತ್ನ ಪಡಲು ಸಾಧ್ಯವಾಗುತ್ತದೆ .ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರು ತಮ್ಮ ಯಶಸ್ಸಿನ ಹಾದಿಯನ್ನು ವಿವರಿಸುತ್ತಾ ಮಕ್ಕಳಿಗೆ ‘ಕನಸು ಕಾಣಬೇಕು’ ಎಂಬ ಸಂದೇಶವನ್ನು ನೀಡುತ್ತಾರೆ. ಕನಸು ಕಾಣುವ ವ್ಯಕ್ತಿಗಳೇ ಮುಂದೆ ಉನ್ನತ ಮಟ್ಟದ ಸಾಧನೆ ಮಾಡಬಲ್ಲರು ಎಂದು ತಜ್ಞರ ಅಭಿಪ್ರಾಯ ಕೂಡ ಆಗಿದೆ.

ಕನಸು ಕಾಣುವ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ಉನ್ನತ ಮಟ್ಟದ ಸಾಧನೆ ಮಾಡಬಲ್ಲರು ಎಂಬುದಕ್ಕೆ ಒಬ್ಬ ಬಾಲಕನ ಈ ಕಥೆ ಸಾಕ್ಷಿಯಾಗಿದೆ. ಉತ್ತರ ಹಿಂದುಸ್ಥಾನದ ಒಂದು ನಗರದಲ್ಲಿ ಒಬ್ಬ ಬಾಲಕನಿದ್ದನು. ಆತನ ತಂದೆ ಅರಮನೆಯ ಅಶ್ವಶಾಲೆಯಲ್ಲಿ ಸೇವಕನಾಗಿ ದುಡಿಯುತ್ತಿದ್ದನು. ಆ ಅಶ್ವಾಲಯದ ಮಾಲಕನು ಸುಖವಾಗಿದ್ದದ್ದನ್ನು ಬಾಲಕನು ಯಾವಾಗಲೂ ಗಮನಿಸುತ್ತಿದ್ದನು. ತಾನು ಹಾಗೆಯೇ ಆಗಬೇಕೆಂದು ಆಶಿಸುತ್ತಾ ಮನಸ್ಸಿನೊಳಗೆ ಅಶ್ವಾಲಯದ ಮಾಲೀಕನಾಗಬೇಕೆಂದು ನಿರ್ಧರಿಸಿದ್ದ . ಒಮ್ಮೆ ತರಗತಿಯಲ್ಲಿ ಅಧ್ಯಾಪಕರು “ಮಕ್ಕಳೇ ನೀವು ದೊಡ್ಡವರಾದ ಮೇಲೆ ಏನಾಗಬೇಕೆಂದು ಬಯಸುತ್ತೀರಿ ” ಎಂದು ಗುರುಗಳು ಪ್ರಶ್ನಿಸುತ್ತಾರೆ. ಆಗ ಉಳಿದೆಲ್ಲ ಮಕ್ಕಳು ವೈದ್ಯ, ಇಂಜಿನಿಯರ್ ,ಲಾಯರ್, ಪೈಲೆಟ್ ಇತ್ಯಾದಿ ವಿವಿಧ ಉದ್ಯೋಗಗಳನ್ನು ಹೊಂದಲು ಮಕ್ಕಳು ಬಯಸುತ್ತಾರೆ. ಆದರೆ ಈ ಬಾಲಕ ಅಶ್ವಾಲಯದ ಮಾಲೀಕನಾಗಬೇಕು ಎಂದು ಹೇಳಿದನು. ಗುರುಗಳಿಗೆ ಅಚ್ಚರಿಯಾಯಿತು. ಗುರುಗಳು ಬೇರೆ ಪದವಿಗಳ ಕುರಿತು ತಿಳಿಸಿ ಹೇಳಿದರು. ಆದರೆ ಮುಗ್ಧ ಬಾಲಕನ ಮನಸ್ಸಿನಲ್ಲಿ ಆ ವಿಷಯ ಗಾಢವಾಗಿ ಬೇರೂರಿತ್ತು.

ಮುಂದೆ 20 ವರ್ಷಗಳ ಬಳಿಕ ಅದೇ ಶಿಕ್ಷಕರಿಗೆ ರಾಷ್ಟ್ರಮಟ್ಟದ ಕುದುರೆ ಓಟದ ಸ್ಪರ್ಧೆಯ ಒಂದು ಆಮಂತ್ರಣ ಪತ್ರ ತಲುಪುತ್ತದೆ . ಆ ಸ್ಪರ್ಧೆ ಮುಗಿದಾಗ ಒಬ್ಬ ಯುವಕನು ಶಿಕ್ಷಕರಿಗೆ ಚರಣ ಸ್ಪರ್ಶ ಮಾಡಿ ನಮಸ್ಕರಿಸಿದ. ತನ್ನ ಪರಿಚಯವನ್ನು ನೀಡಿದನು. ಆಗ ಶಿಕ್ಷಕರಿಗೆ ಬಹಳ ಸೋಜಿಗವೆನಿಸಿತು. ಯಾವುದೇ ಕನಸಿನ ಬಗ್ಗೆ ದೃಢ ವಿಶ್ವಾಸವಿಟ್ಟು ಪರಿಶ್ರಮ ಪಟ್ಟರೆ ಗೆಲುವು ಸಾಧ್ಯ ಎಂದು ಅವರಿಗೆ ಅರ್ಥವಾಯಿತು. ಈ ಕಥೆಯಿಂದ ತಿಳಿಯುವುದೇನೆಂದರೆ ಭವಿಷ್ಯದ ಬಗ್ಗೆ ಎಲ್ಲರೂ ಕನಸು ಕಾಣುತ್ತೇವೆ . ಆದರೆ ಅದಕ್ಕಾಗಿ ಶ್ರಮಿಸದಿದ್ದರೆ ಅದು ಕೇವಲ ಹಗಲುಗನಸೇ ಆಗಿ ಉಳಿಯಬಹುದು. ಅದರ ಬದಲಿಗೆ , ಕನಸ್ಸನ್ನು ಸಾಕಾರಗೊಳಿಸುವುದನ್ನೇ ಗುರಿಯಾಗಿ ನಿರಂತರ ದೃಢವಾದ ಸಾಧನೆ ಮಾಡಬಲ್ಲವರೇ ಯಶಸ್ವಿಯಾಗಬಲ್ಲರು.

ಸ್ವಪ್ನಗಳಿಗೆ ಸಾಹಿತ್ಯದಲ್ಲಿ ,ಅದರಲ್ಲೂ ಕಾವ್ಯದಲ್ಲಿ ವಿಶೇಷವಾದ ಸ್ಥಾನವಿದೆ. ಕಣಸು (vision) ಎನ್ನುವ ಪದವೂ ಸಾಹಿತ್ಯದಲ್ಲಿದೆ. ಇದಕ್ಕೆ ಕಾಣ್ಕೆ ಅಥವಾ ದರ್ಶನ ಎನ್ನುವ ಅರ್ಥವಿದೆ. ಕಾವ್ಯದಲ್ಲಿ ಕನಸನ್ನು ಒಂದು ಇತ್ಯಾತ್ಮಕ ಅಂಶವೆಂದು ದಾರ್ಶನಿಕರು ಹೇಳಿದ್ದಾರೆ. ಸ್ವಪ್ನಗಳ ಮೂಲಕ ಮಾನವನ ಪ್ರಜ್ಞೆ ಆಳವಾಗುತ್ತದೆಂಬ ನಂಬುಗೆಯೂ ಇದೆ. ಒಬ್ಬ ವ್ಯಕಿಗೆ ಬಡತನವಿದ್ದರೂ ಒಳ್ಳೆಯ ಸಂಸ್ಕಾರವುಳ್ಳ ಕುಟುಂಬದ ಹಿನ್ನೆಲೆಯಿಂದ ಬಂದಾಗ ಉತ್ತಮ ಸಂಸ್ಕಾರದ ಶಿಕ್ಷಣ ದೊರೆದಾಗ ವ್ಯಕ್ತಿಯ ಮನೋವಿಕಾಸವಾಗುತ್ತದೆ. ಔಚಿತ್ಯ ಹಾಗೂ ಅನೌಚಿತ್ಯಗಳನ್ನು ಗುರುತಿಸ ಬಲ್ಲಂತಹ ವಿವೇಕ ಜಾಗೃತವಾಗುತ್ತದೆ . ಆಗ ಉಜ್ವಲ ಭವಿಷ್ಯದ ಬಗೆಗೆ ಕನಸು ಕಾಣುವಂತಹ ಮನೋವೃತ್ತಿ ವ್ಯಕ್ತಿಯಲ್ಲಿ ಮೂಡಿ ಬರುತ್ತದೆ . ಇಂತಹ ಪ್ರವೃತ್ತಿಯಿಂದ ವ್ಯಕ್ತಿಯ ಉನ್ನತಿ ಮತ್ತು ದೇಶದ ಪ್ರಗತಿ ಸಾಧ್ಯವಾಗುತ್ತದೆ . ಒಟ್ಟಿನಲ್ಲಿ ಹೇಳುವುದಾದರೆ ಕನಸು ಒಳ್ಳೆಯದಾಗಿರಲಿ, ಗುರಿ ಸಾಧನೆಗೆ ಸಹಾಯವಾಗುತ್ತದೆ. ಕೆಲವೊಮ್ಮೆ ಕನಸುಗಳು ಮುನ್ನೆಚ್ಚರಿಕೆಯ ಸೂಚನೆಗಳನ್ನೂ ನೀಡಬಹುದು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ನೀತಿ ಪ್ರತೀತಿ – ವಿಭಾ ಪುರೋಹಿತ ಅಂಕಣl ಕನಸು ತೋರುವ ಗಮ್ಯದೆಡೆಗೆ”

  1. Pradeep Pralhadrao Hittinhalli

    ಒಳ್ಳೆಯ ಲೇಖನ. Covering so many studied aspects of DREAMS. ಕಾವ್ಯದಲ್ಲಿ ಬೇಂದ್ರೆಯವರ ಕನಸಿನೊಳಗೊಂದು ಕನಸು ನೆನಪಾಯಿತು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter