ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಮೊದಲ ಪ್ರೇಮ

ಡಾಂಟೆ- ಬಿಯಾಟ್ರಿಸ್

ಮೊದಲ ಪ್ರೇಮ ಒಂದು ಮರೆಯಲಾಗದ ಮಧುರ ಅನುಭವ. ಪ್ರತಿಯೊಬ್ಬರ ಜೀವನದಲ್ಲೂ ಇದು ಸಂಭವಿಸಿರುತ್ತದೆ. ಮೊದಲ ಪ್ರೇಮ ದೃಷ್ಟಿಯಲ್ಲಿ ಆರಂಭವಾಗಿ, ಸ್ಪರ್ಶದೊಂದಿಗೆ ಬೆಳೆದು, ಅನುಭವದಲ್ಲಿ ಸಂಪನ್ನಗೊಳ್ಳುತ್ತದೆ. ಬಹಳಷ್ಟು ಮಂದಿಗೆ ಮೊದಲ ಪ್ರೇಮ ದೃಷ್ಟಿಯಿಂದ ಆರಂಭವಾಗಿ ಅಲ್ಲೇ ಕೊನೆಗೊಳ್ಳುತ್ತದೆ. ಹಲವರಿಗೆ ದೃಷ್ಟಿಯಿಂದ ಆರಂಭವಾಗಿ ಸ್ಪರ್ಶದಲ್ಲಿ ಕೊನೆಗೊಳ್ಳುತ್ತದೆ. ಕೆಲವರಿಗೆ ಮಾತ್ರ ದೃಷ್ಟಿಯಿಂದ ಆರಂಭವಾಗಿ, ಸ್ಪರ್ಶದಲ್ಲಿ ಬೆಳೆದು, ಅನುಭವದಲ್ಲಿ ಸಂಪನ್ನಗೊಳ್ಳುತ್ತದೆ. ಇಂತಹ ಮಂದಿ ನಿಜಕ್ಕೂ ಅದೃಷ್ಟವಂತರು ಮತ್ತು ಅಲ್ಪ ಸಂಖ್ಯಾತರು.

ದೃಷ್ಟಿ ಮತ್ತು ಸ್ಪರ್ಶದ ಹಂತದಲ್ಲಿ ಮೊದಲ ಪ್ರೇಮ ಕೊನೆಗೊಂಡ ಮಂದಿಗೆ ಅದು ಕಾಲಾನಂತರದಲ್ಲಿ ಒಂದು ಮಧುರ ಯಾತನೆಯಾಗಿ ಕಾಡುತ್ತದೆ. ಈ ಮೊದಲ ಪ್ರೇಮದ ರೋಗ ಹೆಂಗಸರಿಗಿಂತ ಗಂಡಸರಲ್ಲಿ ಹೆಚ್ಚು ಎಂಬುದು ಕೆಲವು ಮನಃಶಾಸ್ತ್ರಜ್ಞರ ಅಭಿಪ್ರಾಯ ಮತ್ತು ಇದನ್ನು ಬಹಳಷ್ಟು ಮಂದಿ ಒಪ್ಪುತ್ತಾರೆ. ಗಂಡಸರು ತಾವು ಮೊಟ್ಟ ಮೊದಲ ಬಾರಿಗೆ ಇಷ್ಟಪಟ್ಟ ಹುಡುಗಿಯ ಛಾಯೆಯನ್ನು ನಂತರ ಸಿಕ್ಕ ಪ್ರೇಮಿ ಅಥವಾ ಹೆಂಡತಿಯಲ್ಲಿ ಹುಡುಕುತ್ತಾರೆ. ಕೆಲವರು ತಮ್ಮ ಮೊದಲ ಪ್ರೇಮಿಯ ಛಾಯೆಯನ್ನು ಪ್ರಿಯತಮೆ ಅಥವಾ ಭಾರ್ಯೆಯಲ್ಲಿ ಕಾಣುವಲ್ಲಿ ಸಫಲರಾದರೆ, ಹಲವರು ವಿಫಲವಾಗಿ ನಿರಾಸೆ ಅನುಭವಿಸುತ್ತಾರೆ. ಇದೇ ಮಾತು ಹೆಂಗಸರಿಗೂ ಯಥಾವತ್ತಾಗಿ ಅನ್ವಯಿಸುತ್ತದೆ. ಆದರೆ ಸಮಯೋಚಿತ ಬುದ್ಧಿ ಮತ್ತು ಸಾಮಾನ್ಯ ಜ್ಞಾನವನ್ನು ಹೆಚ್ಚಾಗಿ ಹೊಂದಿರುವ ಮಹಿಳೆಯರು ಇಂತಹ ಮೊದಲ ಪ್ರೇಮದ ಮಧುರ ಯಾತನೆಯನ್ನು ಗೆಲ್ಲುವಲ್ಲಿ ಸಫಲರಾಗುತ್ತಾರೆ. “ಗಂಡಸರಲ್ಲಿ ಬುದ್ಧಿಗಿಂತ ಹೃದಯ ಹೆಚ್ಚು ಕೆಲಸ ಮಾಡಿದರೆ, ಹೆಂಗಸರಲ್ಲಿ ಹೃದಯಕ್ಕಿಂತ ಬುದ್ಧಿ ಹೆಚ್ಚು ಕೆಲಸ ಮಾಡುತ್ತದೆ.” ಎಂಬ ಪಾಶ್ಚಾತ್ಯ ತತ್ವಜ್ಞಾನಿಯೊಬ್ಬನ ಮಾತು ಈ ವಿಷಯದಲ್ಲಿ ಖಂಡಿತ ನಿಜ.

ಮಲಯಾಳಂ ಭಾಷೆಯ ಖ್ಯಾತ ಲೇಖಕ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಎಂ. ಟಿ. ವಾಸುದೇವನ್ ನಾಯರರ ‘ರಂಡಾಮೂಳಂ’ (ಇದು ‘ಭೀಮಾಯಣ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದವಾಗಿದೆ) ಎಂಬ ಕಾದಂಬರಿಯಲ್ಲಿ ಅದೇ ಆಗ ಹೊಸ ಹರೆಯಕ್ಕೆ ಕಾಲಿಟ್ಟ ಸುಯೋಧನ ಮತ್ತು ಭೀಮನ ನಡುವೆ ಮೊದಲ ಪ್ರೇಮದ ಕುರಿತು ನಡೆಯುವ ಸಂಭಾಷಣೆ ತುಂಬ ಸ್ವಾರಸ್ಯಕರವಾಗಿ ಮೂಡಿ ಬಂದಿದೆ. ಭೀಮ ಬಲಶಾಲಿಯಾದರೂ ಬುದ್ಧಿ ಸ್ವಲ್ಪ ಕಡಿಮೆ, ಊಟ, ತಿಂಡಿಯ ವಿಷಯದಲ್ಲಿ ಅವನಿಗೆ ಮಮತೆ ಹೆಚ್ಚು.

ಅಸಾಮಾನ್ಯ ವೀರನಾದ ಸುಯೋಧನ ಒಂದು ಬಾರಿ ಭೀಮನೊಂದಿಗೆ ಸೋಮರಸ ಕುಡಿಯುತ್ತಾ ಪ್ರೇಮದ ವಿಷಯ ಪ್ರಸ್ತಾಪ ಮಾಡುತ್ತಾನೆ. ಚೆನ್ನಾಗಿ ತಿನ್ನುವುದು, ಕಸರತ್ತು ಮಾಡುವುದು ಮತ್ತು ಗದಾಯುದ್ಧದಲ್ಲಿ ಪರಿಣಿತನಾಗುವುದರ ಹೊರತು ಬೇರೆ ಕಡೆ ಲಕ್ಷ್ಯವೇ ಕೊಡದ ಭೀಮನಿಗೆ ಸುಯೋಧನನ ಮಾತುಗಳು ವಿಚಿತ್ರ ಆಕರ್ಷಣೆಯುಂಟುಮಾಡುತ್ತವೆ. ಸುಯೋಧನ ಪ್ರೇಮದ ಕುರಿತು ಭೀಮನಿಗೆ ಒಂದು ಒಳ್ಳೆಯ ಉಪನ್ಯಾಸ ಕೊಟ್ಟು ಅವನಿಗೆ ಜ್ಞಾನೋದಯವಾಗುವಂತೆ ಮಾಡುತ್ತಾನೆ. ಸುಯೋಧನನ, “ಎಲವೋ ಭೀಮ, ನಾವು ಜೀವನದಲ್ಲಿ ಯಾವತ್ತೂ ಮೊದಲ ಹುಡುಗಿ, ಮೊದಲ ಪ್ರೇಮ, ಮೊದಲ ಮುತ್ತು ಹಾಗೂ ಮೊದಲ ಅನುಭವವನ್ನು ಮರೆಯಲು ಸಾಧ್ಯವಿಲ್ಲ…” ಎಂಬ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಭೀಮ, ಅಂತಃಪುರದಲ್ಲಿರುವ ಸುಂದರ ಯುವತಿಯರ ಜೊತೆ ಸಂಬಂಧ ಬೆಳೆಸುತ್ತಾನೆ. ಪ್ರೇಮ – ಕಾಮದ ಸರಿಯಾದ ವ್ಯತ್ಯಾಸವೇ ತಿಳಿಯದ ಭೀಮನಿಗೆ ಸುಯೋಧನ ಮಾಡಿದ ಉಪದೇಶ ಬೇರೆ ರೀತಿಯಲ್ಲಿ ಪ್ರಭಾವ ಬೀರುತ್ತದೆ. ನಿಜಕ್ಕೂ ಭೀಮನಿಗೆ ಮೊದಲ ಪ್ರೇಮದ ಅನುಭೂತಿ ಉಂಟಾಗುವುದು ದ್ರೌಪದಿಯನ್ನು ನೋಡಿದಾಗ. ದುರ್ದೈವವಶಾತ್ ದ್ರೌಪದಿ ಪ್ರೀತಿಸಿದ್ದು ಅರ್ಜುನನನ್ನು. ಕುಂತಿಯ ಚಾಣಾಕ್ಷತನದಿಂದ ದ್ರೌಪದಿ ಐವರಿಗೆ ಪತ್ನಿಯಾಗಬೇಕಾಗುತ್ತದೆ. ಪಾಂಚಾಲಿಯನ್ನು ಅಷ್ಟೊಂದು ಪ್ರೀತಿಸಿದ್ದ ಭೀಮನಿಗೆ ಅವಳಿಂದ ಅಷ್ಟೇ ಪ್ರೇಮ ದೊರೆಯಲಿಲ್ಲ ಎಂಬುದು ನಿಜಕ್ಕೂ ಖೇದದ ಸಂಗತಿ. ಬಲಶಾಲಿ ಮತ್ತು ತಿಂಡಿಪೋತನಾದ ಭೀಮ ಪ್ರೇಮದ ವಿಷಯದಲ್ಲಿ ಮಾತ್ರ ಅನುಕಂಪಕ್ಕೆ ಅರ್ಹನಾದವ.

ಇಟಾಲಿಯನ್ ಮಹಾಕವಿ ಡಾಂಟೆಯ ಮೊದಲ ಪ್ರೇಮದ ಕಥೆ ತುಂಬ ಪ್ರಖ್ಯಾತವಾದುದು. ಅವನ ಮೊದಲ ಪ್ರೇಮ ಬಿಯಾಟ್ರಿಸ್ ಎಂಬ ಹುಡುಗಿ. ಅವನು ತನ್ನ ಇಡೀ ಜೀವಮಾನದಲ್ಲಿ ಅವಳನ್ನು ನೋಡಿದ್ದು ಕೇವಲ ಎರಡು ಬಾರಿ ಮಾತ್ರ! ಆ ಎರಡು ಭೇಟಿಗಳಲ್ಲಿ ಅವರಿಬ್ಬರ ನಡುವೆ ನಮಸ್ಕಾರ ಮತ್ತು ಕುಶಲ-ಕ್ಷೇಮದಂತಹ ಔಪಚಾರಿಕ ಮಾತುಕತೆ ಹೊರತು ಪಡಿಸಿ ಹೆಚ್ಚಿನದೇನೂ ನಡೆದಿರಲಿಲ್ಲ. ಆದರೂ ಡಾಂಟೆ ಅವಳತ್ತ ಎಷ್ಟು ಆಕರ್ಷಿತನಾದನೆಂದರೆ, ಅವಳನ್ನು ಹುಚ್ಚನಂತೆ ಪ್ರೀತಿಸಲಾರಂಭಿಸಿದ. ಇವರಿಬ್ಬರೂ ಬೇರೆ ಬೇರೆಯವರನ್ನು ಮದುವೆಯಾಗಿ ಮಕ್ಕಳೂ ಆದವು! ಆದರೆ ಡಾಂಟೆ ಮಾತ್ರ ಸಾಯುವವರೆಗೂ ಅವಳನ್ನು ಪ್ರೀತಿಸಿದ. ಅವನಿಗೆ ಕೊನೆಯವರೆಗೂ ಅವಳ ನೆನಪಿನಿಂದ ಹೊರಬರಲಾಗಲಿಲ್ಲ. ಡಾಂಟೆಯ ಕಾವ್ಯರಚನೆಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಿದವಳು ಬಿಯಾಟ್ರಿಸ್. ಅವನ ಕಾವ್ಯವನ್ನು ಓದಿದರೆ ಮಾತ್ರ ನಮಗೆ ಅವನ ಪ್ರೀತಿ ಎಷ್ಟು ಗಾಢವಾದುದು ಮತ್ತು ಆಳವಾದುದು ಎಂಬುದನ್ನು ತಿಳಿಯಲು ಸಾಧ್ಯ. ಡಾಂಟೆ ಮೊದಲ ಬಾರಿಗೆ ಬಿಯಾಟ್ರಿಸಳನ್ನು ನೋಡಿ ಪ್ರೆಮಪರವಶನಾದ ಸಂದರ್ಭದ ಚಿತ್ರ ಜಗತ್ಪ್ರಸಿದ್ಧವಾಗಿದೆ.

ವಿಶ್ವದಾದ್ಯಂತ ಖ್ಯಾತಿ ಪಡೆದ ಪೆಟ್ರಾರ್ಕ್ ಮೊದಲ ಪ್ರೇಮ ದೊರೆಯದೇ ಪರಿತಪಿಸಿದ ಮತ್ತೊಬ್ಬ ಇಟಾಲಿಯನ್ ಕವಿ. ಇವನ ಪ್ರೇಮಕಥೆ ಡಾಂಟೆಯ ಪ್ರೇಮಕಥೆಗಿಂತ ದುರಂತಮಯವಾದುದು. ಅತ್ಯಂತ ಸುಂದರಿಯೆಂದು ಖ್ಯಾತಿ ಪಡೆದ ಲಾರಾಳನ್ನು ಚರ್ಚವೊಂದರಲ್ಲಿ ನೋಡಿದ ಪೆಟ್ರಾರ್ಕನಿಗೆ ಮೊದಲ ನೋಟದಲ್ಲೇ ಅವಳ ಮೇಲೆ ಪ್ರೇಮವುಂಟಾಯಿತು. ದುರ್ದೈವವಶಾತ್ ಪೆಟ್ರಾರ್ಕ್ ತನ್ನ ಪ್ರೇಮದ ಕುರಿತು ಹೇಳಿಕೊಳ್ಳುವ ವೇಳೆಗೆ ಲಾರಾಳ ಮದುವೆಯಾಗಿತ್ತು. ಅವಳ ಅಪ್ರತಿಮ ಸೌಂದರ್ಯ ಮತ್ತು ಆಕರ್ಷಣೆಯಿಂದ ತುಂಬ ವಿಚಲಿತನಾದ ಅವನಿಗೆ ಅವಳ ನೆನಪುಗಳು ಇನ್ನಿಲ್ಲದಂತೆ ಕಾಡತೊಡಗಿದವು. ಒಂದೆರಡು ಬಾರಿಯಷ್ಟೆ ದೂರದಿಂದ ನೋಡಿ ಕಂಗಾಲಾದ ಪೆಟ್ರಾರ್ಕ್ ತನ್ನ ಜೀವನದುದ್ದಕ್ಕೂ ಅವಳ ಮೇಲೆ ಕಾವ್ಯ ರಚನೆ ಮಾಡಿದನೆಂದರೆ ಅವನ ಪ್ರೇಮ ಎಷ್ಟು ಗಾಢವಾದುದು ಎಂದು ಯಾರಾದರೂ ಊಹಿಸಬಹುದು. ಪೆಟ್ರಾರ್ಕನಿಗೆ ಲಾರಾಳನ್ನು ಹೊರತು ಪಡಿಸಿ ಬೇರಾರನ್ನೂ ಪ್ರೀತಿಸಲು ಸಾಧ್ಯವಾಗಲಿಲ್ಲ. ಅವನು ಮದುವೆಯನ್ನೇ ಮಾಡಿಕೊಳ್ಳದೇ ಕೊನೆಯವರೆಗೂ ಅವಿವಾಹಿತನಾಗಿಯೇ ಉಳಿದು, ಅವಳ ನೆನಪಿನಲ್ಲಿಯೇ ಮರಣ ಹೊಂದಿದ. ಲಾರಾ ಬದುಕಿದ್ದಾಗಲೇ ಸಾಕಷ್ಟು ಸಾನೆಟ್ಟುಗಳನ್ನು ಬರೆದಿದ್ದ ಪೆಟ್ರಾರ್ಕ್ ಅವಳ ಮರಣದ ನಂತರವೂ ಸುಮಾರು ಮುನ್ನೂರಕ್ಕೂ ಅಧಿಕ ಸಾನೆಟ್ಟುಗಳನ್ನು ಬರೆದ. ಲಾರಾಳ ಮೇಲಿನ ಪ್ರೀತಿಯಿಂದ ಇಡೀ ಬದುಕನ್ನೇ ಅವಳ ನೆನಪಿಗೆ ಅರ್ಪಿಸಿಕೊಂಡು, ಅಸುನೀಗಿದ ಪೆಟ್ರಾರ್ಕನ ಜೀವನ ಎಂತಹವರ ಅಂತಃಕರಣವನ್ನೂ ಕಲಕುವಂತಹದು.

ವಿಶ್ವದ ಅಮರ ಪ್ರೇಮಿಗಳ ಪಟ್ಟಿಯಲ್ಲಿ ಡಾಂಟೆ – ಬಿಯಾಟ್ರಿಸ್ ಮತ್ತು ಪೆಟ್ರಾರ್ಕ್ – ಲಾರಾರ ಪ್ರೇಮಕಥೆಗಳು ಅಗ್ರಸ್ಥಾನ ಪಡೆದಿವೆ. ಡಾಂಟೆ ಬಿಯಾಟ್ರಿಸಳನ್ನು ಮತ್ತು ಪೆಟ್ರಾರ್ಕ್ ಲಾರಾಳನ್ನು ಮದುವೆಯಾಗಿದ್ದರೆ ಒಳ್ಳೆಯ ಗೃಹಸ್ಥರಾಗುತ್ತಿದ್ದರೇ ಹೊರತು ಕವಿಗಳಾಗುತ್ತಿರಲಿಲ್ಲ ಎಂದು ಕುಹಕವಾಡುವ ವಿಮರ್ಶಕರೂ ಇದ್ದಾರೆ. ಡಾಂಟೆಗಿಂತ ಪೆಟ್ರಾರ್ಕನಿಗೆ ಮರುಕ ಪಡುವ ಮಂದಿ ಹೆಚ್ಚು. ಬಿಯಾಟ್ರಿಸ್ ಸಿಗದಿದ್ದರೂ ಡಾಂಟೆ ಚಿಂತಿಸಲಿಲ್ಲ. ಕಾವ್ಯ ರಚನೆಗೆ ಮಾತ್ರ ಅವಳನ್ನು ಸ್ಫೂರ್ತಿಯಾಗಿ ಸ್ವೀಕರಿಸಿದ. ಉಳಿದಂತೆ ಸುಂದರ ಮತ್ತು ಕುಲೀನ ಕನ್ಯೆಯೊಬ್ಬಳನ್ನು ಮದುವೆಯಾಗಿ, ಮಕ್ಕಳನ್ನು ಪಡೆದು, ಗೃಹಸ್ಥನಾಗಿ ಸುಖವಾದ ಜೀವನ ನಡೆಸಿದ. ಡಾಂಟೆ ತನ್ನ ಸುಖೀ ಸಂಸಾರಕ್ಕೆ ಕಾರಣಳಾದ ಹೆಂಡತಿಯನ್ನು ಬಿಟ್ಟು ಮತ್ತೊಬ್ಬರ ಹೆಂಡತಿಯಾದ ಬಿಯಾಟ್ರಿಸಳ ಕುರಿತು ಕಾವ್ಯ ರಚನೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುವವರೂ ಇದ್ದಾರೆ. ಈ ಆಕ್ಷೇಪಣೆಯಲ್ಲಿ ನ್ಯಾಯವೂ ಉಂಟು. ಆದರೆ ಪೆಟ್ರಾರ್ಕ್ ಮಾತ್ರ ಹಾಗಲ್ಲ, ಅವನದು ದಿವ್ಯ ಪ್ರೇಮ. ಅವನು ತನ್ನ ಜೀವಿತಾವಧಿಯೆಲ್ಲ ಲಾರಾಳ ನೆನಪುಗಳಲ್ಲೇ ಕಳೆದ. ಪೆಟ್ರಾರ್ಕ್ ನಿಜಕ್ಕೂ ಅಮರಪ್ರೇಮಿ.

ಇರಲಿ, ಮೊದಲ ಪ್ರೇಮ ಸಿಗದೇ ಮಧುರ ಯಾತನೆ ಅನುಭವಿಸುವ ಸಾಮಾನ್ಯ ಮಂದಿಯ ಕಥೆ ಇನ್ನೊಂದು ಬಗೆಯದು. ಬಹಳ ಮಂದಿ ಮೊದಲ ಪ್ರೇಮ ದಕ್ಕದೇ ಸ್ವಲ್ಪ ದಿನ ಪ್ರೇಮಭಂಗದ ನೆಪದಲ್ಲಿ ದುಃಖದಿಂದ ದಿನ ಕಳೆಯುತ್ತಾರೆ. ಪ್ರೀತಿ, ಪ್ರೇಮ, ಪ್ರಣಯಕ್ಕಿಂತ ಜೀವನ ದೊಡ್ಡದು ಎಂಬ ಜ್ಞಾನೋದಯವಾದಾಗ ಪ್ರೇಮ ವಿವಾಹವೋ, ಹಿರಿಯರು ನಿಶ್ಚಯಿಸಿದ ವಿವಾಹವೋ, ಒಟ್ಟಿನಲ್ಲಿ ಒಂದು ವಿವಾಹವಾಗುತ್ತಾರೆ. ಇಂತಹವರು ತುಂಬ ಒಳ್ಳೆಯ ಗೃಹಸ್ಥರಾಗುತ್ತಾರೆ ಎಂದು ಕೆಲವು ಹಿರಿಯರ ಅಂಬೋಣ. ಇದ್ದರೂ ಇರಬಹುದು, ಇಲ್ಲ ಎಂದು ಹೇಳುವುದು ಕಷ್ಟ. ಇಂತಹ ಸಭ್ಯ ಗೃಹಸ್ಥರು ಹೆಂಡತಿಯೊಂದಿಗೆ ಪ್ರೀತಿಯಿಂದ ಇದ್ದರೂ ಸಹ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಮೊದಲ ಪ್ರೇಮ ಉಂಟು ಮಾಡಿದ ಹುಡುಗಿಯರು ಕುಳಿತು ಬಿಟ್ಟಿರುತ್ತಾರೆ. ಅದರಿಂದ ಹೊರಬರಲಾಗದೆ ಚಡಪಡಿಸುವ ಅವರು ತಮ್ಮ ಪ್ರೀತಿಯ ಹೆಣ್ಣುಮಕ್ಕಳಿಗೆ ತಮ್ಮ ಹಳೆಯ ಪ್ರೇಯಸಿಯರ ಹೆಸರಿಡುವುದರ ಮೂಲಕ ಕಳೆದುಹೋದ ಕಾಲಘಟ್ಟದ ಮಧುರ ನೆನಪುಗಳನ್ನು ಜೀವಂತವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಗಂಡಸರ ಇಂತಹ ವೀಕನೆಸ್ಸನ್ನು ಚೆನ್ನಾಗಿ ತಿಳಿದುಕೊಂಡ, ಬುದ್ಧಿವಂತರಾದ ಅವರ ಹೆಂಡತಿಯರು ತಮ್ಮ ಹೆಣ್ಣುಮಕ್ಕಳಿಗೆ ಅಂತಹ ಹೆಸರಿಡದಂತೆ ತಡೆಯುವುದರ ಮೂಲಕ ಮತ್ತೊಮ್ಮೆ ಗಂಡಂದಿರ ಮನಸ್ಸನ್ನು ಭಗ್ನಗೊಳಿಸುತ್ತಾರೆ. ಗಂಡಸರಿಗೆ ಮತ್ತೆ ನೆನಪುಗಳೇ ಗತಿ. ಇಂತಹ ಸಂದರ್ಭದಲ್ಲಿ “ದಿಲ್ ದಿಯಾ ದರ್ದ್ ಲಿಯಾ” ಎಂಬ ಮಾತು ಅಕ್ಷರಶಃ ಸತ್ಯವೆನಿಸುತ್ತದೆ.

ನನ್ನ ಹಿರಿಯ ಮಿತ್ರನಾದ ಹುಬ್ಬಳ್ಳಿಯ ಸತೀಶನಿಗೆ ದಾವಣಗೆರೆಯ ನಂದಿನಿಯೊಂದಿಗೆ ವಿವಾಹವಾಗಿತ್ತು. ಯುವ ದಂಪತಿ ತುಂಬ ಸುಖವಾಗಿ ಮತ್ತು ಸಂತೋಷವಾಗಿದ್ದರು. ಮದುವೆಯಾದ ಎರಡು ವರ್ಷಗಳಲ್ಲಿ ಅವರಿಗೆ ಒಂದು ಮುದ್ದಾದ ಹೆಣ್ಣುಮಗು ಜನಿಸಿತು. ಸರಿ, ಮಗುವಿಗೆ ಯಾವ ಹೆಸರಿಡಬೇಕೆಂದು ಗಂಡ-ಹೆಂಡತಿಯ ನಡುವೆ ಚರ್ಚೆ ಶುರುವಾಯಿತು. ಸತೀಶನಿಗೆ ತಾನು ಗದುಗಿನ ಲೊಯಲಾ ಕಾನ್ವೆಂಟಿನಲ್ಲಿ ಓದುವಾಗ ತನ್ನ ಕ್ಲಾಸುಮೇಟು, ಮೊದಲ ಆಕರ್ಷಣೆ ಮತ್ತು ಮೊದಲ ಪ್ರೇಮವಾಗಿದ್ದ ದೀಪಳ ಹೆಸರಿಡಬೇಕೆಂಬ ಬಯಕೆಯಿತ್ತು. ಆದರೆ ತುಂಬ ಜಾಣಳಾದ ನಂದಿನಿಬಾಯಿಗೆ ಸತೀಶನ ಉದ್ದೇಶ ಅರ್ಥವಾಗಿ ತುಂಬ ಸಿಡಿಮಿಡಿಗೊಂಡಳು. ಇಂತಹ ಹೊತ್ತಿನಲ್ಲಿ ಈ ಹೆಸರಿನ ಸಮಸ್ಯೆಯನ್ನು ಬಗೆಹರಿಸಲು ಇಬ್ಬರಿಗೂ ಆಪ್ತನಾದ ಡಾ. ನಾಗರಾಜನ ಪ್ರವೇಶವಾಯಿತು.

ನಂದಿನಿಬಾಯಿ ಮಾಡಿಕೊಟ್ಟ ಖಡಕ್ ಚಹ ಕುಡಿಯುತ್ತ, ಗಂಡ-ಹೆಂಡತಿ ಇಬ್ಬರ ವಾದವನ್ನೂ ಮುಗುಳ್ನಗುತ್ತ ಆಲಿಸಿದ ಡಾ. ನಾಗರಾಜ ಅವರಿಬ್ಬರು ಆರಿಸಿದ ಹೆಸರನ್ನು ಮಗುವಿಗಿಡಬಾರದು, ಇದರಿಂದ ಇಬ್ಬರಿಗೂ ಅಸಮಾಧಾನವಾಗುವುದು. ಆದ್ದರಿಂದ ತಾನು ಒಂದು ಒಳ್ಳೆಯ ಹೆಸರನ್ನು ಸೂಚಿಸುತ್ತೇನೆ, ಅದನ್ನೇ ಮಗುವಿಗಿಡಬೇಕು ಎಂದು ಹೇಳಿದ. ಸತೀಶ ಮತ್ತು ನಂದಿನಿ ಇದಕ್ಕೆ ಒಪ್ಪಿದರು. ಡಾ. ನಾಗರಾಜ ಈ ಮಗುವಿನ ಹೆಸರು ಶ್ರೀದೇವಿ ಎಂದಿಡಿ, ಮಗುವಿಗೆ ಒಳ್ಳೆಯದಾಗುತ್ತದೆ ಎಂದು ಗೋಡೆಗೆ ನೇತು ಹಾಕಿದ ಲಕ್ಷ್ಮೀದೇವಿಯ ಫೋಟೋ ನೋಡಿ ಕೈ ಮುಗಿದ. ಶ್ರೀದೇವಿ ಎಂಬ ಹೆಸರು ಅವರಿಬ್ಬರಿಗೂ ತುಂಬ ಇಷ್ಟವಾಯಿತು. ತಮ್ಮ ಕುಟುಂಬದ ಹಿತೈಷಿಯಾದ ಡಾ. ನಾಗರಾಜನಿಗೆ ಮನಸಾರೆ ಅಭಿನಂದಿಸಿದ ದಂಪತಿಗಳು ಊಟ ಮಾಡಿಯೇ ಹೋಗಬೇಕೆಂದು ಆಗ್ರಹಿಸಿದರು. ಊಟ, ತಿಂಡಿಯ ವಿಚಾರದಲ್ಲಿ ಪಕ್ಕಾ ಸೆಕ್ಯುಲರ್ ಆದ ಅವನು ಇದಕ್ಕೆ ಸಂತೋಷದಿಂದಲೇ ಸಮ್ಮತಿಸಿದ.

ಈ ಘಟನೆ ನಡೆದ ಎರಡು ದಿನಗಳ ನಂತರ ಬಾಗೇವಾಡಿ ಭವಾನಿಯ ಚಹದಂಗಡಿಯಲ್ಲಿ ಭೇಟಿಯಾದ ಡಾ. ನಾಗರಾಜ ಇದನ್ನೊಂದು ಕಥೆಯೆಂಬಂತೆ ಹೇಳಿದ. ನಾನು, “ಗುರು, ಈ ಶ್ರೀದೇವಿ ಯಾರು? ಏನು ಕಥೆ?” ಎಂದು ಕೇಳಿದೆ. ಚಹದಂಗಡಿಯ ಎದುರು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಹರೆಯದ ಲಲನೆಯರನ್ನು ಮುಗುಳ್ನಗುತ್ತ ನೋಡುತ್ತಿದ್ದ ಡಾ. ನಾಗರಾಜನಿಗೆ ಈ ಪ್ರಶ್ನೆಯಿಂದ ಆಘಾತವಾದಂತಾಯಿತು. ಮುಖದಲ್ಲಿನ ಮುಗುಳ್ನಗೆ ಮಾಯವಾಗಿ, ಆತಂಕಿತನಾದಂತೆ ಕಂಡುಬಂದಿತು. ಎರಡೇ ಎರಡು ನಿಮಿಷಗಳಲ್ಲಿ ಸುಧಾರಿಸಿಕೊಂಡ ಅವನು, “ದೋಸ್ತಾ… ಅದು ಒಂದು ದೊಡ್ಡ ಕಥಿ ಐತಿ… ಇರಲಿ, ಇವತ್ತ ಹೇಳೇ ಬಿಡ್ತೀನಿ ತಗೋ…” ಎಂದು ಶುರು ಮಾಡಿದ. “ಶ್ರೀದೇವಿ ನನ್ನ ಮೊದಲ ಆಕರ್ಷಣೆ, ಮೊದಲ ಪ್ರೇಮ, ಈ ಪ್ರೇಮ ಅನ್ನೂದು ಎಂಥಾ ದಿವ್ಯ ಅನುಭೂತಿ ಅನ್ನೂ ಕಲ್ಪನಾ ಉಂಟು ಮಾಡಿದ ಹುಡುಗಿಯೋ ಅಕೀ… ಗರ್ಲ್ ಫ್ರೆಂಡ್ ಇಲ್ಲದ ನಿನಗದು ಗೊತ್ತಾಗೂದಿಲ್ಲ…” ಎಂದು ತುಸುವೆ ಒದ್ದೆಯಾದ ಕಣ್ಣುಗಳನ್ನು ಒರೆಸಿಕೊಂಡ. “ನಾನು ಪಿಯುಸಿ ಓದುತ್ತಿದ್ದಾಗ ಅಕೀ ಎಸ್.ಎಸ್.ಎಲ್.ಸಿ. ಓದುತ್ತಿದ್ದಳು. ಅವಳದು ಕೋಗಿಲೆ ಕಂಠ! ಅಕೀ ಮಾತಾಡತಿದ್ರ ಸಂಗೀತ ಕೇಳಿದಾಂಗ ಅನಸತಿತ್ತು. ಆದರ ಏನು ಲಾಭ ಐತಿ ಹೇಳು? ನಾನಂದ್ರ ಬಿದ್ದು ಸಾಯುತ್ತಿದ್ದ ಅಕೀ ಪಿ. ಎಚ್. ಡಿ. ಮಾಡಾಕಂತ ಮಂಗಳೂರಿಗೆ ಹೋದ ಮ್ಯಾಲೆ ಬದಲಾದಳು. ಒಂದು ಕಾಲದಲ್ಲಿ ನನ್ನ ಪ್ರೀತಿಸುತ್ತಿದ್ದ ಅಕೀ ಈಗ ನನಗ ಅದಕ್ಕಿಂತ ಹೆಚ್ಚು ದ್ವೇಷ ಮಾಡಿಲಿಕ್ಕತ್ತಾಳ. ಇರಲಿ, ಅಕೀ ಮ್ಯಾಲೆ ನನಗ ಈಗರ ಏನು ಪ್ರೀತಿ ಕಡಮೆಯಾಗಿಲ್ಲ… ಅಕೀ ದೂರ ಆದ ಮ್ಯಾಲೆ ನನಗ ಅಕೀ ಮ್ಯಾಲೆ ಪ್ರೀತಿ ಜಾಸ್ತಿಯಾಗಲಿಕ್ಕತ್ತದೋ…” ಎಂದು ಭಾವುಕನಾದ.

ಭವಾನಿ ತಂದು ಕೊಟ್ಟ ಸ್ಪೆಷಲ್ ಚಹ ಕುಡಿಯುತ್ತ, “ಇವತ್ತಿಲ್ಲ, ನಾಳೆ ನಾನು ಅಕೀಗೆ ಭೇಟಿಯಾದಾಗ ನನ್ನ ಪ್ರೇಮದ ಬಗ್ಗೆ ಕೇಳ್ತೀನಿ… ಅಕೀ ನನ್ನ ಪ್ರೀತಿಸ್ತಾಳೋ ಇಲ್ಲೋ ಗೊತ್ತಿಲ್ಲ… ನಾನಂತೂ ಶ್ರೀದೇವಿಯನ್ನ ಪ್ರೀತಿಸ್ತಿದ್ಯಾ, ಪ್ರೀತಿಸಾಕತ್ತೇನೀ ಮತ್ತ ಮುಂದೂ ಪ್ರೀತಿಸ್ತೀನೀ… ಅದಕ್ಕಂತನ ನಂದಿನಿಬಾಯಿ ಮಗುವಿಗೆ ಶ್ರೀದೇವಿ ಅಂತ ಹೆಸರಿಟ್ಟಿದ್ದು. ಈಗ ದೂರವಾಗಿರೋ ಶ್ರೀದೇವಿಯನ್ನ ಕನಿಷ್ಠ ಆ ಪುಟ್ಟ ಕೂಸು ನೆನಪಿಗೆ ತರತ್ತಲ್ಲ… ಅಷ್ಟು ಸಾಕು…” ಎಂದು ಗದ್ಗದಿತನಾದ. ಸದಾ ಸಂತೋಷದಿಂದಿರುವ ಡಾ. ನಾಗರಾಜನ ಮೊದಲ ಪ್ರೇಮದ ಕಥೆ ಕೇಳಿ ನನಗೆ ತುಂಬ ವ್ಯಸನವಾಯಿತು. ಚಹದಂಗಡಿಯ ಗಲ್ಲಾದ ಮೇಲೆ ಗಲ್ಲಕ್ಕೆ ಕೈಯಿಟ್ಟುಕೊಂಡ ಕೂತ ಸುಂದರಿ ಭವಾನಿ, “ಅಲ್ಲಪಾ ನಾಗರಾಜ, ನಿನ್ನ ಮಗಳಿಗೆ ಶ್ರೀದೇವಿ ಅಂತ ಹೆಸರಿಡೂದು ಬಿಟ್ಟು ಪಾಪ, ಆ ನಂದಿನಿಬಾಯಿ ಕೂಸಿಗೆ ಹೆಸರಿಟ್ಟಿಯಲ್ಲೋ?” ಎಂದಳು. ಅದಕ್ಕೆ ಅವನು, “ಇರಲಿ ಅತ್ತೀ, ಮಕ್ಕಳೆಲ್ಲಾ ಒಂದ ಏನವಾ… ನಾಳೆ ನನ್ನ ಮಗಳಿಗೆ ಇವಾ ಅದಾನಲ್ಲಾ ಸಂಪನ್ನ ಲೇಖಕಾ… ಇವನ ಹುಡುಗಿ ಹೆಸರಿಡತೇನಿ ಬಿಡು!” ಎಂದು ಚರ್ಚೆಗೆ ಮಂಗಳ ಹಾಡಿದ.

ಮೊದಲ ಪ್ರೇಮದ ಕಥೆಗಳು ಕೆದಕಿದಷ್ಟೂ ಹೊರಬರುತ್ತಲೇ ಇರುತ್ತವೆ. ಪ್ರತಿಯೊಬ್ಬರ ಬದುಕೆಂಬ ಪುಸ್ತಕದಲ್ಲೂ ಇಂತಹ ಮೊದಲ ಪ್ರೇಮದ ಒಂದಾದರೂ ಅಧ್ಯಾಯ ಇದ್ದೇ ಇರುತ್ತದೆ. ಕಟು ಮಧುರ ಅನುಭವವಾದ ಮೊದಲ ಪ್ರೇಮದಲ್ಲಿ ತುಂಬ ನೋವಿದೆ ಆದರೆ ಆ ನೋವಿನಲ್ಲೂ ಏನೋ ಹಿತವಿದೆ. ಇದನ್ನೇ ಕವಿಗಳು ಮಧುರ ಯಾತನೆ ಎಂದು ಕರೆದಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಮೊದಲ ಪ್ರೇಮ”

  1. ವಿಠ್ಠಲ ಶ್ರೀನಿವಾಸ ಕಟ್ಟಿ.

    ನಿಜಕ್ಕೂ ಪ್ರಥಮ ಪ್ರೇಮ ಅಷ್ಟೊಂದು ಉತ್ಕಟವಾಗಿರುತ್ತಾ? ಅದ್ಭುತ ಪ್ರೇಮ ಕತೆಗಳು. ಈ ಪ್ರೇಮಿಗಳು ಲೇಖಕರೆಂಬುದು ಗಮನಾರ್ಹ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter