ಇತ್ಯರ್ಥ

ಎಲ್ಲರೂ ಅವರವರ ಕೆಲಸದಲ್ಲಿ ಮುಳುಗಿದ್ದರು. ಅಷ್ಟರಲ್ಲಿ ಕೆಲಸದಾಕೆ ಓಡೋಡಿ ಬಂದು ಲಕ್ಷ್ಮಮ್ಮನವರ ಕಿವಿಯಲ್ಲಿ ಏನೋ ಪಿಸುಗುಟ್ಟಿದಳು. ಮಾಡುತ್ತಿದ್ದ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ಅದೆಲ್ಲಿಗೋ ಹೊರಟರು. ಅವರ ನಡಿಗೆ ಎಂದಿನಂತೆ ಇರಲಿಲ್ಲ. ವೃದ್ಧಾಪ್ಯದ ಸಹಜ ನಿಶ್ಯಕ್ತಿಯನ್ನೂ ಮೀರಿ ವೇಗವಾದ ಹೆಜ್ಜೆಗಳನ್ನು ಇಡುವಂತೆ ಮಾಡಿತ್ತು ಆ ಒಂದು ಸುದ್ದಿ. ಹೌದು ಪಕ್ಕದ ಮನೆಯ ಕೆಂಪಯ್ಯ ಹೆಣವಾಗಿದ್ದಾನೆ. ತನ್ನ ಮಾಂಗಲ್ಯ ಭಾಗ್ಯವನ್ನು ಅಳಿಸಿದ ಕಟುಕ ಅಷ್ಟೇನೂ ಆಳವಿಲ್ಲದ ಕೆರೆಯಲ್ಲಿ ಬಿದ್ದು ಸತ್ತಿದ್ದಾನೆ. ತನ್ನ ಮಗನ ಮರಣದ ನಂತರ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಕೆಂಪಯ್ಯ ಏನನ್ನೋ ಕನವರಿಸುತ್ತಾ, ಪಶ್ಚಾತ್ತಾಪ ಪಡುತ್ತಾ ಓಡಾಡಲು ಶುರು ಮಾಡಿದ್ದ. ಆತನೇ ಕೆರೆಗೆ ಹಾರಿದ್ದೋ ಅಥವಾ ಅಚಾನಕ್ಕಾಗಿ ಬಿದ್ದಿದ್ದೋ ಗೊತ್ತಿಲ್ಲ. ಅಂತೂ ಬೀದಿ ಹೆಣವಾಗಿದ್ದು ಮಾತ್ರ ತನ್ನ ಕರ್ಮ ಫಲದಿಂದಲೇ. ಕಾಗೆ, ಹದ್ದು, ನಾಯಿ, ನರಿಗಳು ದೇಹವನ್ನು ಕಿತ್ತು ತಿಂದಿದ್ದರೂ ಲಕ್ಷ್ಮಮ್ಮನವರಿಗೆ ಸಾಕ್ಷಿಯಾಗಿ ತೋರಿಸಲೆಂದು ಮುಖವನ್ನು ಮಾತ್ರ ಹಾಗೇ ಉಳಿಸಿದ್ದವು. ಲಕ್ಷ್ಮಮ್ಮನವರು ತನ್ನ ಗಂಡನ ಅಗಲಿಕೆಯಿಂದ ತುಂಬಾ ಬೇಸರವಾದಾಗ ಹಾಕುತ್ತಿದ್ದ ಶಾಪವನ್ನು ನಿಜವಾಗಿಸಲು ಅವುಗಳು ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದಂತಿತ್ತು ಆ ದೃಶ್ಯ. ದೃಶ್ಯವನ್ನು ನೋಡಿ ಖಚಿತಪಡಿಸಿಕೊಂಡ ಬಳಿಕ ವ್ಯರ್ಥವಾಗಿ ಕಳೆಯಲು ತನ್ನ ಬಳಿ ಸಮಯವಿಲ್ಲ ಎನ್ನುವ ಹಾಗೆ ಅಷ್ಟೇ ವೇಗವಾಗಿ ಮನೆಯ ಕಡೆಗೆ ಹೆಜ್ಜೆ ಹಾಕಿದರು.

ಮನೆಗೆ ಬಂದವರೇ ಸ್ನಾನ ಮಾಡಿ, ಮಡಿ ಬಟ್ಟೆ ತೊಟ್ಟು ದೇವರ ಕೋಣೆಯಲ್ಲಿ ತುಪ್ಪದ ದೀಪವನ್ನು ಹಚ್ಚಿದರು. ತನಗಾದ ಅನ್ಯಾಯಕ್ಕೆ ಕೊನೆಗೂ ತಾನು ನಂಬಿದ ದೈವ ನ್ಯಾಯವನ್ನು ಒದಗಿಸಿದೆ ಎನ್ನುವ ಸಂತೃಪ್ತಿ ಆ ಕಣ್ಣುಗಳಲ್ಲಿ ಕಾಣಿಸುತ್ತಿತ್ತು. ಮಕ್ಕಳನ್ನು ಮೊಮ್ಮಕ್ಕಳನ್ನು ಕರೆದು ದೈವದ ಅಭಯದ ನುಡಿಯನ್ನು ಮತ್ತೊಮ್ಮೆ ನೆನಪಿಸಿದ್ದರು.

ನೋವಲ್ಲೂ ನಲಿವಲ್ಲೂ ದೈವದ ಮುಂದೆ ಕಣ್ಣು ತುಂಬಿ ಪ್ರಾರ್ಥಿಸುವ ಗುಣ ಲಕ್ಷ್ಮಮ್ಮನವರಲ್ಲೂ ಇತ್ತು. ಅದೇ ಕಾರಣಕ್ಕೆ ತನಗೆ ಸ್ವಲ್ಪ ಏಕಾಂತದಲ್ಲಿ ಇರಬೇಕು ಅಂತ ಹೇಳಿ ಎಲ್ಲರನ್ನೂ ಹೊರಗೆ ಕಳುಹಿಸಿದರು. ತುಂಬಾ ಹೊತ್ತಿನ ತನಕ ಆಕೆಯ ಮತ್ತು ದೈವದ ನಡುವಿನ ಮೌನ ಸಂಭಾಷಣೆ ನಡೆದಿರಬಹುದು. ತನ್ನೆಲ್ಲಾ ನೋವುಗಳನ್ನು ದೈವದ ಪಾದ ಕಮಲದಲ್ಲಿ ಸಮರ್ಪಿಸಿ ನಿರಾಳವಾಗಿರಲೂ ಬಹುದು. ತಾನು ಯಾವ ವಿಷಯವನ್ನು ಕೇಳುವುದಕ್ಕಾಗಿ ಜೀವ ಹಿಡಿದು ಕಾದಿದ್ದರೋ ಅದು ನಡೆದುದನ್ನು ಖಾತರಿಪಡಿಸಿದ ಮೇಲೆ ಇನ್ನೇನೂ ಉಳಿದಿಲ್ಲ ಎನ್ನುವುದು ಅವರಿಗೆ ಅನಿಸಿರಲೂ ಬಹುದು. ಅದೇ ಸಂತೃಪ್ತಿಯಿಂದ ತನ್ನ ಬದುಕಿನ ಪಯಣವನ್ನು ಮುಗಿಸಿದ್ದರು.


ಇದು ಹೊನ್ನೂರಿನ ಕಥೆ. ಹೊನ್ನೂರು ಎನ್ನುವ ಹೆಸರಿನ ಬಗ್ಗೆ ಕೇಳಿದಾಗ ವೆಂಕಟ ಕೃಷ್ಣನವರು ಹೇಳುತ್ತಿದ್ದ ಉತ್ತರ ತಮ್ಮ ತೋಟಕ್ಕೆ ತಾಗಿಕೊಂಡಿರುವ ಅರಣ್ಯದಲ್ಲಿ ಚಿನ್ನದ ನಿಕ್ಷೇಪ ಇದೆಯಂತೆ ಎನ್ನುವುದು. ಪಾಳು ಬಿದ್ದಿದ್ದ ಹೊಲದಲ್ಲಿ ಅವರು ತನ್ನ ಕಠಿಣ ಪರಿಶ್ರಮದಿಂದ ಚಿನ್ನದಂತಹ ಬೆಳೆ ತೆಗೆಯುವ ಸೂಚನೆ ಊರಿಗೆ ಆ ಹೆಸರಿಟ್ಟ ಆ ಪುಣ್ಯಾತ್ಮನಿಗೆ ಮೊದಲೇ ಸಿಕ್ಕಿರಬಹುದು ಎನ್ನುವುದು ಅವರ ನನ್ನ ವಾದ.

ವೆಂಕಟ ಕೃಷ್ಣನವರದ್ದು ಸೌಮ್ಯ ಸ್ವಭಾವ ಅಷ್ಟೇ ಧೃಡ ಮನಸ್ಸಿನ ವ್ಯಕ್ತಿತ್ವ. ಭೂತಾಯಿಯ ಮೇಲಿನ ನಂಬಿಕೆ, ತಾನು ಆರಾಧಿಸುವ ದೈವದ ಮೇಲಿನ ಭಕ್ತಿ ಇವೆರಡೇ ಅವರಿಗೆ ಎಂಥಹಾ ಸಂದಿಗ್ಧ ಪರಿಸ್ಥಿತಿಯನ್ನೂ ಎದುರಿಸುವ ಧೈರ್ಯವನ್ನು ನೀಡುತ್ತಿದ್ದದ್ದು. ತುಂಬಾ ಶ್ರಮಜೀವಿ. ಮಳೆ ಬಿಸಿಲೆನ್ನದೆ ದುಡಿದು ರಾತ್ರಿ ಹೊತ್ತಲ್ಲಿ ಜ್ವರದಿಂದ ನಡುಗುವಾಗ ನಾಳಿನ ಸೂರ್ಯೋದಯ ನೋಡ್ತಾರೋ ಇಲ್ವೋ ಎನ್ನುವ ಭಯ ಕಾಡುತ್ತಿತ್ತು ಅಂತ ಅವರ ಶ್ರೀಮತಿಯವರಾದ ಲಕ್ಷ್ಮಮ್ಮನವರು ಆಗಾಗ ಹೇಳ್ತಿದ್ರು. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ನಡೆಸಿ ಮೂರು ಹೊತ್ತು ಹೊಟ್ಟೆಗಿಲ್ಲದಿದ್ದ ಪರಿಸ್ಥಿತಿಯಿಂದ ಮೂರೂ ಹೊತ್ತು ಬಂದವರಿಗೆಲ್ಲಾ ಅನ್ನ ಹಾಕುವಲ್ಲಿಯ ತನಕ ಬೆಳೆದಿದ್ದರು. ಸಹಜವಾಗಿ ಆಸರೆಯನ್ನು ಬಯಸಿ ಬರುವವರೂ, ಪ್ರಗತಿಯನ್ನು ಕಂಡು ಹೊಟ್ಟೆ ಕಿಚ್ಚು ಪಡುವವರೂ ಹೆಚ್ಚಾಗಿದ್ದರು.

ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಹಲವು ಸಲ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದೂ ಇದೆಯಂತೆ. ಅಂತಹ ಸಂದರ್ಭಗಳಲ್ಲಿ ತನ್ನ ರಕ್ಷಣೆಗೆ ಬಂದದ್ದು ದೈವಗಳು ಅಂತ ದಂಪತಿಗಳು ಆಗಾಗ ಹೇಳ್ತಾ ಇದ್ರು. ಯಾವುದೋ ಕೆಲಸದ ಮೇಲೆ ದೂರದ ಊರಿಗೆ ಬೆಳಗ್ಗಿನ ಜಾವ ಹೊರಡಬೇಕೆಂದು ರಾತ್ರಿ ಯೋಚನೆ ಮಾಡ್ತಾ ಕುಳಿತಿದ್ದವರಿಗೆ ನಾಳೆ ಬೇಡ ಈ ಕೂಡಲೇ ಹೊರಡು ಅಂತ ಯಾರೋ ಹೇಳಿದಂತಾಗಿ ತಕ್ಷಣ ಹೊರಟರೆಂದೂ, ಮರುದಿನ ದಾರಿಯಲ್ಲಿ ದಾಳಿ ನಡೆಸಲು ಕಾದಿದ್ದವರಿಂದ ಪಾರಾದನೆಂದೂ ಹೇಳುವಾಗ ಈ ಶತಮಾನದಲ್ಲೂ ದೈವ ದೇವರುಗಳೊಂದಿಗೆ ಸಂವಹನ ಸಾಧ್ಯವೋ ಎನ್ನುವ ಅನುಮಾನ ಕೂಡ ಬರ್ತಿತ್ತು.

ಶ್ರೀ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ ಯಾರು ನನ್ನಲ್ಲಿ ಸಂಪೂರ್ಣ ಶರಣಾಗತರಾಗುತ್ತಾರೋ ಅವರ ರಕ್ಷಣೆ ನನ್ನ ಜವಾಬ್ದಾರಿ ಎಂದು. ದೇವರಲ್ಲಿ ಪ್ರಾರ್ಥನೆ ಸಲ್ಲಿಸುವಾಗ್ಲೂ ದೇವರ ಇರುವಿಕೆಯ ಬಗ್ಗೆಯೇ ಸಂದೇಹಪಡುವ ನಮಗೆ ಸಂಪೂರ್ಣ ಶರಣಾಗತಿ ದೂರದ ಮಾತು.

ಚಿಕ್ಕಂದಿನಿಂದಲೂ ವರ್ಷಕ್ಕೊಮ್ಮೆ ನಡೆಯುವ ದೈವದ ನಡಾವಳಿಯ ಸಂದರ್ಭದಲ್ಲಿ ದೈವದ ಮುಂದೆ ನಿಂತು ಕಣ್ಣೀರಾಗುವ ಆ ಹಿರಿಯ ಜೀವವನ್ನು ನೋಡುವಾಗ ಖುಷಿಯ ಸಮಯದಲ್ಲಿ ಇವರು ಯಾತಕ್ಕೆ ಹೀಗೆ ಅಳುತ್ತಿರುವುದು ಅಂತ ಅನಿಸ್ತಿತ್ತು. ಸಂಪೂರ್ಣ ಶರಣಾಗತಿಯ ಅರ್ಥ ಈಗೀಗ ಆರ್ಥವಾಗ್ತಿದೆ.

ಕೆಲವು ಸಂದರ್ಭಗಳೇ ಹಾಗೆ; ವಿಜ್ಞಾನವನ್ನೂ ಮೀರಿದ ಅಥವಾ ನಿಜವಾದ ವೈಜ್ಞಾನಿಕ ಶಕ್ತಿಯು ನಮ್ಮನ್ನು ನಿಯಂತ್ರಿಸುತ್ತಿದೆ ಎನ್ನುವುದರ ಅನುಭವ ಆಗಾಗ ಆಗ್ತಿರುತ್ತದೆ. ಆ ವಾಸ್ತವವನ್ನು ಒಪ್ಪಿಕೊಳ್ಳುವ ಧೈರ್ಯ ಜಾತ್ಯಾತೀತತೆಯ ಮುಖವಾಡ ಕಳಚಿಡುವ ತನಕ ಬರುವುದಕ್ಕೆ ಹೇಗೆ ಸಾಧ್ಯ. ಅಷ್ಟಕ್ಕೂ ಜಾತ್ಯಾತೀತತೆ ಎಂದರೆ ಜಾತಿಗೆಡುವುದಲ್ಲ ಬದಲಾಗಿ ಜಾತಿಯನ್ನೂ ಮೀರಿದ ಎಲ್ಲರೊಂದಿಗೂ ಬೆರೆತು ಬಾಳುವ ವ್ಯವಸ್ಥೆ. ತನ್ನ ಧರ್ಮ, ಆಚರಣೆಗಳನ್ನೇ ಗೌರವಿಸದವನು ತನಗೇನೂ ತಿಳಿಯದ ಇನ್ನೊಂದು ಸಿದ್ಧಾಂತವನ್ನು ಗೌರವಿಸುತ್ತಾನೆ ಎನ್ನುವುದೇ ಹಾಸ್ಯಾಸ್ಪದ.

ತಾನು ಆರಾಧಿಸುವ ದೈವ ದೇವರುಗಳಿಗೆ ಮತಿ ಭ್ರಮಣೆಯಾಗಿದೆಯೆಂದು ಜರೆದ ಕಾರಣಕ್ಕೆ ಜರೆದವನ ಪೀಳಿಗೆಗೆ ಚಿತ್ತ ಸ್ವಾಸ್ಥ್ಯವಿಲ್ಲದಾಯ್ತೆಂದು ಹಿರಿಯರು ಹೇಳಿದಾಗ ಅದಕ್ಕೆ ವೈಜ್ಞಾನಿಕ ಕಾರಣಗಳನ್ನು ಮುಂದಿರಿಸಿ ಅಗೋಚರ ಶಕ್ತಿಯ ಅಸ್ತಿತ್ವವನ್ನು ಒಪ್ಪಿಕೊಳ್ಳದಿರುವುದಕ್ಕೆ ನೆಪ ಹುಡುಕುತಿದ್ದ ನನಗೆ ಆ ಶಕ್ತಿಯ ಮೇಲಿನ ನಂಬಿಕೆ ಗಟ್ಟಿಯಾಗಿದ್ದು ನಂಬಿಕೆಯೇ ಇಲ್ಲದವರು ಅನುಭವಗಳನ್ನು ಹಂಚಿಕೊಂಡಾಗ. ನಿಜವಲ್ಲದಿದ್ದರೆ ಊರಿಗೆ ಹೊಂದಿಕೊಂಡಿರುವ ಅರಣ್ಯದಲ್ಲಿ ತಾನು ರಾತ್ರಿ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರ ಕಣ್ತಪ್ಪಿಸಿ ಮರ ಕಡಿದು ಮಾರಾಟ ಮಾಡುವ ದಂಧೆಗೆ ನಿಂದೆ ಪಡಚ್ಚೋನ್ (ನಿನ್ನ ದೇವರು) ಆಗಾಗ ತೊಂದ್ರೆ ಕೊಡ್ತಾನೆ ಅಂತ ಹೇಳುವ ಅಗತ್ಯವಾದರೂ ಏನಿತ್ತು ನಮ್ಮೂರಿನ ಬಶೀರನಿಗೆ. ಪ್ರಕೃತಿಯಲ್ಲಿ ದೇವರನ್ನು ಕಾಣುವ ಹಿರಿಯರಿಗೆ ಪ್ರಕೃತಿಯನ್ನು ನಾಶ ಮಾಡಲು ಹೊರಟವನ ಅನುಭವಕ್ಕೆ ಬಂದ ದೈವದ ಚಮತ್ಕಾರಗಳನ್ನು ಕೇಳಿ ಆಶ್ಚರ್ಯವೇನೂ ಆಗಿರಲಿಲ್ಲ. ಅಮಾವಾಸ್ಯೆ, ಶುಕ್ರವಾರ, ಭಾನುವಾರ ಮೊದಲಾದ ದಿನಗಳಲ್ಲಿ ಪಂಜಿನ ಮೆರವಣಿಗೆ ಸಾಗಿದ ಹಾಗೆ ಕಾಣಿಸ್ತಿತ್ತು ಅಂತ ಆ ವ್ಯಕ್ತಿ ಆಗಾಗ ಹೇಳ್ತಿದ್ರು. ಪ್ರತ್ಯೇಕ ದಿನಗಳ ಜೊತೆಗೆ ವಾರದ ಒಂದೆರಡು ದಿನಗಳಲ್ಲಿ ತನ್ನ ಸಂಚಾರವಿರುತ್ತದೆಯೆಂದು ದೈವದ ನುಡಿಯನ್ನೂ ಕೇಳಿದಾಗ ಒಂದಕ್ಕೊಂದು ತಾಳೆಯಾದ ಹಾಗೆ ಅನಿಸುತ್ತಿತ್ತು.

ಹೀಗಿರಲೊಂದು ಹುಣ್ಣಿಮೆಯ ರಾತ್ರಿ ನೆಮ್ಮದಿಯು ಹೊದ್ದು ಮಲಗಿದ್ದ ಮನೆಯಲ್ಲಿ ಅಮವಾಸ್ಯೆಯ ಕರಾಳ ಛಾಯೆ ಆವರಿಸಿಬಿಟ್ಟಿತ್ತು. ಪ್ರತೀಸಲ ಪೇಟೆಗೆ ಹೋದಾಗ ಸೂರ್ಯ ಮುಳುಗುವ ಹೊತ್ತಿಗೆ ಮೊದಲೇ ಮನೆ ಸೇರುತ್ತಿದ್ದ ವೆಂಕಟ ಕೃಷ್ಣವರ ಸುಳಿವು ಆ ದಿನ ರಾತ್ರಿ ಒಂಬತ್ತಾದರೂ ಇಲ್ಲದಿದ್ದಾಗ ಶ್ರೀಮತಿಯವರ ಮನಸ್ಸಿನಲ್ಲಿ ತಳಮಳ ಶುರುವಾಗಿತ್ತು. ಮನೆಯಿಂದ ಪೇಟೆಗೆ ಸುಮಾರು ಎರಡು ಕಿಲೋಮೀಟರ್ ಅರಣ್ಯದ ನಡುವಿನ ಮಾರ್ಗದಲ್ಲಿ ಸಂಚರಿಸಬೇಕಾಗಿತ್ತು. ಇಲ್ಲಿ ಚಿರತೆ, ಕಾಡುಕೊಣಗಳ ಓಡಾಟ ವರ್ಷದ ಎಲ್ಲಾ ಋತುವಿನಲ್ಲೂ ತಪ್ಪಿದ್ದಲ್ಲ. ಅವುಗಳಿಂದ ಏನಾದ್ರೂ ಅಪಾಯ ಎದುರಾಗಿರಬಹುದೇ ಎನ್ನುವ ಭಯ. ಕೈಯಲ್ಲಿ ಟಾರ್ಚ್ ಹಿಡಿದು ಪಕ್ಕದ ಮನೆಗೆ ಹೋಗಿ ಸ್ವಲ್ಪ ನೋಡ್ಕೊಂಡು ಬರೋದಕ್ಕೆ ಹೇಳೋಣ ಅಂತ ಹೋದರು. ಆಗ ತಾನೇ ಸ್ನಾನ ಮುಗಿಸಿ ಮನೆಯೊಳಗೆ ಬರುತ್ತಿದ್ದ ಆ ಮನೆಯ ಯಜಮಾನ ಕೆಂಪಯ್ಯ ಗಾಬರಿಯಿಂದ ಕೇಳಿದ “ಏನಾಯ್ತು.. ಯಾಕೆ ಈ ಹೊತ್ತಲ್ಲಿ..” ಪೂರ್ಣಗೊಳಿಸುವ ಮೊದಲೇ ಲಕ್ಷ್ಮಮ್ಮನವರು ಎಲ್ಲವನ್ನೂ ವಿವರಿಸಿದರು. “ಬರುತ್ತಾರೆ ಬಿಡಿ..” ಅಂತ ಹೇಳಿ ಆತನೂ ಮನೆಯ ಒಳಗೆ ಹೋದ. ಅಷ್ಟರಲ್ಲಿ ದೂರದಲ್ಲಿ ಕತ್ತಲೆಯನ್ನು ಸೀಳಿ ಒಂದು ಬೆಳಕು ಓಡುತ್ತಾ ಬರುವುದು ಕಾಣಿಸ್ತು. ಇವರೇ ಬಂದಿರಬಹುದು ಅಂತ ಮನೆಯ ಕಡೆಗೆ ಹೆಜ್ಜೆ ಹಾಕಿದ ಲಕ್ಷ್ಮಮ್ಮನವರಿಗೆ ಕಂಡದ್ದು ಕೆಲಸದಾಳು. ಆತ ನಡುಗುತ್ತಾ ಎಲ್ಲವನ್ನೂ ವಿವರಿಸಿದ. ದಿನವೂ ಕೆಲಸ ಮುಗಿಸಿ ದೂರದ ಗಡಂಗಿಗೆ ಹೋಗಿ ಬರುತ್ತಿದ್ದವನು ಆ ಭಯಾನಕ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದನು. ನಡೆದು ಬರುತ್ತಿದ್ದಾಗ ಕಾಡು ದಾರಿಯಲ್ಲಿ ಯಾರೋ ನರಳುತ್ತಿರುವುದನ್ನು ಕೇಳಿ ಹತ್ತಿರ ಹೋಗಿ ನೋಡಿದವನಿಗೆ ಕಂಡದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೆಂಕಟ ಕೃಷ್ಣನವರು. ಏನಾಯ್ತು ಹೇಗಾಯ್ತು ಅಂತ ವಿಚಾರಿಸುವ ಮೊದಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಗಾಯದ ಗುರುತು ನೋಡಿದಾಗ ಕಾಡು ಪ್ರಾಣಿಗಳ ದಾಳಿಯ ಲಕ್ಷಣ ಕಂಡುಬರದ ಹಿನ್ನೆಲೆಯಲ್ಲಿ ಊರಿನ ಪ್ರಮುಖರು ಆರಕ್ಷಕರನ್ನು ಕರೆಸಿದ್ದರು. ಮಕ್ಕಳು ಚಿಕ್ಕವರಾಗಿದ್ದಿದ್ದರಿಂದ ಲಕ್ಷ್ಮಮ್ಮನವರು ಕೇಸ್ ನ ಹಿಂದೆ ಹೋಗುವ ಮನಸ್ಸು ಮಾಡಿರಲಿಲ್ಲ. ಏನೇ ಮಾಡಿದ್ರೂ ಹೋದ ಜೀವ ಮರಳುವುದಿಲ್ಲ ಅಲ್ವಾ. ಪಕ್ಕದ ಮನೆಯ ಕೆಂಪಯ್ಯನೂ ಸೇರಿ ಎಲ್ಲರ ಅಭಿಪ್ರಾಯವೂ ಅದೇ ಆಗಿತ್ತು. ಆರಕ್ಷಕರೂ ಈ ಕೇಸನ್ನು ಆದಷ್ಟು ಬೇಗ ಕ್ಲೋಸ್ ಮಾಡುವ ಅವಸರದಲ್ಲಿ ಇದ್ದಂತಿತ್ತು. ಅಂತೂ ರಿಪೋರ್ಟ್ ನಲ್ಲಿ ಅದೊಂದು ಕಾಡು ಪ್ರಾಣಿಗಳ ದಾಳಿಯೆಂದು ದಾಖಲಾಯ್ತು.

ಇದಾಗಿ ಸುಮಾರು ಆರು ತಿಂಗಳುಗಳು ಕಳೆದಿರಬಹುದಷ್ಟೇ. ಕೆಂಪಯ್ಯನ ಒಬ್ಬನೇ ಮಗ ಮಾರಣಾಂತಿಕ ಖಾಯಿಲೆಯಿಂದ ಬಳಲಿ ಅಸುನೀಗಿದ ಸಂದರ್ಭ. ಗಡಂಗಿನಲ್ಲಿ ಒಂದಾಗುವ ಎರಡೂ ಮನೆಯ ಆಳುಗಳ ಸಂಭಾಷಣೆಯ ನಡುವೆ ಆ ರಹಸ್ಯ ಬಯಲಾಗಿದ್ದು. ಯಾರಿಗಾಗಿ ತನ್ನ ಯಜಮಾನ ಆ ದುಷ್ಕೃತ್ಯ ನಡೆಸಿದ್ದನೋ ಅವನೇ ಹೆಣವಾಗಿ ಹೋಗಿದ್ದಾನೆ ಎನ್ನುವ ಕೆಂಪಯ್ಯನ ಮನೆಯ ಆಳಿನ ಮಾತು ಲಕ್ಷ್ಮಮ್ಮನವವರ ಮನೆಯ ಆಳಿನ ಮೂಲಕ ಊರಿಗೆಲ್ಲಾ ಹರಡಿತು. ತನಿಖೆಯ ವೇಳೆ ಹಣದ ರುಚಿ ತಿಳಿದಿರದ ಪೊಲೀಸ್ ಶ್ವಾನ ಪಕ್ಕದ ಮನೆಯ ಕಡೆಗೆ ಓಡಿ ಹೋಗಿದ್ದು ಸುಮ್ಮನೆ ಆಗಿರಲಿಲ್ಲ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿತ್ತು. ಆದರೆ ಹಣ ಬಲದ ಮುಂದೆ ಏನೂ ಮಾಡಲಾಗದ ಅಸಹಾಯಕತೆ.


ಕೆಲವು ತಿಂಗಳುಗಳ ನಂತರ ದೈವಗಳ ನೇಮೋತ್ಸವದ ಸಂದರ್ಭ. ಊರಿನ ಹಿರಿಯರ ಅಗಲುವಿಕೆಯ ನೋವು ಇನ್ನೂ ಕಡಿಮೆ ಆಗಿರಲಿಲ್ಲ. ಧರ್ಮದ ಹಾದಿಯಲ್ಲೇ ನಡೆದವರಿಗೆ ಇಂತಹ ಅನ್ಯಾಯ ಯಾಕಾಯಿತು ಎನ್ನುವ ಪ್ರಶ್ನೆಯನ್ನು ಅದೆಷ್ಟೋ ಬಾರಿ ನನಗೆ ನಾನೇ ಕೇಳಿಕೊಂಡಿದ್ದೆ. ಯಾರನ್ನು ವೆಂಕಟ ಕೃಷ್ಣವರು ತುಂಬಾ ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಿದ್ದರೋ ಅವರಿಂದಲೇ ಉತ್ತರವನ್ನು ಪಡೆಯಬೇಕು ಎನ್ನುವ ಹಠದಿಂದ ದೈವ ನರ್ತನ ನಡೆಯುವ ಜಾಗಕ್ಕೆ ನಡೆದೆ. ಮನಸ್ಸು ತುಂಬಾ ಭಾರವಾಗಿತ್ತು. ನೋವಿನಿಂದ ಕಣ್ಣುಗಳು ತುಂಬಿ ಬಂದಿತ್ತು. ಮುಂದಕ್ಕೆ ಹೆಜ್ಜೆಯಿಡುವುದಕ್ಕೂ ಕಷ್ಟವಾಯ್ತು. ಹೇಗೋ ಸಾವರಿಸಿಕೊಂಡು ದೈವಸ್ಥಾನದ ಕಟ್ಟೆಯ ಮೇಲೆ ಬಂದು ಕುಳಿತೆ.

“ಅವತಾರವು ಕೊನೆಯಾಗುವುದಕ್ಕೆ ಕಾರಣವಾಗಿ ಕೆಲವು ಘಟನೆಗಳು ನಡೆಯುತ್ತವೆ. ಜನನ ಮರಣಗಳೆಲ್ಲವೂ ಪೂರ್ವ ನಿಶ್ಚಿತ. ನನ್ನ ಕೃಷ್ಣಾವತಾರದ ಕೊನೆಯಾಗುವುದಕ್ಕೆ ಬೇಡನು ಕಾರಣವಾಗಿ ಬಂದ. ಆದಕ್ಕೆ ಆತ ಕಾರಣವಾದನೇ ಹೊರತು ಅವನ ತಪ್ಪೇನೂ ಇರಲಿಲ್ಲ. ಅದಕ್ಕೆ ಅವನಿಗೆ ಮೋಕ್ಷವನ್ನು ಕರುಣಿಸಿದೆ. ನನ್ನ ಭಕ್ತನ ಕೊನೆಯೂ ಹರಿತವಾದ ಆಯುಧದಿಂದ ನಡೆಯಬೇಕು ಎನ್ನುವುದು ವಿಧಿ ಲಿಖಿತವಾಗಿತ್ತು. ಆದ್ರೆ ಅವನ ಅಂತ್ಯ ಅಚಾತುರ್ಯದಿಂದ ಆಗಿದ್ದಲ್ಲ. ಒಬ್ಬ ವ್ಯಕ್ತಿ ದ್ವೇಷದಿಂದ ಮಾಡಿದ್ದು. ಅದಕ್ಕೆ ತಕ್ಕ ಶಿಕ್ಷೆಯನ್ನು ಕೊಡಬೇಕಾಗಿದ್ದು ನನ್ನ ಕರ್ತವ್ಯ. ಆ ವ್ಯಕ್ತಿ ಒಂದು ವರ್ಷವನ್ನು ಪೂರೈಸುವುದಿಲ್ಲ. ಇದು ನನ್ನ ಭರವಸೆ.”

ಕಣ್ಣುಗಳನ್ನು ಮುಚ್ಚಿದ್ದರಿಂದ ಹೇಳಿದ್ದು ದೈವ ನರ್ತಕನೋ ಅಥವಾ ದೈವವೋ ಎನ್ನುವುದು ಸ್ಪಷ್ಟವಾಗಿರಲಿಲ್ಲ. ಆದ್ರೆ ಧ್ವನಿ ಮಾತ್ರ ಸ್ಪಷ್ಟವಾಗಿತ್ತು. ದೈವ ದೇವರುಗಳ ಮೇಲೆ ಅಗಾಧವಾಗಿ ನಂಬಿಕೆಯಿಟ್ಟಿರುವ, ಆ ನಂಬಿಕೆಯ ಸಮರ್ಥನೆಗಾಗಿ ನಡೆದ ಘಟನೆಗಳನ್ನು ತಾರ್ಕಿಕ ನೆಲೆಗಟ್ಟಿನಲ್ಲಿ ಯೋಚಿಸುವ ಸನ್ಮಾರ್ಗದಲ್ಲಿ ನಡೆಯುವ ಅಸಂಖ್ಯಾತ ಜನ ಸಾಮಾನ್ಯರ ಅಂತರಂಗದಲ್ಲಿರುವ ನನಗೆ ಆ ಉತ್ತರ ಸಾಕಾಗಿತ್ತು. ನಿಧಾನವಾಗಿ ಕಣ್ಣು ತೆರೆದೆ. ನೆರೆದಿದ್ದವರೆಲ್ಲಾ ಒಟ್ಟಾಗಿ ಗೋವಿಂದನ ನಾಮ ಸ್ಮರಣೆಯಲ್ಲಿ ತೊಡಗಿದ್ದರು. ಭಕ್ತಿಯಿಂದ ಕೈ ಮುಗಿದೆ.

© ವಿಜಯಪ್ರಕಾಶ್ ಕಣಕ್ಕೂರು

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter