ಒಂದು ಸಲ ಪಟ್ಟಣದ ಇಲಿ ಹಳ್ಳಿಗೆ ಬಂತು. ಹಳ್ಳಿಯ ಪ್ರಶಾಂತವಾದ ವಾತಾವರಣವನ್ನು ಹುಲ್ಲುಗಾವಲುಗಳನ್ನು ನೋಡಿ ಅದಕ್ಕೆ ಆಶ್ಚರ್ಯವಾಯಿತು. ಹಳ್ಳಿಯ ಇಲಿ ಅದನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ , ಹಸಿಯಾದ ಬಟಾಣಿ ಮೂಲಂಗಿ , ಸೊಪ್ಪು , ಕಾಳು ಮುಂತಾದವುಗಳನ್ನು ತಿನ್ನಲು ಕೊಟ್ಟಿತು. ಆಗ ಪಟ್ಟಣದ ಇಲಿ ಹೀಗೆ ಹೇಳಿತು. ” ನಮ್ಮ ಊರಿಗೆ ಬಾ ಅಲ್ಲಿ ಎಷ್ಟೊಂದು ತರಹದ ಆಹಾರ ಇದೆ ” ಎಂದಿತು. ಹಳ್ಳಿಯ ಇಲಿ ಪಟ್ಟಣಕ್ಕೆ ಹೊರಟಿತು. ದಾರಿಯಲ್ಲಿ ತಮ್ಮ ಮೇಲೆಯೇ ಓಡಾಡುವಂತಿದ್ದ ಬಸ್ಸು , ಕಾರುಗಳನ್ನು ನೋಡಿ ಭಯವಾಯಿತು.
ಕಡೆಗೆ ಆ ಎರಡು ಇಲಿಗಳು ದೊಡ್ಡ ಮನೆ ಒಂದನ್ನು ಪ್ರವೇಶಿಸಿದವು. ಮನೆಯ ಹಜಾರದಲ್ಲಿ ಸೊಗಸಾದ ರತ್ನಗಂಬಳಿಯ ನೆಲಹಾಸು. ಸುಂದರವಾದ ಕೂರುವ ಆಸನಗಳು ಇದ್ದವು. ಅಲ್ಲಿಂದ ಅಡುಗೆ ಮನೆಗೆ ನಡೆದವು. ಅಲ್ಲಿ ಥರಾವರಿ ಬಿಸ್ಕತ್ ಗಳು ,ಪಾಯಸ, ಕಜ್ಜಾಯ ಬಗೆ ಬಗೆಯ ಪಲ್ಯಗಳು ಇದ್ದವು. ನಡೆದು ಆಯಾಸವಾಗಿದ್ದರಿಂದ ಎರಡು ಇಲಿಗಳು ಎಲ್ಲ ಭಕ್ಷ್ಯಗಳನ್ನು ರುಚಿ ನೋಡ ತೊಡಗಿದವು . ಆದರೆ ಅಷ್ಟರಲ್ಲಿ ಬಾಗಿಲು ತೆಗೆದ ಶಬ್ದವಾಯಿತು. ದಪ್ಪಗಿನ ಬೂಟಿನ ಶಬ್ದದ ಜೊತೆಗೆ ದೊಡ್ಡದೊಂದು ಬೆಕ್ಕು “ಮೀಯಾಂವ್ “ಎಂದ ಸದ್ದು ಕೇಳಿಸಿತು.ಹಳ್ಳಿಯ ಇಲಿ ಹೆದರಿ ಅದೇನು? ಎಂದು ಕೇಳಿತು .9ಪಟ್ಟಣದ ಇಲಿ ಅದು ” ನನ್ನ ಯಜಮಾನ ಮತ್ತು ಅವನ ಬೆಕ್ಕು ” ಎಂದಿತು . ಒಂದೇ ಏಟಿಗೆ ನೆಗೆದು ಕಿಟಕಿಯಿಂದ ಹೊರಗೆ ಹಾರಿ ಹಳ್ಳಿಯ ಇಲಿ ಓಡಿತು. ಅಂತಹ ಹೆದರಿಕೆಯ, ಉಸಿರುಗಟ್ಟುವ ವಾತಾವರಣದಲ್ಲಿ ಮೃಷ್ಟಾನ್ನ ತಿನ್ನುವುದಕ್ಕಿಂತ ತನ್ನ ಹಳ್ಳಿಯಲ್ಲಿ ಯಾರ ಹಂಗೂ ಇಲ್ಲದೆ ಬರಿಯ ಕಾಳು, ಸೊಪ್ಪು, ತರಕಾರಿಗಳನ್ನು ತಿನ್ನುವುದೇ ಮಹಾದಾನಂದ ಎಂದುಕೊಂಡು ಹೊರಟಿತು.
ಸ್ನೇಹಿತರೆ “ದೂರದ ಬೆಟ್ಟ ನುಣ್ಣಗೆ” ಬರಿ ನೋಡಲು ಚಂದ ಅಷ್ಟೇ , ಹಳ್ಳಿ ಇಲಿಯ ಕಥೆ ಏನಾಯ್ತು ನೋಡಿ! ಸ್ವಸ್ಥಾನದಲಿ ನಿರಾತಂಕದಿಂದ ಹೊಟ್ಟೆತುಂಬ ತಿಂದುಕೊಂಡು ಇದ್ದರೂ, ಪೇಟೆಗೆ ಹೋಗುವ ಆಸೆ ಮೂಡಿತು. ನಮ್ಮ ಹತ್ತಿರ ಇರುವದರಲ್ಲಿ ನಮಗೆ ತೃಪ್ತಿ ಇರುವುದಿಲ್ಲ. ಬೇರೆಯವರ ಹತ್ತಿರ ಇರುವುದನ್ನು ನೋಡಿ ಆಸೆ ಪಡುತ್ತೇವೆ. ಪೇಟೆಯಲ್ಲಿನ ಭಯಾನಕ ಪರಿಸ್ಥಿತಿಯನ್ನು ಕಂಡಾಗ ನಮ್ಮೂರೇ ನಮಗೆ ಲೇಸು ಎಂದರಿವಾಯಿತು.
ಎಷ್ಟೋ ಸಲ ಜೀವನದಲ್ಲಿ ಇಂಥ ಆಕಸ್ಮಿಕ ನಿರ್ಧಾರ ಕೈಗೊಳ್ಳುವ ಸಂದರ್ಭ ಬರುತ್ತವೆ. ಕೆಲವೊಮ್ಮೆ ಅವು ತಪ್ಪಾಗಿ ಪೇಚಾಡಬೇಕಾಗುತ್ತದೆ. ನಮ್ಮ ಜೊತೆಗೆ ಇರುವ ಬಹುತೇಕರು ಹೆಚ್ಚಿನ ಸಂಪಾದನೆಗಾಗಿ ವಿದೇಶಗಳಿಗೆ ಹೋಗಿದ್ದರು. ಕೆಲವರಿಗೆ ಕಛೇರಿ ಕೆಲಸದಲ್ಲಿ ತೊಂದರೆಯಾಗಿಯೋ ಹವಾಮಾನ ಒಗ್ಗದೇ ಆರೋಗ್ಯ ಸಮಸ್ಯೆಯಿಂದಾಗಿಯೋ ಅಲ್ಲಿ ಸರಿಯಾದ ಹೊಂದಾಣಿಕೆಯಾಗದೇ ಮರಳಿ ಬಂದವರು ಇದ್ದಾರೆ. ಹೋಗುವಾಗ ಸ್ವಸ್ಥಾನದಲ್ಲಿದ್ದ ಮನೆ- ಮಠ, ಆಸ್ತಿ- ಪಾಸ್ತಿ ಮಾರಿದ್ದರು. ಈಗ ಬಂದ ನಂತರ ಬಾಡಿಗೆಯ ಮನೆಯಲ್ಲಿ ವಾಸ ಮಾಡುವ ಸ್ಥಿತಿಯನ್ನು ತಲುಪಿದರು. ಹಾಗಂತ ಬದಲಾವಣೆ ಬೇಡವೆಂದಲ್ಲ. ಕೆಲವರು ತುಂಬ ಗಳಿಸಿಕೊಂಡವರೂ ಇದ್ದಾರೆ. ಯಾರೋ ಸ್ನೇಹಿತ ಹೇಳಿದ್ದನ್ನು ನಂಬಿ ನಿರ್ಧಾರ ತೆಗೆದುಕೊಳ್ಳುವ ಹಾಗಿಲ್ಲ. ಮೊದಲು ಒಬ್ಬರೇ ಹೋಗಿ ಕೆಲಸ ಖಚಿತವಾದ ನಂತರ ಕುಟುಂಬದವರು ಹೋಗುವುದು ಉಚಿತ. ಅಲ್ಲಿ ಕೆಲ ವರ್ಷ ವಾಸಿಸಿದ ನಂತರ ಇಲ್ಲಿಯ ಆಸ್ತಿಯನ್ನು ಮಾರಬೇಕಲ್ಲವೆ? ಮನುಷ್ಯನಿಗೆ ಸ್ವಲ್ಪದರಲ್ಲಿ ತೃಪ್ತಿ ಇಲ್ಲ. ಇನ್ನೂ ಬೇಕು, ಇನ್ನೂ ಬೇಕು ಎನ್ನುವ ಭಾವ ಬಂದು ಬಿಡುತ್ತೆ. ಇದ್ದದ್ದರಲ್ಲಿ ಸಂತೃಪ್ತಿ ಹೊಂದುವ, ಖುಷಿಯಿಂದಿರುವ ಮನೋಭಾವ ಇತ್ತೀಚೆಗೆ ಕಡಿಮೆ. ವಿದೇಶ ವಾಸದ ಹುಚ್ಚು ಮತ್ತು ಹಣ ಸಂಪಾದಿಸುವ ಅತಿಯಾದ ಅಪೇಕ್ಷೆ ಕೆಲವೊಮ್ಮೆ ಮನುಷ್ಯನ ವಿವೇಚನೆಗೆ ಜಡತ್ವ ಆವರಿಸಿರುತ್ತದೆ.
ಹಣದಿಂದ ನೆಮ್ಮದಿಯನ್ನು ಕಂಡುಕೊಳ್ಳಲು ಆಗುವುದಿಲ್ಲ ಎಂದು ಎಲ್ಲರಿಗೂ ಗೊತ್ತು .ಆದರೂ ಅದರ ಸುತ್ತನೇ ಗಿರಕಿ ಹೊಡಿಯುತ್ತಿರುತ್ತೇವೆ. ಇದೆ ಅಲ್ಲವೆ ಮಾಯೆ ! ಹೆಣ್ಣು, ಹೊನ್ನು, ಮಣ್ಣು ಈ ಮೂರು ಮಾಯೆಗಳು ಒಮ್ಮೊಮ್ಮೆ ಮನುಷ್ಯನನ್ನು ಪಾತಾಳಕ್ಕೆ ತಳ್ಳುವುದರಲ್ಲಿ ಸಂದೇಹವಿಲ್ಲ.
ಕನಕದಾಸರ ” ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ” ಎಂದು ಬದುಕಿನ ಮಾಯಾಜಾಲವನ್ನು ಸುಂದರ ಸಾಲುಗಳಲ್ಲಿ ಹೇಳಿದ್ದಾರೆ.
ನಮ್ಮ ಸುಖ,ಶಾಂತಿ ಕಸಿದುಕೊಳ್ಳುವಷ್ಷು ಹೆಚ್ಚಿನ ಹಣ ನಮಗ ಬೇಕೆ ! ಸ್ಥಳ ಬದಲಾಯಿಸಿ ಅಲ್ಲಿ ನರಕಯಾತನೆ ಅನುಭವಿಸುವದಕ್ಕಿಂತ ನಮ್ಮ ಊರಿನ ಹಬ್ಬ-ಹರಿದಿನ, ನಡೆ-ನುಡಿ , ಸಂಸ್ಕೃತಿಯ ಜೊತೆ, ನಮ್ಮ ಬಂಧು- ಬಳಗ, ಸ್ನೇಹಿತರೊಂದಿಗೆ ಒಡನಾಡುತ್ತ ಹಾಯಾಗಿ ಇರಬಹುದಲ್ಲವೆ! ಈಗ ಹೇಳಿ “ನಮ್ಮೂರು ಚಂದವೋ ನಿಮ್ಮೂರು ಚಂದವೋ”?