ಮಾಯಾನಗರಿಯಲ್ಲಿ ಡಾ. ವಿಶ್ವನಾಥ ಕಾರ್ನಾಡ್ ಅವರ ಕನ್ನಡ ಪರಿಚಾರಿಕೆ

ಮುಂಬೈಯಲ್ಲಿ ಇವತ್ತು ಕನ್ನಡ ಸರಾಗವಾಗಿ ಉಸಿರಾಡುತ್ತಿದ್ದರೆ ಅದಕ್ಕೆ ನಮ್ಮ ಹಿರಿಯರು ಕಾರಣ. ಈ ಮಾಯಾ ನಗರಿಯಲ್ಲಿ ಕನ್ನಡದ ಏಳಿಗೆಗಾಗಿ ಶ್ರಮಿಸಿದ ಪ್ರಮುಖರಲ್ಲಿ ಡಾ. ಕಾರ್ನಾಡ್ ಅವರದು ಎದ್ದು ಕಾಣುವ ಹೆಸರು.ಈ ಬಾರಿಯ ಪ್ರೊ. ಕುಂದಣಗಾರ ಪ್ರಶಸ್ತಿಗೆ ಭಾಜನರಾದ ಅವರ ಜೀವನಯಾನದ ಕುರಿತ ಕಿರು ಲೇಖನ ಇಲ್ಲಿದೆ.

(ಡಾ. ಕಾರ್ನಾಡ್ ಅವರ ಆತ್ಮಕಥನ- ‘ಪ್ರವಾಸಿಯ ಒಡಲು’)

ಡಾ. ಕಾರ್ನಾಡ ಅವರದು ಹೋರಾಟದ ಬದುಕು. ಚಿಕ್ಕ ವಯಸ್ಸಿನಲ್ಲಿಯೇ ಮುಂಬೈಗೆ ಬಂದು ಇಲ್ಲಿನ ರಾತ್ರಿ ಶಾಲೆಯಲ್ಲಿ ಓದಿ ಮೇಲೆ ಬಂದು ಘನ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಈಗ ಅವರಿಗೆ 85ರ ಪ್ರಾಯ. ಮುಂಬಯಿ ಮಹಾನಗರದ ಬದುಕಿನ ನಾನಾ ಸ್ಥಿತ್ಯಂತರಗಳನ್ನು ಅವರಂತೆ ಕಂಡು ಅನುಭವಿಸಿ ದಾಖಲಿಸಿದ ಸಾಹಿತಿಗಳು ಬಹಳ ಕಡಿಮೆ. ಮೂವತ್ತಕ್ಕೂ ಹೆಚ್ಚು ವೈವಿಧ್ಯಮಯವಾದ ಸಾಹಿತ್ಯ ಕೃತಿಗಳನ್ನು ರಚಿಸಿದ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಕಾರ್ನಾಡರ ಜೀವನ ಸಾಧನೆ ಹೊಸ ತಲೆಮಾರಿಗೆ ಪ್ರೇರಣದಾಯಿಯಾಗಿದೆ.

ಮುಂಬಯಿ ಮಹಾನಗರದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಮಹನೀಯರಲ್ಲಿ ಡಾ. ವಿಶ್ವನಾಥ ಕಾರ್ನಾಡ ಅವರೂ ಒಬ್ಬರು. ಅವರದು ಬಹುಮುಖ ಪ್ರತಿಭೆ ಹಾಗೂ ನಾನಾ ಬಗೆಯ ವ್ಯಕ್ತಿತ್ವ. ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಕವಿಯಾಗಿ, ಕತೆಗಾರರಾಗಿ, ಅನುವಾದಕರಾಗಿ, ಸಾಹಿತ್ಯ ಪರಿಚಾರಕರಾಗಿ ಅವರು ಹೆಸರು ಮಾಡಿದ್ದಾರೆ. ಡಾ. ಕಾರ್ನಾಡ್ ಅವರದು ಬಹುಭಾಷಿಕ ಸಂವೇದನೆ. ಅವರ ಮನೆಮಾತು ತುಳು. ಕನ್ನಡ, ಹಿಂದಿ, ಮರಾಠಿ, ಆಂಗ್ಲ ಭಾಷೆಗಳಲ್ಲಿ ಒಳ್ಳೆಯ ಪ್ರಭುತ್ವ ಹೊಂದಿರುವ ಅವರು ಬಹುಮುಖತೆಗೆ, ರಸಜ್ಞತೆಗೆ, ಸ್ಪೋಪಜ್ಞತೆಗೆ ಉತ್ತಮ ನಿದರ್ಶನ. ಕಾರ್ನಾಡರು ಮುಂಬಯಿ ಮಹಾನಗರದಲ್ಲಿ ಅರಳಿದ ಸಾಹಿತಿ. ಶ್ರಮ, ದುಡಿಮೆ, ಸತತ ಪ್ರಯತ್ನಗಳಿಂದ ತಮ್ಮ ವ್ಯಕ್ತಿತ್ವವನ್ನು ತಾವೇ ರೂಪಿಸಿಕೊಂಡ ಸಾಹಸಿ. ಈ ಮೂಲಕ ಮುಂಬಯಿ ಕನ್ನಡಿಗರ ಪ್ರೀತ್ಯಾದರಗಳಿಗೆ ಕಾರ್ನಾಡರು ಪಾತ್ರರಾಗಿದ್ದಾರೆ. ಕನ್ನಡದಲ್ಲಿ ಬೋಧನೆ ಹಾಗೂ ಸಂಶೋಧನೆಯನ್ನು ವೃತ್ತಿಯಾಗಿರಿಸಿಕೊಂಡು ಮುನ್ನಡೆದ ಕಾರ್ನಾಡರು ಅಲ್ಲಿಗೆ ವಿರಮಿಸದೆ ನುಡಿಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಶೋಧ, ಕುತೂಹಲ, ಅನ್ವೇಷಣೆಯ ಪ್ರವೃತ್ತಿಗಳ ಜತೆಗೆ ಮುಂಬೈ ಮಹಾನಗರ ನೀಡಿದ ಅಪಾರ ಲೋಕಾನುಭವಗಳಿಂದ ಅವರ ಸೃಜನಶೀಲತೆಗೆ ಹೊಸ ಅರ್ಥವಂತಿಕೆ ಪ್ರಾಪ್ತವಾದುದು ಗಮನೀಯ ಅಂಶ. ಕತೆಗಾರರಾಗಿ ಗಣನೀಯ ಸಾಧನೆ ಮಾಡಿದ ಅವರು ಮೇಲೆ ಹೇಳಿದ ಸಂಗತಿಗಳಿಂದ ಸ್ಪೂರ್ತಿ ಪಡೆದಿದ್ದಾರೆ. ಕಾರ್ನಾಡರು ಕನ್ನಡ ಸೇನಾನಿ. ಕಾಲೇಜಿನಲ್ಲಿ ಪಾಠ ಮಾಡಿ ಪಗಾರ ಎಣಿಸುವುದಕ್ಕಷ್ಟೇ ತೃಪ್ತರಾದವರಲ್ಲ. ಕೆಲಕಾಲ ಏಕಾಂಗಿಯಾಗಿ ಮುಂಬೈಯಲ್ಲಿ ‘ಪ್ರಯೋಗ’ ಕನ್ನಡ ದೀಪಾವಳಿ ಸಂಚಿಕೆಯನ್ನು ಹೊರತಂದು ಭಾಷಾಭಿಮಾನ, ಸಾಹಿತ್ಯ ಪ್ರೇಮಗಳನ್ನು ಎತ್ತಿ ನಿಲ್ಲಿಸಲು ಕಾರಣರಾಗಿದ್ದಾರೆ.
ಕರ್ನಾಟಕ ಸಂಘದ ಕಾರ್ಯಾಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯೂ ಸಹ ಅವರು ಕನ್ನಡದ ತೇರನೆಳೆಯುವ ಕಾಯಕದಲ್ಲಿ ನಿರತರಾದವರು. ಎಂ.ಡಿ ಕಾಲೇಜಿನಲ್ಲಿ ಬಹುಕಾಲ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ಅವರು ನಿವೃತ್ತರಾದರು. ಕಾರ್ನಾಡರು ಮುಂಬಯಿ ವಿಶ್ವವಿದ್ಯಾಲಯದ ಸಂಶೋಧನ ಮಂಡಳಿ, ಕನ್ನಡ ಅಭ್ಯಾಸ ಮಂಡಳಿ, ಕಲಾನಿಕಾಯಗಳಲ್ಲೂ ಕೆಲಸ ಮಾಡಿದ್ದಾರೆ. ಕನ್ನಡ ವಿಭಾಗದ ಎಂ.ಎ, ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಕಾರ್ನಾಡರ ಮಾರ್ಗದರ್ಶನದಲ್ಲಿ ಇಬ್ಬರು ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ನಿವೃತ್ತಿಯ ಎರಡೂವರೆ ದಶಕಗಳ ಬಳಿಕವೂ ಕನ್ನಡ ವಿಭಾಗದ ಶ್ರೇಯಸ್ಸಿಗೆ ಅವರು ಶ್ರಮಿಸುತ್ತಾ ಬಂದಿದ್ದಾರೆ. ಅನೇಕ ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಕನ್ನಡದ ಪ್ರತಿನಿಧಿಯಾಗಿ ಉಪನ್ಯಾಸ ನೀಡಿ ಕಸ್ತೂರಿ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವಂತೆ ನೋಡಿಕೊಂಡಿದ್ದಾರೆ.

ಡಾ. ಕಾರ್ನಾಡರ ಸಾಹಿತ್ಯ ಕೃಷಿ ವೈವಿಧ್ಯಮಯವಾದುದು. ‘ಕತೆ’ ಕಾರ್ನಾಡರ ಬಹುಮುಖ್ಯ ಅಭಿವ್ಯಕ್ತಿ ಮಾಧ್ಯಮ. ಹತ್ತಾರು ಒಳ್ಳೆಯ ಕತೆಗಳನ್ನು ಅವರ ಸಂಕಲನಗಳಿಂದ ಹೆಕ್ಕಿ ತೆಗೆಯಬಹುದಾಗಿದೆ. ಕನ್ನಡದ ಸಮರ್ಥ ಕತೆಗಾರರಲ್ಲಿ ಕಾರ್ನಾಡರೂ ಒಬ್ಬರಾಗಿದ್ದಾರೆ ಎಂಬುದಾಗಿ ವಿದ್ವಾಂಸರು ಈಗಾಗಲೇ ಅವರ ಪ್ರತಿಭೆಯನ್ನು ಗುರುತಿಸಿ ಗೌರವಿಸಿದ್ದಾರೆ. ಸಂದರ್ಶನ, ಸನ್ಯಾಸಿ, ಈರ್ಷೆ, ಭಸ್ಮಾಸುರ, ಎರಡನೆಯ ಮುಖ, ಆಯ್ದ ಕತೆಗಳು, ಕೊನೆಯಿಲ್ಲದ ಕತೆ ಮೊದಲಾದವು ಕಾರ್ನಾಡ್ ಅವರ ಪ್ರಕಟಿತ ಕಥಾ ಸಂಕಲನಗಳು. ಮುಂಬಯಿ ನಗರದ ಮಧ್ಯಮ ವರ್ಗದ ಜೀವನವನ್ನು ಅವರು ತಮ್ಮ ಕತೆಗಳಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾ ಬಂದಿದ್ದಾರೆ. ಗಂಡು ಹೆಣ್ಣಿನ ಆಕರ್ಷಣೆ, ವಿವಾಹ ಬಾಹಿರ ಸಂಬಂಧಗಳು, ಮನುಷ್ಯ ಸಂಬಂಧಗಳ ನಾನಾ ಮಗ್ಗಲುಗಳನ್ನು ವ್ಯಾಪಕವಾಗಿ ಅನ್ವೇಷಿಸುವ ನೋಡುವ ಆಸ್ಥೆ ಅವರ ಕತೆಗಳಲ್ಲಿ ಎದ್ದು ಕಾಣುತ್ತದೆ. ಈ ಮಹಾನಗರದ ಬದುಕಿನ ಒಡಲೊಳಗೆ ಅಡಗಿರುವ ಹಿಂಸೆ, ಕ್ರೌರ್ಯ, ನಯವಂಚಕತನ, ಸ್ವಾರ್ಥ, ಮನುಷ್ಯನ ವಿಕೃತ ಮನಸ್ಸುಗಳನ್ನು ಅವರು ಚಿತ್ರಿಸಿದರೂ ಬದುಕಿನ ಬಗೆಗೆ ಸ್ವತ: ಲೇಖಕರಿಗೆ ಅದಮ್ಯ ಉತ್ಸಾಹ ಎಲ್ಲೂ ಕುಂದಿಲ್ಲವೆಂಬುದು ಗಮನೀಯ ಅಂಶ.

‘ತುಳುವರ ಮುಂಬಯಿ ವಲಸೆ’ ಇದು ಕಾರ್ನಾಡರ ಸಂಶೋಧನ ಮಹಾಪ್ರಬಂಧ. ಕಳೆದ ಒಂದೂವರೆ ಶತಮಾನದಲ್ಲಿ ಮುಂಬಯಿಗೆ ವಲಸೆ ಬಂದ ತುಳುವರ ಸಿದ್ಧಿ-ಸಾಧನೆಗಳನ್ನು ಅಧಿಕೃತವಾಗಿ ದಾಖಲಿಸಿದ ಹಿರಿಮೆ ಕಾರ್ನಾಡರದು. ‘ಮುಂಬಯಿಯೇ ಒಂದು ಪುಟ್ಟ ಪ್ರಪಂಚ. ಕನ್ನಡಿಗರು ಅದರ ಚರಿತ್ರೆಯ ಒಂದು ಅವಿಭಾಜ್ಯ ಅಂಗ. ಕನ್ನಡಿಗರ, ಕನ್ನಡದ ಸ್ಪೋಪಜ್ಞತೆಯ ಎಳೆಗಳನ್ನು ಬಿಡಿಸಿ ಕೂಡಿಸಿ ಹಿಡಿದಿಟ್ಟಿರುವ ಪರಿ ಹೃದ್ಯವಾಗಿದೆ’ ಎಂಬುದಾಗಿ ಖ್ಯಾತ ಸಾಹಿತಿ, ಸಂಶೋಧಕ ಡಾ. ಹಂಪನಾ ಅವರು ವಿಶ್ವನಾಥ ಕಾರ್ನಾಡರ ಸಾಧನೆಯನ್ನು ಕೊಂಡಾಡಿದ್ದಾರೆ. ಸೃಜನ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಾಂಜಲವಾದ ಆಸಕ್ತಿಯನ್ನು ಹೊಂದಿರುವ ಅವರು ಸಂದರ್ಶನ, ಸಲ್ಲಾಪ, ಸ್ಪಂದನ ಸಂಚಯ, ಸಮಚಿತ್ತ ಮೊದಲಾದ ವಿಮರ್ಶಾ ಕೃತಿಗಳನ್ನು ಬರೆದು ನಾಡಿನ ವಿದ್ವಾಂಸರ ಗಮನ ಸೆಳೆದಿದ್ದಾರೆ. ಅವರ ಕೃತಿಗಳಲ್ಲಿ ತೌಲನಿಕ, ಬಹುಶಿಸ್ತೀಯ ಅಧ್ಯಯನ ಎದ್ದು ಕಾಣುತ್ತದೆ. ಪ್ರತಿಭಾ ರೇ ಅವರ ಒಡಿಯಾ ಕಾದಂಬರಿ ‘ಯಾಜ್ಞಸೇನಿ’ಯನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ‘ಸದಾ ಒಂದಿಲ್ಲೊಂದು ವಿದಾಯಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಮುಂಬಯಿ ಕನ್ನಡಿಗರ ಪಾಲಿಗೆ ಬಹುಮುಖ್ಯ ಆಸ್ತಿಯೆನಿಸಿದವರು ಡಾ. ಕಾರ್ನಾಡ್’ ಎಂಬುದಾಗಿ ಹಿರಿಯ ಸಾಹಿತಿ ಡಾ. ವಿಷ್ಣು ನಾಯ್ಕ ಅವರು ಕಾರ್ನಾಡರ ನುಡಿ ಸೇವೆಯನ್ನು ಶ್ಲಾಘಿಸಿದ್ದಾರೆ. ‘ಮೂಲತ: ಪರಿಣಾಮಕಾರೀ ಕತೆಗಾರರಾಗಿರುವ ಕಾರ್ನಾಡರು ಕಾವ್ಯ, ವಿಮರ್ಶೆ, ಸಂಶೋಧನೆ ಮತ್ತು ಅನುವಾದ ಕ್ಷೇತ್ರಗಳಲ್ಲಿ ಮಹತ್ವಪೂರ್ಣವಾದ ಬರಹಗಳನ್ನು ರಚಿಸಿದ್ದಾರೆ. ಪ್ರಗತಿಪರ ಚಿಂತಕರೂ, ಸ್ವಾಭಿಮಾನಿಗಳೂ ಆಗಿರುವ ಕಾರ್ನಾಡರು ಆರೋಗ್ಯಕರ ಸಮಾಜದ ಬಗೆಗೆ ಅಪರಿಮಿತವಾದ ಅಕ್ಕರೆಯನ್ನು ಹೊಂದಿರುವ ರೀತಿ ಗಮನೀಯವಾಗಿದೆ’ ಎಂಬುದಾಗಿ ಖ್ಯಾತ ಜಾನಪದ ವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಅವರು ಹೇಳಿರುವ ಮಾತು ನಿಜವೇ ಆಗಿದೆ. ಕನ್ನಡ ನಾಡುನುಡಿ ಸಾಹಿತ್ಯ, ಸಂಸ್ಕೃತಿಗಳ ಬಗೆಗೆ ವಿಶಾಲವಾದ, ಆರೋಗ್ಯಕರವಾದ ಮನೋಧರ್ಮವನ್ನು ನಾವು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ರಾಮಚಂದ್ರ ಉಚ್ಚಿಲ್ ಪ್ರಶಸ್ತಿ ಕಾರ್ನಾಡರ ಸಾಧನೆಗೆ ಸಂದ ದೊಡ್ಡ ಗೌರವ. ಡಾ. ವಿಶ್ವನಾಥ ಕಾರ್ನಾಡರಿಗೆ ‘ಸಮಾಲೋಕ’ ಎಂಬ ಅಭಿನಂದನ ಗ್ರಂಥವನ್ನು ಅವರ ಎಪ್ಪತ್ನಾಲ್ಕರ ಸಂಭ್ರಮದಲ್ಲಿ ಅರ್ಪಿಸಲಾಯಿತು. ಸಮಾಲೋಕ ಕೃತಿಯಲ್ಲಿ ಕಾರ್ನಾಡರು ತಮ್ಮ ಮನದಾಳದ ಮಾತುಗಳನ್ನು ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ‘ನನ್ನದು ಆದರ್ಶವಾಗಲೀ, ಆಕಾಂಕ್ಷೆಯಾಗಲೀ ದಕ್ಕದ ಕನಸಾಗಲೀ ತುಂಬಿಕೊಂಡ ಜೀವನವಲ್ಲ. ನಾನು ತಿಳಿದುಕೊಂಡಂತೆ ನಾನೊಬ್ಬ ಸಾಮಾನ್ಯ ಮನುಷ್ಯ. ಧನಿಕನಾಗಬೇಕು, ಸುಪ್ರಸಿದ್ಧನಾಗಬೇಕು, ನನಗೆ ಹಲವಾರು ಪ್ರಶಸ್ತಿಗಳು ಬಂದು ತಲೆಕೆಡಿಸಿಕೊಳ್ಳಬೇಕೆಂಬ ಅಭಿಲಾಶೆಯಾಗಲೀ, ಭ್ರಮೆಯಾಗಲೀ ನನ್ನ ಜೀವನದ ಸುಖಶಾಂತಿಯನ್ನು ಕದಡಲಿಲ್ಲ. ನನ್ನ ಪಾಲಿಗೆ ಏನು ಬರುತ್ತದೋ ಅದನ್ನು ಈವರೆಗೂ ಸಂತೋಷದಿಂದ ಸ್ವೀಕರಿಸಿದ್ದೇನೆ. ಕೆಲವೊಮ್ಮೆ ಅನಪೇಕ್ಷಿತ ವಂಚನೆಗಳಿಂದ ಮನಸ್ಸಿನಲ್ಲಿ ನೊಂದುಕೊಂಡದ್ದುಂಟು. ಏನಿದ್ದರೂ ‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ, ‘ಮದುವೆಗೋ ಮಸಣಕೋ’ ಕರಕೊಂಡು ಹೋದಲ್ಲಿ ನಾನು ಸಂಯಮದಿಂದ ಸಾಗಿದ್ದೇನೆ. ಈ ಸಂಯಮ, ಆತ್ಮ ಸಂತೃಪ್ತಿ ನನ್ನ ಬದುಕನ್ನು ಯಾವುದೇ ರೀತಿಯಲ್ಲಿ ನೋವಿಗೆ ಒಳಪಡಿಸಲಿಲ್ಲ.

ಮನುಷ್ಯನಿಗೆ ಮರಣ, ರೋಗ ರುಜಿನ ‘ಮನುಜ ಶರೀರದ ಸತ್ಯ’; ಜೀವನದಲ್ಲಿ ಮನಸ್ಸಿಗೆ ತುಂಬಾ ಹತ್ತಿರವಾಗಿದ್ದವರು ರೋಗದಿಂದ ನರಳುವುದನ್ನು ನೋಡಿದ್ದೇನೆ. ನೂರಾರು ಮರಣಗಳಲ್ಲಿ ಪ್ರತ್ಯಕ್ಷ ಪಾಲ್ಗೊಂಡಿದ್ದೇನೆ. ನನ್ನ ಪ್ರೀತಿಯ ಪತ್ನಿ ಟಿ.ವಿ ಸೀರಿಯಲ್ ನೋಡುತ್ತಿದ್ದಂತೆ ಹೃದಯಾಘಾತದಿಂದ ಮೃತ್ಯುವಶವಾದದ್ದನ್ನು ನೋಡಿದ್ದೇನೆ. ಸಾಂಸ್ಕೃತಿಕ ಸಭೆಯೊಂದರಲ್ಲಿ ವೇದಿಕೆಯಲ್ಲಿ ಭಾಷಣ ಮಾಡಿ ಕುರ್ಚಿಯಲ್ಲಿ ಕುಳಿತಲ್ಲೇ ಕುಸಿದು ಬಿದ್ದು ಕೆಲವೇ ನಿಮಿಷಗಳಲ್ಲಿ ಜೀವಬಿಟ್ಟ ಗೆಳೆಯ ಸೀತಾರಾಮ ಶೆಟ್ಟಿಯವರನ್ನು ನೋಡಿದ್ದೇನೆ. ಸಾವು ನಿಶ್ಚಿತ. ಅದಕ್ಕೆ ಪರ್ಯಾಯ ಇಲ್ಲ. ನಮ್ಮ ಶರೀರದಲ್ಲಿ ಉಸಿರು ಚಲಿಸುವ ತನಕ ಶರೀರ ಅಮೃತವಾಗಿರುತ್ತದೆ. ಅದನ್ನೇ ಆತ್ಮ ಎನ್ನುತ್ತಾರೆ. ನನ್ನ ಲೆಕ್ಕದಲ್ಲಿ ಅದು ಗಾಳಿ, ಪಂಚತತ್ವಗಳಲ್ಲಿ ಒಂದು. ಶರೀರವನ್ನು ಜೀವಂತವಾಗಿಡುವ ಪರಮ ಶಕ್ತಿ. ಆತ್ಮ -ಪರಮಾತ್ಮಗಳ ಸಂಬಂಧ ವಿವಾದ, ದಾರ್ಶನಿಕ ತರ್ಕದಲ್ಲಿ ನನಗೆ ಅಷ್ಟೇನೂ ವಿಶ್ವಾಸವಿಲ್ಲ’ ಎನ್ನುತ್ತಾರೆ ಅವರು. ಡಾ. ವಿಶ್ವನಾಥ ಕಾರ್ನಾಡರು ಯಾವುದೇ ಸಿದ್ಧಾಂತಕ್ಕೂ ಕಟ್ಟು ಬೀಳದೆ ಯಾವುದೇ ಪಂಥದಿಂದ ತನಗೆ ಸರಿ ಕಂಡ ವಿಚಾರಗಳನ್ನು ತೆಗೆದುಕೊಳ್ಳಬಲ್ಲರು. ಹೀಗಾಗಿ ಅವರ ಲೇಖನಗಳು ಹೆಚ್ಚು ಆಪ್ತವಾಗುತ್ತವೆ. ನಾವಿಂದು ಪಶ್ಚಿಮ ಮುಖಿಗಳಾಗಿದ್ದೇವೆ. ಅಲ್ಲಿಯ ಹಳಸಲು ವಿಮರ್ಶಾ ಸಿದ್ಧಾಂತದ ತಕ್ಕಡಿಯಲ್ಲಿ ನಮ್ಮ ಸಾಹಿತ್ಯವನ್ನು ತೂಗಿ ನೋಡಿ ಗಲಿಬಿಲಿಗೊಂಡಿದ್ದೇವೆ. ನಮ್ಮ ಸಂಸ್ಕೃತಿಯ ವಿಭಿನ್ನ ನೆಲೆಗಳಲ್ಲಿ ಇಲ್ಲಿನ ಸಾಹಿತ್ಯ ಚರ್ಚೆಗೊಳಗಾಗಬೇಕು ಮೌಲ್ಯಮಾಪನಗೊಳ್ಳಬೇಕು ಎನ್ನುತ್ತಾರೆ.ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಲ್ಲಿ ಒಳ್ಳೆಯ ಹಿಡಿತ ಸಾಧಿಸಿರುವ ಕಾರ್ನಾಡ್ ಅವರು ತೌಲನಿಕ ವಿಮರ್ಶೆಗೂ ಹೆಸರಾದವರು. ಸಂಚಯ, ಸಮಚಿತ್ತ, ಸ್ಪಂದನ, ಸಮಚಿಂತನ ಮೊದಲಾದ ವಿಮರ್ಶೆಯ ಕೃತಿಗಳನ್ನು ರಚಿಸಿದ್ದಾರೆ. ಡಾ. ವಿಶ್ವನಾಥ ಕಾರ್ನಾಡರು ಸ್ವಭಾವತ: ರಸಿಕ ಪ್ರವೃತ್ತಿಯವರು. ವೇಷ ಭೂಷಣದ ವಿಷಯದಲ್ಲಿ ಅವರಿಗೆ ವಿಶೇಷ ಕಾಳಜಿ. ಸ್ಪುರದ್ರೂಪಿಯಾಗಿರುವ ಅವರು ಸದಾ ಹಸನ್ಮುಖಿ. ಹಿರಿಕಿರಿಯರೊಂದಿಗೆ ಸಲೀಸಾಗಿ ಬೆರೆಯಬಲ್ಲರು. ಅವರದು ನೇರ ನುಡಿಯ ಸ್ವಭಾವ. ಅವರು ಸ್ವಾಭಿಮಾನಿ. ಅನಿಸಿದ್ದನ್ನು ಮುಲಾಜಿಲ್ಲದೆ ಹೇಳಿ ಅವರು ಕೆಲವರ ಕೋಪಕ್ಕೂ ಗುರಿಯಾದುದುಂಟು. ‘ಕಾರ್ನಾಡರ ಬಹುಮುಖ ಪ್ರತಿಭೆ. ಅವರ ಆಸಕ್ತಿ ರಸಿಕತೆಗಳಿಗೆ ಮಿತಿಯಿಲ್ಲ. ಎಂಭತೈದರ ವಯಸ್ಸಿನಲ್ಲೂ ಅವರು ಚೈತನ್ಯದ ಚಿಲುಮೆ. ಒಂದು ನಿಮಿಷವೂ ವ್ಯರ್ಥಗೊಳಿಸದಂತ ಚಟುವಟಿಕೆ. ಅನ್ಯಾಯ, ಪಕ್ಷಪಾತ, ತಾರತಮ್ಯಗಳನ್ನು ಕಂಡಾಗ ತಕ್ಷಣವೇ ಪ್ರತಿಭಟಿಸುವ ಎದೆಗಾರಿಕೆ ಅವರಲ್ಲಿದೆ’ ಎಂಬುದಾಗಿ ಹಿರಿಯ ಲೇಖಕ ಅಕ್ಷಯ ಮಾಸಿಕದ ಸಂಪಾದಕ ಡಾ. ಈಶ್ವರ ಅಲೆವೂರು ಅವರು ಹೇಳಿರುವ ಮಾತಿನಲ್ಲಿ ತಥ್ಯವಿದೆ.ಮುಂಬೈಯಲ್ಲಿ ಕನ್ನಡ ತನ ಆರದಂತೆ ನೋಡಿಕೊಂಡ ಕಟ್ಟಾಳು ಡಾ. ಕಾರ್ನಾಡ್ ಅವರಿಗೆ ಈಗ ಪ್ರೊ. ಕುಂದಣಗಾರ ಪ್ರಶಸ್ತಿ ದೊರಕಿರುವುದು ಹೆಮ್ಮೆಯ ಸಂಗತಿ. ಅವರಿಗೆ ಮತ್ತೊಮ್ಮೆ ಅಭಿನಂದನೆಗಳು.

                              ಡಾ. ಜಿ. ಎನ್. ಉಪಾಧ್ಯ. ಮುಂಬೈ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಮಾಯಾನಗರಿಯಲ್ಲಿ ಡಾ. ವಿಶ್ವನಾಥ ಕಾರ್ನಾಡ್ ಅವರ ಕನ್ನಡ ಪರಿಚಾರಿಕೆ”

  1. ಸುನೀಲ್ ದೇಶಪಾಂಡೆ, ಠಾಣೆ

    ಡಾ.ಕಾರ್ನಾಡರ ಸಾಹಿತ್ಯದ ಒಲವನ್ನು, ಅವರು ಗೈದ ಸಾಹಿತ್ಯ ಕೃಷಿಯನ್ನು ಇನ್ನಷ್ಟು ಬೆಳಕಿಗೆ ತರುವ ಸಾರ್ಥ ಪ್ರಯತ್ನ ಮಾಡಿದ ಡಾ.ಉಪಾಧ್ಯೆ ಅವರಿಗೂ, ಡಾ.ಕಾರ್ನಾಡರಿಗೂ ಅಭಿನಂದನೆಗಳು.

  2. Chintamani Sabhahit

    ಮುಂಬಯಿ ಮಾಯಾನಗರಿಯಂತೂ ಹೌದು. ಪ್ರತಿಯೊಬ್ಬರೂ ತಮ್ಮ ತಮ್ಮ ಬದುಕಿನ, ಉದ್ಯೋಗದ, ಉದ್ದೇಶದ ಹಿಂದೆ ಓಡಾಡುತ್ತಲೇ ಇರುತ್ತಾರೆ.
    ಡಾ.ಸಿ.ಪಿ.ಕೆ.ಯವರ ಒಂದು ಸಂಸ್ಕೃತ ಸುಭಾಷಿತದ ಸುಂದರ ಕನ್ನಡ ಅನುವಾದ ನೆನಪಾಗುತ್ತದೆ :
    ‘ಕಡಲಲಿ ತೇಲುವ ಕಟ್ಟಿಗೆಯೆರಡು
    ಚಣ ಸಂಧಿಸಿ ಮತ್ತಗಲುವವು
    ಆ ತೆರದಲಿ ನಮ್ಮೀ ಲೋಕದೊಳು
    ಜನರ ಸಮಾಗಮವಾಗುವದು.’
    ೧೪ ನವೆಂಬರ್ ೧೯೮೭ ಶನಿವಾರ, ಸಂಜೆ ೫.೩೦ ವಿ. ಟಿ. ಯ ಸಮೀಪದ ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಪ್ರೌಢ ಶಾಲಾ ಸಭಾಗೃಹದಲ್ಲಿ, ನಡೆದ ‘ಕವಿ ಸಮ್ಮೇಳನ’ದಲ್ಲಿ, ವಿಶ್ವನಾಥ ಕಾರ್ನಾಡರು ಅಧ್ಯಕ್ಷರಾಗಿದ್ದರು. ಅವರೂ ಕೂಡ ‘ಒಂದು ಪರಿಚಯ’ ಹಾಗೂ ‘ಅಂತರ’ ಎಂಬ ಎರಡು ಕವಿತೆಗಳ ವಾಚನ ಮಾಡಿದ್ದರು.’ಒಂದು ಪರಿಚಯ’ದ ಕೊನೆ ಹೀಗೆ ಸಾಗುತ್ತದೆ:
    “…….ಹರದಾರಿ ಹರಿದ್ವಾರಗಳ ಸುತ್ತಿ
    ದೇವರ ಪತ್ತೆ ಹಚ್ಚಬಲ್ಲೆ
    ……….. ಭಿತ್ತಿಯ ಮೇಲೆ
    ಕಟ್ಟುವೆನು ನಾನು ಹೊಸ ನಾಡೊಂದನು
    ರಸದ ಬೀಡೊಂದನು.”
    ನಾನು ನೋಡಿದ ವಿಶ್ವನಾಥರು, ಸೂಕ್ಷ್ಮ ಗ್ರಾಹಿ, ನಿರ್ಲಿಪ್ತ ಮನುಷ್ಯ ಹಾಗೂ ಸಮಯದ ಬೇಡಿಕೆಯಿದ್ದರೆ ಚಿಕಿತ್ಸಕ ವ್ಯಕ್ತಿ!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter