ಮನೆ ಮನೆಗಳಲ್ಲಿ, ಮನ ಮನಗಳಲ್ಲಿ ರಸ್ತೆಗಳಲ್ಲಿ ದೇಗುಲಗಳಲ್ಲಿ ಎಲ್ಲಿ ನೋಡಿದರಲ್ಲಿ ರಾಮ. ದಿನಪೂರ್ತಿ ವಿವಿಧ ಕಾರ್ಯಕ್ರಮಗಳು ಜರುಗಿದವು. ವಿಶೇಷ ಪೂಜೆ ಹೋಮ-ಹವನ ರಾಮ ತಾರಕ ಮಂತ್ರ , ರಾಮ ನಾಮ ಜಪ, ಶ್ರೀ ರಾಮನ ವೇಷ ಭೂಷಣ ಹಾಕಿದವರು, ರಾಮನ ಭಜನೆ, ಸಂಕೀರ್ತನೆ , ಉತ್ಸವಾದಿಗಳು ಹೀಗೆ ಒಂದೇ… ಎರಡೆ ಇಡೀ ಭಾರತವು ಬಾಲರಾಮನನ್ನು ಸ್ವಾಗತಿಸಿ, ಆಂದಿಸಿದ ಬಗೆ ಅನ್ಯಾದೃಶವಾದುದು. ಮಧ್ಯಾಹ್ನ ಊಟದಲ್ಲಿ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಗಳನ್ನು ಹಾಕಿ ಮಾಡಿದ ಪಾಯಸ ಸವಿದು ಧನ್ಯರಾದರು. ಸಂಜೆ ಹೊತ್ತು ದೀಪೋತ್ಸವದ ಪ್ರಭಾವಳಿ ಶುದ್ಧ ಭಾರತೀಯತೆಯ ಬೆಳಕನ್ನು ತುಂಬಿತ್ತು. ಅಬ್ಬಾ! ಮೈ-ಮನವೆಲ್ಲ ರೋಮಾಂಚನ ಉಂಟುಮಾಡಿತ್ತು. ಸರ್ವವೂ ರಾಮ ಮಯವಾಗಿತ್ತು.
ಆನಂದಮಯವಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಕಣ್ತಣಿಯುವಷ್ಟು ಅಯೋಧ್ಯೆಯ ರಾಮ ಮಂದಿರದ ಪಟಗಳು. ಹೀಗೆ ಆಬಾಲ ವೃದ್ಧರಾದಿಯಾಗಿ ರಾಮನೆಂಬ ಬೆಳಕಿನಲ್ಲಿ ಮಿಂದರು. ಎಲ್ಲರಿಗೂ ಹೊಸ ಸಂಚಲನವನ್ನು ಮೂಡಿಸಿದ ಈ ‘ ರಾಮ’ ಇಷ್ಟು ದಿನ ನಮ್ಮೊಳಗೆ ಇದ್ದನೆ? ಎಂದು ಪ್ರಶ್ನೆ ಮೂಡುತ್ತದೆ ! ನಾನು ಕಂಡಂತೆ ಬಹುತೇಕ ಮಧ್ಯವಯಸ್ಕರು ಪಾಶ್ಚಾತ್ಯ ಉಡುಗೆ ತೊಡುಗೆಗಳನ್ನು ಧರಿಸಿಕೊಂಡು ಓಡಾಡುತ್ತಿದ್ದವರು ಇಂದು ಸಾಂಪ್ರದಾಯಿಕ ಉಡುಗೆಯೊಂದಿಗೆ ಬಂದು ರಾಮನಾಮ ಜಪಮಾಡಿದರು. ಕೆಲವರು ಸುಂದರಕಾಂಡವನ್ನು ಪಾರಾಯಣ ಮಾಡಿದರು. ತಂದೆತಾಯಿಯರೊಂದಿಗೆ ಹೊಸ ಪೀಳಿಗೆಯ ಮಕ್ಕಳು, ಕಿಶೋರರು ಭಾಗವಹಿಸಿದ್ದು ವಿಶೇಷವಾಗಿತ್ತು. ಇದು ಜನ ಸಾಮಾನ್ಯರ ಮಾತಾದರೆ, ‘ರಾಮ ನನ್ನವನು ಅಭಿಯಾನ’ ಎಂಬ ಆನ್ಲೈನ್ ಜಾಲತಾಣಗಳಲ್ಲಿಯೂ ಕೂಡ ಸೆಲೆಬ್ರಿಟಿಗಳ ಶ್ರೀರಾಮ ಸ್ತೋತ್ರ ಪಠಣ,ವಾಚನ ಕೂಡ ರಾಮನ ಸಂಭ್ರಮಕ್ಕೆ ಮೆರಗು ನೀಡಿತ್ತು.
ಕೇವಲ ರಾಜನೊಬ್ಬನೇ ಅಥವಾ ನಾಯಕನೊಬ್ಬನೇ ಪರಂಪರೆಯ ಸಂಸ್ಕೃತಿ ಪ್ರಿಯನಾದರೆ ಸಾಲದು ಪ್ರಜೆಗಳಲ್ಲಿಯೂ ಅದೇ ರೀತಿಯ ಮನೋಭಾವ ಬೆಳೆಯಬೇಕು, ವಿಶೇಷವಾಗಿ ಇಂದಿನ ಯುವಕರಲ್ಲಿ ಸದಾಚಾರ, ಸದ್ಭಾವನೆ , ಸಹಬಾಳ್ವೆ ಪರಂಪರೆ ಬಗೆಗಿನ ಗೌರವ ಇದ್ದರೆ ಮಾತ್ರ ಇದು ಸಾಧ್ಯ. ಅಂದರೆ ‘ರಾಮ’ ಎಂಬುದು ಕೇವಲ ವ್ಯಕ್ತಿಯಲ್ಲ , ವ್ಯಕ್ತಿತ್ವ ಎಂಬ ಪ್ರಜ್ಞೆಯ ಹಿನ್ನೆಲೆಯಲ್ಲಿ ನಮ್ಮ ನಮ್ಮ ವ್ಯಕ್ತಿತ್ವಗಳನ್ನು ಬೆಳೆಸಿ ಕೊಳ್ಳಬೇಕಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಈ ಜಾಗೃತಿ ಸಾಧ್ಯವಾದದ್ದು ಹೇಗೆ ? ಪ್ರತಿಯೊಬ್ಬ ಭಾರತೀಯನಲ್ಲಿ ಭಕ್ತಿ ಇತ್ತೆ? ಮನದಲ್ಲಿ ಭಕ್ತಿ ಇದ್ದೂ , ಆಚರಣೆಗಳನ್ನ ಮಾತ್ರ ಮಾಡಲಾರನೆ ? ನಮ್ಮ ಸಂಸ್ಕೃತಿಯಲ್ಲಿ ಆಚರಣೆಗಳು
ಅಷ್ಟೊಂದು ಕಷ್ಟಕರವೆ? ಅಥವಾ ನಮ್ಮ ತಲೆಮಾರಿನವರಿಗೆ ಇದು ಕಷ್ಟ ಎನಿಸುವ ಕಾರಣವೇನು? ಹೀಗೆಲ್ಲ ಪ್ರಶ್ನೆಗಳು ಮೂಡುತ್ತವೆ.
ನಾಯಕನ ನಿಷ್ಠೆ ಮತ್ತು ಬದ್ಧತೆ ಅವನ ಪ್ರಜೆಗಳ ಮೇಲೆ ಪ್ರಭಾವ ಬೀರುವುದನ್ನು ಈಗಷ್ಟೇ ನಾವು ನೋಡಿದ್ದೇವೆ . ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಮೂರು ದಿನಗಳ ಉಪವಾಸ ಮಾಡಿದರೆ ಸಾಕು ಎಂದು ಬಹುಪಾಲು ಸಂತರು ಸಲಹೆ ನೀಡಿದ್ದರು. ಆದರೆ 74ನೇ ವಯಸ್ಸಿನಲ್ಲಿಯೂ 11 ದಿವಸಗಳ ಉಪವಾಸವನ್ನೇ ಮಾಡುತ್ತೇನೆಂದು ಮೋದಿಯವರು ದೃಢ ಸಂಕಲ್ಪ ಮಾಡಿದರು. ಹಾಗೂ ಸಂಕಲ್ಪದಂತೆ ನಡೆದುಕೊಂಡರು . ಅವರ ನಿಷ್ಠೆ , ಬದ್ಧತೆಗೆ ಇಡೀ ದೇಶವೇ ಸ್ಥಂಭೀಭೂತವಾಗಿದೆ. ಅವರ ನಿಷ್ಠೆ ಮತ್ತು ಬದ್ಧತೆ ಅಷ್ಟು ಪ್ರಬಲವಾಗಿದ್ದಿದ್ದರಿಂದಲೇ ಜನೆವರಿ 22, ಇಡೀ ದಿನ ರಾಮನೆಂಬ ಅಲೆ ಭಾರತದವನ್ನು ಆವರಿಸಿತ್ತು .ಬಹುಶಃ ಇವರ ನಿಷ್ಠೆ, ವ್ರತನೇಮಾದಿಗಳು, ದೇಶದ ಜನರಲ್ಲಿ ಜಾಗೃತಿಯನ್ನು ಉಂಟು ಮಾಡಲು ಕಾರಣವಾಯಿತು. ಜನರು ಸ್ಪಂದಿಸಿದರು.
ಜಾಗೃತರತರಾದರು . ಏಕೆಂದರೆ ಬಹುಶಃ ಸಾವಿರಾರು ವರ್ಷಗಳ ಹಿಂದಿನಿಂದ ನಮ್ಮ ನೆಲಮೂಲದ ಗುಣವೋ ಏನೋ ಗೊತ್ತಿಲ್ಲ. ಪ್ರತಿಯೊಬ್ಬರಲ್ಲಿ ರಾಮನೆಂಬ ಪ್ರಜ್ಞೆ ನಮ್ಮೊಳಗಿದ್ದದ್ದು ಇಷ್ಟು ದಿನ ನಮಗೇ ಅರಿವಿರಲಿಲ್ಲವೆನೋ !
ಕೇವಲ ಭಾರತದಲ್ಲಷ್ಟೇ ಅಲ್ಲ ವಿದೇಶದಲ್ಲೂ ರಾಮೋತ್ಸವ ಆಚರಿಸಿದ್ದಾರೆ. ಇದು ಮತ್ತಷ್ಟು ಹೆಮ್ಮೆಯ ವಿಷಯ. ಭಾರತದ ಆಚೆಗೂ ಈ ಪ್ರಜ್ಞಾ ಪ್ರಭಾತ ಹರಡಿದೆ. ಭಾರತೀಯರು ಎಲ್ಲೆಲ್ಲಿ ಇದ್ದಾರೊ ಅಲ್ಲೆಲ್ಲ ರಾಮನ ಪುನರಾಗಮನವಾಗಿದೆ.
ಹಾಗಾದರೆ ಈ ‘ಪ್ರಜ್ಞೆ’ ಎಂದರೇನು? ಅದು ಎಲ್ಲಿರುತ್ತದೆ? ಸಾಮಾನ್ಯವಾಗಿ ನಾವು ಜಾಗೃತ ಮನಸ್ಥಿತಿಯನ್ನು ಪ್ರಜ್ಞೆ ಎನ್ನುತ್ತೇವೆ. ಪ್ರಜ್ಞೆಯು ಮನಸ್ಸಿನಲ್ಲಿದೆ ಎಂದು ಆಧ್ಯಾತ್ಮಿಕ ಚಿಂತಕರು ತತ್ವಜ್ಞಾನಿಗಳು ಹೇಳಿದರೆ ಮೆದುಳಿನಲ್ಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ . ಎಲ್ಲ ಸಂದರ್ಭಗಳಲ್ಲಿ ಇದನ್ನು ಇದಮಿತ್ಥಂ ಎಂದು ಹೇಳಲು ಸಾಧ್ಯವಿಲ್ಲ. ಬೇರೆ ಬೇರೆಯವರಿಗೆ ಬೇರೆ ಬೇರೆ ವ್ಯಾಖ್ಯಾನಗಳು ಸರಿಯೆನಿಸಬಹುದು. ನಾವು ಮೇಲಿಂದ ಮೇಲೆ ಪತ್ರಿಕೆಗಳಲ್ಲಿ ,ಪುಸ್ತಕಗಳಲ್ಲಿ ಓದುವಾಗ ಭೌತಿಕ ಪ್ರಜ್ಞೆ, ವೈಚಾರಿಕ ಪ್ರಜ್ಞೆ ,ಚೈತನ್ಯ ಪ್ರಜ್ಞೆ, ವಿಶ್ವಾತ್ಮಕ ಪ್ರಜ್ಞೆ, ಕನ್ನಡಪ್ರಜ್ಞೆ ಮುಂತಾದವುಗಳು ಪ್ರಜ್ಞೆ ಎಂಬ ಗುಣವಾಚಕ ಪದದೊಂದಿಗೆ ಬಳಕೆಯಾಗಿರುತ್ತವೆ. ಪ್ರಜ್ಞೆ ಎನ್ನುವುದು ಇಂದ್ರಿಯಗಳ ಹಿಡಿತವನ್ನು ಮೀರಿರುವಂಥದ್ದು . ನಾವು ಯಾವುದೋ ಒಂದು ವಸ್ತು ಅಥವಾ ಪ್ರಾಣಿಯನ್ನು ನೋಡಿದಾಗ ಅದರ ಭೌತಿಕ ಹಾಗೂ ವೈಚಾರಿಕ ಮನಸ್ಥಿತಿಗಳ ವಿವರಗಳೊಂದಿಗೆ ನಾವು ಅದನ್ನು ಗ್ರಹಿಸುತ್ತೇವೆ.
ಉದಾಹರಣೆಗೆ ಒಂದು ಮರದ ಕೋಲನ್ನು ನೋಡಿದಾಗ ಅದರ ಉಪಯೋಗಗಳು , ಅಪಾಯಗಳೆರಡೂ ಮನಸಿಗೆ ಬರುತ್ತವೆ. ಇವುಗಳೊಂದಿಗೆ ಅದನ್ನು ನೋಡುತ್ತೇವೆ. ಪ್ರಜ್ಞೆ ಹಾಗಲ್ಲ ಮರದ ಕೋಲನ್ನು ಮಾತ್ರ ನೋಡುತ್ತದೆ. ಆಯಾ ಸಂದರ್ಭದಲ್ಲಿ ತಕ್ಕಂತೆ ಒಳ್ಳೆಯ ಹಾಗೂ ಕೆಟ್ಟ ರೀತಿಯಲ್ಲಿ ಅದು ಉಪಯೋಗವಾಗಬಹುದು. ಅದು ಬೇರೆ ಸಂಗತಿ. ಹಾಗಾದರೆ ಭೌತಿಕ ಹಾಗೂ ವೈಚಾರಿಕ ಪ್ರಜ್ಞೆಗಳಿಗಿಂತ ಹೊರತಾಗಿ ಇನ್ನೊಂದು ಪ್ರಜ್ಞೆ ಇದೆ ಎಂದಾಯಿತು. ಅದಕ್ಕೆ ನಿಜವಾದ ಪ್ರಜ್ಞೆ ಎನ್ನಬಹುದು. ಇದನ್ನು ಹೊಂದಿದವರೇ ಪ್ರಜ್ಞಾವಂತರು. ಪ್ರಜ್ಞಾವಂತರು ವಿಶ್ವ ಚೈತನ್ಯದ ಹಿನ್ನೆಲೆಯಲ್ಲಿ ಗುರುತಿಸಿಕೊಳ್ಳುತ್ತಾರೆ. ಎಲ್ಲರಲ್ಲೂ ಆ ಅಂತರಂಗದ ಚೈತನ್ಯವನ್ನು ಹುಡುಕಲು ಬಯಸುತ್ತಾರೆ .ಅಂತೆಯೇ ನರೇಂದ್ರರು ಪ್ರಜ್ಞಾವಂತ , ನಿಷ್ಠಾವಂತ ತಪಸ್ವಿಗಳಂತೆ 140 ಕೋಟಿ ಭಾರತೀಯರಲ್ಲಿ ರಾಮನೆ ಎಂಬ ಪ್ರಜ್ಞೆಯನ್ನು ಜಾಗೃತಗೊಳಿಸಲು ಹವಣಿಸಿದರು ಮತ್ತು ಸಫಲರಾದರು. ಉದ್ದೇಶ ಒಳ್ಳೆಯದಾಗಿದ್ದು , ಸಕಾರಾತ್ಮಕ ಭಾವನೆಯಿದ್ದರೆ ಎಲ್ಲವೂ ತನ್ನಿಂದ ತಾನೇ ಕೈಗೂಡುತ್ತದೆ, ಎನ್ನಲು ಇವರು ಮಾದರಿಯಾಗಿ ನಿಲ್ಲುತ್ತಾರೆ. ಹಿಂದೆ ಎಲ್ಲರೂ ರಾಮ ಮಂದಿರದ ನಿರ್ಮಾಣ ಅಶಾಂತಿಗೆ ಕಾರಣವಾಗುತ್ತದೆ ಎಂದು ಹಿಂಜರಿದರು . ಆದರೆ ಸರ್ಕಾರಾತ್ಮಕತೆಯಿಂದ ಬೆಂಕಿ ಯಾಗುವುದಿಲ್ಲ, ಇದು ಶಕ್ತಿ ಆಗುತ್ತದೆ ಎಂಬ ಭರವಸೆಯೊಂದಿಗೆ ಹೆಜ್ಜೆಯನ್ನು ಮುಂದಿಟ್ಟರು .
ಭಾರತೀಯರ ಮನೋಮಂದಿರದಲ್ಲಿ ಇನ್ನೂ ರಾಮನಿದ್ದಾನೆ ಪಾಶ್ಚಾತ್ಯ ಶಿಕ್ಷಣ, ಪಾಶ್ಚಾತ್ಯ ಸಂಸ್ಕೃತಿಯು ಭಾರತೀಯರನ್ನು ಮೇಲ್ನೋಟದಲ್ಲಷ್ಟೇ ಆವರಿಸಿಕೊಂಡಿದೆ. ಅಂತರಂಗದಲ್ಲಿ ಭಾರತೀಯತೆ ಭದ್ರವಾಗಿದೆ , ಎಂದು ಸಾಕ್ಷಿ ಸಮೇತ ತೋರಿಸಿಕೊಟ್ಟರು . ಅವರ ನಿಷ್ಠೆ ಸಕಾರಾತ್ಮಕ ಭಾವನೆ ಹಾಗೂ ಬದ್ಧತೆ ಭಾರತದ ಯುವಜನರಲ್ಲಿ ಈ ರಾಮನೆಂಬ ಪ್ರಜ್ಞೆಯು ಜಾಗೃತವಾಗಿ, ಸಮುದಾಯಗಳ ಹಂಗು ತೊರೆದು , ಎಲ್ಲರೂ ಸಮನ್ವಯ ಭಾವದಿಂದ ರಾಮೋತ್ಸವದಲ್ಲಿ ಪಾಲ್ಗೊಂಡಿದ್ದು ಸುವರ್ಣಾಕ್ಷರದಲ್ಲಿ ಬರೆದಿಡುವಂಥಹದ್ದು . ಪ್ರಜೆಗಳ ಕುರಿತು ಧನಾತ್ಮಕ ರೀತಿಯಲ್ಲಿ ವಿಶ್ವಾಸದಿಂದ ಕಂಡರು. ಭಾರತದ ಚೈತನ್ಯ ಪ್ರಜ್ಞೆಯಲ್ಲಿ ರಾಮನೆಂಬ ಅಲೆ ತೇಲಾಡಲು ಸಾಧ್ಯವಾಯಿತು. ” ಯಥಾ ರಾಜ ತಥಾ ಪ್ರಜಾ :” ಎನ್ನುವಂತೆ ನಾಯಕನ ಶ್ರೇಷ್ಠ ವ್ಯಕ್ತಿತ್ವ ಜನಸಾಮಾನ್ಯರಿಗೆ ಮಾದರಿಯಾಯಿತು .
ಹುಟ್ಟಿದಾಗಿನಿಂದಲೂ ಜೀವಿಯಲ್ಲಿ ಸೂಕ್ತವಾಗಿರುವ ಚೈತನ್ಯ ಪ್ರಜ್ಞೆ ಇರುತ್ತದೆ ಎಂದು ನಂಬಿಕೆ . ಅದನ್ನು ಹಲವು ಮಾರ್ಗಗಳ ಮೂಲಕ ಜಾಗೃತಗೊಳಿಸಬಹುದು ಎನ್ನುತ್ತಾರೆ. ಇದೇ ಸಾಧನೆ. ಈ ಚೈತನ್ಯ ಪ್ರಜ್ಞೆ ಎಂಬುದು ವೈಚಾರಿಕತೆಯನ್ನು ಮೀರಿ ಎಲ್ಲವನ್ನು ಇದ್ದಂತೆ ಕಾಣುವಂತಹ ಒಂದು ಸಾಮರ್ಥ್ಯವಾಗಿದೆ .ಹಾಗಾದರೆ ಈ ಪ್ರಜ್ಞೆಯನ್ನು ಕಾಣಲು ಶುದ್ಧ ಅಂತ:ಕರಣ ಬೇಕು. ಅದೇರೀತಿ ಸ್ಪಂದಿಸುವವರು ಕೂಡಾ ಹೃದಯದಲ್ಲಿ ಅಂತ:ಕರಣ ಹೊಂದಿರುವಂಥವರಾಗಿರಬೇಕು. ಅಂದಮೇಲೆ ನಾವು ಪ್ರಜೆಗಳು ಹೃದಯವಂತರಾಗಿದ್ದೇವೆ ಎಂದರ್ಥ ಅಲ್ಲವೆ?
ಹಾಗಾಗಿ ಎಂದಿಗೂ ಹೃದಯಹೀನರಾಗದಿರೋಣ !
ಸದಾ ಸರ್ವದಾ ಅಂತ:ಕರಣಿಗಳಾಗಿರೋಣ
****
3 thoughts on “ನೀತಿ ಪ್ರತೀತಿ – ವಿಭಾ ಪುರೋಹಿತ ಅಂಕಣl ರಾಮನೆಂಬ ಪ್ರಜ್ಞೆಯ ಸುತ್ತ ಮುತ್ತ……”
ಒಂದು ವಿಚಾರ :
ಪ್ರಾಚೀನದಿಂದ, ಹಿಂದೂಗಳ ಜೀವನ ಪದ್ಧತಿ ಸನಾತನವಾಗಿಯೂ, ಸಂಸ್ಕೃತ ಮಯವಾಗಿಯೂ (ಸಮ್ಯಕ್ ಕೃತಂ ಇತಿ ಸಂಸ್ಕೃತಮ್) ಅಮೂಲಾಗ್ರವಾಗಿ ಚೆನ್ನಾಗಿ ಸಂಸ್ಕರಿಸಲ್ಪಟ್ಟದ್ದು – ಲಾಕ್ಷಣಿಕ ಆಯಾಮದಿಂದ ಬೆಳೆಯುತ್ತಾ ಬಂದಿದ್ದು. ಮನುಷ್ಯನ ಮೂಲಭೂತ ಗುಣ ಹೃದಯದಿಂದ, ನಂತರ ಬುದ್ಧಿಯಿಂದ.
ಪ್ರಾಯಶಃ ಈ ಹಿನ್ನೆಲೆಯೇ, ಆದರ್ಶ (ಹೃದಯ)- ಉಪಪ್ರಜ್ಞಾತ್ಮಕ ; ವಾಸ್ತವ (ಬುದ್ಧಿ) -ಪ್ರಜ್ಞಾತ್ಮಕ ಸಮ್ಮಿಶ್ರ ತಳಹದಿಯ ಮೇಲೆ ನಡೆಯುತ್ತಿರುತ್ತದೆ.
ಬುದ್ಧಿಯಿಲ್ಲದವನು ಜೀವಂತವಿರಬಲ್ಲ ; ಹೃದಯವಿಲ್ಲದವನು ಜೀವಂತವಿರಲಾರ.
ರಾಮ : ಒಂದು ಆಳವಾಗಿ ಬೇರೂರಿದ ಆದರ್ಶ, ನಿರ್ದಿಷ್ಟ ಗುರಿ, ಭಕ್ತಿ ಭಾವ, ದೈವ ಭೀರುತ್ವ ಪ್ರಚೋದಿತ ದೈನ್ಯತೆ, ದೈವೀ ಪ್ರೇಮ, ಸಾಧನೆ, ಸಂಯಮ, ನಿಯತತೆ, ನಿಷ್ಠೆ, ಕಾರ್ಯ ತತ್ಪರತೆ, ತಾಳ್ಮೆ, ಸಹನೆ, ವಿವೇಕ, ಪ್ರಾಮಾಣಿಕತೆ, ಸಮಗ್ರತೆ, ಸಹಾನುಭೂತಿ, ಶ್ರದ್ಧೆ, ಗೌರವ, ನೈತಿಕ ಜವಾಬ್ದಾರಿ, ತ್ಯಾಗ, ನಿರಸೂಯೆ, ನಂಬಿಗಸ್ಥತನ, ವೀರತ್ವ, ವಿಶ್ವಾಸಾರ್ಹತೆ, ಗುಣವಾನ್, ಧರ್ಮಜ್ಞತೆ, ಕೃತಜ್ಞತೆ, ಧೈರ್ಯವಾನ್, ಶಿಷ್ಟತೆ ಹಾಗೂ ಮನಶ್ಶಾಂತಿ.
ಸರ್ವೇಷು ರಮತೇ ಇತಿ ರಾಮಃ ರಾ- ಸೂರ್ಯ, ಬೆಳಕು, ಮ – ಮನಸ್ಸು, ರಾಮ = ಅರಿವಿನ ಶುದ್ಧ ಬೆಳಕು.
ರಾಮ -ಕಾಲದ ಪರಿಮಿತಿಯ ಪ್ರಬುದ್ಧತೆಗಾಗಿ ಕಾಯುತ್ತಿದ್ದನೇ ಹೊರತು… ಅಸಹಾಯಕನಲ್ಲ.
ಬುದ್ಧಿಯ – ಬಾಹ್ಯ ಪ್ರಜ್ಞೆಯ- ಕಿರುಕುಳಕ್ಕೆ ರಾಮ ಆಸರೆ, ಅಂತರಂಗದ – ಉಪಪ್ರಜ್ಞೆ ಆದರ್ಶ ರಾಮ.
ದಿನಕ್ಕೆ ೧೮ ತಾಸುಗಳ – ಒಂಭತ್ತು ವರ್ಷಗಳ ಇಚ್ಛಾ ಶಕ್ತಿಗೆ, ಅವ್ಯಾಹತ ಕಟ್ಟುನಿಟ್ಟಿನ ನಿಷ್ಠೆ ಮತ್ತು ಬದ್ಧತೆ,ನಿಗೃಹ, ಪ್ರಾಯೋಗಿಕ ಸಕಾರಾತ್ಮಕ ಸಾಕಾರದ ನೇತೃತ್ವಕ್ಕೆ, ಕಾಂತೀಯತೆ ಸಹಜವಾಗಿ ಒಲಿದಿದೆ.
ಪ್ರತ್ಯಕ್ಷಮ್ ಕಿಮ್ ಪ್ರಮಾಣಂ ?
ಕಾನೂನಿನ ನ್ಯಾಯ : ಬುದ್ಧಿ ಜನಿತ ….. ನೈಸರ್ಗಿಕ ನ್ಯಾಯ : ರಾಮ ಜನಿತ.
ಅಂತಿಮ ಗೆಲುವು ಯಾವಾಗಲೂ – ನೈಸರ್ಗಿಕ ನ್ಯಾಯಕ್ಕೆ !
ರಾಮ : ಅನ್ನುವದು ಶಕ್ತಿಯುತ ಉಪಪ್ರಜ್ಞೆ, ಹೀಗಾಗಿ ಒಂದು ಆಶಾವಾದ !!
ಕಾಲಾತೀತತೆಯ ಏಕಾಗೃತೆಯಲ್ಲಿ, ಬಾಲರಾಮನ ಪ್ರಾಣ ಪ್ರತಿಷ್ಠೆಯ ಕಣ್ಣು ಬಿಚ್ಚುವಾಗಿನ ಸಮಯ , ಎದುರಿಗೆ ಹಿಡಿದ ಕನ್ನಡಿ ಒಡೆದದ್ದೇ ಸತ್ಯದ ಪ್ರಮಾಣವಾದಾಗ, ‘ಯದ್ ಭಾವಂ ತದ್ ಭವತಿ !!’ ಯಾಕಾಗಬಾರದು?
ಸರ್ ತಮ್ಮ ಪರಾಮರ್ಶನ ಹಾಗೂ ಚಿಂತನ ಚೆನ್ನಾಗಿದೆ. ಸಮಯಾವಕಾಶ ಮಾಡಿಕೊಂಡು ಲೇಖನ ಓದಿ ಅವಲೋಕನ ಮಾಡಿರುವುದಕ್ಕೆ ಧನ್ಯವಾದಗಳು