ಕುಂದರನಾಡ ಪಾಟೀಲ ರೈತ ಚಳುವಳಿಯ ಹಿನ್ನಲೆ ಹೊಂದಿದವರು. ಸ್ವತಃ ರೈತರಾಗಿದ್ದ ಅವರು ಎಂಬತ್ತರ ದಶಕದಲ್ಲಿ ನಡೆದ ನರಗುಂದ ರೈತ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಕೆಲವು ವರ್ಷಗಳ ಕಾಲ ‘ಗರ್ದಿ ಗಮ್ಮತ್ತು’ ಎಂಬ ಪತ್ರಿಕೆ ಸಹ ತಂದಿದ್ದರು. ಹಲವು ವರ್ಷಗಳ ಹಿಂದೆ ನಿಧನರಾದ ಪಾಟೀಲರು ಹೆಚ್ಚು ಬರೆದಂತೆ ಕಾಣುವುದಿಲ್ಲ. ಅವರ ‘ಹಂತ’ (೧೯೮೩) ಮತ್ತು ‘ಉಲ್ಲಂಘನೆ’ (೧೯೯೪) ಎಂಬ ಎರಡು ಕಾದಂಬರಿಗಳನ್ನು ಹೊರತು ಪಡಿಸಿ ಉಳಿದ ಕೃತಿಗಳ ಬಗ್ಗೆ ಮಾಹಿತಿ ಲಭ್ಯವಿಲ್ಲ.
ಧಾರವಾಡದ ಸಿಂಚನ ಗ್ರಂಥಮಾಲೆಯ ಮೂಲಕ ಪ್ರಕಟವಾದ ‘ಉಲ್ಲಂಘನೆ’ ಒಂದು ವಿಶಿಷ್ಟ ಕಾದಂಬರಿ.
ಕನ್ನಡಿಗರಿಗೆ ಬೆಳಗಾವಿ, ಮರಾಠಿಗರಿಗೆ ಬೆಳಗಾಂವ ಮತ್ತು ಬ್ರಿಟಿಷರಿಗೆ ಬೆಲ್ಗಾಮ್ ಆದ ಬೆಳಗಾವಿ ನಗರ ಹತ್ತು ಹಲವು ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ಊರು. ಕನ್ನಡ ಮತ್ತು ಮರಾಠಿಗರ ನಡುವೆ ಬಹು ದೊಡ್ಡ ಕಂದಕ ನಿರ್ಮಾಣವಾಗಲು ಬೆಳಗಾವಿ ಗಡಿ ಸಮಸ್ಯೆಯೇ ಕಾರಣ. ಮರಾಠಿ ರಾಜಕಾರಣಿಗಳಿಗೆ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಬೆಳೆಯಲು ಬೆಳಗಾವಿ ಗಡಿ ಸಮಸ್ಯೆಯಿಂದ ತುಂಬ ಪ್ರಯೋಜನವಾಗಿದೆ. ಒಂದು ಕಾಲದಲ್ಲಿ ವಿಶಾಲ ಮುಂಬೈ ಪ್ರಾಂತದ ದಕ್ಷಿಣ ಭಾಗವಾಗಿದ್ದ ಬೆಳಗಾವಿ ೧೯೫೬ರಲ್ಲಿ ಮೈಸೂರು ರಾಜ್ಯಕ್ಕೆ ಸೇರಿತು. ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದ ಬೆಳಗಾವಿ ಭಾಷಾವಾರು ಪ್ರಾಂತ್ಯಗಳ ರಚನೆಯಾದ ಸಂದರ್ಭದಲ್ಲಿ ನ್ಯಾಯಯುತವಾಗಿಯೇ ಮೈಸೂರು ಪ್ರಾಂತ್ಯಕ್ಕೆ ಸೇರಿದ್ದು ಮರಾಠಿಗರಲ್ಲಿ ತೀವ್ರ ಅಸಹನೆಯುಂಟು ಮಾಡಿತು. ಬರುಬರುತ್ತಾ ಈ ಅಸಹನೆ ದ್ವೇಷವಾಗಿ ಮಾರ್ಪಟ್ಟಿತು. ಬೆಳಗಾವಿಯನ್ನು ಬಿಡೆವು ಎಂದು ಮರಾಠಿಗರೂ, ಬೆಳಗಾವಿಯನ್ನು ಕೊಡೆವು ಎಂದು ಕನ್ನಡಿಗರೂ ಹೆಚ್ಚು ಕಡಿಮೆ ಏಳು ದಶಕಗಳಿಂದ ಹಗ್ಗಜಗ್ಗಾಟ ನಡೆಸಿದ್ದಾರೆ. ಇಂದಿಗೂ ಕೂಡ ಬೆಳಗಾವಿ ಗಡಿ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರದ ಎರಡ್ಮೂರು ದಶಕಗಳಲ್ಲಿ ಉಂಟಾದ ಸಾಮಾಜಿಕ ಮತ್ತು ರಾಜಕೀಯ ಪಲ್ಲಟಗಳ ಹಿನ್ನಲೆಯಲ್ಲಿ ಬೆಳಗಾವಿಯನ್ನು ಕೇಂದ್ರವಾಗಿಟ್ಟುಕೊಂಡು ಬರೆದ ಕಾದಂಬರಿ ‘ಉಲ್ಲಂಘನೆ’. ಗಾಂಧೀಜಿಯವರ ಆಶಯದಂತೆ ಭಾಷಾವಾರು ಪ್ರಾಂತ್ಯಗಳ ರಚನೆಯ ಪ್ರಕ್ರಿಯೆಯೊಂದಿಗೆ ಆರಂಭವಾಗುವ ಈ ಕಾದಂಬರಿ ಮೈಸೂರು ಪ್ರಾಂತ್ಯ ಕರ್ನಾಟಕ ಎಂದು ಮರುನಾಮಕರಣಗೊಳ್ಳುವುದರೊಂದಿಗೆ ಮುಕ್ತಾಯ ಹೊಂದುತ್ತದೆ. ‘ಉಲ್ಲಂಘನೆ’ಯ ಕಥಾನಾಯಕ ಚೆನ್ನಬಸೂ ಶಿಕ್ಷಣಕ್ಕಾಗಿ ಬೆಳಗಾವಿಗೆ ಬರುತ್ತಾನೆ. ಅವನು ಹೈಸ್ಕೂಲ್ ಸೇರುವ ಹೊತ್ತಿಗೆ ದೇಶದಾದ್ಯಂತ ಭಾಷಾವಾರು ಪ್ರಾಂತ್ಯಗಳ ರಚನೆಗೆ ತೀವ್ರ ಹೋರಾಟ ಆರಂಭವಾಗಿರುತ್ತದೆ. ಆಂಧ್ರ ಪ್ರದೇಶದ ರಚನೆಗೆ ಆಗ್ರಹಿಸಿ ಉಪವಾಸ ಕುಳಿತ ಪೊಟ್ಟಿ ಶ್ರೀರಾಮುಲು ಅವರು ಮರಣ ಹೊಂದಿದ ಮೂರೇ ದಿನಗಳಲ್ಲಿ ಸಂಯುಕ್ತ ಆಂಧ್ರ ಪ್ರದೇಶ ಭಾರತದ ಮೊದಲ ಭಾಷಾವಾರು ಪ್ರಾಂತ್ಯವಾಗಿ ಅಸ್ತಿತ್ವಕ್ಕೆ ಬರುತ್ತದೆ. ಪ್ರತ್ಯೇಕ ರಾಜ್ಯಗಳಿಗಾಗಿ ದೇಶದೆಲ್ಲೆಡೆ ಹೋರಾಟ ಹೆಚ್ಚಾದಾಗ ಪ್ರಧಾನಿ ನೆಹರು ಅವರು ಅನಿವಾರ್ಯವಾಗಿ ಭಾಷಾವಾರು ಪ್ರಾಂತ್ಯಗಳ ರಚನೆಗೆ ಫಜಲ್ ಅಲಿ ನೇತೃತ್ವದ ಆಯೋಗವೊಂದನ್ನು ನೇಮಿಸುತ್ತಾರೆ.
ಮುಂಬೈ ಪ್ರಾಂತದ ಭಾಗವಾಗಿದ್ದ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕೆಂದು ಕನ್ನಡಿಗರೂ, ಮಹಾರಾಷ್ಟ್ರಕ್ಕೆ ಸೇರಬೇಕೆಂದು ಮರಾಠಿಗರೂ ಹೋರಾಟ ಆರಂಭಿಸುತ್ತಾರೆ. ಹೊಸ ಹರೆಯಕ್ಕೆ ಕಾಲಿಟ್ಟ ಚೆನ್ನಬಸೂ ಇಂತಹ ವಿದ್ಯಮಾನಗಳನ್ನೆಲ್ಲ ತುಂಬ ಕುತೂಹಲದಿಂದ ನೋಡುತ್ತ, ಬೆಳೆಯತೊಡಗುತ್ತಾನೆ. ತನ್ನ ಸುತ್ತಮುತ್ತ ನಡೆದ ಹತ್ತು ಹಲವು ಅಹಿತಕರ ಘಟನೆಗಳಿಗೆ ಅವನು ಮೂಕ ಸಾಕ್ಷಿಯಾಗಬೇಕಾಗುತ್ತದೆ. ಹರೆಯದ ತಳಮಳಗಳಿಂದ ಕುದಿಯುವ ಚೆನ್ನಬಸೂ ಎದುರು ಮನೆಯ ಮ್ಯಾನೇಜರ್ ಹೆಂಡತಿ ಮಾಲಿನಿಯ ಜೊತೆ ಅಕ್ರಮ ಸಂಬಂಧ ಬೆಳೆಸುತ್ತಾನೆ. ಚೆನ್ನಬಸೂ ಮತ್ತು ಮಾಲಿನಿಯ ನಡುವಿನ ಸಂಬಂಧ ದೈಹಿಕ ಕಾಮನೆಗಳನ್ನು ಪೂರೈಸುವ ಮಟ್ಟಕ್ಕೆ ಮಾತ್ರ ಸೀಮಿತಗೊಳ್ಳುತ್ತದೆ. ಅತೃಪ್ತ ಮತ್ತು ಚಾಣಾಕ್ಷ ಗೃಹಿಣಿಯಾದ ಮಾಲಿನಿ ಚೆನ್ನಬಸೂನೊಂದಿಗಿನ ಅಕ್ರಮ ಸಂಬಂಧವನ್ನು ತುಂಬ ಜಾಣತನದಿಂದ ನಿರ್ವಹಿಸುತ್ತಾಳೆ. ಮಾಲಿನಿಯ ಜೊತೆ ಸಂಬಂಧವಿಟ್ಟುಕೊಂಡರೂ ಮನೆಗೆಲಸ ಮಾಡುವ ರುಕ್ಮಿಣಿಯನ್ನು ಚೆನ್ನಬಸೂ ಪ್ರೀತಿಸುತ್ತಾನೆ.
ಚೆನ್ನಬಸೂನ ಜೊತೆ ವಿವಾಹವಾಗಬೇಕೆಂದು ಬಯಸಿದ ರುಕ್ಮಿಣಿಯನ್ನು ಮುದುಕನಾದ ಮೋರೊಪಂತ್ ವಕೀಲ ತನ್ನ ಕಾಮತೃಷೆ ಪೂರೈಸಿಕೊಳ್ಳಲು ಬಳಸಿಕೊಳ್ಳುತ್ತಾನೆ. ಅವನ ಆಕ್ರಮಣದಿಂದ ನಲುಗಿಹೋಗುವ ರುಕ್ಮಿಣಿ ತೀವ್ರ ಆಘಾತಕ್ಕೊಳಗಾಗಿ ಚೆನ್ನಬಸೂನ ಜೊತೆಗೆ ವಿವಾಹವಾಗುವ ಆಸೆಯನ್ನು ತೊರೆಯುತ್ತಾಳೆ. ಚೆನ್ನಬಸೂ ಇದನ್ನೆಲ್ಲ ತಿಳಿದ ನಂತರ ರುಕ್ಮಿಣಿಗೆ ಬಾಳು ಕೊಡುವ ವಿಚಾರದಲ್ಲಿ ಸೂಕ್ತ ನಿರ್ಧಾರಕ್ಕೆ ಬರಲಾಗದೆ ಒದ್ದಾಡುತ್ತಾನೆ. ಇದರ ಮಧ್ಯೆ ಅತ್ತ ರುಕ್ಮಿಣಿಯನ್ನು ಮರೆಯಲಾಗದೆ, ಇತ್ತ ಮಾಲಿನಿಯ ಸಂಗವನ್ನು ಬಿಡಲಾಗದೆ ಚಡಪಡಿಸುವ ಚೆನ್ನಬಸೂ ತಂದೆ-ತಾಯಿ ನೋಡಿದ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿ ಮನೆಯಿಂದ ಹೊರಗೆ ಬರುತ್ತಾನೆ.
ಹೈಸ್ಕೂಲ್ ದಿನಗಳಿಂದಲೇ ಸಾಹಿತ್ಯ, ಸಮಾಜ, ಸಂಸ್ಕೃತಿ ಎಂದು ಹಲವು ಚಟುವಟಿಕೆಗಳಲ್ಲಿ ಆಸಕ್ತನಾದ ಚೆನ್ನಬಸೂಗೆ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಬಯಸುವ ಗದಿಗೆಪ್ಪನೆಂಬ ಉದಯೋನ್ಮುಖ ಪತ್ರಕರ್ತನ ಪರಿಚಯವಾಗುತ್ತದೆ. ಬೆಳಗಾವಿ ಗಡಿ ಸಮಸ್ಯೆ, ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜಕಾರಣಿಗಳ ಒಲವು-ನಿಲುವುಗಳು ಮತ್ತು ಕೇಂದ್ರ ಸರ್ಕಾರದ ಧೋರಣೆ ಸೇರಿದಂತೆ ಆ ಕಾಲಘಟ್ಟದ ಹಲವು ಜ್ವಲಂತ ಸಮಸ್ಯೆಗಳನ್ನು ಇಂಚಿಂಚಾಗಿ ವಿಶ್ಲೇಷಿಸುವ ಇವರಿಬ್ಬರ ಚಿಂತನೆ ಓದುಗರಿಗೆ ಸಾಕಷ್ಟು ಕುತೂಹಲಕರ ಮಾಹಿತಿಯನ್ನು ಒದಗಿಸುತ್ತದೆ.
ಕೆಲಸದ ಆಸೆಯಿಂದ ಪಂಢರಿಯೆಂಬ ಮರಾಠಿ ನಾಯಕನ ಭೇಟಿಯಾಗುವ ಚೆನ್ನಬಸೂಗೆ ಅವನೊಬ್ಬ ಸಲಿಂಗಕಾಮಿಯಿರಬಹುದೆಂಬ ಅನುಮಾನವುಂಟಾದರೂ ಅದನ್ನು ಮೀರಿ ಅವನೊಡನೆ ಮುಂಬೈಗೆ ಹೊರಡುತ್ತಾನೆ. ಪುಣೆಯ ಲಾಡ್ಜಿನಲ್ಲಿ ಇಳಿದುಕೊಂಡಾಗ ಸಲಿಂಗಕಾಮಿಯಾದ ಫಂಡರಿಯಿಂದ ದೈಹಿಕ ಆಕ್ರಮಣಕ್ಕೊಳಗಾಗುವುದನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಳ್ಳುವ ಚೆನ್ನಬಸೂ ಕೆಲಸವೂ ಬೇಡ, ಫಂಡರಿಯ ಸಹವಾಸವೂ ಬೇಡ ಎಂದು ಬೆಳಗಾವಿಗೆ ಮರಳಿ ಬರುತ್ತಾನೆ. ಈ ನಡುವೆ ಅವನ ಜೀವನದಲ್ಲಿ ಹಲವು ಬದಲಾವಣೆಗಳುಂಟಾಗುತ್ತವೆ. ಮೋರೊಪಂತ್ ವಕೀಲ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಮುಂಬೈಗೆ ಹೋಗುವುದೆಂದು ನಿರ್ಧಾರವಾದಾಗ, ರುಕ್ಮಿಣಿ ಸಹ ಅವನ ಶುಶ್ರೂಷೆಗೆಂದು ಹೋಗಬೇಕಾಗುತ್ತದೆ. ಚೆನ್ನಬಸೂ ದೂರವಾದರೆ ಕಷ್ಟ ಎಂದು ಅರಿತ ಮಾಲಿನಿ ಚಿದೂ ಮಾಸ್ತರರ ಮೂಲಕ ಶಿಫಾರಸು ಮಾಡಿಸಿ ಅವನಿಗೆ ಒಂದು ಕೆಲಸ ಕೊಡಿಸುತ್ತಾಳೆ. ಲಾರಿ ಆಫೀಸಿನಲ್ಲಿ ಕೆಲಸ ಮಾಡುವ ಚೆನ್ನಬಸೂ ಗೋವಾ ವಿಮೋಚನಾ ಚಳುವಳಿಯ ಹೋರಾಟಗಾರರಿಗೆ ಅಕ್ರಮ ಶಸ್ತ್ರಾಸ್ತ್ರ ಪೂರೈಸಲು ಹೋಗಿ ಪೋರ್ಚುಗೀಸರಿಂದ ದಸ್ತಗಿರಿಯಾಗಿ, ಜೈಲು ಸೇರಬೇಕಾಗುತ್ತದೆ. ಗೋವಾದ ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸುತ್ತ, ಬದುಕುವ ಆಸೆಯನ್ನು ಬಿಟ್ಟ ಅವನು ಗೋವಾ ವಿಮೋಚನಾನಂತರ ಬಿಡುಗಡೆಯಾಗಿ ಬೆಳಗಾವಿಗೆ ಬರುತ್ತಾನೆ. ಹಿಂದೆ ಅಕ್ರಮ ಶಸ್ತ್ರಾಸ್ತ್ರ ಪೂರೈಸಲು ಪಡೆದ ದೊಡ್ಡ ಮೊತ್ತದ ಹಣ ಆಗ ಚೆನ್ನಬಸೂನ ಪ್ರಯೋಜನಕ್ಕೆ ಬರುತ್ತದೆ. ಹಣ ಕೊಟ್ಟು ಸರ್ಕಾರಿ ಕಛೇರಿಯೊಂದರಲ್ಲಿ ಗುಮಾಸ್ತನಾಗುವ ಅವನು ತನ್ನ ಚಾಣಾಕ್ಷತನ ಮತ್ತು ಕಾರ್ಯತತ್ಪರತೆಯಿಂದ ಬೆಳೆಯುತ್ತ ಸಾಗುತ್ತಾನೆ.
ರುಕ್ಮಿಣಿ ಮುಂಬೈನಲ್ಲಿರುವಾಗ ರಾಜಾರಾಮ ಪಠಾರೆಯ ನೆರವಿನಿಂದ ಓದು-ಬರಹ ಕಲಿತು ಆಧುನಿಕಳಾಗಿ ಬದಲಾಗುತ್ತಾಳೆ. ವಿದೇಶಿ ವೈದ್ಯನೊಬ್ಬನ ಕೈ ಚಳಕದಿಂದ ಪವಾಡ ಸದೃಶವಾಗಿ ಚೇತರಿಸಿಕೊಂಡ ಮೋರೊಪಂತ್ ವಕೀಲನ ಜೊತೆ ಬೆಳಗಾವಿಗೆ ಬಂದ ರುಕ್ಮಿಣಿಯನ್ನು ನೋಡಿ ಚೆನ್ನಬಸೂ ಆಶ್ಚರ್ಯಕ್ಕೊಳಗಾಗುತ್ತಾನೆ. ಪಠಾರೆ ಮತ್ತು ರುಕ್ಮಿಣಿಯ ನಡುವಿನ ಸಂಬಂಧದ ಬಗ್ಗೆ ಅರಿತ ಚೆನ್ನಬಸೂಗೆ ನಿರಾಸೆಯಾಗುತ್ತದೆ. ಬೆಂಗಳೂರಿಗೆ ವರ್ಗವಾಗಿ ಹೋಗುವ ಅವನು ರುಕ್ಮಿಣಿಯ ಸಂಪರ್ಕವನ್ನು ಕಡಿದುಕೊಂಡರೂ ಅವಳನ್ನು ಮರೆಯಲಾಗದೆ ಚಡಪಡಿಸುತ್ತಾನೆ. ವೃತ್ತಿಯಲ್ಲಿ ಯಶಸ್ಸು ಕಂಡರೂ, ವೈಯಕ್ತಿಕವಾಗಿ ಅವನು ನೆಮ್ಮದಿ ಕಳೆದುಕೊಳ್ಳುತ್ತಾನೆ.
ಮೋರೊಪಂತ್ ವಕೀಲನ ಮರಣಾನಂತರ ಅವಮಾನಿತಳಾಗಿ ಬೆಳಗಾವಿ ತೊರೆದು ಮುಂಬೈಗೆ ತೆರಳುವ ರುಕ್ಮಿಣಿಗೆ ಆಘಾತ ಕಾದಿರುತ್ತದೆ. ಪಠಾರೆ ತನ್ನನ್ನು ಪ್ರೀತಿಸುತ್ತಾನೆ ಎಂದು ತಿಳಿದಿದ್ದ ರುಕ್ಮಿಣಿಗೆ ಅವನಿಗೆ ಅದಾಗಲೇ ಹೆಂಡತಿ-ಮಕ್ಕಳು ಇರುವ ವಿಷಯ ತಿಳಿದು ತುಂಬ ದುಃಖವಾಗುತ್ತದೆ. ಅವಳು ಪಠಾರೆ ತನ್ನನ್ನು ಕೇವಲ ಉಪಪತ್ನಿಯ ರೀತಿಯಲ್ಲಿ ಬಳಸಿಕೊಂಡನೆಂಬ ಸಿಟ್ಟಿನಿಂದ ದೂರವಾಗುತ್ತಾಳೆ. ಮುಂದೆ ಶಿವಸೇನೆಯವರ ಆಕ್ರಮಣದಿಂದ ದಕ್ಷಿಣ ಕನ್ನಡದ ಕುಟುಂಬವೊಂದನ್ನು ಕಾಪಾಡುವ ಸಂದರ್ಭದಲ್ಲಿ, ಪಠಾರೆಯನ್ನು ತಬ್ಬಿಕೊಂಡು ಮಹಡಿಯಿಂದ ಜಿಗಿಯುತ್ತಾಳೆ. ಈ ಘಟನೆಯಲ್ಲಿ ಪಠಾರೆ ಸತ್ತು ಹೋದರೂ ರುಕ್ಮಿಣಿ ಬದುಕುತ್ತಾಳೆ. ಪಿ. ಎಸ್. ಐ. ಸಾಂಬ್ರೇಕರನ ಪ್ರಯತ್ನದಿಂದ ಮುಂಬೈನ ಆಸ್ಪತ್ರೆಯೊಂದರಲ್ಲಿ ರುಕ್ಮಿಣಿಯನ್ನು ಪತ್ತೆ ಹಚ್ಚುವ ಚೆನ್ನಬಸೂ ಅವಳನ್ನು ಬೆಳಗಾವಿಗೆ ಕರೆದುಕೊಂಡು ಬರುತ್ತಾನೆ. ಚೆನ್ನಬಸೂ ಮತ್ತು ರುಕ್ಮಿಣಿ ಹಳೆಯದನ್ನೆಲ್ಲ ಮರೆತು ಸಹಜೀವನ ನಡೆಸಲು ನಿರ್ಧರಿಸುವುದರೊಂದಿಗೆ ಕಾದಂಬರಿ ಸುಖಾಂತ ಕಾಣುತ್ತದೆ.
ಚೆನ್ನಬಸೂ ಮತ್ತು ರುಕ್ಮಿಣಿಯರ ಪ್ರೇಮಕಥೆ ‘ಉಲ್ಲಂಘನೆ’ ಕಾದಂಬರಿಯ ಕೇಂದ್ರದಲ್ಲಿದ್ದರೂ, ಬೆಳಗಾವಿ ಗಡಿ ಸಮಸ್ಯೆಯೂ ಸಹ ಅಷ್ಟೇ ಮುಖ್ಯವಾಗಿದೆ. ಚೆನ್ನಬಸೂ ಮತ್ತು ರುಕ್ಮಿಣಿ ಕಾದಂಬರಿಯ ನಾಯಕ – ನಾಯಕಿಯರಂತೆ ಕಂಡರೂ ಅವರ ಪಾತ್ರಗಳಷ್ಟೇ ಮುಖ್ಯವಾಗಿ ಅನೇಕ ಇತರ ಪಾತ್ರಗಳು ಸಹ ಈ ಕಾದಂಬರಿಯಲ್ಲಿ ಬಂದಿವೆ. ಹಳ್ಳಿಯಿಂದ ದಿಲ್ಲಿಯವರಿಗೆ ವರ್ಚಸ್ಸು ಬೆಳೆಸಿಕೊಂಡ ಕಾಂಗ್ರೆಸ್ ನಾಯಕ ಚಿದೂ ಮಾಸ್ತರ ತುಂಬ ಪ್ರಭಾವಶಾಲಿ ವ್ಯಕ್ತಿ. ವೃತ್ತಿಪರ ರಾಜಕಾರಣಿಯಾದ ಚಿದೂ ಮಾಸ್ತರನ ತಲೆಯಲ್ಲಿ ಸದಾ ರಾಜಕೀಯ ಕುತಂತ್ರಗಳ ಮಂಥನ ನಡೆದಿರುತ್ತದೆ. ಬೆಳಗಾವಿಯಲ್ಲಿ ಕನ್ನಡಪರ ಚಳುವಳಿಯ ನೇತೃತ್ವ ವಹಿಸಿಕೊಂಡ ಚಿದೂ ಮಾಸ್ತರನಿಗೆ ಕನ್ನಡದ ಹಿತಕ್ಕಿಂತ ತನ್ನ ಹಿತ ಮುಖ್ಯ. ಅವನಿಗೆ ಸದಾ ತಾನು ಹೇಳಿದಂತೆ ಕೇಳುವವರೇ ಶಾಸಕ, ಸಂಸದರಾಗಬೇಕು ಇಲ್ಲದಿದ್ದರೆ ತನ್ನ ವರ್ಚಸ್ಸು ಕಡಿಮೆಯಾಗಿ ಬಿಡುತ್ತದೆ ಎಂಬ ಚಿಂತೆ.
ಮೋರೊಪಂತ್ ವಕೀಲ, ಫಂಡರಿ ಮುಂತಾದವರು ಮಹಾರಾಷ್ಟ್ರ ಏಕೀಕರಣ ಸಮಿತಿ ಹೆಸರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಸ್ವಾರ್ಥಿಗಳು. ಮೋರೊಪಂತ್ ಮಗಳ ವಯಸ್ಸಿನ ರುಕ್ಮಿಣಿಯ ಮೇಲೆ ಅತ್ಯಾಚಾರ ಮಾಡಿದರೆ, ಸಲಿಂಗಕಾಮಿಯಾದ ಫಂಡರಿ ಚೆನ್ನಬಸೂನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಾನೆ. ಪತ್ರಕರ್ತ ಗದಿಗೆಪ್ಪ ಪ್ರಾಮಾಣಿಕನಂತೆ ಕಂಡರೂ ಬರುಬರುತ್ತ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಸುಖಮಯ ಜೀವನ ನಡೆಸುತ್ತಾನೆ. ಪತ್ರಕರ್ತ, ಪುರೋಹಿತ ಮತ್ತು ಜ್ಯೋತಿಷಿಯಾದ ಅನಂತರಾವ್ ಪುರೋಹಿತ್ ಮಹಾರಾಷ್ಟ್ರ ಏಕೀಕರಣ ಸಮಿತಿಯ ಆಸ್ಥಾನ ಪುರೋಹಿತನಾಗಿ ಬದುಕು ಕಟ್ಟಿಕೊಳ್ಳುತ್ತಾನೆ.
ಈ ಎಲ್ಲ ಗದ್ದಲಗಳ ನಡುವೆ ಬೆಳಗಾವಿಯಲ್ಲಿರುವ ಮರಾಠರು ಮತ್ತು ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಆತಂಕದಿಂದ ಬದುಕಬೇಕಾಗುತ್ತದೆ. ಏಕೆಂದರೆ ಬೆಳಗಾವಿ ಸಮಸ್ಯೆ ಸ್ವಲ್ಪ ಭುಗಿಲೆದ್ದರೂ ಅದಕ್ಕೆ ಬೆಲೆ ತೆರಬೇಕಾದವರು ಇಂತಹ ಸಾಮಾನ್ಯರೇ ಪರಂತು ರಾಜಕಾರಣಿಗಳಲ್ಲ. ಆಚಾರ್ಯ ಅತ್ರೇ ಮಹಾರಾಷ್ಟ್ರದಲ್ಲಿ ತುಂಬ ಖ್ಯಾತಿ ಪಡೆದ ದೊಡ್ಡ ವ್ಯಕ್ತಿಯಾದರೂ, ತೀರ ಸಣ್ಣ ಮನುಷ್ಯ. ಹೋಟೆಲೊಂದರಲ್ಲಿ ಕೆಲಸ ಮಾಡುವ ಕರಾವಳಿಯ ಹುಡುಗನೊಬ್ಬ ಕನ್ನಡದಲ್ಲಿ ಮಾತಾಡಿದ್ದಕ್ಕೆ ಕಪಾಳಕ್ಕೆ ಹೊಡೆದು, ಅದನ್ನು ಸಾಧನೆಯೆಂಬಂತೆ ಕೊಚ್ಚಿಕೊಳ್ಳುವ ತಿಳಿಗೇಡಿ. ಶಿವಸೇನೆಯಂತೂ ಭಾರತದ ಒಕ್ಕೂಟ ವ್ಯವಸ್ಥೆಗೇ ಸವಾಲೊಡ್ಡಬಲ್ಲ ಮಾರಕ ಸಂಘಟನೆ. ಒಂದು ಕಾಲದಲ್ಲಿ ಶಿವಸೇನೆಯವರು ಅಮಾಯಕ ಕನ್ನಡಿಗರ ಮೇಲೆ ನಡೆಸಿದ ದೌರ್ಜನ್ಯ, ಮಾಡಿದ ಅತ್ಯಾಚಾರ, ಲೂಟಿ ಮತ್ತು ಕೊಲೆಗಳಿಗೆ ಲೆಕ್ಕವಿಲ್ಲ! ಮುಂದೆ ಚೆನ್ನಬಸೂ ಕನ್ನಡಪರ ಹೋರಾಟಗಾರನಾದ ಸತ್ಯಕುಮಾರನ ಜೊತೆ ತಮಿಳರು ನಡೆಸುವ ಬಾರ್ ಅಂಡ್ ರೆಸ್ಟೋರೆಂಟಿಗೆ ಹೋದಾಗ ಕನ್ನಡದ ಹೆಸರಲ್ಲಿ ಹಫ್ತಾ ವಸೂಲಿ ಮಾಡುವ ಸತ್ಯಕುಮಾರನನ್ನು ಕಂಡು ದಂಗಾಗುತ್ತಾನೆ.
ರಾಜಾರಾಮ ಪಠಾರೆ ಸಮಾಜವಾದಿಯಾದರೂ ಸಹ ಶ್ರೀಮಂತ ಮತ್ತು ರಸಿಕ. ರುಕ್ಮಿಣಿಗೆ ಓದು-ಬರಹ ಹೇಳಿಕೊಟ್ಟರೂ ಅವನು ಅವಳನ್ನು ಒಬ್ಬ ಉಪಪತ್ನಿಯಂತೆಯೇ ನಡೆಸಿಕೊಳ್ಳುತ್ತಾನೆ. ಡೋಂಗಿ ಸಮಾಜವಾದಿಯಾದ ಅವನು ಶಿವಸೇನೆಯವರ ಜೊತೆ ಸೇರಿ ಕನ್ನಡ ಕುಟುಂಬವೊಂದರ ಮೇಲೆ ದೌರ್ಜನ್ಯ ಎಸಗಲು ಹೋಗಿ ರುಕ್ಮಿಣಿಯಿಂದ ಸಾವಿಗೀಡಾಗಬೇಕಾಗುತ್ತದೆ. ಇಂತಹವರ ನಡುವೆ ದಾನಪ್ಪಗೌಡ, ತವನಪ್ಪ ಮತ್ತು ತುಕಾರಾಂರಂತಹ ಒಳ್ಳೆಯ ವ್ಯಕ್ತಿಗಳು ಸಹ ಇದ್ದಾರೆ.
ಕಥಾನಾಯಕ ಚೆನ್ನಬಸೂ ಆದರ್ಶವಾದಿಯೂ ಅಲ್ಲ, ತುಂಬ ಒಳ್ಳೆಯವನೂ ಅಲ್ಲ. ಅವನೊಬ್ಬ ಸರಾಸರಿಯ ಆಚೀಚೆ ಇರುವ ಸಾಮಾನ್ಯ ಮನುಷ್ಯ. ಅವನು ತುಂಬ ಚಿಕ್ಕ ವಯಸ್ಸಿನಲ್ಲಿಯೇ ಮಾಲಿನಿಯ ಜೊತೆ ಅಕ್ರಮ ಸಂಬಂಧ ಬೆಳೆಸುತ್ತಾನೆ. ಗೋವಾ ವಿಮೋಚನಾ ಚಳುವಳಿಗಾರರಿಗೆ ಅಕ್ರಮ ಶಸ್ತ್ರಾಸ್ತ್ರ ಪೂರೈಸಲು ಹಣ ಪಡೆಯುತ್ತಾನೆ. ಆ ಹಣದಿಂದಲೇ ಲಂಚ ಕೊಟ್ಟು ನೌಕರಿ ಪಡೆಯುತ್ತಾನೆ. ಮುಂದೆ ಚುನಾವಣೆ ಸಂದರ್ಭದಲ್ಲಿ ಮೋಸದಿಂದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರ ನಾಮಪತ್ರ ತಿರಸ್ಕೃತವಾಗುವಂತೆ ಮಾಡಿ ಕನ್ನಡಪರ ಚಳುವಳಿಗಾರರ ಪ್ರೀತಿ ಗಳಿಸುತ್ತಾನೆ. ರುಕ್ಮಿಣಿಯನ್ನು ಮನಸಾರೆ ಪ್ರೀತಿಸುವ ಅವನು ಮೊದಲು ಅವಳನ್ನು ಮದುವೆಯಾಗಲು ಹಿಂಜರಿದರೂ ಕೊನೆಗೆ ಅವಳೊಂದಿಗೆ ಸಹಬಾಳ್ವೆ ನಡೆಸಲು ನಿರ್ಧರಿಸುವುದು ಅರ್ಥಪೂರ್ಣವಾಗಿದೆ. ರುಕ್ಮಣಿಯ ಪಾತ್ರ ಮಾರ್ದವತೆಯಿಂದ ಕೂಡಿದ್ದು ಓದುಗರ ಅನುಕಂಪ ಗಳಿಸುವಲ್ಲಿ ಯಶಸ್ವಿಯಾಗುತ್ತದೆ.
ನಿರೂಪಣೆಯಲ್ಲಿ ಶಿಷ್ಟ ಭಾಷೆ ಮತ್ತು ಸಂಭಾಷಣೆಯಲ್ಲಿ ಬೆಳಗಾವಿ ಕನ್ನಡವನ್ನು ಬಳಸಿರುವ ಪಾಟೀಲರು ಕಾದಂಬರಿಯುದ್ದಕ್ಕೂ ಸಮತೋಲನ ಕಾಯ್ದುಕೊಂಡಿದ್ದಾರೆ. ಸುಸಂಬದ್ಧ ಕಥೆಯೊಂದರ ಜೊತೆ ಜೊತೆಗೆ ಬೆಳಗಾವಿ ಗಡಿ ಸಮಸ್ಯೆಯನ್ನು ಸಮಾನಾಂತರವಾಗಿ ತೆಗೆದುಕೊಂಡು ಹೋಗಿದ್ದಾರೆ. ಕನ್ನಡಪರ ಹೋರಾಟಗಾರರು, ಎರಡೂ ರಾಜ್ಯದ ರಾಜಕಾರಣಿಗಳು ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಂಡರ ಮನಸ್ಥಿತಿಯನ್ನು ತೀವ್ರ ವಿಶ್ಲೇಷಣೆಗೊಳಪಡಿಸಿರುವ ಅವರು ಬೆಳಗಾವಿ ಗಡಿ ಸಮಸ್ಯೆಯ ಕುರಿತು ಅನೇಕ ಹೊಸ ಒಳನೋಟಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಮಹಾರಾಷ್ಟ್ರದ ರಾಜಕಾರಣಿಗಳ ಹೀನ ಮನಸ್ಥಿತಿ, ಕ್ಷುಲ್ಲಕ ಬುದ್ಧಿ ಮತ್ತು ರಾಜಕೀಯ ಕುತಂತ್ರಗಳನ್ನು ಅನೇಕ ಸಾಕ್ಷ್ಯಾಧಾರಗಳ ಸಮೇತ ಅನಾವರಣಗೊಳಿಸಿದ್ದಾರೆ. ಅದೇ ರೀತಿ ಕರ್ನಾಟಕದ ರಾಜಕಾರಣಿಗಳ ನಿರ್ಲಿಪ್ತತೆ, ಉತ್ತರ ಕರ್ನಾಟಕ, ಹಳೆ ಮೈಸೂರು ಮತ್ತು ಕರಾವಳಿ ಕನ್ನಡಿಗರಲ್ಲಿ ಒಗ್ಗಟ್ಟಿಲ್ಲದಿರುವುದನ್ನು ಸಹ ನೋವಿನಿಂದ ದಾಖಲಿಸಿದ್ದಾರೆ.
‘ಮಹಾಜನ ವರದಿ’ಯ ಕುರಿತ ಭಾಗ ಈ ಕಾದಂಬರಿಯ ಒಂದು ರಸವತ್ತಾದ ಅಧ್ಯಾಯ. ಚೆನ್ನಬಸೂ ಮತ್ತು ಗದಿಗೆಪ್ಪನ ನಡುವಿನ ಚಿಂತನ – ಮಂಥನದಲ್ಲಿ ಬರುವ ವರದಿಯ ಕುರಿತ ವಿವರಗಳು ಹೀಗೆ ನಡೆದಿರಬಹುದಾದ ಸಾಧ್ಯತೆಯುಂಟು ಎಂಬಂತೆ ಬಂದಿದ್ದರೂ ಸಹ ಅದನ್ನು ಸಂಪೂರ್ಣ ನಿಜವೆಂದು ಒಪ್ಪುವಂತೆ ಬರೆದಿರುವ ಪಾಟೀಲರ ಬುದ್ಧಿಮತ್ತೆಯನ್ನು ಮೆಚ್ಚಲೇಬೇಕು. ಕರ್ನಾಟಕದ ಏಕೀಕರಣ ಚಳುವಳಿ, ಬೆಳಗಾವಿ ಗಡಿ ಸಮಸ್ಯೆ ಮತ್ತು ಕರ್ನಾಟಕದ ಮರುನಾಮಕರಣದ ಕುರಿತ ವಿವರಗಳು ಸ್ವಲ್ಪ ಹೆಚ್ಚಾಗಿಯೇ ಬಂದಿದ್ದರೂ ಕಾದಂಬರಿಯ ಓಟಕ್ಕೆ ಧಕ್ಕೆ ತಂದಿಲ್ಲ. ಸಾಮಾನ್ಯ ಮತ್ತು ಪ್ರಬುದ್ಧ ಓದುಗರಿಬ್ಬರಿಗೂ ಮೆಚ್ಚುಗೆಯಾಗಬಲ್ಲ ಅನೇಕ ಅಂಶಗಳು ಈ ಕಾದಂಬರಿಯಲ್ಲಿದ್ದು, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಬೆಳಗಾವಿ ಗಡಿ ಸಮಸ್ಯೆಯನ್ನಿಟ್ಟುಕೊಂಡು ಬರೆದ ‘ಉಲ್ಲಂಘನೆ’ ಆ ಕಾರಣಕ್ಕಾಗಿಯೂ ಒಂದು ವಿಶಿಷ್ಟ ಕಾದಂಬರಿ. ಮೂವತ್ತು ವರ್ಷಗಳ ಹಿಂದೆ ಪ್ರಕಟವಾದ ಈ ಕಾದಂಬರಿ ಮತ್ತೆ ಮರುಮುದ್ರಣವಾಗಿ ಓದುಗರಿಗೆ ದೊರೆಯಬೇಕಿದೆ. ಬೆಳಗಾವಿಯ ಕುರಿತ ಕೈಫಿಯತ್ತಿನಂತಿರುವ ‘ಉಲ್ಲಂಘನೆ’ ತೊಂಬತ್ತರ ದಶಕದಲ್ಲಿ ಬಂದ ಒಂದು ಮಹತ್ವದ ಕಾದಂಬರಿ.
2 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಕುಂದರನಾಡ ಪಾಟೀಲರ ಉಲ್ಲಂಘನೆ”
ಇಂಥದೊಂದು ಕಾದಂಬರಿ ಇದೆಯೆನ್ನುವದೇ ತಿಳಿದಿರಲಿಲ್ಲ. ಬೇಗನೇ ಮರು ಮುದ್ರಣಗೊಂಡು ಓದುಗರ ಕೈಗೆ ಬರಲಿ.
ಕುಂದರನಾದ ಪಾಟೀಲರ ‘ಉಲ್ಲಂಘನೆ’ಯ ಇಡೀ ಕಾದಂಬರಿಯನ್ನು ಈ ಲೇಖನದಲ್ಲಿ ರಸವತ್ತಾಗಿ ಚಿತ್ರೀಕರಿಸಲಾಗಿದೆ. ಕಾದಂಬರಿ, ಕಾದಂಬರಿಕಾರರ ಚಾಕಚಕ್ಯತೆಯ ಪರಿಚಯದ ಜತೆಗೆ, ಆಸಕ್ತಿಯಿರುವ ಉತ್ಸುಕರಿಗೆ, ಓದುವ ಸಮಯ, ತಾಳ್ಮೆ, ಪುರಸೊತ್ತು ಇರದಿದ್ದಾಗ, ನುರಿತ ವೈದ್ಯ ಕೊಡುವ ಚಿಕಿತ್ಸಕ ಕ್ಯಾಪ್ಸೂಲಿನಂತೆಯೇ ಈ ಲೇಖನದ ವರ್ಚಸ್ಸಿದೆ. ಕ್ಯಾಪ್ಸೂಲಿನಲ್ಲಿ ನಾನು ಅರ್ಥೈಸಿದ್ದು, ಅದರೊಳಗಿರುವ ಗೋಲಕಗಳು, ಕ್ರಿಯಾಶೀಲ ಪದಾರ್ಥಗಳು, ಕಟ್ಟುವ, ವಿಘಟಿಸುವ, ಭರ್ತಿಸುವ, ಸಂರಕ್ಷಿಸುವ, ಕೀಲೆಣ್ಣೆಯಂತಿರುವ ಸಹಾಯಕ ಆವಶ್ಯಕ ಸಾಮಗ್ರಿಗಳೆಲ್ಲ, ಉಷ್ಣತೆಯ ಪರಿವಿಷ್ಟತೆಯಲ್ಲಿ ಮೆಲ್ಲಗೆ ಕರಗುತ್ತ ಪಚನವಾಗುವಂತೆ, ಕ್ರಿಯಾಶೀಲವಾಗುವಂತೆ!
ಸೇವಂತಿಗೆ ಹೂವನ್ನು ವರ್ಣಿಸುವಾಗ, ಅದಕ್ಕೆ ಗುಲಾಬಿಯ ಸೌಂದರ್ಯವಿಲ್ಲ, ದಾಸವಾಳದ ಬಣ್ಣದ ಆಕರ್ಷಣೆಯಿಲ್ಲ, ಪಾರಿಜಾತದ ಪರಿಮಳವಂತೂ ಇಲ್ಲವೇ ಇಲ್ಲ, ಅನ್ನುವುದು ಒಂದು ದೃಷ್ಟಿಯಲ್ಲಿ ಅಸಮಂಜಸತೆಯ ಪರಮಾವಧಿಯಾದರೆ, ಇನ್ನೊಂದು ದೃಷ್ಟಿಯಲ್ಲಿ ಹೇಳ ಹೊರಟಿರುವ ಸೇವಂತಿಗೆಯ ಗುಣಗ್ರಾಹ್ಯತನಕ್ಕೆ ಮಾಡುವ ಅವಮಾನವೇ! ತುಲನೆ, ಪ್ರಶಸ್ತಿಗೋಸ್ಕರ, ನಿರ್ಣಾಯಕ ಮಂಡಳಿ, ತರ ತಮ ಮಾಪನಕ್ಕೆ ಸಮಜಾಯಿಶಿಕೊಂಡಿರುವ ಒಂದು ಉಪಕರಣವೇ ಇರಬಹುದು. ಆದರೆ, ಪ್ರಕೃತಿಯಲ್ಲಿ ಸೇವಂತಿಗೆ ಎಂಬ ಸಹಜ ಹೂವಿದೆ, ಅದಕ್ಕೂ ಒಂದು ನಿಜ ನಿರ್ದಿಷ್ಟ ಅಸ್ತಿತ್ವವಿದೆ ; ಮಜಾ ಅಂದರೆ, ಆ ಹೂವಿಗೆ ಗುಲಾಬಿಯ ಸೌಂದರ್ಯವೇ ಇದ್ದುದಾದರೆ, ಆ ಹೂವನ್ನು ಗುಲಾಬಿಯೆಂದೇ ಅನ್ನಬೇಕೇ ಹೊರತು, ಸೇವಂತಿಗೆ ಎನ್ನುವ ಗುರುತಿನ ಅಗತ್ಯವೇ ಇಲ್ಲವಲ್ಲ! ಹೀಗಾಗಿ, ಸೇವಂತಿಗೆಯನ್ನು ವರ್ಣಿಸುವಾಗ, ಅದು ಹೇಗೆ ಇರಲಿ, ಅದೇ ರೀತಿ ಶೋಭಿಸಿದರೆ ಮಾತ್ರ, ಅದು ಪ್ರಾಮಾಣಿಕ ಪ್ರಮಾಣ, ಓದುಗರ ಅಪೇಕ್ಷೆಗೆ ಚೆನ್ನು. ಸಂವಹನೆಯಲ್ಲಿ, ಇನ್ನಾವ ಕೃತಿಗೂ, ಕೃತಿಕಾರರಿಗೂ, ಯಾವುದೇ ಪ್ರಕಾರದ ತುಲನೆಯಿಲ್ಲದೆ, ಸ್ವಂತ ದೃಷ್ಟಿಯಿಂದ, ತೋಚಿದ್ದನ್ನು, ಅನುಭವಿಸಿದ್ದನ್ನು, ತಿಳುವಳಿಕೆಯ ಹರವಿನಲ್ಲಿ, ಓದುಗರೆದುರಿಗಿಡುವದೇ ವಸ್ತುನಿಷ್ಠತೆಯ ಶ್ರೇಷ್ಠ ಲಕ್ಷಣ.
ಸಂದರ್ಭದ ಸಾಧ್ಯಾಸಾಧ್ಯತೆಗಳ ಸಮಯೋಚಿತ ಸಂವೇದನೆಗಳು, ಅವುಗಳ ಪರಿವೆಯಲ್ಲೇ ಸಮಾವೇಶವಾಗಿ ಹೆಪ್ಪುಗಟ್ಟಿದ್ದರಿಂದ, ಈ ಲೇಖನದ ಮಾಧುರ್ಯ ಇನ್ನೂ ಹೆಚ್ಚು ಸಮುಚಿತವಾಗಿದೆ.
‘ಉಲ್ಲಂಘನೆ’ – ಶಾಬ್ದಿಕ ವ್ಯಾಪ್ತಿಯಲ್ಲಿ, ಪೂರ್ವ ನಿಯೋಜಿತವಾಗಿ, ಬೆಳವಣಿಗೆಯ ಒಂದು ತುರ್ತಿನ ಸವಾಲು. ಅಡೆ ತಡೆಗಳ ನಡುವೆಯೂ, ಪಡೆಯಬೇಕಾದದ್ದಕ್ಕೆ ಮಾಡುವ ಪ್ರಯತ್ನವನ್ನು ತಡೆ ಹಿಡಿದರೆ, ಬಿಗಿ ತಪ್ಪಿಸಿ, ಕಿಡಿ ಸಿಡಿದು ಒಡೆದು ಹೊರಬರುವ ಒಂದು ನೈಸರ್ಗಿಕ ಪ್ರಕ್ರಿಯೆ / ಪ್ರತಿಕ್ರಿಯೆ. ಇಂತಹ ಸಮತೋಲತೆ ಹಾಗೂ ಸಮಂಜಸತೆಯಿದ್ದುದರಿಂದಲೇ, ಸಮಾಧಾನದ ನಿಶ್ಚಿಂತೆ : ‘ಉಲ್ಲಂಘನೆ’ಯ ಉಪಸಂಹಾರ /ಶಾಂತಿ ಶೇಷ.
‘ಉಲ್ಲಂಘನೆ’ ಕಾದಂಬರಿಯಾಗಿದ್ದು, ಬೆಳಗಾವಿ ಗಡಿಯಲ್ಲಿ – ಒಂದು ಸಮಸ್ಯೆ – ಒಂದು ಚಿಕಿತ್ಸೆ – ಒದಗುವ ಸಕಲ ಸನ್ನಿವೇಶಗಳು ಸರಣಿಯಾಗಿ – ಒಂದು ಬಳ್ಳಿಯಾಗಿ – ಕಥಾ ಹಂದರಕ್ಕೆ ಹೊಂದಿಕೊಂಡು ಬೆಳೆಯುತ್ತಾ ಹೋಗುವದು – ಬೆಳಗಾವಿ, ಗೋವಾ, ಪುಣೆ, ಮುಂಬಯಿಗಳ ನಡುವೆ ಹರಿದಾಡುತ್ತಲೇ ಇರುತ್ತವೆ – ಆಸೆ – ನಿರಾಸೆ – ಸಂಚು – ಸಂದಿಗ್ಧ -ಅಸೂಯೆ – ಪವಾಡ – ಯಶಸ್ಸು – ನೆಮ್ಮದಿ – ನಿರಾಕರಣೆ – ರಾಜಕಾರಣ – ಕುತಂತ್ರ – ಅನಿವಾರ್ಯ ತಿರುವುಗಳು – ಅಸಹಾಯಕತೆ – ಅದರ ದುರುಪಯೋಗ – ಎಲ್ಲ ಪಲಾಯನವಾದಾಗ – ಯೋಗಾ ಯೋಗದ ಒಂದು ಸುಖಾಂತ!
‘ಉಲ್ಲಂಘನೆ’ – ಒಂದು ಕಥೆಯೆಂಬ ಸುಂದರ ಹಾರದ ಚಿತ್ರಣವೆನಿಸುತ್ತದೆ: ಬೆಳಗಾವಿ ಗಡಿ ಸಮಸ್ಯೆ ಮತ್ತು ಕರ್ನಾಟಕ ಏಕೀಕರಣ ಚಳುವಳಿ, ಈ ಹಾರವನ್ನು ತಯಾರುಮಾಡುವ ಹಾಸು – ಹೊಕ್ಕಾದ, ಎರಡು ಸೂತ್ರಗಳು. ಮಾಲಿನಿ – ಚಿದೂ ಮಾಸ್ತರ – ಮೋರೋ ಪಂತ – ಪಠಾರೆ – ಪಂಢರಿ – ಗದಿಗೆಪ್ಪ – ಅನಂತರಾವ್ – ಸಾಂಬ್ರೇಕರ – ಸತ್ಯಕುಮಾರ – ಆಚಾರ್ಯ ಅತ್ರೆ – ಇವರೆಲ್ಲ ಹಾರದ ನಡುವೆ ಪೋಣಿಸಿದ ಬೇರೆ ಬೇರೆ ಹೂವುಗಳು. ಇಡೀ ಹಾರದ ತುಂಬಾ ಮೂರು ತುಲಸಿಗಳೂ ಇವೆ : ಅವೇ – ದಾನಪ್ಪ ಗೌಡ- ತವನಪ್ಪ- ತುಕಾರಾಮ್. ಚೆನ್ನ ಬಸೂ ಮತ್ತು ರುಕ್ಮಿಣಿ, ಉಲ್ಲಂಘನೆಯ ಹಾರದ ಇಳಿಮುಖದಲ್ಲಿ ಜೋಲುವ ಕೊನೆಯ ಪದಕದ್ವಯಗಳು!
ಕಥನ ಕುತೂಹಲ ದ್ರವ್ಯದಲ್ಲಿ ಅದ್ದಿ, ರಂಜಕತೆಯ ಮೋಡಿ ಚಿಮುಕಿಸಿ ಹೆಣೆದ, ಈ ಹಾರಕ್ಕೆ ಇಕ್ಕರ್ತರಿಗೂ ಅಭಿನಂದನೆಗಳು!