ತೊಟ್ಟಿಲ ತುಂಬಿರುವ ಬಟ್ಟಗಣ್ಣಿನ ಸಿರಿಯೆ
ಹೊಟ್ಟೆ ಯ ಹಸಿವಿಂಗೆ ಎದೆಯ ಬಟ್ಟಲು ಕೊಡುವೆ
ಕೂಗದೆ ಮಲಗೆನ್ನ ಅರಳು ತಾವರೆಯೆ ಜೋ..
ನೀಲಿಯ ಮೈಯವನೆ ನೀಲದಾಗಸದವನೆ
ಹಾಲು ಬಿಳುಪಿನ ಮನದ ಮಚ್ಚರ ರಹಿತನೆ
ಹಾಯೆಂದು ಮಲಗೆನ್ನಮುದ್ದುಮಾಣಿಕವೆ ಜೋ..
ನಡೆಗಲಿತು ನುಡಿಗಲಿತು ಭರದಿ ಬೆಳೆ ಬೆಳೆದು
ಭೂಭಾರ ಇಳುಹುವ ಭೂಮಿತೂಕದ ಮಗುವೆ
ಎಸಳು ಕಂಗಳ ಮುಚ್ಚಿ ಮಲಗೆನ್ನ ಮೋಡಿಯೆ ಜೋ..
ಎಲೆ ಎಲೆಯು ನುಡಿಯಿತ್ತುಮರಮರವು ಉಸುರಿತ್ತು
ಬಾನು ಬುವಿಯೆಲ್ಲ ಹರುಷದಿ ಮೊರೆಯಿತ್ತು
ಬಾನಟ್ಟದಿಂದಿಳಿದ ಹೊಟ್ಟೆ ಯ ಕಂದಮ್ಮ ಜೋ..
ಎದೆಯ ಅಕ್ಕರೆಯೆಲ್ಲ ಹಾಲಾಗಿ ಹರಿಯಿತು
ಮನದ ಕರಕರೆಯೆಲ್ಲ ಮಗುವಾಗಿ ಬಿರಿಯಿತು
ಒಡಲ ಉರಿಯನ್ನೆಲ್ಲ ಜಾಡಿಸಿದ ತೇಜವೆ ಜೋ…
ಅಮ್ಮನ ಅಳಲಿಂಗೆ ನುಡಿಗೊಡುವ ಚಾಮಿಯೇ
ಅಮ್ಮಂದಿರಿಗೆಲ್ಲ ಮಗುವಾದ ಮಹಿಮನೆ
ಬುವಿಯಒಳಗಿನ ತೇಜ ರೂಪುಗೊಂಡೈಸಿರಿಯೆ ಜೋ…
ಪ್ರೀತಿ ದೀಪವ ಹಚ್ಚಿ ಕರುಣೆ ತೈಲವನೆರೆದು
ಸ್ನೇಹ ದಾರತಿ ಬೆಳಗಿ ಪಾಡುವ ಬನ್ನಿರೋ
ಮನ ಮನದ ಗುಡಿಯಲ್ಲಿ ತೂಗುವ ಬನ್ನಿರೋ ಜೋ…
* ಮಹೇಶ್ವರಿ ಯು

2 thoughts on “ಕೌಸಲ್ಯೆ ಯ ಹಾಡು”
ಮಮತೆಯ ಧಾರೆ..ಸುಂದರ…ಸುಮಧುರ….ಸಕಾಲಿಕ! ಬಹಳೇ ಚೆನ್ನಾಗಿದೆ!
SUPER SUPER POEM