ಅತ್ತ ಲಂಕೆಯಲ್ಲಿ ರಾವಣನಿಗೆ ಪಟ್ಟಾಭಿಷೇಕವಾಗುತ್ತಿದ್ದಂತೆ
ಸೈನ್ಯ ಹೇಷಾರವಕ್ಕೆ ತೊಡಗಿತು
ಕೊಂಬು ಕಹಳೆ ಭೇರಿಗಳ ಮೊಳಗಿಸಿ
ಈಟಿಗಳ ಹರಿತಗೊಳಿಸುತ್ತ ಖಡ್ಗಗಳ ಝಳಪಿಸುತ್ತ
ಈಗಿಂದೀಗಲೇ ಸ್ವರ್ಗಕ್ಕೆ ದಂಡೆತ್ತಿ ಹೋಗುವ ಕೂಗು ಮಾರ್ದನಿಸಿತು
ಇಂದ್ರನ ದಂಡುರುಳಿಸಿ ಪಟ್ಟ ಹಿಡಿಯುವ ಪಟ್ಟು
ಹಾಕುತ್ತ ಹೆಂಡ ಸಾರಾಯಿ ಕುಡಿದು
ಮಂಡೆತುಂಬ ವೈರಭಾವವ ತುಂಬಿ
ಧುಮ್ಮಿಕ್ಕುವ ತೆರೆಗಳ ಹಾಗೆ ನಿಂತುಕೊಂಡವು ಚತುರಂಗಬಲ
ಒಂದರ ಹಿಂದೆ ಒಂದು
ಇಂದ್ರನಿಗೆ ಮಿತಿ ಮೀರಿದೆ ಅಹಂಕಾರ
ಅನಿಮಿಷರೆಂದು ಮೆರೆಯುವುದು ತರವೇ
ಇರಬಹುದು ಸುಖಭೋಗ
ತಿಳಿಯಲಿ ನಮ್ಮ ಅಳಲು ಸ್ವಲ್ಪ
ಹಂಚಬೇಕೀಗ ಸಮಸ್ತವನ್ನು ಒಂದೊಂದಾಗಿ
ಬಿಸುಡಬೇಕೀಗ ಪಲ್ಲಕ್ಕಿಯಿಂದಲೇ ದೆಸೆದೆಸೆಗೆ
ಎಲ್ಲರಿಗೂ ಒದಗಿ ಬರುವಂತೆ
ಯಾರುಯಾರನ್ನೋ ತುಳಿಯುತ್ತ ಮೇನೆಯಲ್ಲಿ
ಕುಳಿತರಾಯಿತೇ ಮೇನಕೆಯ ಕುಣಿಸಿ
ನಾವು ಕೂಡ ಕುಣಿಯಬೇಕೀಗ ಥಕ್ಕಥೈ
ಬಿಟ್ಟುಕೊಡಿರಯ್ಯ ಸ್ವರ್ಗಸಿಂಹಾಸನ
ನಾವು ಕೂರುತ್ತೇವೆ ಒಂದಷ್ಟು ಸಮಯ
ಬೇಡ ನಮಗೆ ನಿಮ್ಮ ಗುಡಿಗೋಪುರ
ದೇವರು ಕೂಡ
ಮಾಡುತ್ತೇವೆ ನೆಲಸಮ
ನಿಮ್ಮ ದೇವರು ದಿಂಡರುಗಳ
ಕಟ್ಟುತ್ತೇವೆ ಅಲ್ಲಿ ಗುಡಿಸಲು
ಸಾರಾಯಿಕಟ್ಟೆ ಕಟುಕನಂಗಡಿ
ಬಿಡಿರಯ್ಯ ದಾರಿ ನಮಗೆ
ಹಾಕಬೇಕೀಗ ಸ್ವರ್ಗಕ್ಕೆ ಲಗ್ಗೆ!
- ಡಾ. ವಸಂತಕುಮಾರ ಪೆರ್ಲ
2 thoughts on “ಸ್ವರ್ಗಕ್ಕೆ ಲಗ್ಗೆ”
ನಿಮ್ಮ ಕವನದ ‘ಲಗ್ಗೆ’ಯ ಓದು : ಪ್ರತಿಬಿಂಬಿಸಿದ್ದು ಹೀಗೆ!
ಸ್ವರ್ಗ ಯಾರಿಗೆ ಬೇಡ?
-ರಾವಣನ ಛಲದ ಸೆಲೆ
ನೆಲದಲ್ಲಿ ನೆಲೆಯಾದಾಗ
ತಡೆಯೇಕೆ?
ಪಡೆಯುವದಕೆ-
ಶೂರವೋ, ಕ್ರೂರವೋ
ಶೂರವೇ ಕ್ರೂರವೋ
ಇಂದ್ರನ ಅಹಂಕಾರ
ಮುರಿಯುವ ಹಂಬಲಕೆ
ಇಂಬು ಸಿಕ್ಕರೆ
ಬಿಡುವದೇಕೆ?
ಲಗ್ಗೆಯ ಬಗ್ಗೆ
ಕಾಯುತ್ತಿದ್ದ….ಆ ಕ್ಷಣ
ಭೀಷಣ!
ಸುಂದರ ಕವನ