ವೇದ್ಯವಾಗದ ಸಂಗತಿಯ ಅಡಿಪಾಯ
ಅಲುಗಾಡಿ, ಅಲೌಕಿಕ ಆನಂದ ಆಳಕ್ಕಿಳಿಯುವ
ಮುನ್ನವೇ, ಮೌನರಾಗದ ಅಪಸ್ವರ
ದಿಗಂತದ ನಡುವೆ ನುಸುಳಿ
ನರಳುವುದ ಸಹ್ಯವಾಗಿಸಿದೆ
ವೇದ್ಯವಲ್ಲ, ಅವೇದ್ಯವೂ ಅಲ್ಲ
ರಾಗವಲ್ಲ, ಅನುರಾಗವಲ್ಲ
ವ್ಯಕ್ತವಲ್ಲ, ಅವ್ಯಕ್ತವೂ ಅಲ್ಲ
ಮುಖ್ಯವಲ್ಲ, ಅಮುಖ್ಯವೂ ಅಲ್ಲ
ರಿಂಗಣ, ಮೌನವ ಭಂಗಗೊಳಿಸುವ ರಿಂಗಣ
ಇದು ಅನಂತಲೀಲೆ, ವ್ಯೂಮಲೀಲೆ
ಲೌಕಿಕಲೀಲೆಯ ಅವಸರದ ಕೊನೆ,
ತೃಪ್ತಿಯ ಬೆನ್ನೇರಿ, ಅತೃಪ್ತಿಯ ಅಪ್ಪುಗೆ
ದಾಹದಾಲಾಪದ ದರ್ಪಣ
ಸಮರ್ಪಣಾಭಾವದ ತಾಕಲಾಟ
ಗುರಿಯ ದಿಕ್ಕಿಗರಡಿದೆ ಮುಂಜಾವ ಮಂಜು
ಅಗ್ನಿಯ ಆರಂಭಕೆ ಕಿಚ್ಚಿನ ಅಭಾವ
ಮೇಘ ಸಿಡಿಲಿನಾರ್ಭಟಕೆ ಅದೃಶ್ಯ
ಅನಂತದಾಕಾಶಕೆ ನೀಲಿ ಬೇಲಿ
ಸ್ವರ್ಗದ ಕದವೂ ಮಾಯ
ಅರ್ಥಹೀನದನ್ಯೋನ್ಯ
ಕಾಲವಾಗುವುದು ನಿಶ್ಚಯ
ಬೆಳೆಕಿನ ಮಾಯೆಯೊಳಗೆ ಒಳಗಣ್ಣು ದೃಷ್ಟಿಹೀನವಾದಂತೆ
ಅಮೂರ್ತಪ್ರೇಮ ಅಲಂಕಾರದ ಒಣಪ್ರದರ್ಶನ
ಮುಷ್ಟಿಯಲ್ಲಿ ಸಿಕ್ಕಿಕೊಂಡು ಏದುರಿಸು ಬಿಡುವ ಗಾಳಿ
ಇಷ್ಟೊಂದು ಅರ್ಥವೇಕೆ ಬಾಳಿಗೆ?
ನಾನಾರ್ಥಗಳ ಅನರ್ಥವೇಕೆ
ಜೀವಿಸುವೆ ಕಲೆ ಜನ್ಮಾಂತರದ ಸಹಜ ಕ್ರಿಯೆ
ಮುಖದರಳುವ ನಗುವ ಸಿಂಚನ, ಪ್ರತಿಧ್ವನಿಸುವುದು ಜಗವೆಲ್ಲಾ,
ಸಹಜವಾಗಿ ಅವತರಸಿ, ಸಹಜವಾಗಿ ಬಾಳಿ
ಸಹಜವಾಗಿ ಮರೆಯಾಗುವುದು
- ಎಂ.ವಿ. ಶಶಿಭೂಷಣ ರಾಜು