ಕೃತಿ: ಅಂಬಾತನಯ ಮುದ್ರಾಡಿಯವರ ಸಾಹಿತ್ಯ-ಒಂದು ಅಧ್ಯಯನ
ಕೃತಿಕಾರರು- ಮಿತ್ರಪ್ರಭಾ ಹೆಗ್ಡೆ
ಪ್ರಕಾಶನ- ಹೊಸಸಂಜೆ ಪ್ರಕಾಶನ, ಕಾರ್ಕಳ
ಬೆಲೆ- 250
ಮಿತ್ರಪ್ರಭಾ ಹೆಗ್ಡೆ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಮಂಗಳೂರು ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಶ್ರಿ ವೆಂಕಟರಮಣ ಮಹಿಳಾ ಕಾಲೇಜು, ಕಾರ್ಕಳ ಇಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸುಮಾರು 35 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಮಹಿಳಾ ಕಾಲೇಜಿನಲ್ಲಿ ಬೇರೆ ಬೇರೆ ಕಡೆಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವುದು ಮಾತ್ರ ತನ್ನ ಕರ್ತವ್ಯ ಎಂದು ತಿಳಿದುಕೊಳ್ಳದೇ ಅವರ ನೋವು ನಲಿವುಗಳಿಗೆ ಸ್ಪಂದಿಸಿ ಮಾತೃಪ್ರೇಮವನ್ನು ಉಣಬಡಿಸಿದ ಗುರುಮಾತೆ ಎಂದರೂ ತಪ್ಪಾಗಲಾರದು. ಅಪಾರ ವಿದ್ಯಾರ್ಥಿಗಳ ನಿಸ್ಪ್ರುಹ ಪ್ರೀತಿಯೇ ಅವರ ಬಹುದೊಡ್ಡ ಆಸ್ತಿ ಎನ್ನಬಹುದು. ಹೆಣ್ಣು ಮಕ್ಕಳಾಗಿ ತನ್ನ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಸಾಗುವಾಗ ಪ್ರೋತ್ಸಾಹದ ನೀರೆರೆದು ಸಲಹಿದ ಅಕ್ಕರೆಯ ತವನಿಧಿಯಂತಿದ್ದ ಮಿತ್ರಪ್ರಭಾ ಹೆಗ್ಡೆ ಅವರು ಗುರುಗಳಿಗಿಂತ ಹೆಚ್ಚು ಆತ್ಮೀಯ ಸ್ನೇಹಿತೆಯಂತೆ ಇದ್ದವರು. ಅವರು “ವನಿತೆ ಸಮಾಜದ ಚಿರಂತನ ಕವಿತೆ” ಎನ್ನುವುದನ್ನು ಅಕ್ಷರಶ: ಪಾಲಿಸಿ ಅದರಂತೆ ವಿದ್ಯಾರ್ಥಿಗಳಲ್ಲಿ ಧೈರ್ಯ, ಸ್ಥೈರ್ಯ, ಆತ್ಮವಿಶ್ವಾಸವನ್ನು ಬೆಳೆಸಿದವರು.
ಹಿರಿಯ ಯಕ್ಷಗಾನ ಸಾಹಿತಿ, ಅರ್ಥದಾರಿ, ವಿದ್ವಾಂಸರು, ಕವಿ, ನಾಟಕಕಾರ, ಉತ್ತಮ ವಾಗ್ಮಿ, ಚಿಂತಕ, ಅಂಕಣಕಾರ ಹೀಗೆ ಸಾಹಿತ್ಯದ ವಿವಿಧ ಮಗ್ಗುಲುಗಳಲ್ಲಿ ಕೃಷಿ ಮಾಡಿದವರು ಅಂಬಾತನಯ ಮುದ್ರಾಡಿ ಅವರು. ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಲೇ ತನ್ನೊಳಗೆ ಸಾಹಿತ್ಯಾಸಕ್ತಿಯನ್ನು ಮೂಡಿಸಿಕೊಂಡು ನಿರಂತರವಾಗಿ ಬರೆಯುತ್ತಾ ಬಂದರು. ಯಕ್ಷಗಾನ ಪ್ರಸಂಗಕರ್ತರಾಗಿ ಹೆಸರಾದಂತೆ ತಾಳಮದ್ದಲೆ ಅರ್ಥದಾರಿಯಾಗಿ ಅವರು ಜನರ ಪ್ರೀತಿಗೆ ಪಾತ್ರರಾಗಿದ್ದರು. ಅವರದು ಭಾವಪ್ರಧಾನವಾದ ಅರ್ಥಗಾರಿಕೆ ಎಂದೇ ಪ್ರಸಿದ್ದಿಯನ್ನು ಪಡೆದಿದ್ದು ಕೆಲವು ಪಾತ್ರಗಳ ಪರಕಾಯ ಪ್ರವೇಶ ಮಾಡಿ ಆ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಕುಂಬಳೆ ಸುಂದರರಾವ್ ಅವರು ಒಂದು ಕಡೆ “ಅಂಬಾತನಯರಿಗೆ ಭಾಷಾ ಶುದ್ಧಿಯಿದೆ; ಸಿದ್ಧಿಯಿದೆ. ಅಪೂರ್ವವಾದ ಶ್ರುತಿ ಮೇಲಿನ ಧ್ವನಿಶಕ್ತಿಯಿದೆ. ಅವರೊಂದಿಗೆ ಅನೇಕ ಸಲ ಅರ್ಥ ಹೇಳಿದ್ದೇನೆ; ಸಂತೋಷ ತಾಳಿದ್ದೇನೆ. ಅವರು ಸಂವಾದಕ್ಕೆ ಹತ್ತಿರ ಬರುತ್ತಾರೆ; ವಾದಕ್ಕೆ ದೂರ ಸರಿಯುತ್ತಾರೆ” ಎಂದಿರುವುದು ಅಂಬಾತನಯ ಮುದ್ರಾಡಿ ಅವರು ನಿಜ ಜೀವನದಲ್ಲಿಯೂ ಸ್ನೇಹಕ್ಕೆ ಒತ್ತುಕೊಟ್ಟು ವಾದ ವಿವಾದಗಳಿಂದ ದೂರ ಸರಿಯುತ್ತಿದ್ದರು ಎನ್ನುವುದನ್ನು ಸ್ಪಷ್ಟ ಪಡಿಸುತ್ತದೆ.
ನಮ್ಮ ನಾಡು ಕಂಡ ಇಂತಹ ಹಿರಿಯ ವಿದ್ವಾಂಸರಾದ ಅಂಬಾತನಯ ಮುದ್ರಾಡಿ ಅವರ ಸಾಹಿತ್ಯದ ಕುರಿತು ಅಧ್ಯಯನವನ್ನು ನಡೆಸಿ ಎಂ.ಫಿಲ್ ಪದವಿಯನ್ನು ಪಡೆದವರು ಮಿತ್ರಪ್ರಭಾ ಹೆಗ್ಡೆ ಅವರು. ಅಧ್ಯಾಪನ ವೃತ್ತಿಯನ್ನು ಪ್ರೀತಿಯಿಂದ ಮಾಡುತ್ತಲೇ ಅಧ್ಯಯನವನ್ನು ಮಾಡುವ ಆಕಾಂಕ್ಷೆಯಿಂದ ಎಂ.ಫಿಲ್ ಅಧ್ಯಯನಕ್ಕೆ ಸೇರಿಕೊಂಡು ನಿಷ್ಠೆಯಿಂದ ಆ ಕಾರ್ಯದಲ್ಲಿ ತೊಡಗಿಕೊಂಡರು. ಪರಿಣಾಮವಾಗಿ ಎಂ.ಫಿಲ್ ಪದವಿಯೊಂಡಿಗೆ ಆ ಸಂಪ್ರಂಭಂಧ ಕೃತಿ ರೂಪದಲ್ಲಿಯೂ ಹೊರಬಂತು. ಈ ಕೃತಿಯ ಪುಟಗಳನ್ನು ತೆರೆಯುತ್ತಾ ಹೋದಂತೆ ಅಂಬಾತನಯ ಮುದ್ರಾಡಿ ಅವರ ಸಾಹಿತ್ಯಾವಲೋಕನವನ್ನು ಮಾಡಿದ ಅಪೂರ್ವ ಅನುಭವವಾಗುತದೆ. ಆರು ಅಧ್ಯಾಯಗಳಲ್ಲಿ ಅವರ ವ್ಯಕ್ತಿ ಪರಿಚಯ, ವಿಡಂಬನ ಸಾಹಿತ್ಯ, ನಾಟಕಗಳು, ನೃತ್ಯರೂಪಕಗಳು, ಕವಿತೆಗಳು, ಯಕ್ಷಗಾನ ಪ್ರಸಂಗಗಳು, ಇತರ ಸಾಹಿತ್ಯಗಳೆಂದು ವಿಭಾಗಿಸಿ ಅಧ್ಯಯನವನ್ನು ಮಾಡಲಾಗಿದೆ.
ದನಗಾಹಿಯಾಗಿದ್ದ ಹುಡುಗ ಸಾಹಿತ್ಯ ಕ್ಷೇತ್ರದಲ್ಲಿ ಬೆಳಗಿದ, ಯಕ್ಷಗಾನ ಕ್ಷೇತ್ರದಲ್ಲಿ ಮಿನುಗಿದ ಯೆಶೋಗಾಥೆ ಇಲ್ಲಿದೆ. ಅಂಬಾತನಯರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಒಬ್ಬ ಪ್ರಾಥಮಿಕ ಶಾಲೆಯ ಶಿಕ್ಷಕನಾದವನು ಮನಸ್ಸು ಮಾಡಿದರೆ ಏನು ಮಾಡಬಹುದು ಎನ್ನುವುದಕ್ಕೆ ಉದಾಹರಣೆ ಅಂಬಾತನಯ ಮುದ್ರಾಡಿ ಅವರು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ತೋರಿಸಿಕೊಟ್ಟ ಮಹಾನ್ ಚೇತನ. ಮುದ್ರಾಡಿ ಎಂಬ ಪುಟ್ಟ ಊರಿನ ಮಾಣಿಕ್ಯ ಅಂಬಾತನಯ ಮುದ್ರಾಡಿ ಅವರು ತನ್ನ ಕಾವ್ಯನಾಮದಿಂದಲೇ ಪ್ರಸಿದ್ದರಾದವರು. ಎಂ. ಕೇಶವ ಶೆಟ್ಟಿಗಾರ್ ಅವರ ನಿಜನಾಮಧೇಯ. ಅವರು ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿ ವೃತ್ತಿಯನ್ನು ಮಾಡಿಕೊಂಡು ಸಾಹಿತ್ಯದ ಆಸಕ್ತಿಯನ್ನು ಮೂಡಿಸಿಕೊಂಡು ಬೆಳೆದ ಬಗೆ ಇತರರಿಗೂ ಪ್ರೇರಣೆಯನ್ನು ನೀಡಬಲ್ಲದು.
ಸಮಾಜದ ಓರೆಕೋರೆಗಳನ್ನು ನವಿರು ಹಾಸ್ಯದ ಮೂಲಕ ಅನಾವರಣ ಮಾಡುವ ಕಲೆ ಅಂಬಾತನಯರಿಗೆ ಸಿದ್ದಿಸಿದೆ ಎಂದಿರುವ ಲೇಖಕರಾದ ಮಿತ್ರಪ್ರಭಾ ಅವರು ‘ಪ್ರಜಾಪ್ರಭುತೇಶ್ವರ ವಚನಶತಕ’ ಹಾಗೂ ‘ಭೂರ್ತರಾಜಕೀಯನಾಯಕೋಷ್ಟೋತ್ತರ ಶತನಾಮಾವಲಿ’ ಅದಕ್ಕೆ ಉತ್ತಮ ನಿದರ್ಶನ ಎಂದಿದ್ದಾರೆ. ಈ ಕೃತಿಗಳಲ್ಲಿ ಭಾರತದ ರಾಜಕೀಯ ಕ್ಷೇತ್ರದ ಅಧ:ಪತನದ ಕಠೋರ ಸತ್ಯಗಳನ್ನು, ಹಳ್ಳಿಯಿಂದ ದಿಲ್ಲಿಯವರೆಗೆ ವ್ಯಾಪಿಸಿಕೊಂಡು ಭಾರತದ ಭವ್ಯ ಇತಿಹಾಸವನ್ನು ಮಲಿನಗೊಳಿಸುವ ವಿಕೃತಮುಖಗಳ ಅನಾವರಣ ಮಾಡಿರುವುದನ್ನು ಲೇಖಕರು ಗುರುತಿಸಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದ ಕೊಡುಗೆಯನ್ನು ನೀಡಿದ ಸಾಹಿತ್ಯ ಪ್ರಕಾರ ವಚನ ಸಾಹಿತ್ಯ. ಅಂಬಾತನಯ ಮುದ್ರಾಡಿ ಅವರ ವಚನ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ತಳೆದವರು. ಅವರ ವಚನಗಳ ಕುರಿತು ಕೂಲಂಕಷುವಾಗಿ ಅಧ್ಯಯನ ಮಾಡಿರುವ ಲೇಖಕರು ಆಧುನಿಕ ವಚನಗಳಲ್ಲಿ ಅನೇಕ ಒಳನೋಟಗಳನ್ನು ಕಂಡುಕೊಂಡಿದ್ದಾರೆ. ಅಂಬಾತನಯರು ಹನ್ನೆರಡನೆಯ ಶತಮಾನದ ವಚನ ಸಾಹಿತ್ಯದ ಪ್ರಭಾವದಿಂದ ಪ್ರಭಾವಿತರಾಗಿ, ಆಯಾಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ನಿರೂಪಿಸುವ ಅನೇಕ ವಚನಗಳನ್ನು ರಚಿಸಿದ್ದಾರೆ. ಅವರು ರಚನೆಗಳಲ್ಲಿ ವಿಡಂಬನೆಯಿದೆ, ಆಕ್ರೋಶವಿದೆ. ಸಮಾಜದಲ್ಲಿ ಗಬ್ಬೆದ್ದು ನಾರುತ್ತಿರುವ ರಾಜಕೀಯ ವಿಷಮತೆಯನ್ನು ವ್ಯಕ್ತಪಡಿಸಿರುವ ವಚನಗಳು ಗಮನಾರ್ಹವಾಗಿವೆ.
ಅಂಬಾತನಯ ಮುದ್ರಾಡಿ ಅವರು ಕೆಲವು ನಾಟಕಗಳನ್ನು ಮಕ್ಕಳಿಗಾಗಿ ಬರೆದಿದ್ದಾರೆ. ಇನ್ನು ಕೆಲವು ಗಂಭೀರ ವಸ್ತುಗಳಿಂದ ಗಮನ ಸೆಳೆಯುತ್ತವೆ. ‘ಪರಿತ್ಯಕ್ತ’, ದುಷ್ಯಂತ-ಶಕುಂತಳಾ, ರಾಮಧಾನ್ಯ ಚರಿತೆ, ಕೋಟಿ ಚೆನ್ನಯ, ಅಹಲ್ಯೋದ್ಧಾರ, ಭಕ್ತ ಕುಚೇಲ, ಪನ್ನಾದಾಸಿ, ರುಕ್ಮಾಂಗದ, ಭಕ್ತ ಪ್ರಹ್ಲಾದ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಅವರ ಪರಿತ್ಯಕ್ತ ನಾಟಕ ಪಠ್ಯವಾಗಿತ್ತು. ಅವರ ರಚನೆಯ ನಾಟಕಗಳ ಕುರಿತು ಅಧ್ಯಯನ ಮಾಡಿರುವ ಮಿತ್ರಪ್ರಭಾ ಅವರು ನಾಟಕದ ಶೈಲಿ, ಕತಾವಸ್ತು, ತಂತ್ರ, ಸನ್ನಿವೇಶ ನಿರ್ಮಾಣ, ಪ್ರಕೃತಿ ವರ್ಣನೆ, ಮೂಲ ಕತೆ ಹೀಗೆ ಭಿನ್ನ ಪ್ರಕಾರಗಳಾಗಿ ವಿಂಗಡಿಸಿ ಬರೆದಿದ್ದಾರೆ. ಪುರಾಣದ ಕತೆಗಳನ್ನು ನಾಟಕರೂಪದಲ್ಲಿ ರಚಿಸಿರುವ ಅಂಬಾತನಯ ಮುದ್ರಾಡಿ ಅವರ ಆಸಕ್ತಿ, ಅವರ ಆಳವಾದ ಓದು, ಜ್ಞಾನ ಎಲ್ಲವೂ ಸ್ಮರಣೀಯ.
ಅಂಬಾತನಯ ಮುದ್ರಾಡಿ ಅವರ ಮುಖ್ಯ ಅಭಿವ್ಯಕ್ತಿ ಮಾಧ್ಯಮ ಕಾವ್ಯ. ಕವಿತೆಗಳು ಅವರ ಸಾಹಿತ್ಯದ ಜೀವಾಳ. ನಗರ ನಾಗರಿಕತೆಯ ಸೋಕಿಲ್ಲದೆ, ಸದ್ದುಗದ್ದಲವಿಲ್ಲದ ಹಳ್ಳಿ ಮುದ್ರಾಡಿಯಲ್ಲಿದ್ದುಕೊಂಡು, ಶಿಕ್ಷಕ ವೃತ್ತಿಯನ್ನು ಪ್ರೀತಿಸುತ್ತಾ, ಯಕ್ಷಗಾನ ಕಲೆಯನ್ನು ಆರಾಧಿಸುತ್ತ, ಸಾಹಿತ್ಯದೊಡನೆ ಸ್ನೇಹಬೆಳೆಸುತ್ತಾ, ಕಾವ್ಯದ ನಿನಾದದಲ್ಲಿ ಮೈಮರೆಯುತ್ತಾ ನಡೆದಾಡುವ ಸಾಹಿತ್ಯ ತೇರು ಎಂದು ಅಭಿಮಾನಿಗಳಿಂದ ಕರೆಸಿಕೊಂಡ ಮೃದು ಮಧುರ ಮಾತಿನ ಅಂಬಾತನಯ ಮುದ್ರಾಡಿ ಅವರು ಈ ಕೃತಿಯ ಮೂಲಕ ಸದಾ ಜೀವಂತವಾಗಿರುತ್ತಾರೆ. ಅವರ ಸಾಹಿತ್ಯ ಸಾಧನೆಯ ಕುರಿತು ಅಧ್ಯಯನ ಮಾಡಿರುವ ಈ ಸಂಪ್ರಬಂಧಕ್ಕೆ ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿಯೂ ದೊರಕಿದೆ. ಸಾಧಕನೊಬ್ಬನ ಸಾಧನೆಯನ್ನು ನಾಡಿಗೆ ಆಪ್ತನೆಲೆಯಿಂದ ಪರಿಚಯಿಸಿ ಸಾಹಿತ್ಯ ಕೃತಿಗಳನ್ನು ಪರಾಂಬರಿಸಿ, ವಿಶ್ಲೇಷಿಸಿ, ವಿಮರ್ಶಿಸಿ ಅಂಬಾತನಯರ ಬದುಕು, ಅವರ ಒಟ್ಟು ಸಾಹಿತ್ಯದ ಸಾರ ಸತ್ವವನ್ನು ಕ್ರೋಢೀಕರಿಸಿ, ಕೃತಿ ರಾಶಿಗಳ ವಿಹಂಗಮ ನೋಟವನ್ನು ಮಿತ್ರಪ್ರಭಾ ಹೆಗ್ಡೆ ಅವರು ಈ ಪುಸ್ತಕದಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಮಿತ್ರಪ್ರಭಾ ಹೆಗ್ಡೆ ಅವರಿಗೆ ಅಭಿನಂದನೆಗಳು.
2 thoughts on “ಅಂಬಾತನಯ ಮುದ್ರಾಡಿ ಅವರ ಸಾಹಿತ್ಯಾವಲೋಕನ”
ಅಭಿನಂದನೆಗಳು ಮೆಡಮ್. ನಾನೂ ಮಹಾನ್ ಚೇತನದ ಕುರಿತು ತಿಳಿಯಲು ತಮ್ಮ ಪುಸ್ತಕ ಓದಬೇಕು.
ತುಂಬಾ ಚಂದದ ಬರಹ ಪೂರ್ಣಿಮಾರವರೆ