(ಹಾಸ್ಯ ಲೇಖನ)
ವಯಸ್ಸು ನಲವತ್ತೈದರ ಹತ್ತಿರ ಬಂದರೂ ಇನ್ನೂ ಮದುವೆ ಬಂಧನಕ್ಕೆ ( ವ್ಯಾಮೋಹಕ್ಕೆ ) ಒಳಗಾಗದ ನಿಜವಾದ ‘ ಹಿ – ಮ್ಯಾನ್ ‘ ಗುಂಡಣ್ಣ ಎಂದರೂ ತಪ್ಪಾಗಲಾರದು. ಆತನಿಗೆ ಜೋಡಿ ಹುಡುಕುವುದರಲ್ಲಿ ಹೆತ್ತವರು, ಬಂಧುಗಳು ಮತ್ತು ಸ್ನೇಹಿತರು ಘೋರವಾಗಿ ವಿಫಲರಾದರು. ಕಾರಣ ಗುಂಡಣ್ಣನಿಗೆ ತನ್ನ ‘ ಸಧೃಡ ‘ ಆರೋಗ್ಯದ ಮೇಲೆ ತನಗೇ ಪೂರ್ತಿ ಭರವಸೆ ಇಲ್ಲ. ಯಾರೋ ಆಗದ ಕುಹಕಿಗಳು ” ಸ್ವಲ್ಪ ಬೊಜ್ಜು ಹೆಚ್ಚಾಗಿ ಹೊಟ್ಟೆ ಬಂದಿದೆ. ಮುಂದೆ ಗುಡಾಣವಾಗುವ ಲಕ್ಷಣಗಳು ಕಂಡು ಬರುತ್ತಿವೆ…” ಎಂದು ಹೇಳಿದ್ದನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡ ಗುಂಡಣ್ಣ ಮತ್ತಷ್ಟು ಕ್ಷೋಭೆಗೀಡಾದ.
ಅಲ್ಲದೇ ಗುಂಡಣ್ಣನಿಗೆ ಇತ್ತೀಚಿಗೆ ‘ ಆರೋಗ್ಯದ ಫೋಬಿಯಾ ‘ ಬೇರೆ ಶುರುವಾಯಿತು. ಬೆಳಿಗ್ಗೆ ದಿನ ಪತ್ರಿಕೆ ಮುಟ್ಟಿದರೆ ಸಾಕು ಬೆಚ್ಚಿ ಬೀಳುತ್ತಾನೆ! ಅದು ಪೇಪರೋ ಅಥವಾ ತನ್ನ ಆರೋಗ್ಯದ ‘ ಕೇಸ್ ಶೀಟೋ ‘ ಎಂದು ಅರ್ಥವಾಗದೆ ಜಿಜ್ಞಾಸೆಗೆ ಒಳಗಾಗುತ್ತಾನೆ. ಚಿಕ್ಕವನಾಗಿದ್ದಾಗ ‘ ಗುಂಡು ಗುಂಡಾಗಿ ‘ ಇದ್ದ ಗುಂಡಣ್ಣ ಈಗ ನೋಡಲು ತುಸು ದಪ್ಪ ಎನಿಸಿದರೂ ಆರೋಗ್ಯ ಸರಿ ಇದೆಯೋ ಇಲ್ಲವೋ ಎನ್ನುವ ಚಿಂತೆ ( ಚಿತೆಯಂತೆ! ) ಗುಮ್ಮನಂತೆ ಕಾಡತೊಡಗಿತು ಇತ್ತೀಚಿಗೆ ಗುಂಡಣ್ಣನಿಗೆ.
” ದೇಹದ ತೂಕ ಸುರಕ್ಷಿತವಾಗಿ ಹಾಗೂ ವೈಜ್ಞಾನಿಕವಾಗಿ ಕಡಿಮೆ ಮಾಡಿ. ಒಂದೇ ವಾರದಲ್ಲಿ ನಿಮ್ಮ ಹೊಟ್ಟೆಯಲ್ಲಿ ಶೇಖರವಾದ ಕೊಬ್ಬನ್ನು ( ಹಣವನ್ನು ) ಕರಗಿಸಲು ಅಲ್ಲಿ ಇಲ್ಲಿ ಅಂತ ಮೋಸ ಹೋಗಬೇಡಿ…ದಯವಿಟ್ಟು ನಮ್ಮಲ್ಲಿಗೇ ಬನ್ನಿ! ” ಎನ್ನುವ ಸಾಲು ಸಾಲು ಜಾಹೀರಾತುಗಳನ್ನು ಓದಿ ಓದಿ ಸುಸ್ತಾದ ಪಾಪ ಗುಂಡಣ್ಣ. ಹಿಮಾಲಯ ಪರ್ವತ ಹತ್ತಲು ಕೂಡ ಧೃಡ ಸಂಕಲ್ಪದ ಮೊದಲ ಎರಡು ‘ ಹೆಜ್ಜೆಗಳು ‘ ಬಹಳ ಮುಖ್ಯ ಎಂದು ಮನೆಗೆ ಒಂದು ಹೊಸ ವಾಕರ್ ( ಇದು ಇತ್ತೀಚಿನ ಟ್ರೆಂಡ್! ) ತಂದು ಅದನ್ನು ಟಿ ವಿ ಎದುರು ಪ್ರತಿಷ್ಠಾಪಿಸಿದ ಗುಂಡಣ್ಣ. ಟಿ ವಿ ನೋಡುತ್ತಾ ಗಂಟೆಗೆ ಹತ್ತು ಕಿಲೋ ಮೀಟರ್ ಸ್ಪೀಡಿನಲ್ಲಿ ಅರ್ಧ ಘಂಟೆ ವಾಕಿಂಗ್ ಮಾಡಿ ಇಡೀ ದೇಹ ಬೆವರು ಬಸಿಯುವಂತೆ ( ಹರಿಸುವಂತೆ ) ಮಾಡಿ ಕನ್ನಡಿಯಲ್ಲಿ ತನ್ನನ್ನು ತಾನು ಪ್ರತಿನಿತ್ಯ ನೋಡಿಕೊಂಡು ಇಂದು ಇಷ್ಟು ಕ್ಯಾಲರಿಯನ್ನು ಬರ್ನ್ ( ಸುಟ್ಟು ಭಸ್ಮ) ಮಾಡಿದೆ ಎಂದು ಸಂಭ್ರಮ ಪಡುತ್ತಿದ್ದ ಗುಂಡಣ್ಣ. ಅಲ್ಲದೇ ತನ್ನನ್ನು ಹಾಗೂ ತನ್ನ ದೇಹವನ್ನು ಅಸಡ್ಡೆಯಿಂದ ದಿನವೂ ಒಂದು ತರಹ ನೋಡುವ ತನ್ನ ಬಾಸಿಗೆ ಮತ್ತು ಕುಹಕಿಗಳಿಗೆ ಬುದ್ಧಿ ಕಲಿಸಬೇಕೆಂದು ಮತ್ತಷ್ಟು ಕಠಿಣದ ವ್ಯಾಯಾಮ ಬೇರೆ ಶುರು ಮಾಡಿದ ಗುಂಡಣ್ಣ. ಸೂರ್ಯ ವಂಶದ ( ದಿನ ನಿತ್ಯ ಸೂರ್ಯ ಹುಟ್ಟಿ ಎಷ್ಟೋ ಹೊತ್ತಿನ ಮೇಲೆ ಏಳುವ ಸಜ್ಜನರು…) ಗುಂಡಣ್ಣ ಇತ್ತೀಚಿಗೆ ಬ್ರಾಹ್ಮೀ ಮಹೂರ್ತದಲ್ಲಿ ಎದ್ದು ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡ.
ಆದರೆ ಅದೇನು ಮಾಯೆಯೋ ಏನೋ? ದೇಹ ಸಣ್ಣಗಾಗಲು ಸಹಕರಿಸಲಿಲ್ಲ. ಗುಂಡಣ್ಣ ಬಿಡುತ್ತಿಲ್ಲ. ದೇಹ ಜಗ್ಗುತ್ತಿಲ್ಲ. ಗುಂಡಣ್ಣನನ್ನು ನೋಡಿದವರು ‘ ಸ್ವಲ್ಪ ತಳ್ಳಗಾದರೆ ಚೆನ್ನ ‘ಎಂದು ಹಿತೈಷಿಗಳು (ಒಂದು ರೀತಿಯ ಹಿತ ಶತ್ರುಗಳು!) ಆಗಾಗ್ಗೆ ಅನಿಸಿಕೆ ವ್ಯಕ್ತಪಡಿಸುತ್ತಿದ್ದರು. ನಮ್ಮ ಪ್ರಾಚೀನ ಭಾರತ ದೇಶ ಬರೀ ಸನ್ಯಾಸಿಗಳ ಅಥವಾ ಬಾಬಾಗಳ ‘ ಅಡ್ಡಾ ‘ ಎಂದು ಮೊದಲು ತಪ್ಪಾಗಿ ಭಾವಿಸಿದ್ದ ಗುಂಡಣ್ಣ. ಆದರೆ ‘ ಬಾಬಾ ರಾಮದೇವ್ ‘ ಮತ್ತು ಅವರ ಯೋಗಾಸನದ ವಿಡಿಯೋಗಳನ್ನು ನೋಡಿದ ಮೇಲೆ ‘ ಭಾರತ ಯೋಗಿಗಳ ಮತ್ತು ಸಂತರ ‘ ನಾಡೆಂದು ಅರಿವಾಯಿತು ಗುಂಡಣ್ಣನಿಗೆ. ಪ್ರಾಣಾಯಾಮ, ಭಸ್ಮಿಕ, ಕಪಾಲ ಭಾತಿ ಮತ್ತು ಸೂರ್ಯ ನಮಸ್ಕಾರ ಮೆಲ್ಲ ಮೆಲ್ಲನೆ ಆರಂಭಿಸಿದ. ಕೂತಲ್ಲೇ ಕೂತು ಮೂಗಿನ ಹೊಳ್ಳೆ ಮುಚ್ಚಿ ತೆರೆದು ಉಸಿರು ಬಿಗಿ ಹಿಡಿದು ಮತ್ತೆ ಹೊರ ಬಿಡುವುದು ಮತ್ತು ಹೊಟ್ಟೆಯನ್ನು ಒಳಗೆ ದಬ್ಬಿ ಕೆಲವು ಸೆಕೆಂಡುಗಳ ಬಳಿಕ ಮತ್ತೆ ಹೊರ ( ಒಳ – ಹೊರ ಹಾಕುವ ಪ್ರಕ್ರಿಯೆ ) ಹಾಕಿದರೆ ಸಾಕು ದೇಹದಲ್ಲಿನ ಎಷ್ಟೋ ಕ್ಯಾಲರಿಗಳು ಕರಗುವವು ಎಂದು ಗುಂಡಣ್ಣನ ನಂಬಿಕೆ. ಮರುದಿನವೇ ಒಂದು ‘ ಯೋಗ ಮ್ಯಾಟ್ ‘ ಖರೀದಿಸಿ ಒಳ್ಳೆಯ ಶುಭ ಮಹೂರ್ತದಲ್ಲಿ ಯೋಗಾಭ್ಯಾಸವನ್ನು ಆರಂಭಿಸಿದ ಗುಂಡಣ್ಣ. ಕೆಲವು ದಿನಗಳ ‘ ಆರಂಭ ಶೂರತ್ವ ‘ ದ ಬಳಿಕ ಅಹಿಂಸಾವಾದಿ ಗುಂಡಣ್ಣನಿಗೆ ತನ್ನ ದೇಹದ ಮೇಲೆ ಅದೂ ತನ್ನ ‘ ಹೊಟ್ಟೆ ‘ ಯ ಮೇಲೆ ತಾನೇ ‘ ಹಿಂಸೆ ‘ ಕೊಡುವುದು ಸರಿ ಅಲ್ಲ ಎನಿಸಿ ಅದಕ್ಕೆ ಮುಕ್ತಿ ಕೊಟ್ಟ. ಅಲ್ಲದೇ ಮೊದಲ ‘ ಡೂ ಅರ್ ಡೈ ‘ ನಿರ್ಧಾರವನ್ನು ಈಗ ಸಡಲಿಸಿದ. ‘ ಡೂ ‘ ಹೇಗಾದರೂ ಇರಲಿ ‘ ಡೈ ‘ ಎನ್ನುವ ಶಬ್ದ ಗುಂಡಣ್ಣನ ಮನಸಿಗೆ ತುಂಬಾ ಕಿರಿಕಿರಿ ಎನಿಸಿತು. ಹೀಗಾಗಿ ಯೋಗ ಮತ್ತಿನಿಂದ ಬೇಗ ಹೊರ ಬಂದ.
ನಿಜ ಹೇಳಬೇಕೆಂದರೆ ಈ ವಾಕಿಂಗ್, ಜಾಗಿಂಗ್ ಎಲ್ಲ ಶುದ್ಧ ಸುಳ್ಳು ಎನ್ನುವುದು ಈಗ ಅರಿವಾಯಿತು ಗುಂಡಣ್ಣನಿಗೆ. ಆರೋಗ್ಯ ಭಾಗ್ಯ ನಿಂತಿರೋದೆ ‘ ಡೈಟ್ ‘ ಮೇಲೆ ಎಂದು ತಡವಾಗಿ ಜ್ಞಾನೋದಯವಾಯಿತು. ‘ ಕಿಚನ್ ‘ ( ಅಡುಗೆ ಮನೆ ) ಎನ್ನುವುದೇ ಆರೋಗ್ಯಕ್ಕೆ ಸಂಬಂಧಿಸಿದ ಒಂದು ‘ ವಿಶ್ವ ವಿದ್ಯಾಲಯ ‘ ಎನ್ನುವ ವಿಷಯ ತೀರಾ ತಡವಾಗಿ ಗೊತ್ತಾಯಿತು ಪಾಪ ಗುಂಡಣ್ಣನಿಗೆ. ಒಳ್ಳೆಯ ಆರೋಗ್ಯಕ್ಕೆ ಐವತ್ತು ಸೂತ್ರಗಳು … ಅಡುಗೆ ಮನೆಯೇ ಔಷಧಾಲಯ … ಇವು ತಿನ್ನಿ ಶತಕ ಹೊಡೆಯಿರಿ … ನಿಮ್ಮ ಊಟದ ತಟ್ಟೆಯೇ ನಿಮ್ಮ ಆರೋಗ್ಯದ ರಹಸ್ಯ ಹೇಳುತ್ತದೆ … ಏನು ತಿನ್ನಬೇಕು ಏನು ತಿನ್ನಬಾರದು?… ಇವೆಲ್ಲವನ್ನೂ ಅಳತೆ ಮೀರಿ ಓದಿ ಅರಗಿಸಿಕೊಳ್ಳಲು ಆಗದ ಗುಂಡಣ್ಣನಿಗೆ ‘ ಸೈಟು ‘ ಬಂತು ಪಾಪ! ಆದರೂ ಆರೋಗ್ಯದ ‘ ಇನ್ ಸೈಟು ‘ ಸಲುವಾಗಿ ಬೇರೆ ದಾರಿ ಕಾಣದೆ ಅಡುಗೆ ಮನೆ ಹೊಕ್ಕ ಗುಂಡಣ್ಣ.
‘ ವೈದ್ಯೋ ನಾರಾಯಣ ಹರಿ ‘ ಅಲ್ಲ ಬದಲಾಗಿ ‘ ವಗ್ಗರಣೆ ಡಬ್ಬಿಯೇ ವೈದ್ಯೋ ಹರಿ ‘ ಎಂದು ತನ್ನಷ್ಟಕ್ಕೆ ತಾನೇ ಸ್ವಯಂ ಘೋಷಿಸಿದ ಗುಂಡಣ್ಣ. ಕೆಲ ಮೆಂತ್ಯೆ ಕಾಳುಗಳನ್ನು ಒಟ್ಟಿಗೇ ನುಂಗಿದ, ಒಂದು ಅಡುಗೆ ಸ್ಪೂನ್ ಜೀರಿಗೆಯನ್ನು ಬಾಯಲ್ಲಿ ಹಾಕಿಕೊಂಡು ಜಿಗಿದ , ದಾಲ್ಚಿನ್ನಿಯನ್ನು ಬಾಯಿಯೊಳಗೆ ಎಸೆದು ಪಟ ಪಟ ಕಡಿದ… ಅರಿಶಿಣ ನಾಲಿಗಿಗೆ ಹಚ್ಚಿದ…ಇಂಗು ( ತಿಂದು ಮಂಗನಾಗಲಿಲ್ಲ!…) ನುಂಗಿದ. ಲವಂಗವನ್ನು ದವಡೆ ಹಲ್ಲಿನ ಸಂದಿಯತ್ತ ನೂಕಿದ…ಹಸಿ ಶುಂಠಿ, ನಿಂಬೆ ಹಣ್ಣು ಮತ್ತು ಜೇನು ತುಪ್ಪ ಬೆರೆಸಿದ ನೀರನ್ನು ಗಟ ಗಟ ಕುಡಿದ…ಇವೆಲ್ಲವೂ ಹಳೆಯ ‘ ಕಿಚನ್ ‘ ನಲ್ಲಿ ಮಾತ್ರ ಸಿಗುವ ಸಾಮಾಗ್ರಿಗಳು. ಅವುಗಳನ್ನು ಎಲ್ಲ ರೀತಿ ಸಮರ್ಪಕವಾಗಿ ಬಳಸಿ ಶುದ್ಧ ನೀರು ಮತ್ತೆ ಮತ್ತೆ ಕುಡಿದು ಒಮ್ಮೆ ಅಲ್ಲ ಮತ್ತೊಮ್ಮೆ ‘ ಡರ್ರೆಂದು ಡೇಗಿ ‘ ಮಾಡುಲರ್ ‘ ( ನೂತನ ಅಡುಗೆ ಮನೆ ) ಕಿಚನ್ ಹೊಕ್ಕ ಗುಂಡಣ್ಣ. ಅಲ್ಲಿ ಓಟ್ಸ್ ತಿಂದ…ಎದುರಿಗೆ ಕಂಡ ಕೆಲ್ಲಾಗ್ಸ್ ಬಿಡಲಿಲ್ಲ…ಬಾದಾಮಿ, ದ್ರಾಕ್ಷಿ, ಪಿಸ್ತಾ, ಅಂಜೂರ, ವಾಲ್ ನಟ್ಸ್ ಮತ್ತು ಇತರ ಡ್ರೈ ಫ್ರೂಟ್ಸ್ ರಾತ್ರಿ ಎಲ್ಲ ನೀರಲ್ಲಿ ನೆನೆ ಹಾಕಿ ಬೆಳಿಗ್ಗೆ ಎಲ್ಲವನ್ನೂ ಒಂದು ಬೌಲಿನಲ್ಲಿ ಹಾಕಿಕೊಂಡು ಎಷ್ಟು ಪ್ರಮಾಣದಲ್ಲಿ ತಿಂದರೆ ಒಳ್ಳೆಯದು ಎಂದು ಮೊದಲೇ ತಿಳಿದಿದ್ದ ಗುಂಡಣ್ಣ ನಿಧಾನವಾಗಿ ಮೊಬೈಲ್ ನಲ್ಲಿ ತನಗಿಷ್ಟವಾದ ಹಾಡುಗಳನ್ನು ಕೇಳುತ್ತಾ ಗೋಡೆ ಗಡಿಯಾರವನ್ನು ನೋಡುತ್ತಾ ಸಮಯಕ್ಕೆ ಸರಿಯಾಗಿ ತಿಂದು ಅರಗಿಸಿಕೊಂಡ. ಮಧ್ಯಾನ್ನ ಹಪ್ಪಳದಂತಹ ಎರಡು ಚಪಾತಿ ಮತ್ತು ಕಾಗೆ ಪಿಂಡದ ಸೈಜಿನ ಅನ್ನವನ್ನು ಊಟ ಮಾಡಿ ಮತ್ತೆ ರಾತ್ರಿ ಅವೇ ಎರಡು ಹಪ್ಪಳದ ಚಪಾತಿ ತಿಂದು ಶರೀರವನ್ನು ‘ ಚಿತ್ರ ಹಿಂಸೆಗೆ ‘ ಒಳ ಪಡಿಸಿದ ಗುಂಡಣ್ಣ ಕೆಲವು ದಿನ.
” ಏನು ಗುಂಡಣ್ಣ ಕಾಚಿ ಕಡ್ಡಿ ತರಹ ಆಗಿಬಿಟ್ಟೆ?…ಏನು ಸಮಾಚಾರ ” ಎಂದು ಯಾರಾದರು ಕೇಳುತ್ತಾರೆ ಎಂದು ನಿರೀಕ್ಷಿಸಿದ ಗುಂಡಣ್ಣನಿಗೆ ನಿರಾಶೆ ಆಯಿತು. ಕಾರಣ ಯಾರೂ ಅಂತಹ ‘ ತಪ್ಪು ‘ ಮಾಡಲಿಲ್ಲ. ತನ್ನಷ್ಟಕ್ಕೆ ತಾನೇ ಸ್ವಗತದಂತೆ ನುಡಿದ ಗುಂಡಣ್ಣ ನಾನೇನು ಪಾಪ ಮಾಡಿರುವ ಉಪ್ಪು ಬಿಟ್ಟೆ… ಹಸಿ ಖಾರಕ್ಕೆ ಬಹಿಷ್ಕಾರ ಹಾಕಿದೆ…ಮೈದಾವನ್ನು ದೂರವಿಟ್ಟೆ…ಸಕ್ಕರೆಯನ್ನು ದ್ವೇಷಿಸಿದೆ… ಇಷ್ಟಾದರೂ ಈ ದೇಹದ ಕೊಬ್ಬು ಕರಗಲಿಲ್ಲ…ಮೈ ‘ ಭಾರ ‘ ಇಳಿಯಲಿಲ್ಲ…ಎಂದು ಬಹಳ ಸಲ ಚಿಂತಿಸಿದ. ಅಷ್ಟರಲ್ಲಿ ಯಾರೋ ‘ ಕುಡಿಯುವ ನೀರಿನಲ್ಲಿನ ಖನಿಜ ಮತ್ತು ಲವಣ ‘ ಗಳ ಬಗ್ಗೆ ‘ ಉಚಿತ ಅಮೂಲ್ಯ ಸಲಹೆ ‘ ನೀಡಿದರು. ಇನ್ನು ಶುರುವಾಯಿತು ಗುಂಡಣ್ಣನಿಗೆ ನೀರಿನ ಮೇಲಿನ ಆಗಾಧ ಪ್ರೀತಿ…ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೂ ಬಿಟ್ಟೂ ಬಿಡದೆ ನೀರು ( ಬೀರಲ್ಲ ! ) ಕುಡಿಯಲು ಶುರು ಮಾಡಿದ ಗುಂಡಣ್ಣ…ಐವತ್ತು ಡಿಗ್ರಿ ಬಿಸಿಲಿಗೂ ಬಗ್ಗದ ದೇಹದೊಳಗಿನ ಕೊಬ್ಬು ಗ್ಯಾಲನ್ ಗಟ್ಟಲೇ ಶುದ್ಧ ‘ ಮಿನರಲ್ ವಾಟರ್ ‘ ಕುಡಿದರೆ ಕರಗುತ್ತದೆಯೆ?…ನೀರು ಕುಡಿದು ಕುಡಿದು ಸಾಕಾಗಿ ಕೊನೆಗೆ ವಾಕರಿಕೆ ಬಂದು ನೀರು ಕುಡಿಯುವದನ್ನೇ ನಿಲ್ಲಿಸಿಬಿಟ್ಟ ಗುಂಡಣ್ಣ.
ಇನ್ನು ತನ್ನ ಆರೋಗ್ಯದ ಮತ್ತು ಹೊಟ್ಟೆಯ ಬೊಜ್ಜಿನ ಕುರಿತು ಡಾಕ್ಟರ್ ಹತ್ತಿರ ಹೋಗಿ ತೋರಿಸೋಕೆ ಗುಂಡಣ್ಣನಿಗೆ ಭಯ…ನೇರವಾಗಿ ಡಾಕ್ಟರ್ ಬಳಿ ಹೋದರೆ ಹಣ ಖರ್ಚಾಗುವದು ಒತ್ತಟ್ಟಿಗೆ ಇರಲಿ ಯಾವುದೋ ಹೊಸ ರೋಗವನ್ನು ಅಂಟಿಸಿ ತನ್ನ ಮನೆಯನ್ನೇ ‘ ಮಿನಿ ಮೆಡಿಕಲ್ ಶಾಪ್ ‘ ಮಾಡಿದರೆ ಹೇಗೆ ಎಂದು ಗುಂಡಣ್ಣನ ಭಯ. ಈ ಭಯವೇ ಗುಂಡಣ್ಣನನ್ನು ಚಿಂತೆಗೆ ಈಡು ಮಾಡಿತು. ದಿನ ಪತ್ರಿಕೆ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗುವ ಅನೇಕ ಹೊಸ ಹೊಸ ರೋಗಗಳು ಮತ್ತು ಅವುಗಳ ಲಕ್ಷಣಗಳು… ಟಿ ವಿ ಚಾನೆಲ್ ತುಂಬಾ ಸ್ಪೆಷಲಿಸ್ಟ್ ಡಾಕ್ಟರುಗಳು, ರೋಗಗಳು ಮತ್ತು ಅವರ ಉಚಿತ ಅಮೂಲ್ಯ ಸಲಹೆಗಳು…ಇದು ತಿಂದು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಅದು ತಿಂದರೆ ಆರೋಗ್ಯ ಹಾಳಗುವದಷ್ಟೇ ಅಲ್ಲ ಹೊಸ ರೋಗಗಳು ‘ ಗ್ಯಾರಂಟಿ ‘… ಹಾಳು ಹೊಟ್ಟೆಯಲ್ಲಿ ಅದನ್ನು ಕುಡಿದರೆ ಗೋವಿಂದ…ಅದರ ಬದಲು ಇದನ್ನು ಕುಡಿದರೆ ಸ್ವರ್ಗಾನಂದ… ಇನ್ನು ಯು ಟ್ಯೂಬ್ ವಿಡಿಯೋಗಳನ್ನು ನೋಡಿ ಅವುಗಳನ್ನು ‘ ಫಾಲೋ ‘ ಮಾಡಿದರೆ ಇದ್ದ ಬದ್ದ ಆರೋಗ್ಯ ಹಾಳು …ಅವುಗಳ ‘ ಉಚಿತ ಸಲಹೆ ‘ ಭಾಗ್ಯಗಳಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗಿ ಇರುವ ಆಯುಷ್ಯ ಕೂಡ ಕಡಿಮೆ ಆಗುವುದು ಗ್ಯಾರಂಟಿ!
ಮತ್ತೆ ಯಾರೋ ಹೇಳಿದರು ನಿಮ್ಮ ಆರೋಗ್ಯ ಚೆನ್ನಾಗಿರ ಬೇಕಾದರೆ ಬಿ, ಸಿ, ಡಿ, ಡಿ 3 ಮತ್ತು ಡಿ 12 ಇತರೆ ವಿಟಮಿನ್ ಮಾತ್ರೆಗಳನ್ನು ಮತ್ತು ಸಿರಪ್ ಗಳನ್ನು ದಿನ ನಿತ್ಯ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು. ಪಾಪ…ಗುಂಡಣ್ಣ ಅವುಗಳನ್ನೂ ಬಿಡದೆ ನೂರೆಂಟು ಮಾತ್ರೆಗಳನ್ನು ನುಂಗಿ ನೀರು ಕುಡಿದ. ಕೊನೆಗೊಮ್ಮೆ ಬೇಸರವಾಗಿ ಎಲ್ಲದಕ್ಕೂ ತಿಲಾಂಜಲಿ ಹಾಡಿದ. ಜೀವನದ ಮೇಲೆ ಜಿಗುಪ್ಸೆ ಬಂದು ಎಲ್ಲವನ್ನೂ ಬಿಟ್ಟುಬಿಟ್ಟ. ಮೂರು ತಿಂಗಳು ಡಾಕ್ಟರುಗಳನ್ನು ದೂರವಿಟ್ಟ. ಪತ್ರಿಕೆ ಓದುವದನ್ನು ಬಂದ್ ಮಾಡಿದ. ಇನ್ನು ಮುಂದೆ ‘ ಯು ಟ್ಯೂಬ್ ‘ ನೋಡುವದಿಲ್ಲವೆಂದು ಸ್ವಯಂ ಪ್ರತಿಜ್ಞೆ ಮಾಡಿದ.
ಕೆಲವು ತಿಂಗಳುಗಳು ಕಳೆದವು ಈಗ ಗುಂಡಣ್ಣ ಸಂಪೂರ್ಣ ಆರೋಗ್ಯವಾಗಿದ್ದಾನೆ ಮತ್ತು ಎಂದಿನಂತೆ ‘ ಕನ್ಯಾನ್ವೇಷಣೆ ‘ ಮತ್ತೆ ಶುರು ಮಾಡಿದ್ದಾನೆ. ಗುಂಡಣ್ಣ ಯೋಗಾಸನ, ಡೈಟ್ ಇತ್ಯಾದಿ ಮಾಡುವ ಮೊದಲು ‘ ಒಂದು ಟನ್ ‘ ಭಾರವಿದ್ದ…ಈಗ ಎಲ್ಲವನ್ನೂ ಕೈ ಬಿಟ್ಟ ಮೇಲೆ ಆತನ ಭಾರ ಈಗ ಕೇವಲ 100 ಕೆಜಿ ಮಾತ್ರ. ಇದು ಗುಂಡಣ್ಣನಿಗೆ ಸಂತೋಷ ತರುವ ವಿಷಯ ಅಲ್ಲವೇ… ಅಲ್ಲದೇ ಇದೇ ಆತನ ಸದ್ಯದ ಆರೋಗ್ಯ ಗುಟ್ಟು!.
16 thoughts on “ಆರೋಗ್ಯವೇ ಮಹಾ ಭಾಗ್ಯ !”
ಶ್ರೀ ರಾಘಣ್ಣ ಅವರ ವಿಡಂಬನೆ ಚನ್ನಾಗಿದೆ. ಒಂದು ಟನ್ ನಿಂದ ಒಂದು ಕ್ವಿಂಟಾಲ್ ಗೆ ತೂಕ ಇಳಿಸಿದ್ದು ದೊಡ್ಡ ಸಾಹಸ. ಈ ಪ್ರಯತ್ನದ ಸನ್ನಿವೇಶ ಮಾತ್ರ ಇನ್ನೂ ದೊಡ್ಡ ತಮಾಷೆ.
ಧನ್ಯವಾದಗಳು
ಎಷ್ಟು ದೇಹ ದಂಡಿಸಿದರೂ ಚಿಂತೆ ಮಾಡಿದರೂ ಸೊರಗದ ಗುಂಡಣ್ಣ ಎಲ್ಲವನ್ನೂ ಬಿಟ್ಟ ಮೇಲೆ ಸಣ್ಣ ಆಗಿದ್ದು ವಿಪರ್ಯಾಸ ಮತ್ತು ನಗು ತರಿಸುತ್ತದೆ
ಧನ್ಯವಾದಗಳು
Very well written. Most of us are influenced by newspaper, TV etc., and results will be contrary to our expectations. All your stories carry subtle messages as also your jokes published elsewhere. Keep it up.
Thank you Sir
ಈ ರೀತಿ ತೂಕ ಕಡಿಮೆ ಮಾಡಿಕೊಳ್ಳುವುದು, ಹೆಚ್ಚು ಮಾಡಿಕೊಳ್ಳುವುದು,ಬೆಳ್ಳಗಾಗುವುದು, ಬೇಗನೆ ಎತ್ತರವಾಗುವುದು ಎಂಬ ಜಾಹೀರಾತುಗಳು ಸಾಕಷ್ಟು ಬಿತ್ತರವಾಗುತ್ತದೆ. ಆದರೆ ಇವು ಯಾವುದೂ ಕೆಲಸ ಮಾಡುವುದಿಲ್ಲ.
ಕಥೆ ವಿಡಂಬನೆ ಚೆನ್ನಾಗಿದೆ.
ಧನ್ಯವಾದಗಳು.
ಧನ್ಯವಾದಗಳು
ನಮ್ಮ ದಿನ ನಿತ್ಯದ ಜೀವನದ ಪ್ರತಿ ಹಂತದಲ್ಲಿ ಕಾಂಟ್ರೋವರ್ಸಿ ಹೆಚ್ಚಾಗುತ್ತಿದೆ ಸೋಸಿಯಲ್ ಮೀಡಿಯಾ ಕಥಾನಕಗಳಿಂದ. ಉಪದೇಶ ಜಾಸ್ತಿಯಾಗತೊಡಗಿದೆ. ಆಚರಣೆ ಅಷ್ಟಕಷ್ಟೇ.
ನಿಮ್ಮ ಗುಂಡಣ್ಣ ಎಲ್ಲಾ ಕಡೆಗೆ ಕೈಯಾಡಿಸಿ ಕೊನೆಗೆ ಕೈಚೆಲ್ಲಿ ಸುಮ್ಮನಿದ್ದು ಸುಧಾರಿಸಿಕೊಳ್ಳುತ್ತಾನೆ. ಓದುಗರನ್ನು ಮನಸಾರೆ ರಂಜಿಸುತ್ತಾನೆ.
ಅಭಿನಂದನೆಗಳು.
ಧನ್ಯವಾದಗಳು
ನಿಮ್ಮ ಹಾಸ್ಯ ಬರಹ ಓದುವಾಗ ಗುಂಡಣ್ಣ ಏನೆಲ್ಲಾ ಶ್ರಮ ಪಟ್ಟು ಫಿಟ್ ಆಗಿ ಇರಲು ಬಯಸಿದ ಪರಿ ಪಾಪ ಅನಿಸುವದು.
ಅಭಿನಂದನೆಗಳು
ದುಂಡುದುಂಡಾಗಿರುವ ಗುಂಡಣ್ಣನಿಗೆ ಚಿಂತೆ ಹಚ್ಚಿದ ಹಿತೈಷಿಗಳು ಮತ್ತು ‘ನಿಮ್ಮ ಆರೋಗ್ಯದ ಕಾಳಜಿ ನಮ್ಮ ಜವಾಬ್ದಾರಿ’ ಎನ್ನುವ ಜಾಹೀರಾತುಗಳು ಸೇರಿ ಗುಂಡಣ್ಣನಿಗೆ ಒಳ್ಳೆಯ ಪಿಕಲಾಟ ತಂದಿಟ್ಟರು. ಹಾಸ್ಯಮಯ ಹಾಗೇ ಮಾರ್ಮಿಕ ನಿರೂಪಣೆ. ಅಭಿನಂದನೆಗಳು.
ಧನ್ಯವಾದಗಳು ಸರ್
ಧನ್ಯವಾದಗಳು
ಹಾಸ್ಯ ಬರಹ ರಂಜನೀಯವಾಗಿದೆ.
ಬಳಸಿದ ಭಾಷೆ, ಸಾಗಿದ ಶೈಲಿ, ನಡುನಡುವೆ ನೀಡಿದ ಹಾಸ್ಯ ಪಂಚ್… ಎಲ್ಲವೂ ಬರಹವನ್ನು ಚಂದವಾಗಿಸಿದೆ.
ಅಭಿನಂದನೆಗಳು.
ಧನ್ಯವಾದಗಳು