‘ದಯವಿಲ್ಲದಾ ಧರ್ಮ ಯಾವುದಯ್ಯಾ ದಯವೇ ಧರ್ಮದ ಮೂಲವಯ್ಯ’ ಎಂದು ಶಾಲೆಯ ಗೋಡೆಯ ಮೇಲೆ ಬರೆದಿದ್ದನ್ನು ದಿನವೂ ಓದುತ್ತಲೇ ಬಾಲ್ಯ ಕಳೆದೆ. ನಿತ್ಯವೂ ಹಸು ಕರುಗಳಿಗೆ ಹುಲ್ಲು ತಿನ್ನಿಸುತ್ತ ‘ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ’ ಎಂದು ಹಾಡುತ್ತಾ ಜೀವ ಜಗತ್ತಿನೊಂದಿಗೆ ಗಿಡ ಬಳ್ಳಿಗಳೊಂದಿಗೆ ಸಂಬಂಧ ಬೆಳೆಸಿಕೊಳ್ಳುತ್ತಲೇ ಬೆಳೆದೆ. ಬಾಲ್ಯದಲ್ಲಿ ಕೇಲಿದ ಪಾರಿವಾಳ ಇರುವೆಯ ಕಥೆ ನನ್ನ ಮೇಲೆ ಅಪಾರ ಪ್ರಭಾವ ಬೀರಿತ್ತು. ಪ್ರಾಣಿ ಪಕ್ಷಿಗಳಿಗೆ ಕೀಟಗಳಿಗೆಲ್ಲ ಸಹಾಯ ಮಾಡಿದರೆ ಅವು ಮನುಷ್ಯರಿಗಿಂತ ಹೆಚ್ಚು ಕೃತಜ್ಞತೆ ತೋರಿಸುತ್ತವೆ, ಅವೆಲ್ಲ ಅಮಾಯಕರ ಸಾಲಿನಲ್ಲಿ ಬರುತ್ತವೆ ಎಂದು ನಂಬಿಬಿಟ್ಟಿದ್ದೆ. ಅಸಲೀಯತ್ತು ಬೇರೆಯೇ ಎಂದು ತಿಳಿದಿದ್ದು ನನ್ನದೂ ಅಂತ ಒಂದು ಮನೆ ಮಾಡಿಕೊಂಡಮೇಲೆಯೇ….
ಮದುವೆಯಾದ ನಂತರ ಗಂಡನ ಮನೆಯನ್ನು ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ನೂರೆಂಟು ಉಪದೇಶಾಮೃತವನ್ನು ಕಿವಿ ತುಂಬಿಸಿ ತವರಿನಿಂದ ಬೀಳ್ಕೊಟ್ಟರು. ಧಾರವಾಡದ ಹೊಸತಾದ, ಹಸನಾದ ಬಾಡಿಗೆ ಮನೆಯಲ್ಲಿ ಗೃಹಿಣಿಯಾಗಿ ಕೆಲಸ ಶುರು ಮಾಡಿದೆ. ಅಂದು ರಾತ್ರಿ ಬೆಳಗಾಗುವದರೊಳಗೆ ಅಡುಗೆ ಕಟ್ಟೆಯ ಮೇಲೆ ಇರುವೆಗಳ ಸಾಲು. ಹೆಪ್ಪು ಹಾಕಿದ ಹಾಲಿನ ಪಾತ್ರೆಯ ಮುಚ್ಚಳ ತೆಗೆದರೆ ಇರುವೆಗಳ ಹೆಣದರಾಶಿ! ಅಯ್ಯೋ ಎನ್ನುತ್ತಾ ಇರುವೆಗಳ ಸಾವಿಗೆ ಅಳಲೋ, ಮೊಸರಿಲ್ಲದ ಊಟ ಸಮಾಧಾನ ತಾರದೆನ್ನುವ ಗಂಡನನ್ನು ಸಮಾಧಾನಪಡಿಸಲೋ ಅಯೋಮಯ ಸ್ಥಿತಿ. ಪುತು ಪುತುನೆ ಮೂಲೆಯಿಂದ ಹೊರ ಬೀಳುತ್ತಲೇ ಇದ್ದ ಇರುವೆಗಳ ಕಡಿತಕ್ಕೆ ತುತ್ತಾಗುತ್ತಲೇ ತಿಂಡಿ ಮಾಡುತ್ತಾ ಅವುಗಳನ್ನು ಅಡುಗೆ ಮನೆಯಿಂದಾಚೆ ಕಳಿಸುವುದಕ್ಕೆ ಕನಿಕರವನ್ನು ಕಟ್ಟಿಟ್ಟು ಉಪಾಯ ಹುಡುಕತೊಡಗಿದೆ. ಅರಿಶಿಣಪುಡಿ, ಕಾಫಿಪುಡಿ, ಲಕ್ಷ್ಮಣರೇಖೆ, ಬೋರಿಕ್ ಪೌಡರು, ಮೈದಾಹಿಟ್ಟು ಹಾಲು ಸಕ್ಕರೆ ಸೇರಿಸಿ ಕಟ್ಟಿದ ಉಂಡೆ .. . ಹೀಗೆಲ್ಲ ಬಗೆ ಬಗೆಯ ಪ್ರಯೋಗ ಮಾಡುತ್ತ ‘ಸಾಯದಂತೆ ಮಾಯವಾಗಿರಿ’ ಎಂದು ಬೇಡಿಕೊಂಡೆ. ನಿಜಕ್ಕೂ ನನ್ನ ಸತ್ವಪರೀಕ್ಷೆಯ ಆರಂಭವಾಗಿತ್ತು.
ಅದೊಂದು ದಿನ ನನ್ನವರು ಊರಿಗೆ ಹೋಗಿದ್ದರು. ರಾತ್ರಿ ನಿದ್ರಿಸುವಾಗ ಇದ್ದಕ್ಕಿದ್ದಂತೆ ಕಟ ಕಟ ಕರ ಕರ …..ಕೇಳಿ ಬಂದ ಸಪ್ಪಳಕ್ಕೆ ಬೆಚ್ಚಿ ಬಿದ್ದೆ. ಸ್ವಿಚ್ ಹಾಕಿದರೆ ಕರೆಂಟೂ ಇರಲಿಲ್ಲ. ಕಳ್ಳರು ಬಂದಿರಬಹುದೇ? ಯಾರು ಯಾರದು ಎನ್ನುತ್ತ ಗಟ್ಟಿಯಾಗಿ ಕೇಳಿದೆ. ಸಪ್ಪಳ ನಿಂತಿತು, ಕೆಲವೇ ಕ್ಷಣ ಮತ್ತದೇ ಬಗೆಯ ಸದ್ದು. ಬೆಳಗಿನವರೆಗೂ ನಿದ್ದೆ ಇಲ್ಲದ ಚಟಪಡಿಕೆ. ಕಳ್ಳರೋ ಇಲಿಯೋ ಸಂಶಯ ಬಂದು ಬೆಡ್ ರೂಮಿನ ಸಜ್ಜಾಕ್ಕೇರಿಸಿದ ಒಂದೊಂದೇ ರಟ್ಟಿನ ಡಬ್ಬಿ ಇಳಿಸಿ ಪತ್ತೇದಾರಿಕೆ ಶುರು ಮಾಡಿದೆ. ನೀಲಿ ರೇನ್ ಕೋಟು ಬೆಡ್ಶೀಟ್ಗಳನ್ನು ತುಂಬಿಟ್ಟ ರಟ್ಟಿನ ಡಬ್ಬಿ ತೆಗೆದವಳೇ ಯಾಹೂ ಎಂದು ಕೂಗಿಕೊಂಡೆ. ಇಲಿಯಮ್ಮ ಇಲಿಯಪ್ಪ ಮೂರು ಮರಿಗಳೊಡನೆ ಗಲಿ ಬಿಲಿಯಲ್ಲಿ ಪಾರ್ಕಿನಲ್ಲಿ ನಾವು ವಾಕಿಂಗ್ ಮಾಡುವಂತೆ ಓಡಾಡಿಕೊಂಡಿದ್ದವು ಅಷ್ಟೇ ಅಲ್ಲ ಪಲ್ಯಕ್ಕೆ ತರಕಾರಿ ಹೆಚ್ಚಿದಂತೆ ಬಟ್ಟೆಗಳನ್ನು ರೇನ್ಕೋಟನ್ನು ಚಿಕ್ಕದಾಗಿ ಹೆಚ್ಚಿಟ್ಟಿದ್ದವು. ಆಶ್ರಯದಾತರ ಬಗ್ಗೆ ಕೃತಜ್ಞತೆಯೇ ಇಲ್ಲವೆ ನಿಮಗೆ ಎಂದು ಗದರುವುದರೊಳಗೆ ದೊಡ್ಡ ಇಲಿಯೊಂದು ಬಾಕ್ಸಿನಿಂದ ಹೊರ ಜಿಗಿದು ಧೈರ್ಯವಾಗಿ ಮನೆಯ ತುಂಬಾ ತಿರುಗಾಟತೊಡಗಿತು. ಚವತಿ ಹಬ್ಬದಲ್ಲಿ ಗಣಪತಿ ಪಕ್ಕ ಕುಳಿತು ಪೂಜೆ ಮಾಡಿಸಿಕೊಳ್ಳುತ್ತಿದ್ದ ಮೂಷಕಕ್ಕೆ ಜೀವ ಬಂದಂತೆ ಕಾಣಿಸಿತು! ನಮ್ಮ ಮನೆಯಿಂದಾಚೆ ಹೋಗಿ ಬದುಕಿಕೊಳ್ಳಲಿ ಬಡಜೀವ ಎಂದುಕೊಂಡು ಬಾಗಿಲು ತೆಗೆದು ಅದನ್ನು ಮನೆಯಿಂದ ಹೊರಗೋಡಿಸಲು ಗಂಟೆಗಟ್ಟಲೇ ಕಸರತ್ತು ನಡೆಸಿ ವಿಫಲಳಾದೆ. ಉಳಿದ ಇಲಿ ಮರಿಗಳ ಸಮೇತ ಬಾಕ್ಸ ಮುಚ್ಚಿ ಅಂಗಳಕ್ಕೊಯ್ದಿಟ್ಟು ಮುಚ್ಚಳ ತೆಗೆದೆ. “ಬಡಿದು ಸಾಯ್ಸೂದು ಬಿಟ್ಟು ಇಲ್ಲಿ ಇಲಿ ತಂದು ಬಿಡಾಕ ಹತ್ತೀರೇನು?’ ನಮ್ಮ ಮನೆಗೆ ಸೇರಿಕೊಳ್ಳುತ್ತಾವೆ ಅವೆಲ್ಲ” ಎಂದು ಕೆಂಡಗಣ್ಣೇಶ್ವರ ಓನರ್ ಗದರುವಷ್ಟರಲ್ಲಿ ಟಣ್ಣೆಂದು ಜಿಗಿದು ಬಂದ ಬೆಕ್ಕು ಒಂದು ಇಲಿ ಮರಿಯನ್ನು ಕಚ್ಚಿಕೊಂಡು ಹೋಯಿತು ಉಳಿದವು ನನ್ನ ಆಲೋಚನೆಗಳಂತೆಯೇ ದಿಕ್ಕಾಪಾಲಾದವು.
ವಿಷಾದಯೋಗದೊಂದಿಗೆ ಮನೆಯೊಳಗೆ ಬಂದೆ.
ಸೊಳ್ಳೆಗಳನ್ನು, ಜೇಡಗಳನ್ನು ಭಕ್ಷಿಸುತ್ತ ಎಲ್ಲೆಲ್ಲೋ ಸರಿದಾಡಿ ಹಿಕ್ಕೆ ಹಾಕುತ್ತಾ, ತಟ್ಟನೇ ತೆಗೆವ ಬಾಗಿಲಿಗೆ ಸಿಕ್ಕಿ ಬಾಲ ಕತ್ತರಿಸಿಕೊಂಡಿದ್ದನ್ನು ಹೊರಳಾಡಿಸಿ ಅಪರಾಧೀ ಪ್ರಜ್ಞೆ ಹುಟ್ಟಿಸುವ ಹಲ್ಲಿಗಳು ನಮ್ಮ ಸಹಜೀವಿಗಳು. ಹೆಚ್ಚು ಅಪಾಯಕರಿಯಲ್ಲದವುಗಳು ಎನ್ನುವುದು ನನ್ನ ಭಾವನೆ. ಜಿರಳೆಗಳೋ ನಗರವಾಸಿಯಾದ ನನಗೆ ದುಃಸ್ವಪ್ನವೇ ಸರಿ. ರಾತ್ರಿ ಎಲ್ಲರೂ ಮಲಗಿದ ನಂತರ ಅಡುಗೆ ಮನೆಯ ಸಿಂಕಿನಿಂದಲೇ ಹೊರಬಿದ್ದು ಮನೆ ತುಂಬಾ ಸರ್ಕಿಟು ಹೊಡೆದು ಸಂದಿಗೊಂದಿಗಳನ್ನು ಸೇರಿಕೊಂಡು ವಂಶಾಭಿವೃದ್ಧಿ ಮಾಡುತ್ತವೆ. ಪಾಪ ಬದುಕಿಕೊಳ್ಳಲಿ ಬಿಡು ಎಂದು ಕರುಣೆ ತೋರಿದರೆ ರೆಕ್ಕೆ ಬಲಿತು ಹಾರಾಡಿ ವಾಕರಿಕೆ ಹುಟ್ಟಿಸುತ್ತವೆ. ಕರುಣೆಯನ್ನು ಮನದ ಮೂಲೆಗೆ ಸರಿಸಿ ಪೊರಕೆಯಲ್ಲಿ ಒಂದೇಟು ಹಾಕಿದರೆ ಕಾಲುಗಳನ್ನು ಮೇಲೆ ಚಾಚಿ ‘ಜೀವದಾನ ಮಾಡು ತಾಯಿ’ ಎಂದು ಬೇಡಿಕೊಂಡಂತೆ ಭಾಸವಾಗುತ್ತದೆ.
ಸೊಳ್ಳೆಗಳೋ ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿ ಸಂಜೆಯಾದೊಡನೆ ಮನೆಗಳಿಗೆ ನುಗ್ಗಿ ಕೊಂಯ್ ಕೊಂಯ್ ರಾಗವ ಪಾಡಿ, ರೋಗಗಳ ಜೊತೆಗೂಡಿಸಿಕೊಟ್ಟು ಮನೆಯನ್ನು ತಮ್ಮದೇ ಸಾಮ್ರಾಜ್ಯ ಮಾಡಿಕೊಳ್ಳುತ್ತವೆ. ವಸ್ತ್ರ ವಡವೆಗಳಿಗಿಂತ ಕಾಯ್ಲು, ಬ್ಯಾಟು, ಪರದೆ, ಕ್ರೀಮು. . ಇಂತವುಗಳ ಸಂಗ್ರಹಕ್ಕೆ ಹೆಚ್ಚು ಮನ್ನಣೆ ನೀಡಬೇಕಾಗುತ್ತದೆ. ಒಮ್ಮೆ ಕಾರವಾರದಲ್ಲಿ ಮನೆ ಮಾಡಿಕೊಂಡಿದ್ದಾಗ ಅಪರೂಪದ ಅತಿಥಿಗಳೊಬ್ಬರು ಮನೆಗೆ ಬಂದಿದ್ದರು. ಧಾರಾಕಾರವಾಗಿ ಸುರಿಯುವ ಮಳೆಗಾಲದ ಸಂಜೆ ಬಿಸಿ ಬಿಸಿ ಚಹಾ ಕೊಟ್ಟು ಸತ್ಕರಿಸಬೇಕೆಂದು ಇರುವ ಒಂದೇ ಒಂದು ಕಪ್ ಹಾಲನ್ನು ಬಿಸಿಗಿಟ್ಟೆ. ಸಕ್ಕರೆ ಹಾಕಿ ಇನ್ನೇನು ಚಹಾಪುಡಿ ಹಾಕಬೇಕೆನ್ನುವಷ್ಟರಲ್ಲಿ ಕಿವಿಯಬಳಿ ಕುಂಯ್ ಎಂದ ಸೊಳ್ಳೆ ಬಿಸಿ ಉಗಿಗೆ ಮರುಳಾಗಿ ಹಾಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿತು. ಅತಿಥಿ ಸತ್ಕಾರ ಮಾಡಲು ಬೇರೆ ಮಾರ್ಗವೇ ತೋರದೇ ಮುಜುಗರಪಡುತ್ತಲೇ ಬಿಸಿ ಪಾನಕ ಮಾಡಿಕೊಟ್ಟು ಕೈಮುಗಿದೆ. ನಡೆದಿದ್ದನ್ನು ಅತಿಥಿಗಳಿಗೆ ಹೇಳಿ ಉಪಚರಿಸಿ ಕಳಿಸಬೇಕಾಯ್ತು.
ಇನ್ನು ಹಿತ್ತಲಿನಲ್ಲಿ ಗಿಡಗಳ ಬುಡಕ್ಕೆ ಗುದ್ದ ತೋಡುವ ಹೆಗ್ಗಣಗಳು, ಅವುಗಳನ್ನು ಭಕ್ಷಿಸಲು ಬರುವ ಹಾವುಗಳು ಭಯೋತ್ಪಾದಕರೆ ಸೈ. ಹೊಡೆಯಲು ಹೆದರಿಕೆ ಹಿಡಿಸಲು ಖರ್ಚು! ಬೆಳ್ಳುಳ್ಳಿ ಗಡ್ಡೆಯನ್ನು ಜಜ್ಜಿ ಕೈತೋಟದ ತುಂಬೆಲ್ಲ ಚಿಮುಕಿಸಿ ಘಾಟಿಗೆ ಹೆದರಿ ಓಡಿ ಹಾವುಗಳೇ. ಸುಬ್ರಮ್ಮಣ್ಯ ದೇಗುಲದಲ್ಲಿ ಹಣ್ಣುಕಾಯಿ ಮಾಡಿಸುತ್ತೇನೆ ಎಂದು ಬೇಡಿಕೊಳ್ಳುತ್ತೇನೆ. ಎಲೆಗಳಿಗೆ ಧಾಳಿ ಇಡುವ ತರಾವರಿ ಕೀಟಗಳು ಸಾವಯವ ಕೀಟನಾಶಕ ಕಂಡು ಹಿಡಿಯುವ ಸಂಶೋಧಕಿಯನ್ನಾಗಿಸಿವೆ. ಹುಳಿ ಮಜ್ಜಿಗೆ, ಬೇವಿನೆಣ್ಣೆ, ಗೋಮೂತ್ರ… ಹೀಗೆ ಕೆಲವು ಕೀಟನಾಶಕ ಸಿಂಪಡಿಸಿದ ದಿನ ನನಗೆ ಮೂಗೇ ಇರಬಾರದಿತ್ತು ಎನಿಸುತ್ತದೆ. ತರಕಾರಿ ಹಣ್ಣುಗಳನ್ನು ಕುಕ್ಕುತ್ತಾ ದೊಡ್ಡ ಗಿಡಗಳಿಗೆ ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ಮರಿ ಮಾಡಿ ಆಶ್ರಯ ನೀಡಿದ ನನ್ನನ್ನೇ ಪರಕೀಯಳಂತೆ ನೋಡುವ ಹಕ್ಕಿಗಳು ದಯಾಮಯಿಯಾದ ನನ್ನ ವ್ಯಕ್ತಿತ್ವಕ್ಕೆ ಸವಾಲೊಡ್ಡುತ್ತವೆ. ಎಲ್ಲ ಸಹ ಜೀವಿಗಳಿಗೂ ಬದುಕಗೊಡಲೇ( ಎಲ್ಲಕ್ಕೂ ಪಾಪ ಎನ್ನುತ್ತಾಳೆ ಎನ್ನುವ ಮನೆಯವರೆಲ್ಲರ ಕೂರಂಬಿನಂತ ನೋಟ ಎದುರಿಸಲೇ?) ಬದುಕಲೇ? ಸದಾ ಹೊಯ್ದಾಟ. ಅಹಿಂಸೆಯನ್ನು ಪಾಲಿಸುತ್ತ ಗೃಹಕೃತ್ಯ ನಿಭಾಯಿಸುವುದು ಬಲು ಕಷ್ಟ ಕಷ್ಟ!…
*ಮಾಲತಿ ಹೆಗಡೆ, ಮೈಸೂರು