ಚಿತ್ರ: ಮಂಗಳಾ ಶೆಟ್ಟಿ
ನನಗೊಂದು ವಿಷಯ ತಿಳಿಯಿತು ಇವತ್ತು
ದೇವರಿಗೆ ನಮ್ಮ ಕತೆ ಚೆನ್ನಾಗಿ ಗೊತ್ತು!
ಗಡಿಬಿಡಿಯಲೇ ಹೋಗಿ ಹಚ್ಚಿದೆನು ದೀಪ
ಎಂದಿನಂತೆಯೆ ಮೌನಿ, ಒಳ್ಳೆಯವ ಪಾಪ!
ಹೂವು ಏರಿಸಿ ಎರಡು ಶ್ಲೋಕಗಳ ಹೇಳಿ
ತಿಂಡಿ ತಿನ್ನಲು ಅಡುಗೆ ಮನೆಗಿಟ್ಟೆ ದಾಳಿ!
ಹಿಂತಿರುಗಿ ನೋಡಿದರೆ ಅವನು ನಗುತಿದ್ದ
ಕೇಳಿಸಿತು ಗೊಣಗಿದ್ದು: ‘ಇವನೊಬ್ಬ ಪೆದ್ದ’
ಇಡೀ ದಿನ ದೇವರ ಮಾತಿನದೆ ಗುಂಗು
ಮನ ಹಿಡಿದು ಬಿಟ್ಟಿತ್ತು ಕಹಿನುಡಿಯ ಚುಂಗು
ಆ ರಾತ್ರಿ ರೂಮಲ್ಲಿ ಒಬ್ಬನೇ ಸಿಕ್ಕ
ಏನೂ ನಡೆದಿರದಂತೆ ಮೆಲ್ಲಗೆ ನಕ್ಕ
ಕೇಳಿದೆ, ಮಾರಾಯ, ಹೀಗನ್ನಬಹುದೆ?
ಅವಸರದ ಬಾಳಿದು, ಕನಿಕರವೂ ಬರದೆ?
ಭಗವಂತ ಮತ್ತೊಮ್ಮೆ ಮೆಲ್ಲಗೆ ನಕ್ಕ
ಗಟ್ಟಿಯಾಗೇ ಅಂದ: ‘ನೀನೊಬ್ಬ ಠಕ್ಕ’
ವಾಟ್ಸಾಪು ಫೇಸ್ ಬುಕ್ಕು ಎಷ್ಟೆಷ್ಟು ಹೊತ್ತು
ನೋಡುತ್ತ ಕುಳಿತಿದ್ದಿ, ನನಗೆ ಅದು ಗೊತ್ತು!
ಇನ್ಸ್ಟಗ್ರಾಂನಲ್ಲಿಯೂ ಸಾಕಷ್ಟು ಹೊತ್ತು
ಸುಮ್ಮಸುಮ್ಮನೆ ಕಳೆದಿ, ಅದು ನಿನಗೇ ಗೊತ್ತು!
ಬೆವರಲಾರಂಭಿಸಿದೆ ಕುಳಿತಲ್ಲೆ ನಾನು!
“ಶರಣು ಬಂದೆನೋ ತಂದೆ, ಕ್ಷಮಿಸಿ ಬಿಡು ನೀನು”
ಹೀಗಾಗಿ ಈ ವಿಷಯ ತಿಳಿಯಿತು ಇವತ್ತು:
ದೇವರಿಗೆ ನಮ್ಮ ಕತೆ ಚೆನ್ನಾಗಿ ಗೊತ್ತು!
ಟೆಕ್ನಾಲಜಿ ದೇವರಿಗೆ ಹೊಸದೇನೂ ಅಲ್ಲ
ಮೌಸ್ ಅಂತೂ ಅವನಡಿಗೇ ಕುಳಿತಿರುವುದಲ್ಲ!
ಗೆಳೆಯರೇ, ಪೂಜೆಯನು ಸರಿಯಾಗಿ ಮಾಡಿ
ನೆನಪಿಡಿ, ದೇವರು ಭಾರೀ ಕಿಲಾಡಿ!
* ಚಿಂತಾಮಣಿ ಕೊಡ್ಲೆಕೆರೆ
9 thoughts on “ದೇವರಿಗೆ ಟೆಕ್ನಾಲಜಿ ಚೆನ್ನಾಗಿ ಗೊತ್ತು”
ದೇವರಿಗೂ ಗೊತ್ತು….. ಕವನ ಓದಿದೆ…..
ಮೂರು ಸಾಲುಗಳ ಕವನ , ಸರಳ ಮತ್ತು ಸುಂದರವಾಗಿದೆ..ಚೆನ್ನಾಗಿದೆ…. ಈ ಲಘು ಕವನ…
ಗುಂಡಣ್ಣ ಚಿಕ್ಕಮಗಳೂರು
ತುಂಬಾ ವಿಶಿಷ್ಟ ಮತ್ತು ಅರ್ಥಪೂರ್ಣ ಕವನ ಕೇವಲ ಮೂರು ಮೂರು ಸಾಲುಗಳಲ್ಲಿ. ಓದಿ ಖುಷಿಯಾಯಿತು.
ಓದಲು ತುಂಬಾ ಸೊಗಸಾಗಿದೆ –
ವಾಸ್ತವ
ವಾಸ್ತವವನ್ನು ಸರಿಯಾಗಿ ಬಿಂಬಿಸಲಾಗಿದೆ. ಸೃಷ್ಟಿಕರ್ತನಿಗೆ ಗೊತ್ತಿಲ್ಲದ್ದೇನಿದೆ…?
ಅಭಿನಂದನೆಗಳು.
ವಿಷಯ ಬಲು ಸಾಮಾನ್ಯ
ಶೈಲಿ ಸರಳ,ಗೋಪ್ಯ
ಒಳಗೊಳಗೇ ತಿಳಿಹಾಸ್ಯ
ಕೊಡ್ಲೇಕರ ರ. ರಹಸ್ಯ.
ದೇವರನ್ನು ಇಷ್ಟು ಆಪ್ತೆಗೆ ಇಳಿಸಿದಿರಿ. ಸರಸ ಕವನ
ಲಘು ಹಾಸ್ಯದ,ಸರಳ,ಸುಂದರವಾದ ಕವಿತೆ. ನಮ್ಮ ಟೆಕ್ನಾಲಜಿ ದೇವರಿಗೆ ಪರಿಚಯಿಸಿದ್ದು, ನಮ್ಮ ಅಂತರಂಗದ ಅರಿವಿನ ಪಶ್ಚಾತ್ತಾಪವು ಸಹ ಚೆನ್ನಾಗಿ ಮೂಡಿದೆ.
ದೇವರು ಮಿತ್ರನಾದರೆ ಹೇಗೆ?
ಅನ್ನುವುದನ್ನು, ಕವಿ
ತನ್ನ ದಿನಚರಿಯಲ್ಲಿ
ಹಗುರವಾಗಿ
ಅಂತರಾತ್ಮದಲ್ಲಿಳಿದು
ಸ್ವಗತ ಸಂಭಾಷಣೆಯಲ್ಲಿ
ಉಭಯ ಕುಶಲೋಪರಿ
ಯ ಆಖ್ಯಾನ ಮಾಡುತ್ತ
‘ಕವಿಸಮಯ’ದಲ್ಲಿ
ಒಂದು ಎಚ್ಚರಿಕೆಯ
ಗಂಟೆ ಬಾರಿಸಿದ್ದಾರೆ!
ದೇವರಿಗೆ ಗೊತ್ತಿಲ್ಲದ್ದು ಏನಿದೆ?ಈಗ ಅವನೂ ತುಂಬಾ ಫಾಸ್ಟು.