ನೀತಿ ಪ್ರತೀತಿ – ವಿಭಾ ಪುರೋಹಿತ ಅಂಕಣl ಅತಿಯಾದ ಮಮಕಾರ

ಅತಿಯಾದ ಮಮಕಾರ ಮಾರಕವಾಗಬಹುದು !

ಇದೊಂದು ಅನ್ಯ ದೇಶದ ಮಕ್ಕಳ ಜಾನಪದ ಕಥೆ. ಹುಡುಗಿ ಹಣ್ಣಾದ ಕತೆ! ಅನೇಕ ವರ್ಷಗಳ ಹಿಂದೆ ಒಂದು ಸಣ್ಣ ಹಳ್ಳಿಯಲ್ಲಿ ತಾಯಿ ಹಾಗೂ ಮಗಳು ವಾಸವಾಗಿದ್ದರು. ಮಗಳ ಹೆಸರು ಪೀನಾ. ಇವಳಿಗೆ ಸುಮಾರು 12 ವರ್ಷ. ತಾಯಿಯೇ ದುಡಿದು ಮನೆ ನಡೆಸುತ್ತಿದ್ದಳು. ಮನೆಯ ಸುತ್ತಮುತ್ತ ತೋಟವಿತ್ತು. ಅಲ್ಲಿ ಹಲವಾರು ಹಣ್ಣಿನ ಗಿಡ ಮರಗಳಿದ್ದವು. ತುಂಬಾ ಕಾಳಜಿಯಿಂದ ಗಿಡಮರಗಳ ಆರೈಕೆಯನ್ನು ತಾಯಿ ಮಾಡುತ್ತಿದ್ದಳು. ಮುಂಜಾನೆಯಿಂದ ಸಂಜೆಯವರೆಗೆ ತೋಟದಲ್ಲಿನ ಕೆಲಸ ಮತ್ತು ಮನೆಯ ಕೆಲಸ ತಾಯಿಗೆ ಸಾಕಾಗುತ್ತಿತ್ತು. ಗಿಡ ಮರಗಳಿಗೆ ನೀರು ಉಣಿಸುವುದು, ಮಣ್ಣು ಬಗೆಯುವದು, ಗೊಬ್ಬರ ಹಾಕುವುದು, ಹೀಗೆ ದಿನವಿಡಿ ತಾಯಿಗೆ ಕೈ ತುಂಬಾ ಕೆಲಸ. ತೋಟದಲ್ಲಿ ಬೆಳೆದ ಹಣ್ಣುಗಳನ್ನು ಮಾರಿ ಬಂದ ಹಣದಿಂದ ಹೇಗೋ ಜೀವನ ಸಾಗುತ್ತಿತ್ತು. ಪೀನಾ ಮುದ್ದಾದ ಹುಡುಗಿ ಆದರೆ ಬಹಳ ಸೋಮಾರಿ. ದಿನವಿಡೀ ತಾಯಿಯ ಕೆಲಸವನ್ನು ನೋಡಿಯೂ ನೋಡದ ಹಾಗೆ ಇರುತ್ತಿದ್ದಳು. ಒಬ್ಬಳೇ ಮಗಳು ಎಂಬ ಪ್ರೀತಿಯಿಂದ ತಾಯಿಯು ರಾಣಿಯಂತೆ ಸುಖವಾಗಿ ಬೆಳೆಸಿದ್ದಳು. ತಾಯಿಗೆ ಮಗಳ ಈ ಸೋಮಾರಿತನವನ್ನು ನಿವಾರಿಸುವುದು ಹೇಗೆ ಎಂದು ಪ್ರಶ್ನೆಯಾಗಿತ್ತು. ಸದಾ ಮಗಳ ಚಿಂತೆಯಿಂದ ಒಳ ಒಳಗೆ ಕೊರಗುತ್ತಿದ್ದಳು.

ಹೀಗೆ ಕಾಲ ಉರುಳಿತು. ಒಮ್ಮೆ ತಾಯಿ ವಿಪರೀತ ಜ್ವರದಿಂದ ಬಳಲಿ , ಏನನ್ನು ಮಾಡಲಾರದೆ ಮಲಗಿಬಿಟ್ಟಳು. ಪೀನಾ ಊಟಕ್ಕಾಗಿ ಪದೇ ಪದೇ ತಾಯಿಯನ್ನು ಅಡುಗೆಗಾಗಿ ಕೇಳಿದಳು . ತಾಯಿ ತನಗೆ ಆಯಾಸವಾಗಿದೆ ನೀನೆ ಒಂದಿಷ್ಟು ಅನ್ನ ಬೇಯಿಸು ಎಂದು ಸೂಚಿಸಿದಳು . ತಾಯಿ ಮಾಡಿದ್ದನ್ನು ದಿನಂಪ್ರತಿ ತಿಂದುಂಡು ಬೆಳೆದಿದ್ದ ಪೀನಾಳಿಗೆ ಅಡುಗೆ ಮಾಡುವ ಕೆಲಸ ಇಷ್ಟವೇ ಇರಲಿಲ್ಲ. ಮನಸಿಲ್ಲದ ಮನಸ್ಸಿನಿಂದಲೇ ಅಡುಗೆ ಮನೆಗೆ ಹೋದಳು. ಹೇಗಾದರೂ ಮಾಡಿ ತಾಯಿಯಿಂದಲೇ ಅನ್ನ ಮಾಡಿಸಬೇಕು ಎಂದು ಪದೇ ಪದೇ ತಾಯಿಯನ್ನು ಅಕ್ಕಿ ಯೆಲ್ಲಿದೆ? ಪಾತ್ರೆ ಎಲ್ಲಿದೆ? ಒಲೆ ಹೇಗೆ ಹಚ್ಚುವುದು? ಹೀಗೆಲ್ಲಾ ಹತ್ತಾರು ಪ್ರಶ್ನೆಗಳನ್ನು ಕೇಳಲು ಆರಂಭಿಸಿದಳು. ಎಲ್ಲದಕ್ಕೂ ಚಾಪೆಯ ಮೇಲೆ ಮಲಗಿದ್ದ ತಾಯಿ ತಾಳ್ಮೆಯಿಂದ ಉತ್ತರಿಸಿದಳು. ತಾಯಿಗೆ ಮಾತನಾಡಲು ಕೂಡ ನಿತ್ರಾಣವಾದಂತೆ ಕಾಣುತ್ತಿತ್ತು. ಆದರೂ ಪೀನಾಳ ಪ್ರಶ್ನೆಗಳು ನಿಲ್ಲಲಿಲ್ಲ. ತಟ್ಟೆಯೆಲ್ಲಿ ? ಸೌಟು ಎಲ್ಲಿ? ಎಂದು ಒಂದೇ ಸವನೆ ಕೇಳುತ್ತಿದ್ದಳು . ಸರಿಯಾಗಿ ನೋಡದೆ ಕಿರಿಕಿರಿ ಮಾಡುತ್ತಿದ್ದ ಪೀನಾಳನ್ನು ಕಂಡು ತಾಯಿಯ ತಾಳ್ಮೆಯ ಕಟ್ಟೆ ಒಡೆಯಿತು. ಕಣ್ಮುಂದೆ ಎಲ್ಲವೂ ಇದ್ದರೂ ಹುಡುಕದೇ ಸರಿಯಾಗಿ ನೋಡದೆ ಪ್ರಶ್ನೆ ಕೇಳುತ್ತಿದ್ದಾಳೆ ಎಂದು ಮಗಳ ಮೇಲೆ ಕೋಪ ಬಂತು . ಮಗಳ ಉದ್ದೇಶಪೂರ್ವಕ ಹಟ ಅವಳಿಗೆ ಅರಿವಾಯಿತು. ಬೇಕಾಗಿದ್ದು ಕಾಣಲು “ನೂರು ಕಣ್ಣು ನಿನಗೆ ಬೆಳೆಯಲಿ” ಎಂದು ಮಗಳನ್ನು ಶಪಿಸಿದಳು.

ಸ್ವಲ್ಪ ಹೊತ್ತು ಎಲ್ಲವೂ ಮೌನವಾಗಿತ್ತು. ತಾಯಿ ಮಗಳನ್ನು ಕೂಗಿದರೆ ಆ ಕಡೆಯಿಂದ ಉತ್ತರವೇ ಸಿಗಲಿಲ್ಲ. ಗಾಬರಿಯಾಗಿ ನಿಧಾನವಾಗಿ ಎದ್ದು ಅಡುಗೆ ಮನೆಗೆ ಹೋಗಿ ನೋಡಿದರೆ ಅಲ್ಲಿ ಪೀನಾ ಕಾಣಲಿಲ್ಲ. ಮನೆಯ ಒಳಗೆ ಹೊರಗೆ ಹುಡುಕಿದಳು. ಕೊನೆಗೆ ಅಡುಗೆಮನೆ ಹಿಂದಿನ ಹಿತ್ತಲಲ್ಲಿ ಹೊಸದಾಗಿ ಹುಟ್ಟಿದ ವಿಚಿತ್ರ ಹಣ್ಣು ಕಂಡು ಬಂತು. ನೆಲದಲ್ಲಿ ಮುಳ್ಳುಗಳ ಮಧ್ಯದಿಂದ ಹೊರ ಬಂದ ತಲೆಯಕಾರದಂತಿದ್ದ ಒಂದು ಹಣ್ಣು ಅಲ್ಲಿತ್ತು. ಅದಕ್ಕೆ ನೂರು ಕಣ್ಣುಗಳಿದ್ದವು . ಅದು ತಾಯಿಯ ಶಾಪಕ್ಕೆ ಗುರಿಯದ ಪೀನಾ ಆಗಿದ್ದಳು. ಮಗಳನ್ನು ನೆನೆದು ಅಳುತ್ತಾ ತಾಯಿಯು ‘ಪೀನಾಯಾ ‘ ಎಂದು ಕರೆದಳು. ಮಗಳಿಗಾಗಿ ಮಮ್ಮಲಮರುಗಿದಳು. ಮಗಳ ನೆನಪಿಗಾಗಿ ಅದನ್ನು ತೋಟದಲ್ಲೆಲ್ಲ ನೆಟ್ಟಳು. ಸಮೃದ್ಧವಾಗಿ ಬೆಳೆದ ಹಣ್ಣುಗಳನ್ನು ಊರಿನವರಿಗೆಲ್ಲ ಹಂಚಿದಳು. ರುಚಿಯಾದ ಹಣ್ಣು ಪೈನಾಪಲ್ (ಅನಾನಸು) ಎಂದು ಜನಪ್ರಿಯವಾಯಿತು.

ಸ್ನೇಹಿತರೆ, ನಮಗೆಲ್ಲ ಗೊತ್ತು ಫೈನ್ ಆಪಲ್ pine = ಮುಳ್ಳು ಎನ್ನುವ ಅರ್ಥ. ಪೈನಾಪಲ್ ಮುಳ್ಳುಗಳಿಂದ ಕೂಡಿದ ಹಲವಾರು ಕಣ್ಣುಗಳುಳ್ಳ ಹಣ್ಣು.ಆದರೆ ಬಹುಶಃ ಈ ಜಾನಪದ ಕಥೆಯನ್ನು ಹೇಳಲು ಕಾರಣವೇನೆಂದರೆ ಮುಖ್ಯವಾಗಿ ನೊಂದ ಹೃದಯದ ಶಾಪಕ್ಕೆ ಶಕ್ತಿ ಇದೆ ಎಂದು ಹಳೆಯ ಕಾಲದಲ್ಲಿ ನಂಬಿಕೆ ಇತ್ತು . ಜನರ ಮನಸ್ಸು ಪವಿತ್ರವಾಗಿತ್ತು. ಒಂದು ರೀತಿಯಲ್ಲಿ ಅವರೆಲ್ಲ ಸಾಧಕರಾಗಿದ್ದರು. ಆಡಿದ ಮಾತುಗಳು ಹುಸಿಯಾಗುತ್ತಿರಲಿಲ್ಲ. ಮಕ್ಕಳು ಮೈಗಳ್ಳ ರಾಗಬಾರದು ಚಟುವಟಿಕೆಯಿಂದ ಕೂಡಿರಬೇಕು ಎನ್ನುವ ಒಂದು ಉದ್ದೇಶವಾದರೆ, ಇನ್ನೊಂದು ಉದ್ದೇಶ ಸಹನೆಗೆ ಮಿತಿ ಇದೆ.ಅದನ್ನು ಮೀರಬಾರದು ಎಂತಲೂ ಜನರು ಈ ಕಥೆಯನ್ನು ಹೆಣೆದಿರಬಹುದು.

ಹೌದು , ನಮಗೆಲ್ಲ ಗೊತ್ತಿದೆ ” ತಾಳಿದವನು ಬಾಳಿಯಾನು” ಎನ್ನುವುದು ಸರಿ, ಆದರೆ ಈ ತಾಳ್ಮೆಗೊಂದು ಎಲ್ಲೆ ಇರಬೇಕಲ್ಲವೇ! ಯಾವುದೇ ಅತಿಯಾದರೂ ಸರಿಯಲ್ಲ. ” ಅತಿಯಾದ ಅಮೃತವೂ ವಿಷಕ್ಕೆ ಸಮಾನ ” ಅಲ್ಲವೆ! ಎಲ್ಲವೂ ಒಂದು ಮಿತಿಯೊಳಗಿರಬೇಕು. ಅದು ಮೀರಿದಾಗ ಸ್ಫೋಟವಾಗುವ ಸಂಭವವಿರುತ್ತದೆ. ಈ ಕಥೆಯಲ್ಲಿ ಇರುವುದು ಹಾಗೆಯೇ ತಾಯಿಯ ಸಹನೆ ಮೀರಿ ಹೋದಾಗ ಅವಳ ನೊಂದ ಮಾತು ಶಾಪವಾಗುವ ಮಟ್ಟಕ್ಕೆ ತಲುಪಿತು. ತಾಳ್ಮೆಗೆ ಇಷ್ಟೊಂದು ಪರೀಕ್ಷೆಯೊಡ್ಡಬಾರದು.

ತಾಯಿ ಮಗಳನ್ನು ಚಿಕ್ಕಂದಿನಿಂದಲೇ ಸ್ವಾವಲಂಬಿಯನ್ನಾಗಿ ಮಾಡದೆ ಅತಿಯಾದ ಪ್ರೀತಿಯಿಂದ ಬೆಳೆಸಿದ್ದು ಮುಂದೆ ಮುಳುವಾಯಿತು. ತಾನು ದಿನವಿಡೀ ಕೆಲಸ ಮಾಡುವಾಗ ಮಗಳಿಗೆ ಚಿಕ್ಕ ಚಿಕ್ಕ ಕೆಲಸಗಳನ್ನು ಹೇಳಬಹುದಿತ್ತು . ಅಥವಾ ತೋಟದ ಕೆಲಸದಲ್ಲಿ ಅವಳನ್ನು ಭಾಗಿಯಾಗಿಸಿ ಕೊಳ್ಳಬೇಕಿತ್ತು. ಅಥವಾ ಮಗಳು ಸ್ವಯಂ ಪ್ರೇರಣೆಯಿಂದ ತಾಯಿ ದಿನವಿಡೀ ಶ್ರಮಪಡುತ್ತಿರುವುದನ್ನು ನೋಡಿ ತಾನೇ ಕೆಲಸಕ್ಕೆ ಮುಂದಾಗಬಹುದಿತ್ತು. ಇಲ್ಲಿ ಇವಾವೂ ಆಗದೇ ಇದ್ದಾಗ ಪೀನಾ ಬಹುತೇಕ ಪರಾವಲಂಬಿಯಾಗಿಯೇ ಬೆಳೆದಳು. “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?” ಎನ್ನುವಂತೆ ಪೀನಾ ಚಿಕ್ಕಂದಿನಿಂದಲೂ ತಿಂದುಂಡು ಆಡಿಕೊಂಡು ಬೆಳೆದಿದ್ದಾಳೆ . ಪರಿಶ್ರಮ ಅವಳಿಗೆ ಗೊತ್ತೇ ಇರಲಿಲ್ಲ. ತಾಯಿ ಪಡುತ್ತಿರುವ ಶ್ರಮಕ್ಕೆ ಅವಳು ಸ್ಪಂದಿಸಲೇ ಇಲ್ಲ. ಆದ್ದರಿಂದ ಈ ರೀತಿ ಅನಾಹುತ ಸಂಭವಿಸಿತು.

ಪ್ರಸ್ತುತವಾಗಿಯೂ ಪಾಲಕರು ತಮ್ಮ ಮಕ್ಕಳನ್ನ ಸ್ವಾವಲಂಬಿಯಾಗಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಲ್ಲಿ ಕೇವಲ ಆರ್ಥಿಕ ಸ್ವಾವಲಂಬನೆ ಅಲ್ಲ. ದಿನನಿತ್ಯದ ತಮ್ಮಕೆಲಸಗಳನ್ನು ಯಾರ ಸಹಾಯವಿಲ್ಲದೇ ತಾವೇ ಮಾಡಿಕೊಳ್ಳುವ ಅಭ್ಯಾಸ ಇರಬೇಕು. ಈಗಿನ ಮಕ್ಕಳಿಗೆ ದಿನವಿಡೀ ಸಮಯವೇ ಇರುವುದಿಲ್ಲ. ಶಾಲೆಯ ನಂತರ ಕೋಚಿಂಗ್ ಕ್ಲಾಸೆಸ್ , ನಂತರ ಸ್ಕೇಟಿಂಗ್ , ಸ್ವಿಮ್ಮಿಂಗ್ , ಡಾನ್ಸ್, ಕರಾಟೆ, ಟೆನಿಸ್ , ಕ್ರಿಕೆಟ್ ಇತ್ಯಾದಿಗಳೆಲ್ಲ ಕಲಿಯುತ್ತಾರೆ. ಹೊರಗಿನದ್ದೆಲ್ಲ ಕಲಿತು ಮನೆಯೊಳಗೆ ಹೇಗಿರಬೇಕು,ಮನೆ ಮಂದಿಯ ಜೊತೆ ಹೇಗಿರಬೇಕು, ಮನೆಗೆಲಸದಲ್ಲಿ ಹೇಗೆ ನೆರವಾಗಬೇಕು ? ಮನೆಯಲ್ಲಿ ತಾಯಿ ಏನು ಮನೆಕೆಲಸ ಮಾಡುತ್ತಾರೆ . ಅದರಲ್ಲಿ ಸಣ್ಣ ಮಟ್ಟಿನ ಸಹಾಯ ಮಾಡಬೇಕೆಂಬ ತಿಳುವಳಿಕೆಯನ್ನು ನಾವು ನೀಡುತ್ತಿಲ್ಲ. ಮಕ್ಕಳು ಕೇವಲ ಓದಿನಲ್ಲಿ ಅಂಕಗಳಿಸುವದು ಮಾತ್ರ ತಂದೆತಾಯಿಯರಿಗೆ ಮಹತ್ವದ್ದಾಗಿದೆ. ಮನೆಯವರ ಜೊತೆಗಿನ ಸ್ಪಂದನೆ ಗೌಣವಾಗಬಾರದಲ್ಲವೆ ? ಅತಿಯಾದ ಮುದ್ದು ಮಕ್ಕಳ ದುರ್ವತನೆಗೆ ಕಾರಣವಾಗಬಹುದು. ಮಕ್ಕಳ ಸುಖಮಯ ಹಾಗೂ ಸಫಲ ಜೀವನಕ್ಕೆ ಮನೆಯ ಒಳಗೆ ಕಲಿಯುವುದು, ಗ್ರಹಿಸುವದು ಹಾಗೂ ಸ್ಪಂದಿಸುವದು ಬೇಕಾದಷ್ಟಿದೆ. ಇದರ ಕುರಿತು ನಾವೆಲ್ಲ ಗಮನಹರಿಸ ಬಹುದಲ್ಲವೆ ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter