ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಕುವೆಂಪು ಅವರನ್ನು ಇಂದು ಪರಿಚಯಿಸುವ ಅಗತ್ಯ ಇಲ್ಲ . ಕನ್ನಡ ನಾಡಿನಲ್ಲಿ ಹಾಗೂ ಭಾರತದ ಉದ್ದಗಲಕ್ಕೂ ಈ ಹೆಸರು ಚಿರಪರಿಚಿತವಾಗಿದೆ. ಆದುದರಿಂದ ವ್ಯಕ್ತಿ ಪರಿಚಯಕ್ಕೆ ಇಳಿಯದೇ ವಿಚಾರಧಾರೆಗೆ ಇಳಿವುದೇ ಸೂಕ್ತ ಎಂದು ತೋರುತ್ತದೆ. ಕುವೆಂಪು ಅವರು ಕಂಡ ಕನಸು ಅಖಂಡತ್ವದ್ದು. ವಿಶ್ವಮಾನವ ತತ್ವದ ಮೂಲ ಸೆಳೆಯುಳ್ಳದ್ದು. ಸರ್ವೋದಯ, ಸಮಾನತೆ, ಪೂರ್ಣದೃಷ್ಟಿ, ಮನುಜಮತ ಮತ್ತು ವಿಶ್ವಪಥದ ನೆಲೆಯಲ್ಲಿ ಪರಿಪೂರ್ಣ ಗೊಂಡಂತದ್ದು. ಹಾಗಾಗಿ ಅವರ ಚಿಂತನೆಗಳು ನಾಡು – ನುಡಿಯ ಏಳಿಗೆಯಲ್ಲಿ ಸದಾ ಮೇಳೈಸಿವೆ. ಈ ದೃಷ್ಟಿಯಿಂದ ಕುವೆಂಪು ಅವರ ಚಿಂತನೆಯಲ್ಲಿ ಮೂಡಿದ ನಾಡು – ನುಡಿ ಕುರಿತ ದೃಷ್ಟಿಕೋನವನ್ನು ಪ್ರತ್ಯೇಕವಾಗಿ ನೋಡಿದಾಗ ಅದರ ಅರಿವಾಗುತ್ತದೆ. ಈ ಹಿನ್ನಲೆಯಲ್ಲಿ ಈ ಲೇಖನ ಮುಂದಿನಂತೆ ಸಾಗಿದೆ.
ಕುವೆಂಪು ಕಂಡ ಕನ್ನಡ ನಾಡು :
ನಾಡು ಹಾಗೂ ಗಡಿಯ ವಿಷಯ ಬಂದಾಗ ಕುವೆಂಪು ಎಂದೂ ಸುಮ್ಮನಿದ್ದವರಲ್ಲ. “ಅಖಂಡ ಕರ್ನಾಟಕ” ಎಂಬ ತತ್ವ ಅವರಲ್ಲಿ ಸದಾ ಜಾಗೃತವಾಗಿರುತ್ತಿತ್ತು. ಅದು ಅವರ ನಡೆಯಲ್ಲಿ ಕಂಡು ಬರುತ್ತಿತ್ತು ಕೂಡ. ತಮ್ಮ ಕೃತಿಗಳಲ್ಲಿ ಅಲ್ಲಲ್ಲಿ ಕನ್ನಡ ನಾಡು ಕುರಿತು ವರ್ಣಿಸುತ್ತಾ ಮಲೆನಾಡಿನ ಸೌಂದರ್ಯ, ಅಲ್ಲಿನ ಸಂಸ್ಕøತಿ, ಆಚಾರ-ವಿಚಾರ, ರಮ್ಯ ಪರಿಸರವನ್ನು ಸೆರೆ ಹಿಡಿಯುತ್ತಾ ನಡೆದರು. ಹೀಗಿದ್ದರೂ ಭಾರತ ಸ್ವಾತಂತ್ರ್ರ ಗಳಿಸುವ ಮೊದಲು ಹಾಗೂ ಅನಂತರದಲ್ಲೂ ಹರಿದು ಹಂಚಿಹೋಗಿತ್ತು. ಅದು ಅವರನ್ನು ಸದಾ ಕಾಡುತ್ತಿತ್ತು ಕೂಡ. ಆದ್ದರಿಂದಲೇ ಕನ್ನಡಿಗರನ್ನು ಎಚ್ಚರಿಸುವ ಕಡೆಗೆ ಅವರು ಸಾಹಿತ್ಯದ ಮುಖೇನ ಮನ ಮಾಡಿದರು. ಅದು ಸಾಗಿ ಬಂದ ಪರಿ ನಿಜಕ್ಕೂ ಶ್ಲಾಘನೀಯವಾದದ್ದು. 1949ರ ನವೆಂಬರಿನಲ್ಲಿ ಕರ್ನಾಟಕ ಏಕೀಕರಣಕ್ಕೆ ಯಾವುದೇ ಮನ್ನಣೆ ದೊರೆಯದೇ ಹೋದಾಗ ಕುವೆಂಪು ಅವರು,
“ದೀಕ್ಷೆಯ ತೊಡು ಇಂದೇ
ಕಂಕಣ ಕಟ್ಟಿಂದೇ
ಕನ್ನಡ ನಾಡೊಂದೇ
ಇನ್ನೆಂದೂ ತಾನೊಂದೇ”
ಎಂಬ “ಕರ್ನಾಟಕ ಮಂತ್ರ ದೀಕ್ಷೆ” ಕವಿತೆಯನ್ನು ಬರೆದರು. ಇಲ್ಲಿಂದ ಮುಂದೆ ಏಕೀಕರಣದ ರಣಕಹಳೆಗೆ ನಾಂದಿ ದೊರೆಯಿತು. ಹೀಗಿದ್ದರೂ ಕನ್ನಡಿಗರು ಒಂದಾಗುವಲ್ಲಿ ಅನೇಕ ಎಡರು ತೊಡರುಗಳು ಎದುರಾದವು. ಮುಂದೆ 1956ರ ನವಂಬರ್ 1ರಂದು ಕರ್ನಾಟಕ ಏಕೀಕರಣವಾಯಿತು. ಇದು ಕನ್ನಡಿಗರ ಸುವರ್ಣೋದಯದ ದಿನವಾಯಿತು. ಆಗ ಕುವೆಂಪು ಅವರು “ಕರ್ನಾಟಕ ರಾಜ್ಯೋದಯ ಗೀತೆ” ಎಂಬ ಕವಿತೆಯನ್ನು ರಚಿಸಿದರು. ಮುಂದೆ ನಿಜಲಿಂಗಪ್ಪ ಕರ್ನಾಟಕದ ಮುಖ್ಯಮಂತ್ರಿಯಾದಾಗ ಈ ಕೆಳಗಿನ ಕಾರ್ಯ ನಡೆಸಬೇಕು ಎಂದು ಹೇಳಿದರು.
• ಕರ್ನಾಟಕದ ರಾಜ್ಯಪಾಲರನ್ನು ನೇಮಿಸುವಾಗ ರಾಜ್ಯಾಂಗ ಸಭೆಯು ಪ್ರಜಾಪ್ರಭುತ್ವ ತತ್ವಕ್ಕನುಸಾರವಾಗಿ ಮಾಡಬೇಕು.
• ಕರ್ನಾಟಕ ಎಂದೇ ಏಕೀಕೃತ ಮೈಸೂರಿಗೆ ನಾಮಕರಣ ಮಾಡಬೇಕು.
• ಬೋಧನ ಮಾಧ್ಯಮ ಕನ್ನಡವಾಗಿರಬೇಕು.
• ಕನ್ನಡವೇ ರಾಜ್ಯದ ಅಧಿಕೃತ ಭಾಷೆ ಆಗಿರಬೇಕು.
ಈ ನಾಲ್ಕು ಕಾರ್ಯಗಳು ಕಾರ್ಯಗತವಾದಾಗಲೇ ಕನ್ನಡ ನಾಡು – ನುಡಿ ಒಂದಾಗಬಹುದೆಂಬ ಕಲ್ಪನೆ ಕುವೆಂಪು ಅವರದ್ದು.
ಕುವೆಂಪು ಪ್ರಕಾರ ಅವರ ನಿಲುವು ಕೇವಲ ಕರ್ನಾಟಕದ ಭೌಗೋಳಿಕ ವ್ಯಾಪ್ತಿಗಷ್ಟೇ ಸೀಮಿತವಾಗಿರಲಿಲ್ಲ. “ಕರ್ನಾಟಕಕ್ಕೆ ಅನ್ನಮಯ ರೂಪವಾದ ಭೂಪ್ರದೇಶವಿರುವಂತೆ, ಪ್ರಾಣಮಯ, ಮನೋಮಯ ರೂಪವಾದ ಚಿತ್ ಪ್ರದೇಶವೂ ಇದೆ. ಚಿನ್ಮಯವೂ, ಆಧ್ಯಾತ್ಮವೂ ಆಗಿರುವ ಆ ಸಂಸ್ಕøತಿ – ಕೋಶವೇ ಕರ್ನಾಟಕ ದೇವಿಯ ಸೂಕ್ಷ್ಮ ಶರೀರ. ಕುವೆಂಪು ಕರ್ನಾಟಕದ ಕುರಿತು ನಿರ್ಜೀವವಲ್ಲದ, ಸಾವಯವವಾದ, ಸಜೀವವೂ, ಮೂರ್ತವೂ ಆದ ಭಾವ ರೂಪವನ್ನು ಹೊಂದಿದ್ದರೂ” ಎಂಬ ವಿಮರ್ಶಕರ ಮಾತುಗಳು ಅಕ್ಷರಶಃ ಸತ್ಯವಾಗಿದೆ. ಅವರಿಗೆ ಕರ್ನಾಟಕದ ಪ್ರತಿ ಕಣಕಣದಲ್ಲೂ ಜೀವಚೈತನ್ಯತೆ ಕಾಣುತ್ತಿತ್ತು. ಏಕೀಕೃತ ಕರ್ನಾಟಕದ ನಿರ್ಮಾಣಕ್ಕೆ ರಾಜಕೀಯ ಶಕ್ತಿಗಳೂ ವಿರುದ್ಧವಾಗಿದ್ದ ಕಾಲವದು. ಕರ್ನಾಟಕದ ಏಕೀಕರಣ ಆದರೆ ರಾಜಕೀಯ ಶಕ್ತಿ ಕಳೆಗುಂದಬಹುದೆಂಬುದು ಕೆಲವು ರಾಜಕೀಯ ನಾಯಕರ ಕಲ್ಪನೆಯಾಗಿತ್ತು. ಆಗ ಸಿಟ್ಟಿಗೆದ್ದ ಕುವೆಂಪ ಅವರು ತಳೆದ ನಿಲುವುಗಳು ಗಟ್ಟಿತನವುಳ್ಳದ್ದು. ಅಂತಹ ನಿಲುವುಗಳನ್ನು ಖಂಡಿಸಲು “ಅಖಂಡ ಕರ್ನಾಟಕ ಅಲ್ತೋ ನಮ್ಮ ನಾಲ್ಕು ದಿನಗಳ ರಾಜಕೀಯ ನಾಟಕ” ಎಂಬ ಅಖಂಡ ಕರ್ನಾಟಕ ಗೀತೆಯನ್ನು ರಚಿಸುವುದರ ಮೂಲಕ ಕರ್ನಾಟಕಕ್ಕೆ ತನ್ನದೇ ಆದ ಶ್ರೀಮಂತ ಪರಂಪರೆ ಇದೆ. ನೃಪತುಂಗ, ಪಂಪ, ರನ್ನ. ಪೊನ್ನ, ಜನ್ನ, ನಾಗವರ್ಮ, ಷಡಕ್ಷರಿ, ಹರಿಹರ, ಸರ್ವಜ್ಞ ಹೀಗೆ ಮೊದಲಾ ಕವಿ ಸಂತರು ಬೆಳಗಿ ಬಾಳಿದಂತಹ ಪುಣ್ಯ ನಾಡು ಕರ್ನಾಟಕವಾಗಿದೆ. ಆದರೆ ಇಂದು ಕೇವಲ ದುರಾಸೆಗಾಗಿ ರಾಜಕೀಯ ಗಣ್ಯರುಗಳ ಈರ್ಷೆ ತಾಣವನ್ನಾಗಿ ಮಾಡಿ ಕಪಟತನದ ಮೂಲಕ ಹಾಳುಗೆಡಹುತ್ತಿದ್ದಾರೆ ಎಂಬುದಾಗಿ ರಾಜಕೀಯತೆಯ ವಿರುದ್ಧ ದನಿ ಎತ್ತಿದ ಕುವೆಂಪು ಅವರು ಕರ್ನಾಟಕ ಏಕೀಕರಣವಾದಾಗಲೇ ಇಂತಹ ಬೂಟಾಟಿಕೆಗಳು ಕೊನೆಯಾಗಬಹುದೆಂದು ಸಾರುತ್ತಾರೆ.
1956ರಲ್ಲಿ ಕರ್ನಾಟಕ ಏಕೀಕರಣಗೊಂಡಾಗ “ಕರ್ನಾಟಕ ರಾಜ್ಯೋದಯ” ಗೀತೆಯನ್ನು ರಚಿಸಿದ ಕುವೆಂಪು ಅವರು ಭಾರತ ಮಾತೆಗೆ ಅಹ್ವಾನವನ್ನು ನೀಡುತ್ತಾ ಆಕೆತ ತನುಜೆಯಾದ ಕನ್ನಡಾಂಬೆಯನ್ನು ಹರಸುವಂತೆ ಭಿನೈಸುತ್ತಾರೆ. ಇಲ್ಲಿ ಕವಿ ಭಾರತದ ಕಲ್ಪನೆಯೊಳಗೆ ಕರ್ನಾಟಕದ ಅವಿನಾಭಾವತೆಯನ್ನು ಪ್ರತಿನಿಧಿಸುತ್ತಾರೆ. ಭಾರತದ ರಾಷ್ಟ್ರೀಯತೆಯ ಒಳಗೆ ಬಹುರಾಷ್ಟ್ರೀಯತೆಯನ್ನು ಒಪ್ಪಿಸುತ್ತಿದ್ದ ಕುವೆಂಪು ಭಾರತಿಯೊಳಗೆ “ವಿವಿಧ ಭಾರತಿ”ಯನ್ನು ಕಾಣುವಂತಹ ನಿಲುವು ತಳೆದವರು. ಹಾಗಾಗಿ ಅವರಿಗೆ ಭಾರತ ಕರ್ನಾಟಕ ಭಾರತವಾಗಿತ್ತು. ಅವರು “ರಾಜ್ಯದೃಷ್ಟಿಯಿಂದ ಹಾಗೆಯೇ ಭಾಷಾದೃಷ್ಟಿಯಿಂದ ಕನ್ನಡಿಗನಾದರೆ ಸಂಸ್ಕøತಿ ಹಾಗೂ ರಾಜ್ಯ ನಿಲುವಿನಿಂದ ಭಾರತೀಯ” ಎಂಬ ಮಾತುಗಳು ಒಪ್ಪತಕ್ಕದ್ದು.
“ನೂರು ದೇವರ ನೂಕಾಚೆ ದೂರ, ಭಾರತಾಂಬೆಯ ದೇವಿ ನಮಗಿಂದು ಪೂಜಿಸು ಬಾರ” ಎಂಬ ಕವನದಲ್ಲಿನ ಸಾಲುಗಳು ಕುವೆಂಪು ಅವರಿಗಿದ್ದ ರಾಷ್ರ್ಟೀಯತೆಯನ್ನು ಸೂಚಿಸುತ್ತದೆ. ಕುವೆಂಪು ಸದಾ ಆಶಾವಾದಿಗಳಾಗಿದ್ದವರು. ಭಾರವು ಆಂಗ್ಲರ ಹಿಡಿತದಿಂದ ಮುಕ್ತವಾಗುತ್ತದೆ ಎಂಬ ಆಶಯ ಹೊಂದಿದ್ದರು. ಸಾಧಿತವೂ ಆಯಿತು. ಹಾಗೆಯೇ ಕುವೆಂಪು “ಮೆಟ್ಟುವ ನೆಲ ಕರ್ನಾಟಕ” ಎಂಬ ಕವನದಲ್ಲಿ ಮಾನವನೊಬ್ಬನ ಬದುಕಿನ ಪ್ರತಿಯೊಂದು ಕ್ಷಣವೂ ಸಹ ಕನ್ನಡ ನಾಡಿನಲ್ಲಿಯೇ ಬೆಸೆದುಕೊಂಡಿದೆ ಎಂಬ ಅಂಶವನ್ನು ಒತ್ತಿ ಹೇಳುತ್ತಾರೆ. ಅವರು ಹೇಳುವಂತೆ ಕನ್ನಡಿಗನೊಬ್ಬನು ದೇಶದ ಯಾವುದೇ ಮೂಲೆಯಲ್ಲಿದ್ದರೂ ಆತನ ತನು – ಮನಗಳೆರಡೂ ಕನ್ನಡ ನಾಡಿಗೆಂದೇ ತುಡಿಯಬೇಕು.. ಕನ್ನಡದ ಉಳಿವಿಗಾಗಿ ಮಿಡಿಯಬೇಕು ಎಂದವರು. ನಿತ್ಯ ನೂತನವಾದ ಹಚ್ಚ ಹಸುರಿನ ಅರಣ್ಯ ಸಂಪತ್ತುಗಳಿಂದ ಕೂಡಿದ ಮತ್ತು ಸಕಲ ಜೀವಚರಗಳಿಗೆ ಆಶ್ರಯವಾಗಿರುವ ಸಹಾದ್ರಿ ರಮ್ಯವಾಗಿ ಕಂಗೊಳಿಸುತ್ತಾಳೆ. ನಾವು ಮುಟ್ಟುವ ಮರ ಶ್ರೀಗಂಧದ ಮರ, ಸೇವಿಸುವ ಜಲ ಸಹ ಕನ್ನಡದ್ದಾಗಿದೆ. ಕೊಡಗಿನಲ್ಲಿ ಉಗಮಿಸಿ ಕನ್ನಡಿಗರಿಗೆಲ್ಲ ಜೀವವಾಗಿರವ ಕಾವೇರಿ ಕರ್ನಾಟಕದ ಜೀವ ನದಿಯಾಗಿದ್ದಾಳೆ. ಹರಿಹರ – ರಾಘವಾಂಕರಿಗೆ ನಮಿಸುವ ಮನ, ವಿಜಯನಗರದ ಶ್ರೀಮಂತಿಕೆಯಲ್ಲಿ ಮುಳುಗಿದ್ದ ಹಂಪೆ ಹಾಳು ಹಂಪೆಯಾದಾಗ ಕೊರಗುವ ಮನ, ರಭಸದಿಂದ ಗಿರಿಶಿಖರದ ನಡುವಿನಿಂದ ಭೋರ್ಗರೆಯುತ್ತಾ ಧುಮುಕುವ ಜೋಗದ ಜಲಪಾತಕ್ಕೆ ಮಾರು ಹೋಗುವ ಮನ, ಮಲ್ಲಿಗೆ, ಸಂಪಿಗೆ, ಕೇದಗೆಗಳ ಸುವಾಸನೆಗಳ ನಡುವೆ ಇಂಪಾಗಿ ಕೂಗುವ ಕೋಗಿಲೆಯ ದನಿಗೆ ತಲೆದೂಗವ ಮನ ಎಲ್ಲವೂ ಕನ್ನಡದ್ದೇ ಆಗಿದೆ. ಹೀಗಿರುವಾಗ ಕನ್ನಡ ನಾಡನ್ನು ಹೊರತಾಗಿ ಬೇರೆಲ್ಲವೂ ಶೂನ್ಯವಾಗಿದೆ ಅವರಲ್ಲಿ ಎಂಬುದನ್ನು ಮನಗಾಣಬಹುದಾಗಿದೆ.
1956ರ ನಂತರ ಕರ್ನಾಟಕ ಏಕೀಕರಣಗೊಂಡರೂ ಕನ್ನಡಿಗರು ಒಂದಾಗದೇ ಇನ್ನೂ ಕಿತ್ತಾಡುತ್ತಿರುವುದನ್ನು ಕಂಡ ಕವಿ ಮನ “ಬಾರಿಸು ಕನ್ನಡ ಡಿಂಡಿಮ” ಎಂದು ಗುಡುಗಿತು. ಆ ಮೂಲಕ “ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ” ಎಂದು ಹಾರೈಸುತ ಎಲ್ಲರನ್ನೂ ಒಂದಾಗುವಂತೆ ಪ್ರೇರೇಪಿಸಿತು. ಇದು ಅವರಿಗಿದ್ದ ಕರ್ನಾಟಕದ ಕುರಿತಾದ ಅಭಿಮಾನವನ್ನು ವ್ಯಕ್ತಪಡಿಸುತ್ತದೆ. 07/05/1957 ರಂದು ಧಾರವಾಡದಲ್ಲಿ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ತಕ್ಷತೆಯನ್ನು ಅಲಂಕರಿಸಿದ್ದ ಕುವೆಂಪು ಅವರು “ಕನ್ನಡ ನಾಡು ಅತಿ ವಿಸ್ತಾರವಾಗಿದ್ದು, ಕನ್ನಡ ಸಂಸ್ಕøತಿಯು ಅತ್ಯಂತ ವಿಶಾಲ ಹಾಗೂ ಕರ್ನಾಟಕದ ವ್ಯಾಪ್ತಿ ನಿರ್ದಿಂತವಾದದ್ದು, ಅದರ ಔನತ್ಯ ನಿಶ್ಸಿರವಾದದ್ದು, ನಾವು ಭಾಗ್ಯ.ಶಾಲೆಗಳು, ಪುಣ್ಯಶಾಲಿಗಳು ನಾವೇ ಧನ್ಯರು” ಎಂದರು. ಈ ಮಾತುಗಳು ಕನ್ನಡ ನಾಡಿನ ಹಿರಿಮೆಗೆ ಸಾಕ್ಷಿಯಾಗಿ ನಿಂತವು.
ಕುವೆಂಪು ಅವರಿಗೆ ಕನ್ನಡ, ಕರ್ನಾಟಕ ಮತ್ತು ಭಾರತ ಎಂಬುದು ಒಂದು ಅಖಂಡ ಸಾಂಸ್ಕøತಿಕ ನೆಲೆಯಾಗಿ ಕಾಣುತ್ತಿತ್ತು. ಈ ಮೂರು ಅಂಶಗಳು ಅವರಿಗೆ ಭಿನ್ನವಾಗಿರಲೇ ಇಲ್ಲ. ಹಾಗಾಗಿ ಕನ್ನಡ, ಕರ್ನಾಟಕದ ಬಗ್ಗೆ ವಿಚಾರವನ್ನು ವಾಚಿಸುತ್ತಿದ್ದಾರೆಂದರೆ ಅವರು ಭಾರತದ ರಾಷ್ರ್ಟೀಯತೆಯ ಬಗೆಗೆ ನಿಲುವನ್ನು ವಾಚಿಸುತ್ತಿದ್ದಾರೆ ಎಂದೇ ಅರ್ಥ. ಹಾಗಾಗ ಅವರು ಕರ್ನಾಟಕದ ಮಾತೆಗೆ ಸಲ್ಲಿಸುನ ಜಯಕಾರ ಆಕೆ “ಭಾರತ ಜನನಿಯ ತನುಜಾತೆ” ಎನ್ನುತ್ತಾ “ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” ಎಂಬ ನಾಡಗೀತೆಯನ್ನು ಬರೆದು ಕನ್ನಡ ನಾಡಿನ ಸಂಸ್ಕøತಿ, ಸಮ್ಮಿಲನ ಹಾಗೂ ಸಾಂಸ್ಕøತಿಕ ಚರಿತ್ರಯನ್ನೇ ಅದರಲ್ಲಿ ತುಂಬಿದರು. ಕರ್ನಾಟಕ ಸರ್ವಧರ್ಮ ಸಮನ್ವಯದ ಭೂಮಿ ಎಂದು ಅಲ್ಲಿ ಸಾರಿದರು. ಅಲ್ಲದೇ ತಮ್ಮನ್ನು “ನಾನು ಕನ್ನಡಿಗ, ನನ್ನ ಸಂಸ್ಕøತಿ ಭಾರತೀಯ. ಆದರೆ ನಾನು ವಿಶ್ವಮಾನವ” ಎಂದು ಕರೆದುಕೊಂಡರು. ಈ ನೆಲೆಯಲ್ಲಿ ನೋಡಿದಾಗ ಕುವೆಂಪು ಕನ್ನಡಿಗನಾಗಿ ಕನ್ನಡ ನಾಡಿನ ಅಖಂಡತ್ವಕ್ಕಾಗಿ ಶ್ರಮಿಸಿದ ಧೀಮಂತ ವ್ಯಕ್ತಿ ಎಂದು ಭಿನ್ನೈಸಬಹುದು.
ಕನ್ನಡ ನಾಡು ಮನುಷ್ಯನ ಕಿವಿಯಾಕಾರದಲ್ಲಿದೆ. ಆ ಕಿವಿಯನ್ನು ಹರಿದು ಕಿತ್ತು ಹಾಕಬಾರದು. ಪ್ರತಿಯೊಬ್ಬರೂ ಕಿವಿಗೆ ಧರಿಸುವ ಓಲೆಯಂತೆ ಪ್ರಜ್ವಲಿಸಲು ಮುಂದಾಗಬೇಕು. ಅದಕ್ಕಾಗಿ ಶ್ರಮಿಸಬೇಕು. ಅದು ನಮ್ಮ ಸಂಸ್ಕøತಿಯೂ ಹೌದು, ಹಾಗಾಗಿ ಅವರ ನಿಲುವು ಸಂಪೂರ್ಣವಾಗಿ ಕನ್ನಡ ನಾಡಿನ ಒಗ್ಗೂಡುವಿಕೆಗಾಗಿ ಹಾತೊರೆಯುತ್ತಿತ್ತು ಎಂದೆನ್ನಬಹುದು. ಆದರೆ ಇಂದಿನ ಕನ್ನಡ ನಾಡಿನ ರಾಜಕೀಯ ಬೆಳವಣಿಗೆಯು ಕರ್ನಾಟಕದ ಅಖಂಡತ್ವಕ್ಕೆ ಧಕ್ಕೆ ತರುತ್ತಿರುವದನ್ನು ಗಮನಿಸಿದಾಗ ಕುವೆಂಪು ಅವರಂತಹ ಧೀಮಂತ ವ್ಯಕ್ತಿತ್ವಕ್ಕೆ ಮಾಡುತ್ತಿರುವ ಅಪಚಾರವಾದಂತೆ ಕಾಣುತ್ತಿದೆ. ಇದು ಮೊದಲು ತೊಲಗಬೇಕಾಗಿದೆ.
ಕುವೆಂಪು ಅವರ ಕನ್ನಡ ನುಡಿ :
ಕುವೆಂಪು ಕನ್ನಡ ನಾಡಿನ ಒಗ್ಗೂಡುವಿಕೆಗಾಗಿ ಹಾತೊರೆದಂತೆ ಕನ್ನಡ ಭಾಷೆ ಹಾಗೂ ನುಡಿಯ ಬೆಳವಣಿಗೆಗಾಗಿಯೂ ಬಹುವಾಗಿ ಶ್ರಮಿಸಿದವರು. ಅವರ ಕನ್ನಡ ಪರ ನಿಲುವು ಎಳೆ ಎಳೆಯಾಗಿ ಹಂತ ಹಂತವಾಗಿ ಮೇಲೇರಿ ಔನತ್ಯ ಶಿಖರವಾಗಿ ಹೊರಹೊಮ್ಮಿತು. ಅದನ್ನು ಇಲ್ಲಿನ ಅಂಶಗಳು ಪ್ರತಿನಿಧಿಸುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕಕ್ಕೆ ಯಾವುದೇ ರೂಪು ರೇಖೆಗಳಿರಲಿಲ್ಲ. ಭಾಷೆಯ ಬಗೆಗೂ ಹಾಗೇ ಆಗಿತ್ತು. ಒಮ್ಮೆ ಕುವೆಂಪು ಅವರು ತಾವು ಇಂಗ್ಲೀಷಿನಲ್ಲಿ ಬರೆದ ಕವಿತೆಯೊಂದನ್ನು ಐರಿಷ್ ಕವಿ ‘ಜೇಮ್ಸ್ ಕಸಿನ್ಸ್’ಗೆ ತೋರಿಸಿದಾಗ ಅವರು “ನೀನು ಮಾತೃಭಾಷೆಯಲ್ಲಿ ಯಾಕೆ ಬರೆಯಬಾರದು ? ಮಾತೃಭಾಷೆಯಲ್ಲಿ ಬರೆದರೆ ಭಾಷೆಯ ಮೇಲೆ ಒಳ್ಳೆಯ ಹಿಡಿತವಿರುತ್ತದೆ. ನಿನ್ನ ಬರವಣಿಗೆಯೂ ಸಮೃದ್ಧವಾಗುತ್ತದೆ. ಆ ಕಡೆ ಯೋಚಿಸಿ ನೋಡು” ಎಂದರಂತೆ. ಅವರ ಸಲಹೆಯನ್ನು ಚಾಚು ತಪ್ಪದೇ ಅನುಮೋದಿಸಿದ ಕುವೆಂಪು ಕನ್ನಡದಲ್ಲಿ ಬರೆಯಲು ಮುಂದಾದರು. ಇದೇ ಕುವೆಂಪು ಅವರ ಕನ್ನಡ ನುಡಿಯ ಕಡೆಗಿನ ಮೊದಲ ಒಲವು ಎಂದೆನ್ನಬಹುದು. ಅಂದು ಅಡಿಯಿಟ್ಟ ಹೆಜ್ಜೆ ಮುಂದೆ ಮಹಾಮಾರ್ಗವಾಗಿ ಪರಿಣಮಿಸಿತು.
ಕುವೆಂಪು ಅವರ ಬರವಣಿಗೆಯಲ್ಲಿನ ಪ್ರಮುಖ ಅಂಶವೆಂದರೆ ಅವರು ಕನ್ನಡವನ್ನು ಒಂದು ತರಹದ ಶಕ್ತಿ ಎಂದು ರೂಪಿಸುವುದು. ಹಾಗೆಯೇ ಕನ್ನಡವನ್ನು ಹೆಣ್ಣಿಗೆ ಸಮೀಕರಿಸುವುದರ ಮೂಲಕ ಕನ್ನಡ ಭಾಷೆ ಹಾಗೂ ನುಡಿಗೆ ಒಂದು ಮೆರುಗನ್ನು ನೀಡಿದ್ದಾರೆ. ಈ ಹಿನ್ನಲೆಯಲ್ಲಿಯೇ ‘ಸ್ತ್ರೀ’ಯನ್ನು ಸಾಂಪ್ರದಾಯಿಕ ಪರಂಪರೆಯಲ್ಲಿ ಅಮ್ಮ ಎಂದು ಹೇಳುತ್ತಾ ಒಡೆತನದ ಯಜಮಾನಿಕೆಗೆ ಪ್ರತಿ ಯಜಮಾನಿಕೆಯನ್ನು ರೂಪಿಸಿದ್ದಾರೆ. ಹಾಗಾಗಿಯೇ “ಕನ್ನಡಕೆ ಹೋರಾಡು ಕನ್ನಡದ ಕಂದಾ” ಎಂಬ ಕವಿತೆ ರೂಪಿಸಿದ್ದಾರೆ. ಸ್ವಾತಂತ್ರ್ಯಾ ಪೂರ್ವದಲ್ಲಿ ಕುವೆಂಪು ಹೊಂದಿದ್ದ ಇಂತಹ ಆಲೋಚನೆಗಳು ಮುಂದೆ ಕನ್ನಡ ನಾಡು – ನುಡಿಯನ್ನು ಸಮೃದ್ಧವಾಗಿ ಬೆಳೆಸಲು ನೆರವಾದುದನ್ನು ಗುರುತಿಸಬಹುದು.
ಸ್ವಾತಂತ್ರ್ಯಾ ನಂತರದಲ್ಲಿ ಕೇಂದ್ರ ಸರಕಾರ ರೂಪಿಸಿದ ‘ಹಿಂದಿ’ ಆಡಳಿತ ಭಾಷೆಯಾಗಬೇಕು ಎಂಬ ನಿಲುವನ್ನು ಕುವೆಂಪು ಬಲವಾಗಿ ಖಂಡಿಸಿದರು. ಇದರೊಂದಿಗೆ ಕೇಂದ್ರದ ‘ತ್ರಿಭಾಷಾ ಸೂತ್ರ’ ಅಂದರೆ ಪ್ರಾದೇಶಿಕ ಭಾಷೆ, ಹಿಂದಿ, ಇಂಗ್ಲೀಷ್ ಭಾಷೆಗಳ ಅಳವಡಿಕೆಯನ್ನು ಖಂಡಿಸಿದರು. ಕುವೆಂಪು ಅವರು ಭಾಷೆಗಳನ್ನು ನಿರ್ಲಕ್ಷ್ಯ ಮಾಡಿದ್ದನ್ನು ಅವರ ಪ್ರಕಾರ ಆಯಾ ಪ್ರಾಂತ್ಯದಲ್ಲಿ ಆಯಾ ಪ್ರಾಂತ್ಯದ ಭಾಷೆಗೆ ಪ್ರಥಮ ಸ್ಥಾನ ನೀಡಬೇಕು, ಹಾಗೆಯೇ ಅಖಿಲ ಭಾರತೀಯ ಭಾಷೆಗೆ ದ್ವಿತೀಯ ಸ್ಥಾನ ನೀಡಬೇಕು ಎಂಬುದು ಅವರ ನಿಲುವಾಗಿತ್ತು. ಕರ್ನಾಟಕದಲ್ಲಿ ಆಡಳಿತ ಭಾಷೆ ಹಾಗೂ ಶಿಕ್ಷಣದ ಮಾಧ್ಯಮವೂ ಕನ್ನಡವಾಗಬೇಕು, ಹಾಗಾದಾಗಲೇ ಕನ್ನಡ ನಾಡು ನುಡಿಯು ಉತ್ತುಂಗದ ಹಂತವನ್ನು ತಲುಪಬಹುದೆಂದು ಕುವೆಂಪು ಅವರು ಭಾವಿಸಿದ್ದರು. ಅಷ್ಟೇ ಅಲ್ಲದೇ ಕನ್ನಡ ಆಡಳಿತ ಭಾಷೆಯಾದಾಗಲೇ ಶಿಕ್ಷಣದ ಸರ್ವಸಮಸ್ಯೆಗಳೂ ಬಗೆಹರಿಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.
ಅಂದು ಮತ್ತು ಇಂದು ಬಹುಬೇಗನೇ ಚರ್ಚೆಗೆ ಒಳಗಾಗುವ ಸಂಗತಿ ಎಂದರೆ ಭಾಷಾ ಸೂತ್ರ. ಕೆಲವರು ಭಾರತಕ್ಕೆ ತ್ರಿಭಾಷಾ ಸೂತ್ರ ಅಗತ್ಯ ಎಂದರೆ ಕುವೆಂಪು ಅವರು ಅದರ ಸ್ಥಾನದಲ್ಲಿ ಬರಬೇಕಾದ್ದು ದ್ವಿಭಾಷಾ ಸೂತ್ರ ಎನ್ನುತ್ತಾ ಭರತ ಖಂಡದ ಯಾವ ವಿದ್ಯಾರ್ಥಿಯ ಮೇಲೂ ಯಾವ ಭಾಷೆಯನ್ನೂ ಬಲವಂತವಾಗಿ ಹೇರುವ ಪ್ರಯತ್ನ ಮಾಡಬಾರದೆಂದು ಅಭಿಪ್ರಾಯ ಪಟ್ಟರು. “ಭರತಖಂಡಕ್ಕೆ ಈಗ ಬೇಕಾಗಿರುವುದು ಬಹುಭಾಷಾ ಸೂತ್ರ. ನಮ್ಮ ಜನ ಕಲಿಯಬೇಕಾಗಿರುವುದು ಇಂಗ್ಲೀಷ್ ಭಾಷೆಯೊಂದನ್ನು ಮಾತ್ರವಲ್ಲ. ರಷ್ಯನ್, ಜಪಾನಿ, ಜರ್ಮನ್, ಫ್ರೆಂಚ್ ಮುಂತಾದ ಅನೇಕ ಪ್ರೌಢ ಭಾಷೆಗಳನ್ನು ವೈಜ್ಞಾನಿಕ ಅವಶ್ಯಕತೆಗಳಿಗೆ ಕಲಿಯಬೇಕಾಗಿದೆ” ಅಂದದ್ದು ಇಂದಿಗೂ ವಾಸ್ತವವಾಗಿಯೇ ಇದೆ. ಪ್ರಸ್ತುತಕ್ಕೆ ಅದರ ಗತ್ಯತೆಯು ಇದೆ ಎನ್ನಬಹುದು.
ಮಹಾತ್ಮ ಗಾಂಧಿಯವರು ಹೇಳಿದಂತೆ “ದೇಶಭಾಷೆಗಳಲ್ಲಿ ಶಿಕ್ಷಣ ದೊರೆಯದಿದ್ದಲ್ಲಿ ವಿದ್ಯಾಭ್ಯಾಸ ಮರಳಿನ ಮೇಲೆ ಕಟ್ಟಡ ಕಟ್ಟಿದ ಕಟ್ಟಡ ಸೌಧದಂತಾಗುತ್ತಿತ್ತು”, ಹಾಗಾಗಿ ದ್ವಿಭಾಷಾ ಶಿಕ್ಷಣದ ಅಗತ್ಯತೆಯನ್ನು ಕುವೆಂಪು ಸಾರಿಸಾರಿಯಾಗಿ ಪುನರುಚ್ಚರಿಸಿದರು. ವಿಜ್ಞಾನವನ್ನು, ತಾಂತ್ರಿಕ ಜ್ಞಾನವನ್ನು ಕನ್ನಡದಲ್ಲಿ ಹೇಳಲಾಗುವುದಿಲ್ಲ ಎಂಬುದು ಮಂದವರ್ತಿಗ¼, ಅಸಲರ ದುರ್ಬಲರ ಮತ್ತು ವಿದ್ಯಾದ್ರೋಹಿಗಳ ಕನವರಿಕೆ ಮತ್ತು ಅತ್ಯಂತ ಹಾಸ್ಯಾಸ್ಪದವಾದ ತಲೆಹರಟೆ ಎಂಬುದನ್ನು ನಮ್ಮ ವಿದ್ವಾಂಸರು ತಮ್ಮ ಕನ್ನಡದ ವೈಜ್ಞಾನಿಕ ಮತ್ತು ಮಾನವಿಕ ಗ್ರಂಥಗಳ ಮೂಲಕ ಸಾರಿ ಹೇಳಿದ್ದಾರೆ. ಹೀಗಿದ್ದರೂ ಕನ್ನಡ ಭಾಷೆ ಮತ್ತು ಮಾಧ್ಯಮವನ್ನು ಹಿಯ್ಯಾಳಿಸುತ್ತಿದ್ದ ಜನಕ್ಕೆ ಪ್ರತ್ಯತ್ತುರವಾಗಿ, ಪಾರಿಭಾಷಿಕ ಪದಗಳ ಅಭಾವವೇ ಪಠ್ಯ ಪುಸ್ತಕಗಳ ರಚನೆಗೆ ದೊಡದಡ ಅಡ್ಡಿ ಎನ್ನುತ್ತಿದ್ದ ಕಾಲದಲ್ಲಿ ಮೂಡಿಬಂದ ಪ್ರಬುದ್ಧ ಕರ್ನಾಟಕದ ಚಿನ್ನದ ಸಂಚಿಕೆಯ ಸುಮಾರು 1600 ಪುಟಗಳ ವಿಜ್ಞಾನ ವಿಶೇಷಾಂಕವನ್ನು ಬಿಡುಗಡೆಗೊಳಿಸುತ್ತಾ ಕುವೆಂಪು ಅವರು ಆಡಿದ ಮಾತುಗಳನ್ನು ಖ್ಯಾತ ಸಾಹಿತಿಯಾದ ದೇ. ಜ. ಗೌ ಈ ರೀತಿ ಚಿತ್ರಿಸಿದ್ದಾರೆ. “ಕುವೆಂಪು ಅವರು ಬೃಹತ್ ಗಾತ್ರದ ಎರಡು ಸಂಪುಟಗಳನ್ನು ಹಿಡಿದು ಕೈಗಳನ್ನು ಮೇಲೆತ್ತಿ, ಕನ್ನಡದಲ್ಲಿ ಶಬ್ಧ ಸಂಪತ್ತಿಲ್ಲ, ವಿಜ್ಞಾನವನ್ನು ಕನ್ನಡದಲ್ಲಿ ಬರೆಯಲೂ, ಹೇಳಲೂ ಆಗುವುದಿಲ್ಲ ಎನ್ನುವವರ ತಲೆಗೆ ಇವುಗಳಿಂದ ಹೊಡೆಯಿರಿ” ಎಂದ ಮಾತುಗಳು ಕನ್ನಡ ಭಾಷೆ ಮತ್ತು ನುಡಿ ಸಮೃದ್ಧವಾದದ್ದು, ಸಂಪದ್ಭರಿತವಾದದ್ದು ಎಂಬುದನ್ನು ಸಾಬೀತು ಪಡಿಸಲು ಸಹಕಾರಿಯಾಯಿತು ಎಂಬುದನ್ನು ಇಲ್ಲಿ ಗುರುತಿಸಬಹುದು.
ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನೇಮಕಗೊಂಡ ಅನಂತರ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಮಾಧ್ಯಮ ಅಳವಡಿಕೆಗೆ ಮುಂದಾದರು. ವಿಶ್ವವಿದ್ಯಾನಿಲಯದ ಧ್ಯೇಯೋದ್ದೇಶಗಳಿ ಸಫಲವಾಗಬೇಕಾದರೆ ಸರ್ವಶ್ರೇಣಿಯಲ್ಲೂ ದೇಶಭಾಷೆ, ಶಿಕ್ಷಣ ಮಾಧ್ಯಮವಾಗಬೇಕಾದುದು ಅಗತ್ಯವಾಗಿದೆ. ಅದಕ್ಕಾಗಿ ಕನ್ನಡ ಮಾಧ್ಯಮವೂ ಅನುಷ್ಠಾನವಾಯಿತು. ಆಗ ವಿಶ್ವವಿದ್ಯಾನಿಲಯ ಕೂಡ ದೇಶಭಾಷೆಗಳಲ್ಲಿ ಪಾರಿಭಾಷಿಕ ಅಥವಾ ವೈಜ್ಞಾನಿಕ ಪದಗಳ ದಾರಿದ್ರ ಗ್ರಂಥಗಳ ಅಭಾವದ ಕಾರಣ ಹೇಳಿ ಹಿಂದೆ ಸರಿಯುತ್ತಿದ್ದುದನ್ನು ಸರಿಪಡಿಸಲು ಹಲವಾರು ಉಪಯುಕ್ತ ಗ್ರಂಥಗಳ ರಚನೆಗೆ ಮುಂದಾಗುವಂತೆ ಮಾಡಿದರು. ಈ ರೀತಿ ರಚನೆಗೊಂಡ ಪುಸ್ತಕಗಳನ್ನು ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳೂ ಕೊಂಡು ಓದಿ ಜ್ಞಾನವನ್ನು ಪಡೆಯುತ್ತಿದ್ದರು ಎಂದು ಹೇಳುವ ಕುವೆಂಪು ಅವರ ಬರವಣಿಗೆ ಕನ್ನಡ ನುಡಿಯ ಅಗ್ಗಳಿಕೆಯನ್ನು ಸೂಚಿಸುತ್ತದೆ.
ಇದೆಲ್ಲದರ ಹಿನ್ನಲೆಯಲ್ಲಿ ಕುವೆಂಪು ಅವರು ವಿಶ್ವವಿದ್ಯಾನಿಲಯದ ಕರ್ತವ್ಯವನ್ನು ಬೋಧನಾಂಗ, ಸಂಶೋಧನಾಂಗ ಮತ್ತು ಪ್ರಸರಾಂಗ ಎಂಬ ಮೂರು ವಿಭಾಗಳಲ್ಲಿ ನಿರ್ವಹಿಸಬೇಕೆಂದು ರೂಪುರೇಖೆಯನ್ನು ರಚಿಸಿದರು. ಆ ಮೂಲಕ ಪ್ರಸರಾಂಗ ಕನ್ನಡ ಪಠ್ಯಪುಸ್ತಕ ಹಾಗೂ ಇತರೆ ಗ್ರಂಥಗಳನ್ನು ಹೊರತರುವಂತೆ ಮಾಡಿದರು. ಇದು ಕನ್ನಡ ನುಡಿ ಹಾಗೂ ಭಾಷೆಯ ಬೆಳವಣಿಗೆಗೆ ಎಡೆಮಾಡಿಕೊಟ್ಟಿತು. ಕರ್ನಾಟಕದ ಹಾಗೂ ಭಾರತೀಯ ವಿಶ್ವವಿದ್ಯಾನಿಲಯಗಳಿಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಮೊದಲಾದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಮಾದರಿಯಾಯಿತು. ವಿಶ್ವವಿದ್ಯಾನಿಯಲದಲ್ಲಿ ಕನ್ನಡದ ಭವಿಷ್ಯ ಅಲುಗಾಡುತ್ತಿದ್ದ ಕಾಲದಲ್ಲಿ ಕನ್ನಡದ ಉದ್ಧಾರಕ್ಕೆ ಅಸ್ತಿಭಾರ ಹಾಕಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ.
ಈ ಕನ್ನಡ ನುಡಿಯ ಬೆಳವಣಿಗೆಯ ಹೋರಾಟದಲ್ಲಿ ಕುವೆಂಪು “ಅಮಲನ ಕಥೆ”ಯ ಮೊದಲ ರಚನೆಯಿಂದ ಶ್ರೀರಾಮಾಯಣ ದರ್ಶನಂ ವರೆಗೆ ಕನ್ನಡ ನುಡಿ ಏರಿದ ರೀತಿ ಅದಮ್ಯವಾದದ್ದು. ಒಟ್ಟಾರೆಯಾಗಿ ಅವರ ಸಾಹಿತ್ಯ ಕೃಷಿಯಲ್ಲಿ ಕನ್ನಡ ನುಡಿಯನ್ನು ಒರೆಗೆ ಹಚ್ಚಿರುವ ರೀತಿ, ಪದ ಸಂಪತ್ತಿನ ಬಳಕೆ ಯಾವ ಭಾಷೆಗೂ ಕನ್ನಡ ಪದ ಸಂಪತ್ತು ಕಡಿಮೆಯಿಲ್ಲ ಎಂಬುದನ್ನು ತಿಳಿಸುತ್ತದೆ. ಕುವೆಂಪು ಅವರ ಪದ ಬಳಕೆಯೇ ಒಂದು ಬೃಹತ್ ನಿಘಂಟು ಆಗುವ ಮಟ್ಟಕ್ಕೆ ಬೆಳೆದಿದೆ ಎಂದರೆ ಅವರಲ್ಲಿನ ಕನ್ನಡ ನುಡಿಯ ಶಕ್ತಿ ಎಷ್ಟಿತ್ತು ಎಂಬುದನ್ನು ಸಾದರ ಪಡಿಸುತ್ತದೆ.
ಇದೆಲ್ಲದರ ಹಿನ್ನಲೆಯಲ್ಲಿ ಕುವೆಂಪು ಅವರನ್ನು ನೋಡಿದಾಗ ಯಾವುದೇ ಪ್ರಶಸ್ತಿಗಾಗಿ ಅಥವಾ ಸನ್ಮಾನಕ್ಕಾಗಿ ಹಾತೊರೆದವರಲ್ಲ. ಕನ್ನಡದ ಹೋರಾಟಕ್ಕಾಗಿ, ಸಾಹಿತ್ಯದ ಏಳಿಗೆಗಾಗಿ ಶ್ರಮಿಸುವ ರೀತಿ ಹಾಗೂ ಅವರ ಬರವಣಿಗೆಗಳು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗುವಂತೆ ಮಾಡಿದೆ. ಇದೆಲ್ಲದರ ಹಿಂದೆ ಪ್ರೇರಕ ಶಕ್ತಿಯಾಗಿ ನಿಂತದ್ದು ಕನ್ನಡ ನುಡಿ. ಈ ಗೌರವದ ಹಿನ್ನಲೆಯಲ್ಲಿಯೇ ಹಿರೇ ಕೂಡಿಗೆಯಲ್ಲಿ ಕುವೆಂಪು ಮಂದಿರವನ್ನು ನಿರ್ಮಿಸಲಾಗಿದೆ. ಕುಪ್ಪಳ್ಳಿಯಲ್ಲಿ ಕುವೆಂಪು ಅಧ್ಯಯನ ಕೇಂದ್ರ ಸ್ಥಾಪಿಸಲಾಗಿದೆ. ಕುಪ್ಪಳ್ಳಿಯ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಲಾಗಿದೆ. ಅವರ ಹೆಸರಿನ ವಿಶ್ವವಿದ್ಯಾನಿಲಯವನ್ನು ಶಿವಮೊಗ್ಗದಲ್ಲಿ ಪ್ರಾರಂಭಿಸಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಗೆ “ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ” ಎಂದು ಹೆಸರಿಸಲಾಗಿದೆ. ಇವೆಲ್ಲವುಗಳ ಹಿಂದೆ ಕನ್ನಡ ನುಡಿಯ ಬಗೆಗೆ ಕುವೆಂಪು ನೀಡಿದ ಕಾಣಿಕೆ ಬಹಳಷ್ಟಿವೆ.
ಮೇಲಿನ ವಿಷಯಗಳ ನಿರೂಪಣೆಯಲ್ಲಿ ಕುವೆಂಪು ಕಂಡ ನಾಡು – ನುಡಿಯ ಚಿಂತನೆಯ ಕಿರುನೋಟವಷ್ಟೇ ಇದೆ. ಅವರ ಸಾಹಿತ್ಯದ ಅಧ್ಯಯನದ ಆಳಕ್ಕೆ ಇಳಿದಾದ ಕನ್ನಡ ನಾಡು – ನುಡಿಯ ಬಗೆಗೆ ಅವರು ತಳೆದಿದ್ದ ನಿಲುವುಗಳ ಸೂಕ್ಷ್ಮ ಸಂವೇದನೆಗಳ ಅನಾವರಣವಾಗುತ್ತದೆ. ಆದ್ದರಿಂದಲೇ ಅದನ್ನು ಅಗಣಿತವಾದದ್ದು ಎನ್ನಬಹುದು. ಪ್ರಸ್ತುತ ಕಾಲಘಟ್ಟಕ್ಕೆ ಕುವೆಂಪು ಹೊಂದಿದ ನಿಲುವುಗಳ ಅಗತ್ಯತೆ ಅತ್ಯಗತ್ಯವಾಗಿದೆ. ಎಲ್ಲೆಲ್ಲೂ ಪ್ರತ್ಯೇಕತೆಯ ಕೂಗು, ಭಾಷಾ ಸಂಬಂಧಿ ಒಡಕುಗಳು, ಕನ್ನಡಿಗರಲ್ಲಿ ಕನ್ನಡತನದ ಒಡಕುಗಳೇನಿದೆಯೋ ಅದು ಕನ್ನಡಿಗರನ್ನು ಇಂದು ನೋಡುವ ದೃಷ್ಟಿ ಬದಲಾಯಿಸಿದೆ. ಇದು ಬದಲಾಗಬೇಕು. ಕನ್ನಡತನ ಉಳಿಯಬೇಕು. ಕನ್ನಡ ಮನಗಳು ಒಂದಾಗಬೇಕು ಹಾಗೂ ಇದರ ಪ್ರಸ್ತುತತೆಯನ್ನು ಪ್ರತಿಯೊಬ್ಬರೂ ಅರಿಯಬೇಕು. ಹಾಗಾದಾಗ ಮಾತ್ರ ಕುವೆಂಪು ಕಂಡ ಕನಸು ನನಸಾಗುವುದು. ಕುವೆಂಪು ಕಂಡ ಕನ್ನಡದ ಕಂಪು ನಾಡು – ನುಡಿಯ ದೃಷ್ಟಿಯಿಂದ ಅಮರವಾಗಿ ಬೆಳಗುವುದು.