ನೀತಿ ಪ್ರತೀತಿ – ವಿಭಾ ಪುರೋಹಿತ ಅಂಕಣl ಮೃದು ಮಾತಿನಲಿ ಮೆಚ್ಚುಗೆಯೂ ಇರಲಿ

ಜಗತ್ತಿನಲ್ಲಿ ಒಂದೊಂದು ಪ್ರಾಣಿಯಲ್ಲಿ ಒಂದೊಂದು ವಿಶೇಷ ಗುಣಗಳಿವೆ . ಯಾರು ಕೀಳಲ್ಲ ಯಾರು ಮೇಲಲ್ಲ .ಆದುದರಿಂದ ಎಲ್ಲರನ್ನು ಗೌರವ ಭಾವದಿಂದ ಕಾಣುವುದೇ ಸಜ್ಜನರ ಲಕ್ಷಣವಾಗಿದೆ. ಕೊಕ್ಕರೆ ಮತ್ತು ನವಿಲಿನ ಪುಟ್ಟ ಕಥೆಯ ಮೂಲಕ ಇದನ್ನು ತಿಳಿಯಬಹುದು. ಕಾಡಿನ ಬಳಿಯಿರುವ ಸರೋವರದ ತೀರದಲ್ಲಿ ಒಂದು ನವಿಲು ಯಾವಾಗಲೂ ಬಂದು ನೀರು ಕುಡಿಯುತ್ತಿತ್ತು. ನೀರು ಕುಡಿದು ಕಾಡಿಗೆ ಹೋಗುತ್ತಿತ್ತು . ಒಂದು ದಿನ ಸರೋವರದ ಬಳಿ ಇದ್ದಾಗ ಗುಡುಗು ಸಿಡಿಲಿನ ಅಬ್ಬರ ಕೇಳಿಬಂತು. ಆಗ ಅದು ತನ್ನ ಗರಿ ಬಿಚ್ಚಿ ಕುಣಿಯ ತೊಡಗಿತು. ನವಿಲಿನ ಈ ಸುಂದರವಾದ ಕುಣಿತವನ್ನು ಸರೋವರದಲ್ಲಿದ್ದ ಕೊಕ್ಕರೆಯು ನೋಡುತ್ತಿತ್ತು . ಸ್ವಲ್ಪ ಸಮಯದ ನಂತರ ನವಿಲು ಕೊಕ್ಕರೆಗೆ ನಿನಗೆ ನನಗಿರುವಂತಹ ಬಣ್ಣದ ರೆಕ್ಕೆಗಳಿಲ್ಲ. ಬಣ್ಣದ ರೆಕ್ಕೆಗಳು ಇರಬೇಕಿತ್ತು ಎಂದು ನಿನಗೆ ಅನಿಸುವುದಿಲ್ಲವೇ? ಎಂದು ಕೇಳಿತು.

ನವಿಲು ಸಹಜವಾಗಿಯೇ ಕೇಳಿದರೂ ಕೂಡ ಕೊಕ್ಕರೆಗೆ ತನಗೆ ನವಿಲಿನಂತಹ ಬಣ್ಣದ ರೆಕ್ಕೆಗಳು ಇಲ್ಲವೆಂದು ನವಿಲು ಅವಹೇಳನ ಮಾಡುತ್ತಿದೆ, ಎಂದೇ ಭಾವಿಸಿಕೊಂಡಿತು. ಆಗ ಕೊಕ್ಕರೆ ಕಟುವಾಗಿಯೇ ನುಡಿಯಿತು. ಇದಕ್ಕೆ ಉತ್ತರ ಹೇಳುತ್ತಾ ” ಮೇಲೆ- ಕೆಳಗೆ ಹಾರಿ ಹಾರಿ ತೋರಿಸಿತು.ಹಾರಲಿಕ್ಕೆ ಬಾರದ ಬಣ್ಣದ ರೆಕ್ಕೆಗಳು ನಿನಗೆ. ಅವುಗಳಿಂದೇನು ಪ್ರಯೋಜನ? ಅವು ನಿನಗೇ ಇರಲಿ, ನಾನು ಹಾರಬಹುದಾದ ಬಿಳಿ ರೆಕ್ಕೆಗಳನ್ನು ಹೊಂದಿದ್ದೇನೆ . ನನ್ನ ರೆಕ್ಕೆಗಳು ಬಿಳಿಯಾಗಿದ್ದರೂ ಹಾರಲು ಸಾಧ್ಯವಿದೆ . ನಿನಗೆ ನನಷ್ಟು ಮೇಲೆ ಹಾರಲು ಸಾಧ್ಯವಿಲ್ಲ” ಎಂದು ಕೊಕ್ಕರೆ ರೆಕ್ಕೆ ಬಿಚ್ಚಿ ನುಡಿದು ಹಾರಿಹೋಯಿತು. ನವಿಲು ಸಹಜವಾಗಿ ಹೇಳಿದ ಮಾತಿಗೆ ಕೊಕ್ಕರೆಯಿಂದ ಈ ರೀತಿ ಅವಮಾನ ಪಡಬೇಕಾಯಿತು. ಕೊಕ್ಕರೆಯೂ ಸಹ “ಹೌದು ನವಿಲಣ್ಣ ” ಎಂದಿದ್ದರೆ ಆಗುತ್ತಿತ್ತು. ನಂತರ ನಿಧಾನವಾಗಿ ಈ ವಿಷಯ ಕುರಿತು ಚರ್ಚಿಸಬಹುದಿತ್ತು. ಸಹಜ ಮಾತಾದರೂ, ಮಾತಿನಲ್ಲಿ ಹಿತವಿಲ್ಲದ ಕಾರಣ ನವಿಲು ಮತ್ತು ಕೊಕ್ಕರೆ ಮಿತ್ರರಂತಿರ ಬೇಕಾದವರು ಪರಸ್ಪರ ನಿಂದಿಸುತ್ತಾ ದೂರವಾದವು.

ಸ್ನೇಹಿತರೆ ಇಲ್ಲಿ ತಿಳಿದು ಬರುವ ಅಂಶವೇನೆಂದರೆ ಪ್ರತಿಯೊಬ್ಬರಿಗೂ ಒಂದೊಂದು ವಿಶೇಷತೆ ಅಥವಾ ದೈವದತ್ತವಾದ ಒಂದೊಂದು ಅಸಾಮಾನ್ಯ ಗುಣಗಳಿವೆ. ಒಬ್ಬರಲ್ಲಿರುವಂತಹ ವಿಶೇಷ ಪ್ರತಿಭೆ ಇನ್ನೊಬ್ಬರಲ್ಲಿಲ್ಲ. ಪ್ರತ್ಯೇಕ ಪ್ರಾಣಿ ಅಥವಾ ವ್ಯಕ್ತಿಯ ವಿಶೇಷತೆಗಳಿಗೆ ಒಂದು ಸಣ್ಣ ಮೆಚ್ಚುಗೆ ಮನದಲ್ಲಿದ್ದರೆ ಅವರೇ ಉತ್ತಮರು. ನಮ್ಮ ಮನದ ಮತವನ್ನು ಮಾತಿನ ಮೂಲಕವೇ ಹೇಳ ಬೇಕಾಗುವುದು. ಆದ್ದರಿಂದ ಮಾತು ಬಹಳ ಸೂಕ್ಷ್ಮ ನಮ್ಮ ಎದುರುಗಿರುವವರು ಆ ಮಾತನ್ನು ಹೇಗೆ ಪರಿಭಾವಿಸಿ ಕೊಳ್ಳುತ್ತಾರೆ, ಅವರ ಮೇಲೆ ಯಾವ ರೀತಿ ಪರಿಣಾಮವಾಗುತ್ತದೆ? ಎಂಬುದು ಮುಖ್ಯ. ನವಿಲು ಕೊಕ್ಕರೆಯ ಒಳ್ಳೆಯ ವಿಶೇಷ ಗುಣವನ್ನು ಮೊದಲು ಹೇಳಿದ್ದರೆ ಕೊಕ್ಕರೆಗೆ ಸಂತೋಷವಾಗುತ್ತಿತ್ತು. ನಂತರದಲ್ಲಿ ಮಿತ್ರತ್ವ ಬೆಳೆದು ಗಟ್ಟಿಯಾದ ಮೇಲೆ ತುಸು ಸಲಿಗೆಯಿಂದ ಮಾತಾಡುವಾಗ ಅದರಲ್ಲಿ ಇಲ್ಲದ ಗುಣವನ್ನು ನಿಧಾನವಾಗಿ ಹೇಳಬಹುದಾಗಿತ್ತು. ಮೊದಲ ಮಾತಿನಲ್ಲಿಯೇ ಅದರಲ್ಲಿರುವ ಸ್ವಾಭಾವಿಕಗುಣವನ್ನು ಅಲ್ಲಗಳೆದಾಗ ಯಾರಿಗಾದರೂ ಬೇಸರ, ಕೋಪ ಬರುವುದು ಸಹಜ. ಮೊದಲು ವ್ಯಕ್ತಿಯಲ್ಲಿರುವ ಒಳ್ಳೆಯ ಗುಣಗಳಿಗೆ ಮೆಚ್ಚುಗೆ ಕೊಡಿ ಅದು ಕೂಡ ಪ್ರಮಾಣಿಕವಾದದ್ದಾಗಿರಲಿ ಮತ್ತು ಸತ್ಯವಾಗಿರಲಿ.

ವೃಥಾ ಸುಳ್ಳು ಹೊಗಳಿಕೆಯಾಗುವುದು ಬೇಡ. ನಮ್ಮ ಮಾತಿನಲ್ಲಿ ಮಧುರತೆ ಮತ್ತು ಪ್ರಾಮಾಣಿಕತೆ ಎರಡು ಇರುವುದು ಅವಶ್ಯಕ. ಇದೇ ನಮ್ಮ ಜೀವನದ ತಪಸ್ಸು ಎಂದು ಹಿರಿಯರು ಹೇಳುವ ಮಾತಿದೆ ಮಾತು ನಮ್ಮ ಮನಸ್ಥಿತಿಯನ್ನು ಹೇಳುತ್ತದೆ ನಿಜ. ಹಾಗಾಗಿ ಬೇರೆಯವರ ಮನಸ್ಥಿತಿ ನಮಗೆ ಗೊತ್ತಿರುವುದಿಲ್ಲ. ಆದ್ದರಿಂದ ನಿಧಾನವಾಗಿ, ನಾಜೂಕಾಗಿ ,ಹಿತಮಿತವಾಗಿ ಮೊದಲು ಮಾತನಾಡಿಸಿ ಅವರ ಮನಸ್ಸನ್ನು ಅರಿತುಕೊಳ್ಳಲು ಪ್ರಯತ್ನಿಸ ಬೇಕಾಗುತ್ತದೆ. ಅದಕ್ಕಾಗಿ ನಾವು ನಮ್ಮ ಮಾತಿನಲ್ಲಿ ನಿಯಂತ್ರಣವನ್ನು ಇಟ್ಟುಕೊಳ್ಳಬೇಕು . ಅದಕ್ಕೆ ಅಲ್ಲವೆ ಮಾತು ಹೇಗಿರಬೇಕೆಂದು ಬಸವಣ್ಣನವರ ವಚನವು ಚೆನ್ನಾಗಿ ಹೇಳುತ್ತದೆ.

ಮೃದುವಚನವೇ ಸಕಲ ತಪಂಗಳಯ್ಯ
ಮೃದು ವಚನವೇ ಸಕಲ ಜಪಂಗಳಯ್ಯ
ಸದುವಿನಯವೇ ಸದಾಶಿವನ ಒಲುಮೆಯಯ್ಯ ಕೂಡಲಸಂಗಯ್ಯ ನಂತಲ್ಲನಯ್ಯ

ಉದ್ದೇಶಪೂರ್ವಕವಾಗಿ ಇಲ್ಲದಿದ್ದರೂ ಒಮ್ಮೊಮ್ಮೆ ಯಾವುದೋ ಸಂದರ್ಭದಲ್ಲಿ ಏನೂ ಮಾತನಾಡಿ ಬಿಡುತ್ತೇವೆ. ನಂತರ ಆಭಾಸವಾಗಿ ಪೇಚಾಡುತ್ತೇವೆ. ಒಟ್ಟಿನಲ್ಲಿ what to talk,when to talk and where to talk ಅನ್ನುವುದು ಬಹಳ ಮುಖ್ಯವಾಗುತ್ತದೆ. ಕೆಲವೊಮ್ಮೆ ಎಷ್ಟೋ ಸಲ ನಾವು ಮಾತನಾಡಿದ ಸಮಯ ಮತ್ತು ಸಂದರ್ಭ ತಪ್ಪಾಗಿಬಿಡುತ್ತದೆ .ಹೇಗೆ ಮಾತನಾಡಬೇಕಿತ್ತು ? ಹೀಗೆ ಮಾತನಾಡಬಾರದಾಗಿತ್ತೇನೋ? ಅವರು ಏನೆಂದುಕೊಂಡರೋ? ಎಂದು ಆ ಸಮಯ ಮೀರಿ ಹೋದ ಮೇಲೆ ಕಳವಳ ಪಡುತ್ತೇವೆ !

ಎಷ್ಟು ಮಾತನಾಡಬೇಕು ಎನ್ನುವುದು ಕೂಡ ಮುಖ್ಯವಾಗುತ್ತದೆ. ಹಿತ ಮತ್ತು ಮಿತವಾದ ಮಾತು ಎಲ್ಲರಿಗೂ ಇಷ್ಟವಾಗುವಂಥದ್ದು. ಮಾತಿನಲ್ಲಿ ಸತ್ಯಾಂಶವಿದ್ದರೂ ನಿಷ್ಠುರವಾಗಿ ಹೇಳಿದಾಗ , ಮಾತು ಕಹಿಯೆನಿಸಿ ಆಗಬೇಕಾದ ಜರೂರಿ ಕೆಲಸವು ಕೈ ತಪ್ಪಿ ಹೋಗಬಹುದು. ಆದ್ದರಿಂದ ನಮ್ಮ ಒಂದು ಮಾತು ಕೂಡ ಬಹಳ ಮುಖ್ಯವಾಗುತ್ತದೆ “ಮಾತು ಕುಲವ ನರುಹಿತು” “ನುಡಿದರೆ ಲಿಂಗ ಮೆಚ್ಚಿ ಅಹುದು ಅಹುದು ಎನಬೇಕು” ಎನ್ನುವುದು ನೂರಕ್ಕೆ ನೂರಷ್ಟು ಸತ್ಯವಾದದ್ದು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter