ಅಯಾಚಿತ (ಮಿನಿಕಥೆ )
ಕನ್ನಡಕವೇರಿಸಿ ಜಪಸರದ ಪಕ್ಕವಿರುವ ಎರಡು ಕಾಗದಗಳನ್ನೂ ಎತ್ತಿಕೊಂಡು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿದ ವಿದ್ವಾನ್ ವೆಂಕಟ ಜೋಯಿಸರು “ನಿಮ್ಮ ಹುಡುಗಿಗೆ ಗುರುಬಲ ಬಂದು ಆಗಲೇ ವರ್ಷ ಕಳೆದಿದೆ. ಹುಡುಗನ ಜಾತಕದೊಂದಿಗೆ ಹತ್ತಕ್ಕೆ ಹತ್ತು ತಾಳೆ ಆಗ್ತಿದೆ, ಇನ್ನು ಬೇರೆ ವರ ಬರುತ್ತೆ ಅಂತ ಕಾಯುವುದರಲ್ಲಿ ಅರ್ಥವಿಲ್ಲ ಈ ಕಾರ್ತೀಕ ಮಾಸದಲ್ಲೇ ಮದುವೆ ಮುಗಿಸಿಬಿಡಿ ” ಎನ್ನುತ್ತ ಉಮಾಪತಿ ಕೈಗೆ ಮಂತ್ರಾಕ್ಷತೆ ಕೊಟ್ಟಿದ್ದೇ ತಡ ಅವಸವಸರವಾಗಿ ಮಗಳು ಆಶಾರಾಣಿಯ ( ಇದೀಗ ಹದಿನೆಂಟು ತುಂಬುತ್ತಿರುವ ) ಮದುವೆ ಅದೇ ಊರಿನ ಭಾರಿ ಕುಳ ತುದಿ ಮನೆಯ ಶ್ರೀನಿವಾಸನ ಮಗ ಪೃಥ್ವಿರಾಜ ನೊಡನೆ ನಿಶ್ಚಯಿಸಿ ಬಿಟ್ಟರು.
ಅದಾದ ಒಂದೇ ತಿಂಗಳಲ್ಲಿ ಒಂದು ಶುಭಮುಹೂರ್ತದಲ್ಲಿ ಮನೆಯಂಗಳದ ಚಪ್ಪರದಲ್ಲಿ ಶಾಸ್ತ್ರೋಕ್ತವಾಗಿ ವಿವಾಹ ಕಾರ್ಯ ವಿಜೃಂಭಣೆಯಿಂದ ಮುಗಿದೇ ಹೋಯಿತು.
ನಂತರ ಉಳಿದಿದ್ದು ಸಂಜೆ ಗೋಧೂಳಿ ಮುಹೂರ್ತದಲ್ಲಿ ಬೀಗರ ಮನೆಯಲ್ಲಿ ವಧುಪ್ರವೇಶ ಕಾರ್ಯಕ್ರಮ.
ಗಂಡುಪಾಳ್ಯವೇ ತುಂಬಿದ್ದ ಕೂಡು ಕುಟುಂಬದಲ್ಲಿ ಎಲ್ಲರ ಆಶಾಭಾವದಿ ಜನಿಸಿ, ಯಾವ ಕುಂದುಕೊರತೆ ಕಾಣದೆ ರಾಣಿಯಂತೆ ಬೆಳೆದ ಮುದ್ದು ಹುಡುಗಿ ಮತ್ತೊಬ್ಬರ ಮನೆಯ ಸೊಸೆಯಾಗಿ ಹೊಸ್ತಿಲು ತುಳಿಯುವ ಪ್ರಮುಖ ಘಟ್ಟವದು. ತಮ್ಮ ಕರುಳ ಕುಡಿಯನ್ನ ಪುರೋಹಿತರ ಸಮ್ಮುಖದಲ್ಲಿ ನಂಬಿಕೆಯಿಂದ ಬೇರೆಯವರ ಕೈಗೆ ಒಪ್ಪಿಸುವಾಗ ಅಪ್ಪ, ಅಮ್ಮನಾದಿಯಾಗಿ ಸಭೆಯಲ್ಲಿ ನೆರೆದ ನೆಂಟರಿಷ್ಟರೆಲ್ಲ ಭಾವುಕತನದಿ ಬಳಬಳನೆ ಕಣ್ಣೀರು ಸುರಿಸುತ್ತಿದ್ದರೆ, ಜಗಮಗಿಸುವ ದೀಪಗಳಿಂದ ಅಲಂಕೃತವಾದ ಮಂಟಪದಡಿ ಮದುಮಗಳು ಇದ್ಯಾವ ಪರಿವೆಯೇ ಇಲ್ಲದೆ ಸ್ನೇಹಿತನಂತೆ ತೋರುತ್ತಿದ್ದ ಮದುಮಗನ ಸಾಂಗತ್ಯದಿ ಸಂತಸ ಸಾಗರದಲ್ಲಿ ತೇಲುತ್ತಿದ್ದಳು!
ಭರ್ಜರಿ ಮದುವೆ ಗೌಜು ಮುಗಿಯುತ್ತಿದ್ದಂತೆ ಮದುಮಗಳು ಮರಳಿ ತನ್ನ ಹುಡುಗನೊಂದಿಗೆ ಮೊದಲ ಬಾರಿ ತವರಿಗೆ ಬರುವ ಸಡಗರದ ಸಮಯ ಬಂದೇ ಬಿಟ್ಟಿತು. ಹೊಸ ಮದುವೆ ಜೋಡಿಗಳು ಹೆಬ್ಬಾಗಿಲಿಗೆ ಅಡಿ ಇಡುತ್ತಿದ್ದಂತೆ ಮನೆಮಂದಿಯೆಲ್ಲಾ ಸೇರಿ ಅದ್ದೂರಿಯಿಂದ ಸ್ವಾಗತಿಸಿ ನವ ವಧುವರರಿಗೆ ಹಾನ ಮಾಡಿ ಚೆಲ್ಲಿ, ವಿಶೇಷ ಆಸನದಲ್ಲಿ ಕೂರಿಸಿದರು. ಹುಡುಗಿಯ ಅಮ್ಮ, ದೊಡ್ಡಮ್ಮ, ಚಿಕ್ಕಮ್ಮ ಎಲ್ಲ ಸೇರಿ ಬಲು ಸಂತಸದಿಂದ “ರಾಣಿ ಆರಾಮ? ನಿಮ್ಮನೆಯಲ್ಲಿ ಎಲ್ಲ ಕ್ಷೇಮವೇ? ಎಂದೆಲ್ಲ ತಲಾ ಒಬ್ಬೊಬ್ಬರು ಪ್ರಶ್ನಿಸಿ ಉಪಚರಿಸುತ್ತಿರಲು. ಮುಗ್ಧೆ ರಾಣಿಗೆ ಈ ಹೊಸಬಗೆಯನ್ನು ನೋಡಿ ಒಂದು ಬಗೆಯ ಮುಜುಗರದಿಂದ ಆಶ್ಚರ್ಯ ಚಕಿತಳಾಗಿ ಅಂಕಣದ ಮನೆಯ ಸುತ್ತ ಮುತ್ತ ಕಣ್ಣಾಡಿಸ ತೊಡಗಿದಳು. ಅದಕ್ಕೆ ಪ್ರತ್ಯುತ್ತರವಾಗಿ ಎಂಬಂತೆ ಅರಮನೆಯಂತೆ ಸಿಂಗರಿಸಿದ ಬಣ್ಣದ ಗೋಡೆಗಳು, ಕಂಬಗಳೆಲ್ಲ “ರಾಣಿ ನಿನಗೆ ಮದುವೆಯಾಯಿತು” ಎಂದು ಕೂಗಿ ಪ್ರತಿಧ್ವನಿಸುವಂತಿತ್ತು.
ಹೌದು, ಕಾಲುಕಡಗ ತೊಟ್ಟು ತನ್ನ ಅಂಬೆಗಾಲಿಕ್ಕ ದಿನದಿಂದ ಹಿಡಿದು ಮೊನ್ನೆ ಮಾಂಗಲ್ಯ ಧಾರಣೆಯಾಗುವ ತನಕ ಕೈಬಳೆಯ ನಾದ ಹೊಮ್ಮಿಸಿ, ಗೆಜ್ಜೆ ಕಾಲಲ್ಲಿ ಮೂಲೆ ಮೂಲೆಯಲ್ಲೂ ಕುಣಿದು ಕುಪ್ಪಳಿಸಿದ ರಾಣಿ ಆ ಮನೆಗೆ ಇಂದು ತಾನೆ ಉಪಚಾರದ ಅತಿಥಿಯಾಗಿದ್ದಳು!ಕುಸುಮಾ.ಜಿ.ಭಟ್
ಸಾಗರ
2 thoughts on “ಅಯಾಚಿತ”
ಕಥೆ ಮೂರ್ತ ಆಗುವುದಿಲ್ಲ ಕೇವಲ ಒಂದ ಭಾವದ ಗೀಟು ಎಳೆದಂತಿದೆ ಕಥೆ ಬರಿ ವರ್ಣನೆಯಾಗಬಾರದು ಜೀವತುಂಬಿದಂತಿರಬೇಕು
ನೀಳ್ಗತೆಯನ್ನು ಕಿರುಗತೆಯಾಗಿ ಬರೆಯಲು ಮಾಡಿರುವ ಸಾರ್ಥಕ ಪರಿಶ್ರಮ ಪ್ರಶವಂಶನಿಯ , ಅಭಿನಂದನೀಯ . ಮುಂಬರುವ ಕೃತಿಗಳಿಗೆ ಹಾರ್ದಿಕ ಸ್ವಾಗತ ಶುಭಹಾರೈಕೆಗಳು .ಪ್ರತಿಭಾವಂತ ಲೇಖಕರ ಕಥೆಯನ್ನು ಪ್ರಕಟಿಸಿದ ವಿಶ್ವಧ್ವನಿಗೆ ಧನ್ಯವಾದಗಳು
