ಪ್ರಕೃತಿಯಲ್ಲಿ ಕೋಮಲ- ಕಠೋರ ; ಸುಂದರ- ರೌದ್ರಗಳೆಲ್ಲವೂ ಮಿಲನಗೊಂಡಿದೆ. ಇದೊಂದು ಅದ್ಭುತ ಜಗತ್ತು. ಅಂತೆಯೇ ಮಾನವನು ಕೂಡ ಪ್ರಕೃತಿಯ ಒಂದು ಭಾಗವಲ್ಲವೇ ನಮ್ಮೊಳಗೂ ಕೂಡ ಸುಕೋಮಲ ಭಾವ ಹಾಗೂ ಕಠೋರತೆಗಳೆರಡೂ ಇವೆ. ಲೋಕ ವ್ಯಾಪಾರದಲ್ಲಿ ಮನುಷ್ಯ ಲೌಕಿಕ ಅನುಭವಗಳಿಗೆ ಒಡ್ಡಿಕೊಳ್ಳುತ್ತಿರುತ್ತಾನೆ. ಆಗ ನಮ್ಮ ಮನಸಿನ ಹಲವಾರು ಮುಖಗಳು ಅನಾವರಣಗೊಳ್ಳುತ್ತವೆ. ನೇತಾಜಿ ಸುಭಾಷ್ ಚಂದ್ರ ಬೋಸರ ಬಾಲ್ಯದಲ್ಲಿ ನಡೆದ ಒಂದು ಘಟನೆ ನೆನಪಾಗುತ್ತದೆ. ಬಾಲಕ ಸುಭಾಸರು ಶಾಲೆಗೆ ಹೋದಾಗ ಒಂದು ದಿನ ಅವರ ತಾಯಿ ಮಗನ ಕೊಠಡಿಗೆ ಹೋಗುತ್ತಾರೆ. ಅಲ್ಲಿ ಅವರ ಪುಸ್ತಕಗಳಿಗೆಲ್ಲ ಇರುವೆಗಳು ಮುತ್ತಿಕೊಂಡಿರುತ್ತವೆ. ಅದನ್ನೆಲ್ಲ ಶುಚಿಗೊಳಿಸಿ, ಶಾಲೆಯಿಂದ ಬಂದ ಮೇಲೆ ಈ ಕುರಿತು ತಾಯಿ ಸುಭಾಸರನ್ನು ಪ್ರಶ್ನಿಸುತ್ತಾರೆ.
ಆಗ ಬಾಲಕ ಸುಭಾಷ್ ದುಃಖಿಸುತ್ತಾರೆ. ಕಾರಣ ಕೇಳಿದಾಗ ತಾಯಿಗೆ ಆಶ್ಚರ್ಯವಾಗುತ್ತದೆ. ಪ್ರತಿ ದಿನವೂ ಅವರು ತಮ್ಮ ಊಟದ ತಟ್ಟೆಯಿಂದ ಒಂದು ರೊಟ್ಟಿಯನ್ನು ಪುಸ್ತಕದಲ್ಲಿ ಬಚ್ಚಿಟ್ಟು; ಬೀದಿಯಲ್ಲಿ ಕುಳಿತಿರುವ ಭಿಕ್ಷುಕಿಗೆ ಆ ರೊಟ್ಟಿಯನ್ನು ನೀಡುತ್ತಿದ್ದರು. ಇತ್ತೀಚೆಗೆ ಎರಡು ದಿನಗಳಿಂದ ಭಿಕ್ಷುಕಿ ಅಲ್ಲಿ ಕಾಣುತ್ತಿಲ್ಲ ಎಂಬ ಆತಂಕದಿಂದ ಬಾಲಕ ಅಳುತ್ತಿದ್ದನು. ಬಡವರ ಸಂಕಷ್ಟಕ್ಕೆ ಸ್ಪಂದಿಸುವ ದಯೆ , ಕರುಣೆ ಮತ್ತು ಅನುಕಂಪವನ್ನು ತನ್ನ ಮಗ ಹೊಂದಿದ್ದಾನೆ ಎಂದು ತಿಳಿದು ಸುಭಾಸರ ತಾಯಿ ತುಂಬಾ ಹೆಮ್ಮೆ ಪಟ್ಟರು. ಅವರ ಹೃದಯವೂ ತುಂಬಿ ಬಂತು. ಮುಂದೆ ಪರಕೀಯರ ಕೈಯಲ್ಲಿ ಸಿಲುಕಿದ ಭಾರತ ಮಾತೆಯ ಪರಿಸ್ಥಿತಿಯನ್ನು ಕಂಡು ಇದೇ ಸುಭಾಷ್ ಚಂದ್ರ ಬೋಸರು ಶತ್ರುವನ್ನು ಸೆದೆಬಡಿಯಲು ಕ್ರಾಂತಿ ಮಾರ್ಗವನ್ನು ಅನುಸರಿಸಿದರು. ಅವರ ಸುಕೋಮಲ ಹೃದಯವು ಶತ್ರುಗಳಿಗಾಗಿ ಕಠೋರವಾಗಿತ್ತು. ತಾಯಿನಾಡಿನ ಪ್ರೀತಿ ದೇಶಪ್ರೇಮ ಅವರ ಮನಸ್ಸನ್ನು ವಜ್ರದಂತೆ ಕಠಿಣಗೊಳಿಸಿತ್ತು. ಘಟನೆಗಳು ಅಥವಾ ಸಂದರ್ಭಗಳು ಮನುಷ್ಯನ ಮನಸ್ಸನ್ನು ಪ್ರೇರೇಪಿಸುತ್ತವೆ, ಹಾಗೂ ಮನಸ್ಸಿನ ಭಾವಕೋಶವನ್ನು ನಿಯಂತ್ರಿಸುತ್ತವೆ . ಆದ್ದರಿಂದ ಮನಸ್ಸು ವಿವಿಧ ಮುಖಗಳನ್ನು ತೊಡುತ್ತದೆ.
ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ/
ಲೋಕೋತ್ತರಾಣಾಂ ಚೇತಾಂಸಿ ಕೋ ಹಿ ವಿಜ್ಞಾನತುರ್ಮಹತಿ ‘//
ಎನ್ನುವ ಸಂಸ್ಕೃತದ ಸುಭಾಷಿತವು ಹಿರಿಯರ ಮಾತು ವಜ್ರಕ್ಕಿಂತ ಕಠಿಣ, ಹೂವಿಗಿಂತ ಮೃದು, ಎಂದರ್ಥವಾಗುತ್ತದೆ. ಈ ಗುಣವನ್ನು ಪ್ರಸಿದ್ಧ ವ್ಯಕ್ತಿಯ ವ್ಯಕ್ತಿತ್ವದ ವಿಶೇಷತೆ ಎನ್ನಬಹುದು.
ಪ್ರಕೃತಿ ಅಥವಾ ನಮ್ಮ ಸುತ್ತಲಿನ ಪರಿಸರ ಮನುಷ್ಯನ ಮನಸ್ಸನ್ನು ಪ್ರಚೋದಿಸುವ ವಿಧವಿಧವಾದ ಪ್ರಲೋಭನೆಗಳು ಸೃಷ್ಟಿಯಲ್ಲಿವೆ . ಹಾಗಾದರೆ ಮನಸ್ಸು ಎಂದರೇನು? ಮನಸ್ಸು ಎಂದರೆ ಪ್ರಜ್ಞೆ ಅಥವಾ ಗ್ರಹಿಕೆ ಎನ್ನಬಹುದು . ಇದನ್ನು ಇಂಗ್ಲಿಷನಲ್ಲಿ Mind ಎಂದು ಹೇಳುತ್ತಾರೆ . ಇದಕ್ಕೆ ಅದ್ಭುತವಾದ ಕಲ್ಪನಾ ಸಾಮರ್ಥ್ಯವಿದೆ. ಭಾವನೆಗಳಿವೆ, ಸ್ಮರಣೆಗಳೂ ಇವೆ. ಹಾಗಾಗಿ ಮನಸ್ಸು ಅಂದರೆ ಒಂದು ಜೀವಿಗೆ ತನ್ನ ಸುತ್ತಲಿನ ಪರಿಸರದ ಕಡೆಗೆ ವ್ಯಕ್ತಿನಿಷ್ಠವಾದ ಜಾಗೃತಿ . ಮನಸ್ಸಿನ ಮುಖಗಳು ಹಲವಾರು. ಚಂಚಲ ಮನಸ್ಸು , ಖಾಲಿ ಮನಸ್ಸು, ಉದ್ವಿಘ್ನ ಮನಸ್ಸು , ಶಾಂತ ಮನಸ್ಸು , ಗೆಲುವಾದ ಮನಸ್ಸು, ಇತ್ಯಾದಿ . The face is the index of the mind (ನಮ್ಮ ಮುಖವು ಮನಸಿನ ಕನ್ನಡಿ) ಎನ್ನುವ ಹೇಳಿಕೆಯೆನೋ ನಿಜ, ಆದರೆ ಮನದೊಳಗಿರುವ ಸತ್ಯವನ್ನು ಮರೆಮಾಚುವಂತೆ ನಾಟಕವಾಡುವವರು ‘ನಟನಾ ಕುಶಲರು ‘ ನಮ್ಮ ನಡುವೆ ಇದ್ದಾರೆ.
ಹಲವಾರು ಸಲ ಮನಸ್ಸಿಗೆ ಬೇಸರವಾಗಿ ಕೋಪಿಸಿಕೊಂಡು ಕೆರಳುವದುಂಟು. ಅಂತಹ ಸಮಯದಲ್ಲಿ ಹಠ ಮಾಡುತ್ತಿರುವ ಮಗುವನ್ನು ತಾಯಿ ಯಾವ ರೀತಿ ಉಪಾಯದಿಂದ ಒಳ್ಳೆಯ ತಿಂಡಿ ತಿನಿಸುಗಳನ್ನು ನೀಡಿ , ಕಥೆಗಳನ್ನು ಹೇಳಿ ನಯವಾದ ಮಾತಿನಿಂದ ಒಲಿಸಿ ಕೊಳ್ಳುವಂತೆ ಮನಸ್ಸನ್ನು ಸಹ ಹಿತವಾದ ಮಾತಿನಿಂದ, ಧ್ಯಾನದಿಂದ ಕೋಪವನ್ನು ತಣಿಸಿಕೊಳ್ಳಬಹುದು. ದಶರಥನ ಹೆಂಡತಿ , ಭರತನ ತಾಯಿ ಎಂದರೆ ಕೈಕೇಯಿ ಯಂತೆ ತನ್ನ ಮಗನಿಗೆ ಮಾತ್ರ ರಾಜ್ಯ ದೊರಕ ಬೇಕೆಂದು ಆಸೆ ಪಟ್ಟಳು . ಆದರೆ ರಾಮನಿಗೆ ವನವಾಸವನ್ನು ತಂದಿತ್ತಳು. ಅವಳ ಮನಸ್ಸು ಮಗನಿಗಾಗಿ ಮೃದುವಾಗಿಯೂ ಮಲಮಗನಿಗಾಗಿ ಕಠೋರವಾಗಿಯೂ ವ್ಯವಹರಿಸಿರುವುದನ್ನು ತೋರುತ್ತದೆ. ಹಾಗಾಗಿ ಅವಶ್ಯಕತೆಗಳ ಅನುಗುಣವಾಗಿಯೂ ಕೂಡ ಮನಸ್ಸು ವರ್ತಿಸುತ್ತದೆ.
ಕುವೆಂಪು ಅವರು ತಮ್ಮ “ಶ್ರೀ ರಾಮಾಯಣ ದರ್ಶನಂ” ನಲ್ಲಿ ಮಂಥರೆಯ ಮನಸಿನ ವಿವಿಧ ಮುಖಗಳನ್ನು, ರಾವಣನ ಮನಸಿನ ವಿವಿಧ ಮುಖಗಳನ್ನು ತಮ್ಮದೇ ಆದ ವಿಶಿಷ್ಟ ದೃಷ್ಟಿಯಿಂದ ಅನಾವರಣಗೊಳಿಸಿರುವ ರೀತಿ ಅತ್ಯಂತ ಸಮಂಜಸವಾಗದುದು. ಮನಸ್ಸು ಮೂಲತಃ ಎಲ್ಲ ಗುಣಭಾವಗಳ ಸಮ್ಮಿಲನ. ಸಂದರ್ಭ ಅನುಸಾರವಾಗಿ ಅವಶ್ಯಕತೆಗಳಿಗನುಗುಣವಾಗಿ ಅದರಲ್ಲಿರುವ ಪ್ರತ್ಯೇಕ ಗುಣ ಸ್ವಭಾವಗಳು ಎದ್ದುಕಾಣುತ್ತವೆ. ಹಾಗಾಗಿ ಮನುಷ್ಯನ ಮನಸ್ಸು ಒಳ್ಳೆಯ ಮತ್ತು ಕೆಟ್ಟದರ, ಮೃದು ಮತ್ತು ಕಠೋರತೆಯ ಸಂಗಮವೇ ಸರಿ. ಅವನ ಮನಸಿನ ಒಳ್ಳೆಯ ಮುಖ ಕೆಲವರಿಗೆ ಕೇಡಾಗ ಬಹುದು. ಮನಸಿನ ಕೆಟ್ಟ ಮುಖ ಕೆಲವರಿಗೆ ಒಳ್ಳೆಯದಾಗಬಹುದು. ಇದು ಆಯಾ ವ್ಯಕ್ತಿಯ ಅವಶ್ಯಕತೆಯನ್ನು,ಅನುಭವನ್ನು , ದೃಷ್ಟಿಕೋನವನ್ನು ಅವಲಂಬಿಸಿರುವಂಥದ್ದು.