……..ಮಬ್ಬುಗತ್ತಲು ಮುಸುಕುತ್ತಿದ್ದಂತೆ ಮುಂಬೈ ಮಹಾ ನಗರದ ಕೆಂಪು ದೀಪದ ಈ ಪ್ರದೇಶದಲ್ಲಿ ಚಟುವಟಿಕೆಗಳು ಗರಿಗೆದರುತ್ತವೆ. ಜೀವ ಕಳೆಯೇ ಇಲ್ಲದ ಮುಖಕ್ಕೆ ಅಗ್ಗದ ಬಣ್ಣ ಬಳಿದು, ತೇಜೋ ಹೀನ ಕಣ್ಣುಗಳಿಗೆ ಕಾಡಿಗೆ ಹಚ್ಚಿ, ನಿಸ್ಸಾರವಾದ ತುಟಿಗಳಿಗೆ ರಂಗು ಲೇಪಿಸಿ, ಹರಿದದ್ದು ಕಾಣದಂತೆ ತೇಪೆ ಹಚ್ಚಿದ ಲೆಹೆಂಗಾ, ರವಿಕೆ ಧರಿಸಿ ಎಂದೋ ಸತ್ತು ಹೋದ ನಗುವನ್ನು ಮುಖದ ಮೇಲೆ ಬಲವಂತದಿಂದ ಎಳೆದು ತಂದು……..(ಸತ್ಯ ಸಂಗತಿ ಆಧರಿಸಿ ಬರೆದ ಕಥೆ)
ದಿನಕರ ದಿನದ ಆಟ ಮುಗಿಸಿ ವಿಶ್ರಾಂತಿಗೆಂದು ಪಡುವಣ ದಿಕ್ಕಿನತ್ತ ಚಲಿಸಿದಾಗ, ಆಗಸದಲ್ಲಿ ಮಬ್ಬುಗತ್ತಲು ಮುಸುಕುತ್ತಿದ್ದಂತೆ ಮುಂಬೈ ಮಹಾ ನಗರದ ಕೆಂಪು ದೀಪದ ಈ ಪ್ರದೇಶದಲ್ಲಿ ಚಟುವಟಿಕೆಗಳು ಗರಿಗೆದರುತ್ತವೆ.ಜೀವ ಕಳೆಯೇ ಇಲ್ಲದ ಮುಖಕ್ಕೆ ಅಗ್ಗದ ಬಣ್ಣ ಬಳಿದು, ತೇಜೋ ಹೀನ ಕಣ್ಣುಗಳಿಗೆ ಕಾಡಿಗೆ ಹಚ್ಚಿ, ನಿಸ್ಸಾರವಾದ ತುಟಿಗಳಿಗೆ ರಂಗು ಲೇಪಿಸಿ ಹರಿದದ್ದು ಕಾಣದಂತೆ ತೇಪೆ ಹಚ್ಚಿದ ಲೆಹೆಂಗಾ, ರವಿಕೆ ಧರಿಸಿ ಎಂದೋ ಸತ್ತು ಹೋದ ನಗುವನ್ನು ಮುಖದ ಮೇಲೆ ಬಲವಂತದಿಂದ ಎಳೆದು ತಂದು ಗಿರಾಕಿಗಳನ್ನು ಸೆಳೆಯುವ ಆಟದಲ್ಲಿ ತಲ್ಲೀನರಾಗುವ ಲೈಂಗಿಕ ಕಾರ್ಯಕರ್ತೆಯರು. ಯಾವುದ್ಯಾವುದೋ ಕಾರಣದಿಂದ ಈ ಪಾಪಕೂಪದಲ್ಲಿ ಸಿಲುಕಿ ಮೈ ಮಾರಿಕೊಂಡು ಹೊಟ್ಟೆ ಹೊರೆದು ಕೊಳ್ಳುವ ಅಸಹಾಯಕ ಹೆಣ್ಣು ಮಕ್ಕಳು. ಇಷ್ಟವಿರಲಿ, ಇಲ್ಲದಿರಲಿ ಹೊಟ್ಟೆಪಾಡಿಗಾಗಿ ಇದು ಅವರ ದಿನ ನಿತ್ಯದ ಬವಣೆ.ಬಂದ ಗಿರಾಕಿಗಳಿಗೆ ಸೆರಗು ಹಾಸಿ ತೃಪ್ತಿ ಪಡಿಸಿ,ಅವರಿಂದ ಮಕ್ಕಳನ್ನು ಪಡೆದು,ಆ ಮಕ್ಕಳನ್ನು ಸಾಕಲು ಮತ್ತೆ ಸೆರಗು ಹಾಸುವ ಅನಿವಾರ್ಯತೆ . ಸಮಾಜದ ಅಪಮಾನ, ಅಸಡ್ಡೆಗಳನ್ನು ಅನುಭವಿಸಿ ಕೀಳರಿಮೆಯಿಂದ ಬಳಲಿ ತಮ್ಮದೇನಿದ್ದರೂ ಇದಿಷ್ಟೇ ಬದುಕು ಎಂದು ಕೊಂಡ ಅವರ ಬದುಕಿನಲ್ಲಿ ಬದಲಾವಣೆಯ ಕೋಲ್ಮಿಂಚು ಮೂಡಿತ್ತು.ಅವರ ನೀರಸ ತಮದ ಬದುಕಿನಲ್ಲಿ ಆಸೆಯ ‘ಮಿಂಚು ಹುಳದ’ ಬೆಳಕು ಕಾಣಿಸಿತ್ತು. ನಿರ್ಲ್ಯಕ್ಷ್ಯಕ್ಕೊಳಗಾಗಿದ್ದ ಇವರ ಬದುಕಿನಲ್ಲಿ ಬೆಳ್ಳಿ ಚುಕ್ಕೆಯಾಗಿ ಮೂಡಿ ಬಂದವಳು, ಲೈಂಗಿಕ ಕಾರ್ಯಕರ್ತೆ ಮಾಲತಿಯ ಮಗಳಾದ ಜಯಾ.
ಲೈಂಗಿಕ ಕಾರ್ಯಕರ್ತರೆಯರನ್ನು, ಅವರ ಮಕ್ಕಳನ್ನು ಹಾಗೂ ಅನಾಥ ಮಕ್ಕಳನ್ನು ಈ ಪಾಪ ಕೂಪದಿಂದ ಮೇಲೆತ್ತಲು ಸಾಮಾಜಿಕ ಹೋರಾಟ ಮಾಡಿದ ಜಯಾಳ ಕಾರ್ಯವನ್ನು ಮೆಚ್ಚಿ ಸರಕಾರ ಅವಳನ್ನು ‘ ರಾಷ್ಟ್ರೀಯ ಮಾನವ ಹಕ್ಕುಗಳ’ ಸಲಹೆಗಾರರ ಗುಂಪಿಗೆ ಸದಸ್ಯಳನ್ನಾಗಿ ನೇಮಕ ಮಾಡಿತ್ತು. ಈ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿ ಎಲ್ಲ ಕಡೆ ಹರಿದಾಡಿದಾಗ ಎಲ್ಲರಲ್ಲೂ ಮಿಂಚಿನ ಸಂಚಾರ .’ಮಿಂಚು ಹುಳು’ ಪತ್ರಿಕಾ ಕಾರ್ಯಾಲಯದಲ್ಲಿ ಕುಳಿತ ಸಂಪಾದಕಿ ಜಯಾಳಿಗೆ ಎಲ್ಲ ಕಡೆಯಿಂದಲೂ ಅಭಿನಂದನೆಗಳ ಸುರಿಮಳೆ. ಎಲ್ಲ ಕರೆಗಳನ್ನು ಸ್ವೀಕರಿಸಿ ಧನ್ಯವಾದಗಳನ್ನು ಅರ್ಪಿಸಿದ್ದಳು. ರೇಡಿಯೋ, ಟಿ.ವಿ , ಪತ್ರಿಕಾ ವರದಿಗಾರರು ಇವಳ ಸಂದರ್ಶನಕ್ಕಾಗಿ ಕಾದು ಕುಳಿತದ್ದು ಇವಳ ಆತ್ಮ ವಿಶ್ವಾಸದ ಕಿರೀಟಕ್ಕೆ ಕುಂದಣದ ಮೆರಗು ತುಂಬಿತ್ತು. ತನ್ನ ಅವಿರತ ಹೋರಾಟಕ್ಕೆ ರಾಷ್ಟ್ರ ಮಟ್ಟದಲ್ಲಿ ದೊರೆತ ಪುರಸ್ಕಾರ ಅವಳ ಮನೋಸ್ಥೈರ್ಯವನ್ನು ಹೆಚ್ಚಿಸಿತ್ತು. ಈ ಸಂತೋಷದ ಸುದ್ದಿಯನ್ನು ತಾಯಿ ಮಾಲತಿ ಹಾಗೂ ತಂಗಿ ಆಶಾ ಇವರಿಗೆ ತಿಳಿಸಲು ಮನೆಗೆ ಓಡೋಡಿ ಬಂದಿದ್ದಳು.
ಹೊರಗಿನಿಂದಲೇ ಅಮ್ಮಾ..ಅಮ್ಮಾ… ಎಂದು ಕೂಗುತ್ತ ಮನೆಗೆ ಬಂದ ಜಯಾಳನ್ನು ಕಂಡು, ಏನಾಯಿತೋ ಎಂದು ಧಾವಿಸಿ ಹೊರ ಬಂದ ಅಮ್ಮನನ್ನು ಬಿಗಿದಪ್ಪಿ ಅಮ್ಮಾ…. ನನ್ನ ಹೋರಾಟ, ಹಾಗೂ ಅದರ ಸಾಕಾರಕ್ಕಾಗಿ ನನಗೆ ಜೊತೆಯಾದ ಎಲ್ಲರ ಪರಿಶ್ರಮದ ಕಾರಣ ನನ್ನೆಲ್ಲ ಅಕ್ಕ,ತಂಗಿಯರ ನೋವು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುವಂತಾಗಿದೆ. ನನ್ನನ್ನು ‘ರಾಷ್ಟ್ರೀಯ ಮಾನವ ಹಕ್ಕುಗಳ’ ಸಲಹೆಗಾರರ ಗುಂಪಿಗೆ ಸದಸ್ಯಳನ್ನಾಗಿ ಮಾಡಿದ್ದಾರೆ ಎಂದು ಹೇಳುತ್ತಾ ಅಮ್ಮನ ಕಾಲು ಮುಟ್ಟಿ ನಮಿಸಿದಳು ಜಯಾ. ಈ ಮಾತು ಕೇಳಿ ಆಶಾ ಅಕ್ಕನನ್ನು ಬಿಗಿದಪ್ಪಿ ನಮ್ಮ ಶ್ರಮ ಸಾರ್ಥಕವಾಯಿತು ಎಂದು ಅವಳ ಗಲ್ಲಕ್ಕೆ ಲೊಚ ಲೊಚ ಮುತ್ತಿಟ್ಟಳು. ಮಾಲತಿ ಮಗಳಿಗೆ… ಬಯಸದೆ ಈ ಕೂಪದಲ್ಲಿ ಸಿಲುಕಿ, ಹೊರ ಬರಲಾರದೆ ಅಸಹಾಯಕರಾಗಿ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದು ಅನಾಮಿಕರಾಗಿಯೇ ಕಣ್ಮರೆಯಾಗುವ ಇವರ ದಾರುಣ ಬದುಕನ್ನು ಸಮಾಜಕ್ಕೆ ತಿಳಿಸಲು ನೀ ಪಟ್ಟ ಪರಿಶ್ರಮಕ್ಕೆ ಇಂದು ನಿನಗೆ ಜಯವಾಗಿದೆ. ಭವಿಷ್ಯದಲ್ಲೂ ಸಹ ನೀನು ಇಂಥ ಅಸಹಾಯಕರ ಕತ್ತಲ ಬದುಕಿಗೆ ದಾರಿ ತೋರುವ ‘ಮಿಂಚು ಹುಳು ‘ಆಗು ಎಂದು ಹಾರೈಸಿ ಸಂತೋಷದಿಂದ ಹಬ್ಬದ ಅಡುಗೆ ಮಾಡುವ ಹುಮ್ಮಸ್ಸಿನಿಂದ ಅಡುಗೆ ಮನೆ ಹೊಕ್ಕಾಗ, ಆಶಾಳೂ ಅಮ್ಮನಿಗೆ ಜೊತೆಯಾದಳು. ಇಂದು ಸಾಧನೆಯ ಗರಿಯನ್ನು ಮುಡಿಗೇರಿಸಿಕೊಂಡಿದ್ದ ಅವಳ ಮುಖದಲ್ಲಿ ಸಂತೃಪ್ತಿಯ ಭಾವ ನೆಲೆಸಿತ್ತು. ಈ ಸಾಧನೆಗಾಗಿ ತಾನು ಪಟ್ಟ ಪಾಡು ನೆನೆಸುತ್ತಾ ಅವಳ ಮನ ಅತೀತಕ್ಕೆ ಜಾರಿತ್ತು.
ಅಪ್ಪನೆಂಬ ಪ್ರಾಣಿಯ ನೆನಪು ಅಸ್ಪಷ್ಟ.ದಿನಾ ರಾತ್ರಿ ಕುಡಿದು ಬಂದು ಅಮ್ಮನ ಜೊತೆ ಜಗಳವಾಡಿ, ಮಾಡಿದ್ದ ಅಡುಗೆಯಲ್ಲಿ ಅರ್ಧದಷ್ಟು ತಿಂದು ಮೈಮೇಲೆ ಎಚ್ಚರವಿಲ್ಲದಂತೆ ಗೊರಕೆ ಹೊಡೆಯುತ್ತಿದ್ದ ಅಪ್ಪನಿಗೆ ಹೆಂಡತಿ ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿ ಯಾವುದರ ಅರಿವಿದ್ದಿಲ್ಲ . ಅವನ ಕುಡಿತಕ್ಕೆ ಅಮ್ಮ ಹಣ ಕೊಡದಿದ್ದಾಗ ದನಕ್ಕೆ ಬಡಿದಂತೆ ಬಡಿದು ಇದ್ದ ಚೂರು ಪಾರು ಹಣ ಕಿತ್ತುಕೊಂಡು ಹೋಗುತ್ತಿದ್ದ. ಐದು ವರ್ಷದವಳಾಗಿದ್ದ ನನಗೆ ಅಪ್ಪನೆಂದರೆ ನಡುಕ ಹುಟ್ಟುತ್ತಿತ್ತು. ಅಷ್ಟರಲ್ಲಾಗಲೇ ನನಗೆ ಎರಡು ವರ್ಷದ ತಂಗಿ ಆಶಾಳ ಜವಾಬ್ದಾರಿ ಅಮ್ಮ ಕೆಲಸಕ್ಕೆ ಹೋದಾಗ. ಹೇಗೋ ಬೇರೆಯವರ ಮನೆಯ ಕಸ ,ಮುಸುರೆ ಮಾಡಿ ಬದುಕಿನ ರಥ ಎಳೆಯುತಿದ್ದ ನನ್ನಮ್ಮ ಮಾಲತಿಯ ಸೌಂದರ್ಯ ಅವಳಿಗೆ ಮುಳುವಾಗಿತ್ತು. ಆ ದಿನ ಅಪ್ಪ ಯಾವನೋ ಪರ ಪುರುಷನನ್ನು ಕರೆದುಕೊಂಡು ಬಂದು ದುಡ್ಡಿಗಾಗಿ ಅವನ ಜೊತೆ ಮಲಗು ಎಂದಾಗ ನನ್ನಪ್ಪನ ನೀಚ ಬುದ್ದಿಗೆ ಬೇಸತ್ತು ಅಮ್ಮ ನಮ್ಮನ್ನು ಕರೆದುಕೊಂಡು ರೈಲು ಹತ್ತಿದ್ದಳು.ತೊಯ್ದ ಗುಬ್ಬಚ್ಚಿಗಳಂತೆ ಬೆದರಿದ ನೋಟದಿಂದ ಅವಳನ್ನು ಅಪ್ಪಿ ಕುಳಿತಿದ್ದೆವು. ಬಹುಶಃ ನಮ್ಮೆಲ್ಲರ ಭವಿಷ್ಯ ನೆನೆದು ಅಳುತ್ತ ಕುಳಿತಿದ್ದವಳನ್ನು ಪಕ್ಕದಲ್ಲೇ ಕುಳಿತ ಚಾಂದಬೀಬಿ… ಯಾಕೆ ಬೆಹೆನ್ ಇಷ್ಟೊಂದು ಅಳುತಿದ್ದೀಯಾ ಏನಾಯಿತು ,ಮಕ್ಕಳು ಗಾಭರಿಯಾಗುತ್ತವೆ, ರೋ ಮತ್ ‘ಎಂದು ಸಮಾಧಾನ ಮಾಡಿ ಅಮ್ಮನಿಗೂ, ನಮಗೂ ರೈಲಿನಲ್ಲಿ ಬಂದ ಊಟ ಕೊಡಿಸಿದ್ದಳು.
ಹೊಟ್ಟೆ ತುಂಬಿದ್ದ ನಾವು ನಿದ್ದೆಗೆ ಜಾರಿದಾಗ ಅಮ್ಮ ತನ್ನೆಲ್ಲ ಕತೆಯನ್ನು ಚಾಂದಬೀಬಿ ಮುಂದೆ ಹೇಳಿ ..’ಈ ರೈಲು ಎಲ್ಲಿಗೆ ಹೋಗುತ್ತಿದೆ? ನಾನು ಸಿಟ್ಟಿನ ಭರದಲ್ಲಿ ರೈಲು ಎಲ್ಲಿಗೆ ಹೋಗುವುದೆಂಬುದನ್ನು ಕೇಳದೆ , ಅವಸರದಲ್ಲಿ ರೈಲು ಹತ್ತಿದ್ದೇನೆ ಟಿಕೇಟ್ ಸಹ ತೆಗೆದುಕೊಂಡಿಲ್ಲ ಎಂದಾಗ ,ಚಾಂದಬೀಬಿ… ಇದು ‘ಮುಂಬೈಗೆ ಹೋಗುವ ರೈಲು ನಾನಿದೀನಿ ಹೆದರಬೇಡ’ ಟಿಕೆಟ್ ಕಲೆಕ್ಟರ್ ಬಂದರೆ ನಾನೆಲ್ಲ ನೋಡಿಕೊಳ್ತಿನಿ ಎಂದು ಆಶ್ವಾಸನೆ ಕೊಟ್ಟಾಗ ನೆಮ್ಮದಿಯ ನಿದ್ದೆಗೆ ಜಾರಿದ್ದಳು ಅಮ್ಮ.ಬೆಳಿಗ್ಗೆ ಕಣ್ಣು ಬಿಟ್ಟಾಗ ಒಬ್ಬ ಗಂಡಸು ಅಮ್ಮನನ್ನು ತಿವಿದು ಎಬ್ಬಿಸುತ್ತ… ‘ಉಠೋ, ಉಠೋ ಗಾಡಿಸೆ ಉತರೋ ಮುಂಬೈ ಆಗಯೀ ಹೈ ‘ಎಂದು ಹಿಂದಿಯಲ್ಲಿ ಮಾತನಾಡಿದಾಗ ಅಮ್ಮ ಭಾಷೆ ತಿಳಿಯದೆ ಪ್ರತಿರೋಧ ಒಡ್ಡಿ ಕನ್ನಡದಲ್ಲಿ ಚಾಂದಬೀಬಿ ಎಲ್ಲಿದ್ದೀಯಾ ಎಂದು ಕೂಗ ತೊಡಗಿದಾಗ ಆ ಮನುಷ್ಯ ..’ ಒಹೋ ಕನ್ನಡದವಳಾ ನೀನು,ಆ ಚಾಂದ ಬೀಬಿ ನಿನ್ನನ್ನು ನಮ್ಮ ಆಪಾಗೆ ಇಪ್ಪತ್ತು ಸಾವಿರಕ್ಕೆ ಮಾರಿದ್ದಾಳೆ ಅವಳು ಇನ್ನು ನಿನಗೆ ಸಿಗುವುದಿಲ್ಲ ಗಲಾಟೆ ಮಾಡದೆ ಸುಮ್ಮನೆ ಮಕ್ಕಳೊಂದಿಗೆ ನನ್ನ ಜೊತೆಗೆ ಬಾ ‘ಎಂದಾಗ ಅಮ್ಮನಿಗೆ ಬಾಣಲಿಯಿಂದ, ಬೆಂಕಿಗೆ ಬಿದ್ದಂತಾಗಿತ್ತು. ಅರಿಯದ ಮಹಾನಗರ, ಜನಜಂಗುಳಿ, ಭಾಷೆ ತಿಳಿಯದು, ಜೊತೆಗೆ ಚಿಕ್ಕ ಮಕ್ಕಳಾದ ನಾವು ವಿಧಿ ಇಲ್ಲದೆ ಅವನ ಜೊತೆ ಹೋಗಿದ್ದಳು. ಅವನು ನಮ್ಮನ್ನು ತಂದು ಬಿಟ್ಟಿದ್ದು ವೇಶ್ಯಾಗೃಹ ನಡೆಸುವ ಜೀನತ್ ಆಪಾಳ ಹತ್ತಿರ. ಎರಡು ರೂಮಿನ ಪುಟ್ಟ ಮನೆ ಎನ್ನುವ ಕತ್ತಲ ಕೂಪದಲ್ಲಿ ನಮ್ಮ ಜೀವನ ಪ್ರಾರಂಭವಾಗಿತ್ತು.
ಯಾವ ಗಂಡ… ದುಡ್ಡಿಗೋಸ್ಕರ ಪರ ಪುರುಷನ ಜೊತೆ ಮಲಗು ಎಂದಾಗ ಧಿಕ್ಕರಿಸಿ ಓಡಿ ಬಂದ ಅಮ್ಮನಿಗೆ ಹೊಟ್ಟೆ ಪಾಡಿಗಾಗಿ ದೊರಕ್ಕಿದ್ದು ಅದೇ ಮೈ ಮಾರಿಕೊಳ್ಳುವ ಕಸಬು. ಪುಟ್ಟ ಬಲೆಯಿಂದ ತಪ್ಪಿಸಿ ಕೊಳ್ಳಲು ಹೋಗಿ ದೊಡ್ಡದಾದ ಮೇಲೇಳಲಾಗದ ಕಂದಕದಲ್ಲಿ ಬಿದ್ದಿದ್ದಳು. ಇದಲ್ಲವೇ ಹೆಣ್ಣಿನ ಬದುಕಿನ ದಾರುಣತೆ? ಆಪಾ ಹೇಳಿ ಕಳಿಸಿದಾಗ ಅಮ್ಮ ಹೋಗಿ ಮೈಮಾರಿಕೊಂಡು ಆಪಾ ಕೊಟ್ಟಷ್ಟು ಹಣ ತೆಗೆದುಕೊಂಡು ಬಂದು ನಮ್ಮ ಮೂವರ ಬದುಕನ್ನು ಸಾಗಿಸ ಬೇಕಾಗುತ್ತಿತ್ತು.ಮಕ್ಕಳಾದ ನಮ್ಮನ್ನು ತಾನು ಹೊರ ಹೋಗುವ ರಾತ್ರಿ ಪಕ್ಕದ ನಸೀಮಾಳಿಗೆ ಜೊತೆ ಮಾಡಿ ಹೋಗುತ್ತಿದ್ದಳು. ರಾತ್ರಿ ಅಮ್ಮ ಹೋಗುತ್ತಾಳೆ ಎಂದು ಗೊತ್ತಾದಾಗ ನಾನೂ, ಆಶಾ ಅಮ್ಮನ ಸೆರಗಿಡಿದು.. ‘ಅಮ್ಮ ರಾತ್ರಿ ನೀನು ಕೆಲಸಕ್ಕೆ ಹೋಗಬೇಡ,ನಮಗೆ ಮನೆಯಲ್ಲಿ ಭಯವಾಗುತ್ತೆ.ಎಲ್ಲರಂತೆ ನೀನೂ ಬೆಳಿಗ್ಗೆ ಕೆಲಸಕ್ಕೆ ಹೋಗು’ ಎಂದಾಗ ..ಅಮ್ಮ ನಮ್ಮಿಬ್ಬರನ್ನೂ ಮುದ್ದಿಸಿ ಕಣ್ಣಂಚಿನಲ್ಲಿ ಜಿನುಗುವ ಕಣ್ಣೀರನ್ನು ನಮಗೆ ಕಾಣದಂತೆ ಒರೆಸಿಕೊಂಡು,’ ನನ್ನ ಕೆಲಸ ರಾತ್ರಿಯೇ ಇರುತ್ತದೆ, ಆಪಾ ಹೇಳಿದಂತೆ ಕೇಳದಿದ್ದರೆ ನಮಗೆ ಊಟಕ್ಕೂ ಏನೂ ಇರುವುದಿಲ್ಲ. ಬೆಳಿಗ್ಗೆ ಬೇಗನೆ ಬರುತ್ತೇನೆ ನಸೀಮಾ ಮಾಸಿ ನಿಮ್ಮ ಜೊತೆ ಇರುತ್ತಾಳೆ ‘ ಎಂದು ಹೇಳಿ ಹೋಗುತ್ತಿದ್ದಳು.
ಆ ದಿನ ರಾತ್ರಿ ಹೋದ ಅಮ್ಮ ಬೆಳಗಾದಾಗ ಬಂದಾಗ ಅವಳ ಸುಸ್ತಾದ ಮುಖ, ತೇಜೋಹೀನ ಕಣ್ಗಳು, ತಪ್ಪುತ್ತಿರುವ ಸೋತ ಹೆಜ್ಜೆಗಳನ್ನು ನೋಡಿ , ಓಡಿ ಹೋಗಿ ಅವಳನ್ನು ಹಿಡಿದು ಕುಳ್ಳಿರಿಸಿ, ಕುಡಿಯಲು ನೀರು ಕೊಟ್ಟು ಗಾಭರಿಯಿಂದ ‘ ಅಮ್ಮಾ ಇದೇನು ನಿನ್ನ ಅವಸ್ಥೆ, ಇಷ್ಟೊಂದು ಸೋತು ಹೋಗಿರುವೆ ಅದೆಂತಹ ಕೆಲಸ ನಿನ್ನದು?ಎಂದು ಆತಂಕ ವ್ಯಕ್ತಪಡಿಸಿದಾಗ ಅಮ್ಮ ನನ್ನ ಮಾತಿಗೆ ಕಿಂಚಿತ್ತು ಗಮನ ಕೊಡದೆ ‘ ನನಗೆ ನಿಮ್ಮಿಬ್ಬರದೇ ಚಿಂತೆಯಾಗಿದೆ. ನೀವಿಬ್ಬರೂ ದೊಡ್ಡವರಾಗುತ್ತಿದ್ದೀರಿ ಮತ್ತೆ ಯಾವ ತಲೆ ಹಿಡುಕನಿಗೆ ನಿಮ್ಮನ್ನು ಒಪ್ಪಿಸುತ್ತಾಳೋ ಆ ಆಪಾ’ ಎಂದು ಅಳುತ್ತ ನುಡಿದಿದ್ದಳು.ಆ ಕ್ಷಣ ನನ್ನ ಪುಟ್ಟ ಮನಸ್ಸಿನಲ್ಲಿ ಅರ್ಥವಾಗದ ಗೋಜಲುಗಳ ಗಂಟು , ಬಿಡಿಸಿಕೊಳ್ಳಲು ಸಾಧ್ಯವಾಗದೆ ಕಗ್ಗಂಟಾಗುತಿತ್ತು. ಅಮ್ಮನ ಅಸಹಾಯಕ ಪರಿಸ್ಥಿತಿ ನನ್ನನ್ನು ಆತಂಕಕ್ಕೆ ತಳ್ಳಿತ್ತು.ಅಮ್ಮ ಅದೇಕೆ ರಾತ್ರಿ ಕೆಲಸಕ್ಕೆ ಹೋಗುತ್ತಾಳೆ. ಬೆಳಿಗ್ಗೆ ಬಂದಾಗ ಮುಖ,ಮೈ ಮೇಲೆ ಗಾಯದ ಗುರುತುಗಳು,ಸೋತು ನಿತ್ರಾಣಗೊಂಡ ಅವಳ ದೇಹ.ಇದೆಂತಹ ಕೆಲಸ ಮಾಡುತ್ತಾಳೆ ಅಮ್ಮ. ನಮಗೋಸ್ಕರ ಇಷ್ಟೆಲ್ಲಾ ನೋವು ಅನುಭವಿಸ ಬೇಕಾ ಅವಳು ಎಂಬ ಉತ್ತರವಿಲ್ಲದ ಪ್ರಶ್ನೆ ನನ್ನ ಪುಟ್ಟ ತಲೆಯಲ್ಲಿ ಗಿರಕಿ ಹೊಡೆಯುತ್ತಿತ್ತು. ನಾನು ಬೇಗ ಬೇಗನೆ ದೊಡ್ಡವಳಾಗಿ ಕೆಲಸ ಮಾಡಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳ ಬೇಕು ಎಂಬ ಕನಸ್ಸನ್ನು ನನ್ನ ಮನಸ್ಸು ನೇಯುತಿತ್ತು. ನೇಯ್ದ ಹೆಣಿಕೆ ದಾರಿ ತೋರುವಂತೆ ಭಾಸವಾಗುತಿತ್ತು.
ನನ್ನಮ್ಮ ತನ್ನಂತೆ ನಾವೂ ಈ ನರಕದಲ್ಲಿ ಸಿಲುಕಿ ಹೊಟ್ಟೆ ಪಾಡಿಗಾಗಿ ಮೈ ಮಾರಿಕೊಳ್ಳುವುದು ಬೇಡ ಓದಿ ಅಕ್ಷರಸ್ಥರಾಗಿ ತಮ್ಮ ಬದುಕು ಕಟ್ಟಿ ಕೊಳ್ಳಲಿ ಎಂಬ ಆಶಯದಿಂದ ವೇಶ್ಯೆಯರ ಮಕ್ಕಳು, ಕಾರ್ಮಿಕರ ಮಕ್ಕಳು, ಕೊಳಗೇರಿ ಮಕ್ಕಳು ಹೋಗುತ್ತಿದ್ದ ಸರಕಾರಿ ಶಾಲೆಗೆ ಕಳಿಸಿದ್ದಳು. ನಾನು , ಆಶಾ ಹಾಗೂ ನಸೀಮಾ ಮಾಸಿಯ ಇಬ್ಬರು ಮಕ್ಕಳು ರಜಿಯಾ ಮತ್ತು ತಬಸುಮ್ ತಪ್ಪದೆ ಶಾಲೆಗೆ ಹೋಗುತ್ತಿದ್ದೆವು. ಶಾಲೆಗೆ ಬರುವ ಮಕ್ಕಳ ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲೆಂದು ಶಾಲೆಯಲ್ಲಿ ಓದಿನ ಜೊತೆಗೆ ಕ್ರೋಶಾ, ಕಸೂತಿ, ಬಿದಿರು ಬುಟ್ಟಿಗಳನ್ನು ಹೆಣೆಯುವುದು, ಬಟ್ಟೆ ಹೊಲಿಯುವುದು ಮುಂತಾದ ಕಲೆಗಳನ್ನು ಕಲಿಸುತಿದ್ದ ನಳಿನಿ ಹಾಗೂ ಮೇರಿ ಟೀಚರ್ ಗೆ ನಮ್ಮ ನಾಲ್ಕು ಜನರ ಮೇಲೆ ವಿಶೇಷವಾದ ಕಾಳಜಿ. ಉಳಿದ ಮಕ್ಕಳಂತೆ ಗದ್ದಲ ಮಾಡದೆ ಓದು,ಕೈ ಕೆಲಸದಲ್ಲಿ ಪ್ರತಿಭೆಯನ್ನು ತೋರುತಿದ್ದ ನಮ್ಮ ಬದುಕಿಗೆ ಒಂದು ದಾರಿ ತೋರಿಸಬೇಕೆಂಬ ಆಸೆ ಅವರಿಬ್ಬರಿಗೂ. ಅತ್ಯಂತ ಸೂಕ್ಷ್ಮವಾಗಿ ಕಸೂತಿ, ಕ್ರೋಷಾ ಹಾಕುತಿದ್ದ ನಮಗೆ ಬಟ್ಟೆ,ದಾರ, ಉಲ್ಲನ್ನ ತರಲು ಹಣದ ಅಡಚಣಿ ಆದಾಗ ನಳಿನಿ, ಮೇರಿ ಟೀಚರ್ ತಾವೇ ಹಣ ಹಾಕಿ ತಂದು ಕೊಡುತಿದ್ದರು. ಇದು ನನಗೆ ಮುಜುಗರ ಉಂಟು ಮಾಡಿದರೂ , ಹಣದ ಬಲವಿಲ್ಲದ ನಾನು ಅಸಹಾಯಕತೆಯಿಂದ ಏನೂ ಮಾಡುವಂತಿರಲಿಲ್ಲ. ಆ ಸಮಯದಲ್ಲಿ ನಾನು… ‘ಟೀಚರ್ ನಿಮ್ಮ ಉಪಕಾರವನ್ನು ನಾನು ಮರೆಯುವುದಿಲ್ಲ.ದೊಡ್ಡವಳಾದ ಮೇಲೆ ನಾನೂ ಸಹ ದುಡಿದು ನಿಮ್ಮಂತೆ ಅಸಹಾಯಕರಿಗೆ ಸಹಾಯ ಮಾಡುತ್ತೇನೆ’ ಎಂದಾಗ ಸಂತಸದಿಂದ ಅರಳುವ ಅವರ ಕಣ್ಣುಗಳು ನನ್ನಲ್ಲಿನ ಆತ್ಮಾಭಿಮಾನಕ್ಕೆ ನೀರೆರೆಯುತ್ತಿದ್ದವು.
ಅಂದು ಸರಕಾರ ಬಡವರು, ಅಸಹಾಯಕರು, ಹಿಂದುಳಿದವರು ಮಾಡಿದ ಕೈ ಕೆಲಸಗಳಾದ ಕಸೂತಿ, ಕ್ರೋಷಾ, ಹೊಲಿಗೆಗಳಿಗೆ ಉತ್ತೇಜನ ನೀಡಲು ಒಂದು ಕಾರ್ಯಾಗಾರ ಏರ್ಪಡಿಸಿತ್ತು. ನಳಿನಿ , ಮೇರಿ ಟೀಚರ್ ಅವರಿಂದ ಈ ಕಾರ್ಯಾಗಾರದ ಬಗ್ಗೆ ತಿಳಿದಾಗ ಅವರ ಸಹಾಯದಿಂದ ನಾವು ನಾಲ್ವರೂ ನಾವು ಹಾಕಿದ್ದ ಕಸೂತಿ, ಕ್ರೋಷಾ, ಹೊಲಿದ ಬಟ್ಟೆಗಳನ್ನು ಕಾರ್ಯಾಗಾರದಲ್ಲಿ ವೀಕ್ಷಿಸಲು ಇಟ್ಟಿದ್ದೆವು. ನಮ್ಮ ಕಸೂತಿ, ಕ್ರೋಷಾ, ಹೊಲಿದ ಬಟ್ಟೆಗಳು ವೀಕ್ಷಕರಿಂದ ಮೆಚ್ಚುಗೆಯನ್ನು ಪಡೆದು ಪ್ರಶಂಸನೆಗೊಳಪಟ್ಟಾಗ ಸಂತಸದಿಂದ ಉಬ್ಬಿ ಹೋಗಿದ್ದೆವು. ಖುಷಿಯಿಂದ ಮನೆಗೆ ಬಂದ ನಮಗೆ ಸ್ವರ್ಗ ಮೂರೇ ಗೇಣು ಉಳಿದಿತ್ತು. ಮನೆಯಲ್ಲಿ ಅಮ್ಮ, ಮಾಸಿಯ ಮುಂದೆ ಹೇಳಿಕೊಂಡು ಕುಣಿದಿದ್ದೇ, ಕುಣಿದಿದ್ದು. ಆದರೆ ಮಾರನೆಯ ದಿನ ಪತ್ರಿಕೆಯಲ್ಲಿ ನಮ್ಮ ಭಾವ ಚಿತ್ರದ ಜೊತೆಗೆ ದೊಡ್ಡ ಅಕ್ಷರದಲ್ಲಿ ‘ಲೈಂಗಿಕ ಕಾರ್ಯಕರ್ತೆಯರು’ ಸಹ ಈ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು ಎಂದು ಅಚ್ಚಾಗಿದ್ದನ್ನು ನೋಡಿದಾಗ ನಮ್ಮ ಸಂತೋಷ ಗಾಳಿಗೊಡ್ಡಿದ ಸೊಡರಿನಂತಾಗಿತ್ತು. ಯಾವುದನ್ನು ಮರೆತು, ನಿರ್ಲಕ್ಷಿಸಿ ನಮ್ಮ ಪರಿಶ್ರಮದಿಂದ ಬೇರೆ ಬದುಕನ್ನು ಕಟ್ಟಿ ಕೊಂಡು ಸಮಾಜದಲ್ಲಿ ಗೌರವಯುತವಾಗಿ ಬಾಳ ಬೇಕೆನ್ನುವ ನಮ್ಮ ಕನಸಿಗೆ ಕೊಳ್ಳಿ ಇಟ್ಟಂತಾಗಿತ್ತು.ನಾವು ‘ಲೈಂಗಿಕ ಕಾರ್ಯಕರ್ತೆ’ ಯರಲ್ಲ,ಅವರ ಮಕ್ಕಳು. ಆದರೂ ಸಮಾಜ ನಮ್ಮನ್ನು ಬೆಂಬಲಿಸದೆ ಮತ್ತೆ ಆ ನರಕದ ಜೊತೆ ನಮ್ಮನ್ನು ಗುರುತಿಸುತಿದೆಯಲ್ಲಾ ಎಂಬ ನೋವು ಹದಿನೈದು ವರ್ಷದ ನನ್ನನ್ನು ಬಹಳವಾಗಿ ಕಾಡಿತ್ತು. ಆ ನೋವೇ ನನಗೆ ಆ ಪತ್ರಿಕೆ ವಿರುದ್ದ ಸಿಡಿದೆದ್ದು ಬದುಕಿನಲ್ಲಿ ಏನಾದರೂ ವಿಶಿಷ್ಟವಾದುದ್ದನ್ನು ಸಾಧಿಸ ಬೇಕೆಂಬ ಛಲ ಮೂಡಿಸಿತ್ತು.
ಪ್ರಾಪ್ತ ವಯಸ್ಸಿಗೆ ಬಂದ ಜನನ ನನಗೆ, ಅಮ್ಮನ ಮುಂದಾಲೋಚನೆಯಿಂದ ಪಡೆದ ಶಿಕ್ಷಣ ಆತ್ಮವಿಶ್ವಾಸ ನೀಡಿತ್ತು. ಅದರ ಬಲದಿಂದ ಸಮಾಜದಿಂದ ತುಳಿತಕ್ಕೊಳಗಾದ ನಿಮ್ನ ವರ್ಗದ ಜನರ ಹಾಗೂ ಕೆಂಪು ದೀಪದ ‘ವೇಶ್ಯೆಯರ ‘ ಹಾಗೂ ಅವರ ಮಕ್ಕಳ ಅಸಹಾಯಕ ಬದುಕಿಗೆ ಧ್ವನಿಯಾಗಿ ಅವರಿಗೊಂದು ಘನತೆವೆತ್ತ ಬದುಕು ನೀಡಲು ಮನ ಕಾತರಿಸುತಿತ್ತು. ಸಮಾಜಕ್ಕೆ ಅವರ ಬದುಕಿನ ಕಹಿ ಸತ್ಯ, ಕಷ್ಟ,ಕೋಟಲೆ, ಮಾನಸಿಕ ಆಘಾತ, ಕೀಳರಿಮೆ ಎಲ್ಲವನ್ನೂ ಕೂಗಿ , ಕೂಗಿ ಹೇಳ ಬೇಕೆನ್ನುವ ತುಡಿತ.ಆದರೆ ಈ ತುಡಿತದ ಸಂದೇಶವನ್ನು ಸಮಾಜಕ್ಕೆ ಹೇಗೆ,ಯಾವ ಮಾಧ್ಯಮದ ಮುಖಾಂತರ ತಿಳಿಸ ಬೇಕು ಎಂಬ ಗೊಂದಲ. ಈ ಗೊಂದಲಕ್ಕೆ ಪರಿಹಾರ ಸಿಕ್ಕಿದ್ದು ‘ಲೇಖನಿ ಖಡ್ಗಕ್ಕಿಂತ ಹರಿತ’ ಎಂಬ ಸತ್ಯದ ಅರಿವಾದಾಗ, ಕೈ ಬರಹದ ತ್ರೈಮಾಸಿಕ ಪತ್ರಿಕೆ ‘ಮಿಂಚು ಹುಳು’ ಜನ್ಮ ತಾಳಿತ್ತು.
ಪ್ರತಿಯೊಬ್ಬ ಮನುಷ್ಯನಿಗೂ ಅವನದೇ ಆದ ಸಾಮರ್ಥ್ಯವಿರುತ್ತದೆ . ಆ ಸಾಮರ್ಥ್ಯದ ಆಸರೆಯಲ್ಲಿ ಬದುಕಿನ ಬವಣೆಗಳನ್ನು ಎದುರಿಸಿ ತಮದ ಬದುಕಿನಲ್ಲಿ ಜ್ಯೋತಿ ಬೆಳಗಿಸಿ ಆಶಾವಾದದಿಂದ ಮುನ್ನಡೆದರೆ ಬದುಕು ದೀಪಾವಳಿಯಾಗುವುದೆಂಬ ಸತ್ಯದ ಅರಿವು ಮೂಡಿಸುವ ಚಿಕ್ಕ ಹಾಗೂ ಏಕಾಂಗಿಯಾಗಿ ಕತ್ತಲೆಯಲ್ಲಿ ಬೆಳಕು ಹೊಮ್ಮಿಸುವ ‘ಮಿಂಚು ಹುಳು’ (ಜುಗ್ನು) ನನ್ನ ಪತ್ರಿಕೆಯ ಹೆಸರಾಗಿತ್ತು. ಈ ಮಿಂಚು ಹುಳುವಿನಂತೆ ಕತ್ತಲೆಯ ಕೂಪದಲ್ಲಿ ನರಳುತ್ತಿರುವ ಅನೇಕ ಲೈಂಗಿಕ ಕಾರ್ಯಕರ್ತೆಯರು ಹಾಗೂ ಅವರ ಮಕ್ಕಳ ಬದುಕಿನಲ್ಲಿ ಬೆಳಕು ಮೂಡಿಸುವ ಸದುದ್ದೇಶ ನನ್ನದಾಗಿತ್ತು. ಪತ್ರಿಕೆ ಪ್ರಕಟಿಸಲು ಕೈಯಲ್ಲಿ ಹಣವಿಲ್ಲ. ಆದರೆ ದಮನಿತರ ದುರಿತಗಳಿಗೆ ಧ್ವನಿಯಾಗುವಾಸೆ ಉತ್ಕಟವಾಗಿ ಹೃದಯ ಕೊರೆಯುತಿತ್ತು. ಹಣಬಲದ ಬದಲು ಬರೆಯುವ ಛಲವಿದೆ, ಸಮ ಮನಸ್ಕರ ಬಲವಿದೆ ಮತ್ತೇಕೆ ಚಿಂತೆ ಎಂದು ಮೊದಲಿಗೆ ಕೇವಲ ಐದು ರೂಪಾಯಿ ಬೆಲೆಯೊಂದಿಗೆ ಆರು ಪುಟದ ಪತ್ರಿಕೆಯನ್ನು ಪ್ರಾರಂಭ ಮಾಡಿದೆನು. ಲೈಂಗಿಕ ಕಾರ್ಯಕರ್ತೆಯರ ದಾರುಣ ಬದುಕು, ಬವಣೆಯನ್ನು ಸಮಾಜಕ್ಕೆ ತಿಳಿಸುವುದು ಹಾಗೂ ಅವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುವ ಸಮಾಜದ ದರ್ಪದ ವರ್ತನೆಗಳನ್ನು ಅನಾವರಣಗೊಳಿಸುವುದು ಈ ಪತ್ರಿಕೆ ಪ್ರಾರಂಭಿಸುವ ಮುಖ್ಯ ಉದ್ದೇಶ ನನ್ನದಾಗಿತ್ತು. ಪ್ರತಿಯೊಂದು ಪುಟದಲ್ಲಿ ದಮನಿತರ ಅಂತರಂಗದ ನೋವು, ತಾಕಲಾಟಗಳನ್ನು ಕೈ ಬರಹದ ಮೂಲಕ ಪ್ರಚುರ ಪಡಿಸುವುದಾಗಿತ್ತು.
ಆದರೆ ಪತ್ರಿಕೆಯಲ್ಲಿ ಪ್ರಕಟಿಸಲು ಸುದ್ದಿಗಳನ್ನು ಹೇಗೆ, ಯಾರಿಂದ , ಯಾವ ರೀತಿ ಕ್ರೋಢಿಕರಿಸಬೇಕು ಎಂಬ ಸಮಸ್ಯೆಗೆ ಪರಿಹಾರವಾಗಿ ಓದು ಬರಹ ಕಲಿತ ಆಪ್ತ ಗೆಳತಿಯರನ್ನ ಹಾಗೂ ನನ್ನ ಪ್ರದೇಶದ ಮಕ್ಕಳನ್ನೇ ಸುದ್ದಿ ಸಂಗ್ರಹಕಾರರನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಆದರೆ ಪ್ರಾರಂಭದಲ್ಲಿ ನನ್ನ ಈ ಕಾರ್ಯಕ್ರಮದ ಉದ್ದೇಶ ತಿಳಿಯದ ನನ್ನ ಅಕ್ಕ ತಂಗಿಯರು ತಮ್ಮ ಮಕ್ಕಳನ್ನು ಈ ಕೆಲಸಕ್ಕೆ ಕಳಿಸಲು ಹಿಂಜರಿದಾಗ ನಾನು ಪ್ರತಿ ಮನೆಗೂ ಹೋಗಿ ವಿವರವಾಗಿ ಹೀನಾಯ ಬದುಕು ಬಾಳುತ್ತಿರುವ ನಮ್ಮೆಲ್ಲರ ನಿಜ ಜೀವನದ ಚಿತ್ರಣವನ್ನು ಸಮಾಜ, ಸರಕಾರದ ಮುಂದಿಟ್ಟು ನಮ್ಮ ಬದುಕಿಗೊಂದು ಒಳ್ಳೆಯ ತಿರುವು ಪಡೆಯುವ ಒಂದು ಪ್ರಯತ್ನ ಎಂದು ತಿಳಿಸಿ ಹೇಳಿದಾಗ ಅವರು ನನ್ನ ಈ ಕಾರ್ಯದಲ್ಲಿ ಕೈ ಜೋಡಿಸಿ, ತಮ್ಮ ಮಕ್ಕಳನ್ನು ಕಳಿಸಲು ಒಪ್ಪಿದಾಗ,ನನ್ನ ತಲೆಯ ಮೇಲಿದ್ದ ದೊಡ್ಡ ಭಾರ ಇಳಿದಿತ್ತು. ಕೂಪ ಮಂಡೂಕದಂತೆ ಇದಿಷ್ಟೇ ತಮ್ಮ ಜಗತ್ತು ಎಂದು ತಿಳಿದಿದ್ದ, ಸಮಾಜದ ತುಳಿತಕ್ಕೆ ಹೈರಾಣಾದ ನನ್ನೆಲ್ಲ ಸಹೋದರಿಯರಿಗೆ, ನನ್ನ ಉದಾಹರಣೆಯನ್ನೇ ಕೊಟ್ಟು ಶಿಕ್ಷಣದ ಮಹತ್ವ ತಿಳಿಸಿ ಮಕ್ಕಳನ್ನು ಶಾಲೆಗೆ ಕಳಿಸಲು ಮನವೊಲಿಸಿದಾಗ ಮಕ್ಕಳು ಶಾಲೆಯ ಮುಖ ನೋಡ ತೊಡಗಿದರು. ಮೇರಿ, ನಳಿನಿ ಟೀಚರರ ಮಾರ್ಗದರ್ಶನದಲ್ಲಿ ಆಶಾ,ರಜಿಯಾ, ತಬಸ್ಸುಮ್ ಇವರ ಸಹಕಾರದಿಂದ ಹೆಣ್ಣು ಮಕ್ಕಳಿಗೆ ಕಸೂತಿ, ಕ್ರೋಷಾ, ಬಟ್ಟೆ ಹೊಲಿಯುವುದು ,ಪಿಕೋ, ಫಾಲ್ಸ ಹಚ್ಚುವ ಕೆಲಸಗಳನ್ನು ಕಲಿಸಲಾರಂಭಿಸಿದೆ. ಈ ಮೂಲಕ ಮಕ್ಕಳ ಮನದಲ್ಲಿ ಸ್ವಾಭಿಮಾನ, ಸ್ವಾವಲಂಬನೆಯ ಕನಸು ಬಿತ್ತಲಾರಂಭಿಸಿದೆ.ತಮ್ಮ ಅಮ್ಮಂದಿರನ್ನು ಆ ಪಾಪ ಕೂಪದಿಂದ ಮೇಲೆತ್ತಿ ಅವರಿಗೊಂದು ಘನತೆವೆತ್ತ ಬದುಕು ನೀಡುವ ಆಸೆಯನ್ನು ಮಕ್ಕಳಲ್ಲಿ ಹುಟ್ಟಿಸಿದೆ.
ನನ್ನ ಈ ಸಮಾಜ ಕಾರ್ಯ ಜೀನತ್ ಆಪಾಳ ನಿದ್ದೆಗೆಡಿಸಿತ್ತು. ಎಲ್ಲರೂ ವಿದ್ಯೆ ಕಲಿತು ಸ್ವಾವಲಂಬಿಗಳಾಗಿ ದುಡಿದು ಸಮಾಜದ ಮುಂಚೂಣಿಗೆ ಬಂದರೆ ತನ್ನ ಹೊಟ್ಟೆಯ ಗತಿಯೇನು ? ಎಂದು ಗುಂಡಾಗಳಿಂದ ಬೆದರಿಕೆ ಹಾಕಿಸಿದಾಗ ,ಅವಳ ಬೆದರಿಕೆಗೆ ಜಗ್ಗದ ನಾನು ನೇರವಾಗಿ ಅವಳ ಮನೆಗೇ ಹೋಗಿ ನೋಡಿ ಆಪಾ…’ನಾನು ಹೋರಾಟ ಮಾಡುತ್ತಿರುವುದು ಈ ಕೆಂಪು ದೀಪದ ನರಕದಲ್ಲಿರುವ ನನ್ನೆಲ್ಲ ಸೋದರಿಯರಿಗೆ ಹಾಗೂ ಅವರ ಅಮಾಯಕ ಮಕ್ಕಳಿಗೆ ಒಂದು ಗೌರವಯುತ , ಸ್ವಾಭಿಮಾನದ ಬದುಕು ದೊರಕಿಸಿ ಕೊಡಲು . ಇದು ನನ್ನ ಬದುಕಿನ ಕನಸು. ಇದನ್ನು ನನಸಾಗಿಸಿ ಕೊಳ್ಳುವುದೇ ನನ್ನ ಧೇಯ್ಯ. ನೀವೂ ಇದಕ್ಕೆ ಸಹಕಾರ ಕೊಟ್ಟರೆ ಸರಿ, ಇಲ್ಲವಾದರೆ ಇಡೀ ಸಮುದಾಯದ ಜನರು ನಿಮಗೆ ತಿರುಗಿ ಬಿದ್ದರೆ ಅಚ್ಚರಿಯಿಲ್ಲ.ಈಗ ಅವರೆಲ್ಲರಿಗೂ ಶಿಕ್ಷಣ ಪಡೆದು ತಾವು ಈ ಕತ್ತಲ ಕೂಪದಿಂದ ಹೊರ ಬರಬೇಕೆಂಬ ಅರಿವು ಮೂಡಿದೆ ಇದಕ್ಕೆ ಅಡ್ಡಿ ಮಾಡಬೇಡಿ’ ಎಂದಾಗ ಬೇಟೆಯಾಡಲು ಶಕ್ತಿ ಸಾಲದ ಮುದಿ ಸಿಂಹದಂತೆ ಗರ್ಜಿಸಲಾಗದೆ ತೆಪ್ಪಗಾಗಿದ್ದಳು ವಯಸ್ಸಾದ ಆಪಾ. ಕೈ ಬರಹದ ‘ ಮಿಂಚು ಹುಳು’ ಪತ್ರಿಕೆಯ ಮುಖ ಪುಟ , ಕಾಲಲ್ಲಿ ಗೆಜ್ಜೆ ಕಟ್ಟಿಕೊಂಡು, ಮುಖಕ್ಕೆ ಅವಕುಂಠನ ಧರಿಸಿದ ಯುವತಿಯ ಚಿತ್ರದೊಂದಿಗೆ ಅಲಂಕೃತವಾಗಿತ್ತು. ಕೆಂಪು ದೀಪದ ಪ್ರದೇಶದ ನನ್ನ ಗೆಳತಿಯರು ಹಾಗೂ ಮಕ್ಕಳು ವರದಿಗಾರರಾಗಿಯೂ, ಪೇಪರ್ ಹಂಚುವ ಹುಡುಗರಾಗಿಯೂ ಕೆಲಸ ಮಾಡ ತೊಡಗಿದರು. ಓದಲು , ಬರೆಯಲು ಬರದ ಪುಟ್ಟ ಆಸಿಫ ತಾ ಬರೆದ ಚಿತ್ರವನ್ನು ತಂದು ನನ್ನ ಕೈಯಲ್ಲಿಟ್ಟಾಗ ನನ್ನ ಜಯದ ಮೊದಲ ಹೆಜ್ಜೆ ಎನಿಸಿತ್ತು .ಅವನು ಬರೆದ ಚಿತ್ರ ಹೇಗಿತ್ತೆಂದರೆ ಹಾಳೆಯಲ್ಲಿ ಒಂದು ಮೂಲೆಯಲ್ಲಿ ಪೆನ್ಸಿಲ್ನಿಂದ ಗಾಢವಾಗಿ ಗೀಚಿದ್ದ ಹಾಗೂ ಅದರ ಮುಂದೆ ಎರಡು ಕಾಲು ಎರಡು ಕೈನ ಒಂದು ಆಕೃತಿ ಮಾಡಿದ್ದ.ನಾನು ಅವನಿಗೆ ಚಿತ್ರದಲ್ಲಿ ಏನಿದೆ,ನೀನೇನು ಬರದಿದ್ದೀಯಾ ಎಂದು ಕೇಳಿದಾಗ ಅವನು ಪೆನ್ಸಿಲ್ಲಿನಿಂದ ಗೀಚಿದ್ದ ಕಡೆ ತೋರಿಸಿ ‘ವೋ ರಾತ ಹೈ ‘ಮತ್ತು ಆಕೃತಿಯ ಕಡೆ ತೋರಿಸಿ ‘ಡರಾಹುವಾ ಮೈ ಹೂಂ’ ಎಂದಾಗ , ಸನಿಹ ಅಮ್ಮನಿಲ್ಲದ ರಾತ್ರಿ ಅವನ ಪುಟ್ಡ ಹೃದಯದಲ್ಲಿ ಹೆಪ್ಪು ಗಟ್ಟಿದ ಭಯದ ಸಂಕೇತವಾಗಿತ್ತು.ತನ್ನೊಳಗೆ ನಡೆಯವ ಮುಗ್ದ ಮನದ ತಳಮಳಗಳನ್ನುಈ ಚಿತ್ರದ ಮೂಲಕ ತಿಳಿಸಿದ್ದ. ಇದು ನನ್ನನ್ನು ನನ್ನ ಬಾಲ್ಯಕ್ಕೆ ಎಳೆದೊಯ್ದು ಬಹಳೇ ಕಂಗೆಡಿಸಿತು.
ಶಾಲೆಗೆ ಹೋಗಿ ಬರೆಯಲು ಕಲಿತಿದ್ದ ಮಕ್ಕಳು ಬರೆದ, ಅವರು ನೋಡಿದ್ದ,ಅನುಭವಿಸಿದ್ದ ಕರಾಳ ನೆನಪುಗಳನ್ನು ಓದಿದಾಗ ಕಣ್ಣೀರಿನ ಜೊತೆ ಆಕ್ರೋಶವೂ ಹೊರ ಹೊಮ್ಮಿತ್ತು.ಹೀಗೆ ಮಕ್ಕಳು ತಮ್ಮ ನೋವು,ಹತಾಶೆ,ಪಟ್ಟ ಅವಮಾನಗಳನ್ನು, ಕನಸುಗಳನ್ನು ಹಾಳೆಯಲ್ಲಿ ಬರೆದು ಕೊಡ ತೊಡಗಿದರು. ಸ್ವಲ್ಪ ದೊಡ್ಡ ಮಕ್ಕಳು ಸೈಕಲ್ಲೇರಿ ಸಮಾಜದ ತುಳಿತಕ್ಕೊಳಪಟ್ಟ ಅಸಹಾಯಕ ಹೆಣ್ಣು ಮಕ್ಕಳ ಕತೆಗಳನ್ನು ಕ್ರೋಢಿಕರಿಸಿ ಕೈಯಿಂದ ಬರೆದು ವರದಿಗಳನ್ನು ಕೊಡ ತೊಡಗಿದರು. ಹೀಗಿರುವಾಗ ಒಂದು ಜೋಡಿ.. ಅಂತರ್ಜಾತಿ ವಿವಾಹವಾದಾಗ ವರನ ಮನೆಯವರು ವರದಕ್ಷಿಣೆಗಾಗಿ ವಧುವಿನ ಮನೆಯವರನ್ನು ಪೀಡಿಸಿ ಅವರಿಂದ ಕೊಡಲು ಸಾಧ್ಯವಾಗದಿದ್ದಾಗ ಆ ಹೆಣ್ಣು ಮಗಳನ್ನು ಸಾಯಿಸಿ ಎರಡು ತುಂಡು ಮಾಡಿದ ಸಮಾಚಾರ ತಿಳಿದಾಗ ‘ಮಿಂಚು ಹುಳು’ ಪತ್ರಿಕೆಯ ನನ್ನ ವರದಿಗಾರರು ಅದನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಈ ಕೇಸ್ ಕೋರ್ಟಿಗೆ ಹೋದಾಗ ವಧುವಿನ ಕಡೆಯವರಿಗೆ ಈ ಪತ್ರಿಕಾ ಪ್ರಕಟನೆ ವರನ ಕಡೆಯವರ ವಿರುದ್ದ ಹೋರಾಡಲು ಬಲ ತುಂಬಿತ್ತು.
ಪ್ರತಿ ವಾರ ಹಪ್ತಾ ವಸೂಲಿ ಮಾಡಲು ಬರುತ್ತಿದ್ದ ಗುಂಡಾಗಳಿಗೆ , ನನ್ನ ಸಹೋದರಿಯರಿಂದ ದುಡ್ಡು ಕೊಡಲಾಗದಿದ್ದರೆ ಅವರ ಮೇಲೆ ನಡೆಸುವ ದೌರ್ಜನ್ಯವನ್ನು ಪತ್ರಿಕೆಯಲ್ಲಿ ಪ್ರಕಟಿಸಿದಾಗ , ಗುಂಡಾಗಳಿಗೆ ‘ಮಿಂಚು ಹುಳು’ ವಿನ ಬಗ್ಗೆ ಹೆದರಿಕೆ ಉಂಟಾಗಿ ಅವರ ದೌರ್ಜನ್ಯ ಕಡಿಮೆಯಾಗಿತ್ತು. ಹೀಗೆ ಕಾನೂನಾತ್ಮಕ ಹೋರಾಟಕ್ಕೆ ಕಾನೂನಿನ ತಿಳುವಳಿಕೆ, ಸಾಂವಿಧಾನಿಕ ಹಕ್ಕು, ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಪತ್ರಿಕೆಯಲ್ಲಿ ಹೆಚ್ಚು ಒತ್ತು ಕೊಟ್ಟು ದಮನಿತರಿಗೆ ಅವರ ಹಕ್ಕು ಬಾಧ್ಯತೆಗಳ ಪರಿಚಯ ಮಾಡಿಸ ತೊಡಗಿದೆ. ಮೊದ ಮೊದಲು ತಮ್ಮ ಹೆಸರು,ಉದ್ದೇಶವನ್ನು ಮರೆ ಮಾಚುತಿದ್ದ ನನ್ನ ವರದಿಗಾರರ ಪಡೆ ಮೆಲ್ಲಗೆ ಸಮಾಜದಲ್ಲಿ ಇವರ ಸಾಮಾಜಿಕ ಕಾರ್ಯಗಳು ಶಾಘ್ಲನೆ ಪಡೆಯ ತೊಡಗಿದಾಗ ಧೈರ್ಯದಿಂದ ತಮ್ಮ ಗುರುತು, ಉದ್ದೇಶ ಹೇಳಿಕೊಂಡು ಮುನ್ನಡೆಯ ತೊಡಗಿದರು.ಬೇರೆ ಬೇರೆ ಸಂಘ ಸಂಸ್ಥೆ , ಸರಕಾರಿ ಕಚೇರಿಗಳಿಗೆ ಹೋಗಿ ನಮ್ಮ ಪತ್ರಿಕೆಗಳನ್ನು ಹಂಚ ತೊಡಗಿದರು. ಪತ್ರಿಕೆಯನ್ನು ಓದಿದವರಿಂದ ಉತ್ತಮ ಪ್ರತಿಕ್ರಿಯೆಗಳು ಬರತೊಡಗಿದವು. ಅಕ್ಕ, ಪಕ್ಕದ ರಾಜ್ಯಗಳಲ್ಲೂ ಪತ್ರಿಕೆ ಸಂಚಲನವನ್ನು ಉಂಟು ಮಾಡಿತು. ಪತ್ರಿಕೆ ಓದಿದ ತಳ ಸಮುದಾಯದ ಹೆಣ್ಣು ಮಕ್ಕಳು ಸ್ವಯಂಪ್ರೇರಿತರಾಗಿ ‘ಮಿಂಚು ಹುಳು’ಪತ್ರಿಕೆಯ ವರದಿಗಾರರಾಗ ತೊಡಗಿದರು. ಲೈಂಗಿಕ ಶೋಷಣೆಯ ಜಗತ್ತಿನಿಂದ ದೂರವಾಗಿ, ಸ್ವಾವಲಂಬಿಗಳಾಗಲು ಶಿಕ್ಷಣ ಪಡೆಯ ತೊಡಗಿದರು. ಈ ಪತ್ರಿಕೆಗೆ ಬರೆದ ಮಕ್ಕಳಲ್ಲಿ ಕೆಲವರು ಸಮಾಜ ಸೇವಕರಾಗಬೇಕೆಂದರೆ, ಕೆಲವರು ಸೇನೆ ಸೇರುವ ಇಚ್ಚೆ ವ್ಯಕ್ತ ಪಡಿಸಿ ಬರೆದ ಬರಹಗಳು , ರೋಗಿಗಳ ಚಿಕಿತ್ಸೆಗೆ ನೆರವಾಗುವ ನರ್ಸ ಆಗುವ , ಶಿಕ್ಷಕರಾಗುವ ಬಗ್ಗೆ ಬರಹಗಳು ಪ್ರಕಟವಾದವು.
ನಾನು ಇಟ್ಟ ದಿಟ್ಟ ಹೆಜ್ಜೆಯಿಂದ ನಿಧಾನವಾಗಿ ಲೈಂಗಿಕ ಕಾರ್ಯಕರ್ತೆಯರ ಹಾಗೂ ಅವರ ಮಕ್ಕಳ ಕತ್ತಲೆ ತುಂಬಿದ ಬದುಕಿನಲ್ಲಿ ಬೆಳಕು ಮೂಡಲಾರಂಭಿಸಿತು. ಕೇವಲ ೫ ರೂ.ಗೆ ಪ್ರಾರಂಭವಾದ ಪತ್ರಿಕೆಯ ಬೆಲೆ ಇಂದು ೫೦ರೂ ಆಗಿದೆ.ಅನೇಕ ಸಂಘ ಸಂಸ್ಥೆಗಳಿಗೆ,ಸರಕಾರಿ ಕಚೇರಿಗಳಿಗೆ ಪತ್ರಿಕೆ ತಲುಪುತ್ತಿದೆ. ಚಾರಿಟೇಬಲ್ ಸಂಸ್ಥೆಗಳು ಸಹಾಯ ಮಾಡಲು ಮುಂದೆ ಬರುತ್ತಿವೆ.ನಗರದ ಹಾಗೂ ಪ್ರಸಿದ್ದ ವಿಶ್ವವಿದ್ಯಾಲಯಗಳಿಂದ ಪತ್ರಿಕೆಗೆ ಬೇಡಿಕೆ ಬರಲಾರಂಭಿಸಿದೆ. ಓದುಗರು ಪ್ರೋತ್ಸಾಹ ನೀಡುತ್ತಾ ಪತ್ರಿಕೆಯ ಕುಂದು ಕೊರತೆಗಳ ಬಗ್ಗೆ ತಿಳಿ ಹೇಳಿ , ಮತ್ತು ಯಾವ ರೀತಿಯ ಬರಹಗಳು ಅವಶ್ಯಕ ಎಂಬುದರ ಬಗ್ಗೆ ಮಾಹಿತಿ ನೀಡಿ ಪತ್ರಿಕೆಯ ಉನ್ನತಿಗೆ ಕಾರಣವಾಗುತ್ತಿದ್ದಾರೆ ‘ ಮಿಂಚು ಹುಳು’ ಪತ್ರಿಕೆಯ ಕಾರ್ಯವ್ಯಾಪ್ತಿ ವಿಸ್ತಾರಗೊಳ್ಳುತ್ತ ಸಾಗಿ ಮಕ್ಕಳಿಗೆ ಹಾಗೂ ಅವರ ಹೆತ್ತಮ್ಮರಿಗೆ ಒದಗಿಸ ಬೇಕಾದ ಮೂಲಭೂತ ಸೌಕರ್ಯ ಕ್ಕಾಗಿ ಹಣದ ಅಡಚಣೆ ಕಾಡತೊಡಗಿದಾಗ ಸರಕಾರದಿಂದ ಆರ್ಥಿಕ ಸಹಾಯ ಪಡೆಯಲು ನಮ್ಮ ಕಾರ್ಯ ಚಟುವಟಿಕೆಗಳ ವಿಸ್ತಾರವಾದ ವರದಿಯನ್ನು ಸರಕಾರಕ್ಕೆ ತಲುಪಿಸಿದಾಗ ನಮ್ಮ ನಿಸ್ವಾರ್ಥ ಸಾಧನೆಯನ್ನು ಗಮನಿಸಿ ಸರಕಾರ ಪ್ರತಿವರ್ಷ ಹಣ ಬಿಡುಗಡೆ ಮಾಡತೊಡಗಿತು.ಇದರಿಂದ ನಮ್ಮ ಹುಮ್ಮಸ್ಸಿಗೆ ಇನ್ನಷ್ಟು ರೆಕ್ಕೆ ಪುಕ್ಕ ಹುಟ್ಟಿಕೊಂಡು ಬೇರೆ ಬೇರೆ ತಂಡಗಳನ್ನು ಮಾಡಿಕೊಂಡು ನಮ್ಮ ಸಾಧನೆಯ ತುತ್ತೂರಿ ಊದುತ್ತ ದೊಡ್ಡ,ದೊಡ್ಡ ಕಾರ್ಪೋರೆಟ್ ಕಂಪನಿಗಳ ಮೊರೆ ಹೊಕ್ಕಾಗ ಹಣದ ಹೊಳೆಯೇ ಹರಿದು ಬಂದಿತ್ತು. ಇಂದು ಆ ಹಣದಿಂದಲೇ ಎರಡು ರೂಮಿನಲ್ಲಿ ಇಪ್ಪತೈದು ಹುಡುಗರಿಂದ ಪ್ರಾರಂಭವಾದ ‘ಮಿಂಚು ಹುಳು’ ಶಾಲೆಯಲ್ಲಿ ಇಂದು ದೊಡ್ಡದಾದ ಕಟ್ಟಡದಲ್ಲಿ 500 ಹುಡುಗರು ಓದುತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಬದುಕಲು ಬೇಕಾದ ಕುಶಲ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಕಮ್ಮಾರಿಕೆ, ಚಮ್ಮಾರಿಕೆ, ಬಡಿಗತನ, ಟೇಲರಿಂಗ ಜೊತೆಗೆ ಕಂಪ್ಯೂಟರ್ ಕಲಿಕೆಗೂ ಹೆಚ್ಚು ಒತ್ತು ಕೊಡಲಾಗುತ್ತಿದೆ. ವೇಶ್ಯಾವೃತ್ತಿಯಿಂದ ಹೊರಬಂದ ಸಹೋದರಿಯರಿಗೆ ಗೌರವಯುಕ್ತ ಬದುಕು ನಡೆಸಲು ವಿಭಿನ್ನ ಯೋಜನೆಗಳ ಮೂಲಕ ಸಮಾಜದ ಮುನ್ನೆಲೆಗೆ ತರುವಲ್ಲಿ ಯಶ ಕಾಣುತಿದ್ದೇವೆ.
ಅಂದಿನ ಚಿಕ್ಕ ಆಸಿಫ್ ಇಂದು ಬಿ.ಕಾಮ್ ಮಾಡಿ ಸಮಾಜದ ಲೈಂಗಿಕ ಕಾರ್ಯಕರ್ತರ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಿ ಅವರನ್ನು ಸಮಾಜದ ಮುನ್ನಲೆಗೆ ತರುವಲ್ಲಿ ಯಶಸ್ಸು ಕಂಡು ಆತ್ಮ ಸಮ್ಮಾನದ ಬದುಕಿನತ್ತ ಹೆಜ್ಜೆ ಇಡುತ್ತಿದ್ದಾನೆ. ‘ಮಿಂಚು ಹುಳು’ ಪತ್ರಿಕೆಯನ್ನು ಓದಿ ಪ್ರೇರೇಪಿತಳಾದ ಪಕ್ಕದ ಜಿಲ್ಲೆಯ ತಳ ಸಮುದಾಯದ ಪಾಯಲ್ M.S.W ಮಾಡಿ ತನ್ನ ಸಮಾಜ ಬಂಧುಗಳ ಉನ್ನತಿಗಾಗಿ ಶ್ರಮಿಸುತ್ತ ,ಪತ್ರಿಕೆಗೆ ವರದಿಗಾರಳಾಗಿ ಸೇವೆ ಸಲ್ಲಿಸುವಲ್ಲಿ ಸಾರ್ಥಕತೆ ಕಂಡು ಕೊಂಡಿದ್ದಾಳೆ. ನಮ್ಮ ಶಾಲೆಯಲ್ಲಿ ಓದಿದ ಮಕ್ಕಳೇ ಇಂದು ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ತಮ್ಮದೇ ಉದಾಹರಣೆಯಿಂದ ತಮ್ಮ ಬಾಂಧವರಿಗೆ ಬದುಕಿನ ಪಾಠ ಕಲಿಸುತಿದ್ದಾರೆ.ಕೆಲವರು ನರ್ಸಿಂಗ್ ಕಲಿತು ರೋಗಿಗಳ, ವೃದ್ದರ ಸೇವೆ ಮಾಡುತ್ತ ಧನ್ಯತೆಯನ್ನು ಅನುಭವಿಸುತಿದ್ದಾರೆ.
ಶಾಲೆಯಲ್ಲಿ ಕಲಿತ ವಿದ್ಯೆಯಿಂದ ಬದುಕನ್ನು ರೂಪಿಸಿಕೊಂಡು ಸಶಕ್ತ ದುಡಿಮೆಗಾರರಾಗಿ ಒಳ್ಳೆಯ ಆದಾಯ ಗಳಿಸುತ್ತಿರುವ ಅಂದಿನ ಅಸಹಾಯಕ ಮಕ್ಕಳ ಮುಖದಲ್ಲಿ ಇಂದು ಸ್ವಾಭಿಮಾನದ ತೇಜಸ್ಸು ಬೆಳಗುತಿದೆ.ತಮ್ಮ ಆದಾಯದ ಒಂದು ಸ್ವಲ್ಪ ಭಾಗವನ್ನು ‘ಮಿಂಚು ಹುಳ’ಕ್ಕೆ ಅರ್ಪಿಸಲು ಬಂದಾಗ ನನ್ನೆದೆ ಹೆಮ್ಮೆಯಿಂದ ಬೀಗುತ್ತದೆ.ನಿಮ್ಮ ಜೊತೆ ನಾವಿದ್ದೇವೆ ಎಂದಾಗ ಸಾರ್ಥಕತೆಯ ಭಾವ ನನ್ನಲ್ಲುಕ್ಕುತ್ತದೆ. ಇಂದು ಸರಕಾರ ಏರ್ಪಡಿಸಿದ್ದ ಸಮಾರಂಭದಲ್ಲಿ ನನ್ನ ಈ ಎಲ್ಲ ಸಾಧನೆಗಳನ್ನು ಪರದೆ ಮೇಲೆ ಮೂಡಿಸಿ ವಿವರಣೆ ಕೊಟ್ಟಾಗ ಕಿವಿಗಡಚಿಕ್ಕುವಂತ ಕರತಾಡನದಿಂದ ಐವತ್ತರ ಅಂಚು ದಾಟಿರುವ ನನ್ನ ಕಂಗಳು ಇನ್ನೂ ಹೆಚ್ಚಿನ ಸಾಧನೆಯ ಕನಸು ಕಾಣುತಿತ್ತು.
- ಪುಷ್ಪಾ ಹಾಲಭಾವಿ, ಧಾರವಾಡ.
4 thoughts on “ಮಿಂಚು ಹುಳು”
ಕಥೆಯಲ್ಲವಿದು ವ್ಯಥೆ… ಸುಂದರವಾದ ಹೆಣಿಕೆ.
ಇದು ಮುಂಬಯಿನಲ್ಲಿ ನಡೆಯುವ ಒಂದು ಸಾಂದ್ರೀಕೃತ, ಹಿಂದಿ ಚಿತ್ರಕಥೆಯೋಪಾದಿಯಲ್ಲಿಯ, ಒಂದು ಅರ್ಥಪೂರ್ಣ ನಿವೇದನೆಯ ಸಮರ್ಥ ನಿರೂಪಣೆ. ಮುಂಬಯಿ ಎಂಬ ಜನ ಸಮುದ್ರದ ಆಳವನ್ನು ಅಳೆದವರಾರು? ಅರಿತವರಾರು? ಪ್ರಯತ್ನಿಸಿದ ಎಷ್ಟೋ ಜನ ಈಗಾಗಲೇ ಮಣ್ಣಾಗಿದ್ದಾರೆ! ಚಿಂತೆಯೇಕೆ? ಆದರೆ, ಯಾರೇ ಬಂದರೂ ಸೇರಿಹೋಗುವ, ಅವರ ಬದುಕಿನ ಊಟಕ್ಕೆ ಆಸರೆ ಕೊಡುವ, ಇಂತಹ ಶಹರ ಮತ್ತೊಂದಿಲ್ಲ. ಇಲ್ಲಿಯ ಕತೆಯಂತಹ ಸಾವಿರಾರು ಕತೆಗಳು, ಬೇರೆ ಬೇರೆ ರೂಪದಲ್ಲಿ, ದುರ್ಲಕ್ಷತೆಯ, ನಿರ್ಲಕ್ಷತೆಯ ಅಬ್ಬರಗಳಲ್ಲಿ, ಹೊಸೆದು ಹೋಗಿರಬಹುದು.
ಆದರೂ, ಒಂದು ‘ಮಿಂಚು ಹುಳ’ದ ರೂಪಕದಲ್ಲಿ ಅತ್ಯಂತ ಜಾಗರೂಕತೆಯಿಂದ, ಬೆಳಕಿಸಿದ, ‘ಭವಿಷ್ಯದಲ್ಲೂ ಸಹ ನೀನು ಇಂಥ ಅಸಹಾಯಕರ ಕತ್ತಲ ಬದುಕಿಗೆ ದಾರಿ ತೋರುವ ‘ಮಿಂಚು ಹುಳು’ – ಹೀನೋಪಮೆ ಅನ್ನಲಾಗದು, ಯಾಕೆಂದರೆ, ಇದು ತಾತ್ಕಾಲಿಕ / ಆರಂಭದ ಅಸಹಾಯಕತೆಯ, ನಿರ್ಬಲ, ಅಶಕ್ತ ರೂಪವಷ್ಟೇ – ಆಗು ಎಂದು ಹಾರೈಸುವಾಗ, ಪೂರ್ತಿ ಝರ್ಜರಿತ ಸೂಕ್ಷ್ಮತೆಯಲ್ಲಿಯೂ, ಅದಮ್ಯ ಆಶಾವಾದದ ಪ್ರಜ್ವಲ ಕಿಡಿ, ‘ತೊಯ್ದ ಗುಬ್ಬಚ್ಚಿಗಳ ಬೆದರಿದ ನೋಟದ’ ದುರ್ಭಾಗ್ಯತೆಯ ಹಂತದಿಂದ, ದಾರುಣತೆಯ ಪರಮಾವಧಿಯಲ್ಲಿ ‘ಬಾಣಲೆಯಿಂದ ಬೆಂಕಿಗೆ’ ಹಾಕಿದಾಗಲೂ, ‘ಬದುಕಿನ ಕಹಿ ಸತ್ಯ’ವನ್ನೆಲ್ಲ ನುಂಗುತ್ತ, ‘ನೇಯ್ದ ಹೆಣಿಕೆ, ದಾರಿ ತೋರುವ’ ಮೇರಿ ಟೀಚರ್, ತಾವೇ ಹಣ ಹಾಕಿ ತಂದು ಕೊಡುವ ವಾಸ್ತವದಲ್ಲಿ, ಆದರ್ಶದ ಲೇಪನವಾಗಿ ಒದಗುವ ಸನ್ನಿವೇಶ, ಬೆಳಕಿನಿಂದ ಕತ್ತಲೆಗೆ ಹೋದವರಿಗೆ, ಕತ್ತಲೆಯಿಂದ ಬೆಳಕನ್ನೀವ ‘ಸ್ವಾಭಿಮಾನದ ತೇಜಸ್ಸಿ’ಗೆ ಕಾರಣೀಭೂತವಾಗುವ, ಧನಾತ್ಮಕ ಸಾರ್ಥಕ್ಯದ ತಿರುವಿನಿಂದ, ಬಲಿಷ್ಠವಾಗಿ ಏರುವ ಹಾದಿಯಲ್ಲಿ, ಹಾಯುವ ಒಂದು ಸಣ್ಣ ವಿವೇಕದ ಮಾತು – ‘ಹಾಳೆಯಲ್ಲಿ ಒಂದು ಮೂಲೆಯಲ್ಲಿ ಪೆನ್ಸಿಲ್ನಿಂದ ಗಾಢವಾಗಿ ಗೀಚಿದ್ದ ಹಾಗೂ ಅದರ ಮುಂದೆ ಎರಡು ಕಾಲು ಎರಡು ಕೈನ ಒಂದು ಆಕೃತಿ ಮಾಡಿದ’ ಸಂಕೇತವನ್ನು ಹೇಳಲು ಕೂಡ, ಲೇಖಕಿ ಮರೆಯುವದಿಲ್ಲ.
ಕತೆಯೊಳಗೆ ಅವಕಾಶವಿದ್ದರೂ, ಯಾವುದೇ ದುರುಳ ವಾಕ್ಯದ, ತಪ್ಪಿಯೂ ಉಪಯೋಗವಾಗದ, ಸತರ್ಕ, ಸಚೇತ, ಸಕಾರಾತ್ಮಕ, ಸಂಯುಕ್ತ ಸಹಿಷ್ಣುತೆಯ ಸಂಕಲ್ಪದಿಂದ, ಸಾವಕಾಶವಾಗಿ, ಆದರೆ ಏಕಮುಖವಾಗಿರುವ ಛಲಕ್ಕೆ ಒದಗಿದ ಸರ್ವ ದಿಶೆಯ ಸಂಪೂರ್ಣ ಸಹಕಾರದಿಂದ, ಪರಾಕಾಷ್ಠೆಗೆ ತಲುಪುತ್ತಿರುವಂತೆ, ‘ಎಲ್ಲ ಸಾಧನೆಗಳನ್ನು ಪರದೆ ಮೇಲೆ ಮೂಡಿಸಿ ವಿವರಣೆ ಕೊಟ್ಟಾಗ ಕಿವಿಗಡಚಿಕ್ಕುವಂತ ಕರತಾಡನದಿಂದ,……….ಕಂಗಳು ಇನ್ನೂ ಹೆಚ್ಚಿನ ಸಾಧನೆಯ ಕನಸು ಕಾಣುತಿತ್ತು’ ಎಂದು ಮುಕ್ತಾಯವಾಗುವಾಗ, ‘ಲೇಖನಿ ಖಡ್ಗಕ್ಕಿಂತ ಹರಿತ’ ಎಂಬ ಸತ್ಯದಲ್ಲಿ, ಸುಪ್ರಸಿಧ್ಧ ವಿಜ್ಞಾನಿ, ಆಲ್ಬರ್ಟ್ ಐನ್ಸ್ಟೀನ್ ಹೇಳಿದ ‘ಕಲ್ಪನಾಶಕ್ತಿ, ಬುದ್ಧಿಶಕ್ತಿಗಿಂತ ಮೇಲು!’ ಎಂಬ ನೆಲೆಯನ್ನು , ನಿಶ್ಚಿತವಾಗಿ ತಲುಪುತ್ತದೆ!
ಒಂದು ಇಡೀ ಕಾದಂಬರಿಯ ವಸ್ತುವನ್ನು, ಒಂದು ಚಿಕ್ಕ ಕತೆಗೆ, ಸ್ವಾರಸ್ಯಕ್ಕೆ ಕಿಂಚಿತ್ತೂ ಸಂಕೋಚ ಮಾಡದೆ, ಸತ್ವಯುತವಾಗಿ, ಭಟ್ಟಿ ಇಳಿಸಿದ ಲೇಖಕಿಯ ಉತ್ತಮ ನಿರೂಪಣೆಯ ಕ್ಷಮತೆಗೆ, ವಿಶೇಷ ಧನ್ಯವಾದಗಳು.
ಕತೆ ಒಟ್ಟಾರೆ ಯಾಗಿ ಕೊಡುವ ಧನಾತ್ಮಕ ಸಂದೇಶ ಮನಮುಟ್ಟುತ್ತದೆ.
ನಿರೂಪಣೆ ಅದ್ಭುತ