………ಹೊಸ ಪುಸ್ತಕ ಕಳಿಸೋದೆಂದರೆ

ಇದೀಗ ಬಿಡುಗಡೆಗೊಂಡ
ನಳನಳಿಸುವ ಹಸುಳೆಯಂತಹ ಪರಿಮಳಯುಕ್ತ ಪುಸ್ತಕವನ್ನು
ಓದುಗರಿಗೆ ಅಂಚೆ ಮೂಲಕ ಕಳಿಸೋದೆಂದರೆ;

ಗಾತ್ರಕ್ಕೆ ತಕ್ಕುದಾದ ಲಕೋಟೆ ಅಥವಾ
ಪುಸ್ತಕವನ್ನು ಆಪ್ಯಾಯಮಾನವಾಗಿ ಅಪ್ಪಿದ ಕಂದು ಬಣ್ಣದ ಗರಿಗರಿ ಕಾಗದ
ವಿಳಾಸ ನಮೂದಿಸಲು ಅಕ್ಷರ ಜೋಡಣೆಯ ಹೊಣೆ ಹೊತ್ತ
ನೀಲಿ ಶಾಯಿ,
ಜೋಪಾನವಾಗಿರಲೆಂದೇ ವಿಳಾಸದ ಮೇಲೆರಡು ಸುತ್ತು ಅಂಟಿಸಿದ
ಪಾರದರ್ಶಕ ಸೆಲ್ಯೂಟೇಪ್ ಪಟ್ಟಿ
ಗೋಂದಿನ ಜೊತೆ
ಅಲ್ಲಲ್ಲಿ ಹಸ್ತ ಬೆರಳುಗಳ ಬೆವರಿನ ತೇವವೂ ಸವರಿರಬಹುದು
ಲಕೋಟೆಯ ಸಂದುಗೊಂದು ಮುಖ ಮೈ ಮೇಲೆ

ಅಂಚೆ ಕಛೇರಿಯ
ಕೌಂಟರೀನ ಆರಂಭ, ಊಟದ ಸಮಯ, ಅಂತಿಮ ಸಮಯ ನಮೂದಿಸಿ
ತೂಗು ಹಾಕಿದ ಫಲಕದ ಮೇಲೆ ಒಂದು ದೃಷ್ಟಿ ನೆಟ್ಟೇ
ಅದಾಗಲೇ ತುಸು ಜೋರಾಗಿಯೆ ಗೊಣಗಾಡುತ್ತಿದ್ದವರ
ಅಡ್ಡಾದಿಡ್ಡಿ ಸಾಲಲ್ಲಿ ಕಾದು ನಿಂತಾಗಿನ ಚಡಪಡಿಕೆ.

ಏನಿದೆ ಇದರೊಳಗೆ?
ಕೌಂಟರಿನ ಆಚೆಯಿಂದ ತೂರಿ ಬಂದ ಅಸಹನೀಯ ಪ್ರಶ್ನೆಗೆ
‘ಮುದ್ರಿಸಿದ ಪುಸ್ತಕ’ (ನಾನೇ ಬರೆದದ್ದು ಎಂದು ಹೇಳುವ ಚಪಲ ಅದುಮಿ)
ಕೌಂಟಿರಿನವನು ಅಳೆದು ತೂಗಿ ಅಂಟಿಸಿದ
ಟ್ರ್ಯಾಕಿಂಗ್ ಸಂಖ್ಯೆವುಳ್ಳ ರಶೀದಿ ಚೀಟಿಯ ಬೆಲೆಯಲ್ಲಿ
ಖಂಡಿತಾ ಈ ಎಲ್ಲಾ ಅಗೋಚರ ಭಾವ ಭಾರಗಳು ದಾಖಲಾಗುವುದಿಲ್ಲ !
ಎಂತಲೇ
ಪೋಸ್ಟ್ ಮಾಡಿದ್ದು ಬರೇ ಪುಸ್ತಕ
ಎಂಬ ಸಾಮಾನ್ಯ ನಡವಳಿಕೆ ದೃಡವಾಗಿಯೆ ಉಳಿಯುವುದು.

ಓದುಗ ಬಂಧು ಮುಂದೊಂದು ದಿನ
ಇದೇ ಪುಸ್ತಕವನ್ನು ಓದಿಯೊ ಓದದೆಯೋ ರದ್ಧಿಗೆ ರವಾನಿಸುವುದೆಂದರೆ
ಈ ಎಲ್ಲಾ ಕಾರ್ಯಕಾರಣಗಳನ್ನು ಚಿಟಕಿ ಹೊಡೆದಂತೆ ನಿಷ್ಕಾರುಣ್ಯವಾಗಿ
ಎತ್ತಿ ಆಚೆಗೆ …..!

  • ಗೋಪಾಲ ತ್ರಾಸಿ,

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “………ಹೊಸ ಪುಸ್ತಕ ಕಳಿಸೋದೆಂದರೆ”

  1. JANARDHANRAO KULKARNI

    ಕವಿತೆಯ ಶೈಲಿ ಸೊಗಸಾಗಿದೆ. ವಿಷಯಗಳನ್ನು ಹೀಗೂ ಹೇಳಬಹುದು ಎಂದು ಚೆನ್ನಾಗಿ ಹೇಳಿದ್ದಾರೆ. ಅಭಿನಂದನೆಗಳು ಶ್ರೀ ಗೋಪಾಲ ತ್ರಾಸಿ ಅವರಿಗೆ.

  2. ”ತ್ರಾಸಿಯವರ ಬರಹವೆಂದರೆ ಹಾಗೆ, ಎಷ್ಟೇ ಗಡಿಬಿಡಿಯ ನಡುವೆ ಕಣ್ಣಾಡಿಸಿದರೂ ಓದಿಸಿಕೊಂಡು ಹೋಗುತ್ತಲೇ ಹೂ ನಗೆಯೊಂದು ತನಗೆ ತಾನೆ ಅರಳದೇ ಇರದು’ !

    1. ಗೋಪಾಲ ತ್ರಾಸಿ

      ತಮ್ಮಂತಹ ಸಹೃದಯ ಓದುಗರ ಪ್ರೀತಿಯ ಕಾಣ್ಕೆ ಅದು. ವಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter