(ಹಾಸ್ಯ/ವಿಡಂಬನೆ ಬರಹ)
‘ ಸೋಲಿಲ್ಲದ ಸರದಾರ ‘ ಎಂದೇ ಹೆಸರು ಗಳಿಸಿದ್ದ ಜನ ನಾಯಕ ಭಂಡಣ್ಣನನ್ನು ಮೊನ್ನೆ ಹಣ, ಲಿಕ್ಕರ್ ಸರಿಯಾಗಿ ಹಂಚಿಲ್ಲ, ಕುಕ್ಕರ್ ಭಾಗ್ಯ ಕೊಟ್ಟಿಲ್ಲ, ಸೀರೆಗಳು ಮನೆ ಮನೆಗೆ ತಲುಪಿಸಿಲ್ಲ, ಬಾಡೂಟ ಹಾಕಿಸಿಲ್ಲ, ಮೂರು ತಿಂಗಳ ರೇಷನ್ ‘ ಫ್ಯಾಮಿಲಿ ಪ್ಯಾಕ್ ‘ ವಿತರಣೆ ಮಾಡಿಲ್ಲ, ಎನ್ನುವ ಇತ್ಯಾದಿ ಹಲವು ಬಲವಾದ ಕಾರಣಗಳಿಂದ (ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ ಎಂದು ಯಾವ ಪ್ರಜ್ಞಾವಂತ ಮತದಾರನೂ ದೂರಿಲ್ಲ!) ‘ ಪ್ರಬುದ್ಧ ‘ ಮತದಾರರು ಸೋಲಿನ ರುಚಿ ತೋರಿಸಿದ್ದರು. ಆದರೂ ಮತ್ತೊಮ್ಮೆ ‘ ಫೀನಿಕ್ಸ್ ‘ ನಂತೆ ಎದ್ದು ಬರುವ ಛಲದಿಂದ ಭಂಡಣ್ಣ ತನ್ನ ಪಟಾಲಂನೊಂದಿಗೆ ‘ ಮತ ಭಿಕ್ಷೆ ‘ ಬೇಡಲು ಅನುಕೂಲವಾಗುವ ರೀತಿಯಲ್ಲಿ ಬೃಹತ್ ಪಾದ ಯಾತ್ರೆ ಆರಂಭಿಸಿದ. ಪ್ರತಿ ದಿನ ಒಂದು ವಾರ್ಡಿನ ತುಂಬಾ ಓಡಾಡಿ ಕೊನೆಗೆ ಭರ್ಜರಿ ‘ ರೋಡ್ ಶೋ ‘ ದೊಂದಿಗೆ ಮುಕ್ತಾಯವಾಗುವ ಹಾಗೆ ಆಯೋಜನೆ ಮಾಡುತ್ತಿತ್ತು ಭಂಡಣ್ಣನ ‘ ವಾರ್ ರೂಮ್ ‘ ಟೀಂ.
ಒಂದು ದಿನ ಬೆಳಿಗ್ಗೆ ಎಂಟು ಗಂಟೆಗೆ ಶುರುವಾದ ಪಾದ ಯಾತ್ರೆ ಮುಗಿದು ಬೃಹತ್ ರೋಡ್ ಶೋ ಆರಂಭವಾಯಿತು. ಜನ ನಾಯಕ ಭಂಡಣ್ಣನ ಸುತ್ತಲೂ (‘ ಪೇಯ್ಡ್ ‘ ಅರ್ಥಾತ್ ‘ ಬಾಡಿಗೆ’) ಅಭಿಮಾನಿಗಳು, ಅಸಂಖ್ಯಾತ ಬೆಂಬಲಿಗರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು, ಜಾತಿ ಸೋದರರು (ಭಂಡಣ್ಣನ ಜಾತಿಯವರು) ಅಲ್ಲದೇ ಕುಟುಂಬ ಸದಸ್ಯರು, ಮಿತ್ರರು ಇತ್ಯಾದಿಯವರು ಸೇರಿದ ಪಾದ ಯಾತ್ರೆ, ಗಾಂಧಿ ರಸ್ತೆಯ ಗಾಂಧಿ ಬಜಾರಿನ ಗಾಂಧಿ ಸರ್ಕಲ್ ಪ್ರವೇಶ ಮಾಡಿತು. ಭಂಡಣ್ಣನ ದೊಡ್ಡ ಪ್ರೈವೇಟ್ ಸೆಕ್ಯೂರಿಟಿ ಜೊತೆ ಪೊಲೀಸ್ ಬಳಗ ಬೇರೆ ಜೊತೆಗಿತ್ತು.
ಜನಗಳ ಮಧ್ಯೆ ‘ಜೀವಂತ ಉತ್ಸವ ಮೂರ್ತಿ’ ಯಂತೆ ಜನಪ್ರಿಯ ಮಾಜಿ ಮಂತ್ರಿ ಮತ್ತು ನೇತಾರ ಭಂಡಣ್ಣ ಅತೀ ವಿನಯದಿಂದ ಕರಗಳನ್ನು ಜೋಡಿಸಿ ಜನರಿಗೆ (ಮತದಾರರಿಗೆ!) ಕೈ ಮುಗಿಯುತ್ತಾ ಮುಂದೆ ಸಾಗುತ್ತಿದ್ದರೆ ಹಿಂದೆ ಅವರ ಪಟಾಲಂ ನಿಧಾನವಾಗಿ ಹೆಜ್ಜೆ ಹಾಕುತ್ತಿತ್ತು. ಇದ್ದಕ್ಕಿದ್ದಂತೆ ಎಲ್ಲಿಂದಲೋ ಒಂದು ಸುಂಟರ ಗಾಳಿ ರಸ್ತೆಯ ಧೂಳನ್ನೆಲ್ಲ ಒಟ್ಟುಗೂಡಿಸಿಕೊಂಡು ಪಾದಯಾತ್ರೆಯ ಮೇಲೆ ಧಿಡೀರ್ ದಾಳಿ ಮಾಡಿತು. ಆಗ ಏನಾಯಿತೋ ಗೊತ್ತಿಲ್ಲ.
ಕಣ್ಣ ರೆಪ್ಪೆ ತೆಗೆದು ಮುಚ್ಚುವದರೊಳಗೆ ಜನ ನಾಯಕ ಧಡೂತಿ ದೇಹದ ಮಾಲೀಕ ಭಂಡಣ್ಣ ಧೊಪ್ಪಂತ ನೆಲದ ಮೇಲೆ ಬಿದ್ದ. ಪುಣ್ಯಕ್ಕೆ ಜನ ನಾಯಕರ ಹಲ್ಲುಗಳು ಏನು ಉದುರಿ ಬೀಳಲಿಲ್ಲ! (ಎಲ್ಲಾ ಹಲ್ಲುಗಳು ಮೊದಲೇ ಪೂರ್ತಿ ಇರಲಿಲ್ಲ ). ಆದರೆ ಬಾಯಿಂದ ಹೊರ ಬಂದ ಸ್ವಲ್ಪ ರಕ್ತದ ಜೊತೆ ಅವರ ಬಂಗಾರದ ಹಲ್ಲಿನ ಸೆಟ್ಟು ಮಾತ್ರ ಕೆಳಕ್ಕೆ ಬಿದ್ದು ಕಣ್ಮರೆಯಾಯಿತು. ಆ ‘ಕ್ಯಾ ಸೀನ್ ಹೈ’ ಲೈವ್ ನೋಡಿದ ನೆರೆದ ಜನರೆಲ್ಲ ಘೊಳ್ಳೆಂದು ನಕ್ಕರು. ಗನ್ ಮ್ಯಾನ್ ಗಳ ಮತ್ತು ಪೊಲೀಸರ ಬೂಟುಗಳು ಸುಂಟರಗಾಳಿ ಶುರುವಾದ ದಿಕ್ಕಿನತ್ತ ಓಡಿದವು. ಪೊಲೀಸರ ವೈರ್ ಲೆಸ್ ಕೂಡಲೇ ಕೆಲಸ ಮಾಡಿತು. ಎದುರಿನಿಂದ ಪೊಲೀಸ್ ಜೀಪ್ ಮತ್ತು ಆಂಬುಲೆನ್ಸ್ ಒಟ್ಟಿಗೇ ಬಂದವು. ಮಾಜಿ ಮಂತ್ರಿ ಭಂಡಣ್ಣನ ಧಡೂತಿ ದೇಹವನ್ನು ತಡ ಮಾಡದೆ ಕಷ್ಟ ಪಟ್ಟು ಅಂಬುಲೆನ್ಸ್ ಹತ್ತಿಸಿ ಕಾರ್ಪೊರೇಟ್ ಹಾಸ್ಪಿಟಲಿಗೆ ಕರೆದೊಯ್ದರು… ಪೊಲೀಸರು, ಸೆಕ್ಯೂರಿಟಿ ಮತ್ತು ಜನ ನಾಯಕನ ಹಿಂಬಾಲಕರು ದಿಕ್ಕು ತಪ್ಪಿ ಅಲ್ಲ… ಸರಿಯಾದ ದಿಕ್ಕಿನಲ್ಲೇ ಆರೋಪಿಯನ್ನು ಹುಡುಕಲು ಶುರು ಮಾಡಿದರು.
ಅದು ಸ್ವಲ್ಪ ಅತ್ತ ಇತ್ತ ಓಡಾಡಿ, ಇನ್ನು ತನ್ನಿಂದ ಸಾಧ್ಯವಿಲ್ಲ ಎಂದು ಶರಣಾಗತನಾಗಿ ಒಂದು ಕಡೆ ಸುಮ್ಮನೆ ನಿಂತಿತು. ಅದನ್ನು ಸೆಕ್ಯೂರಿಟಿ ಗನ್ನುಗಳು ಮತ್ತು ಭಂಡಣ್ಣನ ಪಟಾಲಂ ದಂಡು ಸುತ್ತುವರೆದವು. ಪೊಲೀಸ್ ಬೂಟುಗಳು ಮೇಲಿನ ‘ಹೈ’ ಕಮಾಂಡ್ ಆದೇಶ ನಿರೀಕ್ಷಿಸುತ್ತಾ ನಿಂತವು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೂರಾರು ಜನಗಳ ಮಧ್ಯೆ ಎಲ್ಲರನ್ನೂ ಬಿಟ್ಟು ಮಾಜಿ ಮಂತ್ರಿಯನ್ನು ಮಾತ್ರ ‘ಪಿಕ್ ‘ (ಆಯ್ಕೆ) ಮಾಡಿ ರಸ್ತೆಯಲ್ಲಿ ಅವರನ್ನು ಕೆಡವಿ ಅವರ ಬಂಗಾರದ ಹಲ್ಲಿನ ಸೆಟ್ಟು ಬಾಯಿಂದ ಹೊರಗೆ ಬೀಳುವಂತೆ ಮಾಡುವುದಲ್ಲದೆ ಧಡೂತಿ ದೇಹ ಕುಸಿಯುವಂತೆ ಮಾಡಿ ಓಡಲು ಯತ್ನಿಸಿದ ಆ ‘ನಾಲ್ಕು ಕಾಲಿನ’ ಟೆರರಿಸ್ಟನ್ನು ಹಿಡಿದು ಏನು ಮಾಡಬೇಕೋ ಅರ್ಥವಾಗದೆ ಬೆಪ್ಪರಂತೆ ಒಂದೆರಡು ಕ್ಷಣ ಸುಮ್ಮನೆ ನಿಂತರು ಪೋಲಿಸರು. ಅದನ್ನು ನಡು ರಸ್ತೆಯಲ್ಲಿ ‘ಶೂಟ್’ ಮಾಡಿ ಸಾಯಿಸೋಣ ಅಂತ ಒಬ್ಬರು ಹೇಳಿದರೆ… ಬೇಡ ಅದು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಅಂತ ಮತ್ಯಾರೋ ಎಚ್ಚರಿಕೆ ನೀಡಿದರು. ಅದು ಈ ಕೇಸಿಗೆ ಅನ್ವಯವಾಗೊದಿಲ್ಲ , ಬೇಡ ಬೇಡ… ಅಲ್ಲದೇ ಸಂಪೂರ್ಣವಾಗಿ ಸರಂಡರ್ ಆಗಿದೆ. ಈಗ ಅದರ ಅವಶ್ಯಕತೆ ಇಲ್ಲ ಅಂತ ಯಾರೋ ಇನ್ನೊಬ್ಬರು ನುಡಿದರು.
ಅದನ್ನೆಲ್ಲ ಕೇಳಿ ಕೇಳಿ ತಲೆ ಚಿಟ್ಟು ಹಿಡಿದ ಸೀನಿಯರ್ ಪೋಲೀಸ್ ಅಧಿಕಾರಿ ನಾವು ಏನು ಮಾಡುವದು ಬೇಡ. ಇಂತಹ ಅಪರಾಧಕ್ಕೆ ಕೋರ್ಟು ಏನು ಶಿಕ್ಷೆ ಕೊಡುತ್ತೋ ಕೊಡಲಿ. ಮೊದಲು ಅದನ್ನು ಹಿಡಿದು ಲಾಕಪ್ ಗೆ ಹಾಕೋಣ ಎಂದು ಹೇಳಿದ. ಪೊಲೀಸ್ ಜೀಪಿಗೆ ಇದನ್ನು ಹತ್ತಿಸಲು ಆಗುವದಿಲ್ಲ. ಅದ್ದರಿಂದ ಆಟೋ ಟ್ರಾಲಿ ತರಿಸಿ ಎಂದು ಬುದ್ಧಿವಂತ ಪೊಲೀಸ್ ನೊಬ್ಬ ಹೇಳಿದ ಸಲಹೆಯ ಮೇರೆಗೆ ಅದನ್ನು ಹತ್ತಿಸಿ ಹತ್ತಿರದ ಪೊಲೀಸ್ ಸ್ಟೇಷನ್ ಗೆ ಕರೆದೊಯ್ದರು. ಈ ವಾರ್ತೆ ಕ್ಷಣಾರ್ಧದಲ್ಲಿ ವಿದ್ಯುಚ್ಚಕ್ತಿಗಿಂತ (ಗಾಸಿಪ್ಪಿಗಿಂತ!) ಹೆಚ್ಚಿನ ವೇಗದಲ್ಲಿ ಇಡೀ ನಗರವನ್ನು ವ್ಯಾಪಿಸಿತು. ಟಿ ವಿ ಚಾನೆಲ್ ಗಳಲ್ಲಿ ಆಗಲೇ ಬ್ರೇಕಿಂಗ್ ಸುದ್ದಿಯಾಗಿ ಬಿತ್ತರಗೊಳ್ಳತೊಡಗಿತು.
ನಾಲ್ಕು ಕಾಲಿನ ಪ್ರಾಣಿಯೊಂದು ಮಾಜಿ ಮಂತ್ರಿಯವರ ಮುಖಾರವಿಂದಕ್ಕೆ ತನ್ನ ಮುಂದಿನ ಎರಡು ಕಾಲುಗಳಿಂದಲೋ ಅಥವಾ ಹಿಂದಿನ ಎರಡು ಕಾಲುಗಳಿಂದಲೋ ‘ಮುತ್ತಿಟ್ಟು’ ಬಂಗಾರದ ಹಲ್ಲಿನ ಸೆಟ್ಟಿನ ಜೊತೆ ಅವರ ಧಡೂತಿ ದೇಹವನ್ನು ನೆಲಕ್ಕೆ ಕೆಡವಿತು. ಅದು ಯಾವಾಗ, ಏಕೆ ಮತ್ತು ಹೇಗೆ? ಎಂದು ಟಿ ವಿ ಪ್ಯಾನಲ್ ಗಳಲ್ಲಿ ಆಗಲೇ ಆ ಘಟನೆಯ ಬಗ್ಗೆ ಹಾಟ್ ಡಿಸ್ಕಷನ್ ಶುರುವಾಯಿತು. ಇಷ್ಟರಲ್ಲಿ ಮಾಜಿ ಮಂತ್ರಿಯವರನ್ನು ದಾಖಲಿಸಿದ ಕಾರ್ಪೊರೇಟ್ ಹಾಸ್ಪಿಟಲಿನಿಂದ ಗಂಟೆಗೊಮ್ಮೆ ‘ಹೆಲ್ತ್ ಬುಲೆಟಿನ್’ ಬಿತ್ತರಗೊಳ್ಳಲು ಪ್ರಾರಂಭಗೊಂಡಿತು. ಲಾಕಪ್ ನಲ್ಲಿ ಬಂಧಿಯಾದ ಆರೋಪಿಯನ್ನು ಮಧ್ಯ ರಾತ್ರಿಯ ಬಳಿಕ ವಿಚಾರಿಸಲು ನಿರ್ಧರಿಸಿ ಲಾಠಿಗಳನ್ನು ಸಜ್ಜು ಗೊಳಿಸಿ ಸಿದ್ಧರಾದರು ಪೊಲೀಸರು. ಅಲ್ಲದೇ ಮೇಲಿನ ಆದೇಶಕ್ಕಾಗಿ ಕಾದು ನೋಡುವ ತಂತ್ರಗಾರಿಕೆಗೆ ಶರಣಾದರು. ಸೆಲ್ಲಿನಲ್ಲಿ ಬಂಧಿಸಿದ ‘ವಿಶೇಷ’ ಆರೋಪಿಯನ್ನು 24 X 7 ಕಾಯಲು ಪ್ರತ್ಯೇಕ ತಂಡವನ್ನು ರಚಿಸಿದರು.
ಅಮವಾಸ್ಯೆಯ ನೀರವ ರಾತ್ರಿಯಲ್ಲಿ ಸೆಲ್ಲಿನಲ್ಲಿ ಬಂಧಿಯಾಗಿದ್ದ ಆರೋಪಿ ಇದ್ದಕಿದ್ದಂತೆ ಒಮ್ಮೆ ಜೋರಾಗಿ ತನ್ನ ನೈಸರ್ಗಿಕ ಗಟ್ಟಿ ಸ್ವರದಲ್ಲಿ ಘೀಳಿಟ್ಟಿತು… ಆ ಭೀಕರ ಶಬ್ದಕ್ಕೆ ಪೊಲೀಸ್ ಸ್ಟೇಶನ್ ಮುಂದಿನ ರಸ್ತೆಯಲ್ಲಿ ಓಡಾಡುತ್ತಿದ್ದ ನಾಗರಿಕರು ಬೆಚ್ಚಿ ಬಿದ್ದರು. ಆ ಶಬ್ದದ ಎಫೆಕ್ಟಿಗೆ ಒಂದೆರಡು ಸಣ್ಣ ಪುಟ್ಟ ಆಕ್ಸಿಡೆಂಟ್ ಕೂಡ ಆಗಿ ಹೋದವು. ಸ್ವಲ್ಪ ಹೊತ್ತು ಶಬ್ದ ಎಲ್ಲಿಂದ ಬಂತು ಎಂದು ತಿಳಿಯದೆ ನಾಗರಿಕರು ಸಂಧಿಗ್ದಕ್ಕೆ ಒಳಗಾದರು. ಪೊಲೀಸರು ಗನ್ನು – ಲಾಠಿ ಹಿಡಿದು ಸೆಲ್ಲಿನ ಮುಂದೆ ಸಿದ್ಧರಾಗಿ ನಿಂತರು. ಅಷ್ಟರಲ್ಲಿ ಅಧಿಕಾರಿಯೊಬ್ಬ ‘ ಶ್!..ಶ್!!’ ಎಂದು ಶಬ್ದ ಮಾಡಿ ಆರೋಪಿಯನ್ನು ಕೈ ಸನ್ನೆಯಿಂದ ಸುಮ್ಮನಾಗಿಸಲು ನೋಡಿದ. “ಏನು ಶ್!.. ಶ್!!…ಎಂದು ಶಬ್ದ ಮಾಡುತ್ತಿರುವೆ?… ನಾನು ಗಾರ್ದಭ… ಆದರೆ ಮನುಷ್ಯರಂತೆ ಮಾತನಾಡುವ ಸ್ಪೆಷಲ್ ಗಾರ್ದಭ…ತಿಳಿಯಿತೇ.. ” ಎಂದು ಹೆಚ್ಚು ಕಡಿಮೆ ಜೋರಾಗಿ ಗದರಿಸಿ ಹೇಳಿತು.
ಅದನ್ನು ಕೇಳಿದ ಅಧಿಕಾರಿ ಸಡನ್ ಆಗಿ ಅಲ್ಲೇ ಮೂರ್ಛೆ ಬಂದು ಬಿದ್ದುಬಿಟ್ಟ! ಒಂದೆರಡು ಕ್ಷಣ ಅಲ್ಲಿಯ ಸಿಬ್ಬಂದಿಗೆ ಎಲ್ಲವೂ ಆಯೋಮಯ. ಅಷ್ಟರಲ್ಲಿ ಗಾರ್ದಭ ಮತ್ತೆ ಮಾತು ಮುಂದುವರೆಸಿತು. ” ಏನು ಪೊಲೀಸ್ ಡಿಪಾರ್ಟ್ಮೆಂಟ್ ನಿಮ್ಮದು… ಗಾರ್ದಭನನ್ನು ಲಾಕಪ್ ನಲ್ಲಿ ಹಾಕಿದಿರಿ… ಓಕೆ…ಆದರೆ ಅದಕ್ಕೆ ತಿಂಡಿ – ತೀರ್ಥ ಕೊಡಬೇಕು ಎನ್ನುವ ಜ್ಞಾನವಿಲ್ಲವೆ?…ನನ್ನನ್ನು 24 ಘಂಟೆಗಳಲ್ಲಿ ಕೋರ್ಟಿಗೆ ಹಾಜರು ಪಡಿಸುವಿರೋ…ಇಲ್ಲಾ ಎನ್ಕೌಂಟರ್ ಮಾಡಿ ಸಾಯಿಸುವಿರೋ ಸ್ಪಷ್ಟವಾಗಿ ಹೇಳಿ ” ಎಂದು ಈ ಬಾರಿ ‘ ಡಾಲ್ಫಿ ಡಿಜಿಟಲ್ ಸೌಂಡ್’ ನಲ್ಲಿ ಜೋರಾಗಿ ಒದರಿ ಹೇಳಿತು. ಗಾರ್ದಭ ಮನುಷ್ಯರಂತೆ ಮಾತನಾಡುವದನ್ನು ತಮ್ಮ ಜೀವಮಾನದಲ್ಲೇ ಎಂದೂ ನೋಡದ ಕೆಲವು ಪೊಲೀಸರು ಅಚ್ಚರಿಯಿಂದ ಬೆದರುತ್ತಾ ಅದರತ್ತ ನೋಡಿದರು.
” ಮನುಷ್ಯರ ಭಾಷೆ ತಿಳಿದ ನನಗೆ ಆ ಮಾಜಿ ಮಂತ್ರಿಯ ನಾಲ್ಕೈದು ಹಲ್ಲು ಮಾತ್ರ ಮುರಿಯಬೇಕು ಎಂದಷ್ಟೇ ನನ್ನ ಉದ್ದೇಶವಾಗಿತ್ತು. ಆದರೆ ಆತ ಹಲ್ಲಿನ ಸೆಟ್ಟನ್ನು ಹಾಕಿಸಿಕೊಂಡು ನನ್ನ ಪ್ಲಾನ್ ಸಕ್ಸಸ್ ಆಗಲು ಬಿಡಲಿಲ್ಲ. ಅಲ್ಲದೇ ಆ ಹಲ್ಲಿನ ಸೆಟ್ಟಿನ ವಿಷಯ ನನಗೆ ಮೊದಲು ಗೊತ್ತಿರಲಿಲ್ಲ. ” ಎಂದು ನಿಧಾನವಾಗಿ ತಾನು ಯಾಕೆ ಆ ಮಾಜಿ ಮಂತ್ರಿಯ ಮೇಲೆ ದಾಳಿ ಮಾಡಿತು ಎನ್ನುವುದನ್ನು ಸ್ವಷ್ಟವಾಗಿ ತಿಳಿಸಿತು ತನ್ನ ಬೂದು ಬಣ್ಣದ ಬಾಲವನ್ನು ಮೇಲೆ ಕೆಳಗೆ ಎತ್ತಿ ಆಡಿಸುತ್ತಾ. ಅಷ್ಟರಲ್ಲಿ ಹತ್ತು ಹನ್ನೆರಡು ಟಿ ವಿ ಚಾನಲ್ ನವರು ತಮ್ಮ ಕ್ಯಾಮರಾಮೆನ್ ಜೊತೆಗೂಡಿ ಪೊಲೀಸ್ ಸ್ಟೇಷನ್ ಮುಂದೆ ಗುಂಪುಗೂಡಿದರು. ಇಷ್ಟು ಹೊತ್ತಾದರೂ ತನಗೆ ತಿನ್ನಲಿಕ್ಕೆ ಏನೂ ಕೊಡದ ಪೊಲೀಸರನ್ನು ಮತ್ತೆ ಗಾರ್ದಭ ದಬಾಯಿಸಿತು. ” ಏನು ವೆಜ್ಜಾ…ನಾನ್ ವೆಜ್ಜಾ ಅಥವಾ ಪಿಜ್ಜಾನಾ, ಬರ್ಗರ್ ಏನು ಬೇಕು ಹೇಳಿದರೆ ಅದನ್ನು ಏರ್ಪಾಟು ಮಾಡುತ್ತೇವೆ ” ಎಂದು ಕೇಳಿದ ಸೀನಿಯರ್ ಹೆಡ್ ಕಾನ್ಸ್ಟೇಬಲ್ ಅದರ ಒದರುವ ಶಬ್ದ ಭರಿಸಲಾಗದೆ.
” ಒಂದು ಡಜನ್ ದಿನಪತ್ರಿಕೆಗಳು ಅರ್ಧ ಡಜನ್ ವಾರಪತ್ರಿಕೆಗಳು ಕೊಡಿ…ಹೇಗೋ ಈ ಒಂದು ಹೊತ್ತಿಗೆ ಸರಿ ಮಾಡಿಕೊಳ್ಳುತ್ತೇನೆ. ನಾನು ಬೆಂಗಳೂರಿನವನು, ಹೀಗಾಗಿ ನನಗೆ ಕನ್ನಡದ ಸಪ್ಪೆ ಪತ್ರಿಕೆಗಳಿಗಿಂತ ಇಂಗ್ಲೀಷ್ ಪತ್ರಿಕೆಗಳೇ ಇಷ್ಟ. ಐ ಲೈಕ್ ಇಂಗ್ಲೀಷ್! ಅವು ತುಂಬಾ ರುಚಿಯಾಗಿರುತ್ತವೆ. ಹಾಗೇ ಒಂದು ತೊಟ್ಟಿಯಲ್ಲಿ ಮಿನರಲ್ ವಾಟರ್ ಹಾಕಿ ತುಂಬಿಸಿದರೆ ಸಾಕು. ಪತ್ರಿಕೆಗಳನ್ನು ತಿಂದು ಅರಗಿಸಿಕೊಂಡು ವಾಟರ್ ಕುಡಿದು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ . ಇದು ಇಂದಿಗೆ ಸಾಕು, ನಾಳೆಯ ವಿಚಾರ ನಾಳೆ ನೋಡೋಣ ” ಎಂದು ಮನುಷ್ಯರ ಭಾಷೆಯಲ್ಲಿ ಸ್ಪಷ್ಟವಾಗಿ ನುಡಿಯಿತು ಸಿಟಿ ಗಾರ್ದಭ.
ಗಾರ್ದಭ ರೂಪದ ಪ್ರಾಣಿ ಮನುಷ್ಯನಂತೆ ಅಚ್ಚ ಕನ್ನಡದಲ್ಲಿ ಮಾತಾಡುತ್ತದೆ ಎನ್ನುವ ವಿಷಯ ಬ್ರೇಕಿಂಗ್ ಸುದ್ದಿಯಾಗಿ ಎಲ್ಲ ಕಡೆ ಬಿತ್ತರಗೊಳ್ಳುತ್ತಿದ್ದಂತೆ ಅಷ್ಟೇನೂ ಪ್ರಾಕ್ಟೀಸ್ ಇಲ್ಲದ ಯಂಗ್ ಲಾಯರ್ ಗುಂಡುರಾಜ್ ತನ್ನ ಧಿಡೀರ್ ಪಬ್ಲಿಸಿಟಿಗೆ ಇದಕ್ಕಿಂತ ಉತ್ತಮ ಅವಕಾಶ ಸಿಗುವುದಿಲ್ಲ ಎಂದು ‘ ಬೇಲ್ ‘ ಪೇಪರುಗಳೊಂದಿಗೆ ಪೊಲೀಸ್ ಸ್ಟೇಶನ್ ಗೆ ಓಡಿ ಬಂದ. ಗಾರ್ದಭಕ್ಕೆ ಬೇಲ್ ಕೊಡಿಸಿ ಹೊರಗೆ ತರಬೇಕು… ತನ್ನ ಮನೆಯ ಅಲಮಾರದಲ್ಲಿ ತುಂಬಿಸಿಟ್ಟ ಸಾಕಷ್ಟು ಹಳೇ ಕೇಸುಗಳ ಫೈಲುಗಳು ಹಾಗೂ ವಕಾಲತ್ ನಾಮ ಪೇಪರುಗಳೇ ಸಾಕು ಒಂದೆರಡು ದಿನ ಮಟ್ಟಿಗೆ ಗಾರ್ದಭದ ಹೊಟ್ಟೆ ತುಂಬಿಸಲು ಎಂದು ಮನಸಿನಲ್ಲೇ ಲೆಕ್ಕ ಹಾಕಿಕೊಂಡ ಯಂಗ್ ಲಾಯರ್ ಗುಂಡುರಾಜ್.
ಗಾರ್ದಭ ಹೊರಗೆ ಬರುತ್ತಿದ್ದಂತೆಯೇ ಒಬ್ಬ ವೀರಾಭಿಮಾನಿ ಅದಕ್ಕೆ ಹೂವಿನ ಮಾಲೆ ಹಾಕಿದ. ಒಂದಿಬ್ಬರು ಚಪ್ಪಾಳೆ ತಟ್ಟಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಟಿ ವಿ ಯವರು ಲೈವ್ ಪ್ರಸಾರ ಶುರು ಮಾಡಿದರು. ನಗರದ ಮಹಾ ಜನತೆ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಟಿ ವಿ ಮುಂದೆ ಗುಂಪು ಗೂಡಿದರು. ಪತ್ರಕರ್ತರ ಪ್ರಶ್ನೆಗಳ ಸುರಿಮಳೆಗೆ ಅನುಭವಿ ರಾಜಕಾರಣಿಯ ಹಾಗೆ ಚಕ ಚಕ ಉತ್ತರಿಸಲು ಸಿಟಿ ಗಾರ್ದಭ ಅಣಿಯಾಯಿತು. ” ನೀನು ನಿಜವಾದ ಗಾರ್ದಭ ಅಲ್ವಾ…ಮನುಷ್ಯರ ಭಾಷೆ ಹೇಗೆ ಕಲಿತೆ ? ” ಎಂದು ಪ್ರಶ್ನೆ ಮಾಡಿತು ಮೈಕೊಂದು. ” ಕೆಲವು ಮನುಷ್ಯರು ಗಾರ್ದಭ ರೀತಿ ವರ್ತಿಸುವುದನ್ನು ತಾವು ನೋಡಿರುತ್ತೀರಿ, ಹೌದಾ? ಭಾಷೆ ನಿಮ್ಮೊಬ್ಬರ ಸ್ವತ್ತಲ್ಲ!ಗಾರ್ದಭಗಳಿಗೆ ಲಾಂಗ್ವೇಜ್ ಲರ್ನಿಂಗ್ ದೊಡ್ಡ ಸಮಸ್ಯೆ ಅಲ್ಲವೇ ಅಲ್ಲ.” ಎಂದು ಒಮ್ಮೆ ತಲೆ ಮೇಲಕ್ಕೆ ಎಗರಿಸಿ ಕಣ್ಣುಗಳನ್ನು ಅಗಲಿಸಿ ಉತ್ತರ ನೀಡಿತು.
” ಇಲ್ಲ…ಇಲ್ಲ…ಕೆಲವು ಮನುಷ್ಯರು ಗಾರ್ದಭ ರೀತಿ ನಡೆದುಕೊಳ್ಳುತ್ತಾರೆ ಎಂದರೆ ಒಪ್ಪಬಹುದು. ಆದರೆ ಮನುಷ್ಯರ ಭಾಷೆ ಹೇಗೆ ಗಾರ್ದಭ ನುಡಿಯಬಲ್ಲದು…?” ಎಂದು ಪ್ರಶ್ನೆ ಹಾಕಿತು ಇನ್ನೊಂದು ಮೈಕು. “ಈ ಪ್ರಪಂಚದಲ್ಲಿ ನಿನಗೆ ಯಾರೂ ಸಿಗೋದಿಲ್ಲ ಎನ್ನುವಂತೆ ಆ ಮಾಜಿ ಮಂತ್ರಿಯ ಹಲ್ಲಿನ ಸೆಟ್ಟನ್ನು ಯಾಕೆ ಕಿತ್ತಬೇಕಿತ್ತು…?” ಎಂದು ಪತ್ರಕರ್ತನೊಬ್ಬ ಕೆಣಕಿದ. “ಗುಡ್…ಒಳ್ಳೆಯ ಪ್ರಶ್ನೆ…” ಎಂದು ಒಂದೆರಡು ನಿಮಿಷ ನೆಲವನ್ನು ದಿಟ್ಟಿಸಿ ನೋಡಿ ಉತ್ತರಿಸಿತು ” ನನ್ನ ಹಿಂದಿನ ಜನ್ಮದಲ್ಲಿ ಆ ಮಾಜಿ ಮಂತ್ರಿ ರಿಗ್ಗಿಂಗ್ ಮಾಡಿ ನನ್ನನ್ನು ಮೋಸದಿಂದ ಒಂದಲ್ಲ ಎರಡೆರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ. ಅದೇ ಚಿಂತೆ ಮನಸಿನಲ್ಲಿ ಇಟ್ಟುಕೊಂಡು ಕೊರಗಿ ಕೊರಗಿ ಹಾರ್ಟ್ ಅಟ್ಟ್ಯಾಕ್ ನಿಂದ ನಾನು ಮರಣ ಹೊಂದಿದೆ. ಈಗ ಗಾರ್ದಭ ರೂಪದಲ್ಲಿ ಮತ್ತೆ ಪುನರ್ಜನ್ಮ ಎತ್ತಿ ಆ ಮಾಜಿ ಮಂತ್ರಿಯ ಮೇಲೆ ಸೇಡು ತೀರಿಸಿಕೊಂಡೆ…ಅಷ್ಟೇ…” ಎಂದು ‘ಹಾವಿನ ದ್ವೇಷ ಹನ್ನೆರಡು ವರ್ಷ…ಗಾರ್ದಭ ದ್ವೇಷ ಹತ್ತು ವರ್ಷ’ ಎಂದು ಒಮ್ಮೆ ತನ್ನ ‘ಮೃದು ಮಧುರ’ ಧ್ವನಿಯಲ್ಲಿ ಹಾಡಿ ಸೇಡು ತೀರಿಸಿಕೊಂಡ ತೃಪ್ತಿಯಿಂದ ಕಣ್ಣಿಂದ ಆನಂದಭಾಷ್ಪ ಸುರಿಸುತ್ತಾ ನುಡಿಯಿತು.
“ಈ ಜನ್ಮದಲ್ಲಿ ಗಾರ್ದಭ ಆಗೇ ಯಾಕೆ ಹುಟ್ಟಿದೆ? ಬೇರೆ ರೂಪ ತಾಳಬಹುದಿತ್ತಲ್ಲ…” ಎಂದು ಮತ್ತೊಬ್ಬ ಪತ್ರಕರ್ತ ಕೇಳಿದ. “ಹೋದ ಜನ್ಮದಲ್ಲಿ ಮನುಷ್ಯನಾಗಿ ಅದರಲ್ಲೂ ರಾಜಕಾರಿಣಿಯಾಗಿ ಹುಟ್ಟಿದ ಬಳಿಕ ನನ್ನ ಪ್ರೀತಿಯ ಜನತೆಗೆ (ಮಾನ್ಯ ಮತದಾರರಿಗೆ) ಕೊಟ್ಟ ಮಾತು ತಪ್ಪಿ ಬೇಕಾದಷ್ಟು ಬ್ಲಾಕ್ ಮನಿ ಸಂಪಾದನೆ ಮಾಡಿದೆ. ನಂಬಿದ ಎಲ್ಲರಿಗೂ ದ್ರೋಹ ಬಗೆದೆ. ಅಪಕಾರ ಮಾಡಿದೆ. ಉಪಕಾರ ಮಾಡುವದನ್ನು ಮರೆತೇ ಬಿಟ್ಟೆ. ಕ್ಷೇತ್ರ ಅಭಿವೃದ್ಧಿಯನ್ನು ಕಿಂಚಿತ್ತೂ ಮಾಡುವ ಪಾಪಕ್ಕೆ ಹೋಗಲಿಲ್ಲ! ಆ ಕಾರಣಕ್ಕೆ ಈ ಜನ್ಮದಲ್ಲಿ ಗಾರ್ದಭನಾಗಿ ಜನ್ಮ ತಾಳಿದೆ ಎಂದು ನನ್ನ ಬಲವಾದ ನಂಬಿಕೆ. ನನ್ನ ಈ ಪುನರ್ಜನ್ಮ ರಾಜಕೀಯದಲ್ಲಿ ಇದ್ದು ಗಾರ್ದಭದಂತೆ ವರ್ತಿಸುವ ಎಲ್ಲ ಮಾಜಿ ಮತ್ತು ಹಾಲಿ ರಾಜಕಾರಣಿಗಳಿಗೆ ಒಂದು ಗುಣ ಪಾಠ ಆಗಲಿ ಎಂದು ನನ್ನ ಅಭಿಲಾಷೆ…” ಎಂದಿತು ಗಂಭೀರ ಸ್ವರದಲ್ಲಿ.
ತದನಂತರ ಅಲ್ಲಿ ಒಮ್ಮೇಲೆ ಗೌಜು , ಗದ್ದಲ, ಶುರುವಾಯಿತು…ಮೊದಲು ತನ್ನ ಚಾನೆಲ್ ಗೆ ಸಂದರ್ಶನ ನೀಡಲಿ ಎಂದು ಒಬ್ಬ ಪತ್ರಕರ್ತ ಹಠ ಹಿಡಿದರೆ… ಅವನನ್ನು ಪಕ್ಕಕ್ಕೆ ತಳ್ಳಿ ತಮ್ಮ ಟಿ ವಿ ಗೇ ಮೊದಲು ನೀಡಬೇಕು ಎಂದು ಮತ್ತೊಬ್ಬ ಪತ್ರಕರ್ತ ಗಾರ್ದಭದ ಮುಂದೆ ಮಂಡಿಯೂರಿ ಕೂತ. ಸಂದರ್ಶನಕ್ಕೆ ಈಗ ಎಲ್ಲ ಪತ್ರಕರ್ತರು ಕ್ಯೂ ಕಟ್ಟಿ ನಿಂತರು. ಈ ಗಲಾಟೆ ಎಲ್ಲವನ್ನೂ ನೋಡಿದ ಗಾರ್ದಭ “ಟಿ ವಿ ಸಂದರ್ಶನದ ಸಂಪೂರ್ಣ ಜವಾಬ್ದಾರಿ ನನ್ನನ್ನು ಹೊರ ತಂದ ಯಂಗ್ ಲಾಯರ್ ಗುಂಡುರಾಜ್ ನಿರ್ವಹಣೆ ಮಾಡುತ್ತಾರೆ…ಸೈಡ್ ಪ್ಲೀಸ್..” ಎನ್ನುತ್ತಾ ಮುಂದೆ ಒಂದೆರಡು ಹೆಜ್ಜೆ ಹಾಕಿತು.
“ನೀನು ಮಾಡಿದ ತಪ್ಪಿಗೆ ಶಿಕ್ಷೆ ಆಗಬಹುದು ಎಂದು ನಿನಗೆ ಅನಿಸುತ್ತಿಲ್ಲವೇ…” ಎಂದು ಮತ್ತೊಬ್ಬ ಸೀನಿಯರ್ ಪತ್ರಕರ್ತ ಕುತೂಹಲದಿಂದ ಪ್ರಶ್ನಿಸಿದ ಗಾರ್ದಭನನ್ನು. ಅದಕ್ಕೆ ಏನೂ ಉತ್ತರ ಕೊಡದೆ ಸುಮ್ಮನೆ ಒಂದೆರಡು ಕ್ಷಣ ಮೌನವಾಗಿ ನಿಂತಿತು ಗಾರ್ದಭ. “ನಾನೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವೆ . ಅವಶ್ಯಕತೆ ಬಿದ್ದರೆ ಸುಪ್ರೀಂ ಕೋರ್ಟಿನ ಬಾಗಿಲನ್ನು ತಟ್ಟಿಯಾದರೂ ಈ ಗಾರ್ದಭನನ್ನು ನಿರ್ದೋಷಿಯೆಂದು ನಾನು ನಿರೂಪಿಸುತ್ತೇನೆ” ಎಂದು ಆತ್ಮ ವಿಶ್ವಾಸದಿಂದ ನುಡಿದ ಯಂಗ್ ಲಾಯರ್ ಗುಂಡುರಾಜ್. “ಪುಣ್ಯಾತ್ಮ… ಈ ಯಂಗ್ ಲಾಯರ್, ಲಾಯರ್ ಅಷ್ಟೇ ಅಲ್ಲ ನನ್ನ ಪಾಲಿನ ಸಾಕ್ಷಾತ್ ದೇವರು…” ಎಂದು ಬಾಲವನ್ನು ನಾಯಿಯಂತೆ ಸಂತೋಷದಿಂದ ಅಲ್ಲಾಡಿಸುತ್ತ ನುಡಿಯಿತು ಗಾರ್ದಭ.
“ನಿಮಗೆ ಗೊತ್ತಿರಲಿ… ಭಾರತ ದೇಶದ ಇತಿಹಾಸದಲ್ಲೇ ಇದೊಂದು ಅಪೂರ್ವ ಕೇಸ್ ಆಗುವ ಎಲ್ಲ ಲಕ್ಷಣಗಳು ಇವೆ…ಇದನ್ನು ನಾನೇ ಟೇಕ್ ಅಪ್ ಮಾಡುತ್ತೇನೆ” ಎಂದು ಯಂಗ್ ಲಾಯರ್ ಹೆಮ್ಮೆಯಿಂದ ಟಿ ವಿ ಮಾಧ್ಯಮದವರ ಮುಂದೆ ನುಡಿದ. “ಅದು ಸರಿ…ಸ್ವಚ್ಚ ಭಾರತ್ ಬಗ್ಗೆ ನಿನ್ನ ಅಭಿಪ್ರಾಯ ಏನು…?” ಎಂದು ಯುವ ಪತ್ರಕರ್ತೆಯ ಪ್ರಶ್ನೆ. “ಬೇರೆ ಹೇಳೋದಿಕ್ಕೆ ಏನಿದೆ… ದೇಶದಲ್ಲಿ ಮನುಷ್ಯರ ಜನಸಂಖ್ಯೆ ಏರುತ್ತಿದೆ, ಆದರೆ ಗಾರ್ದಭಗಳ ಸಂಖ್ಯೆ ಕುಸಿಯುತ್ತಿದೆ. ಮನುಷ್ಯರಲ್ಲೂ ಗಾರ್ದಭರು ಇರಬಹುದು.. ಆದರೆ ಅದು ನಮ್ಮ ಲೆಕ್ಕಕ್ಕೆ ಬರುವದಿಲ್ಲವಲ್ಲ. ವಾಷಿಂಗ್ ಮಿಷನ್ ಗಳ ಹಾವಳಿಯಿಂದ ನಾವು ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಮನುಷ್ಯರು ರಸ್ತೆಗಳನ್ನು ಈಗ ಕಸಪೊರಕೆಯಿಂದ (ಫೋಟೋ ಶೂಟ್ ಗಾಗಿ ಅಲ್ಲ !) ಸ್ಟೈಲಾಗಿ ಕಸ ಬಳಿಯುವವದನ್ನು ಬಿಟ್ಟು ಆ ಕೆಲಸ ನಮಗೆ ಬಿಡಬೇಕು… ಏಕೆಂದರೆ ರಸ್ತೆಯಲ್ಲಿ ಏನು ತಿಂದರೂ ಜೀರ್ಣಿಸಿಕೊಳ್ಳುವ ಅಖಂಡ ಶಕ್ತಿ ಆ ದೇವರು ನಮಗೆ ನೀಡಿದ ವರ… ಆದ್ದರಿಂದ ಸ್ವಚ್ಚ ಭಾರತದ ಅಂಬಾಸಡರ್ ಆಗಿ ನಾವು ಮನುಷ್ಯರಿಗಿಂತ (ಸೆಲೆಬ್ರಿಟಿಗಳಿಗಿಂತ!) ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತೇವೆ ಎಂಬ ನಂಬಿಕೆ ನನಗಿದೆ…” ಎಂದು ಗರ್ವ ಬೆರೆತ ಸ್ವರದಲ್ಲಿ ಉತ್ತರ ನೀಡಿತು ಗಾರ್ದಭ.
ಇದು ಸಾಮಾನ್ಯ ಗಾರ್ದಭ ಅಲ್ಲ…ಇದರ ಬ್ರೇನ್ (ಗಾರ್ದಭಗಳಿಗೆ ಬ್ರೇನ್!) ಬಹಳ ಶಾರ್ಪ್ ಇದೆ. ಅಲ್ಲದೇ ಇದರಲ್ಲಿ ತುಂಬಾ ವಿಶೇಷ ಗುಣಗಳಿವೆ. ಯಾವುದೇ ವಿಷಯದ ಬಗ್ಗೆ ಕೇಳಿದರೂ ‘ ಬು(ಲ)ದ್ಧಿಜೀವಿ’ ಗಳಂತೆ ಅನರ್ಗಳವಾಗಿ ಮಾತನಾಡುವ ತಾಕತ್ತು ಇದೆ. ಇದನ್ನು ಮೊದಲು ತನ್ನ ಮನೆಗೆ ಒಯ್ದು ಬೆಳಕು ಹರಿಯುವದರೊಳಗೆ ಒಮ್ಮೇಲೆ ತಾನು ‘ಇಂಡಿಯನ್ ಯಂಗ್ ನ್ಯಾಶನಲ್ ಕೃಷ್’ (ಲಾಯರ್) ಆಗಬಹುದು ಎಂದು ಮನಸಿನಲ್ಲಿ ಅಂದುಕೊಂಡು ಗಾರ್ದಭವನ್ನು ಮೊದಲು ಮನೆಗೆ ಶಿಫ್ಟ್ ಮಾಡುವ ಕೆಲಸಕ್ಕೆ ನಿಂತ ಯಂಗ್ ಲಾಯರ್ ಗುಂಡುರಾಜ್.
11 thoughts on “ಜನ್ಮಾಂತರದ ಸೇಡು!”
‘ ಜನ್ಮಾಂತರದ ಸೇಡು ‘, ವಿಡಂಬನೆ ಚನ್ನಾಗಿದೆ. ಅಭಿನಂದನೆಗಳು ರಾಘವೇಂದ್ರ ಮಂಗಳೂರು ಅವರಿಗೆ.
ಜನ್ಮಾಂತರದ ಸೇಡು ವಿಡಂಬನೆ ಸ್ವಾರಸ್ಯಕರವಾಗಿ ಕುತೂಹಲವನ್ನು ಉಳಿಸಿಕೊಂಡು ಸಾಗುವಲ್ಲಿ ಗೆದ್ದಿದೆ.
ಅಭಿನಂದನೆಗಳು
ವಿಡಂಬನೆ ಸ್ವಾರಸ್ಯಕರವೂ, ಕುತೂಹಲಕಾರಿಯಾಗಿಯೂ ಮನಸೆಳೆಯಿತು.
ಅಭಿನಂದನೆಗಳು
ಧನ್ಯವಾದಗಳು
ಲೇಖಕರು ಕಾಲ್ಪನಿಕವಾಗಿ ಗಾರ್ಧಭಕ್ಕೆ
ಮನುಷ್ಯರ ಹಾವ ಭಾವ ಕೊಟ್ಟು ಸಮಂಜಸವಾಗಿ ಮೂಡಿಸುವುದರಲ್ಲಿ ಗೆದ್ದಿದ್ದಾರೆ. ಅವರಿಗೆ ಅಭಿನಂದನೆಗಳು.
‘ಜನ್ಮಾಂತರದ ಸೇಡು’ ತುಂಬ ವಿನೋದವಾಗಿದೆ. ತನ್ನ ಪೂರ್ವಜನ್ಮದ ಸೇಡನ್ನು ಉಚಿತವಾಗೇ ತೀರಿಸಿಕೊಂಡಿದೆ. ಅದು ಅದಕ್ಕೂ ಮುಂಚಿನ ಜನ್ಮದಲ್ಲಿ ‘ಕತ್ತೆಯಂತೆ’ ದುಡಿದಿದ್ದಕ್ಕೇ ಈಗ ಈ ಜನ್ಮ ಬಂದಿರಬಹುದು! ಅಭಿನಂದನೆಗಳು.
ಧನ್ಯವಾದಗಳು
ಧನ್ಯವಾದಗಳು
ದನ್ಯವಾದಗಳು
ಕತ್ತೆಯ ಸೇಡಿನ ವಿಡಂಬನಾತ್ಮಕ ಲೇಖನ ಚೆನ್ನಾಗಿದೆ. ಅಭಿನಂದನೆಗಳು ರಾಘವೇಂದ್ರ ಮಂಗಳೂರು ಅವರಿಗೆ.
ಧನ್ಯವಾದಗಳು