ಪಿ. ಲಂಕೇಶ್
ಪಿ. ಲಂಕೇಶ್ (೧೯೩೫-೨೦೦೦) ಕನ್ನಡದ ಅತ್ಯಂತ ಪ್ರತಿಭಾವಂತ ಮತ್ತು ಪ್ರಭಾವಶಾಲಿ ಲೇಖಕರಲ್ಲೊಬ್ಬರು. ಅವರು ತಮ್ಮ ಹೆಸರಿಗೆ ತಕ್ಕಂತೆ ಬಹುಮುಖ ಪ್ರತಿಭೆಯ ವಿಕ್ಷಿಪ್ತ ವ್ಯಕ್ತಿ. ಲಂಕೇಶರು ತೀರಿಹೋದ ಮರುವರ್ಷ ಕನ್ನಡದ ಖ್ಯಾತ ಲೇಖಕರಾದ ರಾಘವೇಂದ್ರ ಪಾಟೀಲರ ಸಂಪಾದಕತ್ವದಲ್ಲಿ ಬಂದ ಕೃತಿ ‘ಬೋದಿಲೇರನ ಸಖ – ಲಂಕೇಶ್ ನೆನಪಿನ ಸಂಪುಟ’ (೨೦೦೧).
ಲಂಕೇಶರ ಕುರಿತು ಈಗಾಗಲೇ ‘ಪಿ. ಲಂಕೇಶ್’ (ಹಾಲತಿ ಸೋಮಶೇಖರ), ‘ಲಂಕೇಶ್ – ಬದುಕು ಬರಹ’ (ಕೆ. ಮರುಳಸಿದ್ದಪ್ಪ), ‘ತಲೆಮಾರಿನ ತಳಮಳ’ (ಸಂ. ಗಂಗಾಧರ ಕುಷ್ಟಗಿ), ‘ಲಂಕೇಶ್ ಅಲ್ಲ ಮೇಷ್ಟ್ರು’ (ಮಹಾಬಲಮೂರ್ತಿ ಕೊಡ್ಲಕೆರೆ) ಮತ್ತು ‘ದ ಕ್ಯಾಪಿಟಲ್ ಲಂಕೇಶ್ ಲಿಮಿಟೆಡ್’ (ಎನ್. ಕೆ. ಮೋಹನರಾಂ) ಕೃತಿಗಳು ಬಂದಿವೆ. ಮಯೂರ ಮಾಸಿಕ ೨೦೦೮ರ ಜೂನ್ ಸಂಚಿಕೆಯನ್ನು ಲಂಕೇಶರ ನೆನಪಿಗಾಗಿ ‘ಉರಿದ ಉಲ್ಕೆ’ ಎಂಬ ಹೆಸರಿನಲ್ಲಿ ತಂದಿತ್ತು.
ರಾಘವೇಂದ್ರ ಪಾಟೀಲರು ಸಂಪಾದಿಸಿದ ‘ಬೋದಿಲೇರನ ಸಖ’ ಕೇವಲ ೧೫೦ ಪುಟಗಳ ಪುಟ್ಟ ಪುಸ್ತಕ. ಇದರಲ್ಲಿ ‘ಕಾವ್ಯಾಂಜಲಿ’, ‘ಲಂಕೇಶ್… ಒಂದಿಷ್ಟು ಹತ್ತಿರ – ಒಂದಿಷ್ಟು ದೂರ – ಒಂದಿಷ್ಟು ಲೋಕಾಭಿರಾಮ…’, ‘ಲಂಕೇಶ್ ಒಂದು ಸಾಂಸ್ಕೃತಿಕ ವಿದ್ಯಮಾನ…’, ‘ಲಂಕೇಶ್… ಸೃಜನಶೀಲತೆ’ ಮತ್ತು ‘ಲಂಕೇಶ್ : ಸ್ವತಃ’ ಎಂಬ ಐದು ಭಾಗಗಳಲ್ಲಿ ಒಟ್ಟು ನಾಲ್ಕು ಕವನಗಳು, ಹದಿನಾರು ಲೇಖನಗಳು ಮತ್ತು ಲಂಕೇಶರು ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಡಿದ ಭಾಷಣವಿದೆ.
ರಾಘವೇಂದ್ರ ಪಾಟೀಲ
ಸಂಪಾದಕ ಪಾಟೀಲರು ‘ಲಂಕೇಶರೊಂದಿಗಿನ ನನ್ನ ಜಗಳ…’ ಎಂಬ ಸಂಪಾದಕೀಯದಲ್ಲಿ ಲಂಕೇಶರ ದೊಡ್ಡತನ, ಸಣ್ಣತನ ಮತ್ತು ಕನ್ನಡ ಸಾಹಿತ್ಯಕ್ಕೆ ಅದರಿಂದಾದ ಲಾಭ – ನಷ್ಟದ ಕುರಿತು ತುಂಬ ದಿಟ್ಟವಾಗಿ ಮತ್ತು ಪ್ರಾಮಾಣಿಕವಾಗಿ ಬರೆದಿದ್ದಾರೆ. ಲಂಕೇಶರು ಎಲ್ಲ ಬಗೆಯ ದೌರ್ಬಲ್ಯ ಮತ್ತು ಸ್ವಾರ್ಥವನ್ನು ಮೀರಿಯೂ ಲೇಖಕರಾಗಿ ಏಕೆ ಮುಖ್ಯವಾಗುತ್ತಾರೆ ಎಂಬುದನ್ನು ಚೆನ್ನಾಗಿ ವಿಶ್ಲೇಷಿಸಿದ್ದಾರೆ.
“ಲಂಕೇಶ್… ಕನ್ನಡ ಸಂಸ್ಕೃತಿ ಪ್ರಪಂಚವು ನಿಮ್ಮ ಅಸ್ತಿತ್ವದಿಂದ ಸಂಭ್ರಮಗೊಳ್ಳುತ್ತಿದ್ದಿತು. ನಿಮ್ಮ ಅಸ್ತಿತ್ವ ಹೊರಡಿಸುತ್ತಿದ್ದ ಕಂಪನಗಳು ಈ ಸಂಸ್ಕೃತಿ ಲೋಕದ ಆತ್ಮವನ್ನು – ಅದರ ಜೀವವನ್ನು – ಅದರ ಮಂಗಳ – ಅಮಂಗಳ ಸ್ವರೂಪಗಳನ್ನು… ಎಲ್ಲವುಗಳನ್ನೂ – ‘ಧಗ್’ ಎಂದು ಹೊತ್ತಿಕೊಂಡು ಉರಿಯುವಂತೆ ಮಾಡಿ – ಅದರ ಇರುವಿನ ಅರಿವನ್ನು ಎಲ್ಲರಿಗೆ ಮಾಡಿಸುತ್ತಿದ್ದವು…
ಆದ್ದರಿಂದಲೇ ಲಂಕೇಶ್… ನೀವು ಹೊರಟು ಹೋದದ್ದು ಇಲ್ಲಿನ ಸಾಂಸ್ಕೃತಿಕ ಲೋಕದಲ್ಲಿ ಒಂದು ದೊಡ್ಡ ನಿರ್ವಾತದ ರಂಧ್ರವನ್ನು ಮೂಡಿಸಿದೆ. ಇದರ ಜೊತೆಗೇ… ನಿಮಗೇ ಗೊತ್ತಲ್ಲ – ನಿಮ್ಮ ಸುತ್ತ ತಿರುಗುತ್ತಿದ್ದ ಎಷ್ಟೊಂದು ಉಪಗ್ರಹಗಳು… ಪಾಪ… ಅವೆಲ್ಲ ನಿಮ್ಮ ಪ್ರಸ್ಥಾನದಿಂದ ಅನಾಥಗೊಂಡಿವೆ. ಕೆಲವಂತೂ ಮಳೆಗೆ ಸಿಕ್ಕ ನೀಲವರ್ಣದ ನರಿಗಳಾಗಿವೆ… ಹೋಗಲಿ ಬಿಡಿ…
ಲಂಕೇಶ್… ನೀವು ನಮ್ಮನ್ನು ಬಿಟ್ಟು ಹೋದಂತೆ – ನೀವು ನಮಗಾಗಿ ಸಾಕಷ್ಟು ಬಿಟ್ಟೂ ಹೋಗಿದ್ದೀರಿ… ಅವುಗಳೊಂದಿಗೆ ಹೋರಾಡುತ್ತ – ಹೊಡೆದಾಡುತ್ತ ನಾವು ಬೆಳೆಯುತ್ತೇವೆ ಮತ್ತು ಕನ್ನಡ ಸಂಸ್ಕೃತಿಯನ್ನು ಬೆಳೆಸುತ್ತೇವೆ…”
(ಬೋದಿಲೇರನ ಸಖ, ಪುಟ x-xi)
ಗೌರಿ ಲಂಕೇಶರು ತಂದೆ ತಮಗೆ ಬರೆದ ಪತ್ರಗಳ ಮೂಲಕ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗುಲನ್ನು ಕಾಣಿಸುತ್ತಾರೆ. ಒಬ್ಬ ತಂದೆಯಾಗಿ ಲಂಕೇಶರು ಹೇಗಿದ್ದರು ಎಂಬುದನ್ನು ಆರ್ದ್ರವಾಗಿ ಕಟ್ಟಿಕೊಡುವ ಬರಹವಿದು. ಕಥೆಗಾರ್ತಿ ವೈದೇಹಿಯವರ ಬರಹ ಮೆಲುದನಿಯ ಸ್ವಗತದಂತಿದೆ. ಲಂಕೇಶರನ್ನು ತಾವು ಕಂಡಂತೆ ಪ್ರಾಮಾಣಿಕವಾಗಿ ಚಿತ್ರಿಸಿದ್ದಾರೆ. ಲಂಕೇಶರು ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ, ಲೇಖಕಿಯಾಗಿ ತಮಗೆ ನೀಡಿದ ಪ್ರೋತ್ಸಾಹದ ಕುರಿತು ಕೃತಜ್ಞತೆಯ ಮಾತುಗಳನ್ನಾಡಿದ್ದಾರೆ. ಅವರು ಲಂಕೇಶರ ಸಣ್ಣತನವನ್ನು, ಪತ್ರಿಕೆ ಮಾಡಿದ ಸಾಹಿತ್ಯ ರಾಜಕೀಯವನ್ನು ತುಂಬ ಸೂಕ್ಷ್ಮವಾಗಿ ಹೇಳಿದ್ದಾರೆ. ಕವಿ ಲಕ್ಷ್ಮಣರಾವ್ ಅವರ ಬರಹ ಲಂಕೇಶರ ವ್ಯಕ್ತಿತ್ವದ ಹಲವು ಮುಖಗಳನ್ನು ತೆರೆದಿಡುವಂತಿದೆ. ಲಂಕೇಶ್ ಲೇಖಕರಾಗಿ ಎಷ್ಟು ದೊಡ್ಡವರು ಎಂಬುದರ ಜೊತೆಗೆ ಅವರ ವ್ಯಕ್ತಿ ಸಹಜ ದೌರ್ಬಲ್ಯಗಳ ಕುರಿತು ಸಹ ಅವರು ಬರೆದಿದ್ದಾರೆ. ಶ್ರೀಪಾದ ಶೆಟ್ಟರು ಅಲ್ಪಕಾಲದ ಒಡನಾಟದಲ್ಲಿ ಲಂಕೇಶರೊಂದಿಗಿನ ಸ್ನೇಹ – ಜಗಳದ ಕುರಿತು ಹೇಳಿಕೊಂಡಿದ್ದಾರೆ.
ಮೂರನೆಯ ಭಾಗದಲ್ಲಿರುವ ಬರಹಗಳಲ್ಲಿ ರಹಮತ್ ತರೀಕೆರೆ, ಬಿ. ವಿ. ವೀರಭದ್ರಪ್ಪ, ಓ. ಎಲ್. ನಾಗಭೂಷಣ ಸ್ವಾಮಿ ಮತ್ತು ಚಿಂತಾಮಣಿ ಕೊಡ್ಲಕೆರೆಯವರ ಬರಹಗಳು ಹೊಸದೇನನ್ನೂ ಹೇಳುವುದಿಲ್ಲ. ಇವರಲ್ಲಿ ಲಂಕೇಶರ ಮತ್ತು ಪತ್ರಿಕೆಯ ಕುರಿತು ಮೆಚ್ಚುಗೆಯ ಭಾವವೇ ಹೆಚ್ಚು. ಇವು ಸುರಕ್ಷಿತ ವಲಯದಲ್ಲಿದ್ದುಕೊಂಡು ಬರೆಯುವಂತಹ ಆರಕ್ಕೇರದ, ಮೂರಕ್ಕಿಳಿಯದ ಸಾಮಾನ್ಯ ಬರಹಗಳು.
ಒಂದು ಕಾಲದಲ್ಲಿ ದಲಿತ – ಬಂಡಾಯ ಸಾಹಿತ್ಯದ ಪ್ರಬಲ ಸಮರ್ಥಕರಾಗಿದ್ದ ಆರ್. ಕೆ. ಮಣಿಪಾಲರ ಬರಹ ಕುತೂಹಲಕರವಾಗಿದೆ. ಲಂಕೇಶರ ಸಣ್ಣತನ, ಸ್ವಾರ್ಥ, ಎದುರಾಳಿಗಳನ್ನು ಹತ್ತಿಕ್ಕಲು ಪತ್ರಿಕೆಯನ್ನು ಬಳಸಿಕೊಂಡದ್ದು, ವಿಮರ್ಶೆಯ ಹೆಸರಿನಲ್ಲಿ ತಮಗಾಗದ ಕೃತಿಗಳನ್ನು ಬದಿಗೆ ಸರಿಸಿದ್ದರ ಕುರಿತು ತುಂಬ ದಿಟ್ಟವಾಗಿ ಮತ್ತು ತ್ರಸ್ತರಾಗಿ ಬರೆದಿದ್ದಾರೆ. ಲಂಕೇಶರು ದಲಿತ – ಬಂಡಾಯ ಚಳುವಳಿಯನ್ನು ಡಂಬಾಯ ಎಂದು ಲೇವಡಿ ಮಾಡಿದ್ದು. ಮಾರ್ಕ್ಸಿಸ್ಟ್ ಚಿಂತನೆಯಿಂದ ತೀವ್ರ ಪ್ರಭಾವಿತರಾಗಿ ಬರೆಯುತ್ತಿದ್ದ ಎಡಪಂಥೀಯ ಚಿಂತಕರಾಗಿದ್ದ ಜಿ. ರಾಜಶೇಖರರನ್ನು ಒಪ್ಪದ ಲಂಕೇಶರ ಕುರಿತು ಮಣಿಪಾಲರಿಗೆ ಆಕ್ರೋಶವಿದೆ. ಪತ್ರಿಕೆಯಿಂದ ಪ್ರತಿಷ್ಠೆ ಮತ್ತು ಆರ್ಥಿಕ ನೆಮ್ಮದಿ ಪಡೆದ ಲಂಕೇಶರು ಒಂದು ಹಂತದಲ್ಲಿ ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಪತ್ರಿಕೆಯನ್ನು ದುರುಪಯೋಗಪಡಿಸಿಕೊಂಡರು ಎಂಬ ಆರೋಪವನ್ನು ಸಹ ಮಣಿಪಾಲರು ಮಾಡುತ್ತಾರೆ. ಖಚಿತವಾದ ಸಾಕ್ಷ್ಯಾಧಾರಗಳಿಲ್ಲದೆ ಇಂತಹ ಆರೋಪಗಳನ್ನು ಒಪ್ಪಲಾಗದು.
ಜಿ. ರಾಜಶೇಖರರು ತಮ್ಮ ತಲೆಮಾರಿನ ಅನೇಕ ಚಿಂತಕರಿಗಿಂತ ತುಂಬ ಭಿನ್ನ ವಿಚಾರಧಾರೆ ಹೊಂದಿದವರು ಮತ್ತು ವೈಯಕ್ತಿಕವಾಗಿ ಪ್ರಾಮಾಣಿಕರು. ಆದರೆ ಅವರು ತಮ್ಮ ಚಿಂತನೆ ಮತ್ತು ವಿಮರ್ಶೆಗೆ ಮಾರ್ಕ್ಸಿಸ್ಟ್ ಚೌಕಟ್ಟು ಹಾಕಿಕೊಂಡು ಬರೆಯುತ್ತಿದ್ದದ್ದರಿಂದ ಒಂದು ಹಂತದಲ್ಲಿ ಅವರ ಬೆಳವಣಿಗೆ ನಿಂತಿತೆಂದೇ ಹೇಳಬೇಕಾಗುತ್ತದೆ. ಮಾರ್ಕ್ಸಿಸ್ಟ್ ಚಿಂತನೆಯ ಕುರಿತು ಅವರಿಗಿದ್ದ ಅಚಲ ನಂಬಿಕೆ ಮತ್ತು ಹಿಂದುತ್ವದ ಕುರಿತ ಪೂರ್ವಾಗ್ರಹಪೀಡಿತ ಅಭಿಪ್ರಾಯಗಳು ಅವರ ಚಿಂತನೆ ಮತ್ತು ಬರಹವನ್ನು ಸೀಮಿತಗೊಳಿಸಿದವು. ತುಂಬ ಸಲ ಅವರು ಹೇಳಿದ್ದನ್ನೇ ಹೇಳುತ್ತಾರೆ ಅನಿಸಲು ಈ ಮಾರ್ಕ್ಸಿಸ್ಟ್ ಮನೋಭಾವ ಮತ್ತು ಇತರೆ ಚಿಂತನೆಗಳ ಸ್ಪಷ್ಟ ನಿರಾಕರಣೆಯೇ ಕಾರಣ. ಬಹಳ ಹಿಂದೆಯೇ ಲಂಕೇಶರು ಇದನ್ನು ಗುರುತಿಸಿದ್ದರು. ಮಣಿಪಾಲರ ಎಲ್ಲ ಅಭಿಪ್ರಾಯಗಳನ್ನು ಒಪ್ಪಲಾಗದಿದ್ದರೂ ಲಂಕೇಶರ ಕುರಿತು ಎತ್ತಿದ ಪ್ರಶ್ನೆಗಳಲ್ಲಿ ಮತ್ತು ಅವರನ್ನು ವ್ಯಕ್ತಿವಾದಿ ಹೋರಾಟಗಾರ ಎಂದು ಕರೆದಿದ್ದರಲ್ಲಿ ಖಂಡಿತ ಹುರುಳಿದೆ.
ಕಥೆಗಾರ ಕೆ. ಸತ್ಯನಾರಾಯಣರ ‘ಸಾಂಸ್ಕೃತಿಕ ವಿದ್ಯಮಾನವಾಗಿ ಪಿ. ಲಂಕೇಶ್’ ಒಂದು ತೂಕದಿಂದ ಕೂಡಿದ ಬರಹ. ಸೃಜನಶೀಲ ಲೇಖಕರಾದ ಲಂಕೇಶರು ಅಧ್ಯಾಪನವನ್ನು ಬಿಟ್ಟು ಸಿನಿಮಾ, ಪತ್ರಿಕೆ ಎಂದು ಇತರೆ ರಂಗಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದರು. ಸಿನಿಮಾ ಅವರ ಕೈ ಹಿಡಿಯದಿದ್ದರೂ ಕೆಲವು ಪ್ರಶಸ್ತಿ ಸಿಗುವಂತೆ ಮಾಡಿತು. ಆದರೆ ಪತ್ರಿಕೆ ಮಾತ್ರ ಅವರ ಜೀವನದ ದಿಕ್ಕನೇ ಬದಲಿಸಿತು. ಲಂಕೇಶ್ ಪತ್ರಿಕೆ ಎಂಬತ್ತರ ದಶಕದಲ್ಲಿ ಕರ್ನಾಟಕದಾದ್ಯಂತ ತುಂಬ ಜನಪ್ರಿಯತೆ ಗಳಿಸಿಕೊಂಡಿತು. ಪತ್ರಿಕೆಯ ಅಪಾರ ಜನಪ್ರಿಯತೆ ಲಂಕೇಶರಿಗೆ ಹೆಸರು, ಹಣ ಮತ್ತು ಪ್ರಭಾವ ತಂದುಕೊಟ್ಟಿತು. ಇದರಿಂದ ಸಹಜವಾಗಿಯೇ ಅವರಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ವರ್ಚಸ್ವೀ ವ್ಯಕ್ತಿತ್ವ ಪ್ರಾಪ್ತವಾಯಿತು. ತುಂಬ ಬುದ್ಧಿವಂತರಾದ ಲಂಕೇಶರು ಇದನ್ನು ಸರಿಯಾಗಿ ಬಳಸಿಕೊಂಡರು. ಅತಿಯಾದರೆ ಅಮೃತವೂ ವಿಷವಾಗುವುದು. ಅದೇ ರೀತಿ ಲಂಕೇಶ ಪತ್ರಿಕೆ ಸಹ ವರ್ಷದಿಂದ ವರ್ಷಕ್ಕೆ ಪ್ರಭಾವ ಕಳೆದುಕೊಳ್ಳುತ್ತ ಹೋಯಿತು. ಲಂಕೇಶ್ ಪತ್ರಿಕೆಯ ಪ್ರಭಾವ ಮತ್ತು ಪ್ರಸರಣ ಕಡಿಮೆಯಾದದ್ದರ ಕುರಿತು, ಲಂಕೇಶರು ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಮಿಂಚಲು ಕಾರಣವಾದ ಪತ್ರಿಕೆಯ ಏಳು-ಬೀಳುಗಳ ಕುರಿತು ಸತ್ಯನಾರಾಯಣರು ನೀಡಿರುವ ಕಾರಣಗಳು ತುಂಬ ವಸ್ತುನಿಷ್ಠವಾಗಿವೆ.
“ಆದರೆ ಎಲ್ಲ ಶೈಲಿಗಳು, ಎಲ್ಲ ನಿಲುವುಗಳು ಒಂದಲ್ಲ ಒಂದು ದಿನ ಸುಸ್ತು ಹೊಡೆಸುತ್ತವೆ. ಓದುಗರಿಗೆ ಬೇಸರವನ್ನು ಉಂಟುಮಾಡುತ್ತವೆ. ಲಂಕೇಶ್ ಪತ್ರಿಕೆ ಕೂಡ ಈ ಟೈರಸಮನೆಸ್ಸಿಗೆ, ಏಕತಾನತೆಗೆ ಹೊರತಾಗಲಿಲ್ಲ. ಕೊನೆಕೊನೆಗಂತೂ ಲಂಕೇಶ್ ಪತ್ರಿಕೆ ಯಾರ ಬಗ್ಗೆ, ಯಾವ ವಿದ್ಯಮಾನದ ಬಗ್ಗೆ ಏನು ಹೇಳಬಹುದೆಂಬುದನ್ನು ಸುಮಾರು ಜಾಣನಾದ ಶಾಲಾ ಬಾಲಕನೊಬ್ಬ ಕೂಡ ಊಹಿಸಬಹುದಾಗಿತ್ತು. ಸದಾ ಹೊಸತನ್ನು ಬಯಸುವ, ಸದಾ ಬದಲಾವಣೆಯನ್ನು ಬಯಸುವ ಓದುಗರ ಪ್ರವೃತ್ತಿ ಮಾತ್ರ ಲಂಕೇಶ್ ಪತ್ರಿಕೆಯ, ಲಂಕೇಶರ ಪ್ರಭಾವವನ್ನು ಕಡಿಮೆ ಮಾಡಿವೆ. ಲಂಕೇಶರ ವ್ಯಕ್ತಿತ್ವದ ಸ್ವರೂಪ ಮತ್ತು ಲೇಖಕರಾಗಿ ಅವರಿಗಿದ್ದ ಕೆಲ ಒಲವುಗಳು ಕೂಡ ಅವರ ಪ್ರಭಾವವನ್ನು ಕಡಿಮೆ ಮಾಡಿತೆಂದು ನನ್ನ ತಿಳುವಳಿಕೆ.”
(ಬೋದಿಲೇರನ ಸಖ, ಪುಟ ೪೬)
“ಇಷ್ಟಾಗಿಯೂ ಲಂಕೇಶ್ ಸಾಂಸ್ಕೃತಿಕ ಪರಿಚಾರಿಕೆ-ಉಪಾಸನೆಯನ್ನು ಮಾಡಿದ್ದು ಲೇಖಕ-ಸಂಪಾದಕ ವ್ಯಕ್ತಿತ್ವದ ಮೂಲಕವೇ ಅನ್ನುವುದನ್ನೂ ಮರೆಯಬಾರದು. ಸಂಸ್ಕೃತಿ ಸೇವೆ ಮಾಡಲು ಲಂಕೇಶರಿಗೆ ಯಾವತ್ತೂ ಅಧಿಕಾರ ಕೇಂದ್ರ ಬೇಕೆನಿಸಲೇ ಇಲ್ಲ. ಲಂಕೇಶರಂತವರನ್ನ ಯಾವುದಾದರೂ ಪ್ರಾಧಿಕಾರದ ಅಧ್ಯಕ್ಷರಾಗಿಯೋ, ಅಕಾಡೆಮಿಯ ಕಾರ್ಯದರ್ಶಿಯಾಗಿಯೋ ತಮಾಷೆಗಾದರೂ ಊಹಿಸಿಕೊಳ್ಳುವುದು ಕೂಡ ಕಷ್ಟ. ಈ ದೃಷ್ಟಿಯಿಂದ ಅವರ ಆಪ್ತ ಸರೀಕರಲ್ಲಿ ಲಂಕೇಶರು ಅಪವಾದದ ಅಪರೂಪ ಮತ್ತು ನಂತರದ ತಲೆಮಾರಿಗೆ ಮಾದರಿ.”
(ಬೋದಿಲೇರನ ಸಖ, ಪುಟ ೪೯)
ನಾಲ್ಕನೆಯ ಭಾಗದಲ್ಲಿರುವ ಲೇಖನಗಳು ಲಂಕೇಶರ ಕೃತಿಗಳ ವಿಮರ್ಶೆಗೆ ಮೀಸಲಾಗಿವೆ. ಸಿ. ಎನ್. ರಾಮಚಂದ್ರನ್ ಮತ್ತು ರಾಘವೇಂದ್ರ ಪಾಟೀಲರು ಲಂಕೇಶರ ಕಾದಂಬರಿಗಳ ಕುರಿತು ಬರೆದ ಲೇಖನಗಳು ವಸ್ತುನಿಷ್ಠ ವಿಮರ್ಶೆಯಿಂದಾಗಿ ಗಮನ ಸೆಳೆಯುತ್ತವೆ. ಲಿಂಗದೇವರು ಹಳೆಮನೆ ಮತ್ತು ಜಿ. ರಾಜಶೇಖರರ ಲೇಖನಗಳಲ್ಲಿ ಲಂಕೇಶರ ನಾಟಕಗಳ ಕುರಿತು ವಿಮರ್ಶೆಗಿಂತ ಮೆಚ್ಚುಗೆಯೇ ಅಧಿಕವಾಗಿ ಕಾಣುತ್ತದೆ. ಎಚ್. ಎಸ್. ರಾಘವೇಂದ್ರ ರಾವ್ ಲಂಕೇಶರ ಸಮಗ್ರ ಕಥೆಗಳ ಕುರಿತು ಬರೆಯುತ್ತ, ಆರಂಭದ ಕಥೆಗಳಿಂದ ‘ಕಲ್ಲು ಕರಗುವ ಸಮಯ’ದವರೆಗೆ ಅವರ ಕಥನ ಸಾಹಿತ್ಯದಲ್ಲುಂಟಾದ ಬದಲಾವಣೆ ಮತ್ತು ಬೆಳವಣಿಗೆಯ ಕುರಿತು ಚರ್ಚಿಸಿದ್ದಾರೆ. ಪದ್ಮನಿ ಹೆಗಡೆಯವರು ಮಾತ್ರ ಲಂಕೇಶರ ಕಥೆಗಳಲ್ಲಿ ಕಂಡುಬರುವ ‘ಕಾಮ’ದ ಚಿತ್ರಣದ ಕುರಿತು ದಿಟ್ಟವಾಗಿ ಪ್ರಶ್ನಿಸಿದ್ದಾರೆ. ಆದರೆ ಅವರು ಎತ್ತಿದ ಪ್ರಶ್ನೆಗಳನ್ನಿಟ್ಟುಕೊಂಡು ಯಾವುದೇ ಬಗೆಯ ಚರ್ಚೆ ಮುಂದುವರೆಯಲಿಲ್ಲ.
ಲಂಕೇಶರು ಉತ್ತಮ ಲೇಖಕರಾದರೂ ಸಹ ಒಳ್ಳೆಯ ಭಾಷಣಕಾರರಾಗಿರಲಿಲ್ಲ ಎಂಬ ಸಂಗತಿ ಎಲ್ಲರಿಗೂ ಗೊತ್ತಿರುವಂತಹದು. ಆದರೆ ಈ ಪುಸ್ತಕದ ಕೊನೆಯಲ್ಲಿ ನೀಡಿರುವ ಭಾಷಣದಲ್ಲಿ ಲಂಕೇಶರ ವಾಗ್ವೈಖರಿ, ಪಾಂಡಿತ್ಯ ಕಂಡುಬರುವುದಿಲ್ಲ. ಆದರೆ ತಮಗನಿಸಿದ್ದನ್ನು ನೇರವಾಗಿ ಮತ್ತು ಪ್ರಾಮಾಣಿಕವಾಗಿ ಹೇಳಿರುವುದನ್ನು ಕಾಣಬಹುದು. ಭಾಷಣದ ಕೊನೆಯಲ್ಲಿ ಹೇಳಿರುವ ಮಾತುಗಳು ನಿಜಕ್ಕೂ ಟಿಪಿಕಲ್ ಲಂಕೇಶತನದಿಂದ ಕೂಡಿವೆ.
“ಈ ಸಂಕಿರಣದಿಂದ ಕೆಲವರಿಗಾದ್ರೂ ನಾಟ್ಕ ಬರೆಯುವಂತಹ ಒಂದು ಆಸೆ… ಆಡುವಂತಹ ಉತ್ಸಾಹ… ಬರ್ಬೇಕು. ಈ ಸಂಕಿರಣದಿಂದ ಗಿರೀಶರು ಇನ್ನೂ ಹೆಚ್ಚಿನ ನಾಟಕಗಳನ್ನು ಬರೆಯುವುದಿದ್ದರೆ ಬರೆಯದಂತಾಗಲಿ… ಹುಡುಗ್ರು-ನೀವು ಬರೀಬೇಕು. ನೀವು ಎಷ್ಟು ಬರೀಬೇಕು ಅಂತ ಹೇಳಿದ್ರೆ ನನಗೆ ಹೊಟ್ಟೆ ಕಿಚ್ಚು ಆಗ್ಬೇಕು… ಹೊಟ್ಟೆ ಕಿಚ್ಚು ಒಂದು ಸ್ಫೂರ್ತಿ… ಇವತ್ತಿನ ಚರ್ಚೆಯಲ್ಲಿ ನಾಟಕದ ಮಿತಿ, ಸೀಮಿತ ಅರ್ಥ, ಮಹತ್ವ ಎಲ್ಲರಿಗೂ ಗೊತ್ತಾಗುವಂತಾಗಲಿ.”
(ಬೋದಿಲೇರನ ಸಖ, ಪುಟ ೧೩೬)
ಲಂಕೇಶರ ಸಾಹಿತ್ಯ ಮತ್ತು ವ್ಯಕ್ತಿತ್ವದ ಕುರಿತು ಈಗಾಗಲೇ ಹಲವು ಕೃತಿಗಳು ಬಂದಿದ್ದರೂ ‘ಬೋದಿಲೇರನ ಸಖ – ಲಂಕೇಶ್ ನೆನಪಿನ ಸಂಪುಟ’ ತನ್ನ ವಸ್ತುನಿಷ್ಠ ಧೋರಣೆ ಮತ್ತು ವೈವಿಧ್ಯತೆಯಿಂದಾಗಿ ಗಮನ ಸೆಳೆಯುತ್ತದೆ. ಸಂಪಾದಕರಾದ ಪಾಟೀಲರು ಇಲ್ಲಿ ಅಭಿಪ್ರಾಯ ಮತ್ತು ಭಿನ್ನಾಭಿಪ್ರಾಯಗಳಿಗೆ ಸಮಾನ ಸ್ಥಾನ ನೀಡಿದ್ದಾರೆ. ಲಂಕೇಶರ ವ್ಯಕ್ತಿತ್ವ ಮತ್ತು ಸಾಧನೆಗಳ ಎಲ್ಲ ಮಗ್ಗುಲುಗಳನ್ನು ವಸ್ತುನಿಷ್ಠವಾಗಿ ಮತ್ತು ವಿಮರ್ಶಾತ್ಮಕವಾಗಿ ವಿಶ್ಲೇಷಣೆ ಮಾಡಿರುವ ಬರಹಗಳಿರುವುದರಿಂದ ‘ಬೋದಿಲೇರನ ಸಖ’ ಕೃತಿಯ ಮಹತ್ವ ಹೆಚ್ಚಿದೆ.
4 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ‘ಬೋದಿಲೇರನ ಸಖ’ – ಒಂದು ಮರು ಓದು”
ಲೇಖನ ಚೆನ್ನಾಗಿದೆ.. ನಮಗೂ ಮರು ಓದಿಗೆ ಚಾಲನೆ ನೀಡುವಂತೆ ಮಾಡಿದೆ. ಅಭಿನಂದನೆಗಳು.
ವಿಭಿನ್ನ ದೃಷ್ಟಿಕೋನಗಳಿಂದ ಲೇಖಕರು ಲಂಕೇಶರನ್ನು ಪರಿಗ್ರಹಿಸಿದ ಬಗೆಯನ್ನು
ವಿಮರ್ಶಾತ್ಮಕವಾಗಿ ಬರೆದಿದ್ದೀರಿ. ಅಭಿನಂದನೆಗಳು
ಪಿ.ಲಂಕೇಶರು ಸ್ವತಃ ಕವಿ,ನಾಟಕಕಾರ, ಕತೆಗಾರ, ಕಾದಂಬರಿಕಾರ, ಅನುವಾದಕ, ಚಿತ್ರಕಥೆ ಬರಹಗಾರ ಮತ್ತು ಪತ್ರಕರ್ತರು. ತನ್ನ ಹೆಸರನ್ನೇ ಮುಡಿಪಾಗಿಟ್ಟು, ಪತ್ರಿಕಾರಂಗದಲ್ಲಿ, ಅನ್ವರ್ಥದಲ್ಲಿ ಅಭಿಮನ್ಯುವಿನ ಹಾಗೆ ಚಕ್ರವ್ಯೂಹಕ್ಕಿಳಿದು ಸೆಣಸಾಡಿದ ಏಕಮೇವ ಶೂರ! ಲಂಕೇಶ ಪತ್ರಿಕೆಗೂ ಮುನ್ನ,ಶ್ರೀಯುತ ಪೂಚಂತೇ ಮತ್ತು ಕೆ.ರಾಮದಾಸರವರ ಸಂಗಡ,ಕರ್ನಾಟಕ ಪ್ರಗತಿರಂಗ ವೇದಿಕೆಯ ಪ್ರಚಾರಕ್ಕಾಗಿ, ನಾಡಿನುದ್ದಕ್ಕೂ ಚಲಿಸಿದಾಗ,ಆದ ಅದಮ್ಯ ಪ್ರೇರಣೆಯೇ, ಅವರ ಜೀವನದ ಮಹತ್ವದ ತಿರುವು. ಸತ್ಯದ ಶೋಧಕ್ಕಾಗಿ,ಸಮಾಜದಲ್ಲಿ ಜಾತಿಯಿಂದ ಹಿಂದುಳಿದವರ ಉನ್ನತಿಯ ಬದಲಾವಣೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ, ತನ್ನ ಜೀವಮಾನದ ಅವಿರತ ಹೋರಾಟಕ್ಕೆ, ಪಣತೊಟ್ಟ ಕಾಯಕಕ್ಕೆ ಅರ್ಪಿಸಿಕೊಂಡ, ಬದುಕಿನ ಉದ್ದೇಶವನ್ನು ದುಡಿಸಿಕೊಂಡ, ವ್ಯಕ್ತಿಮತ್ವವದು. ಒಂದು ಆವೇಶ,ರೊಚ್ಚಿನ ಉದ್ವೇಗ, ಭಲೇ, ಹೊಟ್ಟೆಕಿಚ್ಚಿನ ಸ್ಫೂರ್ತಿಯಿಂದ ಕಿಡಿ ಸಿಡಿದು, ಮೆರೆದಾಡಿ, ಕಾದಾಡಿ, ಮಡಿದ ಬದುಕನ್ನು ಎಲ್ಲಾ ಕೋನಗಳಿಂದ ತೆರೆದಿಡುವಾಗ,ಅದು ವಿರಸವಿರಲಿ, ಸರಸವಿರಲಿ, ಸಮರಸವಿರಲಿ,ಗರಗಸವಿರಲಿ, ನೀರಸವಾಗಿರಲು ಶಕ್ಯವೇ ಇಲ್ಲ. ಕನ್ನಡ ಸಾಹಿತ್ಯದಲ್ಲಿ,ರಾಜಕಾರಣದ ಅವ್ಯವಸ್ಥೆಯಲ್ಲಿ, ಸಮಾಜದ ಸಮಷ್ಟಿಯ,ನ್ಯಾಯದ ಪದ್ಧತಿಗಳನ್ನು ತಿದ್ದುವುದರಲ್ಲಿ,ಸುಧಾರಿಸುವಲ್ಲಿ, ಒಂದು ಪತ್ರಿಕೆಯ ಮಾಧ್ಯಮವನ್ನು ಸಂಪೂರ್ಣ ಪ್ರಯೋಜನದ ಒರೆಗೆ ಹಚ್ಚಿ, ಸದಾ ಸರ್ವತೋಮುಖವಾಗಿ ಅನ್ಯಾಯದ ಮೂಲಗಳನ್ನು ಪ್ರಹರಿಸುತ್ತ, ಪರಿಹಾರದ ಮಾರ್ಗ ತೋರುವ ಹಾದಿಯೇ,ಇತೀಹ ಅಸ್ = ಇತಿಹಾಸ = ಹೀಗೆ ಇತ್ತು, ಆಗಿದೆ!
ಪೂರ್ತಿ ಲೇಖನದಲ್ಲಿ, ಪಾರದರ್ಶಿಕತೆ ಮತ್ತು ಪ್ರಾಮಾಣಿಕತೆ ಮೆಚ್ಚುಗೆಯ ಅಂಶಗಳು!
ಲೇಖನದ ಕೊನೆಯಲ್ಲಿ,….ತನ್ನ ವಸ್ತುನಿಷ್ಠ ಧೋರಣೆ ಮತ್ತು ವೈವಿಧ್ಯತೆಯಿಂದಾಗಿ ಗಮನ ಸೆಳೆಯುತ್ತದೆಯಾದರೆ, ನಂತರ, ಅಭಿಪ್ರಾಯ ಮತ್ತು ಭಿನ್ನಾಭಿಪ್ರಾಯಗಳಿಗೆ ಸಮಾನ ಸ್ಥಾನ ನೀಡಿದ್ದರಿಂದ, ಅನ್ನುವುದು ಸರಿಯೇ?
ಪಿ.ಲಂಕೇಶರು ಓರ್ವ ‘ವ್ಯಕ್ತಿ’ಯಿಂದ, ಒಂದು ‘ಶಕ್ತಿ’ಯಾಗಿ ಬೆಳೆದು ನಿಂತವರು. ಹೀಗಾಗಿ,ಕನ್ನಡ ಸಾಹಿತ್ಯದ ಬೆಳವಣಿಗೆಯ ಕಾಲಗತಿಯಲ್ಲಿ, ಎಂದಿಗೂ ಅವರದೇ ಆದ ಒಂದು ಬಲಿಷ್ಠವಾದ, ಉಲ್ಲೇಖಾರ್ಹ,‘ಲಂಕೇಶ ಪರ್ವ’ವಿದೆ, ಅನ್ನುವದು, ಯಾರೂ ಒಪ್ಪಬಹುದಾದ, ಯಾವಾಗಲೋ ಮರುಕಳಿಸಬಹುದಾದ, ಸಂದೇಹಕ್ಕೂ ಮೀರಿ ಇರುವ ಸತ್ಯ!
————————————————————————-
ಒಂದು ಸವಿ ನೆನಪು : ೧೯೭೪ರ ಶಿರಸಿಯ ಕಾಲೇಜಿನ ವಾರ್ಷಿಕ ಗ್ಯಾದರಿಂಗಿನಲ್ಲಿ, ಪ್ರೊಫೆಸರ್ ಡಾ. ಶಾಲಿನಿ ರಘುನಾಥ್ ಅವರ ನಿರ್ದೇಶನದ, ಲಂಕೇಶರ ೧೯೬೫ರ ಸುಪ್ರಸಿದ್ಧ ನಾಟಕ-ದಲ್ಲಿ,‘ಕ್ರಾಂತಿ ಬಂತು ಕ್ರಾಂತಿ’ ಅಂತ ಭಾಷಣದಲ್ಲಿ ಕೂಗುವಾಗ, ಕೇಳಿಸಿದ ಪ್ರೇಕ್ಷಕರ ಚಪ್ಪಾಳೆಯ ಭರಭರಾಟೆಯನ್ನು, ಇಂದಿಗೂ ಮರೆಯುವ ಹಾಗಿಲ್ಲ. ಯಾಕೆಂದರೆ,ಆ ಶಬ್ದಾವಳಿಗಳ ಹಿನ್ನೆಲೆ ಹಾಗೂ ಮೂಲಭೂತ ಗತ್ತೇ, ಆ ರೀತಿ ಇತ್ತು!
ಲಂಕೇಶರ ಹಲವು ಮಗ್ಗುಲುಗಳನ್ನು ಸಮರ್ಥವಾಗಿ ಹಿಡಿದಿಟ್ಟ ಲೇಖನ.