ಕೃತಿ : ಸುವರ್ಣಯುಗ
ಲೇಖಕರು: ಅನಿತಾ ಪಿ. ತಾಕೊಡೆ
ಪ್ರಕಾಶನ : ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ
ಪುಟ-೨೯೮, ಬೆಲೆ ರೂ, 375
ಮುಂಬೈಯಲ್ಲಿ ಈಚಿನ ದಶಕಗಳ ಪೀಳಿಗೆಯವರಿಗೆ ಭಾರತ್ ಬ್ಯಾಂಕ್ ಮತ್ತು ಬಿಲ್ಲವ ಎಸೋಸಿಯೇಷನ್ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು ಕರಾವಳಿಯಿಂದ ಬಂದ ಸಮುದಾಯದವರ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯ ದೃಷ್ಟಿಯಿಂದ ಮರೆಯಲಾಗದ ಛಾಪನ್ನು ಮೂಡಿಸಿದ್ದ ಜಯ ಸಿ ಸುವರ್ಣ ಅವರ ಹೆಸರು ಚಿರಪರಿಚಿತ. ಕಳೆದ ಶತಮಾನದಲ್ಲಿ ಮುಂಬೈ ಕನ್ನಡಿಗರಿಗೆ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿ ಪರಿಚಿತರಿದ್ದ ಶಿವರಾಮ ಕಾರಂತರಂತೆಯೇ ಈಗಿನ ಪೀಳಿಗೆಯವರನ್ನು ಪ್ರಭಾವಿಸಿದವರು ಜಯ ಸಿ ಸುವರ್ಣ. ಕರಾವಳಿ ಜಿಲ್ಲೆಯ ಎಲ್ಲರಂತೆಯೇ ಬದುಕನ್ನು ಅರಸಿ ಮೂಲ್ಕಿ ಪರಿಸರದಿಂದ ಮುಂಬೈಗೆ ಹೋಗಿ ಹೋಟಲಿನಲ್ಲಿ ಕೆಲಸ ಮಾಡುತ್ತಾ ಅದೇ ಉದ್ಯೋಗದಲ್ಲಿ ಯಶಸ್ಸನ್ನು ಕಂಡವರು ಜಯ ಸಿ.ಸುವರ್ಣ.
ಜಯ ಸಿ ಸುವರ್ಣ ಅವರು ಸೋದರ ಮಾವಂದಿರ ನೆರವಿನಲ್ಲಿ ಹೋಟಲು ಉದ್ಯಮದಲ್ಲಿ ತರಬೇತಿ ಪಡೆದು (ಅಂದರೆ ಕ್ಲೀನರ್, ಸಪ್ಲೈಯರ್, ಕುಕ್, ಕ್ಯಾಷಿಯರ್, ಮೇನೇಜರ್ ಇತ್ಯಾದಿ ಎಲ್ಲ ಕೆಲಸಗಳಲ್ಲೂ ತೊಡಗಿಕೊಂಡು) ಪ್ರತಿಷ್ಠಿತ ಉದ್ಯಮಿಯಾಗಿ ಬೆಳೆದು ಬಂದ ಪರಿ ಅನನ್ಯವಾದದ್ದು. ಸ್ವಂತದ ಜಯಪ್ರಕಾಶ್’ ಹೋಟಲಿನಿಂದ ಹಂತಹಂತವಾಗಿ ಅಭಿವೃದ್ಧಿ ಹೊಂದುತ್ತ ಹೊಟೇಲುಗಳು, ವಸತಿಗೃಹಗಳು, ವಾಣಿಜ್ಯ ಸಂಕೀರ್ಣಗಳ ಒಡೆತನದ ಮೂಲಕ ಮುಂಬೈ ಗೋರೆಗಾಂವ್ ಪ್ರದೇಶದಲ್ಲಿ ಸೇಟ್” ಎಂಬ ಗೌರವಕ್ಕೆ ಪಾತ್ರರಾದ ಕಥೆ ಹೋರಾಟದ ಕಥಾನಕ. ಮುಂಬೈಗೆ ಹೋಗಿ ಹಣ ಮಾಡಿಕೊಂಡು ಮೈತುಂಬ ಆಭರಣಗಳನ್ನು ಹೇರಿಕೊಂಡು ಹುಟ್ಟೂರಿಗೆ ಬರುತ್ತಾ ಪ್ರತಿಷ್ಠೆ ಮೆರೆಯುವವರ ಸಾಲಿನಲ್ಲಿ ಜಯ ಸಿ ಸುವರ್ಣ ಸೇರಿದವರಲ್ಲ. ಬದಲಾಗಿ ಒಂದು ಹಂತದ ಗಳಿಕೆಯ ನಂತರ ತಮ್ಮ ಬದುಕನ್ನು ಸಮಾಜಕ್ಕಾಗಿ ಮೀಸಲಿಟ್ಟು ಅದರಲ್ಲಿ ಧನ್ಯತೆಯನ್ನು ಕಂಡುಕೊಂಡ ವಿಶಿಷ್ಟ ಉದ್ಯಮಿ.
ಯಕ್ಷಗಾನವೂ ಸೇರಿದಂತೆ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಮುಂಬೈ ಪರಿಸರದಲ್ಲಿ ಅವರು ನೀಡುತ್ತಿದ್ದ ಉತ್ತೇಜನವೇ ಅವರಿಗೆ 2014ರಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ನಾಗರಿಕ ಗೌರವವಾದ ರಾಜ್ಯೋತ್ಸವ ಪ್ರಶಸ್ತಿ' ಅರಸಿಕೊಂಡು ಬಂದಿತು. ಹುಟ್ಟೂರಿನಲ್ಲಿ ವಾಣಿಜ್ಯ ಕಟ್ಟಡಗಳು, ಸಭಾಭವನ, ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದ, (ಆಪ್ತರ ಬಾಯಲ್ಲಿ) ಜಯಣ್ಣ ನಿಜವಾದ ಅರ್ಥದಲ್ಲಿ ಶ್ರೀ ನಾರಾಯಣಗುರುಗಳ ಆದರ್ಶಗಳ ಪರಿಪಾಲಕರು. ಶಿಕ್ಷಣ ಮತ್ತು ಸಂಘಟನೆಯ ಮಹತ್ವವನ್ನು ತಮ್ಮ ಸಾಮಾಜಿಕ ಸೇವಾಕ್ಷೇತ್ರದಲ್ಲಿ ಆದ್ಯತೆಯಿಂದ ಕೈಗೊಂಡಿದ್ದ ಅವರನ್ನು ಅಜಾತಶತ್ರು ಎಂದು ಗುರುತಿಸಿದ್ದರಲ್ಲಿ ಅತಿಶಯೋಕ್ತಿ ಇಲ್ಲ.
ಮುಂಬೈಯಲ್ಲಿ ನೆಲೆಸಿರುವ ಅನಿತಾ ಪಿ. ತಾಕೊಡೆ ಭರವಸೆ ಮೂಡಿಸುತ್ತಿರುವ ಯುವ ಲೇಖಕಿ. ಕವನ, ಕಥೆ, ಅಂಕಣ ಬರಹಗಳಲ್ಲಿ ಸತ್ವಶಾಲಿಯಾಗಿ ಮುನ್ನಡೆಯುತ್ತಿರುವ ಅನಿತಾ ಅವರು ಜಯ ಸಿ ಸುವರ್ಣ ಅವರ ಬದುಕಿನ ಹೆಜ್ಜೆ ಗುರುತುಗಳನ್ನು ಸಂಶೋಧಕನ ಅಧ್ಯಯನ ಶಿಸ್ತಿನಿಂದ ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ. ಮುಂಬೈಯಲ್ಲಿ ಕನ್ನಡ ಚಟುವಟಿಕೆಗಳಿಗೆ ಜಯಣ್ಣ ಅವರು ಉತ್ತೇಜನ ನೀಡುತ್ತಾ ಇದ್ದುದನ್ನು ಸ್ಮರಿಸುತ್ತಾ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಅನಿತಾ ಪಿ. ತಾಕೊಡೆ ಸಿದ್ಧಪಡಿಸಿದ
‘ಸುವರ್ಣಯುಗ’ ಸಂಶೋಧನಾ ಕೃತಿಯನ್ನು ಗುಣಮಟ್ಟದಲ್ಲಿ ಕಿಂಚಿತ್ತೂ ಲೋಪವಾಗದಂತೆ ಆಕರ್ಷಕವಾಗಿ ಪ್ರಕಟಿಸಿದೆ.
ಬದುಕನ್ನು ಕಟ್ಟಿಕೊಳ್ಳಲು ಮುಂಬೈಗೆ ಹೋದ ಜಯ ಸಿ.ಸುವರ್ಣ ಉದ್ಯಮದಲ್ಲಿ ಯಶಸ್ವಿಯಾಗಿ ಸಾವಿರಾರು ಕುಟುಂಬಗಳಿಗೆ ಆಸರೆಯಾದ ಸಾಹಸದ ಕಥಾನಕ ‘ಸುವರ್ಣಯುಗ' ಜಯ ಸಿ ಸುವರ್ಣ ಅವರನ್ನು ಬಲ್ಲ ನಾಡೋಜ ಹಂಪನಾ ಅವರು
‘ಮುಂಬಯಿಯ ಬಾಹುಬಲಿ’ ಎಂದೇ ಸುವರ್ಣ ಅವರನ್ನು ಬಣ್ಣಿಸಿದ್ದಾರೆ. ಈ ಬಗ್ಗೆ ಅವರು ದಾಖಲಿಸಿದ ಟಿಪ್ಪಣಿ ಅನಿತಾ ಅವರ ಸಂಶೋಧನಾ ಕೃತಿಗೆ ಯೋಗ್ಯವಾದ ಪ್ರಮಾಣಪತ್ರವೂ ಆಗಿದೆ.
ಹಂಪನಾ ಅವರ ಇನ್ನಷ್ಟು ಮಾತುಗಳು ಹೀಗಿವೆ:
ಏಕತ್ವದಲ್ಲಿ ಬಹುತ್ವವನ್ನು, ಬಹುತ್ವದಲ್ಲಿ ಏಕತ್ವವನ್ನು ಮೈಗೂಡಿಸಿಕೊಂಡಿರುವ ಇಲ್ಲಿನ ಪ್ರತಿಷ್ಠಿತ ಸಮಾಜಗಳಲ್ಲಿ ಬಿಲ್ಲವರು ಮೂರ್ಧನ್ಯರು. ಅನ್ಯಾನ್ಯ ರಾಜ್ಯಗಳಿಂದ ಮುಂಬಯಿಯಲ್ಲಿ ನೆಲೆಸಿರುವ ಬಹುಭಾಷಿಕರು ಬಿಲ್ಲವರನ್ನು ಪ್ರೀತಿ ಗೌರವದಿಂದ ಕಾಣುವಂತೆ, ಈ ಸಮಾಜವನ್ನು ಪ್ರಗತಿಪಥದಲ್ಲಿ ಮುನ್ನಡೆಸಿದ ಮುಂದಾಳು, ಮೇಲಾಳು ಜಯ ಸಿ. ಸುವರ್ಣ. ನಾನು ನಲ್ವತ್ತು ವರ್ಷಗಳಿಂದ ಅವರ ಸಂಘಟನ ಸಾಮರ್ಥ್ಯ, ನಾಯಕತ್ವ ಬಲ್ಲವನು. ಅವರ ಆತಿಥ್ಯದ ಸವಿಯನ್ನು ಆಸ್ವಾದಿಸಿದವನು. ಅವರು ರೂವಾರಿಯಾಗಿ ರೂಪಿಸಿದ ಸಂಸ್ಥೆಗಳ ಪ್ರಗತಿ ವೈಭವಗಳನ್ನು ಕಣ್ಣಾರೆ ಕಂಡವನು. ಶ್ರೀಮಂತರು ಅಪರೂಪವೇನಲ್ಲ: ತಮ್ಮಂತೆ ತಮ್ಮ ಸಮುದಾಯವೂ ಬೆಳೆಯಬೇಕೆಂದು ಶ್ರಮಿಸುವ ಶ್ರೀಮಂತ ಹೃದಯಗಳು ವಿರಳ. ಆ ವಿರಳರಲ್ಲಿ ಜಯ ಸುವರ್ಣರು ಮುಡಿಯ ಮಾಣಿಕ್ಯ.
ಅನಿತಾ ಪಿ. ತಾಕೊಡೆಯವರು ಬಹು ಶ್ರಮ ಮತ್ತು ಶ್ರದ್ಧೆಯಿಂದ ರಚಿಸಿರುವ ಈ ಕೃತಿಯಲ್ಲಿ ಜಯ ಸಿ. ಸುವರ್ಣರ ಬಹುಮುಖಿ ವ್ಯಕ್ತಿತ್ವದ ಪದರ ಪಾತಳಿಗಳನ್ನು ಆಮೂಲಾಗ್ರವಾಗಿ, ಪ್ರಭಾವಶಾಲಿಯಾಗಿ ದಾಖಲಿಸಿದ್ದಾರೆ. ಆಕೆಯ ನಿರರ್ಗಳ ನಿರೂಪಣೆಯ ಶೈಲಿ ಓದುಗರಿಗೆ ಖುಷಿ ಕೊಡುತ್ತದೆ. ಕೃತಿಯ ಶೀರ್ಷಿಕೆ ಔಚಿತ್ಯಪೂರ್ಣವಾಗಿದೆ. ಲೇಖಕಿ ಅನಿತಾ ಪಿ. ತಾಕೊಡೆಯವರು ಅಭಿನಂದನಾರ್ಹರು.
ಹಂಪನಾ ಅವರ ಈ ಮೆಚ್ಚುಗೆ ಅನಿತಾ ಅವರ ಸಂಶೋಧನಾ ಕೃತಿಗೆ ಸಂದ ಸೂಕ್ತ ಪ್ರಶಸ್ತಿಯಾಗಿದೆ
*ಲಕ್ಷಣ ಕೊಡಸೆ,
ಮಾಜಿ ಉಪ ಸಂಪಾದಕರು, ಪ್ರಜಾವಾಣಿ ದಿನ ಪತ್ರಿಕೆ
1 thought on “ಸುವರ್ಣಯುಗ; ಕರ್ಮಯೋಗಿಯ ಕಥೆ”
Very nice sir…Jaya Suvarnaji..avara Jeevana etararige madari aaguvante Grantha dalli barediddare..Bahala sundaravagi.tamma abinanadana matugalalli vyakta maduruviri.
👍