ಇಷ್ಟು ದಿನದ ಮೇಲೆ ಬಿಚ್ಚು ಮನಸ್ಸಿನ ಕವಿತೆ
ಬರೆಯಬೇಕು ಎನ್ನಿಸಿತು.
ಯಾಕೆಂದರೆ ನನಗೀಗ ಮೆನಪೊಸು
ಹಾಗಾಗೇ ಅಂದುಕೊಂಡೆ
ಬರೆದಾದರೂ ಬೇಗುದಿಯ ಮಾಡಬಹುದು ಪಾಸು
ಪಿತ್ತ ನೆತ್ತಿಗೇರಿದ್ದೇಕೆಂದು
ಈಗ ನೆನಪಾಯ್ತು.
ವ್ಯಾನಿಟಿ ಬ್ಯಾಗಿನಲ್ಲಿ ಹಾಗೇ ಇತ್ತು
ಮುಂಜಾನೆ ನುಂಗಬೇಕಿದ್ದ ಬಿಪಿ ಟಾಬ್ಲೆಟ್ಟು.
ನಾನೀಗ ವಟವಟ ಎನ್ನುತ್ತಲೇ
ಇರುತ್ತೇನೆ ಎಂಬುದು
ಮಗಳ ತಕರಾರು..
ನಾನೇನು ಮಾಡಲಿ ನನ್ನ
ಯಾರೂ ಮಾಡುವುದೇ ಇಲ್ಲ ಕ್ಯಾರು.
ಅದಕ್ಕೆ ಮುದ್ದಾಂ ಆಗಿ ನಾನು
ನಡೆಸುತ್ತಿರುವೆ ಹೊಸ ವರಸೆ, ಕಾರುಬಾರು
ಅವನ ಗುಂಗಿನಲ್ಲೆ ಇದ್ದೆ
ಈಗ ಬರಬಹುದು ಆಗ ಬರಬಹುದು
ಬಂದವನೇನೋ ಬಂದ
ಬಗಲಿಗೆ ನೇತಾಡುತ್ತಿತ್ತು ಅವಳ ಪುಸ್ತಕಕ್ಕೆ
ಇವ ಬರೆದ ಮುನ್ನುಡಿಯ ಬಂಧ.
ಕೇಳಿದೆ ‘ನಿನಗೆ ಈಗೀಗ
ನಾನೆಂದರೆ ಅಷ್ಟೇ!!
ಕಷ್ಟಕ್ಕೆ ಬೆನ್ನು, ನಷ್ಟಕ್ಕೆ ಹೊನ್ನು ಕೊಟ್ಟು
ಅನಿಷ್ಟ ಅನ್ನಿಸಿಕೊಳ್ಳಲಿಕ್ಕಷ್ಟೇ!! ಅಂದೆ.
‘ನಲವತ್ತಾರು, ಮತ್ತೆರಡು ದಾಟಿತ್ತಲ್ಲ.
ಮುಖ ನೋಡಲಾಗುತ್ತಿಲ್ಲ..
ಪಾರ್ಲರಿಗಾದರೂ ಹೋಗಿಬರಲು ನಿನಗೇನು ಕಷ್ಟ?
ಎಂದ!!
ಎಲ್ಲರೂ ಯುದ್ಧದ ಬಗ್ಗೆ
ಮರುದಿನ ಎದ್ದ ರಕ್ತದ ವಾಸನೆಯ ಬಗ್ಗೆ
ಕತ್ತರಿಸಿ ಎಸೆದ ಹಸುಳೆಯನ್ನು ರಣಹದ್ದುಗಳು
ಕುಕ್ಕಿದ ಬಗ್ಗೆ ಕವಿತೆ ಬರೆದರು
ನಾನೋ ನನ್ನೊಳಗಿನ ಯುದ್ಧಕ್ಕೆ
ಮದ್ದು ಹುಡುಕುತ್ತಿದ್ದೇನೆ.
* ನಾಗರೇಖಾ ಗಾಂವಕರ
6 thoughts on “ಮೆನಪೊಸು”
ಸೂಪರ್ ಕವಿತೆ.. ಅಭಿನಂದನೆಗಳು ಮೇಡಮ್.
ಥಾಂಕ್ಯೂ ಸರ್
ಬಹುಶಃ ಇದರ ಕನ್ನಡದ ಶೀರ್ಷಿಕೆ ‘ಋತುಬಂಧ’ವೇನೋ. ? ಚೆನ್ನಾಗಿದೆ. ಅಭಿನಂದನೆಗಳು.
ಹೌದು. ಸಂದರ್ಭದ ತುಮುಲಗಳು.
ಥಾಂಕ್ಯೂ
……….. ಅನಂತರದ ಅಧೈರ್ಯ ತರುವ ನೋವು, ಸರ್ವಸ್ವವನ್ನೂ ಕಳೆದುಕೊಂಡ ಕಳವಳ, ದಕ್ಕಿದ ಅನಿವಾರ್ಯತೆಯ ದುಮ್ಮಾನ, ಎಲ್ಲ ಬದಲಾಗಿ, ಸ್ವಂತಿಕೆಯೇ ಉಳಿದಿಲ್ಲವೆಂಬ ಕೊರಗು, ಆಕಸ್ಮಿಕ ನಿವೃತ್ತಿಯ ಬಗೆಗೆ ಅಚ್ಚರಿ ಭರಿತ ಆತಂಕ, ಇಷ್ಟೆಲ್ಲಕ್ಕೂ ಯಾರಲ್ಲಿ ಹಂಚಿಕೊಳ್ಳುವದೆಂಬ ತೀವ್ರತೆಯ ಸ್ವಗತ – ಯಾವ ಗಂಡಸೂ ಬರೆಯಲಾರದ ಕಾವ್ಯ : ಚೆನ್ನಾಗಿ ಮೂಡಿಬಂದಿದೆ!
ಧನ್ಯವಾದಗಳು ಸರ್. 🙏