೨೦೨೩ರಲ್ಲಿ ಕನ್ನಡದ ಐದು ಕೃತಿಗಳಿಗೆ ಐವತ್ತು ವರ್ಷ ತುಂಬಿದೆ. ೧೯೭೩ರಲ್ಲಿ ಪ್ರಕಟವಾದ ಎಸ್. ಎಲ್. ಭೈರಪ್ಪನವರ ‘ದಾಟು’, ಯು. ಆರ್. ಅನಂತಮೂರ್ತಿಯವರ ‘ಭಾರತೀಪುರ’, ಶಾಂತಿನಾಥ ದೇಸಾಯಿಯವರ ‘ವಿಕ್ಷೇಪ’, ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಮತ್ತು ಪಿ. ಲಂಕೇಶರ ‘ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ’ ಕೃತಿಗಳು ಸುವರ್ಣ ಸಂಭ್ರಮದಲ್ಲಿರುವ ಕೃತಿಗಳು. ಕನ್ನಡ ಓದುಗರು ಮತ್ತು ಸಾಹಿತಿಗಳಲ್ಲಿ ಸುವರ್ಣ ಸಂಭ್ರಮದಲ್ಲಿರುವ ಕೃತಿಗಳ ಕುರಿತು ಚರ್ಚಿಸುವ ಯಾವುದೇ ಉತ್ಸಾಹ ಕಾಣುತ್ತಿಲ್ಲ. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೆಂದೇ ಮೀಸಲಾದ, ಸರ್ಕಾರದಿಂದ ಸಾಕಷ್ಟು ಅನುದಾನ ಪಡೆಯುವ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಜಿಲ್ಲೆಗೊಂದರಂತೆ ತಲೆಯೆತ್ತಿ ಮಂದಹಾಸ ಬೀರುತ್ತ ನಿಂತಿರುವ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಿಗೆ ಈ ಸುವರ್ಣ ಸಂಭ್ರಮದಲ್ಲಿರುವ ಕೃತಿಗಳ ಕುರಿತು ಅರಿವೇ ಇಲ್ಲ!
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಮತ್ತು ಕನ್ನಡದ ಮಹತ್ವದ ಸಾಹಿತಿಗಳಾದ ದಿ. ಸುಬ್ಬಣ್ಣ ರಂಗನಾಥ ಎಕ್ಕುಂಡಿ ಹಾಗೂ ದಿ. ವ್ಯಾಸರಾಯ ಬಲ್ಲಾಳರ ಜನ್ಮಶತಮಾನೋತ್ಸವದ ಕುರಿತು ಸಹ ಈ ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳು ಇಂತಹುದೇ ಅಲಕ್ಷ್ಯ, ಅಸಡ್ಡೆ ತೋರಿಸಿವೆ. ಸಾಹಿತ್ಯಕ್ಕೆ ಯಥಾರ್ಥ ಸಂಬಂಧವೇ ಇಲ್ಲದ ಕೆಳದರ್ಜೆಯ ಮನೋಭಾವದ ನಿವೃತ್ತ ಅಧಿಕಾರಿಗಳು, ನಿವೃತ್ತ ಪ್ರಾಧ್ಯಾಪಕರು, ಬರೆಯಲು ಬಾರದ ದ್ವಿತೀಯ ದರ್ಜೆಯ ಲೇಖಕ/ಕಿಯರು ಮತ್ತು ಅತ್ಯಂತ ಅಪಾಯಕಾರಿಯಾದ ಬುದ್ಧಿಜೀವಿಗಳು ಇಂತಹ ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳಲ್ಲಿ ಬಂದು ಕುಳಿತಾಗ ಇಂತಹ ಉಪದ್ವ್ಯಾಪಗಳು ಸಂಭವಿಸುತ್ತವೆ. ಕೆಲಸಕ್ಕೆ ಬಾರದ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳು, ದಸರಾ ಕವಿಗೋಷ್ಠಿ, ದೀಪಾವಳಿ ಕವಿಗೋಷ್ಠಿ, ಸಂಕ್ರಾಂತಿ ಕವಿಗೋಷ್ಠಿ, ಯುಗಾದಿ ಕವಿಗೋಷ್ಠಿ ನಡೆಸಿ ಸರ್ಕಾರದ ದುಡ್ಡು ಹಾಳು ಮಾಡಿ, ಜನರ ಸಹನೆಯನ್ನು ಸಹ ಕೆಣಕುವ ಮೂರ್ಖ ಮಹಾಶಯರಿಗೇನು ಗೊತ್ತು ಎಕ್ಕುಂಡಿ ಮತ್ತು ಬಲ್ಲಾಳರ ಜನ್ಮಶತಮಾನೋತ್ಸವದ ಮಹತ್ವ?
ಸು. ರಂ. ಎಕ್ಕುಂಡಿ ಮತ್ತು ವ್ಯಾಸರಾಯ ಬಲ್ಲಾಳರಂತಹ ಮಹಾನ್ ಲೇಖಕರ ಜನ್ಮಶತಮಾನೋತ್ಸವಕ್ಕೇ ಈ ಸ್ಥಿತಿಯೊದಗಿದೆಯೆಂದ ಮೇಲೆ ಸುವರ್ಣ ಸಂಭ್ರಮದಲ್ಲಿರುವ ಕೃತಿಗಳ ಕುರಿತು ಈ ಸಂಸ್ಥೆಗಳು ತೋರಿಸುವ ಅಲಕ್ಷ್ಯ, ಅಸಡ್ಡೆಯನ್ನು ನೋಡಿ ಪ್ರಾಜ್ಞರು ಅಚ್ಚರಿ ಪಡಲಾರರು. ಇಂತಹುದೇ ಸಂಭ್ರಮದ ಘಟನೆಗಳು ಮಲಯಾಳಂ ಅಥವಾ ಬಂಗಾಳಿ ಭಾಷೆಯಲ್ಲಿ ನಡೆದಿದ್ದರೆ ಅದನ್ನು ಒಂದು ಹಬ್ಬದಂತೆ ಆಚರಿಸುತ್ತಿದ್ದರು.
ಮಲಯಾಳಂನಲ್ಲಿ ಯಾವುದೇ ಒಂದು ಕೃತಿ ಇಪ್ಪತ್ತೈದು ವರ್ಷ ಅಥವಾ ಐವತ್ತು ವರ್ಷ ಪೂರೈಸಿದರೆ ಅಂತಹ ಕೃತಿಗಳ ರಜತ ಮಹೋತ್ಸವ ಅಥವಾ ಸುವರ್ಣ ಮಹೋತ್ಸವವನ್ನು ತುಂಬ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಅಂತಹ ಕೃತಿಗಳ ವಿಶೇಷ ಆವೃತ್ತಿಗಳು ಸಿಲ್ವರ್ ಜ್ಯುಬಿಲಿ ಎಡಿಷನ್ ಮತ್ತು ಗೋಲ್ಡನ್ ಜ್ಯುಬಿಲಿ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತವೆ. ಅಂತಹ ಆವೃತ್ತಿಯ ಸಾವಿರಾರು ಪ್ರತಿಗಳನ್ನು ಓದುಗರು ಕೊಂಡು ಓದುತ್ತಾರೆ. ವಿಶ್ವವಿದ್ಯಾಲಯಗಳು, ಕೇರಳ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಇಂತಹ ಕೃತಿಗಳ ಕುರಿತು ವಿಚಾರ ಗೋಷ್ಠಿ ನಡೆಸುತ್ತವೆ. ಇದು ನಮ್ಮ ಪಕ್ಕದ ರಾಜ್ಯದ ಓದುಗರು ಕೃತಿಯೊಂದಕ್ಕೆ ತೋರುವ ಗೌರವ. ದುರ್ದೈವಶಾತ್ ಕನ್ನಡದ ಓದುಗರು ಮತ್ತು ಲೇಖಕ/ಕಿಯರಲ್ಲಿ ಇಂತಹ ಯಾವುದೇ ಉತ್ಸಾಹ ಕಾಣುತ್ತಿಲ್ಲ, ಮುಂದೆ ಕಾಣುವುದೂ ಕಷ್ಟ.
ತುಂಬ ಜನ ಉದಯೋನ್ಮುಖ ಬರಹಗಾರರಂತೂ ಓದಿನ ವಿರೋಧಿಗಳು! ಅನೇಕರಿಗೆ ಕನ್ನಡ ಸಾಹಿತ್ಯ ಪರಂಪರೆಯ ಕನಿಷ್ಠ ಅರಿವೂ ಇಲ್ಲ! ನಾಲ್ಕಾರು ಪುಸ್ತಕ ಪ್ರಕಟಿಸಿ, ಕೆಲವು ಸಣ್ಣ-ಪುಟ್ಟ ಪ್ರಶಸ್ತಿ ಪಡೆದ ಮಾತ್ರಕ್ಕೆ ಇವರ ತಲೆ ಭುಜದ ಮೇಲೆ ನಿಲ್ಲುವುದಿಲ್ಲ! ಇನ್ನು ಇವರ ಗುರುಗಳಾದ ಬುದ್ಧಿಜೀವಿಗಳು ತಾವೂ ಓದುವುದಿಲ್ಲ, ಇವರಿಗೂ ಓದಲು ಹೇಳುವುದಿಲ್ಲ! ಇದರ ಬಗ್ಗೆ ಎಷ್ಟು ಹೇಳಿದರೂ, ಬರೆದರೂ ಅದು ಪ್ರಯೋಜನಕ್ಕೆ ಬರುವುದಿಲ್ಲ. ಇರಲಿ, ಈಗ ಐವತ್ತು ವರ್ಷ ಪೂರೈಸಿದ ಐದು ಕೃತಿಗಳ ಕಿರುಪರಿಚಯ ಮಾಡಿಕೊಳ್ಳೋಣ. ಹೊಸ ತಲೆಮಾರಿನ ಯುವ ಓದುಗರು ಓದಲೇಬೇಕಾದ ಕೃತಿಗಳಿವು.
ದಾಟು (೧೯೭೩) – ಎಸ್. ಎಲ್. ಭೈರಪ್ಪ
ಅಖಿಲ ಭಾರತ ಮಟ್ಟದಲ್ಲಿ ಅಪಾರ ಖ್ಯಾತಿ ಪಡೆದಿರುವ, ಎಡಪಂಥೀಯ ಸಾಹಿತಿಗಳ ಅಸೂಯೆ ಮತ್ತು ದ್ವೇಷವನ್ನು ಸತತ ಏಳು ದಶಕಗಳ ಕಾಲ ಎದುರಿಸಿ, ಅರಗಿಸಿಕೊಂಡು, ಬೆಳೆದ ಭೈರಪ್ಪನವರ ಮಹತ್ವದ ಕಾದಂಬರಿಗಳಲ್ಲಿ ‘ದಾಟು’ ಸಹ ಒಂದು. ೧೯೭೩ರಲ್ಲಿ ಮೊದಲ ಮುದ್ರಣ ಕಂಡ ಈ ಕಾದಂಬರಿಗೆ ಓದುಗರಿಂದ ಅಭೂತಪೂರ್ವ ಸ್ವಾಗತ ದೊರೆಯಿತು. ಎಂದಿನಂತೆ ಎಡಪಂಥೀಯ ಸಾಹಿತಿಗಳು ‘ದಾಟು’ವಿನ ಮೇಲೆ ಒಟ್ಟಿಗೇ ಮುಗಿಬಿದ್ದರು. ವಿಮರ್ಶೆಯ ಹೆಸರಿನಲ್ಲಿ ‘ದಾಟು’ವನ್ನು ಹತ್ತಿಕ್ಕುವ ಯತ್ನವೂ ನಡೆಯಿತು. ‘ದಾಟು’ ಸತ್ವಯುತ ಕೃತಿಯಾದ್ದರಿಂದ ಇಂತಹ ಎಲ್ಲ ವಿರೋಧಗಳನ್ನು ಮೀರಿ ಅಪಾರ ಯಶಸ್ಸು ಪಡೆಯಿತು. ೧೯೭೫ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕಾದಂಬರಿ ಇದುವರೆಗೆ ಅನೇಕ ಮರು ಮುದ್ರಣ ಕಂಡಿದೆ. ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಸಹ ಈ ಕಾದಂಬರಿಯ ಓದುಗರು ಮತ್ತು ವಿಮರ್ಶಕರ ಗಮನ ಸೆಳೆದಿರುವುದು ಗಮನಾರ್ಹ.
ಭಾರತದ ಯಾವುದೇ ಹಳ್ಳಿಯೊಂದರಲ್ಲಿ ನಡೆಯಬಹುದಾದ ಸಾಮಾನ್ಯ ಕಥನದಂತೆ ಕಾಣುವ ‘ದಾಟು’ ಸಂಕೀರ್ಣ ಕಥಾವಸ್ತು ಹೊಂದಿದೆ. ಜಾತಿ ವ್ಯವಸ್ಥೆಯ ವಿಶ್ಲೇಷಣೆ ಮತ್ತು ಅದನ್ನು ಮೀರುವಲ್ಲಿ ಎದುರಾಗುವ ಸಮಸ್ಯೆ ಮತ್ತು ಸವಾಲುಗಳನ್ನು ‘ದಾಟು’ ತುಂಬ ಅರ್ಥಪೂರ್ಣವಾಗಿ ಹಿಡಿದಿಟ್ಟಿದೆ. ಕಥಾನಾಯಕಿ ಸತ್ಯಳ ಪಾತ್ರ ಕನ್ನಡ ಕಥನ ಸಾಹಿತ್ಯದ ಸಶಕ್ತ ಮತ್ತು ಮರೆಯಲಾಗದ ಸ್ತ್ರೀ ಪಾತ್ರಗಳಲ್ಲೊಂದು. ಐವತ್ತು ವರ್ಷಗಳ ನಂತರವೂ ಈ ಕಾದಂಬರಿಯ ವಸ್ತು ಪ್ರಸ್ತುತವಾಗುವಂತಿದೆ.
ಭಾರತೀಪುರ (೧೯೭೩) – ಯು. ಆರ್. ಅನಂತಮೂರ್ತಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಅನಂತಮೂರ್ತಿಯವರ ಎರಡನೆಯ ಕಾದಂಬರಿ ‘ಭಾರತೀಪುರ’. ಕನ್ನಡದಲ್ಲಿ ಬಂದ ಕೆಲವೇ ಕೆಲವು ರಾಜಕೀಯ ಕಾದಂಬರಿಗಳಲ್ಲಿ ಇದೂ ಒಂದು. ‘ಸಂಸ್ಕಾರ’ ಕಾದಂಬರಿಯ ಅಪಾರ ಯಶಸ್ಸು ಅನಂತಮೂರ್ತಿಯವರಿಗೆ ತಾರಾ ವರ್ಚಸ್ಸು ತಂದು ಕೊಟ್ಟಿತು. ಆ ಕಾದಂಬರಿ ಪ್ರಕಟವಾದ ಎಂಟು ವರ್ಷಗಳ ನಂತರ ಬಂದ ‘ಭಾರತೀಪುರ’ದ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ತುಂಬ ಜನ ನವ್ಯ ವಿಮರ್ಶಕರು ಸಹ ಈ ಕಾದಂಬರಿಯ ಕುರಿತು ಅಷ್ಟೊಂದು ಉತ್ಸಾಹದಿಂದ ಬರೆಯಲಿಲ್ಲ. ಏನೇ ಆದರೂ ಇದೊಂದು ಗಮನಾರ್ಹ ಕಾದಂಬರಿ. ಅನಂತಮೂರ್ತಿಯವರು ಕಾದಂಬರಿಯನ್ನು ಕಟ್ಟಿದ ರೀತಿಯಲ್ಲಿ ತುಂಬ ಕಲೆಗಾರಿಕೆ ಕಂಡು ಬರುತ್ತದೆ. ಅವರ ಭಾಷೆಯಂತೂ ಕಾವ್ಯ ಗಂಧಿಯಾದದ್ದು. ಕಥಾನಾಯಕ ಜಗನ್ನಾಥನ ಆದರ್ಶ, ಬಂಡಾಯ, ಹೋರಾಟ ಮುಂತಾದುವು ವಾಸ್ತವ ಪಾತಳಿಯ ಮೇಲೆ ನಿಲ್ಲದೆ ರೋಮ್ಯಾಂಟಿಕ್ ಆದರ್ಶವಾದ ಎನಿಸುವುದರಲ್ಲಿ ಅರ್ಥವಿದೆ. ಜಗನ್ನಾಥನ ಪಾತ್ರ ಭಾರತದ ಪ್ರಥಮ ಮತ್ತು ದೀರ್ಘಾವಧಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರನ್ನು ಜ್ಞಾಪಿಸುವಂತಿದೆ. ಹಲವು ಮಿತಿಗಳ ನಡುವೆಯೂ ‘ಭಾರತೀಪುರ’ಕ್ಕೆ ಕನ್ನಡ ಕಾದಂಬರಿ ಲೋಕದಲ್ಲಿ ತನ್ನದೇ ಆದ ಒಂದು ವಿಶಿಷ್ಟ ಸ್ಥಾನವಿದೆ.
ಅನಂತಮೂರ್ತಿ ವರ್ಸಸ್ ಭೈರಪ್ಪ ಚರ್ಚೆ ಭುಗಿಲೇಳುವಲ್ಲಿ ಒಂದೇ ವರ್ಷ ಪ್ರಕಟವಾದ ‘ದಾಟು’ ಮತ್ತು ‘ಭಾರತೀಪುರ’ ಕಾದಂಬರಿಗಳ ಸ್ಪರ್ಧೆಯೂ ಒಂದು ಕಾರಣ. ಎಡಪಂಥೀಯರು ‘ದಾಟು’ವಿನ ಎದುರು ‘ಭಾರತೀಪುರ’ವನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದರೂ ಅದರಲ್ಲಿ ಯಶಸ್ಸು ಕಾಣಲಿಲ್ಲ. ‘ದಾಟು’ವಿನ ಎದುರು ‘ಭಾರತೀಪುರ’ಕ್ಕೆ ಹಿನ್ನಡೆಯುಂಟಾಯಿತು. ಮುಂದೆ ಇದು ಅನಂತಮೂರ್ತಿ ಮತ್ತು ಭೈರಪ್ಪನವರ ನಡುವೆ ಬಹುದೊಡ್ಡ ಕಂದಕ ಉಂಟುಮಾಡಿತು ಎಂಬುದು ಗಮನಾರ್ಹ.
ವಿಕ್ಷೇಪ (೧೯೭೩) – ಶಾಂತಿನಾಥ ದೇಸಾಯಿ
ನವ್ಯಸಾಹಿತ್ಯದ ದಿಗ್ಗಜರಾದ ಶಾಂತಿನಾಥ ದೇಸಾಯಿಯವರ ಎರಡನೆಯ ಕಾದಂಬರಿ ‘ವಿಕ್ಷೇಪ’. ಕನ್ನಡದ ಮೊದಲ ನವ್ಯ ಕಾದಂಬರಿ ಎಂಬ ಹೆಗ್ಗಳಿಕೆ ಪಡೆದ ‘ಮುಕ್ತಿ’ ಕಾದಂಬರಿ ಪ್ರಕಟವಾದ ಹನ್ನೆರಡು ವರ್ಷಗಳ ನಂತರ ಬಂದ ಕೃತಿಯಿದು. ‘ಮುಕ್ತಿ’ಯ ನಾಯಕ ಗೌರೀಶನಿಗೂ, ‘ವಿಕ್ಷೇಪ’ದ ನಾಯಕ ರಾಹುಲನಿಗೂ ಅಜಗಜಾಂತರ ವ್ಯತ್ಯಾಸವಿದೆ. ಗೌರೀಶ ಭಗ್ನಪ್ರೇಮಿಯಾದರೆ, ರಾಹುಲ ಪ್ಲೇಬಾಯ್. ಗೌರೀಶ ಕಾಮಿನಿಯಂತಹ ಕೆಟ್ಟ ಹುಡುಗಿಯನ್ನು ಆರಾಧಿಸುತ್ತ, ಅವಳ ಪ್ರೀತಿ ಸಿಗದೇ ಒಳಗೊಳಗೆ ನೊಂದರೆ, ರಾಹುಲ ಕಾಮಿನಿಯಂತಹ ಹತ್ತು ಹಲವು ಹುಡುಗಿಯರ ಜೀವನ ಜೊತೆ ಚೆಲ್ಲಾಡುವ ಆಧುನಿಕ ಮನೋಭಾವದ ಯುವಕ.
ಆಧುನಿಕ ಜೀವನಕ್ಕೆ ಒಗ್ಗಿರುವ ರಾಹುಲನಂತಹ ಯುವಕನಿಗೆ ಕೊನೆಗೂ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಗೌರೀಶನಿಗೆ ಸಾಧ್ಯವಾದ ತೀವ್ರ ಪ್ರೇಮ ರಾಹುಲನಿಗೆ ಸಾಧ್ಯವಾಗುವುದಿಲ್ಲ. ಹಲವು ಹೆಣ್ಣುಗಳು ಅವನ ಜೀವನದಲ್ಲಿ ಬಂದರೂ ಅವನಿಗೆ ನಿಜವಾದ ಪ್ರೀತಿಯ ಅನುಭವ ದಕ್ಕುವುದಿಲ್ಲ. ಇಂದಿನ ಅತ್ಯಾಧುನಿಕ ಮತ್ತು ಉಡಾಫೆ ಮನೋಭಾವದ ಯುವಕರ ಪ್ರತಿನಿಧಿಯಂತಿರುವವ ರಾಹುಲ. ಇದು ಪಕ್ಕಾ ದೇಸಾಯಿತನದ ಛಾಪಿರುವ ಕಾದಂಬರಿ. ಆದರೆ ದುರ್ದೈವಶಾತ್ ಈ ಕಾದಂಬರಿ ಈಗ ಲಭ್ಯವಿಲ್ಲ.
ಅಬಚೂರಿನ ಪೋಸ್ಟಾಫೀಸು (೧೯೭೩) – ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ನವ್ಯ ಸಾಹಿತ್ಯವನ್ನು ಸ್ಪಷ್ಟವಾಗಿ ಧಿಕ್ಕರಿಸಿ ಹೊಸ ಹಾದಿಯನ್ನು ತುಳಿದ ತೇಜಸ್ವಿಯವರ ಮಹತ್ವದ ಕಥಾಸಂಕಲನ ‘ಅಬಚೂರಿನ ಪೋಸ್ಟಾಫೀಸು’. ಆರಂಭದಲ್ಲಿ ‘ಹುಲಿಯೂರಿನ ಸರಹದ್ದು’, ‘ಸ್ವರೂಪ’ ಮತ್ತು ‘ನಿಗೂಢ ಮನುಷ್ಯರು’ ತರಹದ ತೀವ್ರ ನವ್ಯ ಪ್ರಜ್ಞೆಯ ಕಥೆ, ನೀಳ್ಗತೆಗಳನ್ನು ಬರೆದ ತೇಜಸ್ವಿಯವರು ನವ್ಯ ಲೇಖಕರ ಸಣ್ಣತನ, ಅಹಂಕಾರ ಮತ್ತು ರಾಜಕೀಯದಿಂದ ಬೇಸತ್ತು ಸ್ಪಷ್ಟವಾಗಿ ಘೋಷಣೆ ಮಾಡಿ ಅದರಿಂದ ಹೊರ ಬಂದರು. ಬಹುಶಃ ದಲಿತ-ಬಂಡಾಯ ಚಳುವಳಿಗೆ ಅನಧಿಕೃತ ಮುನ್ನುಡಿ ಬರೆದದ್ದೇ ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಎಂದರೆ ಅದು ಅತಿಶಯೋಕ್ತಿ ಆಗಲಾರದು. ‘ಹೊಸ ದಿಗಂತದೆಡೆಗೆ’ ಎಂಬ ಮುನ್ನುಡಿ ತುಂಬ ಸೊಗಸಾಗಿ ನವ್ಯದ ಮಿತಿಗಳನ್ನು ಹೇಳಿದೆ.
ಭಾರತೀಯ ಕಥನ ಸಾಹಿತ್ಯದಲ್ಲೇ ಅಪೂರ್ವ ಕಥೆಯೆಂದು ಖ್ಯಾತಿ ಪಡೆದ, ಭಾರತದ ಭ್ರಷ್ಟ ಆಡಳಿತದ ಕುರಿತ ‘ತಬರನ ಕಥೆ’, ವಿಷಮ ದಾಂಪತ್ಯವನ್ನು ವಿನೋದ ಪ್ರಜ್ಞೆಯಿಂದ ನಿರೂಪಿಸಿದ ‘ಅಬಚೂರಿನ ಪೋಸ್ಟಾಫೀಸು’, ಅಪರೂಪದ ಸೌಂದರ್ಯ ಹೊಂದಿರುವ ಗೌರಿಯೆಂಬ ಹೆಂಗಸಿನ ದುರಂತ ಕಥೆಯಾದ ‘ಅವನತಿ’, ಗ್ರಾಮ ಭಾರತದ ಸಾಮಾಜಿಕ ಮತ್ತು ರಾಜಕೀಯ ದುರಂತವನ್ನು ಪತ್ತೇದಾರಿ ಕಥೆಯಂತೆ ಹೇಳಿರುವ ‘ಕುಬಿ ಮತ್ತು ಇಯಾಲ’ ಮತ್ತು ಗೃಹ ಕಲಹದಿಂದ ಬದುಕಿನ ನೆಮ್ಮದಿ ಕಳೆದುಕೊಂಡು ಒದ್ದಾಡುವ ತುಕ್ಕೋಜಿಯೆಂಬ ದರ್ಜಿಯ ಕಥೆಯನ್ನು ಹಾಸ್ಯಮಯವಾಗಿ ಹೇಳಿರುವ ‘ತುಕ್ಕೋಜಿ’ ಈ ಸಂಕಲನದ ಪ್ರಮುಖ ಕಥೆಗಳು.
ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ (೧೯೭೩) – ಪಿ. ಲಂಕೇಶ್
ಕನ್ನಡದ ಅತ್ಯಂತ ಪ್ರತಿಭಾವಂತ ಮತ್ತು ಪ್ರಭಾವಶಾಲೀ ಲೇಖಕರಾದ ಲಂಕೇಶರ ಮೂರನೆಯ ಕಥಾಸಂಕಲನ ‘ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ’. ಕೇವಲ ನಾಲ್ಕು ಕಥೆಗಳಿರುವ ಈ ಪುಟ್ಟ ಕಥಾಸಂಕಲನ ಲಂಕೇಶರ ಗಟ್ಟಿ ಕೃತಿಗಳಲ್ಲೊಂದು. ‘ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ’ ಮತ್ತು ‘ಮಾರಲಾಗದ ನೆಲ’ ಲಂಕೇಶರ ಮಾತ್ರವಲ್ಲ ಕನ್ನಡದ ಅತ್ಯುತ್ತಮ ಕಥೆಗಳೂ ಹೌದು. ಮನುಷ್ಯನ ಆಸೆ, ಭರವಸೆ, ಸಣ್ಣತನ, ರೋಷ, ಅಸಹಾಯತೆ ಮುಂತಾದವನ್ನು ಅನನ್ಯ ಮತ್ತು ಅದ್ಭುತವೆಂಬಂತೆ ಚಿತ್ರಿಸಿದ ವಿರಳ ಲೇಖಕರಲ್ಲಿ ಲಂಕೇಶರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.
‘ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ’ ಮತ್ತು ‘ಮಾರಲಾಗದ ನೆಲ’ ಕಥೆಗಳ ಮೂಲಕ ಲಂಕೇಶರು ಸಹ ದಟ್ಟ ಸಾಮಾಜಿಕ ಪ್ರಜ್ಞೆಯ ಹಿನ್ನಲೆಯಲ್ಲಿ ಬರೆಯಲಾರಂಭಿಸಿದರು. ಮುಂದೆ ಅವರು ‘ಮುಸ್ಸಂಜೆ ಕಥಾ ಪ್ರಸಂಗ’, ‘ಅಕ್ಕ’ದಂತಹ ಸಾಮಾಜಿಕ ಕಾದಂಬರಿಗಳನ್ನು ಕೊಟ್ಟರು ಎಂಬುದು ಗಮನಾರ್ಹ.
3 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಸುವರ್ಣ ಸಂಭ್ರಮದಲ್ಲಿ ‘ಐದು ಕೃತಿಗಳು’”
ಅದ್ಭುತವಾದ ಬರೆಹ. ಮೇಲೆ ಉಲ್ಲೇಖಿಸಿರುವುಗಳಲ್ಲಿ ಕೆಲವನ್ನು ಓದಿದ್ದೇನೆ. ಕೆಲವು ದೊರೆತಿಲ್ಲ.
ನಾನು ಓದಿಲ್ಲದ ಐದು ಕೃತಿಗಳ ಮುಖ್ಯಾಂಶ ಈಗ ಓದಿದಂತಾಯಿತು. ವಿಕಾಸ ಹೊಸಮನಿಯವರ ಅಂಕಣ ತುಂಬಾ ಅದ್ಭುತವಾಗಿ ಬರುತ್ತಿದೆ. ಅಭಿನಂದನೆಗಳು
ಈ ಲೇಖನದ ಪ್ರತಿಪಾದನೆ, ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಪ್ರೇಮ, ಕಳಕಳಿಯಿಂದ, ಕನ್ನಡದ ಉಚ್ಚತಮ ಕೃತಿಗಳ ಪ್ರಕಾಶಮಾನತೆ, ದೊರೆಯಬೇಕಾದ ಗೌರವ, ಸಂಭ್ರಮಗಳ ಬಗೆಗೆ, ಅತ್ಯಂತ ಕಾಳಜಿಪೂರ್ವಕ, ವಿಶ್ವಾಸ, ಅಭಿಮಾನದ ಪ್ರಾಮಾಣಿಕ ನುಡಿಗಳಿಂದ ಕೂಡಿವೆ. ಹೀಗಾಗಿ ಪ್ರಸ್ತಾಪಿಸಿದ, ೧೯೭೩ ರಲ್ಲಿ ವಿಶಿಷ್ಟ ಗತಿಶೀಲ ಪ್ರಭಾವದೊಂದಿಗೆ ಗುರುತ್ವವನ್ನು ಸಾಧಿಸಿದ, ಈ ಐದೂ ಕೃತಿಗಳಿಗೆ, ೫೦ ರ ಸಂಭ್ರಮದ ಆದರ, ಸತ್ಕಾರ, ಯೋಗ್ಯ ಮನ್ನಣೆ ಸಿಗಬೇಕೆಂಬುದೇ ಆತ್ಮೀಯ ನಿವೇದನೆ. ಆದರೆ ಸಹಜವಾಗಿ ದಕ್ಕಬೇಕಾದ ಸನ್ಮಾನ ದೊರಕುತ್ತಿಲ್ಲವೆಂಬ ಅಸಮಾಧಾನ, ಒಂದು ಬಲಿಷ್ಠ ಕೊರಗು, ಲೇಖನದುದ್ದಕ್ಕೂ ವ್ಯಕ್ತವಾಗಿರುವ ಅಂಶ.
ಸಾಧಾರಣವಾಗಿ ಕೃತಿಗಳ ಸ್ವರ್ಣ ಮಹೋತ್ಸವದ ಆಚರಣೆಯ ಸದಾಶಯದ ಕಾರ್ಯಕ್ರಮಗಳನ್ನು ಏರ್ಪಡಿಸಲು ಬಾಧ್ಯಸ್ಥರಾದ, ಸರಕಾರದಿಂದ ಸಾಕಷ್ಟು ಅನುದಾನ ಪಡೆಯುವ ಕ.ಸಾ.ಪ.,ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಅಥವಾ ಇನ್ನಾವುದೇ ಕನ್ನಡ ಸಾಹಿತ್ಯ ಪ್ರೇಮೀ ಸಂಘ ಸಂಸ್ಥೆಗಳು, ಈ ಕೃತಿಗಳ ೫೦ ರ ಸಂಭ್ರಮವನ್ನು ಆಚರಿಸಲು ಮುಂದೆ ಬರುತ್ತಿಲ್ಲ, ಯಾಕೆ ಆಸ್ಥೆಯನ್ನು ತೋರಿಸುತ್ತಿಲ್ಲ ಅನ್ನುವದು ಒಂದು ವೇದನೆ, ಆಪಾದನೆ. ಅಲ್ಲಗಳೆಯಲಾಗದ ಮತ್ತು ನಿರ್ಲಕ್ಷಿಸಲಾಗದ ಒಂದು ಮಹತ್ವದ ಸಂಗತಿಯೆಂದರೆ, ಲೇಖನದ ಸಂಪೂರ್ಣ ವಿಚಾರಧಾರೆ, ಸಾಪೇಕ್ಷತೆಯ ಆಧಾರದ ಮೇಲೆ ನಿಂತಿರುವದು.
ಪ್ರಾಯಶಃ ಈ ಗಂಭೀರ ವಿಷಯವನ್ನು ಅಥವಾ ಇಂತಹ ವಿಷಯಗಳನ್ನು ಸಮರ್ಪಕ ಗಂಭೀರತೆಯಲ್ಲಿ ವಿವೇಚಿಸಿದಾಗ, ಕನ್ನಡದ ಮೇರು ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರು, ತಮಗೆ ಪದ್ಮ ಭೂಷಣ ಪ್ರಶಸ್ತಿ ಘೋಷಿಸಿದ ಸಂದರ್ಭದ ಒಂದು ಸಂದರ್ಶನದಲ್ಲಿ ಹೇಳಿದ ಮಾತನ್ನು ಗಮನಿಸಬೇಕು : ‘ನನ್ನ ಕೃತಿ ಕಾಲಾನುಕ್ರಮದಲ್ಲಿ ಚರ್ಚಿತವಾಗಿ, ಆಸಕ್ತರ ಮನಸ್ಸಿನಲ್ಲಿ ಉಳಿದರೆ, ಆಗ ನನ್ನ ಬರೆಹ ಸಾರ್ಥಕವಾದಂತೆ.’ ಬಹುಶಃ ಕಾಲವನ್ನು ಗೆಲ್ಲುವ ಗುಣ ಕೂಡ, ಕರ್ತೃವಿನ ಒಂದು ದೃಷ್ಟಿಯೇ!
ಲೇಖಕರು ಪ್ರಸ್ತಾಪಿಸಿದ ಐವರು ಸಾಹಿತಿಗಳಲ್ಲಿ ಈಗಿರುವವರು, ಭೈರಪ್ಪನೋರ್ವರೇ. ಭಾರತದ ಹೆಮ್ಮೆಯಂತಿರುವ ಭೈರಪ್ಪನವರಿಗೆ ೨೦೧೧ನೇ ಸಾಲಿನ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್್’ ಪುರಸ್ಕಾರ ಸಿಕ್ಕಿದರೂ, ಸಾಹಿತ್ಯಾಭಿಮಾನಿಗಳು, ಸಾಹಿತ್ಯಾಸಕ್ತರು ಹಾಗೂ ಅಪಾರ ಓದುಗವೃಂದದಲ್ಲಿ ಅವಿಚ್ಛಿನ್ಹ ಆಶಯವಿದ್ದರೂ ಕೂಡ, ಬಹುತೇಕ ಲೇಖಕರ ಓದುಗರ ವ್ಯಾಪ್ತಿ ದಿನೇ ದಿನೇ ಕುಗ್ಗುತ್ತಿದ್ದರೆ, ಕಾದಂಬರಿಯಿಂದ ಕಾದಂಬರಿಗೆ ಓದುಗರನ್ನು ಹೆಚ್ಚಿಸಿಕೊಳ್ಳುತ್ತಿರುವ ಏಕಮಾತ್ರ ಸಾಹಿತಿ ಎಸ್.ಎಲ್. ಭೈರಪ್ಪನವರಿಗೆ ಜ್ಞಾನಪೀಠವೇಕೆ ಕೈತಪ್ಪುತ್ತಿದೆ ಎಂಬ ಪ್ರಶ್ನೆಯನ್ನು ಸಂಶೋಧಿಸಿದರೆ, ದೊರೆಯುವ ತಿರುಳೇ ಈ ಲೇಖನದೊಳಗಿನ ಆತಂಕಕ್ಕೆ ಸಮರ್ಥ ಉತ್ತರ ನೀಡಬಲ್ಲುದು. (ಆಧಾರ: ೧೫-೦೬-೨೦೧೧ – ಪ್ರತಾಪ್ ಸಿಂಹರ ‘ಬೆತ್ತಲೆ ಜಗತ್ತು’ ಆರ್ಟಿಕಲ್ಲಿನಲ್ಲಿ ಬಂದ ‘ಕನ್ನಡದ ಸಣ್ಣಮನಗಳ ಸಾಹಿತ್ಯ ರಾಜಕಾರಣ!’ ಓದಬಹುದು.)
ಮತ್ತೆಲ್ಲೋ ನಾನೋದಿದ, ಒಂದು ಅರ್ಥಪೂರ್ಣ ಅನುಭವದ ಒಂದು ಮಾತು : ‘ವಯಸ್ಸು ೯೦ ಆದಾಗ, ‘ನಿದ್ದೆ ಮಾಡೋದು’ ಮತ್ತು ‘ಎಚ್ಚರದಿಂದಿರುವದು’ ಎರಡೂ ಒಂದೇ! (ಎದ್ದ ಮೇಲೆ ಏನು ಮಾಡಬೇಕೆಂಬುದು ಗೊತ್ತಿರುವದಿಲ್ಲ.) ಅಂದರೆ, ಇಂತಹ ಸಂಭ್ರಮದ ಆಶಯಕ್ಕೆ ಸ್ವತಃ ಕರ್ತೃ ಜಾಗೃತವಿರಬಹುದು ಅಥವಾ ಇರದಿರಬಹುದು.
ಇನ್ನೂ ಒಂದು ಗಮನಾರ್ಹ ವಿಷಯ, ‘ಸಾಪೇಕ್ಷವಾದ’ದಲ್ಲಿ : ಒಂದು ವಜ್ರ (ಅದೂ ಇಂಗಾಲವೇ!) ತಯಾರಾಗಬೇಕಾದರೆ, ಸುಮಾರು ೧೦ ಸಾವಿರ ವರ್ಷಗಳೇ ಬೇಕಾಗುತ್ತವೆ. ಎದುರಿಗಿದ್ದ ವಜ್ರವನ್ನು ಯಾರೂ ಗುರುತಿಸದಿದ್ದರೆ, ವಜ್ರಕ್ಕಾದ ನಷ್ಟವೇನು? ಹಾನಿಯೇನು? ಯಾವಾಗ ಪರಿಚಯವಾದರೂ, ವಜ್ರದ ಶ್ರೇಷ್ಠತೆ ಅದರ ಜಾಗದಲ್ಲಿಯೇ ಇರುತ್ತದೆ!
ಮತ್ತೊಂದು ದೃಷ್ಟಿಯಲ್ಲಿ ನೋಡಿದರೆ, ೫೦ ವರ್ಷಗಳ ಮಾನದಂಡವನ್ನೂ ಮೀರಿದ ಕೃತಿಗಳವು. ಇನ್ನೂ ಒಂದು ಉದಾಹರಣೆ ಹೇಳಬೇಕೆಂದರೆ :
‘ಉಮರ ಖಯ್ಯಾಮ್’ ಪರ್ಷಿಯಾದ ೧೧ನೆ ಶತಮಾನದ ಗಣಿತಜ್ಞ, ಖಗೋಳ ಶಾಸ್ತ್ರಜ್ಞ ಹಾಗೂ ಘಜಲ್ ಕವಿ. ಆತ ಆಧುನಿಕ ಕಾಲದ ಬಹು ಪೂರ್ವದಲ್ಲಿ, ಬೀಜಗಣಿತದ ವಿಶೇಷ ಗ್ರಂಥವನ್ನು ಬರೆದಿದ್ದ. ಬೀಜಗಣಿತದ ಅನೇಕ ಸಮಸ್ಯೆಗಳಿಗೆ ಉತ್ತರವನ್ನು ಕಂಡು ಹಿಡಿದಿದ್ದ. ತನ್ನ ‘ರುಬಾಯಿಯಾತ್’ (ಮಧು ಗೀತೆ) ಗೀತೆಗಳಲ್ಲಿ ತತ್ವಜ್ಞಾನದ ರಸಗಂಗೆಯನ್ನೇ ಹರಿಸಿದ್ದ. ಆದರೆ, ಧರ್ಮದ ವಿಷಯದಲ್ಲಿ, ಸಮಾಜದಲ್ಲಿ ಆತನ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಇದ್ದವು. ‘ರುಬಾಯಿಯಾತ್’ನಲ್ಲಿ, ನಿಷ್ಕಾಮ ಸಂಪ್ರದಾಯದ ಅತೀಂದ್ರಿಯ ಸೂಫಿ ಕವಿತೆಗಳಿದ್ದರೂ, ಸಮಕಾಲೀನ ಧರ್ಮಗ್ರಂಥಗಳನ್ನು ಜಾಲಾಡಿಸಿದ ಆತ, ವ್ಯಾಪಕವಾಗಿ ಜನರ ಕುವಿಮರ್ಶೆಗೆ ಒಳಗಾಗಿದ್ದ. ಆದರೆ, ಅವನ ಕಾವ್ಯದ ಒಳಹು ಹಾಗೂ ವಿಚಾರಗಳು ಆತನ ಕಾಲದ ಆಯಾಮವನ್ನೂ ಮೀರಿಸಿ ಬೆಳೆದಿದ್ದವು. ಪ್ರಾಯಶ: ಈ ಕಾರಣಗಳಿಗಾಗಿ, ಆತನ ಕವಿತೆಯ ಆಶಯಗಳು, ಅವನ ಜೀವನಾವಧಿಯಲ್ಲಿ ಪ್ರಕಾಶ ಕಾಣದೆ ಹೋಗಿರಬಹುದು. ಆದರೆ, ಸುಮಾರು ಏಳು ಶತಮಾನಗಳ ನಂತರ, ಅಂದರೆ ೧೮ನೆ ಶತಮಾನದಲ್ಲಿ ಫಿಟ್ ಜೆರಾಲ್ಡ್ ಮಾಡಿದ ಇಂಗ್ಲಿಷ್ ಅನುವಾದಗಳಿಂದ, ಖಯ್ಯಾಮನ ಕಾವ್ಯದ ರುಚಿಯ ನಿಜ ಪರಿಚಯವಾಯಿತು! ಸಾಕಷ್ಟು ಪ್ರಸಿದ್ಧಿಯೂ ಆಯಿತು.
ಹೀಗಾಗಿ, ಇಂತಹ ಕೃತಿಗಳ ಶ್ರೇಷ್ಠತೆಯ ಸಂಭ್ರಮ, ಚಿಂತೆಯ ವಿಷಯವೇ ಅಲ್ಲ; ಅದು ಕ್ಷುಲ್ಲಕ ರಾಜಕಾರಣಕ್ಕೂ ಮೀರಿದ ಕೇವಲ ಕಾಲಾಧೀನವಷ್ಟೇ!