ನಾನು ಆಗಷ್ಟೇ ಎಸ್ ಎಸ್ ಎಲ್ ಸಿ ಮುಗಿಸಿ ಕಾಸರಗೋಡಿನ ಸರಕಾರಿ ಕಾಲೇಜಿಗೆ ಪ್ರಥಮ ಪಿ.ಡಿ.ಸಿಗೆ ಪ್ರವೇಶ ಪಡೆದಿದ್ದೆ.(1973). ತೀರ ಹಳ್ಳಿಯವಳಾದ ನಾನು ಕಾಸರಗೋಡು ಪೇಟೆಗೆ ಹೋದದ್ದೇ ಒಂದೆರಡು ಬಾರಿ. ಹಾಗೆ ಪೇಟೆಗೆ ಬಸ್ಸಿನಲ್ಲಿ ಹಾದು ಹೋಗುವಾಗ ಕಾಲೇಜಿನಿಂದಾಗಿಯೇ ವಿದ್ಯಾನಗರವೆಂಬ ನಾಮಕರಣವನ್ನು ಪಡೆದ ಹೆದ್ದಾರಿಯ ಪಕ್ಕದಲ್ಲಿಯೇ ಇದ್ದ ಕಾಲೇಜಿನ ಬೋರ್ಡ್ ನ್ನು ಹಾಗೂ ಕಟ್ಟಡವನ್ನು ನೋಡಿದ್ದೆ ಅಷ್ಟೆ. ಹಾಗಿರುವಾಗ ಸಂದರ್ಶನದ ದಿನವೇ ದೊಡ್ಡ ಕಾಲೇಜನ್ನು ಒಳಹೊಕ್ಕು ನೋಡಿ ಬೆರಗಾಗಿ ಹೋಗಿದ್ದೆ. ಸಂದರ್ಶನ ಮುಗಿದು ಅಗೋಸ್ತು 8ರಂದು ಕಾಲೇಜು ಸುರು ಎಂದು ತಿಳಿಯಿತು. ಆ ದಿನ ಅಣ್ಣ ಜೊತೆಗೆ ಬಂದಿದ್ದ. ಆದರೆ ಹೋಗುವಾಗಲೇ ವಿದ್ಯಾರ್ಥಿಗಳು ಅಲ್ಲಲ್ಲಿ ಗುಂಪುಗೂಡಿದ್ದರು. ಹಾಗೆಯೇ ಒಮ್ಮೆಲೇ ಹಲವಾರು ಕಂಠಗಳಿಂದ ‘ವಿದ್ಯಾರ್ಥಿ ಸಮರಂ ಜಿಂದಾಬಾದ್’ ಎನ್ನುವ ಘೋಷಣೆಯೂ ಮೊಳಗಿತು.ಆ ವರ್ಷ ಆಹಾರ ವಸ್ತುಗಳ ತೀರ ಅಭಾವವಿದ್ದು ಅಕ್ಕಿಯ ಬೆಲೆ ಕೆ.ಜಿಗೆ 12 ರೂಪಾಯಿಯಾಗಿತ್ತು. ಈ ಕಾರಣವನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿನಾಯಕರು ಮತ್ತು ಬೆಂಬಲಿಗರು ಅನಿರ್ದಿಷ್ಟಾವಧಿ ‘ಸಮರ’( ಮುಷ್ಕರ)ಕ್ಕಿಳಿದಿದ್ದರು. ಒಂದು ವಾರ ಕಾಲೇಜಿಗೆ ರಜೆಯನ್ನೂ ಘೋಷಿಸಿದ್ದರು. ಮತ್ತೆ ಕಾಲೇಜು ತೆರೆದಾಗ ನನ್ನ ಹೈಸ್ಕೂಲು ಸಹಪಾಠಿಗಳು ಒಂದಿಬ್ಬರು ಬಸ್ಸಿನಲ್ಲಿ ಸಿಗುತ್ತಾರೆಂಬ ಭರವಸೆಯನ್ನು ನೀಡಿ ನನ್ನನ್ನು ಕಾಲೇಜಿಗೆ ಕಳುಹಿಸಿದ್ದರು.
ಅಂಕಗಳ ಲೆಕ್ಕಾಚಾರದಲ್ಲಿ ಹೈಸ್ಕೂಲಿಗೆ ಪ್ರಥಮಳಾಗಿದ್ದೆನಾದರೂ ಚಪ್ಪಲಿ ಇಲ್ಲದ ಬರಿಗಾಲಲ್ಲಿ, ಹಳ್ಳಿಯ ತೀರ ಸರಳ ಉಡುಪಿನಲ್ಲಿದ್ದ ನನ್ನಲ್ಲಿ ತುಂಬ ಸಂಕೋಚ ಮತ್ತು ಕೀಳರಿಮೆ ತುಂಬಿತ್ತು . ಎಲ್ಲಿ ನಾನು ತಮಾಷೆಯ ವಸ್ತುವಾಗುವೆನೋ ಎಂಬ ಆತಂಕ ನನಗೆ. ಮತ್ತೊಂದೆಡೆ ‘ಸಮರವೀರರ’ ಭಯ.ಸರಿ ಮೊದಲ ದಿನ ನಮ್ಮನ್ನೆಲ್ಲ ಕಾಲೇಜಿನ ಆಡಿಟೋರಿಯಂನಲ್ಲಿ ಕೂಡಿಸಿ ವೇಳಾಪಟ್ಟಿಯನ್ನು ನೀಡಿದರು. ಅದರಂತೆ ನಮಗೆ ಮೊದಲ ತರಗತಿ ಇಂಗ್ಲಿಷ್ ಆಗಿತ್ತು. ಕೊಠಡಿ ಸಂಖ್ಯೆ 108ರಲ್ಲಿ ಆ ತರಗತಿ ಇತ್ತು. ಈ ಕೊಠಡಿ ಸಂಖ್ಯೆಯನ್ನು ಹುಡುಕುವುದು ದೊಡ್ಡ ಸಮಸ್ಯೆಯಾಯಿತು. ಎಲ್ಲಿ ಹೋದೆವು ಎಲ್ಲಿ ಬಂದೆವು ಎಂಬ ಗೊಂದಲದಲ್ಲಿ ನಾನು ಮತ್ತು ನನ್ನ ಜೊತೆಗಿದ್ದ ಇಬ್ಬರು ಅಲೆದು ಅಲೆದು ಕೊನೆಗೆ ಹೇಗೋ ಗುರಿಯನ್ನು ತಲಪಿದೆವು. ಅದಾಗಲೇ ತರಗತಿಯಲ್ಲಿ ಅಧ್ಯಾಪಕರು ಬಂದಿದ್ದರು.ಬಾಗಿಲ ಬಳಿ ಬಂದು ನಿಂತ ನಮ್ಮನ್ನು ಅವರು ಒಳಗೆ ಕರೆದರು. ಒಳಗೆ ಕುಳಿತುಕೊಂಡ ನನ್ನ ಒಬ್ಬ ಸಹಪಾಠಿಗಂತೂ ನಮ್ಮ ಅಲೆದಾಟವನ್ನು ನೆನೆದು ನಗು ಬರುತ್ತಿತ್ತು. ಅದು ಸಾಂಕ್ರಾಮಿಕವಾಗಿ ನಾನು ಮತ್ತು ಮತ್ತೊಬ್ಬಳು ಕೂಡ ಭಯವನ್ನು ಮೀರಿ ನಗತೊಡಗಿದೆವು. .ಇದು ಅಧ್ಯಾಪಕರ ಗಮನಕ್ಕೆ ಬಂತು. ಅವರು ‘ತಡವಾಗಿ ಬಂದದ್ದಲ್ಲದೆ ನಗಾಡ್ತೀರಾ, ಸುಮ್ಮನಿರಿ’ ಎಂದು ನಮ್ಮನ್ನು ಇಂಗ್ಲಿಷಿನಲ್ಲಿ ಗದರಿ ಪಾಠದ ಪ್ರವೇಶಿಕೆಯನ್ನು ಮುಂದುವರಿಸಿದರು. ‘ವೈಟ್ ಕಂಪೆನಿ’ ಎಂಬ ಪುಸ್ತಕವನ್ನು ಅವರು ಪಾಠಮಾಡಲಿ ದ್ದಾರೆಂದು ತಿಳಿಯಿತು. ಹೈಸ್ಕೂಲಿನಲ್ಲಿ ಇಂಗ್ಲಿಷ್ ಅಧ್ಯಾಪಕರು ಕನ್ನಡದಲ್ಲೂ ಪಾಠವನ್ನು ವಿವರಿಸಿದರೆ ಇಲ್ಲಿ ಈ ಅಧ್ಯಾಪಕರು ಇಂಗ್ಲಿಷಿನಲ್ಲಿಯೇ ವಿವರಿಸುತ್ತಿದ್ದರು.
ಇಂಗ್ಲಿಷ್ ಮತ್ತು ಅರ್ಥಶಾಸ್ತ್ರ, ಚರಿತ್ರೆ- ಹೀಗೆ ಇತರ ವಿಷಯಗಳಿಗೆ ನಮ್ಮದು ಕನ್ನಡ ಮತ್ತು ಮಲಯಾಳ ವಿದ್ಯಾರ್ಥಿಗಳ ಸಮ್ಮಿಶ್ರ ತರಗತಿಯಾಗಿತ್ತು. ಈ ಅಧ್ಯಾಪಕರ ವಿಶಿಷ್ಟವಾದ ಇಂಗ್ಲಿಷ್ ಉಚ್ಚಾರಣೆ ಆಕರ್ಷಕವಾಗಿತ್ತು.
ನನಗೆ ನಮ್ಮ ಹೈಸ್ಕೂಲಿನ ಪ್ಯಾಂಟ್ ಮಾಷ್ಟ್ರ ನೆನಪಾಗಿತ್ತು. ನಾನು ಕಲಿತ ಪೆರಡಾಲದ ನವಜೀವನ ಹೈಸ್ಕೂಲಿನಲ್ಲಿ ಅಂದಿನ ಕಾಲಕ್ಕೆ ಸಹಜವಾಗಿ ಎಲ್ಲ ಅಧ್ಯಾಪಕರೂ ಪಂಚೆ ಮತ್ತು ಷರ್ಟ್ ಧರಿಸುತ್ತಿದ್ದರು . ಆದರೆ ಹೊಸದಾಗಿ ಬಂದ ಒಬ್ಬ ಅಧ್ಯಾಪಕರು ಪಂಚೆಯ ಬದಲಿಗೆ ಪ್ಯಾಂಟ್ ಧರಿಸುತ್ತಿದ್ದುದರಿಂದ ಅವರಿಗೆ ಪ್ಯಾಂಟ್ ಮಾಷ್ಟ್ರೆಂಬ ಅಡ್ಡಹೆಸರು ಬಂದಿತ್ತು..ಅದು ಎಷ್ಟು ಸಲೀಸಾಗಿ ಹೋಗಿತ್ತೆಂದರೆ ಮುಖ್ಯೋಪಾಧ್ಯಾಯರು ಈಗ ಯಾರ ತರಗತಿ ಎಂದು ಕೇಳಿದರೆ ‘ಪ್ಯಾಂಟ್ ಮಾಷ್ಟ್ರದ್ದು’ ಎಂದು ಹೇಳುವಷ್ಟು. ಮತ್ತೆ ಒಬ್ಬೊಬ್ಬ ಪ್ಯಾಂಟ್‍ಧಾರಿ ಅಧ್ಯಾಪಕರು ನಮ್ಮ ಹೈಸ್ಕೂಲಿಗೆ ಸೇರ್ಪಡೆಯಾದರೂ ಇವರಿಗೆ ಮಾತ್ರ ಆ ಹೆಸರು ಖಾಯಮ್ಮಾಗಿ ಬಿಟ್ಟಿತ್ತು. ಈ ಮಾಷ್ಟ್ರು ಅವರ ಇಂಗ್ಲಿಷ್ ಜ್ಞಾನಕ್ಕೆ ಹೆಸರಾಗಿದ್ದರು.ನಮಗೆ ಅವರು ವಿಜ್ಞಾನವನ್ನು ಕಲಿಸಿದ್ದರೂ ಯಾವುದಾದರೂ ಅಧ್ಯಾಪಕರ ಗೈರುಹಾಜರಿಯಲ್ಲಿ ಮುಖ್ಯೋಪಾಧ್ಯಾಯರ ಆದೇಶದಂತೆ ತರಗತಿಗೆ ಬಂದು ಇಂಗ್ಲಿಷ್ ವ್ಯಾಕರಣ, ಇತ್ಯಾದಿಗಳನ್ನು ಸ್ವಾರಸ್ಯಕರವಾಗಿ ಪಾಠಮಾಡುತ್ತಿದ್ದರು. ಅವರ ಇಂಗ್ಲಿಷ್ ಉಚ್ಚಾರಣೆ ಕೂಡ ನಮಗೆ ವಿಶಿಷ್ಟವಾಗಿ ಕೇಳಿಸುತ್ತಿತ್ತು. ಆದ್ದರಿಂದಲೇ ನನಗೆ ಅವರ ನೆನಪಾದದ್ದು. ಅದಿರಲಿ. ಈ ಕಾಲೇಜಿನಲ್ಲಿ ನೋಡಿದರೆ ಅಧ್ಯಾಪಕರು ಮಾತ್ರವಲ್ಲ ಅನೇಕ ವಿದ್ಯಾರ್ಥಿಗಳು ಕೂಡ ಪ್ಯಾಂಟ್ ಧರಿಸಿದ್ದರು. ಹಳ್ಳಿಯಿಂದ ಬಂದ ಕೆಲವು ಬಡ ಹುಡುಗರು ಪಂಚೆ ಮತ್ತು ಷರ್ಟಿನಲ್ಲಿದ್ದು ಲಂಗ ರವಕೆಯಲ್ಲಿದ್ದ ನನ್ನಂತೆ ಮುದುಡುತ್ತಿದ್ದರು.ನಮಗೆ ಕಾಲೇಜಿನಲ್ಲಿ ಮೊದಲ ತರಗತಿ ತೆಗೆದುಕೊಂಡ ಆ ಅಧ್ಯಾಪಕರಾದರೋ ಬೆಲ್ ಬಾಟಂ ಪ್ಯಾಂಟ್ ಧರಿಸಿ ಸ್ವಲ್ಪ ಹಿಪ್ಪಿ ತರಹದ ಕೇಶಶೈಲಿಯಲ್ಲಿದ್ದರು. ಹೀಗಿದ್ದ ಅವರು ಮತ್ತಾರೂ ಅಲ್ಲ ಕೆ.ವಿ ತಿರುಮಲೇಶ್ ಎಂದು ಮತ್ತೆ ಗೊತ್ತಾಯಿತು.
ಕ ವಿ ತಿರುಮಲೇಶ್ ಬಗ್ಗೆ ನನಗೆ ಅ ಮೊದಲೇ ಕೇಳಿ ಗೊತ್ತಿತ್ತು. ಬಂಧುಗಳಾಗಿದ್ದ ಎಂ.ಗಂಗಾಧರ ಭಟ್, ಗೋಪಾಲಕೃಷ್ಣ ಮಧ್ಯಸ್ಥ ಇವರು ಮನೆಗೆ ಬಂದರೆ ಅವರ ಮಾತುಕತೆ ಸಾಹಿತ್ಯದ ಸುತ್ತ ಸುಳಿದಾಡುತ್ತಿತ್ತು. ಅವೆಲ್ಲ ನನಗೆ ಅರ್ಥವಾಗದಿದ್ದರೂ ಅವರ ಮಾತಿನಲ್ಲಿ ಹಾದುಹೋಗುತ್ತಿದ್ದ ಅಡಿಗ, ತಿರುಮಲೇಶ್, ಎಂ. ವ್ಯಾಸ ಮೊದಲಾದ ಹೆಸರುಗಳು ಪರಿಚಿತವಾಗಿದ್ದವು. ನವ್ಯ ಸಾಹಿತ್ಯ ಆರಂಭಗೊಂಡ ದಶಕದಲ್ಲೆ ಕಾಸರಗೋಡಿನಲ್ಲಿ ನವ್ಯ ಸಾಹಿತ್ಯ ಸಂಘ ಸ್ಥಾಪನೆಗೊಂಡು ಚಟುವಟಿಕೆಗಳು ಬಿರುಸಾಗಿ ನಡೆಯುತ್ತಿದ್ದವು. ವ್ಯಾಸರು, ಗಂಗಾಧರ ಭಟ್ಟರು, ಶ್ರೀಶದೇವ ಪೂಜಿತ್ತಾಯರು, ತಿರುಮಲೇಶರು- ಇವರೆಲ್ಲ ಸೇರಿಕೊಂಡು ಇದನ್ನು ಸ್ಥಾಪಿಸಿ ಮುನ್ನಡೆಸುತ್ತಿದ್ದರು. ವ್ಯಾಸ, ಅವರ ತಮ್ಮ ಶುಭಕರ ಮತ್ತು ಎಂ. ಗಂಗಾಧರ ಭಟ್ ಅವರ ಸಂಪಾದಕತ್ವದಲ್ಲಿ ಅಜಂತ ಎಂಬ ಸಾಹಿತ್ಯಕ ಪತ್ರಿಕೆ ಯೊಂದು ಆರಂಭವಾಗಿ ತನ್ನ ಗುಣಮಟ್ಟದಿಂದ ಅಖಿಲಕರ್ನಾಟಕ ವ್ಯಾಪ್ತಿಯಲ್ಲಿ ಉದಯೋನ್ಮುಖರನ್ನೂ ಒಳಗೊಂಡಂತೆ ಲೇಖಕ ಬಳಗವನ್ನು ಹೊಂದಿದ್ದು ಅದರಲ್ಲಿ ತಿರುಮಲೇಶ್ ಬರಹಗಳು ತಪ್ಪದೆ ಪ್ರಕಟವಾಗುತ್ತಿದ್ದವು. ಈ ಎಲ್ಲ ವಿಚಾರಗಳು ನನಗೆ ಗೊತ್ತಾದದ್ದು ಆಮೇಲೆ. ಎಂ.ಗಂಗಾಧರ ಭಟ್ ನಡೆಸುತ್ತಿದ್ದ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನಲ್ಲಿ ಕಲಾಪಗಳನ್ನು ನಡೆಸುತ್ತಿದ್ದ ಈ ನವ್ಯ ಸಾಹಿತ್ಯ ಸಂಘ ಆ ನಂತರವೂ ಒಂದಷ್ಟು ಕಾಲ ಕ್ರಿಯಾಶೀಲವಾಗಿತ್ತು. ಅಲ್ಲಿ ನಡೆದ ಸಾಹಿತ್ಯ ಶಿಬಿರಗಳು, ಗೋಷ್ಠಿಗಳು ನನ್ನ ಪೀಳಿಗೆಯ ಅನೇಕರನ್ನು ಬೆಳೆಸಿದ್ದು ಸುಳ್ಳಲ್ಲ.
ಸಾಹಿತ್ಯ ಪ್ರೀತಿಯ ವಾತಾವರಣ ಮನೆಯಲ್ಲಿ ಇದ್ದುದರಿಂದಲೋ ಏನೋ ಕವಿಗಳೆಂದರೆ ನನಗೆ ಕುತೂಹಲ, ಗೌರವ. ಹೀಗಾಗಿ ವಿದ್ಯಾರ್ಥಿನಿಯಾದ ನಾನು ತಿರುಮಲೇಶರ ಜೊತೆ ಮಾತನಾಡುವ ಧೈರ್ಯ ತೋರದಿದ್ದರೂ ತರಗತಿಯಲ್ಲಿ ಅವರ ಪಾಠವೆಂದರೆ ಹೆಚ್ಚಿನ ಆಕರ್ಷಣೆ.ಮದುವೆಯಾದ ಬಳಿಕ ತಮ್ಮ ಪತ್ನಿ ನಿರ್ಮಲರಿಗೆ ಅವರು ಕಾಲೇಜು ಶಿಕ್ಷಣವನ್ನು ಕೊಡಿಸಿದ್ದರು. ಪದವಿ ತರಗತಿಯಲ್ಲಿ ಓದುತ್ತಿದ್ದ ಅವರು ನಮ್ಮ ಸೀನಿಯರ್ ವಿದ್ಯಾರ್ಥಿನಿಯಾಗಿದ್ದರು. ಅವರು ತಿರುಮಲೇಶರ ಪತ್ನಿ ಮತ್ತು ಮದುವೆಯಾದ ಬಳಿಕವೂ ಓದು ಮುಂದುವರಿಸಿದ್ದಾರೆ- ಎಂಬ ಕಾರಣಕ್ಕೆ ಅವರನ್ನು ನಾವು ಕುತೂಹಲದಿಂದ ಗಮನಿಸುತ್ತಿದ್ದೆವು. ಅವರು ತುಂಬ ಚೆನ್ನಾಗಿ ಹಾಡುತ್ತಿದ್ದರು.ಕನ್ನಡ ವಿಭಾಗದ ಯಾವುದೋ ಕಾರ್ಯಕ್ರಮದಲ್ಲಿ ಅವರು ‘ನಾದ ತನುಮನಿಷಂ ಶಂಕರಂ’ ಎಂಬ ತ್ಯಾಗರಾಜರ ರಚನೆಯನ್ನು ಹಾಡಿದ್ದರೆಂದು ನೆನಪು.
ತಿರುಮಲೇಶರು ಪಾಠಮಾಡುತ್ತಿದ್ದ ವೈಟ್ ಕಂಪೆನಿ ಪುಸ್ತಕ ಯುರೋಪಿಯನ್ ಮಧ್ಯಯುಗದ ಮೌಲ್ಯಗಳನ್ನು ಚಿತ್ರಿಸುವ ಕಥಾನಕವನ್ನು ಹೊಂದಿತ್ತು.ಆಗಾಗ ಎದುರಾಗುವ ‘ಸಮರ’ಗಳ ಸವಾಲನ್ನು ಎದುರಿಸಿ ದೊರಕುತ್ತಿದ್ದ ಸೀಮಿತ ತರಗತಿಗಳಲ್ಲಿ ಆ ಪುಸ್ತಕದ ಪರಿಚಯವನ್ನು ಪ್ರಥಮ ಪಿಡಿಸಿ ತರಗತಿಯ ನಮಗೆ ಮಾಡಿಸಲು ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು.ಈ ಮಧೈ ಅವರು ನಮಗೊಂದು ಕಿರು ಅವಧಿಯ ಪರೀಕ್ಷೆಯನ್ನು ಮಾಡಿದ್ದರು. ಉತ್ತರ ಪತ್ರಿಕೆಗಳನ್ನು ತೆಗೆದುಕೊಳ್ಳಲು ನಾವು ವಿಭಾಗಕ್ಕೆ ಹೋದೆವು. ಆಗ ಆಂಗ್ಲವಿಭಾಗದಲ್ಲಿ ನಾವು ಕನ್ನಡದಲ್ಲಿ ಮಾತನಾಡಬಹುದಾದ ಅಧ್ಯಾಪಕರಿದ್ದರು. ವಿಭಾಗದ ದಿ.ಚಾಪಾಡಿ ವಾಸುದೇವ, ಶ್ರೀಶದೇವ ಪೂಜಿತ್ತಾಯ, ಬಿ ಎಫ್ ಅಬದುಲ್ ರಹಮಾನ್ ಹಾಗೂ ತಿರುಮಲೇಶರು ಅದೇ ಕಾಲೇಜಿನಲ್ಲಿ ಕಲಿತವರಾಗಿದ್ದರು. ನಮ್ಮೂರವರೇ ಆಗಿದ್ದರು. ಉಳಿದ ವಿಭಾಗಗಳಿಗೆ ಹೋದರೆ ಹಾಗಲ್ಲ. ನಮಗೆ ಇಂಗ್ಲಿಷಿನಲ್ಲಿ ಮಾತನಾಡಲು ಹಿಂಜರಿಕೆ. ನಮ್ಮ ಕನ್ನಡ ಬಿಡಿ, ಕಾಸರಗೋಡಿನ ಹಳ್ಳಿಯ ಕಡೆಯ ಮಲಯಾಳವೆಂದರೆ ಅದರಲ್ಲಿ ಸಾಕಷ್ಟು ಕನ್ನಡ, ತುಳು ಹಾಗೂ ಬ್ಯಾರಿ ಭಾಷೆಯ ಶಬ್ದಗಳು ಬೆರೆತಿದ್ದು ಅದು ಕೂಡ ತೆಂಕಣ ಕೇರಳದಿಂದ ಬಂದ ಆ ಅಧ್ಯಾಪಕರಿಗೆ ಅರ್ಥವಾಗುತ್ತಿರಲಿಲ್ಲ. ಅವರು ನಮ್ಮ ಭಾಷೆಯನ್ನು ತಮಾಷೆ ಮಾಡುತ್ತಿದ್ದರು. ಹೀಗಾಗಿ ಬೇರೆ ವಿಭಾಗಗಳಿಗೆ ಹೋಗಲು ತುಂಬ ಮುಜುಗರವಾಗುತ್ತಿತ್ತು.
ಸರಿ ನಾವು ಉತ್ತರ ಪತ್ರಿಕೆಗಾಗಿ ವಿಭಾಗದ ಒಳಹೊಕ್ಕೆವು. ಅವರು ನನ್ನ ಮುಖವನ್ನು ನೋಡಿ . ಎಷ್ಟು ಮಾಕ್ರ್ಸ್ ಬರಬಹುದು ಎಂದು ಕೇಳಿದರು. ನಾನು ಮಾತಾಡದೆ ನಿಂತಿದ್ದೆ. ನನಗೆ ಒಳ್ಳೆ ಅಂಕಗಳೇ ಬಂದಿದ್ದವು. ಅದನ್ನು ತೋರಿಸಿದಾಗಲೂ ನಾನು ಸುಮ್ಮನೇ ಇದ್ದೆ. ‘ಏನು ಹೆಚ್ಚು ಮಾಕ್ರ್ಸ್ ಸಿಕ್ಕಿದ್ದಕ್ಕೆ ಬೇಸರವಾ’ ಎಂದು ಕೇಳಿದರು. ಆಗ ಮಾತ್ರ ನಾನು ನಕ್ಕೆ. ನಾನು ಬರೆಯುವಾಗ ಸಾಲುಗಳು ಎಡದಿಂದ ಬಲಕ್ಕೆ ಹೋದಂತೆ ಮೇಲಕ್ಕೇರುತ್ತಿದ್ದವು. ಅದನ್ನು ತೋರಿಸಿ ‘ಅಕ್ಷರಗಳು ಗುಡ್ಡೆ ಹತ್ತುತ್ತಿವೆಯಲ್ಲಾ’ ಎಂದರು.ಬ್ಲೇಕ್‍ಲೈನ್ (black line) ಇಟ್ಟು ಬರೆದು ಅಭ್ಯಾಸ ಮಾಡಲು ಸೂಚಿಸಿದರು. ಆದರೆ ಇದರಿಂದ ಪಾರಾಗಲು ಅವರು ಸೂಚಿಸಿದ ಮಾರ್ಗವೂ ಸೇರಿದಂತೆ ನಾನು ಎಷ್ಟು ಪ್ರಯತ್ನ ಮಾಡಿದರೂ ನನಗೆ ಸಾಧ್ಯವಾಗಿರಲಿಲ್ಲ. ಮುಂದೆಯೂ ಸಾಧ್ಯವಾಗಲಿಲ್ಲ. ಪರೀಕ್ಷೆಯಲ್ಲಿ ನನ್ನ ನಿರ್ವಹಣೆಯ ಬಗ್ಗೆ ‘ಕೀಪ್ ಇಟ್ ಅಪ್’ ಎಂದು ಹೇಳಿ ಉತ್ತರ ಪತ್ರಿಕೆಯನ್ನು ಕೊಟ್ಟರು. ತರಗತಿಗೆ ಹಿಂತಿರುಗುತ್ತ ದಾರಿಯಲ್ಲಿ ಅದನ್ನು ಬಿಡಿಸಿನೋಡಿದೆ . ಅವರು ‘ವೆರಿಗುಡ್’ ಎಂದು ಬರೆದಿದ್ದಲ್ಲದೆ ‘ರೀಡ್ ದಿ ಟೆಕ್ಟ್ ಎಗೈನ್ ‘ಎಂದೂ ಸೇರಿಸಿದ್ದರು.
ನನಗೆ ಕವಿಯ ಪಾಠದ ಮಿಂಚು ತಾಗಿದ ಆ ಒಂದು ಕ್ಷಣವನ್ನು ನೆನೆದುಕೊಳ್ಳುತ್ತೇನೆ.ಅವರು ಪಾಠ ಮಾಡುವಾಗ ಪುಸ್ತಕದಲ್ಲಿ ಯಾವುದೋ ಒಂದು ಆಯುಧದ ಹೆಸರು ಬಂತು. ಅದನ್ನು ಅವರು ವಿವರಿಸುತ್ತಾ more civilized weapon ಎಂದರು. ಆದರೆ ಕೂಡಲೇ ತಮ್ಮನ್ನು ತಿದ್ದಿಕೊಂಡು, ‘No, We can better say more polished weapon. Civilization has nothing to do with weapons.’ಎಂದರು. ನನಗೆ ಮಿಂಚು ಹೊಡೆದಂತಾಯಿತು.ಕವಿಯ ಪಾಠದಲ್ಲಿ ಹೀಗೆ ಜೀವನಕ್ಕೆ ಬೇಕಾದ ಪಾಠವು ಹೇಗೆ ಬೆರೆತಿರುತ್ತದೆಯಲ್ಲವೇ? ಸರಕಾರಿ ಕಾಲೇಜಿನ ಕೊಠಡಿ ಸಂಖ್ಯೆ 108, ನಾನು ಕುಳಿತಿದ್ದ ಜಾಗ, ಅವರು ತಮ್ಮ ವಿಶಿಷ್ಟ ಭಂಗಿಯಲ್ಲಿ ಹೇಳುತ್ತಿದ್ದ ಆ ರೀತಿ ಸಮೇತ ಈ ಮಾತುಗಳು ಅಷ್ಟು ವರ್ಷಗಳ ಬಳಿಕವೂ ನನ್ನ ಮನದಲ್ಲಿ ಅಚ್ಚೊತ್ತಿ ನಿಂತಿವೆ.. ಉಳಿದವರು ಅದನ್ನು ನನ್ನಂತೆ ಗಮನಿಸಿದರೋ ಬಿಟ್ಟರೋ ನನಗೆ ಗೊತ್ತಿಲ್ಲ. ಆದರೆ ನನಗಂತೂ ಅದು ದೊಡ್ಡ ಪಾಠವಾಗಿತ್ತು.ಮುಂದೆ ಅವರ ಕವನಗಳನ್ನು ಓದುತ್ತ,ಅವರ ವಿಚಾರಗಳನ್ನು ತಿಳಿಯುತ್ತ, ಬುದ್ಧತತ್ವದ ಮೇಲೆ ಅವರಿಗಿರುವ ಪ್ರೀತಿಯನ್ನು ಮನಗಾಣುತ್ತ ಗುರುವೆಂದರೆ ತರಗತಿಯಲ್ಲಿ ಮಾತ್ರ ಗುರು ಅಲ್ಲ ಅದರ ಹೊರಗೂ ಗುರುವೇ ಎಂದು ಅರಿತುಕೊಂಡೆ.
ಅದರ ಮುಂದಿನ ವರ್ಷಅವರು ನಮಗೆ ಕ್ಲಾಸ್ ತೆಗೆದುಕೊಳ್ಳಲಿಲ್ಲ.ಮುಂದೆ ಅವರು ಕಾಸರಗೋಡಿನ ತಮ್ಮ ಕೆಲಸಕ್ಕೆ ರಾಜೀನಾಮೆಯಿತ್ತು. ಊರಿಗೆ ವಿದಾಯ ಹೇಳಿ, ಹೈದರಾಬಾದಿನ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯನ್ ಆಂಡ್ ಫಾರಿನ್ ಲಾಂಗ್ವೇಜಸ್‍ಗೆ ತೆರಳಿ ಅಲ್ಲಿ ಉನ್ನತ ಅಧ್ಯಯನ ಸಂಶೋಧನೆಯೊಂದಿಗೆ ಮತ್ತೆ ಅಧ್ಯಾಪನ ವೃತ್ತಿಗೆ ತೊಡಗಿಕೊಂಡರು.ಆದರೆ ಅವರು ಊರಿಗೆ ಬಂದಾಗ , ಸಾಹಿತ್ಯ ಸಮ್ಮೇಳನಗಳಲ್ಲಿ ಅವರ ದರ್ಶನವಾಗುತ್ತಿತ್ತು. ಎದುರಾದಾಗ ಒಂದು ನಗು ಮತ್ತು ‘ಹೇಗಿದ್ದೀ’ ಎಂಬ ಮಾತುಕತೆಯಲ್ಲಿ ಮುಗಿಯುತ್ತಿತ್ತು.
ಆಮೇಲಾಮೇಲೆ ನಾನು ಕವಿತೆ ಬರೆಯುತ್ತಿರುವ ವಿಚಾರ ಅವರಿಗೂ ತಿಳಿದಿತ್ತು. ಕಾಸರಗೋಡಿನಲ್ಲಿ ನಡೆದ ಒಂದು ಸಾಹಿತ್ಯ ಸಮ್ಮೇಳನದಲ್ಲಿ ನಾನು ಅತ್ಯಂತ ಕಿರಿಯ ಕವಿಯಾಗಿ ಅವರೊಂದಿಗೆ ಪಾಲ್ಗೊಂಡಿದ್ದ ನೆನಪು. ಮುಂದೆ ನಾನು ಕನ್ನಡ ಅಧ್ಯಾಪಕಿಯಾಗಿ ನಾನು ಕಲಿತ ಅದೇ ಕಾಲೇಜಿನಲ್ಲಿ ಸೇರಿದ ಬಳಿಕ ಅವರ ಅಣ್ಣನ ಮಗ ಕವಿ, ನಾಟಕಕಾರ ವೇಣುಗೋಪಾಲ ಕಾಸರಗೋಡು – ಹಿಂದೆ ನನ್ನ ಗುರುಗಳೂ ಆಗಿದ್ದವರು- ಸಹೋದ್ಯೋಗಿಯಾದರು. ಅವರ ಮೂಲಕ ತಿರುಮಲೇಶರ ಚಟುವಟಿಕೆಗಳ ಮಾಹಿತಿ ದೊರಕುತ್ತಿತ್ತು.. ಮಾತ್ರವಲ್ಲ ಮೈಸೂರಿನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ನಮ್ಮ ಕಾಸರಗೋಡಿನ ತಂಡಕ್ಕೆ ಅವರು ಕಾಣಸಿಕ್ಕಿದ್ದರು . ಆಗ ಅವರೊಂದಿಗೆ ಇದ್ದ ಚ. ಸರ್ವಮಂಗಳ ಮೊದಲಾದ ಸಾಹಿತಿಗಳ ಚಿಕ್ಕ ಗುಂಪಿಗೆ ಅವರು ನನ್ನನ್ನು ತನ್ನ ವಿದ್ಯಾರ್ಥಿನಿ ಎಂದು ಪರಿಚಯಿಸಿದ್ದು , ಸಮ್ಮೇಳನದ ಕವಿಗೋಷ್ಠಿಯಲ್ಲಿ ಅವರು ಪರಿಸರ ಪ್ರೇಮವನ್ನು ಸಾರುವ ಕವನವೊಂದನ್ನು ವಾಚಿಸಿದ್ದು ಎಲ್ಲ ಆಪ್ತ ನೆನಪು.ಆದೇ ಸಂದರ್ಭದಲ್ಲಿ ಅವರು ರುಜುವಾತು ಪತ್ರಿಕೆಗೆ ಚಂದಾದಾರರಾಗುವಂತೆ ನಮ್ಮಲ್ಲಿ ಹೇಳಿದ್ದರು.
ಈ ಮಧ್ಯೆ ದೂರ ಶಿಕ್ಷಣದ ಮೂಲಕ ನಾನು ಇಂಗ್ಲಿಷ್ ಎಂ.ಎ,ಯನ್ನು ಮಾಡುವ ಸಂದರ್ಭದಲ್ಲೂ ಆಮೇಲೂ ನನ್ನ ಸಾಹಿತ್ಯಕ ಸಂದೇಹಗಳಿಗೆ ಪತ್ರಮೂಲಕ ಅವರು ಉತ್ತರಿಸುವ ಮೂಲಕ ಅವರ ಗುರುತ್ವ ಹಾಗೂ ನನ್ನ ಶಿಷ್ಯತ್ವ ಮತ್ತೂ ಮುಂದುವರಿದಿತ್ತು. ಅದು .ಕೊನೆಯವರೆಗೂ ಮುಂದುವರಿದತ್ತು. ನನ್ನ ಕೇಳಿಕೆಯಂತೆ ನನ್ನ ಗದ್ಯ ಬರಹಗಳ ಸಂಗ್ರಹ ‘ಮಧುರವೇ ಕಾರಣ’ ಕೃತಿಗೆ ಅವರು ಮೌಲಿಕವಾದ ಮುನ್ನುಡಿಯನ್ನು ಪ್ರೀತಿಯಿಂದ ಬರೆದು ಪ್ರೋತ್ಸಾಹಿಸಿದ್ದರು. ಅವರು ಊರಿಗೆ ಬಂದಾಗ ಕೆಲವೊಮ್ಮೆ ನನ್ನ ವಿದ್ಯಾರ್ಥಿಗಳನ್ನೂ ಕರೆದುಕೊಂಡು ಅವರ ಭೇಟಿಗೆ ಹೋಗುವುದು ದೇಶಸುತ್ತಿ ಕೋಶ ಓದಿ ಸಂಪನ್ನರಾದ ಅವರ ಮಾತುಗಳಿಗೆ ಕಿವಿಯಾಗುವುದು ನನ್ನ ಪಾಲಿಗೆ ಒದಗುತ್ತಿದ್ದ ಸದವಕಾಶವೇ. ಹೀಗೆ ಅವರು ಊರಿಗೆ ಬಂದ ನಿಮಿತ್ತವಾಗಿಯೇ ಅವರ ಗೆಳೆಯ ಎಂ. ವ್ಯಾಸರು ತಮ್ಮ ಮನೆಯಲ್ಲಿ ಆಪ್ತರನ್ನು ಕರೆದು ಹಮ್ಮಿಕೊಂಡ ಒಂದು ಅನೌಪಚಾರಿಕ ಮಾತುಕತೆಯಲ್ಲಿ ನಾನೂ ಭಾಗಿಯಾಗಿದ್ದೆ. ಅಲ್ಲಿ ತಿರುಮಲೇಶರ ‘ಕರುಣೆಯೆ ಬೆಳಕು ಎಂದನು ಬುದ್ಧ ‘ ಎಂದು ಆರಂಭವಾಗುವ ರಚನೆಯನ್ನು ನಾನೇ ರಾಗ ಸಂಯೋಜನೆ ಮಾಡಿ ಹಾಡಿದ್ದೆ. ಹಾಡಿ ಮುಗಿಸಿದ ಬಳಿಕ ಅವರನ್ನು ನೋಡಿದರೆ ‘ ಚೆನ್ನಾಗಿತ್ತು’ ಎಂಬಂತೆ ನಗುತ್ತ ಬೆರಳೆತ್ತಿ ಸಂಜ್ಞೆ ಮಾಡಿದ್ದು ನನಗೆ ಧನ್ಯತೆಯನ್ನು ನೀಡಿತ್ತು.ಅವರು ಮತ್ತು ಅವರ ಪತ್ನಿ ನಿರ್ಮಲಾ ನನ್ನ ಆಹ್ವಾನವನ್ನು ಒಪ್ಪಿ ನಮ್ಮ ಮನೆಗೂ ಬಂದು ಆತಿಥ್ಯವನ್ನು ಸ್ವೀಕರಿಸಿದ್ದು ಮರೆಯಲಾಗದ್ದು. ಸಾಹಿತ್ಯಾಸಕ್ತ ಆತ್ಮೀಯರನ್ನು ಈ ಸಂದರ್ಭದಲ್ಲಿ ಮನೆಗೆ ಕರೆದಿದ್ದೆ.ಅದರಲ್ಲಿ ಎಂ. ವ್ಯಾಸರ ಮಗ ತೇಜಸ್ವಿಯವರೂ ಬಂದಿದ್ದರು.ತೇಜಸ್ವಿಯವರು ತಿರುಮಲೇಶರ ಕವಿತೆಗಳ ದೊಡ್ಡ ಅಭಿಮಾನಿ ಮತ್ತು ವೃತ್ತಿಯಲ್ಲಿ ವೈದ್ಯರಾಗಿದ್ದುಕೊಂಡು ಅಗಾಧ ಸಾಹಿತ್ಯ ಪ್ರೇಮವನ್ನು ಹಚ್ಚಿಕೊಂಡವರು. ಸಾಹಿತ್ಯಜಗತ್ತಿನ ಆಗುಹೋಗುಗಳ ಬಗ್ಗೆ ಅವರು ಸದಾ ಅರಿತುಕೊಂಡು ಅಪ್ಡೇಟ್ ಆಗಿರುವವರು.ಅವರು ಅಡಿಗರ, ತಿರುಮಲೇಶರ ಕವನಗಳ ಸಾಲುಗಳನ್ನು ಇಡಿಇಡಿಯಾಗಿ ಉದ್ಧರಿಸ ಬಲ್ಲವರು. ಹೀಗೆ ತಿರುಮಲೇಶರ ಸಾನ್ನಿಧ್ಯದಲ್ಲಿ ಇವರೆಲ್ಲ ಕೂಡಿ ನಡೆಸಿದ ಸಾಹಿತ್ಯ ಸಂವಾದ ಸಾರ್ಥಕವಾಗಿತ್ತು.
ಕಲಿಯುವುದು ಮತ್ತು ಕಲಿಸುವುದು ಈ ನನ್ನ ಗುರುವಿಗೆ ಅತ್ಯಂತ ಪ್ರಿಯವಾದ ವಿಚಾರ. ಸಣ್ಣ ಸಣ್ಣ ಸಂಗತಿಗಳ ಬಗ್ಗೆ ಅವರು ತಳೆಯುವ ಕುತೂಹಲ, ಅನ್ಯಾನ್ಯ ವಿಷಯಗಳ ಕುರಿತಾದ ಅವರ ಅಪಾರ ಓದು ಮತ್ತು ಹಾಗೆ ಪಡೆದ ಜ್ಞಾನವನ್ನು ಕನ್ನಡದಲ್ಲಿ ಕನ್ನಡಿಗರಿಗಾಗಿ ಒದಗಿಸಬೇಕೆಂಬ ತುಡಿತದಿಂದ ರಚನೆಗೊಂಡ ಅನೇಕ ಕೃತಿಗಳು- ದಣಿವರಿಯದ ಅವರ ಜ್ಞಾನಪಿಪಾಸೆಯನ್ನು, ಜ್ಞಾನ ದಾಸೋಹವನ್ನು ಸಾರುತ್ತವೆ. ದೂರದ ಹೈದರಾಬಾದಿನಲ್ಲಿದ್ದುಕೊಂಡು ಅವರು ಕನ್ನಡ ಭಾಷೆಯಬಗ್ಗೆ ಓರ್ವ ಸಾಹಿತಿಯಾಗಿಯೂ ಭಾಷಾವಿಜ್ಞಾನಿಯಾಗಿಯೂ ಮಾಡಿದ ಕಾರ್ಯದ ಹಿಂದೆ ಒಂದು ಸಾಮಾಜಿಕ ಜವಾಬ್ದಾರಿಯ ಪ್ರೇರಣೆ ಇದೆ. ಕನ್ನಡ ವರ್ಣಮಾಲೆಗೆ ಸಂಬಂಧಿಸಿದ ಚರ್ಚೆಯಲ್ಲಿ ಸ್ಪಷ್ಟವಾದ ನಿಲುವನ್ನು ತಳೆದ ಅವರಲ್ಲಿ ಭಾಷೆಯ ಪ್ರಯೋಗದ ಇತಿಹಾಸ ಮತ್ತು ವರ್ತಮಾನದ ಬಳಕೆ – ಎರಡನ್ನೂ ಅರ್ಥೈಸಿಕೊಂಡ ಸಮತೋಲನದ ದೃಷ್ಟಿಯಿದೆ. ನಮ್ಮ ಕನ್ನಡ, ಸಮೃದ್ಧಕನ್ನಡ- ಮುಂತಾದ ಕೃತಿಗಳಲ್ಲಿ ಅವರು ನಡೆಸಿದ ಕನ್ನಡ ಚಿಂತನೆಗೆ ಬಹಳಷ್ಟು ಶೈಕ್ಷಣಿಕ ಮಹತ್ವವಿದೆ.
ಹೈದರಾಬಾದಿನ ಭಾಷಾ ಸಂಸ್ಥೆಯಲ್ಲಿ ಬಹುಕಾಲ ಸೇವೆ ಸಲ್ಲಿಸಿದ ಅವರು ನಿವೃತ್ತರಾದ ಬಳಿಕವೂ ವಿದೇಶಗಳಲ್ಲಿ ಆಹ್ವಾನಿತರಾಗಿ ಅಧ್ಯಾಪನ ವೃತ್ತಿಯನ್ನು ಕೈಗೊಂಡಿದ್ದಾರೆ. ಕಲಿಸುವ ವಿಚಾರದಲ್ಲಿ ವಿದ್ಯಾರ್ಥಿ ಸ್ನೇಹಿಯಾದ ಹಾಗೂ ಹೆಚ್ಚು ಪರಿಣಾಮಕಾರಿಯಾದ ವಿಧಾನಗಳ ಬಗ್ಗೆ ಚಿಂತನೆ ಮತ್ತು ಪ್ರಯೋಗಗಳನ್ನು ಅವರು ಮಾಡುತ್ತಿದ್ದರೆಂದು ಬಲ್ಲೆ. ಒಮ್ಮ ನಮ್ಮ ಕಾಲೇಜಿನ ಕನ್ನಡ ವಿಭಾಗಕ್ಕೆ ಆಮಂತ್ರಿತರಾಗಿ ಅವರು ಬಂದ ಸಂದರ್ಭದಲ್ಲಿ ಈ ಕುರಿತು ಅವರು ಪ್ರಸ್ತಾಪಿಸಿದ್ದರು. ಬೋಧನೆ ಮತ್ತು ಕಲಿಕೆ ಒಂದು ಯಾಂತ್ರಿಕ ಕ್ರಿಯೆಯಾಗಿರದೆ ಅದು ಒಂದು ಜೀವಂತ ಮತ್ತು ಉಲ್ಲಾಸದಾಯಕವಾದ ಚಟುವಟಿಕೆಯಾಗಬೇಕೆಂಬುದು ಅವರ ಸ್ಪಷ್ಟ ನಿಲುವು. ಕಲಿಸುವ ವಿಚಾರದಲ್ಲಿ ಒಂದು ತಾದಾತ್ಮ್ಯದ ಹೊಣೆಗಾರಿಕೆಯನ್ನು ಅವರು ತಮ್ಮ ವೃತ್ತಿಯ ಕೊನೆಯವರೆಗೂ ಉಳಿಸಿಕೊಂಡದ್ದು ವಿಶೇಷ ವಿಚಾರ. ಗುರುವಿನ ಗುರುತ್ವ ಇರುವುದು ಅಲ್ಲಿಯೇ ತಾನೇ?
- ಡಾ.ಮಹೇಶ್ವರಿ ಯು.
9 thoughts on “ಗುರುವಿನ ಗುರುತ್ವ”
ತುಂಬ ಆಪ್ತ ವಾದ ಬರಹ. ಗುರುವಿಗೆ ಸಲ್ಲಿಸಿದ ಅತ್ಯತ್ತಮ ನುಡಿನಮನ
ತಿರುಮಲೇಶರೇ ಹಾಗೆ.ಅವರೊಂದಿಗೆ, ಮಾತನಾಡುವ ಯಾರಾದರೂ ಬಹು ಬೇಗನೆ ಆಪ್ತ ರಾಗಿ ಬಿಡುತ್ತಾರೆ.
ಧನ್ಯವಾದಗಳು🙏
ಅರ್ಥಪೂರ್ಣ ನುಡಿ ನಮನ.
ಧನ್ಯವಾದಗಳು ಸುಭಾಷ್
ಇಷ್ಟವಾಯ್ತು. ತಿರುಮಲೇಶರಂತಹ ಕವಿ ಮತ್ತು ಗುರುವಿನ ಮಾರ್ಗದರ್ಶನ ಸಿಕ್ಕಿತ್ತು ದೊಡ್ಡ ಭಾಗ್ಯ. ಬಿಡದೇ ಓದಿಸಿಕೊಂಡಿತು ಬರೆಹ.
ಧನ್ಯವಾದಗಳು🙏
ಧನ್ಯವಾದಗಳು ನಿಮಗೆ 🙏
ಆರಂಭದಿಂದ ಕೊನೆಯವರೆಗೂ, ವಿದ್ಯಾರ್ಥಿ-ಲೇಖಕಿಯ ಭಾಷೆಯೊಳಗೆ ಸಂಚಿತವಾಗಿ, ವ್ಯಾಪಕವಾಗಿ ಪಸರಿಸಿದ ‘ಗುರು’ವಿನ ಬಗೆಗಿನ ಗೌರವ, ಅತಿಶಯ ಪೂಜನೀಯ ಭಾವ, ಕಲಿಯುವ ಲವಲವಿಕೆ, ಉತ್ಸಾಹ, ಅಷ್ಟೇ ಮಾರ್ದವ ಸಂವೇದನಾಶೀಲತೆಯಲ್ಲಿ, ಮೊದಲಿಗಂತೂ ಚಂದಮಾಮದ ಕತೆಯ ಧಾಟಿಯೋಪಾದಿಯಲ್ಲಿ, ನಿಚ್ಚಳವಾಗಿ ತುಳುಕುತ್ತಿರುತ್ತಿದೆ. ‘ಗುರು’ವಿನ ಘನತೆ ಮತ್ತು ಗಾಂಭೀರ್ಯದ ಜತೆ, ವಿದ್ಯಾರ್ಥಿಗಳಿಗೆ ಕಲಿಸುವ ಮುಂಚಿನ ‘ಗುರು’ವಾದವನ ನೇರವಾಗಿ ಕಾಣದ, ಕಲಿಕೆಯ ಸಾತತ್ಯಪ್ರೇಮವೇ ಇಡೀ ಲೇಖನದ ಬೆನ್ನೆಲುಬಾಗಿದೆ.
ಆದರೆ, ಇಲ್ಲಿ, ಕೊನೆಯವರೆಗೂ, ಬಹುತೇಕವಾಗಿ ಹೊರನಾಡ ಕನ್ನಡಿಗರಾಗಿಯೇ ಉಳಿದು, ಕನ್ನಡದ ಅನನ್ಯ ಸಾಹಿತ್ಯ ಸೇವೆ ಸಲ್ಲಿಸಿದ ಒಬ್ಬ ಅಪ್ರತಿಮ ಕವಿ, ಅನುವಾದಕ, ಸಾಹಿತಿ, ಅಂಕಣಕಾರ,ಭಾಷಾ ವಿಜ್ಞಾನಿ, ಡಾ. ಕೆ. ವಿ. ತಿರುಮಲೇಶ್, ಅವರ ಸಂಪೂಣ ವ್ಯಕ್ತಿಮತ್ವ, ‘ಗುರು’ವೆಂಬ ಶಬ್ದದಲ್ಲಿ ಹುದುಗಿಹೋದ ನಿಸ್ಪ್ರಹತೆಯೇ, ‘ಗುರುತ್ವ’ದ ಅವ್ಯಕ್ತ ಸಂಕೇತ ವಿಶೇಷವೆನ್ನುವದು ನನ್ನ ಅನಿಸಿಕೆ.
ಬರಹದ ಸೂಕ್ಷ್ಮ ಅವಲೋಕನ ಕ್ಕೆ ಕೃತಜ್ಞತೆ ಗಳು. 🙏