ಕೊರೋನಾ ಮುಗಿದ ನಂತರದ ದಿನಗಳಿವು. ನಮ್ಮ ತಂದೆ ತಾಯಿ ಬಹಳ ದಿನಗಳ ನಂತರ ನಮ್ಮ ಮನೆಗೆ ಬರುವ ಸಂದರ್ಭವದು. ಸ್ಟೇಷನ್ ನಿಂದ ಆಟೋದಲ್ಲಿ ಮನೆಗೆ ಬರುತ್ತಿದ್ದಾರೆ . ನನಗೆ ಒಂದು ರೀತಿಯ ಆನಂದ, ಕೌತುಕ ಅಮ್ಮ ಅಪ್ಪನನ್ನು ನೋಡುವ ತವಕ. ಹತ್ತು ನಿಮಿಷಕೊಮ್ಮೆ ಗಡಿಯಾರ ನೋಡುವುದು, ಹೊರಗಡೆಯಿಂದ ಏನಾದರೂ ವಾಹನದ ಸದ್ದು ಕೇಳಿದರೆ ಬಾಲ್ಕನಿಯಿಂದ ಇಣುಕುವುದು, ಹೀಗೆ ಮಾಡುತ್ತಿದ್ದೆ. ಒಂದು ಗಂಟೆ ಕಳೆಯಿತು. ಇದನ್ನು ಗಮನಿಸಿದ ಕಿಶೋರಾವಸ್ಥೆಯಲ್ಲಿರುವ ನನ್ನ ಮಕ್ಕಳು ನಿರುದ್ಯೋಗಿಯಾದ ” ಅಮ್ಮ ಯಾಕಿಷ್ಟು ಅರ್ಜೆಂಟು ಅಜ್ಜ ಅಜ್ಜಿಗೆ ನಾವಿರುವ ಮಹಡಿ ಹೆಸರು ಗೊತ್ತು , ಮನೆಯ ನಂಬರ್ ಗೊತ್ತು, ಅವರು ಸರಿಯಾಗಿ ನಮ್ಮ ಮನೆಯ ಡೋರ್ ಬೆಲ್ ಬಾರಿಸುತ್ತಾರೆ ಎಂದು ಹೇಳಿದರು.” ಒಂದೆರಡು ನಿಮಿಷ ನಾನು ಸುಮ್ಮನೆ ಕೂತುಬಿಟ್ಟೆ. ನಂತರ ವಿಚಾರ ಮಾಡಿದೆ ಆ ಸನ್ನಿವೇಶದಲ್ಲಿ ನನ್ನ ಕೌತುಕವೇ ಹೆಚ್ಚಾಗಿತ್ತೆ? ಅಥವಾ ಮಕ್ಕಳ ಮನಸ್ಸಿನಲ್ಲಿ ಕೌತುಕ ಕಡಿಮೆ ಇದೆಯೇ ? ಅಜ್ಜ ಅಜ್ಜಿ, ತಂದೆ ತಾಯಿ, ಅಕ್ಕ ,ತಂಗಿ ಇವೆಲ್ಲ ಸಂಬಂಧಗಳ ಬಗೆಗೆ ಭಾವನೆಗಳು ಇಲ್ಲವೆ ! ಅಥವಾ ಇದ್ದರೂ ತೋರಿಸುವುದಿಲ್ಲವೆ! ನನಗಿರುವಷ್ಟು ಕೌತುಕ , ಉತ್ಸಾಹ ಈಗಿನ ಪೀಳಿಗೆಯವರಿಗೆ ಇಲ್ಲವೇ ಅಥವಾ ಕಡಿಮೆಯಾಗುತ್ತಿದೆಯೇ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು. ಹಾಗಾದರೆ ಸ್ನೇಹಿತರೆ , ಭಾವ , ಭಾವನೆ ಎಂದರೇನು ?
“ಭಾವ “ಶಬ್ದದ ಮೂಲ ಅರ್ಥ ‘ಇರುವಿಕೆ’ ಎಂದಾಗುತ್ತದೆ. ಇದರ ನಿಷ್ಪತ್ತಿಗೆ ಅನುಗುಣವಾಗಿ ಸಂಸ್ಕೃತದಲ್ಲಿ ಅನೇಕ ಅರ್ಥಗಳಿವೆ. ಚಿತ್ತವೃತ್ತಿ, ಪದಾರ್ಥ ಪ್ರೀತಿ ,ಸ್ಥಿತಿ ಆಶಯ ,ಇಂಗಿತ ,ತಾತ್ಪರ್ಯ ಹೀಗೂ ಹಲವಾರು ಅರ್ಥಗಳಿವೆ. ಇರುವಿಕೆಯಿಂದ ಹಿಡಿದು ಇಲ್ಲದಿರುವ ವಸ್ತುಗಳವರೆಗೂ ಈ ಭಾವ ಶಬ್ದವು ರೂಢಿಯಲ್ಲಿದೆ. ಈ ಭಾವದ ಅಥವಾ ಚಿತ್ತವೃತ್ತಿಯ ಸ್ವರೂಪವು ಪ್ರೀತಿ, ಕ್ರೋಧ, ಭಯ ಆಶ್ಚರ್ಯ ,ಚಿಂತೆ ,ನಾಚಿಕೆ, ಹರ್ಷ ಆಗಿರಬಹುದು. ಉದಾಹರಣೆ ಎಂದರೆ ಸುಮ್ಮನೆ ನಡೆದುಕೊಂಡು ದಾರಿಯಲ್ಲಿ ಹೋಗುತ್ತಿರುವಾಗ ಹಾವು ಕಾಣಿಸಿಕೊಂಡರೆ ನಾವು ಒಮ್ಮೆಲೇ ಬೆಚ್ಚುತ್ತೇವೆ. ಈ ಸಂದರ್ಭದಲ್ಲಿ ಭಯ ಎಂಬ ನಮ್ಮೊಳಗಿನ ಸ್ಥಾಯಿ ಭಾವವೂ ಉದಯಿಸಬೇಕಾದರೆ ಹಾವು ಭಯಕ್ಕೆ ಕಾರಣವಾಯಿತು. ಅದನ್ನು ನೋಡಿದ ಕೂಡಲೇ ಚಿತ್ತವು ಕಲಕಿ ಭಯ ಉತ್ಪಾದನೆಯಾಯಿತು .(ಭಾರತೀಯ ಕಾವ್ಯ ಮೀಮಾಂಸೆ- ತೀನಂಶ್ರೀ) ಇದು ಚಿತ್ತವೃತ್ತಿ ,ಮಾನಸಿಕ ವ್ಯಾಪಾರ ಭಾವವು ಮನಸ್ಸಿನ ವ್ಯಾಪಾರವಾಗಿದ್ದರಿಂದ ಕಣ್ಣಿಗೆ ಕಾಣಿಸದಿದ್ದರೂ ಅದರ ಕಾರಣ ಕಾರ್ಯಗಳು ಅಂದರೆ ಅಲ್ಲಿಂದ ಓಡುವುದು. ನೋವಾದಾಗ ಕಣ್ಣೀರು ಸುರಿಸುವುದು. ಮೊದಲಾದವುಗಳಿಂದ ನಾವು ಭಾವವನ್ನು ಅರಿತುಕೊಳ್ಳಬಹುದು . ಹೀಗೆ ಮಾನವನ ಜೀವಿತಕ್ಕೆ ಅಂಟಿಕೊಂಡು ಸ್ಥಾಯಿಯಾಗಿ ನೆಲೆ ನಿಲ್ಲುವ ಭಾವಗಳು ಇವೆ. ಈ ‘ಭಾವನೆ’ಯಿಂದ ಮನುಷ್ಯ ಇತರ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಇವೇ ಸ್ಥಾಯಿಭಾವ. ( ಶೃಂಗಾರ, ಹಾಸ್ಯ, ರೌದ್ರ, ಉತ್ಸಾಹ,…ಇತ್ಯಾದಿ) ನಮ್ಮೊಳಗಿರುವ ಭಾವದ ಸಾಮರ್ಥ್ಯ ಕಡಿಮೆಯಾಗುತ್ತಿದೆಯೇ ? ಇದಕ್ಕೆ ಆಂತರಿಕ ಹಾಗೂ ಬಾಹ್ಯ ಎರಡು ಕಾರಣಗಳಿರಬಹುದು. ನಾವು ಉಣ್ಣುವ ಆಹಾರ ,ಕುಡಿಯುವ ನೀರು, ನೋಡುವ ನೋಟ, ಮಾಡುವ ಕೆಲಸ, ವಾಸಸ್ಥಾನದ ವಾತಾವರಣ ಇವೆಲ್ಲವೂ ಪ್ರಭಾವ ಬೀರುತ್ತವೆ.
ಗಂಟೆಗಟ್ಟಲೆ ಸ್ಕ್ರೀನ್ ಮುಂದೆ ಕೂಡುವುದು . ಅತಿಯಾದ ಮೊಬೈಲ್ ಬಳಕೆ , ಇಂಟರ್ನೆಟ್ ಸೌಲಭ್ಯ, ಪ್ಯಾಕಡ್ ಆಹಾರ, ಬಾಟಲ್ ನೀರು ,ಇವೆಲ್ಲ ನಮ್ಮೊಳಗಿರುವ ಮನಸ್ಸು ,ಬುದ್ಧಿಗಳ ಮೇಲೆ ಪರಿಣಾಮ ಉಂಟು ಮಾಡುತ್ತವೆ. ನಾವು ಅಂದರೆ ನಮ್ಮ ತಲೆಮಾರಿನವರು ಮೊದಲು ಬಳಸಿದ ಪೆನ್ನು , ಕೈಗಡಿಯಾರ, ಹಳೆಯ ಪುಸ್ತಕ, ಅಮ್ಮ ಕೊಟ್ಟ ಸೀರೆ , ಹೀಗೆ ಎಷ್ಟೋ ಸಾಮಾನುಗಳನ್ನ ನಾವು ಜತನದಿಂದ ಕಾಯ್ದು ಎಷ್ಟೋ ವರ್ಷಗಳವರೆಗೆ ಇರಿಸಿಕೊಳ್ಳುತ್ತೇವೆ . ಆದರೆ ಈಗಿನ ಮಕ್ಕಳು ಹಾಗಲ್ಲ . ಒಂಚೂರು ಹಾಳಾದರೆ , ಹಳೆಯದಾದರೆ ಅದು ಬೇಡ ಎಂದು ಬಿಟ್ಟುಬಿಡುತ್ತಾರೆ. ಆ ವಸ್ತುಗಳೊಂದಿಗೆ ನಮ್ಮ ಭಾವನೆಗಳು ನಮ್ಮನ್ನು ಬಂಧಿಸಿರುತ್ತವೆ. ಇದಕ್ಕೆಲ್ಲ ಕಾರಣ ನಮ್ಮೆಲ್ಲಿರುವ ಸಕಾರಾತ್ಮಕ ಆಲೋಚನೆ. ಹಾಗೂ ಮಧುರವಾದ , ನವಿರಾದ ಭಾವಗಳು. ಆದರೆ ಈಗ ನಕಾರಾತ್ಮಕ ವಿಚಾರಗಳೇ ಹೆಚ್ಚು. ಭಾವನೆಗಳ ಬಂಧ ಸಡಿಲವಾಗಿದೆ. ಹಾಗಾಗಿ ಈಗಿನವರು ನಮ್ಮಷ್ಟು ಭಾವನೆಗಳಿಗೆ ಅಂಟಿಕೊಳ್ಳುವುದಿಲ್ಲ. ಅತಿಯಾದ ಭಾವನಾತ್ಮಕತೆ ಬೇಡ, ಕನಿಷ್ಠ ಮಟ್ಟದ ಸಾಮಾನ್ಯವಾದ ಭಾವನೆಗಳಿದ್ದರೆ ಸಾಕು. ಸೂಕ್ಷ್ಮ ಸಂವೇದನೆಗಳೂ ಇರಬೇಕು. ಇಲ್ಲದಿದ್ದರೆ ಸಮಾಜಕ್ಕೆ ಇದೊಂದು ಅಪಾಯಕಾರಿ ಬೆಳವಣಿಗೆಯಲ್ಲವೆ ! ನಾನು ಗಮನಿಸದಂತೆ ಟೀನ್ ಏಜರ್ಸ್ ಮಕ್ಕಳಲ್ಲಿ ಅಂದರೆ ಕಿಶೋರರಲ್ಲಿ ಮತ್ತು ತರುಣರಲ್ಲಿ ಈಗಾಗಲೇ ಮೆಟೀರಿಯಲಿಸ್ಟಿಕ್ ಆಗಿ, ಪ್ರಾಕ್ಟಿಕಲ್ ಆಗಿ ,ಲಾಜಿಕಲ್ ಆಗಿ ಯೋಚನೆ ಮಾಡುವಷ್ಟು ವಿವೇಚನೆಯ ಮಟ್ಟ ಬೆಳೆದಿದೆ ಎಂದು ಕುತೂಹಲವೆನಿಸುತ್ತದೆ ಹಾಗೂ ಅಚ್ಚರಿಯೂ ಎನಿಸುತ್ತದೆ. ಇದರಿಂದ ಸತ್ಪರಿಣಾಮ ಹಾಗೂ ದುಷ್ಪರಿಣಾಮ ಎರಡಕ್ಕೂ ಅವಕಾಶವಿದೆ. ಹಾಗಾಗಿ ಪಾಲಕರು, ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯುತ ಹೆಜ್ಜೆ ಹೊಸ ತಲೆಮಾರಿನ ವ್ಯಕ್ತಿತ್ವ ವಿಕಸನಕ್ಕೆ ಪ್ರಮುಖವಾಗುತ್ತದೆ. ಭಾವನೆಗಳು ಇಲ್ಲದಲೇ ಕೇವಲ ವಿವೇಚನೆಯಿಂದ ಮನುಷ್ಯ ಬದುಕುವುದು ಕಷ್ಟ . ಭಾವನೆ , ಸಂವೇದನೆ ಹಾಗೂ ವಿವೇಚನೆ ಸಮತೋಲನದಲ್ಲಿರುವಾಗಲೇ ಜೀವನ ಚೆಂದವಲ್ಲವೆ?
ಇಲ್ಲಿ ಮಂಕುತಿಮ್ಮನ ಕಗ್ಗದ ಕೆಲವು ಸಾಲುಗಳು ನೆನಪಾಗುತ್ತವೆ.
ಭಾವದಾವೇಶದಿಂದ ಮನವಶ್ವದಂತಿರಲಿ
ಧೀವಿವೇಚನೆಯದಕ್ಕೆ ದಕ್ಷ ರಾಹುತನು//
ತೀವಿದೊಲವಿನ ದಂಪತಿಗಳಾಗಿ ಮನ ಬುದ್ಧಿ
ಜೀವಿತವು ಜೈತ್ರ ಕಥೆ – ಮಂಕುತಿಮ್ಮ//
ಅಂದರೆ ಇದರ ತಾತ್ಪರ್ಯವಿಷ್ಟೇ ಮನಸ್ಸು ಮತ್ತು ಬುದ್ಧಿಗಳು ಪ್ರೀತಿಯಿಂದ ತುಂಬಿದ ಸತಿಪತಿಗಳಾದರೆ ಜೀವನವು ಯಶಸ್ಸಿನ ಗಾಥೆಯಾಗುತ್ತದೆ. ಭಾವನೆಗಳು ಮತ್ತು ವಿವೇಚನೆಗಳು ಒಂದಾದಲ್ಲಿ ಸುಖ ಅನುಭವಿಸಲು ಸಾಧ್ಯ.